Tuesday, February 8, 2011

''ಪೆಟ್ಟು'' ನಿನಗೆ ಬಿತ್ತಲ್ಲ ''ಪೆಟ್ಟು'' Part 3

''ಕುರುಡು ಕಾಂಚಾಣ ಕುಣಿಯುತಲಿತ್ತು''

ಹಣ ಸುಖ ಕೊಡುತ್ತದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸುಳ್ಳು ಕೂಡಾ.

 ದಿನದ ಊಟದ ಖರ್ಚು, ಉಡುವ ಬಟ್ಟೆಯ ವೆಚ್ಚ , ನಲಿದು ಆಡುವ ಮಕ್ಕಳ ಆಸೆ ಇವಿಷ್ಟನ್ನು ದೊರಕಿಸಿಕೊಡುವಷ್ಟು ಹಣ ನಮ್ಮಲ್ಲಿದ್ದರೆ ನಾವೇ ಸುಖಿಗಳು. ಕಾರಣ ಹಣ ಹೆಚ್ಚಾದಂತೆ ಇನ್ನೂ ಹೆಚ್ಚು ಮಾಡುವ ತವಕ. ಕಡಿಮೆ ಸಂಬಳ ಬರುವವನಿಗೆ ಹೆಚ್ಚು ಸಂಬಳ ಪಡೆಯುವ ಆಸೆ, ಹೆಚ್ಚು ಸಂಬಳ ಪಡೆಯುವಗೆ ಇನ್ನೂ ಹೆಚ್ಚು ಪಡೆಯುವ ಆಸೆ. ಮಾನವನಿಗೆ ತ್ರಪ್ತಿ ಎನ್ನುವುದು  ಇರುವುದೇ ಇಲ್ಲ. ಸಣ್ಣ ಟಿ ವಿ ತೆಗೆದುಕೊಂಡವನಿಗೆ  ದೊಡ್ಡ ಟಿ ವಿ ಬೇಕು, ದೊಡ್ಡ ಟಿ ವಿ ತೆಗೆದುಕೊಳ್ಳುವವವನಿಗೆ ಫ್ಲಾಟ್ ಟಿ ವಿ ಬೇಕು, ಹೀಗೆ ಪ್ರತಿಯೊಂದರಲ್ಲೂ ಮನುಷ್ಯ ಇದ್ದಿದ್ದರಲ್ಲಿ ಸಂತ್ರಪ್ತನಾಗುವುದೇ  ಇಲ್ಲ. ಆ ಅಸಂತ್ರಪ್ತ ಮನಸ್ಸೇ ಜಗತ್ತಿನ ಅನೇಕ ಅವಘಡಗಳಿಗೆ ಕಾರಣವೂ ಕೂಡಾ.

  ''ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ''

ಎಂಬ ಹಾಡು ಅಂದಿಗೂ ಇಂದಿಗೂ ಎಂದಿಗೂ ಎಷ್ಟು ಪ್ರಸ್ತುತ ಅಲ್ಲವೇ?

ಉಡುಪಿಯ ಆ ದಿನಗಳಲ್ಲಿ ಆದದ್ದು ಅದೇ, ಮೊದಲ ಗಳಿಕೆ ಎಂದಿಗೂ ವಿಶೇಷ ತ್ರಪ್ತಿ ನೀಡುತ್ತದೆ. ಆದರೆ ಅಲ್ಲಿ ಗಳಿಕೆ ನನ್ನ ಉದ್ದೇಶ ಆಗಿರಲಿಲ್ಲ. ಕಲಿಕೆ ಉದ್ದೇಶವಾಗಿತ್ತು. ಮೊದಲ ''ಪೆಟ್ಟು'' ಹೋಗಿ ಬಂದ ನಂತರ ಬಡಿಸುವುದರಲ್ಲಿ ವಿಶ್ವಾಸ ವೂ ಬಂತು. ಮೊದಲ ಪೆಟ್ಟು, ಎರಡಾಯಿತು, ಎರಡು ಮೂರಾಯಿತು, ಮೂರು ನಾಲಕ್ಕು......... ಹೀಗೆ ಪೆಟ್ಟಿಗೆ ಹೋಗಲು ಆರಂಬಿಸಿದೆ. ಹೋಗಲೇಬೇಕಾದ ಅನಿವಾರ್ಯತೆ ಸ್ರಷ್ಟಿಯಾಗುವಷ್ಟರ    ಮಟ್ಟಿಗೆ ಅದು ಬೆಳೆಯಿತು. ಬದುಕೇ ಹಾಗೇ, ಅದನ್ನು ಎಷ್ಟರ ಮಟ್ಟಿಗೆ ಬೇಕೋ ಅಷ್ಟರ ಮಟ್ಟಿಗೆ ಇಟ್ಟರೆ ಸ್ವರ್ಗ, ಇಲ್ಲದಿರೆ ಆ ಬದುಕೇ ಕುತ್ತಿಗೆಯೇ ಮೇಲೆ ಹತ್ತಿ ಕುಣಿಯಲು ಆರಂಬಿಸುತ್ತದೆ. ಅದಕ್ಕೆ ಇರಬೇಕು, ಸಾಧು ಸಂತರು ಸತತ ಯೋಗ ಧ್ಯಾನ ದ ಮೂಲಕ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದರು ಎನಿಸುತ್ತದೆ.

''ಪೆಟ್ಟು'' ಮೊದ ಮೊದಲು ಸುಂದರವಾಗಿಯೇ ಇತ್ತು. ಮೊದಲು ಹಣ ಬರಲು ಆರಂಬಿಸಿದಾಗ ಹಾಗೇ ಆಗುತ್ತದೆ ಅಲ್ಲವೇ? ಆದರೆ ಅದೊಂದು ದಿನ ಮಾತ್ರ ಪೆಟ್ಟಿಗೆ ಬಿದ್ದಿತ್ತು ದೊಡ್ಡ ''ಪೆಟ್ಟು''. ಕಾಲೇಜಿನಲ್ಲಿ ಪ್ರತಿದಿನ 12 -30 ಗೆ ಕ್ಲಾಸ್ ಮುಗಿಯುತ್ತಿತ್ತು. ಮತ್ತೆ ಮಧ್ಯಾನ್ಹ  2 ಘಂಟೆಗೆ ಆರಂಬವಾಗುತ್ತಿತ್ತು. ಆ ದಿನವೂ 12 -30 ಗೆ ಕ್ಲಾಸ್ ಮುಗಿಸಿ ಊಟಕ್ಕೆ ಹೋಗುವ ಪ್ಲಾನ್ ಎಂದಿನಂತೆಯೇ ಇತ್ತು. ಪ್ರತಿದಿನ 12 -30 ಕ್ಕೆ  ಊಟಕ್ಕೆ ಕ್ರಷ್ಣ  ಮಠ ಕ್ಕೆ ಹೋಗುತ್ತಿದ್ದೆವು. ಆದರೆ ಆ ದಿನ ಬೆಳಿಗ್ಗೆ ಪೆಟ್ಟಿನ ಸ್ನೇಹಿತರು  ಬಂದು ಇಂದು ಮಧ್ಯಾನ್ಹ ಪೆಟ್ಟು ಇದೆ. 12 -30 ಕ್ಕೆ ಹೋಗಿ 2 ಘಂಟೆಗೆ ಬರುವುದು ಎಂದರು. ನಾನು ನನಗೆ ಎರಡು ಘಂಟೆಗೆ ರಸಾಯನ ಶಾಸ್ತ್ರ (Chemistry) ದ ಕ್ಲಾಸ್ ಇದೆ, ಬರಲು ಆಗುವುದಿಲ್ಲ ಎಂದೆ. ಆದರೆ ಅವರು ಕೇಳಬೇಕಲ್ಲ.  12 -30 ಗೆ ಹೊರಟೆ ಬಿಟ್ಟಿತ್ತು  ದಂಡು. 

ಮದುವೆ ಮನೆ, ವಧು ವರರು ಹಾರ ಬದಲಾಯಿಸಿಕೊಂಡು ಹಸನ್ಮುಖರಾಗಿ ಕುಳಿತಿದ್ದರು. ಬಂದ ಬಂಧು ಬಳಗ ಅವರನ್ನೆಲ್ಲ ಹರಸಿ ಊಟಕ್ಕೆ ಹೋಗುತ್ತಿದ್ದರು. ನಮ್ಮ ಕೆಲಸ ಆರಂಭವಾಗುವುದೇ ಈಗ, ನಾವು ಬಡಿಸಲು ಆರಂಬಿಸಿದೆವು. ಕೆಲವೊಮ್ಮೆ ಮುಂದೆ ಆಗುವ ಸಮಸ್ಯೆ  ಮೊದಲೇ ತಿಳಿಯುತ್ತದಂತೆ. ಆ ದಿನ ಬಡಿಸುವಾಗಲೂ ಏನೋ ಒಂದು ತರ ಬೇರೆಯೇ ತರನಾದ ವಿಚಿತ್ರ ಅನುಭವ ಆಗುತ್ತಿತ್ತು. ಇದೇಕೆ ಹೀಗೆ ಆಗುತ್ತಿದೆ ಎಂದು ಯೋಚಿಸಿದರೂ ಹೊಳೆಯಲಿಲ್ಲ. ಸಮಯ ಹೋಗುತ್ತಿತ್ತು. 2 ಘಂಟೆ ಸಮೀಪಿಸುತ್ತಿತ್ತು. ರಸಾಯನ ಶಾಸ್ತ್ರ ಕ್ಲಾಸ್ ಇದೆ ಬೇರೆ. ಅದು ರಸಾಯನ ಶಾಸ್ತ್ರದ ಅದ್ಭುತ ಪ್ರೊಫೆಸರ್ ಕ್ಲಾಸ್ ಆಗಿತ್ತು. ಮಿಸ್ ಮಾಡಿಕೊಳ್ಳೋ ಚಾನ್ಸ್ ಇರಲೇ ಇಲ್ಲ, 

ಆದರೆ ಬಂದ ಮೇಲೆ ಬಡಿಸಿ ಮುಗಿಸದೆ  ಹೋಗೋ ಚಾನ್ಸ್ ಕೂಡಾ ಇರಲಿಲ್ಲ. ಹಾಗೇ ಸಾಲಿನಲ್ಲಿ ಬಡಿಸುತ್ತ ಬಡಿಸುತ್ತ ಹೋಗುತ್ತಿದ್ದವನಿಗೆ ಎದೆ ಧಸಕ್ ಅಂದಿತು ಒಮ್ಮೆ. ತಲೆ ಎತ್ತಿ ನೋಡುತ್ತೇನೆ, ರಸಾಯನ ಶಾಸ್ತ್ರದ  ಸರ್ವ ಪ್ರೊಫೆಸರ್ ಗಳೂ ಸಾಲಿನಲ್ಲಿ ಸಪ್ತ ಋಷಿಗಳು ತಪಸ್ಸಿಗೆ ಕುಳಿತ ಹಾಗೇ ಕುಳಿತಿದ್ದಾರೆ. ಕೈಯಲ್ಲಿ ರಸಂ (ಸಾರು), ಎದುರುಗಡೆ ರಸಾಯನ ಶಾಸ್ತ್ರ, ಮೈಯೆಲ್ಲಾ ಬೆವರಿನ ರಸ ಒಟ್ಟಿನಲ್ಲಿ ಭೂಮಿ, ಆಕಾಶ ಒಟ್ಟಿಗೆ ಬೆರೆತು ತಲೆಯ ಮೇಲೆ ಬಿದ್ದ ಅನುಭವ. ಅದರಲ್ಲೂ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಒಬ್ಬರು ಪ್ರೊಫೆಸರ್ ಇದ್ದರು. ಅವರು ಹಾಸ್ಯ ಮಾಡುತ್ತಲೇ ಚಾಟಿ ಬೀಸುವ ಪ್ರವ್ರತ್ತಿಯವರು. ನಾ ಕಂಡ ಅತ್ಯುತ್ತಮ ಪ್ರೊಫೆಸರ್ ಗಳಲ್ಲಿ ಒಬ್ಬರು ಅವರು. 

ನನ್ನ ನೋಡಿ, ಸಮಯ ನೋಡಿದರು, ಮತ್ತೆ ನನ್ನ ನೋಡಿದರು, ನನಗೆ ವಿಚಿತ್ರ ತಳಮಳ. ಪೆಟ್ಟಿಗೆ ಬಂದು ಅಂದು ದೊಡ್ಡ ''ಪೆಟ್ಟು'' ಬಿದ್ದಿತ್ತು. ಅದಕ್ಕೆ ಮೊದಲು ಹೇಳಿದ್ದು, ಹಣ ಬೇಕು ನಿಜ, ಅತಿಯಾದ ಹಣ ಒಳ್ಳೆಯದಲ್ಲ ಎಂದು. ಪಾಪ, ನನಗೇನು ಗೊತ್ತಿತ್ತು ನಾನು ಹೋಗಿದ್ದು ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿಯ ಮದುವೆಗೆ ಎಂದು :) 

ಮರುದಿನ ಕ್ಲಾಸ್ ನಲ್ಲಿ ಅವರು ರಸಾಯನ ಶಾಸ್ತ್ರ ಕಲಿಸುವ ಬದಲು ರಸಂ ಮಾಡುವ ವಿಧಾನ, ಬಡಿಸುವ ವಿಧಾನ ಗಳ ಬಗೆಗೆ ಹೇಳಿದರು, ಕ್ಲಾಸ್ ನ ಉಳಿದ ವಿಧ್ಯಾರ್ಥಿಗಳಿಗೆ ಇದ್ಯಾಕೆ ರಸಂ ಬಗ್ಗೆ ರಸಾಯನ ಶಾಸ್ತ್ರದ ಪ್ರೊಫೆಸರ್ ಮಾತನಾಡುತ್ತಿದ್ದಾರೆ ಎಂದು. ನನಗೆ ಮಾತ್ರ ರಸಂ ಬೇಗ ಮುಗಿದು ಹೋದರೆ ಸಾಕೆಂದು ಅನ್ನಿಸುತ್ತಿತ್ತು. ಆ ಪ್ರೊಫೆಸರ್ ಗೆ ನನ್ನ ಮೇಲೆ ಇದ್ದ ವಿಶೇಷ ಪ್ರೀತಿಯಿಂದ ಅವರು ಒಂದು ತಾಸು ರಸಂ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಅದರ ನಂತರ ಪೆಟ್ಟು ಕೇವಲ ವಾರಾಂತ್ಯದ ಕೆಲಸವಾಗಿತ್ತೆ ಹೊರತು ವಾರದ ಮಧ್ಯದ ಕೆಲಸವಾಗಿರಲಿಲ್ಲ.

ಇದನ್ನೆಲ್ಲಾ ಯಾಕೆ ಬರೆಯುತ್ತಿದ್ದೇನೆಂದರೆ ಅಂದು ನನ್ನೊಂದಿಗೆ ಪೆಟ್ಟಿಗೆ ಬರುತ್ತಿದ್ದ ಎಷ್ಟೋ ಮಂದಿ ಅಂದಿನ ಕ್ಷಣಿಕ ಗಳಿಕೆಯನ್ನೇ ಮಹಾ ಗಳಿಕೆ ಎಂದು ತಿಳಿದು ಕಲಿಯುವುದ ಅರ್ಧ ದಲ್ಲೇ ಬಿಟ್ಟು ಇಂದು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಸ್ವಾಭಿಮಾನ, ಸ್ವಂತ ದುಡಿಮೆ ಎಲ್ಲವೂ ಅವಶ್ಯ ನಿಜ, ಆದರೆ ಅದು ಬದುಕನ್ನೇ ನುಂಗಬಾರದು. ನನ್ನೊಂದಿಗೆ ಪೆಟ್ಟಿಗೆ ಬಂದ ಕೆಲವು ಸ್ನೇಹಿತರು ಇಂದು ಬೆಂಗಳೂರಿನಲ್ಲಿ Chartered Accountant ಆಗಿ ದೊಡ್ಡ ದೊಡ್ಡ ಕಂಪನಿಗಳ ಮುಖ್ಯ ಹುದ್ದೆಯಲ್ಲಿದ್ದಾರೆ. ಪ್ರತಿ ಸಲ ಬೆಂಗಳೂರಿಗೆ ಹೋದಾಗ ಅವರನ್ನೆಲ್ಲ ಭೆಟ್ಟಿಯಾಗುತ್ತೇನೆ. ಸಾಹಸಮಯ ಬದುಕಿನ ಉದಾಹರಣೆಯಂತೆ ಇರುವ ಅವರ ಜೀವನ ದ ಮೇಲೆ ನನಗೆ ಬಹಳ ಹೆಮ್ಮೆಯಿದೆ, ಅಂತಹ ಸ್ನೇಹಿತರ ಪರಿಚಯ ಈ ಬದುಕಿಗೆ ಸಿಕ್ಕ ಬಹುದೊಡ್ಡ ಆಸ್ತಿ.

ನನ್ನ ಬದುಕಿನೊಂದಿಗೆ ಹೆಜ್ಜೆ ಹಾಕಿದ ನನ್ನ ಬದುಕಿನ ಪ್ರತಿ ಘಟ್ಟದಲ್ಲೂ ನೋವಿಗೆ ಸಾಂತ್ವನ ನೀಡುವ ತಾಯಿಯಂತೆ, ನಲಿವಿಗೆ ಹುರಿದುಂಬಿಸುವ ಅಣ್ಣನಂತೆ, ಸಾಧನೆಗಳಿಗೆ ಪ್ರೋತ್ಸಾಹಿಸುವ ತಂದೆಯಂತೆ, ತಪ್ಪಿದಲ್ಲಿ ತಿದ್ದುವ  ಸ್ನೇಹಕ್ಕೆ ಅರ್ಥವಾದ ಗೆಳೆಯನೊಬ್ಬನ ಪ್ರೀತಿ  ಉಡುಪಿಯಲ್ಲಿ ಅಷ್ಟೇ ಅಲ್ಲ ನನ್ನ ಬದುಕಿನಲ್ಲಿಯೇ ಮರೆಯಲಾರದ್ದು. ಮುಂದೆ ಅವನ ಬಗ್ಗೆ ಬರೆಯುತ್ತೇನೆ.
 ಮತ್ತೆ ಸಿಗುತ್ತೇನೆ
ನಿಮ್ಮವ 
ಗುರು 

ಮೊದಲ ಹಾಗೂ ಎರಡನೇ ಭಾಗ ಓದದವರು ಕೆಳಗೆ ಕ್ಲಿಕ್ ಮಾಡಿ ಓದಿ 
ಬದುಕಿನ ಪುಟಗಳಿಂದ http://gurumurthyhegde.blogspot.com/2011/01/1.html  ಭಾಗ 1
ಅದು ಕೇವಲ ೫೦ ರೂಪಾಯಿ ಆಗಿರಲಿಲ್ಲ http://gurumurthyhegde.blogspot.com/2011/02/50.html  ಭಾಗ  2 

Tuesday, February 1, 2011

ಅದು ಕೇವಲ 50 ರೂಪಾಯಿ ಆಗಿರಲಿಲ್ಲ ...

ಕಳೆದ ವಾರ ನನ್ನ ಪ್ರೀತಿಯ ಬ್ಲಾಗ್ ನ ಹುಟ್ಟಿದ ಹಬ್ಬ ಆದ್ದರಿಂದ ''ಬದುಕಿನ ಪುಟಗಳಿಂದ'' ಬರಹ ಮುಂದುವರೆಸಲಾಗಲಿಲ್ಲ. ಅನೇಕ ಮಿತ್ರರು ಮೇಲ್ ಮಾಡಿ ಮುಂದಿನ ಬರಹ ನಿಂತದ್ದೇಕೆ ಎಂದು ಕೇಳಿದ್ದಾರೆ. ಖಂಡಿತ ನಿಲ್ಲಿಸುವ ಉದ್ದೇಶ ಇಲ್ಲ. ಅದಕ್ಕೆ ಈಗ ಮುಂದುವರೆಸುತ್ತಿದ್ದೇನೆ. ಮೊದಲ ಭಾಗ ಓದದವರು ಇಲ್ಲಿ ಓದಿ ''http://gurumurthyhegde.blogspot.com/2011/01/1.html''

ಉಡುಪಿಯ ಆ ದಿನಗಳು ಬದುಕಿಗೆ ಅಡಿಪಾಯ ಮಾತ್ರ ಆಗಿರಲಿಲ್ಲ. ಬದುಕಿನ ರಸಮಯ ಕ್ಷಣಗಳೂ ಹೌದು. ಉಡುಪಿಯಲ್ಲಿ ಓದಿದವರಿಗೆ ರಥ ಬೀದಿಯ ಮಹತ್ವ ಗೊತ್ತೇ ಇರುತ್ತದೆ. ಅದರಲ್ಲೂ ಪೂರ್ಣ ಪ್ರಜ್ಞ ದಲ್ಲಿ ಓದುವ ವಿದ್ಯಾರ್ಥಿಗಳಿಗೂ ರಥ ಬೀದಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಬೇರೆ ಊರಿನಿಂದ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ರಥಬೀದಿಯ ದರ್ಶನ ದಿನವೂ ಆಗೇ ಆಗುತ್ತದೆ. ಮಧ್ಯಾನ್ಹ  ಊಟಕ್ಕೆ ಹೋಗುವಾಗ, ರಾತ್ರಿ ಊಟಕ್ಕೆ ಹೋಗುವಾಗ, ಜೊತೆಗೆ ರಥಬೀದಿಯಲ್ಲಿ ತಿರುಗುವ ಯಾತ್ರಾರ್ಥಿಗಳ ದರ್ಶನ, ಸಾಲದೆಂಬಂತೆ ಶ್ರೀ ಕ್ರಷ್ಣನ ದರ್ಶನ, ಬದುಕು ಪಾವನ ಎನಿಸಿಬಿಡುತ್ತದೆ. ಸುಂದರ ಯಾತ್ರಾರ್ಥಿಗಳಿಂದ ಕೆಲವರ ಕಣ್ಣು ಪಾವನ ಆಗುವುದೂ ಉಂಟು.  ಉಡುಪಿಯಲ್ಲಿ   ಕಲಿಯಲು ಬರುವ ವಿದ್ಯಾರ್ಥಿಗಳಲ್ಲಿ ಬಹುಪಾಲು ಉತ್ತರ ಕನ್ನಡ ದವರೆ ಇರುತ್ತಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಕಾರಣ ಒಂದಾದರೆ, ಇದು ಉತ್ತರ ಕನ್ನಡಕ್ಕೆ ಹತ್ತಿರದ ಜಾಗ ಎನ್ನುವುದು ಇನ್ನೊಂದು. ಅದರಲ್ಲೂ ಉಡುಪಿಯಲ್ಲಿ ಉಚಿತ ಊಟ, ದೇವರ ಪ್ರಸಾದವೂ ಆದ್ದರಿಂದ ಅರ್ಥಿಕ ದ್ರಷ್ಟಿಯಿಂದಲೂ ಇದು ಪ್ರಶಸ್ತ ಜಾಗ.
ಕಾಲೇಜಿಗೆ ಸೇರಿದ ದಿನಗಳಲ್ಲಿ ಹಣದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ತಂದೆಯವರು ಚಾಚೂ ತಪ್ಪದೆ ಹಣ ಕಳಿಸುತ್ತಿದ್ದರು. ಅವರ ಶ್ರಮ, ಬೆವರಿನ ಕಷ್ಟ ನನಗೆ ಗೊತ್ತೇ ಆಗುತ್ತಿರಲಿಲ್ಲ. ಮಧ್ಯಮ ವರ್ಗದ ಕುಟುಂಬವಾದ ನಮಗೆ ತಿನ್ನಲು ಉಣ್ಣಲು ಕೊರತೆ ಇರಲಿಲ್ಲ ಆದರೂ ತಂದೆಯವರಿಗೆ ದೊಡ್ಡ ಕುಟುಂಬದ  (ಆಗ ಸಾಮೂಹಿಕ ಕುಟುಂಬ ಪದ್ಧತಿ) ಜವಾಬ್ದಾರಿಯೂ ಇತ್ತು. ಇದರ ನಡುವೆ ನಮ್ಮ ಶಿಕ್ಷಣದ ಖರ್ಚು. ನನಗಿನ್ನೂ ನೆನಪಿದೆ, ಆ ದಿನಗಳಲ್ಲಿ ತಂದೆ ತಾಯಿಯವರು ಯಲ್ಲಾಪುರದಲ್ಲಿದ್ದರು. ತಂದೆಯವರು ಸರಕಾರೀ ಕೆಲಸದಲ್ಲಿದ್ದರು. ನಾನಾಗ ಒಂದನೇ ಪಿ ಯು ಸಿ ವಿಜ್ಞಾನ ವಿಭಾಗಕ್ಕೆ ಸೇರಿ 6 ತಿಂಗಳು ಆಗಿದ್ದವು. ಒಮ್ಮೆಲೇ ತಂದೆಯವರಿಗೆ ಹಳಿಯಾಳಕ್ಕೆ ವರ್ಗಾವಣೆ ಆಯಿತು. ಹಳಿಯಾಳ ಸುಮಾರು ಒಂದೂ ವರೆ ಘಂಟೆಯ ಪ್ರಯಾಣ ಯಲ್ಲಾಪುರ ದಿಂದ. ಹಾಗೆಂದು ನಾನು ಕಾಲೇಜು ಬಿಡುವುದು ನನಗೆ ಇಷ್ಟವಿರಲಿಲ್ಲ. ಆದರೆ ತಂದೆಯವರೇ ಪ್ರತಿದಿನ ಅಲ್ಲಿಗೆ ಹೋಗಿಬರುವುದೆಂದು ನಿರ್ಧರಿಸಿದರು. ಒಬ್ಬ ಮಗನ ಮಟ್ಟಿಗೆ ತಂದೆಯ ಆ ನಿರ್ಧಾರ ಬಲು ದೊಡ್ಡದಾಗಿತ್ತು. ಮಗ ಕಲಿಯಲಿ, ಆತನ ಶಿಕ್ಷಣ ಮಧ್ಯದಲ್ಲಿಯೇ ತನ್ನಿಂದ ನಿಲ್ಲುವುದು ಬೇಡ ಎಂದು ತಿಳಿದು ತಾವೇ ಪ್ರತಿದಿನ 3 ಘಂಟೆ ಪ್ರಯಾಣ ಮಾಡಿದ ಆ ದಿನಗಳು ಎಂದೂ ಮರೆಯಲಾರದ್ದು. ನಮಗೆ ಬಿಸಿ ಬಿಸಿ ಊಟ ನೀಡಿ, ತಾವು ಮನೆಯಿಂದ ಬೆಳಿಗ್ಗೆಯೇ ಕಟ್ಟಿಸಿಕೊಂಡು ಹೋಗಿ ತಿಂದು ಬರುವ ಆ ಮನಸ್ಸಿನ ತಂದೆಯ ದೊಡ್ಡ ಗುಣ ಹಾಗೂ ಅವರ ಋಣ ಎಂದಿಗೂ ತೀರಿಸಲಾಗದ್ದು.
ಉಡುಪಿ ಸಾಂಸ್ಕ್ರತಿಕವಾಗಿ ಬಹಳಷ್ಟು ಮುಂದುವರೆದ ಪ್ರದೇಶ. ಇಲ್ಲಿ ಸಂಗೀತ, ಕಲೆ ಗಳಿಗೆ ಅಗಾಧ ಪ್ರೋತ್ಸಾಹ. ಕನ್ನಡ ನಾಡಿನ ಗಂಡು ಕಲೆ ''ಯಕ್ಷಗಾನ'' ದ ಉಳಿವಿಗೆ ಮೂಲ ಕಾರಣ ದಕ್ಷಿಣ ಕನ್ನಡದವರೇ ಎಂದರೆ ತಪ್ಪಾಗಲಿಕ್ಕಿಲ್ಲ. ಶಿಕ್ಷಣದಲ್ಲೂ ಅವರು ಎಲ್ಲರಿಗಿಂತ ಮುಂದು. ನಾಡಿನ ಖ್ಯಾತ ಶಿಕ್ಷಣ ಸಂಸ್ಥೆಗಳ ಒಡೆಯರೂ ಹೌದು.

''ಘಟ್ಟದ ಕೆಳಗಿನ ನೀರು, ಜೊತೆಯಲಿ ಹರಿಯುವ ಬೆವರು 
ಎಳೆದಿದೆ ಬದುಕಿನ ತೇರು, ಬದುಕುವೆ ಎಲ್ಲೇ ಹೋದರೂ''

ಯಾವ ಪುಣ್ಯಾತ್ಮ ಹೇಳಿದನೋ ಗೊತ್ತಿಲ್ಲ. ಆದರೆ ಆ ಮಾತು ಮಾತ್ರ ಎಂದಿಗೂ ಸತ್ಯ. ಸಮುದ್ರ ತೀರದ ಜನರಿಗೆ ಮಂಡೆ (ಮಂಡೆ ಅಂದರೆ ಬುದ್ದಿ) ಬಹಳ ಜಾಸ್ತಿ. ವ್ಯಾಪಾರದಲ್ಲಿ ಬಹಳ ಜಾಣರು. ಸ್ವಲ್ಪ ನಾವು ಯಾಮಾರಿದರೂ ನಮ್ಮ ಎದುರಿಗೇ ನಮ್ಮ ಮಾರಾಟ ಮಾಡಿ ಹೋಗುವಷ್ಟು ಚಂಡ-ಪ್ರಚಂಡರು ಅವರು. ಬಹುಷ: ಅವರ ಕಷ್ಟಮಯ ಜೀವನ ಕಲಿಸಿದ ಪಾಠ ಅದೆಂದು ತೋರುತ್ತದೆ. ಅದೇ ಘಟ್ಟದ ಮೇಲೆ ಬಹಳಷ್ಟು ಜನರಿಗೆ ಅಡಿಕೆ ತೋಟವಿದೆ. ಅಡಿಕೆಗೆ ಬೆಲೆಯಿದೆ (ಆದರೂ ಜನ ತಾವು ಬಡವರು ಎನ್ನುವುದು ಬಿಟ್ಟಿಲ್ಲ, ಲಕ್ಷಾದೀಶ್ವರ ಕೋಟ್ಯಾ ಧೀಶ್ವರ ನನ್ನು ನೋಡಿ ತಾನು ಬಡವ ಎನ್ನುತ್ತಾನೆ, ಹೀಗೆಯೇ ಎಷ್ಟೇ ಅಡಿಕೆಗೆ ಬೆಲೆ ನೀವು ಕೊಡಿ, ಅವರು ಕಣ್ಣೀರು ಹಾಕುವುದು ಬಿಡರು)  
ಘಟ್ಟದ ಕೆಳಗಿನ ಜನರಿಗೆ ಇಂಥಹ ಯೋಗವಿಲ್ಲ. ಅಲ್ಲಿರುವುದು ಬೋಳು ಗುಡ್ಡೆ ಗಳು ಮಾತ್ರ. ಅದರಲ್ಲೇ ಸುಖ ಕಾಣಬೇಕು. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದರೆ ಮತ್ತೆ ಸಂಜೆಯೇ ಮನೆಗೆ ಬರುವುದು ಅವರು. ಆ ದಿನಚರಿಯೇ ಅವರಿಗೆ ಒಂದು ರೀತಿಯ ಬದುಕನ್ನು ಕಲಿಸಿದೆ. ಇದು ಉಡುಪಿಯಲ್ಲಿ ನಾನು ಕಂಡು ಕೊಂಡ ಜನರ ಜೀವನ ಚಕ್ರ. 
ದಕ್ಷಿಣ ಕನ್ನಡ ದಲ್ಲಿ ಮದುವೆಗಳನ್ನು ಮನೆಯಲ್ಲಿ ಮಾಡುವಷ್ಟು ಸಮಯ ಹಾಗೂ ವ್ಯವಧಾನ ಯಾರಿಗೂ ಇಲ್ಲ. ಅದಕ್ಕೆ ಅವರು ಆಯ್ದು ಕೊಳ್ಳುವುದು ಮಠ ಮಂದಿರ ಗಳನ್ನು, ಛತ್ರಗಳನ್ನು. ಉಡುಪಿಯ ಸುತ್ತ ಮುತ್ತ ಅನೇಕ ಮದುವೆಯ ಛತ್ರಗಳಿವೆ. ಛತ್ರಗಳಲ್ಲಿ ನಡೆಯುವ ಮದುವೆಯ ವ್ಯವಸ್ಥೆ ಯನ್ನು ಆ ಛತ್ರಗಳ ನಿರ್ವಾಹಕರು ಸಂಬಂದಿಸಿದವರಿಗೆ ನೀಡುತ್ತಾರೆ. ಅಂದರೆ  ಊಟದ ವ್ಯವಸ್ಥೆ  ಒಬ್ಬನಿಗೆ, ಅಲಂಕಾರದ ವ್ಯವಸ್ಥೆ  ಇನ್ನೊಬ್ಬನಿಗೆ, ಹೂವಿನ ವ್ಯವಸ್ಥೆ ಮತ್ತೊಬ್ಬನಿಗೆ ಹೀಗೆ. ಇಲ್ಲಿ ಊಟ ಬಡಿಸಲು ನಿರ್ಧಿಷ್ಟ ಪಂಗಡಗಳಿಗೆ ವಹಿಸಿ ಕೊಟ್ಟಿರುತ್ತಾರೆ. ಆ ಪಂಗಡಗಳು ಮಠದಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತಮ್ಮ ಪಂಗಡದಲ್ಲಿ ಸೇರಿಸಿಕೊಳ್ಳುತ್ತಾರೆ.

  ಇಂಥಹ  ಊಟಕ್ಕೆ ಬಡಿಸಲು ಹೋಗುವುದಕ್ಕೆ ''ಪೆಟ್ಟು'' ಎನ್ನುತ್ತಾರೆ.

 ಉಡುಪಿಗೆ ಹೋದ ಮೊದಲ ದಿನಗಳಲ್ಲಿ ಸ್ನೇಹಿತನೊಬ್ಬ ''ಪೆಟ್ಟಿಗೆ'' ಬರುತ್ತಿಯ ಎಂದು ಕೇಳಿದ್ದ. ನಾನು   ಒಳಗೊಳಗೇ ಬೆವೆತುಹೋಗಿದ್ದೆ. ಇನ್ನೆಲ್ಲಿಂದ ಜನರ ಕರೆದುಕೊಂಡು ಬಂದು ನನಗೆ ಹೊಡೆಯುತ್ತಾರೋ ಎಂದು. ಆಮೇಲೆ ಅರ್ಥ ತಿಳಿದಾಗ ನಕ್ಕಿದ್ದೋ ನಕ್ಕಿದ್ದು. 
ಉಡುಪಿಯ ರಥ ಬೀದಿಗಳಲ್ಲಿ ತಿರುಗುವಾಗ ಇಂಥಹ ಒಂದು ಪಂಗಡದ ನಾಯಕನ ಪರಿಚಯ ಆಯಿತು. ಆ ಪಂಗಡದಲ್ಲಿ ನನ್ನ ಕೆಲವು ಸ್ನೇಹಿತರು ಇದ್ದರು. ಅವರೆಲ್ಲ ಮದುವೆಗೆ ಬಡಿಸಲು ಹೋಗಿ ತಮ್ಮ ಖರ್ಚನ್ನು ತಾವೇ ನಿಭಾಯಿಸಿಕೊಳ್ಳುತ್ತಿದ್ದರು. ಹೀಗೆ ಒಂದು ಭಾನುವಾರ ಬೆಳಿಗ್ಗೆ ಪೇಪರ್ ಓದುತ್ತಿದ್ದವನಿಗೆ ಒಂದು ದೂರವಾಣಿ ಕರೆ ಬಂತು. ಸ್ನೇಹಿತನೊಬ್ಬ ಕರೆ ಮಾಡಿ ''ಇಂದಿನ ಪೆಟ್ಟಿ ಗೆ ಒಬ್ಬ ಕೈ ಕೊಟ್ಟಿದ್ದಾನೆ. ನಮಗೆ ಒಬ್ಬ ಬಡಿಸುವ ಜನ ಅರ್ಜೆಂಟ್ ಬೇಕಾಗಿದೆ. ದಯವಿಟ್ಟು ಬರಲು ಆಗುತ್ತದೆಯೇ? '' ಎಂದು ಕೇಳಿದ. ಮಧ್ಯಾನ್ಹ 12 ಘಂಟೆಗೆ ಹೋಗಿ 2 ಘಂಟೆಗೆ ತಿರುಗಿ ಬರುವುದು ಎಂದು ಹೇಳಿದ. ಸರಿ, ಆತ ಸ್ನೇಹಿತ ಬೇರೆ ಎಂದು ಮೊದಲ ಪೆಟ್ಟು ತಿನ್ನಲು (ಕ್ಷಮಿಸಿ , ಬಡಿಸಲು) ಹೊರಟೆ ಬಿಟ್ಟೆ. ಬಡಿಸುವುದು ನನಗೆ ಹೊಸದಲ್ಲ. ಕಾರಣ ಕ್ರಷ್ಣ ಮಠದಲ್ಲಿ ಪ್ರತಿದಿನ ಬಡಿಸುತ್ತೇವೆ. ಆದರೆ ಮದುವೆ ಮನೆಯಲ್ಲಿ ಬಡಿಸುವುದು, ಮತ್ತು ಪದ್ದತಿಯಂತೆ ಬಡಿಸುವುದು ಹೊಸದಾಗಿತ್ತು. ನನಗೆ ಮೊದಲ ದಿನವಾದ್ದರಿಂದ ''ಪ್ರಥಮ ಚುಂಬನಂ ದಂತ ಭಗ್ನಂ'' ಆಗದಿರಲಿ ಎಂದು ಕೇವಲ ಉಪ್ಪು, ಉಪ್ಪಿನಕಾಯಿ ಮತ್ತು ಹಪ್ಪಳ ಮಾತ್ರ ಬಡಿಸಲು ನೀಡಿದ್ದರು. ಸುಮಾರು 1000 ಜನ ಅಂದು ಮದುವೆಗೆ ಬಂದಿದ್ದರು ಎನಿಸುತ್ತದೆ. ಬಡಿಸಿ ಆದ ಮೇಲೆ ನಾವು ಊಟ ಮಾಡಿ ಮನೆಗೆ ಬಂದೆವು. ಆ ದಿನ ಸಂಜೆ ರಥ ಬೀದಿಯಲ್ಲಿ ನನ್ನ ಸ್ನೇಹಿತ ನನಗೆ 50 ರೂಪಾಯಿಗಳನ್ನು ಕೊಟ್ಟ. ನನಗೆ ಆಶ್ಚರ್ಯ .

''ಇದೇನಿದು?'' ಎಂದು ಕೇಳಿದೆ, 

''ನಿನ್ನ ಮೊದಲ ದುಡಿಮೆ'' ಎಂದ.

 2 ಘಂಟೆ ಬಡಿಸಲು ಹೋಗಿದ್ದಕ್ಕೆ 50 ರೂಪಾಯಿ ನೀಡುತ್ತಿದ್ದರು ಆ ದಿನಗಳಲ್ಲಿ.

ಇಂದು 50 ರೂಪಾಯಿಗಳಿಗೆ ಬೆಲೆ ಇಲ್ಲದಿದ್ದರೂ 11 ವರ್ಷಗಳ ಹಿಂದೆ ಅದು ಬೆಲೆ ಬಾಳುವನ್ತಾದ್ದೆ  ಆಗಿತ್ತು. 

ಮೊದಲ ಬಾರಿಗೆ ಬೆವರು ಹರಿಸಿ ದುಡಿದ ಹಣ ಅದು, ಅಂದು ಆ 50 ರೂಪಾಯಿಗಳು ಕೇವಲ ಹಣ ಆಗಿರಲಿಲ್ಲ. ಬದುಕಿಗೆ ಕಲಿಸಿದ ಬಹುದೊಡ್ಡ ಪಾಠ ಆಗಿತ್ತು. ಅಪ್ಪ ಮಾಡಿಟ್ಟ ಆಸ್ತಿಯನ್ನು ಲೆಕ್ಕವಿಲ್ಲದೆ ಖರ್ಚು ಮಾಡುವ ನಾವುಗಳು ಸ್ವಂತ ದುಡಿದಾಗ ಅದರ ಅನುಭವ ತಿಳಿಯುತ್ತದೆ ಎಂಬ ಸತ್ಯ ಗೋಚರಿಸಿದ ಕ್ಷಣ ಅದಾಗಿತ್ತು. ಕಣ್ಣು ತೇವ ಗೊಂಡಿತ್ತು. ದುಡಿಯುವ ಕೈಗಳ ನೋವು ಮೊದಲ ಬಾರಿಗೆ ಗೋಚರಿಸಿತ್ತು. ಅಂದು ರಸ್ತೆಯಲ್ಲಿ ಮರಳುವಾಗ ರಸ್ತೆ ಕೆಲಸ ಮಾಡುವ ಅದೆಷ್ಟೋ ಜೀವಗಳ ಮೇಲೆ ನನಗರಿವಿಲ್ಲದೆ ಅಕ್ಕರೆ ಮೂಡಿತ್ತು. 

ಆ 50 ರೂಪಾಯಿ ಕಲಿಸಿದ  ಪಾಠ ಇಂದು ಲಕ್ಷ  ರೂಪಾಯಿಗಳು  ಹೇಳಿಕೊಡುತ್ತಿಲ್ಲ....... 

ಮುಂದಿನ ವಾರ ಮತ್ತೆ ಸಿಗುತ್ತೇನೆ
ನಿಮ್ಮ ಗುರು