Tuesday, January 20, 2009

Copenhagen-ಪ್ರವಾಸ ಕಥನ


Copenhagen ಎಂಬ ಡ್ಯಾನಿಶ್ ಸುಂದರಿಯ ಸುತ್ತ........ಪ್ರವಾಸ ಕಥನ
- ಗುರು ಬಬ್ಬಿಗದ್ದೆ

ವಾರದ ಕೊನೆ ಬಂತೆಂದರೆ ಬೆಂಗಳೂರಿನಲ್ಲಿ ಪುರುಸೊತ್ತೇ ಇರುವುದಿಲ್ಲ. ಆತ್ಮೀಯರ ಭೇಟಿ, ನೆಂಟರ ಆಮಂತ್ರಣ, ಸಿನಿಮಾ, ಪಾರ್ಟಿ,ಒಂದೇ, ಎರಡೇ, ಜೊತೆಯಲ್ಲಿ ಆಟ ಬೇರೆ, ಹಾಗಾಗಿ ಕೆಲಸದ ವೇಳೆಗಿಂತ ವಾರದ ಕೊನೆಗೆ ಬ್ಯುಸಿ ಜಾಸ್ತಿ. ಆದರೆ ದೇಶ ಬಿಟ್ಟು ಪರದೇಶಕ್ಕೆ ಬಂದಾಗ ವಾರದ ಕೊನೆಗೆ ಸಮಯದ ಅಭಾವವಿರುವುದಿಲ್ಲ.
Copenhagen ಅಥವಾ Kobenhavn ಅಂದರೆ ಮರ್ಚಂಟ್ಸ ಹಾರ್ಬರ್ ಎಂದರ್ಥ. ತನ್ನ ವಿಶಿಷ್ಟ ಸಂಸ್ಕ್ರತಿ, ಫ್ಯಾಷನ್,ಕುಡಿತ ಎಲ್ಲವುಗಳಿಂದಾಗಿ ಇದು ವಿಶ್ವದಲ್ಲಿಯೇ ಬಹು ಪ್ರಸಿದ್ದಿ ಪಡೆದ ನಗರ. ೨೦೦೮ ರಲ್ಲಿ ಈ ನಗರಕ್ಕೆ ಮೊನೋಕ್ಲೆ ಎಂಬ ಸುದ್ದಿ ಪತ್ರಿಕೆ ವಿಶ್ವದ ೨೫ ಚಟುವಟಿಕೆಯ ನಗರಗಳಲ್ಲಿ ಒಂದೆಂದು ತೀರ್ಮಾನಿಸಿ "ಅತ್ಯುತ್ತಮ ಅಲಂಕ್ರತ ನಗರ" ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಈ ನಗರ ಬಂಡವಾಳ ಹೂಡಿಕೆದಾರರ ಸ್ವರ್ಗ ಎಂದು ಕರೆಯಲಾಗುತ್ತದೆ. ಇನ್ನು ಮುಂದೆ ಹೋಗಿ ಈ ನಗರವನ್ನು "ಉತ್ತರದ ಪ್ಯಾರಿಸ್" ಎಂದೂ ಸಂಭೋದಿಸಲಾಗುತ್ತದೆ. ಇಂಥಹ ನಗರದ ವೀಕ್ಷಣೆ ಎಂದರೆ ಅದೊಂದು ಸುಯೋಗವೇ ಸರಿ.
ನಾವು ೪ ಜನ ಹಾಗೂ ಒಂದು ಪುಟ್ಟ ಮಗು ಸೇರಿ Gothenburg ನಿಂದ ಒಂದು ಶನಿವಾರ ನಸು ಮುಂಜಾವಿನಲ್ಲಿ ಹೊರಟೆವು. ಚುಮು ಚುಮು ಚಳಿ ಒಂದೆಡೆ,ತಣಿಯಲಾರದ ಕುತೂಹಲ ಒಂದೆಡೆ. Gothenburg ನಿಂದ ಸುಮಾರು ೩-೩೦ ಗಂಟೆಯ ಪ್ರಯಾಣ. ಸ್ವೀಡನಿನ ದಕ್ಷಿಣದ ತುದಿಯಲ್ಲಿಯ ಕೊನೆಯ ನಗರವೇ Malmo.ಅಲ್ಲಿಂದ ಒಂದು ಬ್ರಹತ್ ಸಮುದ್ರ.ಅದರ ಆಚೆ ಇರುವುದೇ Copenhagen ನಗರ. ಈ ಎರಡು ನಗರಗಳ ನಡುವೆ ಯೋರೆಸುಂದ್ ಸೇತುವೆ. ಸುಮಾರು ೨೦೦೦ ನೆ ಇಸವಿಯಲ್ಲಿ ನಿರ್ಮಾಣವಾದ ಈ ಬ್ರಹತ್ ಸೇತುವೆ ಎರಡು ದೇಶಗಳನ್ನು ಸೇರಿಸುವ ವಿಶ್ವದ ಅತೀ ದೊಡ್ಡ ಸೇತುವೆ.ಸುಮಾರು ೮ ಕಿಲೋ ಮೀಟರಗಳಷ್ಟು ಉದ್ದವಿರುವ ಸೇತುವೆಯನ್ನು ನೋಡುವುದೇ ಒಂದು ಸೊಬಗು. ಇದರ ತೂಕ ಸುಮಾರು ೮೨೦೦೦ ಟನ್ಗಳಷ್ಟು ಎಂದರೆ ಅದರ ಅಗಾಧತೆ ನಿಮ್ಮ ಗಮನಕ್ಕೆ ಬರಬಹುದು. ಇಲ್ಲಿಂದಲೇ ರೋಚಕತೆಯ ಅಧ್ಯಾಯ ಆರಂಭವಾಯಿತು. ಇಲ್ಲಿಯ ರೈಲುಗಳಲ್ಲಿನ ಪ್ರಯಾಣವೇ ಒಂದು ರೀತಿಯ ಆನಂದಕರ ಅನುಭವ ಕೊಡುತ್ತದೆ.ನಿಸರ್ಗ ರಮಣೀಯ ಪ್ರಕ್ರತಿಯ ಸೊಬಗು ಸವಿಯುತ್ತಿದ್ದಂತೆ ಮಲೆನಾಡಿನ ಕಾಡುಗಳಲ್ಲಿ ಸೇರಿ ಹೋದ ಅನುಭವ ಆಯಿತು. ಆದರೆ ಛಳಿಗಾಲ ವಾದ್ದರಿಂದ ಗಿಡಕ್ಕೆ ಎಲೆ ಒಂದು ಇರಲಿಲ್ಲ. ಇಲ್ಲದಿದ್ದರೆ ಇಲ್ಲಿಯ ಹಳ್ಳಿಗೂ ಮಲೆನಾಡಿನ ಹಳ್ಳಿಗೂ ಪ್ರಕ್ರತಿ ಸೌಂದರ್ಯದಲ್ಲಿ ಯಾವುದೇ ಭಿನ್ನತೆ ಕಾಣದು.
ಸರಿ ಸುಮಾರು ೧೧ ಗಂಟೆಗೆ Copenhagen ನಗರ ರೈಲು ನಿಲ್ದಾಣ ತಲುಪಿದೆವು.ಇಲ್ಲಿಯ ಚಲಾವಣೆಯ ಕರೆನ್ಸಿ ಡೆನ್ಮಾರ್ಕ್ ಕ್ರೌನೆಸ್ (ಡಿ.ಕೆ.ಕೆ). ಅಲ್ಲಿಯೇ ಹತ್ತಿರದಲ್ಲಿ ಕರೆನ್ಸಿ ಬದಲಾಯಿಸಿಕೊಂಡು ಪ್ರಯಾಣ ಮುಂದುವರೆಸಿದೆವು. ಮೊದಲಿಗೆ Norlandia ಸ್ಟಾರ್ ಹೋಟೆಲ್ ಗೆ ಹೋದೆವು. ನಮ್ಮ ವಾಸ ಅಲ್ಲಿಯೇ ಆಗಿತ್ತು. ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು, ಸ್ವಲ್ಪ ಉದರ ತ್ರಪ್ತಿ ಗೊಳಿಸಿ ನಗರ ಸಂಚಾರಕ್ಕೆ ಅಣಿಯಾದೆವು.
ಮೊದಲಿಗೆ ಬೋಟಿನಲ್ಲಿ ನಗರ ಸುತ್ತಲು ಹೋದೆವು. ಸುಮಾರು ಒಂದು ತಾಸು ನಯನ ಮನೋಹರ ವೀಕ್ಷಣೆ ಇಲ್ಲಿ ಸಾದ್ಯ. ಆದರೆ ಮೇಘರಾಜ ನಮ್ಮ ಮೇಲೆ ಮುನಿಸಿಕೊಂಡತಿತ್ತು.ಮಳೆ ಹನಿಗಳ ನಡುವೆಯೂ ಕಾಲುವೆಗಳ ನಡುವೆ ಹೋಗುವ ದ್ರಶ್ಯ ಮೈ ನವಿರೇಳಿಸುತ್ತದೆ. ಯುರೋಪಿಯನ್ ದೇಶಗಳ ಜನರಿಗೆ ನೀರಿಲ್ಲದೆ ಜೀವನವೇ ಇಲ್ಲ. ಅವರು ನೀರನ್ನು ಮತ್ತು ಸೂರ್ಯನನ್ನು ಬಹು ಇಷ್ಟ ಪಡುತ್ತಾರೆ. ಕಾಲುವೆಯಲ್ಲಿ ಹೋಗುವಾಗ ಈ ನಗರದ ವೈಭವಗಳೂ ಕಣ್ಣಿಗೆ ಕಟ್ಟುತ್ತವೆ. ನಯನ ಮನೋಹರ ವಜ್ರ ಕಟ್ಟಡ, ವಿಶಾಲವಾದ ಮ್ಯುಸಿಯಮಗಳು,ಬ್ರಹದಾಕಾರದ ಮಿಲಿಟರಿ ಹಡಗುಗಳು, ಎಲ್ಲವೂ ಇಲ್ಲಿಯ ಸೊಬಗಿಗೆ ಕಳಶವಿಟ್ಟಂತೆ ಗೋಚರಿಸುತ್ತವೆ. ಹೇಳಿ ಕೇಳಿ ಇದು ಶ್ರೀಮಂತಿಕೆಯಲ್ಲಿ ಬಾಳಿದ ನಗರ, ಕೇಳಬೇಕೆ?
ಕಾಲುವೆಗಳ ವೀಕ್ಷಣೆಯ ನಂತರ ಬರಿಗಾಲಿನಲ್ಲಿ ನಗರ ನೋಡುವುದೇ ಒಂದು ಸಂಭ್ರಮ. ಇಲ್ಲಿಯ ತಿವೋಲಿ ಗಾರ್ಡೆನ್ ವಿಶ್ವವಿಖ್ಯಾತ ವಾದದ್ದು. ಈಗಂತೂ ಕ್ರಿಸ್ಮಸ್ ಸಲುವಾಗಿ ಬೆಳಕಿನ ಅಲಂಕಾರ ಬೇರೆ, ಅದನ್ನು ವರ್ಣಿಸಲು ಶಬ್ದಗಳೇ ಸಿಗದು. ನಡುರಾತ್ರಿಯವರೆಗೂ ಜನರಿಂದ ತುಂಬು ತುಳುಕುವ ಇಲ್ಲಿ ಸಮಯ ಕಳೆಯಲು ಬೇಕಾದಷ್ಟು ಆಟಗಳಿವೆ. ನೋಟಗಳಿವೆ, ಸುಂದರ ಇಸ್ಲಾಂ ಶೈಲಿಯ ಅರಮನೆಯಿದೆ, ನೇಪಾಳಿ ಶೈಲಿಯ ಭಗವಂತನ ಮಂದಿರವಿದೆ. ಏನಿದೆ ಏನಿಲ್ಲ ಇಲ್ಲಿ ಎನ್ನುವುದೇ ಒಂದು ದೊಡ್ಡ ಕೌತಕ. ಇದನ್ನು ಸಂಪೂರ್ಣವಾಗಿ ವರ್ಣಿಸಲು ದಿನಗಳೇ ಬೇಕಾದಿತು. ಸಾದ್ಯವಾದಷ್ಟು ಕಣ್ಣಿಗೆ ಕಟ್ಟುವ ಪ್ರಯತ್ನ ಮಾತ್ರ ನನ್ನದು. ರಾತ್ರಿಯ ೧೨ ಗಂಟೆಯವರೆಗೂ ಅಲ್ಲಿ ಕಳೆದು ಪುನಃ ಹೋಟೆಲಿಗೆ ವಾಪಸ್ ಬಂದೆವು. ಇಲ್ಲಿಯ ಇನ್ನೊಂದು ವೈಶಿಷ್ಟ್ಯತೆ ಎಂದರೆ ಕುಡಕರು, ರಾತ್ರಿ ಇಡೀ ಕಿರುಚಾಡುತ್ತಲೇ ಇರುತ್ತಾರೆ.ಪಾನಮತ್ತರಾಗಿ ವಾಹನ ಚಲಾಯಿಸಬಾರದು ಎಂಬ ನಿಯಮ ಇವರನ್ನು ಒಂದು ಹದ್ದುಬಸ್ತಿನಲ್ಲಿಟ್ಟಿದೆ. ಹೇಳಲೇಬೇಕಾದ ಇನ್ನೊಂದು ಸಂಗತಿಯೆಂದರೆ ಈ ನಗರ ಸಲಿಂಗಕಾಮಿಗಳ ಸ್ವರ್ಗವಂತೆ. ರಾತ್ರಿ ರಸ್ತೆಯಲ್ಲಿ ಬರುವಾಗ ತುಂಬ ಎಚ್ಚರಿಕೆಯಿಂದ ಇರಬೇಕಾದದ್ದು ನಮ್ಮ ಕೆಲಸ.
ದಿನವಿಡೀ ಆಯಾಸವಾದ್ದರಿಂದ ಕಣ್ಣಿಗೆ ನಿದ್ದೆ ಹತ್ತಿದ್ದೆ ತಿಳಿಯಲಿಲ್ಲ. ಮರುದಿನ ಸೂರ್ಯದೇವ ಪ್ರತ್ಯಕ್ಷವಾಗಿ ನಮ್ಮೆಲ್ಲ್ಲರ ಮೊಗದಲ್ಲಿ ನಗುವನ್ನು ತಂದಿದ್ದ. ಈ ನಗರ ಜಿಲಾಂಡ್ ಮತ್ತು ಅಮೆಗರ್ ಎಂಬ ನಡುಗಡ್ಡೆಯ ನಡುವೆ ಇದೆ. ಸುಮಾರು ೬೫೬,೫೮೨ ದಷ್ಟು ಜನಸಂಖ್ಯೆ ಯುಳ್ಳ ಇದು ನಮಗೆ ಯಾವ ಲೆಕ್ಕವೂ ಅಲ್ಲ. ಆದರೆ ವೈಭೊವೋಪೇತಕ್ಕೆ, ರಾಜರ ಕಾಲದ ಸಂಸ್ಕ್ರತಿಗೆ, ಫಾಶನ್ನಿಗೆ, ಸ್ವಚ್ಚತೆಯ ಮುಂದೆ ಇದಕ್ಕೆ ನಾವು ಯಾವ ಲೆಕ್ಕವೂ ಅಲ್ಲ. ವಿಶ್ವ ಯುದ್ಧ ದಲ್ಲಿ ಆಕ್ರಮಣಕ್ಕೆ ತುತ್ತಾದ ಇದು ಜರ್ಮನಿಯ ಅಧೀನಲ್ಲಿಯು ಇತ್ತೆಂಬುದು ಕುತೂಹಲದ ಸಂಗತಿ. ಇಷ್ಟೆಲ್ಲಾ ಆದರೂ ಸಂಸ್ಕ್ರತಿಯನ್ನು ಬಿಡದ ಇಲ್ಲಿಯ ಜನರು ರಾಣಿಯನ್ನೇ ಪೂಜ್ಯ ಭಾವನೆಯಿಂದ ನೋಡುತ್ತಾರೆ.
ಇದೆ ಗುಂಗಿನಲ್ಲಿ ಪ್ರವಾಸೋದ್ಯಮದ ಬಸ್ಸನ್ನು ಹಿಡಿದು ಕೆಲವು ಆಕರ್ಷಣೀಯ ಸ್ಥಳಗಳಿಗೆ ಭೇಟಿ ಇಟ್ಟೆವು. ಎಲ್ಲವನ್ನು ವಿವರಿಸಲು ಸಮಯವಿಲ್ಲ. ಆದರೂ ಕೆಲವನ್ನು ಹೇಳಲೇಬೇಕು. ಇಲ್ಲಿಯ ವಿಶಿಷ್ಟತೆಯೆಂದರೆ ಚಿತ್ತಾಕರ್ಷಕ ಚರ್ಚಗಳು, ಬಣ್ಣ ಬಣ್ಣದ ಕಟ್ಟಡಗಳು, ಹಡಗುಗಳು, ಹಾಗೂ ಅತೀ ಮುಖ್ಯವಾದ "ಲಿಟಲ್ ಮೆರ್ಮೈಡ" ವಿಗ್ರಹ. ಯಾರಾದರೂ Copenhagen ಹೋಗಿ "ಲಿಟಲ್ ಮೆರ್ಮೈಡ" ವಿಗ್ರಹ ನೋಡಲಿಲ್ಲ ಎಂದರೆ ಆಶ್ಯರ್ಯ ಪಡುತ್ತಾರೆ. ಇದು ಡೆನ್ಮಾರ್ಕಿನ ಹೆಮ್ಮೆಯೂ ಹೌದು. ಇದರ ಬಗ್ಗೆ ಸ್ವಲ್ಪ ಹೇಳುತ್ತೇನೆ. ಮೆರ್ಮೈಡ ಎಂದರೆ ದೇಹದ ಮೇಲಿನ ಭಾಗ ಹೆಣ್ಣಿನದು ಹಾಗೂ ಕೆಳಗಿನ ಭಾಗ ಮೀನಿನದು ಎಂದರ್ಥ. ಮನುಷ್ಯನ ಆತ್ಮ ಹಾಗೂ ರಾಜನ ಪ್ರೀತಿಯ ದ್ಯೋತಕ ಇದು. ಸುಮಾರು ವರ್ಷಗಳ ಹಿಂದೆ ಸಮುದ್ರ ರಾಜನ ಮಗಳಾಗಿ ಜನಿಸಿದ ಈ ಮೆರ್ಮೈಡ ಎಂಬಾಕೆ ತನ್ನೊಂದಿಗೆ ತನ್ನ ೫ ಜನ ಸಹೋದರಿಯರೊಂದಿಗೆ ಸಂತಸದಿಂದಿದ್ದಳು. ಒಂದು ದಿನ ಜಗತ್ತನ್ನು ನೋಡುವ ಆಸೆಯಿಂದ ಅದು ಸಮುದ್ರದಿಂದ ಮೇಲಕ್ಕೆ ಬಂದಾಗ ನೀರಿನ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿರುವ ರಾಜಕುವರನ ಕಂಡು ಕನಿಕರವುಂಟಾಯಿತು.




ಅವನನ್ನು ರಕ್ಷಿಸಿದವಳಿಗೆ ಅವನ ಮೇಲೆ ಅನುರಾಗ ಬೆಳೆಯಿತು. ತದನಂತರ ಅದು ರಾಜಕುವರನ ವರಿಸಲೆಂದು ಹೆಣ್ಣಿನ ರೂಪ ಧರಿಸಿ ಬಂದಾಗ ರಾಜಕುವರ ಅವಳನ್ನು ತಿರಸ್ಕರಿಸಿದ.ಬಯಸಿದ್ದರೆ ಅವಳು ರಾಜನನ್ನು ಕೊಂದು ಪುನಃ ತನ್ನ ರೂಪವನ್ನು ಪಡೆದುಕೊಳ್ಳಬಹುದಿತ್ತು. ಆದರೆ ಪ್ರೀತಿಯೇ ದೊಡ್ಡದು ಎಂದು ತೀರ್ಮಾನಿಸಿ ತನ್ನನ್ನೇ ಸಮರ್ಪಿಸಿ ತನ್ನ ಲೋಕಕ್ಕೆ ಹೋಗಲಾಗದೆ ಸದಾ ಸಮುದ್ರದಂಚಿನಲ್ಲಿ ಕಾಯುತ್ತಾ ಕುಳಿತಳು. ಅವಳ ನೆನಪೇ ಈ ಲಿಟಲ್ ಮೆರ್ಮೈಡ. ಇದೊಂದು ಹ್ರದಯಸ್ಪರ್ಶೀ ಕಥೆ. ನೀಚ ಬುದ್ದಿಯ ಮನುಜ ಈ ವಿಗ್ರಹದ ಮೇಲೆ ಹಲುವಾರು ಸಲ ದಾಳಿ ನಡೆಸಿದ್ದಾನೆ ಎಂಬ ವಿಷಯ ತಿಳಿದಾಗ ನಮ್ಮದೂ ಒಂದು ಜನ್ಮವೇ ಎಂಬ ತಿರಸ್ಕಾರ ಮನಸ್ಸಿನಂಚಿನಲ್ಲಿ ಸುಳಿದಾಡಿ ಹೋಯಿತು.ಆದರೆ ಆ ವಿಗ್ರಹ ಅನೇಕ ಯೋಚನೆಗಳಿಗೆ ನಾಂದಿ ಹಾಡುತ್ತದೆ. ತ್ಯಾಗಕ್ಕೆ, ಪ್ರೀತಿಗೆ, ಕಲೆಗಾರನ ನೈಪುಣ್ಯತೆಗೆ ಮೂಕಸಾಕ್ಷಿಯಾಗಿದ್ದೂ ಸತ್ಯ. ಅಲ್ಲಿ ನಿಂತು ಕ್ಷಣ ಕಳೆಯುವುದು ಒಂದು ರೋಚಕ ಅನುಭವ.
ಇದೊಂದು ಜ್ನಾನವಂತರ ಬೀಡು ಕೂಡ. ನೊಬೆಲ್ ಪಾರಿತೋಷಕ ಪಡೆದ ಹಲವರ ಮನೆ ಇಲ್ಲಿದೆ. ಈ ನಗರದ ಇನ್ನೊಂದು ಪ್ರಮುಖ ಆಕರ್ಷಣೆ ಇಲ್ಲಿನ ಶಾಪಿಂಗ್ ಓಣಿ. ಸ್ತೋರ್ಗೆತ್ ಎಂಬ ಹೆಸರಿನ ಯುರೋಪಿನಲ್ಲಿಯೇ ಅತೀ ಉದ್ದದ ಶಾಪಿಂಗ್ ಓಣಿ ಇದು. ಇಲ್ಲಿ ಸಿಗದ ವಸ್ತುಗಳೇ ಇಲ್ಲ. ಎಲ್ಲವು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ ಇದರಲ್ಲಿ. ಸುಮಾರು ೩ ಕಿಲೋಮೀಟರ್ ಗಳಷ್ಟು ಉದ್ದವಾದ ಈ ಓಣಿ ಯಲ್ಲಿ ಎಂದಿನಂತೆ ಸ್ತ್ರೀಯರದೇ ದರಬಾರು. ಈ ನಗರದಲ್ಲಿಯೇ ತಾಜ್ಮಹಲ್ ಎಂಬ ಭಾರತದ ರೆಸ್ಟೋರಂಟ್ ಇದೆ ಎಂದು ತಿಳಿದು ಅಲ್ಲಿಗೆ ಹೋದೆವು. ಸ್ವಾದಿಷ್ಟವಾದ ಭೋಜನ ಕರ್ನಾಟಕದ ಭೋಜನವನ್ನು ನೆನಪಿಸುವಂತಿತ್ತು.
ಈ ನಗರದ ಇನ್ನೊಂದು ಭವ್ಯತೆ ಇಲ್ಲಿನ ಅಮೊಲಿನಿಬೋರ್ಗ್ ಅರಮನೆ. ನೂರಾರು ವರ್ಷಗಳಷ್ಟು ಹಳೆಯದಾದ ಈ ಅರಮನೆ ರಾಜರ ವೈಭವವನ್ನು ನೆನಪಿಗೆ ತರಿಸುತ್ತದೆ. ಅತ್ಯಂತ ಸುಸ್ಥಿತಿಯಲ್ಲಿರುವ ಇಂದಿಗೂ ರಾಣಿಯಾ ಅಧಿಕ್ರತ ವಾಸಸ್ಥಾನ ವಾಗಿರುವ ಈ ಅರಮನೆ ಎಂಥವರನ್ನು ಮಂತ್ರಮುಗ್ಧಗೊಳಿಸಿಬಿಡುತ್ತದೆ.ಪ್ರತಿದಿನ ಮಧ್ಯಾನ್ಹ ೧೨ ಗಂಟೆಯ ಸುಮಾರಿಗೆ ರಾಣಿ ಬಂದು ತನ್ನ ರಕ್ಷಣಾ ತುಕಡಿಯನ್ನು ಬದಲಾಯಿಸುವ ದ್ರಶ್ಯ ಹಳೆಯ ಕಾಲದ ರಾಜರ ಶ್ರೀಮಂತಿಕೆಯನ್ನು ನೆನಪಿಸುತ್ತದೆ. ಅರಮನೆಯ ಮುಂದೆ ನಯನ ಮನೋಹರ

ಕಾರಂಜಿ, ಅಲ್ಲಿಯೇ ಹರಿಯುವ ಸಮುದ್ರ, ವಿಶಾಲವಾದ ಪ್ರಾಂಗಣ ನಮ್ಮ ಜೀವನ ಸಾರ್ಥಕ ಎನಿಸಿಬಿಡುತ್ತದೆ. ಹತ್ತು ಹಲವು ದಾಳಿಗಳಾದರೂ ತನ್ನ ಪ್ರತಿಷ್ಠೆಯನ್ನು ಉಳಿಸಿ ಬೆಳೆಸಿಕೊಂಡು ಬಂದ ಈ ಅರಮನೆಯನ್ನು ಒಮ್ಮೆ ನೋಡಲೇಬೇಕು. ಇಲ್ಲಿ ಯಾವುದೇ ತರಹದ ಅಸಹ್ಯವೆನಿಸುವಷ್ಟು ಪೋಲಿಸು ಕಾವಲು ಇಲ್ಲ. ಎಲ್ಲವು ಮನಸ್ಸಿಗೆ ಮುದ ಕೊಡುತ್ತವೆ.
ಈ ನಗರದ ವೈಭವಕ್ಕೆ ಕಾರಣವೇನು ಎಂದು ಕುತೂಹಲದಿಂದ ಪ್ರಶ್ನಿಸಿದಾಗ, ಇಲ್ಲಿನ ಸರ್ಕಾರ ಜನರಿಂದ ಸುಮಾರು ೪೦% ತೆರಿಗೆ ವಸೂಲು ಮಾಡುವ ವಿಚಾರ ಬೆಳಕಿಗೆ ಬಂತು.ಈ ತೆರಿಗೆಯಿಂದಲೇ ಜನರ ಸಮಸ್ತ ವ್ಯವಸ್ಥೆಗಳನ್ನು ಪೂರೈಸಲಾಗುತ್ತದಂತೆ. ಅದಕ್ಕಾಗಿಯೇ ಹುಡುಕಿದರೂ ಬಿಕ್ಷುಕರು ಇಲ್ಲಿ ಸಿಗಲಾರರು.
ಇನ್ನು ಅನೇಕ ಸ್ಥಳಗಳು ಇಲ್ಲಿ ನೋಡುವನ್ಥವುಗಳು ಆದರೆ ಅತೀ ಮಹತ್ವವಾದದ್ದನ್ನು ಮಾತ್ರ ತಿಳಿಸಿದ್ದೇನೆ.
ಭಾನುವಾರ ರಾತ್ರಿ ಅಲ್ಲಿಂದ ಹೊರತು ಪುನಃ Gothenburg ಸೇರುವಷ್ಟರಲ್ಲಿ ೧೧ ಗಂಟೆ ಆಗಿತ್ತು.
ಒಟ್ಟಿನಲ್ಲಿ ಈ ನಗರ ಎಲ್ಲ ಅಧುನಿಕ ತಂತ್ರಜ್ಞಾನಗಳು, ಹಾಗೂ ಹಳೆಯ ತಲೆಮಾರಿನ ಸಂಸ್ಕ್ರತಿ ಸೇರಿ "ಹಳೆ ಬೇರು ಹೊಸ ಚಿಗುರು, ಕೂಡಿರಲು ಮರ ಸೊಗಸು" ಎಂಬ ಕವಿ ವಾಣಿಯನ್ನು ನೆನಪಿಗೆ ತರಿಸುವಂತಿದೆ. ಸಾದ್ಯವಾದರೆ ನೋಡಲೇಬೇಕಾದ ನಗರ ಇದು. ಇನ್ನು ಹೆಚ್ಚಿನ ವಿವರಗಳಿಗೆ murthyhegde@gmail.com ಗೆ ಸಂಪರ್ಕಿಸಿ.

3 comments:

Unknown said...

Liked the first photo very much

ಸಾಗರದಾಚೆಯ ಇಂಚರ said...

ಕೃಷ್ಣರವರೇ,
ಇಷ್ಟವಾಗುದ್ದಕ್ಕೆ ತುಂಬು ಹ್ರದಯದ ಕ್ರತಜ್ನತೆಗೆಳು

shwetha said...

namaskara guru avare nanna hesaru Shwetha antha nanna uru shimoga
nemma sagaradacheya enchara thumba chennagedhe adarallu nemma varnane thumba chennagedhe
nanu nemage thanks helalu esta paduthene nanage bere desha da samskruthee theledukollalu thumba kuthuhala eruthade adakke pravasa kathanagalannu (blog) thumba odhuthene nemma yurope kathana thumba chennagethu

dhanyavadagalu
nemma abepraya hagu nemma sweden jevanadha bagge nanna mail ID ge kalese (shwethahr8901@gmail.com) nemma mail baruthade anta theludu kondeddene.