Monday, December 5, 2011

ಮದುವೆಯಾಗಿ 4 ವರುಷ, ನೋಡಿರಣ್ಣ ಹೇಗಿದೆ....





ಮನದ ಗೆಳತಿಗೆ,
ಮನೆಯಂಗಳದಿ ಬೆಳದಿಂಗಳಿಗೆ ಚಂದಿರನೆ ಬರಬೇಕಾಗಿಲ್ಲ, ಮನದಂಗಳದಿ ಬೆಳಗುವ ಚಂದಿರಗೆ ನಗುವೊಂದೇ ಸಾಕಲ್ಲ. ನಮ್ಮಿಬ್ಬರ ಮನೆಯಂಗಳದ, ಮನದಂಗಳದ ಚಂದಿರ ಆಗಲೇ ಬೆಳೆಯುತ್ತಿದ್ದಾನೆ, ಅವನ ನಗು, ಅವನ ಅಳು, ಅವನ ನೋವು, ನಲಿವು ಎಲ್ಲವು ಕಣ್ಣೆದುರಿಗೆ ಸುಳಿಯುತ್ತಿದೆ. ಸಂಭ್ರಮಕ್ಕೆ ಎಣೆಯುಂಟೆ ಗೆಳತಿ.....

4  ವರುಷದ ಹಿಂದೆ 6  ನೆ ಡಿಸೆಂಬರ್ ಗೆ ಹಸೆಮಣೆ ಏರಿದ್ದ ನಿನಗೆ ತಾಳಿ  ಕಟ್ಟಿದ್ದೆ. ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ ನೋಡು, ಇಬ್ಬರು ನಕ್ಕಿದ್ದು, ನಕ್ಕಾಗ ನೆನಪಿಗೆ ಬಂದ ಆ ಹಾಡು...

''ನೆನಪಿದೆಯೇ ಗೆಳತಿ , ನಿನಗೆ ನೆನಪಿದೆಯೇ?
ನಾವಿಬ್ಬರೂ ಬಂದು, ನದಿಯ ದಡದಾಗೆ ನಿಂದು ''

ಎಲ್ಲವೂ ಇಂದು ಮನದ ಅಂಚಿನಲ್ಲಿ ಸುಳಿದಿದೆ. ನಿನ್ನೊಂದಿಗೆ ಎಷ್ಟು ನಕ್ಕಿದ್ದೇನೆ ಹಾಗೆಯೇ ಜಗಳ ಕೂಡಾ ಆಡಿದ್ದೇವೆ. ಸರಸ ವಿರಸ ಇರದ ಬದುಕು ಬದುಕೆನೇ ಗೆಳತಿ....ಪ್ರತಿ ಜಗಳಕ್ಕೂ ಒಂದು ಅದ್ಭುತ ಬೆಸೆಯುವ ಶಕ್ತಿಯಿದೆ. ಪ್ರತಿ ನಗುವಿಗೂ ಒಂದು ಅದ್ಭುತ ಜೀವ ನೀಡುವ ಚೈತನ್ಯವಿದೆ. ಆ 4  ವರುಷಗಳು ಹೇಗೆ ಕಳೆದವೋ ಗೊತ್ತಾಗಲೇ ಇಲ್ಲ. ಇಂದು ಮದುವೆಯ 4  ನೆ ವರುಷದ ಹರುಷಕ್ಕೆ ಸಾಕ್ಷಿ ಆಗುತ್ತಿದ್ದೇವೆ.

4  ನೆ ವರುಷದಲ್ಲಿ ಬದುಕಿಗೆ ಬೆಳಕಂತೆ ಅಭಿನವ ಬಂದಿದ್ದಾನೆ. ಅವನ ಲಾಲನೆ ಪಾಲನೆಯಲ್ಲಿ ನೀನು ನಿರತಳಾಗಿ ನನ್ನಿಂದ ದೂರ ದಲ್ಲಿ ಇದ್ದೀಯ. ಇಂದು ನಮ್ಮಿಬ್ಬರ ಮದುವೆಯ 4  ನೆ ವರುಷದ ಸಂಭ್ರಮಕ್ಕೆ ನೀನಿಲ್ಲ. ಒಬ್ಬನೇ ಕುಳಿತು ನಿನ್ನ ದಾರಿ ಕಾಯುತ್ತಿದ್ದೇನೆ. ನೀ ಬರದ ಈ ದಿನಕ್ಕೆ ಎಲ್ಲಿಯ ಮೆರಗು ಹೇಳು?

ಈ ಪತ್ರ ನಿನಗಾಗಿ....

''ಪತ್ರ ಬರೆಯಲ ಗೆಳತಿ, ಚಿತ್ರ ಬಿಡಿಸಲ,
ಹೇಗೆ ಹೇಳಲಿ ನನ್ನ ಎದೆಯ ತಳಮಳ''

4  ನೆ ವರುಷದ ಸಂಭ್ರಮಕ್ಕೆ ನಿನಗೆ ಹಾರ್ದಿಕ ಶುಭಾಶಯಗಳು. 4  ನೆ ವರುಷಕ್ಕೆ ''ಅಭಿನವ್'' ಕೊಡುಗೆ ಆಗಿ ಸಿಕ್ಕಿದ್ದಾನೆ, ಅದಕ್ಕೆ ನಾನು ನಿನಗೆ ಋಣಿ.

ಈ 4  ವರುಷಗಳಲ್ಲಿ ನಿನ್ನ ಮನಸನ್ನು ನಗಿಸಿದ್ದೆಷ್ಟೋ ಅಷ್ಟೇ ನೋಯಿಸಿದ್ದೇನೆ. ಕ್ಷಮಿಸುವೆಯಲ್ಲ ಗೆಳತಿ....

ನಿನ್ನ ದಾರಿ ಕಾಯುತ್ತಿದ್ದೇನೆ

ಈ ದಿನದ ಸಂಭ್ರಮಕ್ಕೆ ಶುಭಾಶಯಗಳು.

ನಿನ್ನ

ಗೆಳೆಯ