Wednesday, May 18, 2011

ಗಿಲಿ ಗಿಲಿ ಮ್ಯಾಜಿಕ್ ...

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಬಹು ರೋಚಕ ಮ್ಯಾಜಿಕ್ ಸ್ಪರ್ಧೆ ''ಗಿಲಿ ಗಿಲಿ ಮ್ಯಾಜಿಕ್''. ಸುಮಾರು ವರ್ಷಗಳ  ಹಿಂದೆ ಇದು ಕಡಲ ತೀರದ ಭಾರ್ಗವನ ತವರೂರು ಉಡುಪಿಯಲ್ಲಿ ನಡೆದಿತ್ತು. ಇದೇನಪ್ಪ, ಇವ ಮ್ಯಾಜಿಕ್ ಕಲಿಯೋಕೆ ಸ್ಟಾರ್ಟ್ ಮಾಡಿ ಬಿಟ್ನ ಅನ್ಕೋಬೇಡಿ. ಕಥೆ ವಿಶ್ವ ಮ್ಯಾಜಿಕ್ ಸ್ಪರ್ಧೆ ದಂತೂ ಖಂಡಿತ ಅಲ್ಲ. ಇದು ನನ್ನ ಕಾಲೇಜಿನ ದಿನಗಳಲ್ಲಿ ನನ್ನ ಆತ್ಮೀಯ ಸ್ನೇಹಿತರು ಮಾಡಿದ ರೋಚಕ ಮ್ಯಾಜಿಕ ನ ತುಣುಕುಗಳು ಅಷ್ಟೇ.


ಕಾಲೇಜಿನ ಆ ದಿನಗಳಲ್ಲಿ ಪಾಠದಲ್ಲಿ ಎಷ್ಟು ಆಸಕ್ತಿಯಿತ್ತೋ ಅಷ್ಟೇ ಆಸಕ್ತಿ ಎಲ್ಲ ವಿಷಯಗಳಲ್ಲಿ ಇತ್ತು. ಅದರಲ್ಲೂ, ಭಾಷಣ, ಆಶು ಭಾಷಣ, ನಾಟಕ, ನ್ರತ್ಯ ಹೀಗೆ ಕೈಯ್ಯಾಡಿಸದ ಯಾವುದೇ ಕ್ಷೇತ್ರ ಇರಲಿಲ್ಲ. ಆಮೇಲೆ ಎರಡು ದೋಣಿಯ ನಡುವೆ ಕಾಲನ್ನು ಇಟ್ಟು ಯಾವ ದೋಣಿಯನ್ನು ಹತ್ತದ ಕ್ಷಣ ಎದುರಾಗಿದ್ದೂ ಇದೆ. ಇಂತಿಪ್ಪ ಸಮಯದಲ್ಲಿ ಉಡುಪಿಯ ಪೂಜ್ಯ ಸ್ವಾಮೀಜಿಯವರ ಮೆಚ್ಚಿನ ಕಾಲೇಜು ಪೂರ್ಣ ಪ್ರಜ್ನ ದ ಕಾಲೇಜಿನ ವಾರ್ಷಿಕೋತ್ಸವ ದ ದಿನಾಂಕ ನಿಗದಿಯಾಗಿತ್ತು. ನನಗೆ ನೆನಪಿರುವಂತೆ ಅದು ಫೆಬ್ರುವರಿ 12 ಅನಿಸುತ್ತದೆ. ಅದಕ್ಕಾಗಿ ತಯಾರಿಯೋ ತಯಾರಿ. ಉಡುಪಿ ಸಾಂಸ್ಕ್ರತಿಕ ತವರು. ಇಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನೋಡುವುದೇ ಸಂಭ್ರಮ. ನಾನು ಉಡುಪಿಯಲ್ಲಿ ಇರುವಷ್ಟು  ಕಾಲ  ಭಾರತದ ಅನೇಕ ಸಾಧಕರ ಸಾಧನೆಯನ್ನು ಕಣ್ಣಾರೆ ಕಾಣುವ ಸೌಭಾಗ್ಯ ಪಡೆದಿದ್ದೇನೆ. ಸ್ವಾಮೀಜಿಯವರ ಎದುರಿನಲ್ಲಿ ಅವರು ನುಡಿಸಿದ  ವಾದ್ಯಗಳೆಷ್ಟೋ, ಹಾಡಿದ ಭಜನ್ ಗಳೆಷ್ಟೋ, ಮಾಡಿದ ಭಾಷಣ ಗಳೆಷ್ಟೋ  ,  ಒಟ್ಟಿನಲ್ಲಿ ಸಾಂಸ್ಕ್ರತಿಕ ರಾಜಧಾನಿಯಲ್ಲಿ ಧನ್ಯತಾ ಭಾವ ಅನುಭವಿಸಿದ್ದೇನೆ.

ಪೂರ್ಣ ಪ್ರಜ್ನ ಕಾಲೇಜಿನಲ್ಲಿ ನಡೆಯುವ ವಾರ್ಷಿಕೋತ್ಸವ ಕ್ಕೆ ಒಂದು ತಿಂಗಳ ಮೊದಲಿನಿಂದಲೂ ತಯಾರಿ ನಡೆದಿರುತ್ತದೆ. ಹಾಗೆಯೇ ನಮ್ಮ ಗೆಳೆಯರು ಮತ್ತು ನಾನು ನಾಟಕದಲ್ಲಿ ಇದ್ದೆವು. ಗೆಳೆಯರ ಗುಂಪಿನ ಇಬ್ಬರು ಆತ್ಮೀಯ ಗೆಳೆಯರು ''ಈ ಬಾರಿ ನಾವು ವಿನೂತನ ಕಾರ್ಯಕ್ರಮ ಕೊಡುತ್ತೇವೆ, ಅದನ್ನು ಈಗ ಹೇಳುವುದಿಲ್ಲ, ವೇದಿಕೆಯಲ್ಲಿ ನೋಡಿ ಆನಂದಿಸಿ'' ಎಂದರು. ನಮಗೋ, ಕುತೂಹಲ, ಇದೇನಪ್ಪ  ವಿನೂತನ ಕಾರ್ಯಕ್ರಮ ಎಂದು. ಅದನ್ನು ತಿಳಿದುಕೊಳ್ಳಲು ಗೆಳೆಯರ ರೂಮಿನ ಹತ್ತಿರ ಹಲವಾರು ಬಾರಿ ಸುಳಿದಿದ್ದೇವೆ. ಎಲ್ಲಾದರೂ ತಯಾರಿ ಮಾಡಿಕೊಳ್ಳುತ್ತಿದ್ದರೆ ತಿಳಿಯಲಿ ಎಂದು. ಆದರೆ ಆ ಗೆಳೆಯರು ಬಹಳ ಗೋಪ್ಯವಾಗಿ ಅವರ ಕಾರ್ಯಕ್ರಮ ಇಟ್ಟಿದ್ದರು. ಪ್ರತಿ ದಿನ ನಮ್ಮ ಎದುರು ಭೆಟ್ಟಿ ಅದಾಗ ತಮ್ಮ ಕಾರ್ಯಕ್ರಮದ ರೂಪು ರೇಷೆ ಗಳ ಬಗೆಗೆ ವರ್ಣನೆ, ಆದರೆ ಯಾವ ಕಾರ್ಯಕ್ರಮ ಎಂದು ಹೇಳುತ್ತಿರಲಿಲ್ಲ.

  ಒಂಥರಾ ಹಳೆಯ ಕಾಲದ ಮದುವೆಯಂತೆ. ಹೆಣ್ಣಿಗೆ ಮಾಲೆ ಹಾಕುವವರೆಗೂ
 ಮುಖ ನೋಡದಂತೆ ಕಾದ ವರ ನಂತೆ ನಮ್ಮ ಸ್ಥಿತಿ. 

ಆದರೆ ಆ ಇಬ್ಬರು ಗೆಳೆಯರು ಏನಾದರೂ ಹೊಸ ವಿಚಾರ ಖಂಡಿತ ನೀಡುತ್ತಾರೆ ಎಂಬ ಆತ್ಮ ವಿಶ್ವಾಸ. ಅದ್ಭುತ ಪ್ರತಿಭೆಯ ವ್ಯಕ್ತಿತ್ವ ಅವರದು. ಆ ನಿಟ್ಟಿನಲ್ಲಿ ನಾನು ಬಹಳಷ್ಟು ಅದೃಷ್ಟವಂತ ಎನ್ನಬಹುದು. ಯಾಕೆಂದರೆ ನನ್ನ ಸ್ನೇಹಿತರ ಬಳಗದಲ್ಲಿ ಅನೇಕ ಅದ್ವೀತೀಯ ಪ್ರತಿಭೆಗಳಿವೆ. ಇಂದಿಗೂ ಬೆಂಗಳೂರಿನ ಪ್ರತಿಷ್ಟಿತ ಕಂಪನಿಗಳ ಉನ್ನತ ಹುದ್ದೆಯಲ್ಲಿ ಆ ಗೆಳೆಯರಿದ್ದಾರೆ. ಬೆಂಗಳೂರಿಗೆ ಹೋದಾಗ ಅವರ ಮನೆಯಲ್ಲಿ ಕುಳಿತು ಪಕ್ಕಾ ಕಾಲೇಜಿನ ಹುಡುಗರಂತೆ ಕುಳಿತು ನಾವು ಹರಟುತ್ತಿದ್ದರೆ ನಮ್ಮ ಹೆಂಡತಿ ನಮ್ಮ ಮುಖವನ್ನೇ ನೋಡುತ್ತಿರುತ್ತಾರೆ. ರಾತ್ರಿ 9 ಘಂಟೆಗೆ ಮಾತನಾಡಲು ಆರಂಭಿಸಿದರೆ ಬೆಳಗಿನ ಜಾವ 3 ಘಂಟೆ ಆದರೂ ಸಮಯದ ಅರಿವು ಇರುವುದಿಲ್ಲ. ಯಾರಿಗೂ ಅಹಂಕಾರದ ಒಣ ಪ್ರತಿಷ್ಠೆ ಯಿಲ್ಲ. ಅಂಥಹ ಸಹ್ರದಯೀ ಸ್ನೇಹಿತರಿಗೆ ಸದಾ ಋಣಿ ನಾನು.

ವಾರ್ಷಿಕೋತ್ಸವ ಹತ್ತಿರ ಬರುತ್ತಿತ್ತು. ಎದೆಯೊಳಗೆ ಆತಂಕವೋ ಆತಂಕ. ನಮ್ಮ ನಾಟಕ ದ ಬಗ್ಗೆ ಅಲ್ಲ, ಆ ಸ್ನೇಹಿತರ ಕಾರ್ಯಕ್ರಮದ ಬಗ್ಗೆ. ಜೀವದ ಗೆಳೆಯರು ಅವರು, ನಮ್ಮಲ್ಲಿ ಮುಚ್ಚಿಟ್ಟು ಏನನ್ನೋ ಮಾಡುವ ಪಣ ತೊಟ್ಟಿದ್ದರು. ತೀರಾ ಕಾಲೇಜಿನ ವಾರ್ಷಿಕೋತ್ಸವಕ್ಕೆ ಒಂದು ವಾರ ಇರುವಾಗ ನಾವು ಜಾದೂ ಮಾಡುತ್ತೇವೆ ಎಂದಿದ್ದರು. ಇವರಿಗೆ ಜಾದೂ ಹೇಗೆ ಬರುತ್ತದೆ ಎಂಬ ಕುತೂಹಲ ನಮಗೆ. ಎಲ್ಲಿಂದ ಜಾದೂ ಕಲಿತಿದ್ದರೋ ಗೊತ್ತಿಲ್ಲ. ಆದರೆ ವಿನೂತನ ಜಾದೂ ಮಾಡುತ್ತೇವೆ. ಎಂದು ಘೋಷಿಸಿಯೇ ಬಿಟ್ಟರು. ಇಷ್ಟು ದಿನ ವಿನೂತನ ಕಾರ್ಯಕ್ರಮ ಇತ್ತು, ಇನ್ನು ಮೇಲೆ ವಿನೂತನ ಜಾದೂ. 

ಪೂರ್ಣ ಪ್ರಜ್ನ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮೂರು ದಿನ ಮೊದಲು ಎಲ್ಲ ಕಾರ್ಯಕ್ರಮಗಳನ್ನು ಸಂಬಂಧಿಸಿದ ಪ್ರೊಫೆಸರ್ ಗಳು ವೀಕ್ಷಿಸುತ್ತಾರೆ. ಕಾರಣ ಕೆಲವೊಮ್ಮೆ ಧರ್ಮಕ್ಕೆ ಸೂಕ್ಷ್ಮ ವಿಚಾರಗಳು ಎದುರಾದರೆ ಮುಂದೆ ಸಮಸ್ಯೆ ಆಗಬಾರದು ಎಂದು. ನಾವು ನಮ್ಮ ನಾಟಕ ಮಾಡಿ ತೋರಿಸಿದೆವು. ಹಸಿರು ನಿಶಾನೆ ಸಿಕ್ಕಿತು. ಇದೊಂದು ತರ ಸೆನ್ಸಾರ್ ಮಂಡಳಿ ಒಪ್ಪಿಗೆ ಪಡೆದ ಹಾಗೆ. ಪುಣ್ಯಕ್ಕೆ ''A'' Grade, ''B'' Grade ಅಂತ ಕೊಡೋಲ್ಲ :)

ನಮ್ಮ ನಾಟಕದ ನಂತರ ಒಂದು ನ್ರತ್ಯ ವೀಕ್ಷಿಸಿದ ನಂತರ ನನ್ನ ಆತ್ಮೀಯ ಸ್ನೇಹಿತರ ಜಾದೂ ಬಂತು. ಇದು ರಿಹರ್ಸಲ್ ಆದ್ದರಿಂದ ಎಲ್ಲ ಜಾದೂ ತೋರಿಸುವಂತೆ ಇರಲಿಲ್ಲ. ಆದ್ದರಿಂದ ಒಂದು ಹಗ್ಗ ತೆಗೆದು ಏನೇನೋ ಮಂತ್ರ ಹೇಳಿ ಹಗ್ಗವನ್ನು ಗಾಳಿಯಲ್ಲಿ ನಿಲ್ಲಿಸಿಬಿಟ್ಟರು. ಉಳಿದ ಹುಡುಗರು ಚಪ್ಪಾಳೆ ಹೊಡೆದರು. ಪ್ರದರ್ಶನಕ್ಕೆ ಹಸಿರು ನಿಶಾನೆ ಸಿಕ್ಕಿತು. ಅಲ್ಲಿಂದ ಹೊರಗೆ ಬಂದ ಮೇಲೆ ನನ್ನ ಜಾದೂ ಗೆಳೆಯರು ಹೇಳಿದರು ''ಇವತ್ತು ನೀವು ನೋಡಿದ್ದು ಏನೂ ಅಲ್ಲ, ಆ ದಿನ ನೋಡಿ, ನಿಮಗೆಲ್ಲ ಆಶ್ಚರ್ಯ ಎನ್ನುವ ಜಾದೂ ಮಾಡುತ್ತೇವೆ''. ಈಗ ಅದನ್ನು ಹೇಳುವುದಿಲ್ಲ ಎಂದು ಮತ್ತೆ ಗೋಡೆಯ ಮೇಲೆ ದೀಪ ಇಟ್ಟರು. ಈ ಕುತೂಹಲವೇ ಹಾಗೆ. ಇಟ್ಟು ಕೊಂಡಷ್ಟೂ ಆಸಕ್ತಿ ಹೆಚ್ಚು. ಪೆಟ್ಟಿಗೆಯಲ್ಲಿ ಬೀಗ ಹಾಕಿಟ್ಟ ವಸ್ತುವಿನ ಹಾಗೆ. ಒಳಗೆ ಏನಿದೆ ಏನಿದೆ ಎಂಬ ಆಸಕ್ತಿ. ಒಮ್ಮೆ ಪೆಟ್ಟಿಗೆಯ ಬಾಗಿಲು ತೆಗೆದರೆ ಮತ್ತೆ ಯಾವ ಆಸಕ್ತಿಯು ಇಲ್ಲ. ಅಂತೂ ನಮ್ಮ ಕುತೂಹಲವನ್ನು ತಣಿಸದೆ ವಾರ್ಷಿಕೋತ್ಸವದ ದಿನದ ವರೆಗೂ ಕಾಯ್ದುಕೊಂಡು ಬಂದರು.

ಆ ದಿನ ಬಂದೆ ಬಿಟ್ಟಿತು. ಪೂರ್ಣಪ್ರಜ್ಞ ಕಾಲೇಜಿನ ವಾರ್ಷಿಕೋತ್ಸವ 3 ದಿನ ನಡೆಯುತ್ತದೆ. ಮೊದಲ ದಿನ ಸ್ವಾಮೀಜಿಯವರ ಅಶಿರ್ವಚನ, ನಂತರ ಮುಖ್ಯ ಅಥಿತಿಗಳ ಭಾಷಣ, ಎರಡನೇ ದಿನ ಕಾಲೇಜಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಹಾಗೂ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಕಾಲೇಜಿಗೆ ಕೀರ್ತಿ ತಂದು ಕೊಟ್ಟ ಒಬ್ಬ ಹುಡುಗನಿಗೆ ಮತ್ತು ಹುಡುಗಿಗೆ ಕ್ರಮವಾಗಿ ''ಆದರ್ಶ ವಿದ್ಯಾರ್ಥಿ'' ಮತ್ತು ''ಆದರ್ಶ ವಿದ್ಯಾರ್ಥಿನಿ'' ಪ್ರಶಸ್ತಿ ಸ್ವಾಮೀಜಿಯವರ ಆಶಿರ್ವಾದದೊಂದಿಗೆ  ನೀಡಲಾಗುತ್ತದೆ. ಜಾದೂ ಮಾಡುವ ಇಬ್ಬರು ಗೆಳೆಯರಲ್ಲಿ ಒಬ್ಬ ಗೆಳೆಯನಿಗೆ ''ಆದರ್ಶ ವಿದ್ಯಾರ್ಥಿ'' ಸಿಕ್ಕಿದ್ದು ನಮ್ಮೆಲ್ಲರ ಸಂತೋಷವನ್ನು ಇಮ್ಮಡಿಸಿತ್ತು. ಅಂತೆಯೇ ವಿಜ್ಞಾನ ವಿಭಾಗದ ಸುಮಾ (ಹೆಸರು ಬದಲಿಸಲಾಗಿದೆ) ಎನ್ನುವವಳಿಗೆ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿ ಲಭಿಸಿತು. 

ಇನ್ನು ಮೂರನೇ ದಿನ ಇರುವುದೇ ಮನರಂಜನೆಗೆ. ಆ ದಿನ ಸ್ವಾಮೀಜಿಯವರು ಬರುವುದಿಲ್ಲ. ಹುಡುಗರದೆ ದರ್ಬಾರು. ಬೆಳಗಿನಿಂದಲೇ ಸಂಭ್ರಮದ ವಾತಾವರಣ. ಹತ್ತು ಹಲವು ವೇಷ ತೊಟ್ಟ ಹುಡುಗ ಹುಡುಗಿಯರ ನೋಡುವುದೇ ಒಂದು ಸಂಭ್ರಮ. ನಾವೆಲ್ಲರೂ ನಮ್ಮ ಸ್ನೇಹಿತರ ಜಾದೂ ಕಾರ್ಯಕ್ರಮ ನೋಡಲು ಉತ್ಸುಕರಾಗಿದ್ದೆವು. ವೇದಿಕೆಯ ಮೇಲಿಂದ ''ಈಗ ಜಾದೂ ಪ್ರದರ್ಶನ'' ಎಂದ ಕೂಡಲೇ ಚಪ್ಪಾಳೆಯ ಸುರಿಮಳೆ. ಕಾರಣ ಜಾದೂ ಮಾಡುವ ಒಬ್ಬ ಗೆಳೆಯ ಆದರ್ಶ ವಿದ್ಯಾರ್ಥಿ  ಬೇರೆ. ಸುಮಾರು ಮೊದಲ 20 ನಿಮಿಷ ವಿಧ ವಿಧದ ಜಾದೂ ಮಾಡಿ ತೋರಿಸಿದರು. ತಮ್ಮ ಹಾಸ್ಯದ ಮೂಲಕ ನಡು ನಡುವೆ ಪ್ರೇಕ್ಷಕರನ್ನು ರಂಜಿಸುತ್ತ ಹಗ್ಗವನ್ನು ನಿಲ್ಲಿಸುವುದು, ಹಗ್ಗವನ್ನು ಹಾವಿನಂತೆ ಓಡಿಸುವುದು ಎಲ್ಲ ಮಾಡಿ ಜನರ ''ಶಹಬ್ಬಾಸ್'' ಗಿಟ್ಟಿಸಿದರು. ಇನ್ನೇನು ಜಾದೂ ಮುಗಿಯುವ ಹಂತ , ಜಾದೂ ಗೆಳೆಯ ಮೈಕ್ ನ ಹತ್ತಿರ ಬಂದು,
  ''ಇದೀಗ ಇವತ್ತಿನ ಕೊನೆಯ ಹಾಗೂ ಅದ್ಭುತ ಜಾದೂ, ನಿಮ್ಮ ಮನಸಿನಲ್ಲೇ ನೀವು ಏನೇ ಅಂದುಕೊಳ್ಳಿ,
 ಅದು ನಿಮ್ಮೆದುರಿಗೆ ಇಡುತ್ತೇವೆ, ಇಲ್ಲ ಕೊಡುತ್ತೇವೆ'
ಎಂದುಬಿಟ್ಟರು. ಒಮ್ಮೆಲೇ ನಿಶ್ಯಬ್ದ. ಮನಸಿನಲ್ಲಿ ಅಂದುಕೊಂಡಿದ್ದೆಲ್ಲ ಕೊಡುವಷ್ಟು  ಮಹಾನ ಜಾದೂ ಗಾರರು ಇವರಲ್ಲ ಎಂದು ನಮಗೆ ಗೊತ್ತಿತ್ತು. ಆದರೆ ಮಾತಿನಿಂದ ಹಿಂದೆ ಸರಿಯುವಂತೆ ಇಲ್ಲ.   ನಮ್ಮ ಎದೆ ''ಢವ ಢವ'' ಎನ್ನತೊಡಗಿತು.

ಕೊನೆಯ ಜಾದೂ ಆರಂಭವಾಗೆ ಬಿಟ್ಟಿತು. ಪ್ರೇಕ್ಷಕರಲ್ಲಿ ಒಬ್ಬನನ್ನು ಕರೆದು ಒಂದು ಚೀಲದೊಳಗೆ ಕೈ ಹಾಕಿ ಮನಸಿನಲ್ಲಿ ಏನಾದರೂ ನೆನಪು ಮಾಡಿಕೊ ಎಂದರು, ಅವನು ಏನು ನೆನಪು ಮಾಡಿ ಕೊಂಡನೋ  ಏನೋ, ಒಡನೆಯೇ ಒಂದು ಸುಂದರ ಪೆನ್ನು ಅವನ ಕೈಯ್ಯಲ್ಲಿ ಬಂತು. ಮತ್ತೊಮ್ಮೆ ಚಪ್ಪಾಳೆ. ಪುನಃ ಇನ್ನೊಬ್ಬ ಬಂದ, ಕೈ ಹಾಕಿದ, ಸುಂದರ ಮೊಬೈಲ್ ಅವನ ಕೈಯಲ್ಲಿ ಇತ್ತು. ಮತ್ತೆ ಚಪ್ಪಾಳೆ. (ಮೊದಲೆ ಅವರಿಗೆ ಬೇಕಾದ ಕೆಲವು ವಿಧ್ಯಾರ್ಥಿಗಳಿಗೆ ವೇದಿಕೆಯ ಮೇಲೆ ಬರಲು ಹೇಳಿದ್ದರು ಎಂಬುದು ಆಮೇಲೆ ತಿಳಿಯಿತು).

ಕೊನೆಗೆ ಒಂದು ಹುಡುಗಿಯನ್ನು ಬರಲು ಹೇಳಿದರು (ಮೊದಲೆ ಆ ಹುಡುಗಿಗೆ ಬರಲು ಹೇಳಿದ್ದರು). ಇನ್ನೇನು ಆ ಹುಡುಗಿ ಹೊರಡಲು ರೆಡಿ ಆಗುತ್ತಿದ್ದಾಳೆ ಅನ್ನುವಷ್ಟರಲ್ಲಿ ಅವಳ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸುಮಾ (ಆದರ್ಶ ವಿದ್ಯಾರ್ಥಿನಿ) ಎದ್ದು ಹೊರಟೇ ಬಿಟ್ಟಳು. ಈಗ ಜಾದೂ ಗೆಳೆಯರು ಅವಾಕ್ಕಾದರು. ಅವರಿಗೆ ಇದೊಂದು ಶಾಕ್. ಅವರು ಮೊದಲೆ ನಿಗದಿಪಡಿಸಿದ ಹುಡುಗಿ ಈಗ ಏನು ಮಾಡಲಾಗದೆ ಅಸಹಾಯಕಿ. ಸುಮಾ ವೇದಿಕೆ ಹತ್ತಿದಳು. ಇವರು ಹೇಳಿದಂತೆ ಮನಸಿನಲ್ಲಿ ಏನನ್ನೋ ನೆನೆದು ಚೀಲದಲ್ಲಿ ಕೈ ಹಾಕಿದಳು. ಜಾದೂ ಗೆಳೆಯರು ಮೈಕಿನ ಹತ್ತಿರ ಬಂದು  ''ಗಿಲಿ ಗಿಲಿ ಮ್ಯಾಜಿಕ್, ಗಿಲಿ ಗಿಲಿ ಮ್ಯಾಜಿಕ್'' ಎನ್ನುತ್ತಾ ಅವಳಿಗೆ ಮನಸಿನಲ್ಲಿ ನೆನೆದಿದ್ದು ಚೀಲದಲ್ಲಿ ಇದೆ, ತೆಗೆದುಕೋ ಎಂದರು. ಅವಳು ಚೀಲದಲ್ಲಿ ಕೈ ಹಾಕಿ ಏನೋ ತಾಗಿದಂತಾಗಿ ಅದನ್ನು ಹಿಡಿದುಕೊಂಡು ಪ್ರೇಕ್ಷಕರ ಕಡೆಗೆ ತಿರುಗಿ ಕೈ ಎತ್ತಿದಳು, ಒಮ್ಮೆಲೇ ಕಾಲೇಜಿನ ಹುಡುಗರು ಗೊಳ್ಳೆಂದು ನಕ್ಕರೆ ಎಲ್ಲ ಉಪನ್ಯಾಸಕರು ಗಂಭೀರವಾದರು. ಕಾರಣ ಇಷ್ಟೇ

 ''ಅವಳು   ಕೈಯಲ್ಲಿ ಹಿಡಿದುಕೊಂಡದ್ದು ಒಂದು ಬ್ರಾ'' 

ಜಾದೂ ಗೆಳೆಯ ಬೇರೆ ಮೈಕಿನಲ್ಲಿ ಹೇಳುತ್ತಿದ್ದಾನೆ ''ನೋಡಿ ನಮ್ಮ ಕೊನೆಯ ಜಾದೂ, ಅವಳು ಮನಸಿನಲ್ಲಿ ನೆನಪು ಮಾಡಿಕೊಂಡಿದ್ದು ಅವಳ ಕೈಯಲ್ಲಿ ಇದೆ'' ಎಂದು.

ಸುಮಾಳ ಕಣ್ಣಲ್ಲಿ ನೀರು. ಜಾದೂ ಮುಗಿಸಿದ ಗೆಳೆಯರು ವೇದಿಕೆ ಇಳಿದರು. ಇಳಿದವರೇ ಮೊದಲು, ಮೊದಲೆ ತಿಳಿಸಿದ ಹುಡುಗಿಗೆ ದಬಾಯಿಸಿದರು ''ನೀನು ಬರುವ ಬದಲು ಅವಳನ್ನು ಯಾಕೆ ಕಳಿಸಿದೆ'' ಎಂದು. ಆದರೆ ಕಾಲೇಜಿನ ಹುಡುಗರು ಇನ್ನೂ ಚಪ್ಪಾಳೆ ಹಾಕುತ್ತಲೇ ಇದ್ದರು. ಎಷ್ಟೆಂದರೂ ಆಗಿನ ವಯಸ್ಸೇ ಹಾಗೆ, ಚೇಷ್ಟೆ , ಕುಚೇಷ್ಟೆ ಗಳು ಇದ್ದಿದ್ದೆ ಅಲ್ಲವೇ.

ಮರುದಿನ ಬೆಳಿಗ್ಗೆ 3 ದಿನ ಮೊದಲೆ ಕಾರ್ಯಕ್ರಮದ ರಿಹರ್ಸಲ್ ನೋಡಿದ್ದ ಪ್ರೊಫೆಸರ್ ಇವರ ಹತ್ತಿರ ಬಂದು '' ಇದೇನಿದು ನಿಮ್ಮ ಜಾದೂ, ಆ ದಿನ ನನಗೆ ಹಗ್ಗ ನೇರ ಮಾಡಿ, ಹಾವಿನಂತೆ ಹಗ್ಗ ನಿಲ್ಲಿಸಿ ಇದನ್ನೇ ನಮ್ಮ ಮೇನ್ ಜಾದೂ ಅಂದಿರಿ, ನಿನ್ನೆ ಬೇರೆಯದೇ ತೋರಿಸಿದಿರಿ, ಅದು ಒಬ್ಬ ಆದರ್ಶ ವಿದ್ಯಾರ್ಥಿನಿ ಗೆ , ಛೆ ಛೆ ''

ನಮಗೋ ನಗುವೇ ನಗು, ವಿನೂತನ   ಜಾದೂ ನೋಡಿ, ಆ ಗೆಳೆಯರನ್ನು ಚುಡಾಯಿಸಿದ್ದೆ ಚುಡಾಯಿಸಿದ್ದು. ಇಂದಿಗೂ ಬೆಂಗಳೂರಿಗೆ ಹೋದಾಗ ಗೆಳೆಯರೆಲ್ಲ ಒಟ್ಟಿಗೆ ಸೇರಿದಾಗ ಜಾದೂವಿನ ವಿಚಾರ ಬರುತ್ತದೆ. ಮತ್ತೆ ನಗು. ಆ ಇಬ್ಬರು ಗೆಳೆಯರು ಬೆಂಗಳೂರಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ ಆ ದಿನಗಳ ನೆನಪುಗಳು ಮಾತ್ರ ಸದಾ ಮನಸಿನಲ್ಲಿ ಇವೆ.