Tuesday, January 20, 2009

ಎಲ್ಲಿದ್ದೆ ಇಲ್ಲಿ ತನಕ...

ಎಲ್ಲಿದ್ದೆ ಇಲ್ಲಿ ತನಕ...

- ಗುರು ಬಬ್ಬಿಗದ್ದೆ

ಮದುವೆಯ ಮನೆಯಲ್ಲಿ ಸೂತಕದ ಛಾಯೆ. ಮದುವೆಯ ಸಂಭ್ರಮದಲ್ಲಿದ್ದ ಮದುವಣಗಿತ್ತಿ ವರನ ಸುಳಿವಿಲ್ಲದೇ ಕಂಗಾಲಾಗಿದ್ದಾಳೆ. ನಿನ್ನೆ ಮೊನ್ನೆ ತನಕ ಭರವಸೆಯ ಕಿರಣ ಹರಿಸಿದ್ದ ವರ ಮಹಾಶಯ ಇದೀಗ ತನ್ನ ವಿಚಿತ್ರ ಸ್ವಭಾವದ ಪರಿಚಯ ಮಾಡಿಕೊಟ್ಟಿದ್ದಾನೆ. ಈ ಶಾಕ್ ನಿಂದ ಹೊರಬರಲು ಬಹಳಷ್ಟು ಸಮಯವೇ ಬೇಕು. ಮದುವೆಯ ಮನೆಯವರಿಗೆ ಮಾತ್ರ ಗೊತ್ತು ಅದರ ನೋವು, ದು:ಖ. ಅದೊಂದು ಬಿಸಿ ತುಪ್ಪದಂತೆ, ನುಂಗಲೂ ಆಗದೆ, ಉಗುಳಲೂ ಆಗದ ವಿಚಿತ್ರ ಮನೋವೇದನೆ.
ಆಶ್ಚರ್ಯವಾಗಿರಬಹುದಲ್ಲ, ಇದೇನಪ್ಪ, ಮದುವೆ, ವರ, ಎನೇನೋ ಹೇಳುತ್ತಿದ್ದಾನೆ ಎಂದು. ನಾನು ಹೇಳ ಹೊರಟಿರುವುದು ಭಾರತವೆಂಬ ಮದುವಣಗಿತ್ತಿಯ ಕಥೆ ಅಲ್ಲ ವ್ಯಥೆ. ಇಲ್ಲಿ ವರ ಮಹಾಶಯನ ಸ್ಥಾನದಲ್ಲಿ ನಮ್ಮ ಅರ್ಥಿಕತೆ ಕುಳಿತಿದೆ. ದಿನೇ ದಿನೇ ದೇಶವನ್ನು ತಲ್ಲಣಗೊಳಿಸುತ್ತಿರುವ ಆರ್ಥಿಕತೆ ನಿಜಕ್ಕೂ ಕೈ ಕೊಟ್ಟ ವರನೇ ಸರಿ. ನೋಡಿ, "ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಯಾಕೆ" ಎಂದು ಕೇಳುವ ಜನರ ಮಧ್ಯೆ "ಹೊಟ್ಟೆಯ ಹಿಟ್ಟಿಗೋಸ್ಕರವಾದರೂ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಯಲೇಬೇಕಾದ ಅನಿವಾರ್ಯತೆಯನ್ನು" ತೋರಿಸಿಕೊಟ್ಟು ವಿಶ್ವಕ್ಕೇ ವಿಶ್ವವೇ ಮೂಗಿನ ಮೇಲೆ ಬೆರಳು ಇಡುವಷ್ಟರ ಮಟ್ಟಿಗೆ ಬೆಳೆದಿದ್ದೇವೆ. ಮೊನ್ನೆ ಮೊನ್ನೆಯಷ್ಟೇ ಚಂದ್ರಯಾನ ಉಡಾಯನ ಮಾಡಿ ಶಹಬ್ಬಾಸ್ ಎನಿಸಿಕೊಂಡಿದ್ದೇವೆ. ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವಾಗಲೇ ಆರ್ಥಿಕ ಬಿಕ್ಕಟ್ಟು ದೇಶದ ಬೆನ್ನನ್ನೇ ಮುರಿದಿದೆ.ಒಮ್ಮೆ ಯೋಚಿಸಿ, ವಿಶ್ವದ ದೊಡ್ಡಣ್ಣ, ಬಲಿಷ್ಟ ಆರ್ಥಿಕತೆಯ ಸಾರ್ವಭೌಮ, ಶ್ರೀಮಂತಿಕೆಯ ಸರದಾರ ಎನಿಸಿಕೊಂಡಿದ್ದ ಅಮೇರಿಕಾವೇ ಆರ್ಥಿಕ ದಿವಾಳಿತನದಿಂದ ಕಂಗೆಟ್ಟಿದೆ. ಇಂಥಹ ಸನ್ನಿವೇಶದಲ್ಲಿ ಭಾರತದಂತಹ ದೇಶ ಉಸಿರಾಡಲೂ ಆಗದ ಸ್ಥಿತಿ ನಿರ್ಮಾಣವಾಗಬೇಕಿತ್ತು. ಆದರೆ ಪುಣ್ಯಕ್ಕೆ ಹಾಗೆ ಆಗಲಿಲ್ಲ. ನಾವಿನ್ನೂ ಶೋಚನೀಯ ಸ್ಥಿತಿ ಮುಟ್ಟಿಲ್ಲ. ಶತಮಾನಗಳ ಖ್ಯಾತಿಯ ಲೆಹ್ಮನ್ ಬ್ರದರ್ಸ್ , ಬೆರ್ ಸ್ಟೆರ್ನ್ಸ್ ನಂಥ ಘಟಾನುಘಟಿಗಳೇ ಮಣ್ಣು ಮುಕ್ಕಿವೆ. ಆದರೆ ನಮ್ಮಲ್ಲಿ ಇಲ್ಲಿ ತನಕ ಯಾವ ಕಂಪನಿಯೂ ದಿವಾಳಿಯಾಗಿಲ್ಲ. ನಿಜ, ಅರ್ಥಿಕವಾಗಿ ನಾವು ಸುದೃಢವಾಗುತ್ತಿರುವಾಗಲೇ ಒಕ್ಕರಿಸಿದ ಈ ಬಿಸಿ ನಮ್ಮನ್ನು ಚಿಂತೆಗೀಡುಮಾಡಿದೆ.
ಕೇಳಲೇಬೇಕಾದ ಅನಿವಾರ್ಯತೆಯಿಂದ ಕೇಳುತ್ತಿದ್ದೇನೆ "ಎಲ್ಲಿದ್ದೆ ಇಲ್ಲಿ ತನಕ" ಎಂದು. ಕಲ್ಪನೆಗೂ ನಿಲುಕದ ರೀತಿಯಲ್ಲಿ ಕುಸಿದ ಷೇರುಪೇಟೆ, ಗಗನಕ್ಕೇರುತ್ತಿರುವ ಸಾಮಾನುಗಳ ಬೆಲೆ, ಹಣ ಕಳೆದುಕೊಂಡು ಸೊರಗುತ್ತಿರುವ ಅದೇಷ್ಟೋ ಜನರ ಮಧ್ಯೆಯೇ ಆಶಾ ಕಿರಣವಾಗಿ ಬಂದ ಚಂದ್ರಯಾನ, ಕೇವಲ ಭಾರತ ಮಾತ್ರ ಮಾಡಲು ಸಾಧ್ಯ ಎಂಬುದನ್ನು ತೋರಿಸಿದಂತಾಗಿದೆ. ಒಂದು ಬಿಲಿಯನ್ ಜನಸಂಖ್ಯೆಯುಳ್ಳ ದೇಶ, ಬಡತನದಿಂದ ಮುಕ್ತವಾಗಿರದ ನಾಡು, ವೈರಿಗಳ ಕಾಟದಿಂದ ಬಳಲುತ್ತಿರುವ ಭಾರತ ಎಲ್ಲವುಗಳ ನಡುವೆಯೂ ತನ್ನತನವನ್ನು ಉಳಿಸಿಕೊಂಡು ಮುನ್ನಡಿ ಇಡುತ್ತಿದೆ.
ಇನ್ನು ಅರ್ಥವ್ಯವಸ್ಥೆಯ ಕಡೆಗೆ ಬರೋಣ. ಮೊನ್ನೆ ಮೊನ್ನೆಯವರೆಗೆ ಬಲಿಷ್ಟವೆನ್ನುತ್ತಿದ್ದ ಹಲವು ಕಂಪನಿಗಳು ಕೂಡಾ ನಷ್ಟ ಅನುಭವಿಸಿವೆ. ಮುಂಬರುವ ದಿನಗಳ ಸ್ಪಷ್ಟ ಮೂನ್ಸುಚನೆ ನಮಗೆ ಲಭಿಸುತ್ತಲಿದೆ. ಅಂದುಕೊಂಡದ್ದೆಲ್ಲ ಬಂಗಾರವಾಗದು ಎನ್ನುವ ಕಾಲ ದೂರವಿಲ್ಲ. ಜನರು ಬರುವ ದಿನಗಳಲ್ಲಿ ಹಣವನ್ನು ಯೋಚಿಸಿ ವ್ಯಯಿಸಬೇಕಾಗಿದೆ. ಬ್ಯಾಂಕ್ ಗಳು ಸಾಲ ಕೊಡುವಾಗ ಅದರ ಹಿಂಪಡೆತವನ್ನು ಪರಿಗಣಿಸಬೇಕಾಗಿದೆ. ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ಅದೇಷ್ಟೋ ಜನ ಷೇರು ಪೇಟೆಯಲ್ಲಿ ಹಣ ಕಳೆದು ಕೊಂಡಿದ್ದಾರೆ. ಅವರಿಗೆ ಧೈರ್ಯ ತುಂಬಬೇಕಾಗಿದೆ.
ನೋಡಿದಿರಾ, ಒಂದು ಮದುವೆ ಮನೆಯಲ್ಲಿ ತಾಳಿ ಕಟ್ಟುವ ಕಾಲಕ್ಕೆ ವರನೇ ಕಾಣೆಯಾದರೆ ಆಗುವ ದುಗುಡ ದಂತೆ ನಮ್ಮ ಸ್ಥಿತಿಯೂ ಆಗಿದೆ. ಆದರೆ ಮನಸ್ಸು ಸರಿಯಾಗಿದ್ದರೆ ಎಲ್ಲವೂ ಸಾಧ್ಯ. ದುಂದುವೆಚ್ಚವನ್ನು ನಿಯಂತ್ರಿಸಿ, ಕೈ ಗೆ ಕೈ ಸೇರಿಸಿದರೆ ಭರತಭೂಮಿಯನ್ನು ಪುನಹ ಸಪ್ತಪದಿಯ ಬಾಗಿಲಿಗೆ ತಂದು ನಿಲ್ಲಿಸಬಹುದು. ತಪ್ಪಿದ ವರನ ಮನವೊಲಿಸಿ ಅವನನ್ನು ಪುನಹ ಮದುವೆಗೆ ಅಣಿಗೊಳಿಸಬೇಕಾಗಿದೆ. ಅಲ್ಲಿಯವರೆಗೂ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಾಗಿಲ್ಲ. ಗೌರವಾನ್ವಿತ ಪ್ರಧಾನಮಂತ್ರಿಗಳು ಹಾಗೂ ಹಣಕಾಸು ಸಚಿವರು ಮಾಡುತ್ತಿರುವ ಸತತ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲ ನೀಡಿದಾಗ ಮಾತ್ರ ಇದೆಲ್ಲ ಸಾದ್ಯ, ಎಂಥಹ ಕಾಲಘಟ್ಟದಲ್ಲಿ ನಾವು ಸಿಲುಕಿದ್ದೇವೆಂದರೆ ಹಣ ವಿಲ್ಲದೇ ಉಸಿರಾಡಲು ಸಾದ್ಯವಿಲ್ಲದಷ್ಟು.
ಜಾಗತಿಕ ಅರ್ಥಿಕ ಬಿಕ್ಕಟ್ಟನ್ನು ಯಶಸ್ವಿಯಾಗಿ ಎದುರಿಸಿ ಬಲಿಷ್ಟ ಅರ್ಥ ವ್ಯವಸ್ಥೆಗೆ ಪಣತೊಟ್ಟು ಜಾಗತಿಕ ಮಟ್ಟದಲ್ಲಿ ಹೊಸ ನಕ್ಷತ್ರದಂತೆ ಉದಯಿಸೋಣ.

2 comments:

ಮೂರ್ತಿ ಹೊಸಬಾಳೆ. said...

ದೇಷದ ಆರ್ಥಿಕ ಬಿಕ್ಕಟ್ಟು,ಅದರ ಪರಿಮಾರ್ಜನೆಯ ಮಾರ್ಗ ಗಳನ್ನ ಉದಾಹರಣೆ ಸಹಿತ ವಿವರಿಸಿದ್ದೀರಿ.ಮಹಾಯುದ್ದದಲ್ಲಿ ಸರ್ವವನ್ನೂ ಕಳೆದುಕೊಂಡ ಜಪಾನ್ ಎಂಬ ಪುಟ್ಟದೇಷವೇ ಕೆಲವೇ ವರ್ಷಗಳಲ್ಲಿ ತನ್ನ ಸತತ ಪರಿಶ್ರಮದಿಂದ ವಿಶ್ವದ ಪ್ರಭಲ ದೇಶಗಳ ಸಾಲಿಗೆ ಸೇರಿಕೊಂಡಿತು ಎಂದಾಗ ಹೇರಳ ಮಾನವ ಸಂಪನ್ಮೂಲ ಇರುವ ಭಾರತಕ್ಕೆ ನಿಂತ ಮದುವೆ ಮುಗಿಸುವುದು ಮತ್ತೂ ಮುಂದುವರೆದು ಸುಂದರ ಮಧುಚಂದ್ರವನ್ನ ಆಚರಿಸುವುದು ಕಷ್ಟಸಾದ್ಯವೇನಲ್ಲ.

Sweetie said...

Nimma snehitaru sariyaagi heLidru.. :))