Wednesday, May 5, 2010

ಕೆಂಪಾದ ಕೆನ್ನೆ, ಅರಳೋದ್ ಬಿಟ್ಟು

ಯಾಕೋ ಏನೋ, ನಂಗೇನ್ ಗೊತ್ತು
ಅವಳಿಗೆ ಬಂತು ಸಿಟ್ಟು
 ಕೆಂಪಾದ ಕೆನ್ನೆ, ಅರಳೋದ್ ಬಿಟ್ಟು
ತಂದೀತ್ ತಲೆಗೆ ಚಿಟ್ಟು

ಕೊಡ್ತೀನಿ ಚಿನ್ನ, ನಿಂಗೆ ''ಚಿನ್ನ''
ಬಿಡ ಬ್ಯಾಡ್ ಹಿಂಗೆ ಕಣ್ಣ 
ಅಧರದಿಂದ ಮಧುರ ಗೀತೆ 
ಹಾಡಲೇನೆ ರನ್ನ   


ಮುದ್ದಾದ ವದನ, ಯಾಕೆ ಕದನ
ನೀನೆ ನನ್ನ ಪ್ರಾಣ
ಹರಿಯೋ ನದಿಯ, ಬೀಸೋ ಗಾಳಿ
 ತಂದು ಕೊಡ್ಲೇನ್ ಜಾಣ

ನನ್ನ ನಿನ್ನ, ನಡುವೇನ್ ಗುಟ್ಟು
ನಿಂಗ್ಯಾಕ್  ಬಂತು ಸಿಟ್ಟು
 ಬಿಟ್ಟು ಸಿಟ್ಟು, ''ಅತ್ತು'' ಬಿಟ್ಟು
ತಬ್ಕೋ  ನನ್ನ, ಬಂದ್ ಬಿಟ್ಟು 

ಗಂಡ ಹೆಂಡತಿ ಸಿಟ್ಟು, ಉಂಡು ಮಲಗುವ ತನಕ ಎಂಬ ಗಾದೆ ಅಂದಿಗೂ, ಇಂದಿಗೂ ಎಂದಿಗೂ ಪ್ರಸ್ತುತ. ನಿತ್ಯ ಸತ್ಯ. ಸಂಸಾರದ ಬಂಡಿಯಲ್ಲಿ ಬರೆ ಪ್ರೇಮವಿದ್ದರೆ ಸಾಲದು. ಅಲ್ಲಿ ಸರಸವೆಷ್ಟೋ, ವಿರಸವೂ ಇರಬೇಕು. ಹುಸಿಮುನಿಸು, ನಸು ನಗಿಸುತ್ತಾ ಇರುವುದೇ ಜೀವನದ ಯಶಸ್ಸಿನ ಗುಟ್ಟು. ಸರಸ ವಿರಸ ಹದವಾಗಿ ಬೆರೆತರೆ ಸಂಸಾರ ಸೊಗಸು. ಹೆಂಡತಿಗೆ ಸಿಟ್ಟು ಬಂದಿದೆ ಎಂದು ಗಂಡನೂ ಸಿಟ್ಟು ಮಾಡಿ ಕುಳಿತರೆ  ಹೇಗೆ. ಸಿಟ್ಟು ಯಾಕೆ ಬಂತು, ನನ್ನ ಯಾವ ಮಾತು, ಯಾವ ವಿಷಯ ನಿನಗೆ ಕೋಪ ತಂತು, ಎಂದು ಹದವಾಗಿ ಅವಳಲ್ಲಿ ಕೇಳಿ ಅವಳ ಮನಸ್ಸಿನ ಪ್ರೇಮ ''ತಂತು'' ವನ್ನು ಮೀಟಬೇಕು. ಜೀವನ ಒಂದು ಪಾಠ ಶಾಲೆ, ಪ್ರತಿದಿನ ಪ್ರತಿಕ್ಷಣ ಕಲಿಕೆ ಇದ್ದಿದ್ದೆ. ಪ್ರತಿದಿನದ ಯಾಂತ್ರಿಕ ಕೆಲಸದ ನಡುವೆ ಬರುವ ಸಿಟ್ಟಿಗೆ ಅದರದೇ ಆದ ಸಮಾಧಾನವು ಇರುತ್ತದೆ. ಅದರಲ್ಲೂ ತನ್ನ ''ಅಪ್ಪ, ಅಮ್ಮ, ಹುಟ್ಟೂರು, ಹೆತ್ತೋರು, ಮನೆ, ಗಿಡ ಮರ, ಸ್ನೇಹಿತರು'' ಎಲ್ಲವನ್ನೂ ತ್ಯಜಿಸಿ ಪತಿಯ ಹಿಂದೆ ಬರುವ ಹೆಣ್ಣು ಮಕ್ಕಳ ಬಹುದೊಡ್ಡ ಆಸ್ತಿ ''ಕಣ್ಣೀರು''. ಮನಸ್ಸಿಗೆ ಬೇಸರವಾದಾಗ ನಾಲಕ್ಕು ಹನಿ ಕಣ್ಣೀರು ಹಾಕಿದರೆ ಅವರಿಗೆ ಅದೆಷ್ಟೋ ಸಮಾಧಾನ. ಅದಕ್ಕೆ ಸಿಟ್ಟು ಬಂದಾಗ ಸ್ವಲ್ಪ ಅಳಲು ಬಿಟ್ಟರೆ, ಸಮಾಧಾನವಾದಾಗ ನಗು ಅರಳುತ್ತದೆ. ಬದುಕಿನ ಬಂಡಿಯಲ್ಲಿ ಸಮರಸದಿ ಬದುಕಿ ಬಾಳಬೇಕು ಎಂಬುದೇ ಕವನದ ಆಶಯ.

ಆತ್ಮೀಯ ಸ್ನೇಹಿತರೆ,

ನಾನು ಮತ್ತು ನನ್ನ ಅರ್ಧಾಂಗಿ  ಸ್ವಲ್ಪ ದಿನದ ಮಟ್ಟಿಗೆ ಭಾರತಕ್ಕೆ ಬರುತ್ತಿದ್ದೇವೆ.. ತಾಯ್ನಾಡಿನ ನೆನಪು, ಮಣ್ಣಿನ ನೆನಪು, ಹೆತ್ತವರ ನೋಡುವ ತವಕ ದಿನೇ ದಿನೇ ಹೆಚ್ಚುತ್ತಿದೆ. ಜೊತೆಗೆ ಕಳೆದ ಒಂದು ವರ್ಷದಲ್ಲಿ ಮನಸ್ಸಿಗೆ ತುಂಬಾ ಹತ್ತಿರವಾದ ಬ್ಲಾಗ್ ಸ್ನೇಹಿತರು ಕೂಡಿದ್ದಾರೆ. ನಿಮ್ಮನೆಲ್ಲ ಬೆಂಗಳೂರಿನಲ್ಲಿ ಭೆಟ್ಟಿಯಾಗುತ್ತೇನೆ ಎಂಬ ವಿಶ್ವಾಸ ನನ್ನದು. ಯಾವಾಗ, ಎಲ್ಲಿ ಎಂಬುದನ್ನು ಭಾರತಕ್ಕೆ ಬಂದು ತಿಳಿಸುತ್ತೇನೆ. ನಿಮ್ಮೆಲ್ಲರ ಫೋನ್ ನಂಬರ್ ನನ್ನ E-mail. Address ''koorsebabbi@gmail.com'' ಗೆ ದಯವಿಟ್ಟು ಕಳಿಸುತ್ತಿರಲ್ಲ. ನಾನು ಮೇ 7 ರಿಂದ 26 ರ ತನಕ ಭಾರತದಲ್ಲಿ ಇರುತ್ತೇನೆ. 

ಸಿಗುತ್ತಿರಲ್ಲ...

ಇನ್ನು ಸುಮಾರು 3 ವಾರಗಳ ಕಾಲ ನಿಮ್ಮೆಲ್ಲರ ಬ್ಲಾಗನ್ನು ಪೂರ್ತಿ ಓದಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕ್ಷಮೆ ಇರಲಿ. ಬಂದ ಕೂಡಲೇ ಮತ್ತೆ ಪ್ರೀತಿಯ ಓದುಗನಾಗಿ ಎಲ್ಲ ಬ್ಲಾಗನ್ನು ಓದುತ್ತೇನೆ. 

ಪ್ರೀತಿ, ವಿಶ್ವಾಸ ಸದಾ ಇರಲಿ.

ನಿಮ್ಮವ 

ಗುರು