Tuesday, June 30, 2009

ಸಾಗರದಾಚೆಯ ಇಂಚರ...

ಇಂಚರವೋ, ಇಂಚರವೋ

ಸಾಗರದಾಚೆಯ ಇಂಚರವೋ

ಗೀತೆಯಲಿ, ಸಂಗೀತದಲಿ, ಅಂಚಲಿ ಮಿಂಚಿದ ಇಂಚರವೋ


ಜಿಗಿದಾಡಿವೆ ಬಾನಿಗೆ ಹಕ್ಕಿಗಳು

ಗೂಡನು ಮರೆತು ಹೋಗದಿರಿ

ನಭದಲಿ ಸೆಳೆಯುವ ಛಲವಿಹುದು

ಬೇರನು ಬಿಟ್ಟು ತೊಲಗದಿರಿ


ಹೊಸತನ, ಹೊಸಕ್ಷಣ ಹೊಸದು ನಿಜ

ಹೊಸದರಲಿ ಎಲ್ಲವೂ ಸಹಜ

ನಿಮ್ಮೆಲ್ಲರ ತನುವಿದು ಜತನದಲಿ

ಸತತವೂ ಇಹುದು ತಾಯ್ನಾಡಿನಲಿ


ಗೂಡಿಗೆ ಅದರದೇ ಅಧರವಿದೆ

ಉದರವ ಪೊರೆಯುವ ಸೆಳೆತವಿದೆ

ಸಾಗರದಾಚೆಗೆ ಸೇರದಿರು

ನೆಲವಿದು ನಿನಗೆ ಕಾಯುತಿದೆ

Wednesday, June 17, 2009

ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತೆ..


- ಗುರು ಬಬ್ಬಿಗದ್ದೆ
ಜಗತ್ತೇ ಹಾಗೆ, ಇಂದಿನ ಸೂರ್ಯ ಸಂತಸ ನೀಡಿದರೆ ನಾಳೆ ಅದೇ ಸೂರ್ಯನ ತಾಪ ಹೆಚ್ಚಾದಾಗ ಖಳನಾಯಕನೂ ಆಗುತ್ತಾನೆ. ಅದು ಪ್ರತಿಯೊಂದು ಜೀವ ಜಂತುಗಳಿಗೂ ಅನ್ವಯಿಸುತ್ತದೆ ಅಲ್ಲವೇ? ಇಂದು ಇಷ್ಟವಾದ ವ್ಯಕ್ತಿ ನಾಳೆ ಕಷ್ಟವಾಗುತ್ತಾನೆ. ಮೊನ್ನೆ ಮೊನ್ನೆ ಯವರೆಗೆ ಇಷ್ಟವಾದ ಅಮ್ಮ-ಅಪ್ಪ ನ ಮೇಲೆ ಒಮ್ಮೆಲೇ ಕೋಪ ಬರುತ್ತದೆ. ಮನದನ್ನೆಯ ಮುನಿಸಿಗೆ ನಾವೇ ಕಾರಣವಾಗುತ್ತೇವೆ. ಹೀಗೇಕೆ? ಎಂದು ವಿಚಾರಿಸಿದರೆ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು ಮನಸ್ಸನ್ನು ಕೊರೆಯಲು ಆರಂಬಿಸುತ್ತವೆ. ಪ್ರಶ್ನೆಗಳೇ ಇನ್ನೊಂದು ಪ್ರಶ್ನೆಯಾಗಿ ಸಮಸ್ಯೆಗಳ ಸುರಿಮಳೆಯನ್ನೇ ಸೃಷ್ಟಿಸುತ್ತವೆ. ಮೊನ್ನೆ ಮೊನ್ನೆಯ ತನಕ ಇಷ್ಟವಾಗುತ್ತಿದ್ದ ಬಿ.ಜೆ.ಪಿ. ಚುನಾವಣೆಯಲ್ಲಿ ಯಾಕೆ ಕಷ್ಟವಾದಳೋ? ಗೊತ್ತಿಲ್ಲ. ಮೆಚ್ಚಿದ ಮಡದಿಗೆ ಕಿಚ್ಚು ಹಚ್ಚುವ ತವಕ ಅದೆಲ್ಲಿಂದ ಬಂತೋ? ಗೊತ್ತಿಲ್ಲಾ. ನೆಚ್ಚಿದ ಸ್ನೇಹಿತನಲ್ಲಿ ಕಿಚ್ಚಾಡಿದ ಮನಸ್ಸು ಹೀಗೆಕಾಯಿತೋ ಗೊತ್ತಿಲ್ಲ. ಇದು ಪ್ರತಿಯೊಬ್ಬನ ಜೀವನದಲ್ಲೂ ಒಂದು ಪರೀಕ್ಷಾ ಕಾಲ. ಒಂದು ಸಾಹಸದ ಘಟ್ಟ. ಇದನ್ನು ಅತ್ಯಂತ ತಾಳ್ಮೆಯಿಂದ ದಾಟಬೇಕು. ಅತ್ತ ಧರಿ, ಇತ್ತ ಪುಲಿ ಎನ್ನುವ ಮನಸ್ಥಿತಿ. ಇದೇನಪ್ಪ ಏನೇನೋ ಬಡ ಬಡಾಯಿಸ್ತ ಇದಾನೆ. ತಲೆ ಗಿಲೆ ಕೆಟ್ಟು ಹೋಯ್ತಾ ಅಂತಿರಾ? ನಾನು ಹೇಳೋಕೆ ಹೊರಟಿರೋದು ಮೊನ್ನೆಯಷ್ಟೇ ಕ್ರಿಕೆಟ್ ನಿಂದ ಸೂಪರ್ 8 ರ ಘಟ್ಟದಿಂದ ಒಂದೂ ಪಂದ್ಯ ಗೆಲ್ಲಲಾಗದೆ ನಿರ್ಗಮಿಸಿದ ಧೋನಿ ಬಳಗದ ಕುರಿತು. ಹೊರ ಬಿದ್ದ ಕೂಡಲೇ ಹೊರಟ ಮೊದಲ ಉದ್ಘಾರ '' ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತೆ?'' ಎನ್ನೋದು.
ವಿಶ್ವ ಚುಟುಕು ಕ್ರಿಕೆಟ್ ನ ಆಧಿಪತ್ಯ ಸ್ಥಾಪಿಸಿದ್ದ ಭಾರತ ಇಷ್ಟೊಂದು ಹೀನಾಯವಾಗಿ ಸೋಲುತ್ತದೆ ಎಂದರೆ ಎಂಥವರಿಗೂ ಬೇಸರವಾಗದೆ ಇರದು. ಅದು ನಿನ್ನೆ 130 ರನ್ ಹೊಡೆಯಲಾಗದೆ ಹೋದದ್ದು. ಘಟಾನುಘಟಿಗಳ ದಂಡೆ ಇದ್ದರೂ ದಕ್ಷಿಣ ಆಫ್ರಿಕಾದ ಕರಾರುವಕ್ಕಾದ ದಾಳಿ ಎದುರಿಸಲಾಗದೆ ಇದ್ದದ್ದು ಮಿಸ್ಟರ್ ಕೂಲ್ ಖ್ಯಾತಿಯ (ಅಪಖ್ಯಾತಿ ) ಧೋನಿಯ ನಾಯಕತ್ವದ ಬಗೆಗೆ ಹಲವು ಸಂಶಯಗಳನ್ನು ಬೆಟ್ಟು ಮಾಡಿದೆ. ಏನಾಯಿತು ಭಾರತ ಕ್ರಿಕೆಟ್ ಗೆ. ಸೋತದ್ದು ಬೇಸರವಿಲ್ಲ. ಸೋಲು ಗೆಲುವಿನ ಸೋಪಾನ ಅನ್ನೋಣ. ಆದರೆ ಸೋತ ರೀತಿ ಇದೆಯಲ್ಲ ಅದು ನಾಚಿಕೆ ತರುವಂತದ್ದು. ನಮ್ಮ ನಾಯಕ , ನಾಯಕತ್ವದ ಕೆಲವು ನಿರ್ಧಾರಗಳು ನಮ್ಮನ್ನು ಸೋಲಿನ ಅಂಚಿಗೆ ದೂಡಿದವು ಎಂದರೆ ತಪ್ಪಾಗಲಿಕ್ಕಿಲ್ಲ. ನಿಜ, ಇಲ್ಲಿ ಕುಳಿತು ಬರೆಯುವುದು ಸುಲಭ, ಆದರೆ ಅಲ್ಲಿ ಮೈದಾನದಲ್ಲಿ ಅಂಥಹ ಒತ್ತಡ ನಿರ್ವಹಿಸುವುದು ಎಷ್ಟು ಕಷ್ಟ ಎನ್ನುವುದು ಧೋನಿಗೆ ಮಾತ್ರ ಗೊತ್ತು. ''ಅದಕ್ಕೆ ಅಲ್ಲವೇ ಅವನನ್ನು ನಾಯಕನನ್ನಾಗಿ ಮಾಡಿದ್ದು''. ಅಷ್ಟಕ್ಕೂ ಧೋನಿ ತೆಗೆದುಕೊಂಡ ನಿರ್ಧಾರವಾದರೂ ಎಂಥದ್ದು. ಮಹತ್ವದ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಇಶಾಂತ ಶರ್ಮನಿಗೆ ಓವರ್ ನೀಡಿದ್ದು. ಅವನೋ, ''ಬಾಲಿಂಗ್ ಮಾಡುವುದು ರನ್ ಕೊಡುವುದಕ್ಕೆ ಎಂದು ತಿಳಿದಿರುವಂತಿದೆ''. ಒಂದಾದರೂ ಪಂದ್ಯದಲ್ಲಿ ಒಳ್ಳೆಯ ಪ್ರದರ್ಶನ ಅವನಿಂದ ಬಂದಿದ್ದರೆ ಮುಂದುವರಿಸಬಹುದಿತ್ತು. ಆದರೂ ಅವನು ತಂಡದಲ್ಲಿ ಮುಂದುವರಿದ. ಮಹತ್ವದ ಓವರ್ ಮಾಡಿದ ಹಾಗೂ ನಮ್ಮ ತಂಡದಲ್ಲೇ ಇದ್ದು ವೆಸ್ಟ್ ಇಂಡೀಸ್ ಪರವಾಗಿ ಆಡಿದ. ಆದರೂ 153 ರನ್ ಗೆಲ್ಲಲು ಸಾಕಾಗಿತ್ತು. ಕೆಟ್ಟ ಫಿಲ್ಡಿಂಗ್, ಕೆಟ್ಟ ಬೌಲಿಂಗ್, ಒಂದೇ ಎರಡೇ? ಅಂತೂ ಅಲ್ಲಿ ಸೋತೆವು.
ಆದರೂ ಭಾರತ ಕ್ರಿಕೆಟ್ ನ ವಿಶೇಷ ಶಕ್ತಿ ಎಂದರೆ ಸೋತಾಗ ಮೈ ಕೊಡವಿ ನಿಂತು ಎದ್ದು ಬಂದು ಎದುರಾಳಿಯ ಮೇಲೆ ಪ್ರಹಾರ ಮಾಡಿ ಗೆಲುವನ್ನು ತಮ್ಮದಾಗಿಸಿಕೊಳ್ಳುವುದು. ಇದನ್ನು ಎಷ್ಟೋ ಭಾರಿ ನೋಡಿದ್ದೇವೆ. ಇದಕ್ಕೆ ಬೆಂಬಲ ಕೊಡುವಂತೆ ಇಂಗ್ಲಂಡ್ ಪಂದ್ಯಕ್ಕೆ ಮುಂಚೆ ಧೋನಿ '' ನಾವು ಸಿಡಿದೆದ್ದು ಬರುತ್ತೇವೆ, ಗೆಲ್ಲುತ್ತೇವೆ, ಕಾದು ನೋಡಿ'' ಎಂಬಂಥ ಹೇಳಿಕೆ ನೀಡಿ ಎಲ್ಲ ಭಾರತೀಯರ ಮನದಲ್ಲಿ ಪುಳಕವನ್ನೇ ನೀಡಿದ. ಅದಕ್ಕೆ ತಕ್ಕಂತೆ ಇಂಗ್ಲಂಡ್ ಪಂದ್ಯದಲ್ಲಿ ಮೊದಲಿಗೆ ಅದ್ಭುತ ಬೌಲಿಂಗ್ ಪ್ರದರ್ಶನ ಬಂತು. ಅಂತೂ ಭಾರತ ಇಂದು ಗೆಲ್ಲುತ್ತದೆ ಎಂದೂ ಕಾಯುತ್ತ ಕುಳಿತದ್ದೇ ಬಂತು.
ಮಹತ್ವದ ಪಂದ್ಯದಲ್ಲಿ ಸ್ಟಾರ್ ಬೌಲರ್ ಓಜಾ ನನ್ನು ಆಡಿಸದೆ ರವಿಂದ್ರ ಜಡೇಜಾ ನನ್ನು ಆಡಿಸಿದರು. ಅದಕ್ಕೆ ಕೊಟ್ಟ ಕಾರಣ '' ಆತ ಒಬ್ಬ ಒಳ್ಳೆ ಬೌಲರ್ ಮಾತ್ರವಲ್ಲ, ಒಳ್ಳೆ batsman ಕೂಡಾ, ಒಳ್ಳೆ fielder ಕೂಡ''. ಹೇಳಿದ್ದಕ್ಕೆ ತಕ್ಕಂತೆ ಒಳ್ಳೆಯ ಬೌಲಿಂಗ್ ಏನೋ ಮಾಡಿದ. ಆದರೆ ಇಂಥಹ ಮಹತ್ವದ ಪಂದ್ಯದಲ್ಲಿ ಹರ್ಭಜನ್ wide ಜೊತೆ ಜುಗಲ್ ಬಂಧಿಯಾಡುತ್ತಿದ್ದ. ಮಹತ್ವದ ಪಂದ್ಯದಲ್ಲಿ ಆಟ ಹೊಸ ತಂತ್ರ ಕಲಿಯುತ್ತಿದ್ದ. ಚೆಂಡನ್ನು ಲೆಗ್ ಸೈಡ್ ನತ್ತ ತಿರುಗಿಸುತ್ತಾ ಬ್ಯಾಟ್ಸ್ ಮ್ಯಾನ್ ಗಳನ್ನೂ ಕಂಗೆಡಿಸುವ ಅವನ ಕಲೆ (ಅಲ್ಲ ಕೊಲೆಯೋ) ಭಾರತಕ್ಕೆ ಮುಳುವಾಯಿತು.
ಆದರೂ ಪಂದ್ಯ ಗೆಲ್ಲಬಹುದಿತ್ತು. ಆದರೆ ಯುವರಾಜ್ ನನ್ನು ಕಳಿಸುವ ಜಾಗಕ್ಕೆ ರವಿಂದ್ರ ಜಡೇಜಾ ನನ್ನು ಯಾಕೆ ಕಳಿಸಿದರೋ ಗೊತ್ತಿಲ್ಲ. ಅವನು ಮಾತ್ರ ಭವಿಷ್ಯದ ಅತ್ಯುತ್ತಮ Test Batsman ತಾನು ಎಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟ. ಎಂಥಹ ಎಸೆತಗಳಿಗೂ ತಲೆ ಬಾಗಿ ನಮಸ್ಕರಿಸಿದನೆ ಹೊರತು ತಲೆ ಎತ್ತಿ ಹೊಡಿಯಲಿಲ್ಲ. ಅಲ್ಲಿಗೆ ರನ್ ರೇಟ್ ಕೂಡ ಕೈ ತಪ್ಪಿತ್ತು. ನಂತರ ಸೋಲು ಕೈ ಹಿಡಿಯಿತು. ಕೊನೆಯಲ್ಲಿ ಮಾಡಿದ ಯಾವ ಪ್ರಯತ್ನಗಳೂ ಫಲ ನೀಡಲಿಲ್ಲ. ಭಾರತ ಹೊರಗೆ ಬಿತ್ತು . ಅಲ್ಲಾ ತಾವೇ ತಮ್ಮ ಘೋರಿ ತೋಡಿಕೊಂಡರೋ? ಅವರನ್ನೇ ಕೇಳಬೇಕು.
ಕ್ರಿಕೆಟ್ ಭಾರತಕ್ಕೆ ಕೇವಲ ಆಟವಲ್ಲ. ಬಿಲಿಯನ್ ಗಟ್ಟಲೆ ಜನರ ಭಾವನೆಗಳೊಂದಿಗೆ ಬೆರೆತ ಸೇತುವೆಯದು. ನಮ್ಮೆಲ್ಲ ಸಮಯ ಬದಿಗಿಟ್ಟು ಕ್ರಿಕೆಟ್ ಎಂಬ ಮೂರ್ಖ ಆಟ ಗೊತ್ತಿದ್ದರೂ ನೋಡುತ್ತೇವೆ. ಇಷ್ಟೊಂದು ಬೆಂಬಲ ಇರುವ ಆಟಗಾರರು ಮೈದಾನದಲ್ಲಿ ಪಕ್ಕ ವ್ರತ್ತಿಪರತೆಯನ್ನು ತೋರಿಸದೇ ಇದ್ದರೆ ನೋವಾಗುವುದು ಸಹಜ. ಅದಕ್ಕೆ ಸೋತ ಕೂಡಲೇ ಧೋನಿ ದೇಶದ ಕ್ಷಮೆ ಯಾಚಿಸಿದ್ದು.
ಇಲ್ಲಿ ಪ್ರಶ್ನೆಯೇಳುವುದು ನಾಯಕನ ನಿರ್ಧಾರದ ಬಗ್ಗೆ. ಇದೆ ಧೋನಿಯನ್ನು ಆಕಾಶದೆತ್ತರಕ್ಕೆ ಏರಿಸಿದವರೂ ನಾವೇ ಅಲ್ಲವೇ? ಈಗ ಪಾತಾಳಕ್ಕೆ ಇಳಿಸಿದ್ದೇವೆ. ಧೋನಿಯ ಎಷ್ಟೋ ದಿಟ್ಟ ನಿರ್ಧಾರಗಳು ಭಾರತಕ್ಕೆ ಜಯ ತಂದುಕೊಟ್ಟಿವೆ. ಆದರೆ ಎಲ್ಲ ಸಂಧರ್ಭದಲ್ಲಿ ಪ್ರಯೋಗ ಮಾಡುವುದು ಸರಿಯಲ್ಲ ಅಲ್ಲವೇ. ಅದು ಮಹತ್ವದ ಪಂದ್ಯದಲ್ಲಿ. ವೀರೇಂದ್ರ ಸೆಹ್ವಾಗ ಇಲ್ಲದೆ ಆಡುವುದು ಎಷ್ಟು ಕಷ್ಟ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಇಲ್ಲಿ ಯಾರನ್ನೂ ತೆಗಳಿ ಪ್ರಯೋಜನವಿಲ್ಲ.
ಸಂಪೂರ್ಣ ತಂಡವೇ ಇದಕ್ಕೆ ಹೊಣೆ. ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಈಗ ಬಯ್ದರೆ ಹೇಗೆ. ನಾವು ತಂಡವಾಗಿ ಆಡುವುದನ್ನೇ ಮರೆತ ಹಾಗಿದೆ. ದೇಶಕ್ಕಾಗಿ ಆಡುವಾಗ ವ್ಯಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಆಡಬೇಕಾದ ಅನಿವಾರ್ಯತೆಯಿದೆ. ಧೋನಿಯ ನಾಯಕತ್ವ ನಿಧಾನವಾಗಿ ನಶಿಸುತ್ತಿದೆಯೇ ಎಂಬ ಸಂಶಯ ಎಲ್ಲೆಡೆ ಕೇಳಿ ಬರುತ್ತಿದೆ. ಅವನ ನಿರ್ಧಾರಗಳು ಕಳೆದ ಕೆಲವು ಪಂದ್ಯಗಳಲ್ಲಿ ಭಾರತಕ್ಕೆ ಮುಳುವಾಗಿವೆ. ಅದೇನೇ ಇರಲಿ '' ರಾಯರ ಕುದುರೆ ಬರು ಬರುತ್ತಾ ಕತ್ತೆಯಾದ ಹಾಗೆ
ನಮ್ಮ ತಂಡವಾಗಬಾರದು''
ಮೊದಲು ಬಿಡುವಿಲ್ಲದ ವೇಳಾಪಟ್ಟಿಯನ್ನು ತೆಗೆದು ಹಾಕಿ ಆಟಗಾರರಿಗೆ ವಿಶ್ರಾಂತಿಯನ್ನು ನೀಡಿ ಅವರನ್ನು ಅಣಿಗೊಳಿಸಬೇಕಾಗಿದೆ. ಇಲ್ಲದಿದ್ದರೆ ವೆಸ್ಟ್ ಇಂಡೀಸ್ ಸರಣಿಯ ಫಲಿತಾಂಶವೂ ಇದಕ್ಕಿಂತ ವಿಭಿನ್ನವಾಗಿರದು.