Thursday, July 29, 2010

ನಾರ್ವೆ ಎಂಬ ಸೌಂದರ್ಯದ ರಾಶಿಯ ಸುತ್ತ ಒಂದು ಸುತ್ತು ....

ಕೆಲವು ದಿನಗಳಿಂದ ಬ್ಲಾಗ್ ನಲ್ಲಿ ಏನು ಬರೆಯಬೇಕೆಂದು ಯೋಚಿಸುತ್ತಿದ್ದೆ. ಒಂದೆರಡು ಕವನ ಹಾಕಲೇ? ಇಲ್ಲ ಕಳೆದ ವಾರ ನಾರ್ವೆ ಗೆ ಹೋಗಿ ಬಂದ ಬಗ್ಗೆ ಬರೆಯಲೇ ಎಂದು. ನಾರ್ವೆ ಗೆ ಹೋಗಿ ಬಂದ ಮೇಲೆ ಬಹಳಷ್ಟು ವಿಷಯಗಳು ತಲೆಯಲ್ಲಿ ಮನೆ ಮಾಡಿ ಹುಳದಂತೆ ಕೆರೆಯುತ್ತಿವೆ ಇಲ್ಲ ಕೊರೆಯುತ್ತಿವೆ. ಆ ದೇಶದ ಬಗೆಗೆ ಬರೆಯಲೇಬೇಕು ಎಂದೆನಿಸಿ ಕುಳಿತಿದ್ದೇನೆ. ಎಂದಿನಂತೆ ನಿಮ್ಮ ಪ್ರೋತ್ಸಾಹ ಇರುತ್ತದೆ ಎಂದು ನಂಬಿದ್ದೇನೆ.

ನಾನು ಈ ಮೊದಲು ಡೆನ್ಮಾರ್ಕಿನ ಬಗೆಗೆ, ಅಲ್ಲಿನ ಸಮುದ್ರಗಳ ಬಗೆಗೆ (http://gurumurthyhegde.blogspot.com/2010/04/blog-post.html), ಕೋಪೆನ್ಹೇಗನ್  ಎಂಬ ನಗರದ ಬಗೆಗೆ (http://gurumurthyhegde.blogspot.com/2009/01/copenhagen.html) , ಸ್ವೀಡನ್ನಿನ ಕೆಲವು ರಮ್ಯ ತಾಣಗಳ ಬಗೆಗೆ (http://gurumurthyhegde.blogspot.com/2009/03/blog-post_27.html) ಬರೆದಿದ್ದೇನೆ. ಆದರೆ ಅವೆಲ್ಲವೂ ಒಂದು ನಗರದ ಭವ್ಯ ಇತಿಹಾಸ ಬಿಂಬಿಸುತ್ತಿದ್ದವು. ನಾರ್ವೆ ಗೆ ಹೋಗಿ ಬಂದ ಮೇಲೆ ಸೌಂದರ್ಯ ಎನ್ನುವುದಕ್ಕೆ ವ್ಯಾಖ್ಯಾನವೇ ಬೇರೆ ಎಂಬಂತಾಗಿದೆ ನನ್ನ ಸ್ಥಿತಿ. ಅಲ್ಲಿನ ಹಳ್ಳಿಗಳಲ್ಲಿ ಓಡಾಡಿ, ಅಲ್ಲಿನ ಪರ್ವತಗಳ ಅಂಚಿನಲ್ಲಿ ನಲಿದಾಡಿ, ಅಲ್ಲಿನ ನೀರಿನಲ್ಲಿ ತೇಲಾಡಿ, ಮಿಲಿಯನ್ ಗಟ್ಟಲೆ ಹಳೆಯದಾದ ಪರ್ವತಗಳ ನಡುವೆ ಅಡ್ಡಾಡಿ ಬಂದ ಮೇಲೆ ಮನಸು ಯಾವುದೋ ಒಂದು ಲೋಕಕ್ಕೆ ಸದಾ ಕರೆದೊಯ್ಯುತ್ತಿದೆ. ಇದನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಂಡರೆ ಮಾತ್ರ ಸಮಾಧಾನ.

ನಾರ್ವೆ ಎಂಬ ದೇಶ ಶ್ರೀಮಂತರ ತವರೂರು. ಒಂದು ಕಾಲದಲ್ಲಿ ಸ್ವೀಡನ್ನಿನ ಅಧೀನದಲ್ಲಿದ್ದ ನಾರ್ವೆ ಈಗ ಸ್ವತಂತ್ರ ದೇಶ. ಆಗ ಬಡ ದೇಶವಾಗಿದ್ದ ನಾರ್ವೆ ಯನ್ನು ಸ್ವತಂತ್ರಗೊಳಿಸಿದ ಸ್ವೀಡನ್ ಈಗ ಬಹುಷ ಪರಿತಪಿಸಿದರೆ ಆಶ್ಚರ್ಯವಿಲ್ಲ . ಕಾರಣ ಸ್ವತಂತ್ರಗೊಂಡ ನಾರ್ವೆ ಗೆ ವರದಂತೆ ಸಿಕ್ಕಿದ್ದು ''ಅಲ್ಲಿನ ಹೇರಳ ಅನಿಲ'' ಸಂಪತ್ತು. ಅಗೆದಲ್ಲೆಲ್ಲ Oil ಬರುವ ಜಾಗವದು. ಕೇಳಬೇಕೆ ಸಿರಿವಂತಿಕೆಗೆ. ಒಂದು ಅಂದಾಜಿನ ಪ್ರಕಾರ ''ಹತ್ತು ಜನರಲ್ಲಿ ಒಬ್ಬ ನಾರ್ವೆಯ ನಾಗರಿಕ ಮಿಲಿಯನ್ ಗಟ್ಟಲೆ ಹಣವುಳ್ಳವನಂತೆ''. ಇಂಥಹ ದೇಶಕ್ಕೆ ಕಳಶವಿಟ್ಟಂತೆ ಸಿಕ್ಕಿದ್ದು ನಿಸರ್ಗ ಸಂಪತ್ತು. ಕೆಲವೊಮ್ಮೆ ''ऊपर वाला जब  देता तो चप्पड पाड़ के देता है'' ಎನ್ನುವಂತೆ ಇಲ್ಲಿ ಎಲ್ಲವೂ ಹೇರಳವಾಗಿವೆ. ಬೇಕಾಗಿ ಉಳಿಯುವಷ್ಟು ಸೂರ್ಯ ಪ್ರಕಾಶ, ಬೇಡವೆನ್ನುವಷ್ಟು ಮಂಜುಗಡ್ಡೆ (ಇಲ್ಲ ಮಂಜಿನ ಗುಡ್ಡೆ) , ಬೇಕಾದಷ್ಟು ಕತ್ತಲು, ಅಸಹನೀಯ ಎನಿಸುವಷ್ಟು ಶ್ರೀಮಂತಿಕೆ, ಹೇರಳ ಅನಿಲ ಸಂಪತ್ತು, ಪರಿಶುದ್ಧ ಗಾಳಿ ಒಟ್ಟಿನಲ್ಲಿ GOD GIFT.

 ನಾವು ಸಂಪೂರ್ಣ ನಾರ್ವೆ ಗೆ ಹೋಗದಿದ್ದರೂ ನಾರ್ವೆ ಯ ಕೆಲವು ಸುಂದರ ಸ್ಥಳ ಗಳಿಗೆ ಭೆಟ್ಟಿ ಕೊಟ್ಟು ಬಂದಿದ್ದೇವೆ. ಅವುಗಳಲ್ಲಿ ನಗ್ನತೆಯೇ ಮೈ ವೆತ್ತ ಎಲ್ಲಿಯೂ ಕಾಮದ ವಾಂಛೆ ಇಲ್ಲದ ಪ್ರೇಮದ ಪುತ್ತಳಿಗಳೇ ತುಂಬಿರುವ OSLO ದ ಶಿಲಾ ಸಂಗ್ರಹಾಲಯ (Sculpture Museum) ಮೊದಲಿಗೆ ನಿಮ್ಮನ್ನು ಆಕರ್ಷಿಸುತ್ತದೆ. ಮುಂದೆ ಇದರ ಬಗ್ಗೆ ವಿವರವಾಗಿ ಬರೆಯುತ್ತೇನೆ. ಇದೊಂದು ಜ್ಹಲಕ್ ಅಷ್ಟೇ.



 ಇಲ್ಲಿಂದ ಆರಂಭವಾಗುತ್ತದೆ ನಮ್ಮ ''Norway in a Nutshell'' ಪ್ರವಾಸ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ http://www.norwaynutshell.com/ . ಇಲ್ಲಿ ಬೇರೆ ಬೇರೆ ತರಹದ ಪ್ಯಾಕೇಜ್ ಟ್ರಿಪ್ ಗಳಿವೆ. ನಾವು ಒಂದನ್ನು ಆಯ್ಕೆ ಮಾಡಿಕೊಂಡೆವು. ನಾರ್ವೆ ಶ್ರೀಮಂತ ದೇಶವಾದರಿಂದ ಇಲ್ಲಿ ಎಲ್ಲವೂ ಯದ್ವ ತದ್ವ ತುಟ್ಟಿ. ಹಣ ನೀರಿನಂತೆ ಹರಿಯುತ್ತದೆ ಇಲ್ಲಿ, ಇಲ್ಲಿನ ನದಿಗಳಂತೆ. ನಮ್ಮ ಟ್ರಿಪ್ ಗೆ ನಾವು ಒಬ್ಬರಿಗೆ 11000 ರೂಪಾಯಿಗಳಷ್ಟು ಕೊಟ್ಟು ಟಿಕೆಟ್ ಮಾಡಿಸಿದೆವು. ಟಿಕೆಟ್ ಕೇವಲ ಪ್ರಯಾಣ ಮಾಡಲು ಮಾತ್ರ. ಪ್ಯಾಕೇಜ್ ಟ್ರಿಪ್ ನಲ್ಲಿ ಯಾವ ತಿಂಡಿಯೂ ಇಲ್ಲ, ವಸತಿ ಇಲ್ಲ. ಅದನ್ನೆಲ್ಲ ನಾವೇ ಮಾಡಿಕೊಳ್ಳಬೇಕು. 








ಇದೊಂದು ರೋಚಕ ರಮಣೀಯ ಅನುಭವ. ಇದರ ಬಗ್ಗೆ ಮುಂದಿನ ವಾರಗಳಲ್ಲಿ ವಿವರವಾಗಿ ಬರೆಯುತ್ತೇನೆ. ಇಲ್ಲಿನ ಪ್ರಕ್ರತಿಗೆ ಶರಣಾಗಿದ್ದೇನೆ. ಆ ರಮ್ಯ ಮನೋಹರ ಮೈದುಂಬಿದ ಸೌಂದರ್ಯದ ನಿಸರ್ಗ ರಮಣೀಯ ಜಲಸಿರಿಯ ರಮಣಿ ಕಣ್ಣೆದುರಿಗೆ ಕುಣಿಯುತ್ತಿದ್ದಾಳೆ.
ಮುಂದಿನ ವಾರ ಅವಳನ್ನು ನಿಮ್ಮೆದುರಿಗೆ ಕುಣಿಸುವ ಪ್ರಯತ್ನ ಮಾಡುತ್ತೇನೆ.
ಅಲ್ಲಿಯವರೆಗೆ ಕಾಯುತ್ತಿರಲ್ಲ.....

ನಿಮ್ಮವ 

ಗುರು  

Thursday, July 22, 2010

ಜನುಮದಿನದ ಹಾರೈಕೆ....

ನನ್ನೊಂದಿಗೆ ಹೆಜ್ಜೆ ಹಾಕಿದ, ಬಾಳ ನಾಟ್ಯ ರಂಗದಲ್ಲಿ ನನ್ನೊಂದಿಗೆ ನರ್ತಿಸಿದ, ನೋವಿನಲ್ಲಿ ತಾಯಿಯಾಗಿ, ನಲಿವಿನಲ್ಲಿ ಗೆಳತಿಯಾಗಿ, ಸಾಧನೆಯಲ್ಲಿ ಬೆನ್ನೆಲುಬಾಗಿ ನಿಂತ ನನ್ನ ಮನದಾಳದ ಒಡತಿ,  ಬಾಳ ಸಂಗಾತಿ ಗೀತಾ ಳ 27 ನೇ ಜನುಮದಿನ ಇಂದು (23 ಜುಲೈ). ಅವಳಿಗೆ ಒಂದು ಪುಟ್ಟ ಶುಭ ಹಾರೈಕೆ ಕವನದ ಮೂಲಕ. ನನ್ನನ್ನು ಬ್ಲಾಗ್ ಬರೆಯಲು ಪ್ರೇರೇಪಿಸಿ, ಹುರುದುಂಬಿಸಿದವಳು ಅವಳು. ಇಂದು ಬ್ಲಾಗಿನ ಮೂಲಕವೇ ಅವಳಿಗೊಂದು ಶುಭ ಹಾರೈಕೆ. ನೂರಾರು ವರುಷ ಅವಳು ಸಂತಸದಿ ಬಾಳಲಿ ಎಂಬುದೇ ಜನುಮದಿನದ ಹಾರೈಕೆ.



ಚೆಲುವೆ ನಿನ್ನ ಮೊಗದ ನೋಟ, ಹೂವು ಒಂದು ಅರಳಿದಂತೆ
ಒಲವ ಭಾವ ತುಂಬಿ ಮನಸು ಪುಳಕಗೊಂಡಿದೆ
ನಿನ್ನ ಪ್ರೇಮದಾಳದಲ್ಲಿ ಅರಳುತಿರುವ ಮೀನು ನಾನು
ಬಿರಿದ ಹೂವಿನಲ್ಲೆ ನಿನ್ನ ಪ್ರೀತಿ ಕಾಣುವೆ

ವರುಷ ಬಂತು ಇಪ್ಪತೆಂಟು, ಅಳಿಯಲಾರದಂತ ನಂಟು
ಹರುಷ ಎಂದೂ ಮನದಿ ಇರಲಿ, ಇರುವೆ ಜೊತೆಗೆ ನಾ
ಅಂದು ಇಂದು ಎಂದು ನೀನು, ಅಳಿಸಲಾರದಂತ ಸೊಗಸು
ಮುಗುದೆ ನಿನ್ನ ಮೊಗವ ನೋಡಿ, ನನ್ನೇ ಮರೆವೆ ನಾ

ಜನುಮ ದಿನದ ನೆನಪಿಗಾಗಿ, ಬರೆದೆ ಒಂದು ಪ್ರೇಮ ಕವನ
ಎದೆಯ ಆಳದಿಂದ ಬಂದ, ಭಾವ ಮಂಥನ
ಶುಭವ ನಿನಗೆ ಕೋರಿ ಒಲವೆ, ಅಭಯ ಹಸ್ತ ಎಂದೂ ಇಡುವೆ
ಎನ್ನ ಮನದ ತುಂಬ ನಿನ್ನ ತುಂಬಿ ಕೊಳ್ಳುವೆ

ಬಾಳಿನಲ್ಲಿ ನೋವು ನಲಿವು, ಇದ್ದರೇನೆ ಬದುಕು ಚೆಂದ
ಗೆಳತಿ ನಿನ್ನ ಹರುಷಕೆಂದು, ಪಣವ ತೊಟ್ಟಿಹೆ
ನೂರು ಕಾಲ ಬಾಳು ನೀನು,  ಇರುವೆ ಜೊತೆಗೆ ಎಂದೂ ನಾನು
ಎನ್ನ ಹರಕೆ ದೇವರಲ್ಲಿ, ಸದಾ ಇಟ್ಟಿಹೆ

Tuesday, July 13, 2010

ಜೈಲಿಗೆ ಹೋಗಲು ಎಂಟೇ ದಿನ ...




ಎಲ್ಲರಂತಿರಲಿಲ್ಲ ಅವಳು, ಹಾಗೆಂದು ಇದು ಅವಳು ಬಯಸಿದ್ದು ಅಲ್ಲ. ಬದುಕಿನ ವೈಚಿತ್ರದ ನರ್ತನಕ್ಕೆ ನ್ರತ್ಯಗಾತಿಯಾದ ನತದೃಷ್ಟೆ ಅವಳು. ಮನುಷ್ಯನ ಭಾವನೆಗಳಿಗೆ ರೆಕ್ಕೆ ಪುಕ್ಕ ಬಲಿತು ಆತ  ಹಾರಾಡುವ ಮಟ್ಟಕ್ಕೆ ಬೆಳೆದರೂ ಮೃಗೀಯ ಮನೋಭಾವನೆ ಬಿಟ್ಟಿಲ್ಲ ಎನ್ನುವುದಕ್ಕೆ ಅವಳ ಜೀವನವೇ ಸಾಕ್ಷಿ.

      ಸುಮಾರು 30 ವರ್ಷಗಳ ಹಿಂದಿನ ಮಾತು. ಸುರ ಸುಂದರ, ಮನ್ಮಥನ ರೂಪವೇ ಆಗಿದ್ದ ಅವನಿಗೆ ಸಾವಿರಾರು ಹೆಣ್ಣು ಮಕ್ಕಳು ಹಿಂದೆ ಬೀಳುತ್ತಿದ್ದರು. ಅವನ ಕುಡಿನೋಟಕ್ಕೆ, ತುಟಿಯ ಮಾಟಕ್ಕೆ, ಮಾದಕ ನಗುವಿಗೆ ಸೋಲದವರಿರಲಿಲ್ಲ. ಇಂಥಹ ಸುಂದರ ಸುಶೀಲ ಹುಡುಗನನ್ನು ಅವಳು ಮೊದಲ ನೋಟದಲ್ಲಿ ಕಂಡಾಗಲೇ ಮಾರುಹೋಗಿದ್ದಳು, ಅಷ್ಟೇ ಅಲ್ಲ ಬಲು ಬೇಗ ತನ್ನನ್ನೇ ಮಾರಿಕೊಂಡಿದ್ದಳು ಕೂಡಾ. ಪ್ರೀತಿಯೇ ಹಾಗೇ, ಅದಕ್ಕೆ ಯಾವ ಗಡಿಯಿಲ್ಲ, ಜಾತಿಯ ಹಂಗಿಲ್ಲ, ಮಾತಿನ ಗೋಜಿಲ್ಲ, ಸಂಭಂಧಗಳ ಕಡಿವಾಣವಿಲ್ಲ. ಒಂದು ನಿಷ್ಕಲ್ಮಶ ಪ್ರೀತಿ ಬೆಳ್ಳಂ ಬೆಳಿಗ್ಗೆ ನಿಮ್ಮ ಎದೆಯಲ್ಲಿ ಹುಟ್ಟಿ ಮಧ್ಯಾನ್ಹದ ವೇಳೆಗೆ ಇನ್ನೊಂದು ಎದೆಗೆ ತನ್ನ ಚಲನೆ ಆರಂಬಿಸಿಬಿಡುತ್ತದೆ. ಅವಳಿಗಾದದ್ದೂ ಅದೇ. ಕುಡಿನೋಟದಲ್ಲೇ ಕೊಂದ ಆ ಸುಂದರಾಂಗನಿಗೆ ಒಲಿದ ಅವಳು ಅವನೊಂದಿಗೆ ಪ್ರೇಮ ಸಲ್ಲಾಪದಲ್ಲಿ ತೊಡಗಿದಳು.

      ಕಾಲ ಯಾರಿಗೂ ಕಾಯದು. ಇಂದು ಬರುವ ಸೂರ್ಯ, ರಾತ್ರಿ ಬರುವ ಚಂದ್ರ, ಬದುಕಿಗೆ ಹಗಲು ರಾತ್ರಿ, ಎಲ್ಲವೂ ತನ್ನಷ್ಟಕ್ಕೆ ಯಾರಿಗೂ ಕಾಯದೆ ತಮ್ಮ ಪಾಡಿಗೆ ತಾವು ಕರ್ತವ್ಯ ಬದ್ದ ಕೆಲಸಗಾರರಂತೆ ಕಾರ್ಯ ನಿರ್ವಹಿಸುತ್ತಿರುತ್ತವೆ. ಅವಳ, ಅವನ ಪ್ರೇಮದ ದ್ಯೋತಕವಾಗಿ ಒಂದು ಮಗು ಅವಳ ಗರ್ಭದಲ್ಲಿ ಬೆಳೆಯುತ್ತಿರುವ ಸಂಗತಿ ಗೊತ್ತಾದಾಗ ಅವರು ಮದುವೆ ಆಗಲು ನಿರ್ಧರಿಸಿದರು. ಅವಳೂ ಸರ್ವಾಂಗ ಸುಂದರಿ. ಬಾಣ ಭಟ್ಟನ ಕಾದಂಬರಿಯಲ್ಲಿ ಬರುವ ಚೆಲುವೆಯನ್ನೂ ಮೀರಿಸುವ ಸೌಂದರ್ಯ ಅವಳದಾಗಿತ್ತು. ಮಾದಕ ಮೈಮಾಟ, ಚೆಲುವಿನ ಮೈಕಟ್ಟು, ಚುಂಬಕ ಶಕ್ತಿಯ ಮಾತು ಅವನನ್ನು ಅವಳ ಬಳಿ ಸೆಳೆದಿತ್ತು. ಇಂಥ ಸರ್ವಾಂಗ ಸುಂದರ, ಸುಂದರಿ 30 ವರ್ಷದ ಹಿಂದೆ ಮದುವೆಯಾದರು.

      ಕಥೆ ಆರಂಬವಾಗುವುದೇ ಇಲ್ಲಿ. ಆರಂಬಿಕ ದಿನಗಳಲ್ಲಿ ಎಲ್ಲವೂ ಸುಗಮವಾಗಿತ್ತು. ಕೈ ಕೈ ಹಿಡಿದುಕೊಂಡು ಅವರು ಹೋಗುವಾಗ ರಸ್ತೆಯ ಇಕ್ಕೆಲಗಳಲ್ಲಿ ಹೂಗಳೇ ನಾಚಿ ಮುದುಡಿ ಕೊಂಡವೇನೋ  ಎಂಬಷ್ಟರ ಮಟ್ಟಿಗೆ ಅವರಿಬ್ಬರ ಬದುಕು ಸಾಗಿತ್ತು. ಅವಳೆಂದರೆ ಜೀವ, ಅವಳಿಲ್ಲದೆ ಬದುಕಿಲ್ಲ ಎನ್ನುತ್ತಿದ್ದ ಕಾಲವದು. ನೋಡದ ಚಲನಚಿತ್ರಗಳಿಲ್ಲ. ಹೋಗದ ಸುಂದರ ತಾಣಗಳಿಲ್ಲ. ಒಟ್ಟಿನಲ್ಲಿ ಅದೊಂದು ಹ್ಯಾಪಿ ಫ್ಯಾಮಿಲಿ.

      ದಿನ ಸರಿಯುತ್ತಿದ್ದಂತೆ ಅವನಲ್ಲಿ ವಿಚಿತ್ರ ಭಾವನೆಗಳು ಮೂಡತೊಡಗಿದವು. ಪದೇ ಪದೇ ಕೋಪ, ಸಿಟ್ಟು, ಅಸಹನೆ ಜಾಸ್ತಿ ಆಗತೊಡಗಿತು. ಯಾವ ಹೆಂಡತಿಯೆಂದರೆ ತನ್ನೆಲ್ಲ ಪ್ರೀತಿಯನ್ನು ಧಾರೆ ಎರೆಯುತ್ತಿದ್ದನೋ ಅದೇ ಹೆಂಡತಿ ಎಂದರೆ ಬುಸುಗುಟ್ಟುವ ಹಾವಂತೆ ತೋರತೊಡಗಿತು ಅವನಿಗೆ. ಅವಳೋ ಏನೂ ಅರ್ಥವಾಗದೆ ಮೌನಿಯಾಗ ತೊಡಗಿದಳು. ಮೌನ ದ ಕಟ್ಟೆ  ಒಡೆದಾಗ ಜಗಳ. ಇಲ್ಲದಿರೆ ಕಣ್ಣೀರು ಅವಳ ಅಸ್ತ್ರ. ಜಗತ್ತಿನ ಎಲ್ಲ ಹೆಣ್ಣುಮಕ್ಕಳಿಗೂ ಕಣ್ಣೀರು  ಎಂದರೆ ಬಹುದೊಡ್ಡ ಆಸ್ತಿ. ಅಪ್ಪನ ಮನೆ ಬಿಟ್ಟು ಗಂಡನ ಮನೆಗೆ ಬರುವ ಪ್ರತಿ ಹೆಣ್ಣು ತನ್ನೊಂದಿಗೆ ಕಣ್ಣೀರು ತರಲು ಮರೆಯುವುದಿಲ್ಲ. ಯಾಕೆಂದರೆ ಆ ಹೆಣ್ಣಿನ ಭಾವನೆಗಳಿಗೆ ಬೆಲೆ ಸಿಗದಿದ್ದಾಗ ಅವಳಿಗೆ ಉಳಿಯುವುದು ಕಣ್ಣೀರು  ಮಾತ್ರ. ಅದೇ ಕಣ್ಣೀರು ಜಗತ್ತಿನ ಅಸಂಖ್ಯಾತ ಮಹಿಳೆಗೆ ಬದುಕಲು ಪ್ರೇರೇಪಿಸಿದೆ, ಬಾಳಲು ಕಾರಣ ನೀಡಿದೆ, ಸಾಯಲು ಪ್ರತಿರೋಧಿಸಿದೆ. 

      ಅವಳೂ ಸಹ ನೋವಾದಾಗಲೆಲ್ಲ ಕಣ್ಣೀರು  ಹಾಕಿ ಸಮಾಧಾನ ಪಟ್ಟಿದ್ದಳು. ಆದರೆ ದಿನ ಗಳೆದಂತೆ ಆತ ಮನುಷ್ಯತ್ವಕ್ಕೆ ಅಪವಾದವೆಂಬಂತೆ ವರ್ತಿಸತೊಡಗಿದ. ದಿನದ ಕುಡಿತದ ಮುಂದೆ ಹ್ರದಯದ ಮಿಡಿತ ಅರ್ಥವಾಗದು ಯಾರಿಗೂ. ಹಾಗೆಂದೂ ಅವರು ಆಗರ್ಭ ಶ್ರೀಮಂತರು ಕೂಡಾ. ಮನೆಯಲ್ಲಿ ತುಂಬಿ ತುಳುಕುತ್ತಿತ್ತು ಹಣ. ಅವನು, ಅವಳು ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸಕ್ಕಿದ್ದರು. ಆದರೂ ಅದೇನೋ ಅಸಮಾಧಾನ ಅವನಿಗೆ. ಅದು ಎಲ್ಲಿಯವರೆಗೆ  ಹೋಯಿತೆಂದರೆ ಅವಳ ಮೇಲೆ ಕೈ ಎತ್ತುವಷ್ಟರ ಮಟ್ಟಿಗೆ ಅದು ಬೆಳೆಯಿತು. ಕೆಲವೊಮ್ಮೆ ಅವಳಿಗೆ ಹೊಡೆದು ಹೊಡೆದು ಕೋಪ ತಣಿಯದಿದ್ದರೆ ಬಡಪಾಯಿ ನಾಯಿಗೆ ಹೊಡೆಯುತ್ತಿದ್ದ. ಒಬ್ಬ ಸುಸಂಸ್ಕ್ರತ ಮನುಷ್ಯ ಹೇಗೆ ಬದಲಾಗಬಲ್ಲ ಎನ್ನುವುದಕ್ಕೆ ಆತ ಜೀವಂತ ಉದಾಹರಣೆಯಾಗಿದ್ದ.  ಇದನ್ನೆಲ ಮೌನವಾಗಿ ಸಹಿಸಿಕೊಳ್ಳುತ್ತಾ ಸಹಿಸಿಕೊಳ್ಳುತ್ತಾ 30 ವರ್ಷಗಳೇ ಕಳೆದುಹೋಯಿತು. ಹೆಣ್ಣಿನ ಸಹನೆಯ ಮುಂದೆ ''ಸಹನೆ'' ಯೇ  ಶರಣಾಗಿ ಬಿಡುತ್ತದೆ. ಅವಳು ಅದೆಷ್ಟರ ಮಟ್ಟಿಗೆ ಸಹಿಸಿಕೊಳ್ಳುತ್ತಾಳೆಂದರೆ   ನೋವು ತನಗಿಟ್ಟುಕೊಂಡು, ನಲಿವನ್ನು ಹಂಚಿವಷ್ಟು. ಆ ನಲಿವಲ್ಲೇ ನೋವನ್ನು ಮರೆಯುವಷ್ಟು.

      ಹೀಗಿರಲೊಂದು ದಿನ, ಅವಳು ಅಡಿಗೆ ಮನೆಯಲ್ಲಿ ತರಕಾರಿ ಕೊಚ್ಚುತ್ತಿದ್ದಳು. ಎಂದಿನಂತೆ ಆತ ಬಂದು ಅವಳೊಂದಿಗೆ ಜಗಳಕ್ಕೆ ಇಳಿದ. ಅವಳು ಅದು ಇದೂ ಮಾತನಾಡಿದಳು. ಕೋಪದಲ್ಲಿ ಆತ ನಾಯಿಗೆ ರಪ ರಪನೆ ಹೊಡೆದ. ಅಷ್ಟೂ ಸಾಲದೆಂಬಂತೆ ಅವಳನ್ನು ಕೆಳಗೆ ಬೀಳಿಸಿ ಕಾಲಿನಲ್ಲಿ ಒದ್ದ. ನರಳಾಡುತ್ತಿರುವ ಅವಳ ಮೇಲೆ ವಿಕ್ರತ ನಗೆ ಬೀರಿ ಗಂಡಸುತನದ ಪೌರುಷವನ್ನು ತೋರಿದ. ಅವಳು ಪ್ರತಿರೋಧ ತೋರಿದರೂ ಅವನ ಬಲದ ಮುಂದೆ ಅವಳು ''ಅಬಲೆ''. ಪುನಃ ಅಳುತ್ತ ಎದ್ದು ತರಕಾರಿ ಕೊಚ್ಚ ತೊಡಗಿದಳು. ಅವನ ಕೋಪ ಮಿತಿ ಮೀರಿತು. ಪುನಃ ಅವಳ ಮೇಲೆ ಹೊಡೆಯಲೆಂದು ಹೋದಾಗ ಅವಳಿಗೆ ಗೊತ್ತಿಲ್ಲದೇ ತಪ್ಪಿ ಅವಳ ಕೈಯಲ್ಲಿರುವ ಚಾಕು ಅವನ ಕೈಗೆ ತಗುಲಿ ರಕ್ತ ಚಿಮ್ಮಿತು. ಕೂಡಲೇ ಆತ ಜಾಗ್ರತನಾದ. ಹೊಡೆಯಲಿಲ್ಲ, ಬಡಿಯಲಿಲ್ಲ. ನೇರವಾಗಿ ಪೋಲಿಸರಲ್ಲಿಗೆ ಹೋಗಿ ಅವಳ ಮೇಲೆ ಹಲ್ಲೆಯ ಆರೋಪ ಹೊರಿಸಿದ. ಉತ್ತಮ ವಕೀಲರು, ಸತ್ಯವನ್ನೇ ಸುಳ್ಳು ಮಾಡಲು ಸಾದ್ಯ, ಹಾಗೆಯೇ ಸುಳ್ಳನ್ನೇ ಸತ್ಯ ಮಾಡಲು ಸಾದ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗಿ ಹೋಯಿತು. ಅವಳು ಅವನ ಮೇಲೆ ಹಲ್ಲೆ ನಡಿಸಿದ್ದು ನಿಜ ಎಂದು ದೃಢ ಪಟ್ಟು ಅವಳಿಗೆ ೨ ವರ್ಷಗಳ ಕಾಲ ಜೈಲು ಶಿಕ್ಷೆ ನಿಗದಿಯಾಯಿತು. ಜೀವನ ಪರ್ಯಂತ ಅವನ ನೋವನ್ನು ಸಹಿಸಿದ್ದಕ್ಕೆ, ಅವನೇ ಸರ್ವಸ್ವ ಎಂದು ನಂಬಿದ್ದಕ್ಕೆ, ಎಲ್ಲವನ್ನು ಕಣ್ಣೀರು ಹಾಕಿ ನುಂಗಿದ್ದಕ್ಕೆ ಅವಳಿಗೆ ಸಿಕ್ಕ ಪ್ರತಿಫಲ ಜೈಲು ವಾಸ.

      ಸ್ನೇಹಿತರೆ, ಮೇಲಿನದು ಚಂದಮಾಮನ ಕಥೆಯಲ್ಲ, ಇಲ್ಲ ಬ್ಲಾಗ್ ಬರೆಯಲು ನಾನು ಮಾಡಿಕೊಂಡ ಕಲ್ಪನೆಯೂ ಅಲ್ಲ. ಇದು ಕಳೆದ ವಾರ ನನ್ನೆದುರಿಗೆ ಕುಳಿತ 55 ವರ್ಷದ ಹೆಣ್ಣಿನ ಕರುಣಾ ಭರಿತ ನೋವು. ಇದೀಗ ಅವಳು ಜೈಲಿಗೆ ಹೋಗಲು ೮ ದಿನ ಬಾಕಿಯಿದೆ.   ದಿನ ಎಣಿಸುತ್ತ, ಕಣ್ಣೀರು  ಹಾಕುತ್ತ ಕುಳಿತ ಆ ಹೆಣ್ಣಿನ ನೋವು  ಹೇಳಲು ಅಸಾದ್ಯ. ಅವಳೆದುರಿಗೆ ಕುಳಿತು, ಅವಳ ಬಾಯಿಂದ ಕಥೆ ಕೇಳಿದ ಮೇಲೆ ಅವಳ ಬಗ್ಗೆ ಬರೆಯಲೇ ಬೇಕೆನಿಸಿತು.

      ಅನಿವಾರ್ಯ ಕಾರಣಗಳಿಂದ ಅವಳ ಹೆಸರು ನೀಡಿಲ್ಲ. ಅವಳು ಸ್ವೀಡನ್ನಿನ ಪ್ರಜೆ. ಆತನೂ ಸ್ವೀಡನ್ನಿನ ಪ್ರಜೆ. ಆ ಹೆಂಗಸು ತನ್ನ ಸರ್ವ ಆಸ್ತಿಯನ್ನು ಬಿಟ್ಟು ಹೋಗುತ್ತಿದ್ದಾಳೆ. ಅವಳ ಮನೆ ತುಂಬಾ ಸುಂದರ ಚಿತ್ರ ಗಳು, ಅವಳ ಮಗನ ಕಣ್ಣಲ್ಲಿ ಕಣ್ಣಿರಿನ ಕೋಡಿ. ಬದುಕು ಎಷ್ಟು ವಿಚಿತ್ರ ಎನಿಸತೊಡಗಿದೆ.

ತಾಯಿ ಸಮಾನಳಾದ ಅವಳಿಗೆ ಹೀಗಾಗಬಾರದಿತ್ತು ಎಂಬ ನೋವು ಮನವನ್ನು ಕಾಡುತ್ತಿದೆ. ವಾರವೆಲ್ಲ ಅವಳ ಬಗ್ಗೆ ಚಿಂತಿಸಿ ಮನ ಸೋತಿದೆ.

ಅವಳ ಮನೆ ಬಿಟ್ಟು ಬರುವಾಗ ''ತಾನಿನ್ನು ಬರುತ್ತೇನೆ'' ಎಂದು ಹೇಳಿ ಕಣ್ಣಿರು ಇಟ್ಟಾಗ ಮನಸಿಗೆ ಅದೇನೋ ನೋವು ಆವರಿಸಿತು. 
ಯಾರಿಗೂ ಹೀಗಾಗದಿರಲಿ.  

Wednesday, July 7, 2010

ಅರಳಿದಂತೆ ಸುಮವು ........

ಬದುಕು ಕೇವಲ ಮೂರು ದಿನದ್ದು, ಆ ಮೂರು ದಿನದ ಬಾಳಿನಲ್ಲಿ ಸಂಕಷ್ಟಗಳು ಬರುತ್ತವೆ ಹೋಗುತ್ತವೆ. ಹಾಗೆಂದೂ ಸುತ್ತಲೂ ಕತ್ತಲಿದೆ, ಎಲ್ಲಿಯದು ಬೆಳಕು  ಎಂದು ಪ್ರತಿಕ್ಷಣವೂ ಕಣ್ಣೀರಿಡುತ್ತಾ ಕುಳಿತರೆ ನಗುವೇ ಮಾಯವಾಗಿ ಬಿಡುತ್ತದೆ. ನಗು ಎಂತಹ ವಿರಕ್ತನಲ್ಲೂ ಹೊಸ ಚಲನೆ ಎಬ್ಬಿಸುತ್ತದೆ. ಸದಾ ಬದುಕಿಗೆ ಮರುಗದೆ ಪ್ರತಿದಿನವೂ ಹೊಸ ಕ್ಷಣದಂತೆ ಭಾವಿಸಿ ಮುನ್ನುಗ್ಗಬೇಕು. ನಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬ ಬಗ್ಗೆ ಚಿಂತೆ ಬೇಡ. ಜನರಿರುವುದೇ ಅದಕ್ಕೆ. ಅವರು ಅವರಷ್ಟಕ್ಕೆ ಹೇಳುತ್ತಿರುತ್ತಾರೆ. ನಾವು ನಮ್ಮಷ್ಟಕ್ಕೆ ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡಬೇಕು. ಕನಸುಗಳನ್ನು ಹೊಸೆದರಷ್ಟೇ ಸಾಲದು. ಅದನ್ನು ನನಸಾಗಿಸುವಲ್ಲಿ ನಮ್ಮ ಪ್ರಯತ್ನ ಅಗತ್ಯ. ಬದುಕು ಹೂವಿನಂತೆ ಸದಾ ಅರಳುತ್ತಿರಬೇಕೆ ಹೊರತು ನರಳುತ್ತಿರಬಾರದು  ನಿನಗೆ ನೀನೆ ಗೆಳೆಯ, ನಿನಗೆ ನೀನೆ ಗೆಳತಿ. ಬದುಕು ಧನಾತ್ಮಕತೆಗೆ ಸಾಗಲಿ ಎಂಬುದು ಕವನದ ಆಶಯ 


ಮನಸಿನಲಿ ಸ್ವಚ್ಛಂಧ ಮಗುವಿನಂತಹ ನಗುವು
ಮರೆಯದ ಛಾಯೆ, ನಿನ್ನ ಗೆಳತನವು
ನೀನಿರದ ಅರೆಕ್ಷಣವು ಮರೆತಂತೆ ಸೂರ್ಯ
ಸುತ್ತಲೂ ಕತ್ತಲಿರೆ  ಬೆಳಕು  ಅನಿವಾರ್ಯ

ತಿಳಿನೀಲ ಆಗಸದಿ ಹುಣ್ಣಿಮೆಯ ಚಂದ್ರ
ಸುವಿಶಾಲ ಪ್ರಥ್ವಿಯಲಿ ಬೆಳಗಿಹುದು ಅಂದ
ನೀನೆಂಬ ನಾನು, ನಾನಾಗಿ ನೀನು
ಸ್ನೇಹದ  ಪರಿಧಿಯಿರೆ, ಬೇಕಿಲ್ಲ  ಏನೂ 
  
ಮರೆತುಬಿಡು ಎಲ್ಲವನು, ನೋವಿರಲಿ ನನಗೆ
ಹರಿಯಬಿಡು ಬದುಕನ್ನು, ನಲಿವಿರಲಿ ನಿನಗೆ
ಲೋಕದಲ್ಲಿ ನೂರೆಂಟು ಜನರಿಹರು ಗೆಳತಿ
ನಿನ್ನ ಮನೆಕೆ ನೀನೆ ಎಂದಿಗೂ ಒಡತಿ

ಚಲನೆಯಿದೆ ಚಲಿಸುತಿದೆ ಚಿತ್ತಾರ ಮನಸು
ಅಂತರಂಗದಿ ಕುಳಿತ ವಿಸ್ತಾರ ಕನಸು  
ಸಾಧನೆಯು ಬಾಡದಿರೆ, ಬದುಕಿಹುದು ಮೂರೇ ದಿನ
ನಿನ್ನೊಳಗೆ ಉಳಿಯದಿರು, ಎದ್ದು ಬಾ ಅನುದಿನ