Monday, October 26, 2009

ಮದುಮಗಳು
ಮಲೆನಾಡಿನ ಮೈದಳೆವ ವನಸಿರಿ 
ಮೈತುಂಬಿ ಮೆರೆದಾಡುವ ಹಸಿರ ಗಿರಿ 
ಮದವೇರಿದ ಮದನಾರಿಯ ಚೆಲುವ ಪರಿ 
ಮುತ್ತನ್ನೇ ಮೆತ್ತಿರುವ ಹರಿಯುವ ಝರಿ


ಶರಾವತಿ ಜೋಗದಲಿ ಹರಿಯುವ ಸೊಬಗು 
ಬನವಾಸಿಯ ಮಧುಕೇಶ್ವರ ಪಂಪನ ಬೆರಗು 
ಸುತ್ತ ಮರವು ಲತೆಗಳೆಲ್ಲ ನಾಚಿಸೋ ಯಾಣ
ಮಾಡು ಒಮ್ಮೆ ಮಲೆನಾಡಿಗೆ ತಪ್ಪದೆ ಪಯಣ


ಕವಿಗಳೆಲ್ಲ ಹುಟ್ಟಿ ಬೆಳೆದ ಆದರ್ಶದ ತಾಣ 
ರಾಷ್ಟ್ರ ಬೆಳಗೋ ದಿಗ್ಗಜರಿಗೆ ನಮ್ಮಯ ನಮನ 
ಭೂಮಿತಾಯಿ ಪ್ರೀತಿ ಮಗಳು ಇರುವಳು ಇಲ್ಲಿ 
ಮನಸ ಸೂರೆ ಮಾಡ್ವ ಸೋದೆ ಸ್ವರ್ಣವಲ್ಲಿ


ಎಲ್ಲ ಇಲ್ಲಿ ಒಂದೆ ಎಂಬ ಭಾವನೆ ಇರಲು 
ಯಾರೇ ಬಂದರೂ ಭತ್ತದ ಪ್ರೀತಿಯ ಕಡಲು 
ಇತಿಹಾಸದ ಗತ ವೈಭವ ಇಲ್ಲಿಯ ಒಡಲು 
ದೈವ ಭಕ್ತಿ ತುಂಬಿರುವ ಸೇವೆಯ ಅಳಿಲು


ಸಿರಸಿಯ  ಶ್ರೀ  ಮಾರಿಕಾಂಬೆ  ನಿನಗೆ  ವಂದನೆ 
ಮಂಜುಗುಣಿ  ದೇವನಿಗೆ  ಅಭಿವಂದನೆ 
ಮುಕ್ಕೋಟಿ  ದೇವತೆಗಳ  ಪ್ರೇಮದರಮನೆ 
ಮಲೆನಾಡಿನ  ಸೊಬಗು  ಸವಿಯೋ  ಒಮ್ಮೆ  ಸುಮ್ಮನೆ

Tuesday, October 13, 2009

S-PAIN ನ PAIN ನಿಂದ SWEDEN ವರೆಗೆ ...ಭಾಗ 2

ಹಿಂದಿನ ಲೇಖನದಲ್ಲಿ ಸ್ಪೇನ್ ದಲ್ಲಿ ಕಳೆದ ನನ್ನ ಪಾಸ್ ಪೋರ್ಟ್ ವಿಷಯವಾಗಿ ಬರೆದಿದ್ದೆ. ಅಲ್ಲಿಯ ಮೊದಲ ದಿನದ ಅನುಭವ, ಕಳವಳ, ಇವೆಲ್ಲವುಗಳ ಜೊತೆಗೆ ಮೊದಲ ಭೆಟ್ಟಿಯ ಕಹಿ ನೆನಪುಗಳ ಬಗೆಗೆ ತಿಳಿಸಿದ್ದೇನೆ. (ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ಕಿಸಿ http://gurumurthyhegde.blogspot.com/2009/10/s-pain-pain.html

ಆ ದಿನ ರಾತ್ರಿಯಿಡೀ ನಿದ್ದೆ ಇರಲಿಲ್ಲ. ರಾತ್ರಿ ಎಷ್ಟೋ ಸಲ ಎದ್ದು ರೆಸೆಪಶನ್ ತನಕ ನಡೆದು ಬಂದು ಪುನಃ ಹೋಗುತ್ತಿದ್ದೆ. ರೆಸೆಪಶನ್ ನಲ್ಲಿ ಇದ್ದವರಿಗೆ ಗಾಬರಿ. ಏನಾಯಿತೆಂದು. ಬೆಳಿಗ್ಗೆ ಎದ್ದವನೇ ಬಾರ್ಸಿಲೋನಾ ದಲ್ಲಿರುವ ಭಾರತೀಯ ದೂತಾವಾಸ (Indian Embassy) ಗೆ ಫೋನ್ ಮಾಡಿದರೆ ಅವರು ಬೇಸಿಗೆಯ ರಜೆಯ ಮೋಜನ್ನು ಅನುಭವಿಸುತ್ತಿದ್ದಾರೆ. ಇನ್ನೆರಡು ದಿನ ಬಿಟ್ಟು ಪ್ರಯತ್ನಿಸಿ ಎಂಬ ವಾಣಿ ಬರುತ್ತಿದೆ. ನಮಗೆ ಕನಿಷ್ಠ 4  ದಿನಗಳ ಸಮಯವಿತ್ತು ಅಲ್ಲಿ, ಆದರೆ ಕೇವಲ ಒಂದೇ ದಿನಕ್ಕೆ ಬರುವ ಪ್ರವಾಸಿಗರಿಗೆ ಹೀಗೆ ಆದರೆ ಅವರ ಗತಿಯೇನು. ಸಂಪೂರ್ಣ ಆಗಸ್ಟ್ ತಿಂಗಳು Indian Embassy ಮುಚ್ಚಿರುತ್ತದಂತೆ. ನನಗೆ ವಿಚಿತ್ರವೆನಿಸಿತು.

ಮತ್ತೇನು ಮಾಡಲು ದಿಕ್ಕು ತೋಚದೆ ಒಲ್ಲದ ಮನಸ್ಸಿನಿಂದ Conference ಗೆ ಹೋದೆ. ಬಂದಿದ್ದು ಅದಕ್ಕೆ ಅಲ್ಲವೇ?
ಅಲ್ಲಿ ರೆಸೆಪಶನ್ ನಲ್ಲಿ ನನ್ನೆಲ್ಲ ಕಥೆ ಹೇಳಿದೆ. ಇನ್ನೊದು ಹೇಳಲೇಬೇಕಾದ ಸ್ಪೇನ್ ಸಮಸ್ಯೆ ಎಂದರೆ  ಭಾಷ ಪ್ರೇಮ ಇಲ್ಲ ಭಾಷಾ ಕೊರತೆ. ಯಾರೂ ಇಂಗ್ಲಿಷ್ ಮಾತನಾಡುವುದಿಲ್ಲ. ಸ್ಪ್ಯಾನಿಶ್ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಕೂಡಾ. ಆಫೀಸ್ ಗೆ ಹೋಗಿ, ಅಂಗಡಿ ಹೋಗಿ, ಎಲ್ಲಿ ಹೋದರೂ ಒಂದೇ ಸಮಸ್ಯೆ. ಇಂಥವರಿಗೆ ಫೋನ್ ಮಾಡಿ ನನ್ನ ಸಮಸ್ಯೆ ಹೇಳಿದರೆ ಅವರಿಗೆ ಎಷ್ಟು ಅರ್ಥವಾದೀತು? ನಿಮಿಷಕ್ಕೆ 10 ಸಲ ಗ್ರಾಸಿಯಾಸ್ ಅನ್ನುತ್ತಾರೆ. Conference Reception ಅಲ್ಲಿ ಸಿಸಿಲಿಯಾ ಎನ್ನುವ ಹುಡುಗಿಯಿದ್ದಳು. ಅವಳಿಗೆ ಇಂಗ್ಲಿಷ್ ತುಂಬಾ ಚೆನ್ನಾಗಿ ಬರುತ್ತಿತ್ತು. ಅವಳ ಹತ್ತಿರ ನನ್ನೆಲ್ಲ ಸಮಸ್ಯೆ ಹೇಳಿದೆ. ಕೂಡಲೇ ಅವಳು ಬಾರ್ಸಿಲೋನ Indian Embassy ಗೆ ಫೋನ್ ಮಾಡಿದಳು. ಆದರೆ ಅದೇ ಉತ್ತರ ಬಂದಿತು 2 ದಿನ ಬಿಟ್ಟು ಎಂದು. ನಂತರ ಅವಳು ಮಾಡ್ರಿಡ್ನಲ್ಲಿರುವ Indian Embassy ಗೆ ಫೋನ್ ಮಾಡಿದಳು. ನನ್ನ ಪುಣ್ಯಕ್ಕೆ ಅವರು ಓಪನ್ ಮಾಡಿದ್ದರು. ಅವರಿಂದ ಎಲ್ಲ ವಿವರ ಪಡೆದುಕೊಂಡಳು (ಅಲ್ಲಿ ಎಲ್ಲರೂ ಸ್ಪ್ಯಾನಿಶ್ ಮಾತನಾಡುತ್ತಾರೆ ಎಂಬುದು ಸರ್ವ ವಿಧಿತ). ಒಬ್ಬ ಸ್ಪ್ಯಾನಿಶ್ ಹುಡುಗಿಯಿಂದ ಸಿಕ್ಕ ಸಹಾಯ ಮರೆಯಲು ಸಾದ್ಯವಿಲ್ಲ. ಆಪತ್ ಕಾಲದಲ್ಲಿ ನೆರವಿಗೆ ಬಂದವನೇ ನಿಜವಾದ ಮಿತ್ರನಂತೆ. ಭಾರತದಲ್ಲಿಯೂ ಅನೇಕ ಮಿತ್ರರೂ ಇಂಥಹ ಸಂಧರ್ಭದಲ್ಲಿ ನನ್ನ ಜೊತೆ ಮಾನಸಿಕವಾಗಿ ಇದ್ದರು. ಪದೇ  ಪದೇ  ಮೇಲ್ ಕಳಿಸಿ ಏನಾಯಿತೆಂದು ವಿಚಾರಿಸುತ್ತಿದ್ದರು.
ನಂತರ ಸಿಸಿಲಿಯಾ ಹೇಳಿದಳು, ''ನಾನು ಪಾಸ್ ಪೋರ್ಟ್ ಗೋಸ್ಕರ ಮ್ಯಾಡ್ರಿಡ್ ಗೆ ಹೋಗಬೇಕು ಎಂದು''. ಬಾರ್ಸಿಲೋನಾ ದಲ್ಲಿ     ಪಾಸ್ ಪೋರ್ಟ್ ನೀಡುವುದಿಲ್ಲ ವಂತೆ. ಅವಳಿಗೆ ಕೊನೆಯದಾಗಿ ಒಂದು ಥ್ಯಾಂಕ್ಸ್ ಹೇಳಿ ಮ್ಯಾಡ್ರಿಡ್ ಗೆ ಹೋಗಲು ಯೋಚಿಸತೊಡಗಿದೆ. ಮ್ಯಾಡ್ರಿಡ್ ಪುನಹ ಸುಮಾರು 300-400 ಕಿ ಮಿ ಪ್ರಯಾಣ ಇನ್ನೊದು ದಿಕ್ಕಿನಲ್ಲಿ. ಕೂಡಲೇ ಮಡದಿಗೆ ಫೋನ್ ಮಾಡಿ ನನ್ನ ವೀಸಾ, ಪಾಸ್ಪೋರ್ಟ್ ನ ನಕಲು ಇದ್ದರೆ  ಇ-ಮೇಲ್  ಗೆ ಕಳಿಸೆಂದು ತಿಳಿಸಿದೆ. ಅವಳು ಹುಡುಕಿ ಹುಡುಕಿ ಕೊನೆಗೂ ನಕಲು ಪಡೆಯುವಲ್ಲಿ ಯಶಸ್ವಿಯಾದಳು ಸ್ವಲ್ಪ ಧೈರ್ಯ ಬಂತು.
ಮರುದಿನ ಬೇಗ ಎದ್ದವನೇ  ಫಾಸ್ಟ್ ಟ್ರೈನ್ ತೆಗೆದುಕೊಂಡೆ. ಇದು ತುಂಬಾ ದುಬಾರಿ ಆದರೆ ಘಂಟೆಗೆ 350 ಕಿ ಮಿ ವೇಗದಲ್ಲಿ ಚಲಿಸುತ್ತದೆ. ನಾನು ಸುಮಾರು 70 ನಿಮಿಷದಲ್ಲಿ ಮಾಡ್ರಿಡ್ ನಲ್ಲಿದ್ದೆ. ಇಲ್ಲಿ ಹಣಕ್ಕಿಂತ ಸಮಯ ಮುಖ್ಯವಾಗಿತ್ತು. ಬೆಳಿಗ್ಗೆ 9 ಘಂಟೆಗೆ ಸರಿಯಾಗಿ Indian Embassy ಮುಂದೆ ಹೋದೆ. ನನಗೋ ನಾನೇ ಮೊದಲು ಬಂದಿದ್ದೇನೆ ಎಂದು ಆದರೆ ನನಗಿಂತ ಮುಂಚೆಯೇ 25 ಜನ ಸಾಲಿನಲ್ಲಿ ನಿಂತಿದ್ದಾರೆ. ನಂತರ ನಾನು ಸಾಲಿನಲ್ಲಿ ನಿಲ್ಲಲು ನಂಬರ್ ತೆಗೆದುಕೊಂಡೆ. 26 ನೇ ನಂಬರ್ ನನ್ನದು. ಅಲ್ಲಿ ಭಾರತದಿಂದ 5-6 ಜನ ಡಾಕ್ಟರುಗಳು ಬಂದಿದ್ದರು. ಅವರೆಲ್ಲ ಬಾರ್ಸಿಲೋನಾದಲ್ಲಿ  ಜರುಗಿದ ವೈದ್ಯಕೀಯ ಸಮ್ಮೇಳನ ದಲ್ಲಿ ಭಾಗವಹಿಸಲು ಬಂದಿದ್ದರಂತೆ. ಅವರ ಪಾಸ್ ಪೋರ್ಟ್, ದುಡ್ಡು ಎಲ್ಲ ಕಳುವಾಗಿದೆ ಎಂದು ತಿಳಿದಾಗ ಬಹಳ ಬೇಸರವಾಯಿತು. ಅವರು ತುಂಬಾ ಬೇಸರಗೊಂಡಿದ್ದರು. ಅವರಿಗೂ ಅದೇ ದಿನ ಪಾಸ್ಪೋರ್ಟ್ ಬೇಕಿತ್ತು.
ಅಲ್ಲಿ ರೆಸೆಪಶನ್ ಕೌಂಟರ್ ನಲ್ಲಿ ಕುಳಿತಿದ್ದವಳು ಸ್ಪೇನ್ ಹುಡುಗಿ. ಅವಳಿಗೆ ಸರಿಯಾಗಿ ಇಂಗ್ಲಿಷ್ ಬಾರದು. ಏನಾದರೂ ಕೇಳಿದರೆ ದುರುಗುಟ್ಟಿಕೊಂಡು ನೋಡುತ್ತಾಳೆ. ಮೊದಲೇ ನನಗೆ ಹೇಳಿದಳು, ಏನೇ ಮಾಡಿದರೂ ಇವತ್ತು ಪಾಸ್ ಪೋರ್ಟ್ ಸಿಗುವುದಿಲ್ಲ ಎಂದು. ನನ್ನ ಶಕ್ತಿಯೇ ಉಡುಗಿ ಹೋಯಿತು. ಏಕೆಂದರೆ ಮರುದಿನ ನಾವು ತಿರುಗಿ ಸ್ವೀಡನ್ ಹೊರಡುವ ಫ್ಲೈಟ್ ಬುಕ್ ಮಾಡಿದ್ದೇವೆ. ಇವತ್ತು ಸಿಗಲೇಬೇಕು. ಏನಾದರಾಗಲಿ ಎಂದು ಅದಕ್ಕೆ ಸಂಭಂಧಪಟ್ಟ ಎಲ್ಲ ಫಾರಂ ತುಂಬಿದೆ. 8 ಫೋಟೋ ಬೇಕೆಂದರು. ಪುನಃ ಅಲ್ಲಿಂದ ಸ್ಟುಡಿಯೊ ಹುಡುಕಿ 8 ಫೋಟೋ ತೆಗೆಸಿಕೊಂಡು ಬಂದೆ. ಇದೆಲ್ಲ ಮುಂಚೆ ಗೊತ್ತಿದ್ದರೆ ಒಂದಷ್ಟು ಫೋಟೋ ಮುಂಚೆಯೇ ತೆಗೆದುಕೊಂಡು ಹೋಗುತ್ತಿದ್ದೆ. ಇದೊಂದು ತರ Murphy's Law ಇದ್ದ ಹಾಗೆ. ಫೋಟೋ ಕೈಲಿರುವಾಗ ಅವಶ್ಯಕತೆ ಇರುವುದಿಲ್ಲ. ಅವಶ್ಯಕತೆ ಇರುವಾಗ ಫೋಟೋ ಕೈಲಿರುವುದಿಲ್ಲ.
ಫೋಟೋ ತೆಗೆಸಿಕೊಂಡು ಬಂದು ನೋಡಿದರೆ ಇನ್ನೂ ಮೊದಲ ನಂಬರ್ ಕೆಲಸವೇ ಮುಗಿದಿಲ್ಲ. 9 ಘಂಟೆಯಿಂದ 11 ಘಂಟೆಯವರೆಗೆ ಸಾಲಿನಲ್ಲಿ ನಿಂತುಕೊಂಡರೂ 10 ನೇ ನಂಬರ್ ತನಕ ಮಾತ್ರ ಆಯಿತು. ನನ್ನದೋ 26 ನೇ ನಂಬರ್. 1 ಘಂಟೆ  ವರೆಗೆ ಮಾತ್ರ ಅವರು ಕೇಸ್ ತೆಗೆದುಕೊಳ್ಳುತ್ತಾರೆ. ಮತ್ತೆ ಮಧ್ಯಾನ್ಹ ಪಾಸ್ ಪೋರ್ಟ್ ವಿತರಣೆ ಮಾತ್ರ ಎಂದು ತಿಳಿಯಿತು. ಆಮೆ ವೇಗದಲ್ಲಿ ಸಾಗುತ್ತಿರುವ ಕೇಸ್ ಗಳ ನಡುವೆ ನನ್ನ ಕೇಸ್ ಬರುವಾಗ ಖಂಡಿತ 1 ಘಂಟೆ ಕಳಿಯುತ್ತದೆ ಎಂದು ನನಗೆ ಆಗಲೇ ತೋರಿತು. ನಾನು ಎಮರ್ಜೆನ್ಸಿ ಪಾಸ್ ಪೋರ್ಟ್ ಗೆ ಅಪ್ಲೈ ಮಾಡಿದ್ದರಿಂದ ಒಂದು ದಿನ ಉಳಿದರೆ ಯಾವ ಪ್ರಯೋಜನವೂ  ಇಲ್ಲ ( ಅದಕ್ಕೆ ಎಮರ್ಜೆನ್ಸಿ ಎಂದು ಹೇಗೆ ಕರೆಯಲಿ ಹೇಳಿ ) ಎಂದೆನಿಸಿ ಕೂಡಲೇ ಆಫೀಸರ್ ಇರುವಲ್ಲಿಗೆ ನಡೆದೆ.
ಅವರು ನಿಜಕ್ಕೂ ಸಮಾಧಾನಿ ಯಾಗಿದ್ದರು. ಅವರಲ್ಲಿ ನನ್ನ ಪಾಸ್ ಪೋರ್ಟ್ ಕಳೆದ ಕಥೆ, ವ್ಯಥೆ ಯನ್ನೆಲ್ಲ ತೋಡಿಕೊಂಡೆ. ಅವರು ನನ್ನ ಅಪ್ಲಿಕೇಶನ್ ಎಲ್ಲ ಪರಿಶೀಲಿಸಿದರು. ಅಲ್ಲಿಯೇ ಇನ್ನೊಂದು ಸಮಸ್ಯೆ ಎದುರಾಯಿತು. ಸ್ವೀಡನ್ ದೇಶದಲ್ಲಿ ನಮಗೆ ಯಾವುದೇ ID Card ಮೊದಲ ವರ್ಷ ನೀಡುವುದಿಲ್ಲ. ಆಫೀಸರ್ ನನಗೆ ನಿನ್ನ ಸ್ವೀಡನ್ ID Card ತೋರಿಸು ಎಂದರು. ಅವರು ಕೊಡುವುದಿಲ್ಲ ಎಂದರೆ ಇವರು ಕೇಳುತ್ತಿಲ್ಲ. ಇಕ್ಕಟ್ಟಿಗೆ ಸಿಲುಕಿಹೋದೆ. ಇಲ್ಲದಿದ್ದರೆ ನಿನ್ನ ಯುನಿವರ್ಸಿಟಿ ಯಿಂದ ಒಂದು ಲೆಟರ್ ಕೂಡಲೇ ಕಲಿಸಲು ಹೇಳು ಅಂದರು. ಏನು ಅಂತ ಹೇಳಲಿ. ಯುನಿವರ್ಸಿಟಿ ಯಲ್ಲಿರುವ ನನ್ನ ಬಾಸ್ ನನ್ನೊಡನೆ conference ಗೆ ಬಂದಿದ್ದರು. ಅವರಿಗೆ ಅದೇ ದಿನ Presentation ಇದ್ದಿದ್ದರಿಂದ ಅವರು ಮ್ಯಾಡ್ರಿಡ್ ಗೆ ಬಂದಿರಲಿಲ್ಲ. ಆದ್ದರಿಂದ ಯುನಿವರ್ಸಿಟಿ ಲೆಟರ್ ಕಲಿಸಲು ಸಾದ್ಯವೇ ಇಲ್ಲ. ಹಾಗೆಂದು ಇವರು ನಂಬಲು ರೆಡಿ ಇಲ್ಲ. ಮೊತ್ತ ಮೊದಲ ಬಾರಿಗೆ ಜೀವನದಲ್ಲಿ Dead Lock Situation ನಲ್ಲಿ ಸಿಲುಕಿದ್ದೆ. ನನ್ನ ಯಾವ ಜನ್ಮದ ಪುಣ್ಯವೋ ಏನೋ , ಆಫೀಸರ್ ಚೇಂಬರ್ ನಲ್ಲಿ ಆ ಆಫೀಸರ್ ಆತ್ಮೀಯ ರ ಗೆಳೆಯ ರೊಬ್ಬರು ಇದ್ದರು. ಅವರು ಮ್ಯಾಡ್ರಿಡ್ ನಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್ . ಅವರು ನನ್ನ ಕಥೆಯನ್ನೆಲ್ಲಾ ಕೇಳಿ ಆ ಆಫೀಸರ್ ಅವರಲ್ಲಿ ಪಾಸ್ ಪೋರ್ಟ್ ಕೊಡುವಂತೆ ವಿನಂತಿಸಿಕೊಂಡರು. ಆ ಆಫೀಸರ್ ಗೆ ಮನ ಕರಗಿತೋ ಏನೋ ಕೂಡಲೇ ಫೋನ್ ಮಾಡಿ ಇದರ ಬಗ್ಗೆ ಯಾರ ಹತ್ತಿರವೋ ಮಾತನಾಡಿದರು. ನಂತರ ಒಂದು ವರುಷದ ಮಟ್ಟಿಗೆ ನನಗೆ ಹೊಸ ಪಾಸ್ ಪೋರ್ಟ್ ನೀಡಲು ಸಹಿ ಹಾಕಿದರು. ಅಷ್ಟೇ  ಅಲ್ಲದೆ  ಸ್ವೀಡನ್ ತಲುಪಿದ ನಂತರ ಒಂದು ವರುಷದ ಒಳಗೆ ಹೊಸ ಪಾಸ್ ಪೋರ್ಟ್ ಪಡೆಯುವಂತೆಯೂ ಸೂಚಿಸಿದರು. ''ಬದುಕಿದೆಯಾ ಬಡ ಜೀವವೇ'' ಎನ್ನಿಸಿದ್ದು ಆಗಲೇ. ಅವರು ಆ ಸಂಧರ್ಭಕ್ಕೆ ನನಗೆ ದೇವರು, ಅವರೊಬ್ಬರೇ ಅಲ್ಲ, ಸಕಾಲದಲ್ಲಿ ನೆರವಿಗೆ ಬಂದ ಆ ಬಿಸಿನೆಸ್ ಮ್ಯಾನ್ ಕೂಡಾ ಆಪತ್ಭಾಂದವ ನಂತೆ ಕಂಡರು.  ಹೀಗೆ ಸಾಲನ್ನು ಮುರಿದು ಒಳಗೆ ಹೋಗಿ ಸುಮಾರು 12-30 ಹೊತ್ತಿಗೆ ನನ್ನ ಪಾಸ್ ಪೋರ್ಟ್ ಪಡೆಯಲು ಸಹಿ ಹಾಕಿಸಿಕೊಂಡು ಹೊರಗೆ ಬಂದು ರಿಸೆಪ್ಶನ್ ನಲ್ಲಿ ಹಣ ಕಟ್ಟಿದೆ. ಎಮರ್ಜೆನ್ಸಿ ಪಾಸ್ ಪೋರ್ಟ್ ಗೋಸ್ಕರ 11000 ರೂಪಾಯಿಗಳನ್ನು ತೆಗೆದುಕೊಂಡರು. ''ಬರೆಯ ಮೇಲೊಂದು ಬರೆ'' ಎನ್ನುವಂತೆ ಮೊದಲೇ ಎಲ್ಲ ಕಳೆದುಕೊಂಡವನಿಗೆ ಮತ್ತೊಂದು ಏಟು ನೀಡಿದ್ದರು. ಏನು ಮಾಡುವುದು, ತಿರುಗಿ ಬರಬೇಕೆಂದರೆ ಅದೆಲ್ಲ ಅನಿವಾರ್ಯವಾಗಿತ್ತು.
ಮಧ್ಯಾನ್ಹ 3 ಘಂಟೆಗೆ ನನಗೆ ಹೊಸ ಪಾಸ್ ಪೋರ್ಟ್ ನೀಡಿದರು. ಅದನ್ನು ಪಡೆದು ಕೂಡಲೇ ಟ್ರೈನ್ ಹತ್ತಿ Zaragoza ಬಂದೆನು. ಅಲ್ಲಿಂದ ನಾನು ಬಾಸ್ ಕೂಡಿಕೊಂಡು ಬಾರ್ಸಿಲೋನ ಕ್ಕೆ ಪ್ರಯಾಣ ಬೆಳೆಸಿದವು. ಪ್ರಯಾಣ ನನ್ನನ್ನು ಬಹಳಷ್ಟು ಸುಸ್ತಾಗುವ ಹಾಗೆ ಮಾಡಿತ್ತು. ಮಾನಸಿಕ ಒತ್ತಡ, ಮೇಲಿಂದ ಮೇಲೆ ಪ್ರಯಾಣ, ಚಿಂತೆ ಎಲ್ಲವೂ ನನ್ನನ್ನು ಸೋಲಿಸಿ ಬಿಟ್ಟಿದ್ದವು. ಸ್ವೀಡನ್ ತಲುಪಿದರೆ ಸಾಕೆಂದು ಯೋಚಿಸುತ್ತಿದ್ದೆ. ಹೆಂಡತಿಗೆ ಮೊದಲೇ ಹೇಳಿದ್ದೆ, ನನ್ನ ತಂದೆ ತಾಯಿಗಳಿಗೆ ಇದರೆ ಬಗ್ಗೆ ಏನು ಹೇಳಬೇಡ ಎಂದು, ಇಲ್ಲದಿರೆ ವೃಥಾ ಬೇಜಾರು ಮಾಡಿಕೊಳ್ಳುವುದೊಂದೇ ಅಲ್ಲದೆ ಸರ್ವ ದೇವರುಗಳಿಗೆ ಹರಕೆ ಹೊತ್ತು ಕಣ್ಣಿರು ಹಾಕುತ್ತ ಕುಳಿತುಕೊಳ್ಳುತ್ತಾರೆ ಎನ್ನುವುದು.
ಆ ದಿನ ಬಾರ್ಸಿಲೋನ  ತಲುಪುವಾಗ 9 ಘಂಟೆ ರಾತ್ರಿ. ಒಂದೇ ದಿನ 1200 ಕಿ ಮಿ ಪ್ರಯಾಣ ಮಾಡಿದ್ದೆ. ರಾತ್ರಿ ಕಣ್ಣಿಗೆ ಸ್ವಲ್ಪ ನಿದ್ದೆ ಬಂತು.
  ಮರುದಿನ ಬೆಳಿಗ್ಗೆ ಎದ್ದು Swedish Embassy ಗೆ ವೀಸಾ ಹಾಕಿಸಿಕೊಳ್ಳಲು ನಾನು ಮತ್ತು ನನ್ನ ಬಾಸ್ ಹೋದೆವು. ನನ್ನ ಬಾಸ್ ಗೆ ಸ್ವೀಡಿಷ್ ಭಾಷೆ ಬರುತ್ತದೆ ಯಾದ್ದರಿಂದ ಅಲ್ಲಿ ವ್ಯವಹರಿಸುವುದು ಅಷ್ಟು ಕಷ್ಟವಾಗಲಿಲ್ಲ. ಆದರೆ ಅವರಲ್ಲಿ ವೀಸಾ ಬಗ್ಗೆ ಕೇಳಿದಾಗ ಅವರು ಹೇಳಿದ್ದೇನು ಗೊತ್ತೇ '' ವೀಸಾ ಹಾಕುವ ಅಧಿಕಾರ ಕೇವಲ ಮ್ಯಾಡ್ರಿಡ್ ನಲ್ಲಿರುವ Swedish Embassy ಗೆ ಇದೆ, ನಮಗಿಲ್ಲ, ಆದ್ದರಿಂದ ನೀವು ಮ್ಯಾಡ್ರಿಡ್ ಗೆ ಹೋಗಿ ಹಾಕಿಸಿಕೊಂಡು ಹೋಗಿ'' ಎನ್ನಬೇಕೆ. ಹಿಂದಿನ ದಿನವಷ್ಟೇ ಮ್ಯಾಡ್ರಿಡ್ ನಿಂದ ಬಂದಿದ್ದೇನೆ ಈಗ  ಪುನಃ ಮ್ಯಾಡ್ರಿಡ್ ಗೆ ಹೋಗಬೇಕು ಅಂದಾಗ ನನ್ನ ತಲೆ ಹಾಳಾಗಿ ಹೋಯಿತು. ನನ್ನ ಬಾಸ್ ಬಹಳಷ್ಟು ಪ್ರಯತ್ನ ಪಟ್ಟರು ಅಲ್ಲಿಯೇ ಹಾಕಿಸಲು. ಆದರೆ ಅವರು ಒಪ್ಪಲೇ ಇಲ್ಲ. ಮ್ಯಾಡ್ರಿಡ್ ಗೆ ಹೋಗಲೇಬೇಕು ಎಂದು ಹೇಳಿ ಬಿಟ್ಟರು.

ತಲೆಯ ಮೇಲೆ ಕೈ ಹೊತ್ತು ಅಲ್ಲಿಂದ ಹೊರಗೆ ಬಂದೆವು. ನನ್ನ ಹತ್ತಿರ ವೀಸಾದ ಒಂದು ನಕಲಿತ್ತು. ಬಾಸ್ ಅಂದರು '' ನೀನು ಯುರೋಪ ನಲ್ಲೆ ಇರುವುದರಿಂದ ವೀಸಾ ಇಲ್ಲದೆಯೇ ನಾವು ಪ್ರಯಾಣ ಮಾಡೋಣ, ಮಧ್ಯದಲ್ಲಿ ಏನಾದರೂ ಸಮಸ್ಯೆ ಆದರೆ ನಾನು ಎದುರಿಸುತ್ತೇನೆ, ನೀನೇನು ಚಿಂತಿಸದಿರು'' ಎಂದು ಧೈರ್ಯ ತುಂಬಿದರು. ಸಂಜೆ 6 ಘಂಟೆಗೆ ಸ್ಪೇನ್ ನಿಂದ ವೀಸಾ ಇಲ್ಲದೆಯೇ ಪ್ರಯಾಣಕ್ಕೆ ರೆಡಿ ಆದೆ. ಟಿಕೆಟ್ ಕೌಂಟರ್ ನವರು ವೀಸಾ ಕೇಳಿದರು. ಅವರಿಗೆ ಎಲ್ಲ ಕಥೆ ಹೇಳಿದೆವು. ಬಹುಷ: ಅವರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಹಾಗೆಯೇ ಟಿಕೆಟ್ ಕೊಟ್ಟು ಕಳಿಸಿದರು. ಮುಂದಿದ್ದದ್ದು ಕಸ್ಟಂ ಚೆಕ್. ಅಲ್ಲಿ ಎದೆ ಡವ ಡವ ಎನ್ನಲು ಆರಂಬವಾಯಿತು. ಯಾವ ಪುಣ್ಯವೋ ಏನೋ ಅವರು ಏನನ್ನೂ ಕೇಳಲಿಲ್ಲ. ಇಷ್ಟೆಲ್ಲಾ ಮಾಡಿ ಆದೆ ದಿನ ಬರುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಅದಕ್ಕೆ ಕಾರಣ ಮರುದಿನ ಬೆಳಿಗ್ಗೆ ಸ್ವೀಡನ್ ನಲ್ಲಿ '' ಕೋಟ್ಯಾಂತರ ರೂಪಾಯಿ ಮೌಲ್ಯದ ಪ್ರಾಜೆಕ್ಟ್ '' ಬಗೆಗೆ ಮೀಟಿಂಗ್ ಏರ್ಪಡಿಸಿದ್ದೆವು. ಅಲ್ಲಿಗೆ ಹೋಗದಿದ್ದರೆ ಅದು ಕೈ ತಪ್ಪುವ ಸಾದ್ಯತೆ ಇತ್ತು. ಆದ್ದರಿಂದ ಬಾಸ್ ಆದೆ ದಿನ ಪ್ರಯಾಣ ಮಾಡೇ ಬಿಡೋಣ ಎಂದಿದ್ದರು.
ಹೀಗೆ ಸ್ಪೇನ್ ನಿಂದ ಪಾರಾಗಿ ಬಿಟ್ಟೆವು. ನಂತರ Copen Hagen ನಲ್ಲಿ ಇಳಿಯಿತು. ಇಲ್ಲಿ ನಾವು ಇನ್ನೊದು ವಿಮಾನ ಹತ್ತಬೇಕಿತ್ತು. ಇಲ್ಲಿ ಸ್ವಲ್ಪ ಹೆದರಿಕೆ ಇತ್ತು. ಆದರೆ ಇಲ್ಲಿಯೂ ಯಾವ ಸಮಸ್ಯೆ ಇಲ್ಲದೆ ಪಾರಾದೆವು. ಇನ್ನು ಸ್ವೀಡನ್ ದಲ್ಲಿ ಏನಾದರೂ ಚಿಂತೆ ಇಲ್ಲ ಯಾಕೆಂದರೆ  ಅದು ನಾವು ಇರುವ ಊರು.
ರಾತ್ರಿ 11-30 ಗೆ ವಿಮಾನ ಸ್ವೆಡೆನ್ನಿನ ಗೊತ್ಹೆಂಬುರ್ಗ್ ಗೆ ಬಂದಿಳಿಯಿತು. ಯಾವ ಅಡೆ ತಡೆ ಇಲ್ಲದೆ ಅಲ್ಲಿಂದ ಹೊರಗೆ ಬಂದು ಮನೆ ತಲುಪುವಾಗ 12-30 ಆಗಿತ್ತು. ಮೆಚ್ಚಿನ ಮಡದಿಗೆ ನನ್ನ ನೋಡಿದ ಕೂಡಲೇ ಅದ ಸಂತೋಷ ವರ್ಣಿಸಲಸದಳ, ಆನಂದಭಾಷ್ಪ ಅವಳ ಕಣ್ಣಲ್ಲಿ ಹರಿಯುವುದು ಕಂಡಿತು.
ಜೀವನದಲ್ಲಿ ಒಂದು ದೊಡ್ಡ ಗಂಡಾಂತರ ಕಳೆದು ಬಂದಂತೆ ಗೋಚರಿಸಿತು. ಮರುದಿನ ಬೆಳಿಗ್ಗೆಯೇ ಆಫೀಸಿನಿಂದ ನನಗೆ ಹೊಸ Laptop ಕೊಟ್ಟರು. ಹೀಗೆ ಗೊತ್ತಿಲ್ಲದ ದೇಶದಲ್ಲಿ ಭಾಷೆಯೂ  ಬರದೆ ಒದ್ದಾಡಿ ಬಂದ ಮೇಲೆ ಇದೀಗ ಪಾಸ್ ಪೋರ್ಟ್ ಗಾಗಿಯೇ ಒಂದು ಹೊಸ ಬ್ಯಾಗ್ ತೆಗೆದುಕೊಂಡಿದ್ದೇನೆ. ಅದು ನನ್ನ ದೇಹಕ್ಕೆ ತಾಗಿ ಕೊಂಡಿರುವಂತೆ ನೋಡಿಕೊಂಡಿದ್ದೇನೆ.
ಇನ್ಯಾರಿಗೂ ಇಂಥಹ ಅನುಭವ ಆಗಬಾರದು ಎಂಬ ದ್ರಷ್ಟಿಯಿಂದ ಲೇಖನ ಬರೆದಿದ್ದೇನೆ. ನನ್ನ ನೋವು, ನನಗೆ ಮಾತ್ರ ಸಾಕು. ನಿಮಗೆ ಯಾರಿಗೂ ಬೇಡ. ವಿದೇಶ ಪ್ರಯಾಣ ಸುಖವೇನೋ  ಹೌದು, ಆದರೆ ಅದು ಸಂಪೂರ್ಣ ಸುರಕ್ಷಿತ ಎಂದು ಮಾತ್ರ ಅಂದುಕೊಳ್ಳಬೇಡಿ. ಕಳ್ಳರೂ ಎಲ್ಲಡೆ ಇದ್ದಾರೆ. ಎಲ್ಲಿಯವರೆಗೆ ಮನುಕುಲವಿದೆಯೋ ಅಲ್ಲಿಯವರೆಗೆ, ಕಳ್ಳತನ, ಹಿಂಸೆ, ನೋವು ಇದ್ದದ್ದೇ. ಅದನ್ನು ತಪ್ಪಿಸಲು ಸಾದ್ಯವೇ ಇಲ್ಲ. ಕಿತ್ತು ತಿನ್ನುತ್ತಿರುವ ಬಡತನ, ಸಂಸ್ಕಾರವಿಲ್ಲದ ಬದುಕು, ಅಸಂಸ್ಕ್ರತ ನಾಗರೀಕ ಮನೋಭಾವ, ಇವೆಲ್ಲವುಗಳಿಂದ ಮನುಷ್ಯ  ತನಗರಿವಿಲ್ಲದೆ ಇಂಥಹ ಕಾರ್ಯಗಳಿಗೆ ಅಣಿಯಾಗುತ್ತಾನೆ. ಕಾಲ ಮಾತ್ರ ಇದಕ್ಕೆ ಪರಿಹಾರ. ವಿದೇಶಕ್ಕೆ ಹೋಗುವಾಗ ಮೊದಲು ಆ ದೇಶದ ಸುರಕ್ಷತೆಯ ಬಗೆಗೆ ತಿಳಿದುಕೊಳ್ಳಿ. ಅಲ್ಲಿ ಏನಾದರೂ ಪಾಸ್ ಪೋರ್ಟ್ ಕಳ್ಳತನ ಆದರೆ ಹೆಚ್ಚಿನ ಮಾಹಿತಿಗೆ ನನ್ನನ್ನು ಸಂಪರ್ಕಿಸಿ :) 


ಇಂಥಹ ಸಂಧರ್ಭದಲ್ಲಿ ನನಗೆ ಧೈರ್ಯ ತುಂಬಿದ ನನ್ನೆಲ್ಲ ಮಿತ್ರ ಮಿತ್ರೆಯರಿಗೆ, ಬ್ಲಾಗ್ ಗೆಳೆಯರಿಗೆ, ಹಾಗೂ ನೆಚ್ಚಿನ ಮಡದಿಗೆ ಅನಂತ ಧನ್ಯವಾದಗಳು 

Tuesday, October 6, 2009

ಬದುಕಿದೆಯಾ ಬಡ ಜೀವವೇ? ''S-PAIN'' ಪ್ರವಾಸ ತಂದ PAIN ಪ್ರವಾಸ.....

ಹಿಂದಿನ ತಿಂಗಳು SPAIN ಗೆಂದು ಹೋದಾಗ ಆ ''S-PAIN'' ಪ್ರವಾಸ ತಂದ PAIN  ಬಗ್ಗೆ ಬರೆದ ಲೇಖನ. ಬಹಳ ದಿನಗಳಿಂದ ಇದನ್ನು ಬರೆಯಬೇಕೆಂದಿದ್ದೆ . ಆದರೆ ಕೆಲಸದ ಒತ್ತಡದಿಂದಾಗಿ ಬರೆಯಲಾಗುತ್ತಿರಲಿಲ್ಲ. ಆದರೆ ಕಳೆದ ವಾರ ಇಟ್ಟಿಗೆ ಸಿಮೆಂಟಿನ ಪ್ರಕಾಶ ಹೆಗಡೆಯವರ ''ಹೇಳಬಾರದೆಂದರೂ.. ಬಾಯಲ್ಲಿ ಬರುತ್ತಿತ್ತು ಸುಳ್ಳು'' http://ittigecement.blogspot.com/ ಲೇಖನ ಓದಿದ ಮೇಲೆ ಇದನ್ನು ಇಂದು ಬರೆಯಲೇ ಬೇಕು ಎಂದೆನಿಸಿ ಬರೆದಿದ್ದೇನೆ.

ಕಳ್ಳರು ಎಲ್ಲೆಡೆ ಇರುತ್ತಾರೆ, ಕೆಲವೆಡೆ ರಕ್ಷಕರೇ ಕಳ್ಳರಾಗುವುದು ಉಂಟು. ಅದೇನು ಭಾರತಕ್ಕೆ ಹೊಸದಲ್ಲ ಬಿಡಿ. ಸಮಸ್ತ ದೇಶವನ್ನೇ ರಾಜಕಾರಣಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಆದರೆ ರಕ್ಷಣೆ ಎನ್ನುವುದು ವಿದೇಶಗಳಲ್ಲಿ ಅದರಲ್ಲೂ ಭಾರಿ ಸಂಭಾವಿತರೆನಿಸಿಕೊಂಡ ಐರೋಪ್ಯ ಸಮುದಾಯಗಳಲ್ಲಿ ಹೆಚ್ಚಿದೆ ಎಂಬ   ನಂಬಿಕೆ (ಅಲ್ಲ ಅಪನಂಬಿಕೆ) ಇತ್ತು. ಹಿಂದಿನ ತಿಂಗಳ ಸ್ಪೇನ್ ಪ್ರವಾಸ ಆ ನಂಬಿಕೆಗೆ ಬಲವಾದ ಕೊಡಲಿ ಏಟು ನೀಡಿತು.

ಸ್ಪೇನ್ ದೇಶ ಸೌಂದರ್ಯಕ್ಕೆ ಹೆಸರುವಾಸಿ,  ದೇಶದ ಒನಪು ವಯ್ಯಾರಗಳ ಬಗೆಗೆ ಮುಂದೊಮ್ಮೆ ವಿಸ್ತಾರವಾಗಿ ಬರೆಯುತ್ತೇನೆ. ಏಕೆಂದರೆ  ಲೇಖನ ಸ್ಪೇನ್ ನಿಂದ ಪಾರಾಗಿ ಬಂದ ನನ್ನ ಬಡಪಾಯಿ ಸ್ಥಿತಿಯ ಕುರಿತು. ಅದಕ್ಕೆ ಸೌಂದರ್ಯದ ಬಣ್ಣ ಬಳಿದು ಸತ್ಯವನ್ನು ಮುಚ್ಚುವ ಪ್ರಯತ್ನ  ಲೇಖನದಲ್ಲಂತೂ ಮಾಡಲಾರೆ. ಸ್ಪೇನ್ ನ ಒಂದು ಸುಂದರ ನಗರ ZARAGOZA ಎಂಬುದಾಗಿದೆ. ಇಲ್ಲಿಯೇ 12 ನೆ FERROELECTRIC LIQUID CRYSTAL CONFERENCE ನಲ್ಲಿ ಭಾಗವಹಿಸಲು ನಾನು  ಮತ್ತು ನನ್ನ ಬಾಸ್ ಇಬ್ಬರೂ ಗೊತ್ಹೆಂಬುರ್ಗ್ (ಸ್ವೆಡೆನ್ನಿನಲ್ಲಿದೆ) ನಿಂದ ವಿಮಾನ ಹಿಡಿದು ಹೊರಟೆವು.

ನಮಗೆ ನೇರ ವಿಮಾನ ವಿಲ್ಲವಾದರಿಂದ ಗೊತ್ಹೆಂಬುರ್ಗ್ ನಿಂದ ಜರ್ಮನಿ ಯ ಮ್ಯುನಿಕ್ ಗೆ ಪ್ರಯಾಣ ಮಾಡಿ ಅಲ್ಲಿಂದ ಸ್ಪೇನ್ ನ ಬಾರ್ಸಿಲೋನ ಗೆ ಪ್ರಯಾಣ ಮಾಡಲು ನಿರ್ಧರಿಸಿದೆವು. ಗೊತ್ಹೆಂಬುರ್ಗ್ ನಿಂದ ಸ್ಪೇನ್ ಗೆ ಸುಮಾರು ೪ ಘಂಟೆಗಳ ಪ್ರಯಾಣ. ಮಧ್ಯದಲ್ಲಿ ಮ್ಯುನಿಕ್ ನಲ್ಲಿ ಸ್ವಲ್ಪ ಹೊತ್ತು ಕಾದು ಬಾರ್ಸೆಲೋನಾಗೆ ಬಂದಿಳಿಯುವಷ್ಟರಲ್ಲಿ ನಡು ಮಧ್ಯಾನ್ಹ ವಾಗಿತ್ತು. ಬಾರ್ಸಿಲೋನ ಎಂದಾಕ್ಷಣ  ನೆನಪಾಗುವುದು , ಬಾರ್ಸಿಲೋನ ಒಲಂಪಿಕ್ಸ್, ಬಾರ್ಸಿಲೋನ ಫುಟ್ಬಾಲ್ ತಂಡ, ನಂತರ ಬಾರ್ಸಿಲೋನ ದ ಶಿಲ್ಪ ಗೌಡಿ ಯ   ಬಗ್ಗೆ. ಸ್ಪೇನ್ ನ ಪ್ರವಾಸ ಕಥನದಲ್ಲಿ  ಮಹಾನ್ ಶಿಲ್ಪಿಯ ಬಗೆಗೆ ತಿಳಿಸುತ್ತೇನೆ. ಹೀಗೆ ಬಾರ್ಸಿಲೋನ ವಿಮಾನ ನಿಲ್ದಾಣದಿಂದ ಇಳಿದು ಬಾರ್ಸಿಲೋನ ಉತ್ತರ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಮಧ್ಯಾನ್ಹ 1-30 ಆಗಿತ್ತು. ಹಸಿವು ಬೇರೆ, ಜೊತೆಗೆ ಆದಷ್ಟು ಬೇಗ ZARAGOZA ತಲುಪಿದರೆ ಸಾಕೆಂಬ ಯೋಚನೆ ಸೇರಿ ನಮ್ಮ ಮನಸ್ಸು ಓಡುತ್ತಿತ್ತು.

ಬಾರ್ಸಿಲೋನ ದಿಂದ ZARAGOZA ವರೆಗೆ ರೈಲಿ ನಲ್ಲಿ ಹೋದರೆ ಸುಮಾರು 3600 ರೂಪಾಯಿಗಳು. ಅದೇ ಬಸ್ಸಿನಲ್ಲಿ ಹೋದರೆ 600 ರೂಪಾಯಿಗಳು. ಸುಮ್ಮನೆ ಅನಾವಶ್ಯಕ ಹಣ ಖರ್ಚು ಮಾಡುವುದು ಯಾಕೆಂದು ಯೋಚಿಸಿ ನಾನು ಮತ್ತು ನನ್ನ ಬಾಸ್ ಇಬ್ಬರೂ ಬಸ್ಸಿನಲ್ಲೇ ಪ್ರಯಾಣ ಮಾಡೋಣವೆಂದು ನಿರ್ಧರಿಸಿದೆವು. ಬಹುಷ್ಯ ಆ ನಿರ್ಧಾರ ಇಷ್ಟೊಂದು ಭೀಕರವಾಗಿರುತ್ತದೆ ಎಂದು ತಿಳಿದಿದ್ದರೆ ನಾವು ನಿರ್ಧಾರವನ್ನೇ ಕೈ ಬಿಡುತ್ತಿದ್ದೆವು. ಬಾರ್ಸಿಲೋನ ಬಸ್ಸ ನಿಲ್ದಾಣದಿಂದ ZARAGOZA ಕ್ಕೆ ಹೊರಡುವ ಬಸ್ಸ ಟಿಕೆಟ್ ತೆಗೆದುಕೊಂಡು ಸ್ವಲ್ಪ ಊಟ ಮಾಡಿ ಪ್ರಯಾಣ ಮುಂದುವರೆಸೋಣ ಎಂದು ನಿರ್ದರಿಸಿದೆವು . ಆ ಬಸ್ಸ ನಿಲ್ದಾಣದಲ್ಲಿ 2 ನೇ  ಮಹಡಿಯಲ್ಲಿ ಟಿಕೆಟ್ ಕೌಂಟರ್ ಇದೆ, ಆದರೆ ಮೆಟ್ಟಿಲುಗಳ ಹೊರತು ಇನ್ಯಾವ ಸಾಧನವೂ ನಮ್ಮನ್ನು ಮೇಲೆ ಒಯ್ಯಲಾರದು. ಆದರೆ ಕೈಯಲ್ಲಿ ಬ್ಯಾಗ್ ಬೇರೆ ಇದ್ದರಿಂದ ಒಬ್ಬರು ಬ್ಯಾಗ್ ನೋಡಿಕೊಳ್ಳುವುದು, ಇನ್ನೊಬ್ಬರು ಟಿಕೆಟ್ ತರುವುದು ಎಂದು ನಿರ್ದರಿಸಿ ನಾನು ಟಿಕೆಟ್ ತರಲು 2 ನೇ  ಮಹಡಿ ಗೆ ಹೋದೆನು. ಹೋಗುವಾಗ ನನ್ನ ಸಮಸ್ತ ಬ್ಯಾಗ್ ಗಳನ್ನೂ ಅಲ್ಲಿಯೇ ಬಿಟ್ಟು ಕೇವಲ ಹಣದೊಂದಿಗೆ ಹೊರಟನು. ಅಂತೂ 2-30 ರ  ಬಸ್ಸ ಗೆ ಟಿಕೆಟ್ ಲಭಿಸಿತು. ಸಂತೋಷದಿಂದ ಕೆಳಗೆ ಬಂದೆ, ''ಬಹುಶ ಆ ಪ್ರಯಾಣದ ಕೊನೆಯ ನಗೆ ಅದಾಗಿತ್ತು ಎನಿಸುತ್ತದೆ''. ಕೆಳಗೆ ಬಂದು ನನ್ನ ಬ್ಯಾಗ್ ನೋಡುತ್ತೇನೆ , ಬ್ಯಾಗ್ ನಾಪತ್ತೆಯಾಗಿದೆ. ಬಾಸ್,  ಬ್ಯಾಗ್ ಮುಂದೆ ಇದ್ದರೂ ಕಳ್ಳರೂ ಉಪಾಯದಿಂದ ಬ್ಯಾಗ್ ಹಾರಿಸಿದ್ದಾರೆ.

ಆ ಬ್ಯಾಗ ನಲ್ಲಿ ನನ್ನ ಪರಮ ಪ್ರಿಯ ಲ್ಯಾಪ್ಟಾಪ್ ಇತ್ತು, ಕೇವಲ ಕೆಲವೇ ದಿನಗಳ ಹಿಂದೆ ಮೆಚ್ಚಿನ ಮಡದಿಗೆ ಆ ಲ್ಯಾಪ್ಟಾಪ್ ನ್ನು ಅವಳ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡಿದ್ದೆ. ''ಇದನ್ನು ಸರ್ವದಾ ನಿನ್ನ ಬಳಿಯಲ್ಲಿಯೇ ಇಟ್ಟುಕೋ, ನನ್ನ ಮೇಲೆ ಕೋಪ ಬಂದರೆ ಇದನ್ನು ನೋಡು, ಕೋಪ ಇಳಿಯುತ್ತದೆ'', ಎಂದೆಲ್ಲ ಅವಳಿಗೆ ನೀಡಿದ ಸಿಹಿಮಾತುಗಳನ್ನು ಆ ಕಳ್ಳ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ್ದ. ಇಷ್ಟೇ ಆದರೆ ತಾಳಿಕೊಳ್ಳಬಹುದಾಗಿತ್ತು . ಆದರೆ ಅದೇ ಬ್ಯಾಗ್ ಅಲ್ಲಿ ಕೊನೆಯ ಕ್ಷಣದಲ್ಲಿ ನನ್ನ ಪಾಸ್ ಪೋರ್ಟ್ ಹಾಕಿ ಟಿಕೆಟ್ ತರಲು ಹೋಗಿದ್ದೆ. ಒಮ್ಮೆಲೇ ನೆಲ ಕುಸಿದ ಅನುಭವ. ವಿದೇಶದಲ್ಲಿ ಪಾಸ್ ಪೋರ್ಟ್ ಒಂದೇ ನಮ್ಮ ಗುರುತು. ಅದಿಲ್ಲದಿರೆ ನಾವು ''illegal immigrants'' ಒಂದು ಕ್ಷಣ ಏನು ಮಾಡುವುದೆಂದೇ ತೋಚಲಿಲ್ಲ. ಆದರೆ ಜೊತೆಯಲ್ಲಿ ಬಾಸ್ ಇದ್ದಿದ್ದರಿಂದ ಅವರು ಧೈರ್ಯ ತುಂಬಿದರು.

ಕೂಡಲೇ ಅಲ್ಲಿಯೇ ಹತ್ತಿರದಲ್ಲಿದ್ದ ಪೋಲಿಸ್ ಸ್ಟೇಷನ್ ಗೆ ತೆರಳಿ ಕಂಪ್ಲೈಂಟ್ ಕೊಟ್ಟೆವು. ಅಲ್ಲಿನ ಪೋಲಿಸರು  ಮಾವನ ಮನೆಗೆ ಬಂದ ಅಳಿಯನನ್ನು ಸತ್ಕರಿಸಿದಂತೆ ನಮ್ಮನ್ನು ನೋಡಿ ನಗುಮೊಗದಿ ಮಾತನಾಡಿದರೆ ಹೊರತು ತಮ್ಮ ಕರ್ತವ್ಯದ ಬಗೆಗೆ ಎಳ್ಳಷ್ಟೂ ಕಾಳಜಿ ತೋರಿಸಿದಂತೆ ಕಾಣಲಿಲ್ಲ. ಇದರ ಜೊತೆಗೆ '' ಇದೆಲ್ಲ ಇಲ್ಲಿ ಮಾಮೂಲು, ನೀವು ಎಚ್ಚರ ಇರಬೇಕು'' ಎಂಬ ಬಿಟ್ಟಿ  ಉಪದೇಶ ಬೇರೆ ಕೊಟ್ಟರು. ಮನದಲ್ಲಿ ದು:ಖ , ಮೇಲಿಂದ ಇವರ ಮೇಲೆ ಸಿಟ್ಟು, ನಾನು ನಾನಾಗಿರಲಿಲ್ಲ.  ''ಏನಾದರೂ ಮಾಡಿಕೊಂಡು ಸಾಯಿರಿ'' ಎಂದು ಶಪಿಸುತ್ತ (ಯಾವಾಗಲೂ ತುಂಬಾ ಕೋಪ, ಮತ್ತು ನೋವಾದಾಗ ಬಾಯಲ್ಲಿ ಕನ್ನಡ ಶಬ್ದಕೊಶಕ್ಕೇ  ಸವಾಲೆಸೆಯುವ ಬೈಗುಳಗಳು ಬರುತ್ತವಂತೆ) ಅವರಿಂದ ಕಂಪ್ಲೈಂಟ್ ಕೊಟ್ಟಿದ್ದರ ಪ್ರತಿ ತೆಗೆದುಕೊಂಡೆವು.

''ಬಂದದ್ದೆಲ್ಲ ಬರಲಿ, ಆ ಗೋವಿಂದನ ದಯೆ ಒಂದಿರಲಿ'' ಎಂಬ ಮಾತಿನಂತೆ ಊಟವನ್ನು ಮಾಡದೆ ಹಾಗೆಯೇ ಹೊರಡಲು ನಿರ್ಧರಿಸಿದೆವು. ಕಾರಣ ಅಂದು ರವಿವಾರ. ''Indian Embassy'' ಗೆ ರಜೆ. ಆದ್ದರಿಂದ ಪಾಸ್ ಪೋರ್ಟ್ ಬಗ್ಗೆ ತಿಳಿಸಲು ಸೋಮವಾರದವರೆಗೆ ಕಾಯಬೇಕು. ZARAGOZA ಹೋಗಿಯೇ ಸೋಮವಾರ  ಮುಂದಿನ ವಿಚಾರ ಮಾಡೋಣವೆಂದು ತೀರ್ಮಾನಿಸಿ 2-30 ಯ ಬಸ್ಸ ಹತ್ತಿದೆವು. ನನ್ನ ಬಾಸ್ ತುಂಬಾ ವಿಚಲಿತರಾಗಿದ್ದರು. ಹಸಿವಾದರೂ ಅವರಿಗೆ ಊಟ ಮಾಡಲು ಮನಸಿರಲಿಲ್ಲ. ಹಾಗೆಯೇ ಹಸಿದ ಹೊಟ್ಟೆಯಲ್ಲಿಯೇ ZARAGOZA ಬಂದಿಳಿದಾಗ ಸಂಜೆ 7-30 ಆಗಿತ್ತು. ಪುನಃ ನಮ್ಮ ಹೋಟೆಲ್ ಗೆ ಹೋಗಲು ಬಸ್ಸ ಹತ್ತುವ ದುಸ್ಸಾಹಸಕ್ಕೆ ಕೈ ಹಾಕದೆ ಟ್ಯಾಕ್ಸಿ ಹತ್ತಿ ಹೋಟೆಲ್ ಮುಟ್ಟಿದೆವು.

ಹೋಟೆಲ್ ಕೌಂಟರ್ ನವರು ಹೇಳಿದರು ''ಇಲ್ಲಿನ ಪೋಲಿಸಿನವರಿಂದ ಯಾವುದೇ ನಿರೀಕ್ಷೆ ಬೇಡ'' ಎಂದು. ಆಗಲೇ ಚಿಂತೆ ಯ ಪರ್ವತ ಬೆಳೆಯತೊಡಗಿತು. ಮಡದಿಗೆ ಫೋನ್ ಮಾಡಿ ವಿಚಾರ ತಿಳಿಸಿದೆ, ಅವಳಿಗೋ ಗಾಬರಿ. ಮೊದಲ ಬಾರಿಗೆ ಮದುವೆಯ ನಂತರ ಅವಳನ್ನು ಬಿಟ್ಟು ಹೋಗಿದ್ದೆ. ಅವಳಿಲ್ಲದ ಮೊದಲ ಪ್ರಯಾಣವೇ ಇಷ್ಟೊಂದು ವಿಘ್ನಗಳು. ಅವಳಿಗೆ ಸಮಾಧಾನ ನಾನು ಮಾಡಿದೆನೋ , ನನಗೆ ಸಮಾಧಾನ ಅವಳು ಮಾಡಿದಳೋ ಒಟ್ಟಿನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಸಂತೈಸಿಕೊಂಡೆವು. ಮೊದಲ ಸ್ಪೇನ್ ಪ್ರವಾಸದ ಮೊದಲ ದಿನವೇ ''ಪ್ರಥಮ ಚುಂಬನಂ ದಂತ ಭಗ್ನಂ'' ದಂಥ ಸ್ಥಿತಿ ಎದುರಾಗಿತ್ತು.

ಮರುದಿನ ದಿಂದ ನನ್ನ ಪಾಸ್ ಪೋರ್ಟ್ ಗಾಗಿ ನಾ ಪಟ್ಟ ಕಷ್ಟ ಕಾರ್ಪಣ್ಯಗಳು, ಅಸಂಬದ್ದ ರೂಲ್ಸ್ ಗಳು , ತಲೆ ತಿನ್ನಲಾರಂಬಿಸಿದವು. ಅಲ್ಲಿಂದ  ನಾನು ಕ್ಷೇಮವಾಗಿ ಬಂದೆನೆ? ಕಸ್ಟಮ್ಸ್ ಗಳ ಕಣ್ಣಿನಿಂದ ಪಾರಾಗುವುದು ಸಾದ್ಯವಾಯಿತೆ? ಇವೆಲ್ಲ ಪ್ರಶ್ನೆಗಳ ಉತ್ತರದೊಂದಿಗೆ ಮುಂದಿನ ವಾರ ಸಿಗುತ್ತೇನೆ.