Wednesday, April 28, 2010

ಸಮುದ್ರ ಸಂಗಮ - ನೋಟ ವಿಹಂಗಮ ..ಕೊನೆಯ ಭಾಗ

ಹಿಂದಿನ ವಾರ ಹಡಗಿನ ಪ್ರಯಾಣ ದ ಅನುಭವದ  (http://gurumurthyhegde.blogspot.com/2010/04/grenen-2.html) ಬಗೆಗೆ ಹೇಳಿದ್ದೆ. ಅದರೊಂದಿಗೆ ರೈಲಿನಲ್ಲಿ ನಿಮ್ಮನ್ನು Skagen ವರೆಗೆ ಒಯ್ದಿದ್ದೆ. ಇನ್ನು  ಪ್ರವಾಸ ಕಥನವನ್ನು ಧಾರಾವಾಹಿಯಂತೆ ಎಳೆಯುವುದಿಲ್ಲ. ಇಂದೇ ಮುಗಿಸಿಬಿಡುತ್ತೇನೆ.  

ರೈಲಿನಲ್ಲಿ Skagen ತಲುಪುವಾಗ ಮಧ್ಯಾನ್ಹ 3 ಘಂಟೆ ಆಗಿತ್ತು. ಇಳಿದ ಕೂಡಲೇ ಗ್ರೆನೇನ್ ತಲುಪಲು ಬಸ್ ಎಲ್ಲಿದೆ ಎಂದು ವಿಚಾರಿಸಿದಾಗ ತಿಳಿಯಿತು, ಇನ್ನೂ ಬೇಸಿಗೆ ಆರಂಭವಾಗದ್ದರಿಂದ ಬಸ್ ಸೌಲಭ್ಯ ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು. ಬಾಡಿಗೆ ಕಾರನ್ನು ಹುಡುಕಿದೆವು. ಅದೂ ಇಲ್ಲ ಎಂದು ತಿಳಿಯಿತು. ಪಕ್ಕದಲ್ಲೇ ಇದ್ದ ಬಾಡಿಗೆ ಸೈಕಲ್ ಕೇಳಲೆಂದು ಹೋದರೆ ಮಾಲಿಕನನ್ನೇ ಹುಡುಕಿ ಹೋಗಬೇಕು ಎಂದು ತಿಳಿಯಿತು. ಇಲ್ಲಿ ಹೆಚ್ಚಿನ ಜನ ಸೈಕಲ್ ತೆಗೆದುಕೊಂಡು ಗ್ರೆನೇನ್ ಗೆ ಹೋಗುತ್ತಾರೆ ಎಂದು ಓದಿ ತಿಳಿದುಕೊಂಡಿದ್ದೆ. ಹಾಗಾಗಿ ಸೈಕಲ್ ಕೇಳಲು ಹೋದೆವು. ಯಾವುದೂ  ಸಿಗದೇ ದೇವರು ಕೊಟ್ಟ ಕಾಲನ್ನು ಉಪಯೋಗಿಸುವುದೆಂದು ತೀರ್ಮಾನಿಸಿದೆವು.

ಇಲ್ಲಿಯ ರಸ್ತೆಗಳು ಹಾಗೆಯೇ, ಅಂಕು ಡೊಂಕು ಗಳಿಲ್ಲ, ನೇರವಾಗಿವೆ, ದೂರದಲ್ಲಿ ದೀಪದ ಮನೆ (Light House) ಕಾಣುತ್ತಿತ್ತು. ಅಲ್ಲಿಯೇ ಗ್ರೆನೇನ್ ಇದೆ ಎಂದು ಗೂಗಲ್ ಮಾಡಿ ನೋಡಿಕೊಂಡಿದ್ದೆವು. ಆದರೆ ಆ ದೀಪದ ಮನೆ ಎಷ್ಟು ನಡೆದರೂ ಬರುತ್ತಿಲ್ಲ. ಹೇಳುವ ಎಲ್ಲ ವಿಷಯಗಳು ಖಾಲಿಯಾಗುತ್ತಿತ್ತು. ಕಾಲು ದಣಿಯುತ್ತಿತ್ತು. ಸಮುದ್ರ ಸಂಗಮ ಸೇರುವ ಮೊದಲೇ ನಾವು ತಿರುಗಿ ಹೋಗುತ್ತೇವೆಯೇ ಎಂಬ ಚಿಂತೆ ಆರಂಭವಾಯಿತು. ಸುಮ್ಮನೆ ನೇರ ರಸ್ತೆಯಲ್ಲಿ ನಡೆಯುವುದೆಂದರೆ ಸ್ವಲ್ಪ ಬೇಸರವೇ....ಆದರೆ ರಸ್ತೆಯ ಇಕ್ಕೆಲಗಳಲ್ಲಿನ ಸುಂದರ ಮನೆಗಳು ಕಣ್ಮನ ಸೆಳೆಯುತ್ತಿದ್ದವು.



ಹೆಸರಾಂತ ಚಿತ್ರಕಾರರ ಓಣಿ ಯಂತೆ  ಇದು. ಮನೆ ನೋಡಿದರೆ ತಿಳಿಯುತ್ತದೆ ಇದು ಚಿತ್ರಕಾರನ ಕಲ್ಪನೆಯ ಮೂರ್ತರೂಪ ಎಂದು. ಬಗೆ ಬಗೆಯ ವೈವಿದ್ಯದ ಮನೆ ಕಣ್ಣಿಗೆ ತಂಪು ನೀಡದಿರುತ್ತಿದ್ದರೆ ಬಹುಷ: ನಾವು ಮುಂದೆ ಹೆಜ್ಜೆ ಹಾಕುತ್ತಿರಲಿಲ್ಲವೇನೋ. ಸ್ವಲ್ಪ ದೂರ ಕಳೆದ ಮೇಲೆ ಓಣಿ ಮುಗಿಯಿತು. ಬಯಲು ಬಂತು.




ಏನು ಮಾಡಬೇಕೆಂದು ತೋಚದೆ ಸಮಯ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆವು. ಸ್ವಲ್ಪ ದೂರ ಕಳೆದ ಮೇಲೆ ಬಲಗಡೆಯಲ್ಲಿ ಸಮುದ್ರ ತೀರ ಕಾಣಲು ಆರಂಬಿಸಿತು.  ಸರಿ, ಇನ್ನು ರಸ್ತೆ ಬೇಡ ಎಂದು ನಿರ್ಧರಿಸಿ ಪಕ್ಕದ ಸಮುದ್ರ ತೀರದಲ್ಲಿ ನಡೆಯಲು ಆರಂಬಿಸಿದೆವು. ಇಲ್ಲಿಯೂ ಅಷ್ಟೇ, ದೀಪದ ಮನೆ ಕಾಣುತ್ತಲೇ ಇತ್ತು. ಆದರೆ ಬರುತ್ತಿರಲಿಲ್ಲ.



ಕೆಲವೊಮ್ಮೆ, ನಮ್ಮ ನೋಡಿ ಅದು ಓಡುತ್ತಿದೆಯೇ ಎಂದು ಅನ್ನಿಸತೊಡಗಿತು. ಆದರೆ ಪಕ್ಕದ ಸಮುದ್ರ ಮನಸ್ಸಿಗೆ ಹಿತ ನೀಡುತ್ತಿತ್ತು. ಒಂದು ವಿಚಿತ್ರ ಆಕಾರದಲ್ಲಿ ಇಲ್ಲಿನ ಸಮುದ್ರ ತೀರ ನಿರ್ಮಿಸಲಾಗಿದೆ. ಸಮುದ್ರದ ಶಕ್ತಿಶಾಲಿ ಅಲೆಗಳಿಂದ ತಡೆಯಲು ಇಂಥಹ ತಡೆಗೋಡೆ ನಿರ್ಮಿಸಲಾಗಿದೆಯಂತೆ. ಹೆಚ್ಚು ಮಾನವ ಸುಳಿವಿಲ್ಲದೆ ಇರುವುದರಿಂದ ಸ್ವಚ್ಚತೆಯಿಂದ ಕಂಗೊಳಿಸುತ್ತಿತ್ತು.



ಅಂತೂ ನಡೆದು ನಡೆದು ದೀಪದ ಮನೆ ಹತ್ತಿರ ಬಂದು ತಲುಪಿದೆವು. ದೀಪದ ಮನೆ ಸಮುದ್ರದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಾರಿದೀಪ ವಿದ್ದಂತೆ. ಇಲ್ಲಿನ ದೀಪದ ಮನೆಯನ್ನು 1858 ರಲ್ಲಿ ನಿರ್ಮಿಸಲಾಯಿತು. 46 ಮೀಟರ್ ಎತ್ತರ ಇರುವ ಲೈಟ್ ಹೌಸ ಡೆನ್ಮಾರ್ಕಿನ ಎರಡನೇ ಅತಿ ದೊಡ್ಡ ಲೈಟ್ ಹೌಸ್ ಆಗಿದೆ.


ಇದು ಅತ್ಯಂತ ಪ್ರಕಾಶಮಾನವಾದ 400 ವ್ಯಾಟ್ ಗಳುಳ್ಳ ಸೋಡಿಯಂ ಬೆಳಕನ್ನು ಹೊಂದಿದೆ. ಸುಮಾರು 20 ಮೈಲಿಗಳ ದೂರದಿಂದ ಸಹ ಇದರ ಬೆಳಕನ್ನು ವೀಕ್ಷಿಸುವಷ್ಟು ಸಮರ್ಥವಾಗಿದೆ ಇದು. ಹಿಂದಿನವರ ತಂತ್ರಜ್ಞಾನಕ್ಕೆ ತಲೆ ಬಾಗಲೆಬೇಕಲ್ಲವೇ?

ಇಲ್ಲಿ ಒಂದು ಚಿತ್ರ ಸಂಗ್ರಹಾಲಯವಿದೆ. ಹೆಸರಾಂತ ಚಿತ್ರಕಾರರು ಇಲ್ಲಿನ ಸಮುದ್ರ ತೀರಕ್ಕೆ ಬಂದು ಬಿಡಿಸಿದ ಮನಮೋಹಕ ಚಿತ್ರಗಳು ಇಲ್ಲಿವೆಯಂತೆ. ಆದರೆ ನಾವು ಹೋದಾಗ ಸಂಗ್ರಹಾಲಯ  ಮುಚ್ಚಿತ್ತು ಅದಕ್ಕೆ ಅದನ್ನು ನೋಡಲಾಗಲಿಲ್ಲ. ಇಲ್ಲಿಂದ ಸುಮಾರು ಒಂದು ಕಿ ಮಿ ನಡೆದರೆ ಸಿಗುವುದೇ ಡೆನ್ಮಾರ್ಕಿನ ಉತ್ತರದ ತುತ್ತ ತುದಿ, ಎರಡು ಸಮುದ್ರಗಳು ಸೇರುವ ಸಂಗಮ. ಗ್ರೆನೇನ್ ಎಂದು ಕರೆಯುವ ಜಾಗ. ಇಲ್ಲಿ ಒಂದು Tractor ಬಸ್ ಲಭ್ಯವಿದೆ. ಇದೊಂದು ಬ್ರಹತ್, ವಿಶಾಲ್ ಸಮುದ್ರ ತೀರವಾದ್ದರಿಂದ ನಡೆದು ಮುಗಿಯದು ಎಂದು ನಿರ್ಧರಿಸಿ Tractor ಬಸ್ ಏರಿ ಕುಳಿತೆವು.




ಇದರಲ್ಲಿ ಸಂಪೂರ್ಣ ಸಮುದ್ರ ತೀರ ಸುತ್ತಿ ಬರಬಹುದು. ಎರಡು ಸಮುದ್ರಗಳು ಸೇರುವ ಜಾಗದಲ್ಲಿ ಬಸ್ ನಿಲ್ಲಿಸುತ್ತಾರೆ. ಇಲ್ಲಿ ಇಳಿದು ಬೇಕಾದಷ್ಟು ಸಮಯ ಕಳೆದು ಪುನಃ ಇನ್ನೊಂದು ಬಸ್ ಹಿಡಿದು ತಿರುಗಿ ಹೋಗುವ ವ್ಯವಸ್ಥೆಯಿದೆ. 


ಕೊನೆಗೂ ಆ ಕ್ಷಣ ಬಂತು. ಚಿತ್ರ ವಿಚಿತ್ರ ಬಣ್ಣದ ಆಗಸ, ಎರಡು ಸಮುದ್ರಗಳ ಮಿಲನ, ಬ್ರಹತ್ ಮರಳ ದಂಡೆ, ನಿಜಕ್ಕೂ ಇದೊಂದು ರಮಣೀಯ ಸ್ಥಳ.


ಅಲ್ಲಿಯೇ ಕುಳಿತು ಕವನ ಬರೆಯಲೇ ಎನ್ನುವಷ್ಟು ಮನಸ್ಸು ನನಗೆ ಹಾತೊರೆಯುತ್ತಿದ್ದರೆ ಇನ್ನು  ಚಿತ್ರಕಾರನಿಗೆ ಇದು ಸ್ಪೂರ್ತಿ ಸೆಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂಥಹ ಮನುಷ್ಯನಿಗೂ ಪ್ರಕ್ರತಿಯ ಜೊತೆಗೆ ಬೆಸುಗೆ ಬೆಸೆಯುವ ಸ್ಥಳವಿದು.



ಇಲ್ಲಿನ ಆಕಾಶವೇ ಹಾಗಂತೆ. ಸದಾ ಚಿತ್ರ ವಿಚಿತ್ರ ಬಣ್ಣಗಳಲ್ಲಿ ಗೋಚರಿಸುತ್ತಾ ಇರುವುದರಿಂದ ಬೇಸಿಗೆಯಲ್ಲಿ ಚಿತ್ರಕಾರರೂ ಇಲ್ಲಿಯೇ ಕುಳಿತು ತಮ್ಮ ಕಲ್ಪನೆಗಳಿಗೆ ಕುಂಚದ ಸಹಾಯದಿಂದ ಮೂರ್ತ ರೂಪ ನೀಡುತ್ತಾರಂತೆ.



ಎಷ್ಟು ನೋಡಿದರೂ ಸಾಲದು ಎಂಬಂತಿತ್ತು ಅಲ್ಲಿನ ಎರಡು ಸಮುದ್ರಗಳು ಸೇರುವ ಆ ಸ್ಥಳ. ನೀರು ಮಾತ್ರ ಬಹಳ ತಣ್ಣಗೆ ಇದ್ದಿದ್ದರಿಂದ ನೀರನ್ನು ಒಮ್ಮೆ ಮುಟ್ಟಿ  ಧನ್ಯರಾದೆವು. ಅದೇ ಕಡು ಬೇಸಿಗೆಯಾಗಿದ್ದರೆ ನೀರಿಗೆ ಇಳಿದು ಸ್ನಾನ ಆದರೂ ಮಾಡಬಹುದಿತ್ತೇನೋ ಎಂದು ಯೋಚಿಸುವಷ್ಟರಲ್ಲಿಯೇ ಅಲ್ಲಿ ಇದ್ದ ಒಬ್ಬರು ಹೇಳಿದರು, ಇಲ್ಲಿ ಸಮುದ್ರ ಸ್ನಾನ ಅಷ್ಟು ಒಳ್ಳೆಯದಲ್ಲ ಎಂದು. 




ಬೇಸಿಗೆಯಲ್ಲಿ ಇದು ಅತ್ಯಂತ ಪ್ರಸಿದ್ದ ಪ್ರವಾಸೀ ತಾಣ. ದೇಶ ವಿದೇಶಗಳಿಂದ ಸದಾ ಪ್ರವಾಸಿಗರು ಇಲ್ಲಿ ಬರುತ್ತಾರೆ. ಅವರಿಗಾಗಿಯೇ ಕಡಿಮೆ ದರದಲ್ಲಿ ತಿಂಗಳು ಗಟ್ಟಲೆ ಉಳಿಯಲು ಮನೆಗಳಿವೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಸೇರುವ ಎರಡು ಸಮುದ್ರಗಳ ಪೈಕಿ ಒಂದು ಬಿಸಿ ಆಗಿರುತ್ತದೆ, ಇನ್ನೊಂದು ತಣ್ಣಗಿದೆ. ಸೇರುವೆ ಜಾಗದಲ್ಲಿ ಕಾಲಿಟ್ಟರೆ ಬಿಸಿ ಹಾಗೂ ತಣ್ಣನೆಯ ಅನುಭವ ಒಮ್ಮೆಲೇ ಲಭಿಸುತ್ತದೆ. ಇದೊಂದು ರೋಚಕ ಅನುಭವ.

ಎರಡು ಸಮುದ್ರಗಳಲ್ಲಿ ಒಂದು ತಿಳಿ ನೀಲದಂತೆ ಕಂಡರೆ ಇನ್ನೊಂದು ಸ್ವಲ್ಪ ಬೇರೆಯೇ ಬಣ್ಣ ಇರುವಂತೆ ಗೋಚರಿಸುತ್ತದೆ. ಅತ್ಯಂತ ಸ್ಪಷ್ಟವಾಗಿ ಎರಡು ಸಮುದ್ರಗಳ ವ್ಯತ್ಯಾಸ ಗುರುತಿಸಬಹುದು.


ಸುಮಾರು ಹೊತ್ತು ಅಲ್ಲಿಯೇ ಕುಳಿತು ಕೊಂಡು ಸೂರ್ಯಾಸ್ತ ನೋಡುವ  ಮನಸ್ಸು ಇದ್ದರೂ ರಾತ್ರಿಯ ಹಡಗು ತಪ್ಪಿ ಹೋಗಬಾರದು ಎಂದು ಸ್ವಲ್ಪ ಹೊತ್ತು ಕುಳಿತು ನಂತರ ತಿರುಗಿ ಹೊರಟೆವು. ಅಲ್ಲಿಯೇ ಒಂದು ಅಂಗಡಿಯಲ್ಲಿ ಬಿಸಿಬಿಸಿ ಚಹಾ ಕುಡಿದು ನಂತರ ಒಬ್ಬ ಪುಣ್ಯಾತ್ಮ ಅದೇಗೋ ಯಾರಿಗೋ ಫೋನ್ ಮಾಡಿ ಒಂದು ಬಾಡಿಗೆ ಕಾರನ್ನು ತರಿಸಿಕೊಟ್ಟ. ಅವನಿಗೆ ಮನಸಿನಲ್ಲೇ ವಂದಿಸುತ್ತಾ ಕಾರಿನಲ್ಲಿ ರೈಲು ನಿಲ್ದಾಣದವರೆಗೆ ಬಂದು ನಂತರ ಸರಿಯಾದ ಸಮಯಕ್ಕೆ ಹಡಗನ್ನು ಹತ್ತಿದೆವು.
ಇಡೀ ದಿನದ ಸಾಹಸ ದೇಹಕ್ಕೆ ಬಹಳಷ್ಟು ದಣಿವನ್ನು ನೀಡಿತ್ತು. ಯಾರಿಗೂ ಹಡಗಿನಲ್ಲಿ ಆಡಲು ಮನಸ್ಸಿರಲಿಲ್ಲ.



 ಹಾಗೇ ಹೀಗೆ ನೋಡುತ್ತಿರುವಂತೆಯೇ ನಮ್ಮ ಊರು Gothenburg ಬಂದೆ ಬಿಟ್ಟಿತು.

ಪುನಃ ಮನೆಗೆ ಬಂದು ಸೇರುವಷ್ಟರಲ್ಲಿ ರಾತ್ರಿ 11-30. 

ಸಮುದ್ರದ ಸಂಗಮ ದ ವಿಹಂಗಮ ನೋಟ ಮನದಾಳದಲ್ಲಿ ಸಂಗಮವಾಗಿ ಸಂಗೀತದ ಸರಿಗಮಕ್ಕೆ ತಾಳವಾಗಿ, ವಾರದ ಕೊನೆಯ ಮನರಂಜನೆಯ ತಾಣವಾಗಿ, ಮರುದಿನದ ಕೆಲಸಕ್ಕೆ ಉತ್ಸಾಹದ ಚಿಲುಮೆಯಾಗಿ ಪುನಃ ಮತ್ತೊಮ್ಮೆ ಅಲ್ಲಿಗೆ ಹೋಗಬೇಕೆನ್ನುವ ಆಸೆಗೆ ನೀರೆರೆದಿತ್ತು.

ಸ್ನೇಹಿತರೆ, ನನ್ನೊಂದಿಗೆ ಪ್ರವಾಸ ಕಥನವನ್ನು ಓದಿದ ನಿಮ್ಮೆಲ್ಲರಿಗೂ ಕ್ರತಜ್ನತೆಗಳು. ಮುಂದಿನ ವಾರ ಮತ್ತೆ ಸಿಗುತ್ತೇನೆ. ಅಲ್ಲಿಯವರೆಗೆ

ಓದುತ್ತಿರಲ್ಲ....




Tuesday, April 20, 2010

ಮುಂದುವರಿದ Grenen ಪ್ರವಾಸ ಕಥನ, ಭಾಗ -2

ಕಳೆದ ವಾರದ ಸಂಚಿಕೆಯಲ್ಲಿ ಗ್ರೆನೇನ್ ಎಂಬ ಪ್ರದೇಶದ ಚಿಕ್ಕ ಮಾಹಿತಿಯ ಜೊತೆಗೆ ಹಡಗಿನ ಪ್ರಯಾಣದ ಬಗೆಗೆ ತಿಳಿಸಿದ್ದೆ (Grenen- - ಡೆನ್ಮಾರ್ಕ್ ದೇಶದ ಉತ್ತರಭಾಗದ ತುತ್ತ ತುದಿ http://gurumurthyhegde.blogspot.com/2010/04/blog-post.html). ಅನೇಕ ಬ್ಲಾಗ್ ಮಿತ್ರರು ಕಾಯಿಸಬೇಡಿ ಎಂದು ತಿಳಿಸಿದ್ದರಿಂದ ಇನ್ನೂ ಕಾಯಿಸುವುದು ಸರಿ ಅಲ್ಲವೆಂದು ನಿರ್ಧರಿಸಿ ಬೇಗನೆ ಬರೆದು ಹಾಕುತ್ತಿದ್ದೇನೆ :)

Gothenburg ನಿಂದ Frederikshavn ಗೆ ಹೊರಡುವ ಹಡಗಿನ ಪ್ರಯಾಣ  ಆರಂಬವಾಗಿದ್ದು 1983 ರಲ್ಲಿ. ಅನೇಕ ಲಾರಿಗಳಿಗೆ ಇದು ವರ ಕಾರಣ ಕೇವಲ ಮೂರೇ ತಾಸಿನಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಡಗು ಲಾರಿಗಳನ್ನು ತಲುಪಿಸುತ್ತದೆ. ಇಲ್ಲದಿದ್ದರೆ ಅವರು ಸುಮಾರು 15 ಘಂಟೆಗಳಷ್ಟು ರಸ್ತೆಯಲ್ಲಿ ಸಂಚರಿಸಬೇಕು. ಆದ್ದರಿಂದ ಹಡಗಿನ ಒಳಗೆ ಹೆಚ್ಚಾಗಿ ಲಾರಿ ಮಾಲೀಕರು, ಡ್ರೈವರ್ ಗಳು ತುಂಬಿರುತ್ತಾರೆ. ಅಷ್ಟೇ ಅಲ್ಲದೆ ಎಷ್ಟೋ ಪ್ರವಾಸಿಗರು ತಮ್ಮ ಕಾರನ್ನು ಹಡಗಿನಲ್ಲಿ ಹಾಕಿ, ನಂತರ ಡೆನ್ಮಾರ್ಕ್ ಮುಟ್ಟಿದ ಮೇಲೆ ಕಾರಿನಲ್ಲಿ ಮುಂದಿನ ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಇದರಿಂದ ಅವರ ಸಮಯ ಮಾತ್ರ ಉಳಿಯುವುದಿಲ್ಲ ಬದಲಿಗೆ ಪೆಟ್ರೋಲ್ ನ  ಹಣ ಉಳಿಯುತ್ತದೆ, ಐಶಾರಾಮಿ  ಹಡಗಿನಲ್ಲಿ ಕುಳಿತು ರುಚಿಯಾದ ಬಗೆ ಬಗೆಯ ಖಾದ್ಯ ಸೇವಿಸುತ್ತಾ, ವಿವಿದ ದೇಶದ ಪಾನೀಯಗಳನ್ನು ಹೀರುತ್ತಾ ಹೋಗುವ ಆ ಸುಖ ಕಾರಿನಲ್ಲಿ ಅವರಿಗೆ ಎಲ್ಲಿ ಸಿಗುತ್ತದೆ ಅಲ್ಲವೇ?


ಸುಮಾರು 155 ಮೀಟರ್ ಗಳಷ್ಟು ಉದ್ದದಾದ ಹಡಗು 550 ಕಾರುಗಳನ್ನು ಹೊತ್ತೊಯ್ಯುವಷ್ಟು ಸಮರ್ಥವಾಗಿದೆ. ಸುಮಾರು 2300 ರಷ್ಟು ಪ್ರಯಾಣಿಕರನ್ನು ಒಮ್ಮೆಲೇ ಹೊತ್ತೊಯ್ಯಬಹುದಾದ ಬ್ರಹತ್ ಹಡಗಿದು. ಇದರ ಹೊರಗಿನ ಮೈಮಾಟ ಎಷ್ಟು ಚಂದವೋ ಒಳಗಿನ ಒನಪು ವಯ್ಯಾರವೂ ಅಷ್ಟೇ ಮನೋಹರ. ನಿಮ್ಮ ದುಡ್ಡಿಗೆ ಸಂಚಕಾರ ನೀಡುವ ಅನೇಕ ಜೂಜು ಕೇಂದ್ರಗಳು (Casino Centre) ಇದರ ಒಳಗೆ ಇವೆ. ಮಕ್ಕಳ ಆಟದಿಂದ ಹಿಡಿದು ಟೇಬಲ್ ಟೆನ್ನಿಸ್ ನಂತಹ ಆಟಗಳು ಇದರೊಳಗೆ ಹೇರಳವಾಗಿವೆ. ಇಲ್ಲಿ ಜನ ಕುಳಿತಿರುವುದಕ್ಕಿಂತ ಒಂದಿಲ್ಲೊಂದು ಆಟದಲ್ಲಿ, ಜೂಜಾಡುತ್ತ ಇರುವುದೇ ಹೆಚ್ಚು. ವಾತಾವರಣ ಚೆನ್ನಾಗಿದ್ದರೆ ಹಡಗಿನ ಮೇಲೆ ಹೋಗಿ ಸುತ್ತಲೂ ಇರುವ ನೀಲಾಕಾಶ, ಬ್ರಹತ್ ಸಮುದ್ರದ ಸೌಂದರ್ಯವನ್ನು ಸವಿಯಬಹುದು. 

                                        

ನೀಲಾಕಾಶದ ನೀಲಿಯಿಂದಾಗಿ ಸಮುದ್ರದ ನೀರು ಅಚ್ಚ ನೀಲಿ ಸೀರೆ ಉಟ್ಟ ಬೆಡಗಿಯಂತೆ ತೋರುತ್ತದೆ. ಪ್ರಕ್ರತಿ, ಸೌಂದರ್ಯಕ್ಕೆ ಎಷ್ಟು ಹೆಸರುವಾಸಿಯೋ ಹಾಗೆಯೇ ಮಾನವನ ಅಹಂಕಾರ ಮುರಿಯುವಲ್ಲಿಯೂ ಅಷ್ಟೇ ಹೆಸರುವಾಸಿ. ಮನುಷ್ಯ ತಾನೆಷ್ಟೇ ದೊಡ್ಡವನಾದರೂ ಪ್ರಕ್ರತಿಯ  ಮುಂದೆ ಕುಬ್ಜನೆ. ನಾವು ಆಕಾಶದಲ್ಲಿ ಹಾರುವ ವಿಮಾನ ಸೃಷ್ಟಿಸಬಹುದು. ಆದರೆ ಜ್ವಾಲಾಮುಖಿಯ ಹೊಗೆಯಿಂದ ವಿಮಾನವನ್ನು ರಕ್ಷಿಸಲು ಸಾದ್ಯವಿಲ್ಲ. ಯೂರೋಪಿನ ಅದೆಷ್ಟೋ ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಜನರು ತಮ್ಮ ಮನೆಗೆ ಯಾವಾಗ ಸೇರುತ್ತೆವೋ ಎಂಬ ಆತಂಕದಲ್ಲಿದ್ದಾರೆ. ಪ್ರಕ್ರತಿಯ ನಡೆ ವಿಚಿತ್ರ, ಅದನ್ನು ಅರಿಯಲು ಯಾರಿಂದಲೂ ಸಾದ್ಯವಿಲ್ಲ. ಅಲ್ಲವೇ?

ಹೀಗೆ ಪ್ರಕ್ರತಿಯ ಬಗೆಗೆ ವಿಚಾರಿಸುತ್ತಾ ಹಡಗಿನ ಮೇಲೆ ಬಂದು ನಿಂತು ಸೌಂದರ್ಯ ಸವಿಯತೊಡಗಿದೆವು.  ವಿಪರೀತ ಗಾಳಿ, ಹಾಗೂ 8 ಡಿಗ್ರಿ ಯಷ್ಟು ಉಷ್ಣತೆ ಯಿಂದಾಗಿ ನಾವು ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾಗಲಿಲ್ಲ. ಆದರೂ ಹುಚ್ಚಾಟಕ್ಕೆನೂ ಕಡಿಮೆಯಿರಲಿಲ್ಲ.
                                   

ಹಡಗಿನ ಒಳಗೆ ಬಂದು ನಾವು ಸ್ವಲ್ಪ ಹೊತ್ತು ಜೂಜನ್ನು ಆಡಿದೆವು.


                                    

 ಹೇಳಿಕೊಳ್ಳುವಂಥ ಲಾಭ ಬರದಿದ್ದರೂ ಒಂದು ಒಳ್ಳೆಯ ಅನುಭವ ಲಭಿಸಿತು. ನಾವು ಶಾಖಾಹಾರಿಗಳಿಗೆ ಆಹಾರದ್ದೆ ಸಮಸ್ಯೆ. ಎಲ್ಲಿ ಹೋದರೂ ನಮಗೆ ಬೇಕಾದ ಆಹಾರ ಸಿಗದೇ ಇದ್ದಿದ್ದರಿಂದ ಹೋಗುವಲ್ಲಿ ಎಲ್ಲ ಸ್ವಲ್ಪ ಆಹಾರ ತೆಗೆದುಕೊಂಡು ಹೋಗಲೇಬೇಕಾಗುತ್ತದೆ. ಮುದ್ದಿನ ಮಡದಿ ಹಿಂದಿನ ದಿನ ರಾತ್ರಿಯೆಲ್ಲ ನಿದ್ದೆ ಗೆಟ್ಟು ಮಾಡಿದ್ದ ತಿಂಡಿಯನ್ನು ಹಡಗಿನಲ್ಲಿ ತಿಂದು ಪುನಃ  ಸ್ವಲ್ಪ ಹೊತ್ತು ಇಸ್ಪೀಟ್ ಆಡುವಷ್ಟರಲ್ಲಿ 3ಘಂಟೆ ಕಳೆದೇ ಹೋಯಿತು. ನಾವು ಸೇರಬೇಕಾದ ಜಾಗ Frederikshavn  ಬಂದೆ ಬಿಟ್ಟಿತು.  

ಇನ್ನೊಂದು ವಿಚಾರ ಹೇಳಲೇಬೇಕು, ಇಷ್ಟೆಲ್ಲಾ ವ್ಯವಸ್ಥೆ ನೀಡುವ ಹಡಗಿನ ಟಿಕೆಟ್ ಬೆಲೆ ಕೇವಲ ೬೫೦ ರೂಪಾಯಿಗಳು. ಇಲ್ಲಿನ ಹಣಕ್ಕೆ ಹೋಲಿಸದರೆ ಇದು ತುಂಬಾ ತುಂಬಾ ಕಡಿಮೆ. ಕೇವಲ ಹಣದ ಆಸೆಗೊಂದೆ ಹಡಗು ಇರದೇ ಇಲ್ಲಿನ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿಯೂ ಅದರ ಪಾತ್ರ ಬಹಳ ದೊಡ್ಡದು. ಹಾಗಾಗಿ ಇಲ್ಲಿಗೆ ಬಂದ ಎಲ್ಲರೂ ಹಡಗಿನ ಪ್ರಯಾಣ ಮಾಡಿಯೇ ಹೋಗುತ್ತಾರೆ. ಪ್ರಕ್ರತಿ ವಿಕೋಪ ಎದುರಾದರೆ ನಿಮ್ಮನ್ನು ರಕ್ಷಿಸಲು ಪರ್ಯಾಯ ವ್ಯವಸ್ಥೆಯೂ ಇದೆ.

                                        

Frederikshavn ದಲ್ಲಿ ಇಳಿದ ಮೇಲೆ ಅಲ್ಲಿಂದ ನೇರ ರೈಲು ನಿಲ್ದಾಣಕ್ಕೆ ನಡೆದವು. ಅಲ್ಲಿಂದ ಸುಮಾರು ೨೦ ನಿಮಿಷಗಳು ಕಾಲ ನಡೆದರೆ ರೈಲು ನಿಲ್ದಾಣ ಬರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿದ ಸುಂದರ ಹೂಗಳು ಮನಸೂರೆಗೊಂಡವು. 
                                        

ಹಾಗೆಯೇ ನಡೆಯುತ್ತಿರಬೇಕಾದರೆ ಅಲ್ಲಿನ ೧೨೫ ವರ್ಷಗಳಷ್ಟು ಹಳೆಯದಾದ ಚರ್ಚ್ ಗೋಚರಿಸಿತು. ಇದನ್ನು ೧೮೯೨ ರಲ್ಲಿ ಖ್ಯಾತ ಶಿಲ್ಪಿ (Architect) ವಿ.ಅಹ್ಲ್ಮಂನ್ ಎಂಬಾತ ಸಂಪೂರ್ಣ ರೋಮನ್ ಶೈಲಿಯಲ್ಲಿ  ಕೇವಲ Lime Stone ಗಳನ್ನು ಉಪಯೋಗಿಸಿ ಕಟ್ಟಿದ್ದಾನಂತೆ. ಇಲ್ಲಿಯೇ ಸ್ವಲ್ಪ ಹೊತ್ತು ನಿಂತು ಕೆಲವು ಫೋಟೋ ತೆಗೆದುಕೊಂಡು ರೈಲು ನಿಲ್ದಾಣದ ಬಳಿಗೆ ಹೆಜ್ಜೆ ಹಾಕಿದೆವು.


                                                       

ರೈಲು ನಿಲ್ದಾಣ ತಲುಪುವಷ್ಟರಲ್ಲಿ ನಮ್ಮ ಅದೃಷ್ಟಕ್ಕೆ ರೈಲು ಹೊರತು ಹೋಗಿತ್ತು . ಮುಂದಿನ ರೈಲು ಬರಲು ೧ ಘಂಟೆ ಕಾಯಬೇಕು ಎಂದು ತಿಳಿಯಿತು. ರೈಲಿನ ಟಿಕೆಟ್ ತೆಗೆದುಕೊಂಡು ಅಲ್ಲಿಯೇ ನಿಲ್ದಾಣದ ಹೊರಗಿನ ಪಾರ್ಕಿನಲ್ಲಿ ಕುಳಿತು ಊಟ ಮಾಡಿದೆವು. ಊಟ ಮಾಡಿ ಬರುವಷ್ಟರಲ್ಲಿ ರೈಲು ನಮಗಾಗಿ ಕಾದು ನಿಂತಿತ್ತು. 


                                     

ಇಲ್ಲಿಂದ ನಮ್ಮ ಪ್ರಯಾಣ ಡೆನ್ಮಾರ್ಕಿನ ಉತ್ತರ ಭಾಗದ ತುತ್ತತುದಿಯ ನಗರ Skagen ಎಂಬ ನಗರಕ್ಕೆ. ಸುಮಾರು 40 ನಿಮಿಷ ನಿಸರ್ಗದ ಸೌಂದರ್ಯ ಸವಿಯುತ್ತಾ Skagen ತಲುಪಿದಾಗ ಮಧ್ಯಾನ್ಹ 3  ಘಂಟೆ ಆಗಿತ್ತು. 


                                              
Skagen ನಗರಕ್ಕೆ  ಅದರದೇ  ಆದ  ಭವ್ಯ  ಇತಿಹಾಸವಿದೆ, ಸುಮಾರು 1870 ಮತ್ತು 1880 ರ ಸಮಯದಲ್ಲಿ ಯೂರೋಪಿನ ಹಲವಾರು ಚಿತ್ರಕಾರರಿಗೆ ಇದೊಂದು ಸ್ವರ್ಗವಾಗಿತ್ತು. ಇಲ್ಲಿಂದ ಸುಮಾರು 5  km ನಡೆದರೆ ಸಿಗುವುದೇ Grenen ಎಂಬ ತುತ್ತ ತುದಿ. Kattegatt ಮತ್ತು 
  Skagerrak ಎಂಬ ಎರಡು ಸಮುದ್ರಗಳು ಸೇರುವ ಮನಮೋಹಕ ಪ್ರದೇಶವಿದು. ವಿಶಾಲವಾದ ಸಮುದ್ರ, ಸುಂದರ ಬೀಚ್, ಮನಮೋಹಕ ಪರಿಸರ, ಸೃಷ್ಟಿಯೇ ಇಲ್ಲಿ ಹುಟ್ಟಿತೆ ಎಂಬಂತೆ ಭಾಸವಾಯಿತು. ಇಲ್ಲಿನ ಚಿತ್ರ ವಿಚಿತ್ರ ವಾದ ಆಕಾಶದ ಬಣ್ಣಗಳು ನಮಗೆ ಇಷ್ಟೊಂದು ಮುದ ನೀಡಬೇಕಾದರೆ ಎಂಥಹುದೇ ಕಲಾಕಾರನಿಗೂ ಸಹಜವಾಗಿ ಚಿತ್ರ ಬಿಡಿಸಲು ಉತ್ತೇಜನ ನೀಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದರ ಬಗ್ಗೆ ಎಷ್ಟು ಹೇಳಿದರೂ ತೀರದು. ಹೇಳಿದಷ್ಟು ಇನ್ನಷ್ಟು ಹೇಳಬೇಕೆನಿಸುವ ಪ್ರದೇಶವಿದು. ಇಲ್ಲಿನ ಸುಂದರ ಸಮುದ್ರ ತೀರ, ಅವುಗಳ ಹಿಂದಿನ ಕಥೆ, ಇವೆಲ್ಲವುಗಳೊಂದಿಗೆ ಮುಂದಿನ ವಾರ ಮತ್ತೆ ಸಿಗುತ್ತೇನೆ. ಅಲ್ಲಿಯವರೆಗೆ ಕಾಯುತ್ತಿರಲ್ಲ?

ನಿಮ್ಮವ ಗುರು


Sunday, April 11, 2010

Grenen- - ಡೆನ್ಮಾರ್ಕ್ ದೇಶದ ಉತ್ತರಭಾಗದ ತುತ್ತ ತುದಿ

ಐರೋಪ್ಯ ದೇಶಗಳಲ್ಲಿ ಇರುವಾಗ ರಜಾ ದಿನಗಳಲ್ಲಿ ಏನು ಮಾಡುವುದು ಎಂದು ವಿಚಾರಿಸುವ ಅಗತ್ಯವಿಲ್ಲ, ಆದರೆ ಎಲ್ಲಿಗೆ ಹೋಗುವುದು ಎಂಬುದೇ ಸಮಸ್ಯೆ ಆಗುತ್ತದೆ. ಕಾರಣ ಇಲ್ಲಿನ ಪ್ರತಿಯೊಂದು ಪ್ರದೇಶವೂ ರಮಣೀಯ, ಸುಮನೋಹರ. ಪ್ರಕ್ರತಿಯೇ ಮೈ ವೆತ್ತಂತೆ ಇರುವ ಇಲ್ಲಿನ ನಿಸರ್ಗ ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಅದರಲ್ಲೂ ನಿಸರ್ಗವನ್ನು ದೇವರಂತೆ ಪೂಜಿಸುವ Scandinavian ದೇಶಗಳ ಸೌಂದರ್ಯ ಹೇಳಲಸದಳ. ಇವರು ಪ್ರಕ್ರತಿಗೆ ನೀಡುವ ಬೆಲೆ ನಿಜಕ್ಕೂ ಸೋಜಿಗಗೊಳಿಸುತ್ತದೆ. ಅದಕ್ಕಾಗಿಯೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿನ ಸೌಂದರ್ಯ ಸವಿಯಲು ಬರುತ್ತಾರೆ. ಇಂಥಹ ಒಂದು ಅದ್ಭುತ ಪ್ರದೇಶ ಗ್ರೆನೇನ್. ಡೆನ್ಮಾರ್ಕ್ ಎಂಬ ಸಂಪಧ್ಬರಿತ ದೇಶದ ಉತ್ತರಭಾಗದ ತುತ್ತ ತುದಿಯೇ ಗ್ರೆನೇನ್.
ಚಿತ್ರವನ್ನು ನೋಡಿ, ಎರಡೂ ಸಮುದ್ರಗಳು ಸಂಧಿಸುವ ಜಾಗವಿದು. ಸುಮಾರು 5 km ಗಳಿಗಿಂತ ಉದ್ದದ ವಿಶಾಲ್ ಬೀಚ್ ಎಂಥವರನ್ನೂ ಮಂತ್ರ ಮುಗ್ಧ   ಗೊಳಿಸುತ್ತದೆ. ಇಂಥಹ ಅದ್ಭುತ ಪ್ರದೇಶಕ್ಕೆ ನಾವು 5 ಜನ ಸ್ನೇಹಿತರು  ಸೇರಿ ಪ್ರವಾಸ ಹೊರಟೆವು. ಪ್ರವಾಸದ ಒಂದೊಂದು ಕ್ಷಣವೂ ರೋಮಾಂಚನೀಯ ವಾಗಿತ್ತು.  Gothenburg ನಿಂದ  ಬೆಳಿಗ್ಗೆ 9 ಘಂಟೆಗೆ ಬ್ರಹದಾಕಾರದ ಹಡಗಿನಲ್ಲಿ ಹೊರಟ ನಾವು ಅದೇ ದಿನ ರಾತ್ರಿ  12 ಘಂಟೆಗೆ ಪುನಃ ಬಂದು Gothenburg ಸೇರಿದೆವು. ಒಂದು ದಿನದ ಪ್ರವಾಸ ಕೇವಲ ಮನಸ್ಸಿಗೆ ನೆಮ್ಮದಿ ಅಷ್ಟೇ ಅಲ್ಲ ನಿಸರ್ಗದ ಬಗೆಗೆ ವಿಶೇಷ ಗೌರವವನ್ನೂ ನೀಡಿತು. ಮಾನವ ಎಷ್ಟೇ ದೊಡ್ಡವನಾದರೂ ನಿಸರ್ಗದ ಮುಂದೆ ತುಂಬಾ ಕುಬ್ಜ ವ್ಯಕ್ತಿ ಅನ್ನುವುದು ಸುಳ್ಳಲ್ಲ. ವಿಶಾಲ ಸಮುದ್ರದ ಮುಂದೆ ನಿಂತಾಗ ನಮ್ಮಲ್ಲಿನ ಅಹಂಕಾರ, ಸಿಟ್ಟು, ಕೋಪ ಎಲ್ಲವೂ ಮಾಯವಾಗುತ್ತದೆ. ನಮ್ಮ ಬಗ್ಗೆ ನಮಗೆ ಇರುವ ಪೊಳ್ಳು ಪ್ರತಿಷ್ಠೆ ಎಲ್ಲ ಮಾಯವಾಗುತ್ತದೆ. ಎರಡು ಸಮುದ್ರಗಳು ಸಂಧಿಸುವ ಆ ಜಾಗ ಐತಿಹಾಸಿಕವಾಗಿಯೂ ತುಂಬಾ ಮಹತ್ವಪೂರ್ಣ ವಂತೆ.

ಒಮ್ಮೆಲೇ ಆ ಜಾಗದ ಬಗೆಗೆ ತಿಳಿಸುವ ಬದಲಿಗೆ ನಿಮ್ಮನ್ನೂ ನನ್ನೊಂದಿಗೆ ಹಡಗಿನಲ್ಲಿ ಕರೆದೊಯ್ಯುತ್ತೇನೆ. ನನ್ನ ಅನುಭವಗಳೊಂದಿಗೆ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ರಮಣೀಯ ಸ್ಥಳಗಳ ಪರಿಚಯದ ಪ್ರಯತ್ನ ವಿದು.
ಬೆಳಿಗ್ಗೆ ೯ ಘಂಟೆಗೆ ನಾವು 5 ಜನ (ನಾನು, ನನ್ನ ಹೆಂಡತಿ, ಮತ್ತು ಮೂವರು ನನ್ನ ಮಿತ್ರರು) ಸೇರಿ Gothenburg ನಿಂದ ಪ್ರಯಾಣ ಹೊರಟೆವು. ಇಲ್ಲಿಂದ ರೈಲಿನಲ್ಲಿ ಹೋದರೆ ಬಹುಷ: 10 ತಾಸುಗಳಿಗೂ ಹೆಚ್ಚಿನ ಸಮಯ ಬೇಕಾಗಬಹುದು. ಆದರೆ ಪ್ರತಿದಿನ ಇಲ್ಲಿಂದ ಹಡಗು ಡೆನ್ಮಾರ್ಕಿನ ಫ್ರೆಡ್ರಿಕ್ ಶಾವ್ನ್  ಎಂಬ ಜಾಗಕ್ಕೆ ಹೋಗುತ್ತದೆ. ಇದು ತೆಗೆದುಕೊಳ್ಳುವ ಸಮಯ ಕೇವಲ 3 ಘಂಟೆ. ಆದರೆ ಹಡಗಿನ ಪ್ರಯಾಣ ಮಾತ್ರ ಜೀವನದಲ್ಲೇ ಮರೆಯಲಾರದ್ದು. ಆ ಬ್ರಹದಾಕಾರದ ಹಡಗು, ಅದರಲ್ಲಿನ ವ್ಯವಸ್ಥೆ ಎಲ್ಲವೂ ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆ.




ಇಲ್ಲಿನ ಹಡಗಿನ ಒಳಗೆ ಒಂದು ಅದ್ಭತ ಮಾಯಾ ಲೋಕವಿದೆ, ಓದಲು ಪುಸ್ತಕವಿದೆ, ಆಡಲು ನೂರಾರು ಆಟಗಳಿವೆ, ಹಣ ಮಾಡಲು, ಕಳೆಯಲು ಜೂಜು ಕೇಂದ್ರಗಳಿವೆ, ತಿನ್ನಲು ರುಚಿ ರುಚಿಯಾದ ತಿಂಡಿ ತಿನಿಸುಗಳಿವೆ, ಕುಡಿಯಲು ನೂರಾರು ಬಗೆಯೇ ಪಾನೀಯಗಳಿವೆ, ವಿರಮಿಸಲು ರೂಂ ಗಳಿವೆ.



 ಕಣ್ಣಿಗೆ ಸೌಂದರ್ಯ ನೀಡಲು ವಿಶಾಲ ಸಮುದ್ರ ಸುತ್ತಲೂ ಇದ್ದೇ ಇರುತ್ತದೆ. 



ಒಟ್ಟಿನಲ್ಲಿ ಇದೊಂದು ವಿಭಿನ್ನ ಅನುಭವದ ಪ್ರಯಾಣ.

ಹಡಗಿನ ಬಗೆಗೆ, ಅಲ್ಲಿನ ಅನುಭವಗಳ ಬಗೆಗೆ, ಗ್ರೆನೇನ್ ಎಂಬ ಮಾಯಾ ಜಾಗದ ಬಗೆಗೆ ಇನ್ನೂ ಹೆಚ್ಚಿನ ವಿವರಣೆಯೊಂದಿಗೆ  ಮುಂದಿನ ವಾರ ಬರುತ್ತೇನೆ. ಅಲ್ಲಿಯವರೆಗೆ ನೀವು ಕಾಯಲೇಬೇಕು, ನಾನು ಕಾಯಿಸಲೇಬೇಕು :)

Monday, April 5, 2010

Fashion Show -ಲಲನೆಯ ಚಲನೆ


ಇತ್ತೀಚಿಗೆ ಸ್ವೀಡನ್ನಿನ ಗೊತ್ಹೆಂಬುರ್ಗ್ ನಲ್ಲಿ ಒಂದು Fashion ಶೋ ನಡೆಯಿತು. ಇಲ್ಲಿನ ಸುಪ್ರಸಿದ್ದ ಶಾಪಿಂಗ್ ಮಳಿಗೆಯಾದ Norsdstan ನಲ್ಲಿ ನಡೆದ Fashion ಶೋ ಎಲ್ಲರ ಮನ ಸೆಳೆಯಿತು. ಸುಂದರ ನೀರೆಯರ ಅಂದದ  ಉಡುಗೆಗಳು, ಚಂದದ ನಗುವಿನ ಅಂದದ ನಡಿಗೆ ಎಲ್ಲರ ಮನಸ್ಸಿನಲ್ಲಿ ಸಂತಸದ ವಾತಾವರಣ ನಿರ್ಮಿಸಿತು. ಹೇಳಿ ಕೇಳಿ ಸ್ವೀಡನ್ನಿನ ಹುಡುಗಿಯರು ಜಗತ್ತಿನಲ್ಲೇ ಸೌಂದರ್ಯದಲ್ಲಿ ಹೆಸರುವಾಸಿಯಂತೆ. ಕಳೆದ ವರ್ಷ ಜಗತ್ತಿನಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಸ್ವೀಡನ್ನಿಗೆ ಸುಂದರ ಲಲನೆಯರು  ಇರುವ ಸ್ಥಳ ಎಂಬ ಬಿರುದು  ದೊರಕಿದೆ.

ಲಲನೆ, ನಿನ್ನ ಸೌಂದರ್ಯಕೆ ಸಾಟಿಯೆಲ್ಲಿ...


ಬೆಕ್ಕಿನ ನಡಿಗೆಯೇ....



ವಸ್ತ್ರ ವಿನ್ಯಾಸಕೆ ಬೆರಗಾಗದವರ್ಯಾರು...


ಬಣ್ಣ ಬಣ್ಣದ ಲೋಕ, ಬಣ್ಣಿಸಲು ಸಾಲದು ಈ ಸಾಲು.


.ಚೆಲುವೆಯೇ ನಿನ್ನ ನೋಡಲು.....


ನಾವೇನೂ ಕಡಿಮೆಯಿಲ್ಲ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು 


ಭವಿಷ್ಯದ ಸುಂದರಾಂಗನೆ....

ಅಮ್ಮ ನಿನ್ನ ತೋಳಿನಲ್ಲಿ ಕಂದಾ  ನಾನು .....

ನಮ್ಮೂರ ಮಂದಾರ ಹೂವೆ...


ಗತ್ತಿನ ನೋಟವೇ... ಸುತ್ತಣ ನೋಟವೇ?


ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು....


ಸ್ವಲ್ಪ ಯೋಗ, ಸ್ವಲ್ಪ ಆಟ, ದೇಹಕ್ಕೆ ಸ್ವಲ್ಪ ಕಾಟ 


ನೋಡುವ ಕಣ್ಣುಗಳಿವು , ಹರಸುವ ಕಣ್ಣು ಗಳು ಹೌದು

ಮುಂದಿನ ವಾರ ಡೆನ್ಮಾರ್ಕಿನ ತುತ್ತತುದಿಯ ಭಾಗದಲ್ಲಿರುವ ಗ್ರೆನೇನ್ ಎಂಬ ಭೂಲೋಕದ ಸ್ವರ್ಗದ ಪ್ರವಾಸ ಕಥನ ದೊಂದಿಗೆ ಬರುತ್ತೇನೆ. ಅಲ್ಲಿಯವರೆಗೆ ಸೌಂದರ್ಯವನ್ನು ನೋಡಿ ಆನಂದಿಸಿ.