Thursday, August 6, 2015

ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ


ಮಗುವಿನ ಮುದ್ದು ನೋಟ ಎಂತ ಕಟುಕನಲ್ಲೂ ಕರುಣೆ ಹರಿಸಬಲ್ಲುದು. ಮಗುವಿನ ನಗು, ಒಂದು ನಿಷ್ಕಲ್ಮಶ  ಸಮುದ್ರ ಧಾರೆ.  ಸಂತೋಷಕ್ಕಷ್ಟೇ  ಜಾಗ. ನೋವನ್ನು ಮರೆಸುವ ನಲಿವನ್ನು ಬೆಳೆಸುವ ಮಹಾ ಸಂಜೀವಿನಿ ಶಕ್ತಿ ಆ ಮಗುವಿನ ನಗುವಿಗಿದೆ. ಮಕ್ಕಳೇ ಹಾಗೆ, ಅವರ ಬೆಳವಣಿಗೆಯ ಪ್ರತಿ ಕ್ಷಣವೂ ಅನುಕರಣೀಯ ಎನ್ನುವ ಹಾಗೆ ನಮ್ಮ ಮನಸ್ಸಿನಲ್ಲಿ ಮುದ್ರೆ ಒತ್ತಿ ಬಿಡುತ್ತಾರೆ. ಅವರಿಗೆ ನಾಳಿನ ಚಿಂತೆಯ ಪರಿವೆಯಿಲ್ಲ, ನಿನ್ನೆಯ ದು:ಖದ ಗೊಡವೆಯಿಲ್ಲ. ಮಗು ಜಗತ್ತಿನ ಬಹುದೊಡ್ಡ ಗುರು. ಕುತೂಹಲದ ಭಂಡಾರ. ಎಲ್ಲಿಯವರೆಗೆ ಅವರ ಕುತೂಹಲ ಹಾಗೆಯೇ ಇರುತ್ತದೆಯೋ ಅಲ್ಲಿಯವರೆಗೆ ಜಗತ್ತು ಬೆಳೆಯುತ್ತದೆ. ಕುತೂಹಲ  ಕೊಂದ ದಿನ ನಮ್ಮ ಅಂತ್ಯಕ್ಕೆ ನಾವೇ ಕೊಡಲಿ ಹಾಕಿದಂತೆ. 
ಸುಮಾರು 2 ವರ್ಷಗಳ ಹಿಂದೆ ನಡೆದ ಒಂದು ಅವಿಸ್ಮರಣೀಯ, ಮನ ಕಲಕುವ ಘಟನೆ ಯ ಬಗೆಗೆ ಬರೆಯುತ್ತಿದ್ದೆನೆ. ಆಗಿನ್ನೂ ನನ್ನ ಮಗ ಅಭಿನವ 14 ತಿಂಗಳ  ಪೋರ. ತುಂಟ ಹಾಗೂ ಬಲು ಹಾಸ್ಯಗಾರ ಕೂಡಾ. ನಾವು ಆಗ ಮಲೇಶಿಯದಲ್ಲಿ   ಇದ್ದೆವು. ನನಗೆ  ಮೊದಲಿನಿಂದಲೂ ಮಕ್ಕಳೆಂದರೆ ಸ್ವಲ್ಪ ಹೆಚ್ಚಿನ ಪ್ರೀತಿ. ಅವರಿಗೆ ಸ್ವಲ್ಪ ಗದರಿಸಿದರೂ ನನಗೆ  ನೋವು ಜಾಸ್ತಿ. ನನ್ನ ಮಗನ ವಿಷಯದಲ್ಲೂ ಹಾಗೆ, ಗದರಿಸುವುದು ಸ್ವಲ್ಪ ಕಡಿಮೆಯೇ . ನನ್ನ ಅರ್ಧಾಂಗಿ ಆ ವಿಷಯದಲ್ಲಿ ಬಲು ಶಿಸ್ತು. ಅವಳ ಪ್ರೀತಿ ತುಂಬಿದೆ ಗದರಿಕೆ ನನ್ನ ಮಗನಿಗೆ  ವೇದ ವಾಕ್ಯ. ಅದಕ್ಕೆ ಅಲ್ಲವೇ ಹಿರಿಯರು ಹೇಳಿದ್ದು
 ಮನೆಯೇ ಮೊದಲ ಪಾಠಶಾಲೆ 
ಜನನಿ ತಾನೇ ಮೊದಲ ಗುರುವು 
ಜನನಿಯಿಂದ ಪಾಠ ಕಲಿತ ಜನರು ಧನ್ಯರು 
ಎಂದು. ಜನನಿಯ ಅಪರಿಮಿತ ತಾಳ್ಮೆ ನಿಜಕ್ಕೂ ಮೆಚ್ಚುವಂತಾದ್ದು. ಮುಂದೊಮ್ಮೆ ಅದರ ಬಗ್ಗೆ ಬರೆಯುತ್ತೇನೆ.
ಆಗಿನ್ನೂ ಅಭಿನವನಿಗೆ ತುಂಟತನದ ಪರಮಾವಧಿಯ ಕಾಲ. ತನ್ನ ಬಲಿಷ್ಟವಲ್ಲದ ಕಾಲಿನಲ್ಲಿ ತುಂಟ ಹೆಜ್ಜೆಯಿಡುತ್ತ  ಓಡುತ್ತಿದ್ದರೆ ಹೆತ್ತವರ ಸಂತೋಷಕ್ಕೆ  ಎಣೆಯಿಲ್ಲ .ಆವ ಮಾಡದ ಹೋಳಿಯಿಲ್ಲ. ಅಮ್ಮನಿಗೆ ದಿನವೂ ಹೊಸ ಹೊಸ ಕೆಲಸ ನೀಡುವ ಮಹಾನ್ ಪುರುಷ ಆತ. ಪ್ರತಿ ದಿನ ನಾನು ಆಫೀಸ್ ನಿಂದ  ಮನೆಗೆ ಬಂದ ಕೂಡಲೇ ನನ್ನಾಕೆ ಅವನ ಪುರಾಣಗಳನ್ನು ಹೇಳುತ್ತಿದ್ದಳು. ಒಟ್ಟಿಗೆ ಕುಳಿತು ನಗುವ ಸರದಿ ಇಬ್ಬರದು. ಅವನ ಬಾಲ್ಯದ ಅನೇಕ ಘಟನೆಗಳು ಸ್ಮೃತಿ ಪಟಳದಲ್ಲಿ  ಅಚ್ಚಳಿಯದೇ ಹಾಗೆ ಉಳಿದುಕೊಂಡಿದೆ. ಮುಂದೊಮ್ಮೆ ಆ ಬುತ್ತಿಯನ್ನು ನಿಮ್ಮೆದುರಿಗೆ ಬಿಚ್ಚುವಾಸೆ. ಆ ಮಕ್ಕಳ ಮನಸ್ಸು ನೋಡಿ, ಅವರಿಗೆ ಯಾರ ಹಂಗೂ ಇಲ್ಲ, ಅಪ್ಪ ಅಮ್ಮ ಗದರಿಸುತ್ತಾರೆ ಎಂಬ ಗೊಡವೆಯಿಲ್ಲ. ಪಕ್ಕದ ಮನೆಯವರು ಏನೆಂದಾರು ಎಂಬ ಚಿಂತೆಯಿಲ್ಲ . ತಾವಾಯಿತು  ತಮ್ಮ ಹೋಳಿಯಾಯಿತು ಅಷ್ಟೇ . ಕೆಲವೊಮ್ಮೆ ಮಿತಿ  ಮೀರಿದಾಗ ಎರಡು ಪ್ರೀತಿಯ ಪೆಟ್ಟು ಬಿದ್ದಿದ್ದು ಇದೆ. ಆದರೆ ಅದಕ್ಕೆಲ್ಲ ಸೊಪ್ಪು ಹಾಕುವ ಜಾಯಮಾನ ಮಕ್ಕಳದ್ದಲ್ಲ . ಅವರಿಗೆ ಗೊತ್ತು, ಅಪ್ಪ ಅಮ್ಮ ಆಮೇಲೆ ಪ್ರೀತಿ ಮಾಡುತ್ತಾರೆ ಎಂದು .


ಜಗತ್ತಿನ ವೈಚಿತ್ರ್ಯ ನೋಡಿ, ಮಗು ಎಷ್ಟೇ ಕಾಟ ಕೊಟ್ಟರೂ ಅದನ್ನು ಪ್ರೀತಿಯಿಂದ ಸ್ವೀಕರಿಸುವ ನಾವು ಬೇರೆಯವರು ಕೊಟ್ಟಾಗ ಸ್ವೀಕರಿಸುವುದಿಲ್ಲ . ಅದಕ್ಕೆ ಹಿರಿಯರು ಹೇಳಿದ್ದು, ಮನಸ್ಸು ಮಗುವಿನದಾಗಲಿ, ವಿಚಾರ ಹೆಮ್ಮರದಂತಿರಲಿ ಎಂದು .
ಮಲೇಶಿಯದಲ್ಲಿ ಆ ದಿನ ನಡೆದ ಘಟನೆ ನಮ್ಮ ಬದುಕಿನಲ್ಲಿ ಯಾವಾಗಲೂ ನೆನಪಿನಲ್ಲಿ ಉಳಿಯುವಂತದ್ದು . ಸುಮಾರು ರಾತ್ರಿ 8 ಘಂಟೆಯ ಸಮಯ. ಆಗಿನ್ನೂ ಊಟಕ್ಕೆ ರೆಡಿ ಆಗುತ್ತಿದ್ದೆವು. ಅಭಿನವನಿಗೆ ಊಟದ ಮೇಲೆ ಆಸಕ್ತಿ ಅಷ್ಟಕ್ಕಷ್ಟೇ . ಅವನದು ಏನಿದ್ದರೂ ಆಟ, ಆಮೇಲೆ ಒಟ , ನಡುವಿನಲ್ಲಿ ಅಮ್ಮನಿಗೆ ಕೊಡುವ ಕಾಟ ....
ಎಂದಿನಂತೆ ಅಂದು ಇಡಿ ಮನೆಯಲ್ಲಿ ಓಡಾಡಿಕೊಂಡು ಆಟ ಆಡುತ್ತಿದ್ದ . ಮಲೇಶಿಯದ ಎಲ್ಲ ಮನೆಗಳಿಗೂ ಹಾಗೂ ಎಲ್ಲ ಮನಸುಗಳಿಗೂ autolock system ಇದೆ.  ಇಲ್ಲಿನ ಮನೆಗಳ ಎಲ್ಲ ಬಾಗಿಲುಗಳಿಗೂ autolock ಇರುವುದರಿಂದ ಎಷ್ಟೋ ಸಲ ನಾನೇ ಹೊರಗಡೆ ಸಿಕ್ಕಿ ಹಾಕಿಕೊಂಡು ಪೇಚಾಟಕ್ಕೆ ಸಿಲುಕಿದ ನಿದರ್ಶನಗಳಿವೆ. ಅಭಿನವನ ಅತೀ ಇಷ್ಟದ ಆಟ ಅಡಗಿಕೊಳ್ಳುವ ಆತ. ನಾನು ಮತ್ತು ನನ್ನಾಕೆ ಮನೆಗೆ ಬಂಡ ಕೂಡಲೇ ಮಕ್ಕಳ ಜೊತೆ ಮಕ್ಕಳಾಗಿ ಹೋಗುತ್ತೇವೆ. ಮಕ್ಕಳಿಗೆ ಅವರದೇ ಭಾಷೆಯಲ್ಲಿ ಆಡಿದರಷ್ಟೇ ಇಷ್ಟವಾಗುತ್ತದೆ . ನಮ್ಮ ದಿನದ ಜಂಜಾಟ, ದಿನದ ಒತ್ತಡ ಅವರ ಮುಂದೆ ಊದಿದರೆ ಅವರಿಗೇನು  ಅರ್ಥವಾಗಬೇಕು. ನಾವು ಕೂಡಾ ಹಾಗೆ, ಊದುವ ಜಾಗದಲ್ಲಿ ಊದಲು ಭಯ, ಕೇಳದ ಜಾಗದಲ್ಲಿ ಊದುವ ತವಕ. ಎಷ್ಟೇ ಒತ್ತಡಗಳು ಇದ್ದರೂ ಅದನ್ನು ಮನೆಗೆ ತರಬಾರದೆಂಬ ಅಲಿಖಿತ ಬಾಂಡ್ ಪೇಪರ್ ಗೆ ನಾನು ಮತ್ತು ನನ್ನಾಕೆ ಸಹಿ ಹಾಕಿ ಹಲವು  ವರ್ಷಗಳೇ ಕಳೆದಿವೆ . 
ಚಿಂತೆಯಿಲ್ಲದವನಿಗೆ ಸಂತೆಯಲ್ಲಿಯೇ  ನಿದ್ದೆ 
ಚಿಂತೆ ಹಲುಬುವಗೆ  ಹೋದಲ್ಲೆಲ್ಲ ಚಿತೆ 
ಬದುಕು ಕ್ಷಣಿಕ, ಒತ್ತಡಗಳು ಇರುವುದು ಮಾಮೂಲು . ಅತ್ತರು ಅದೇ ಸೂರ್ಯ, ನಕ್ಕರೂ ಅದೇ ಸೂರ್ಯ . ಆದರೆ ನಕ್ಕು ತೆಗೆದುಕೊಳ್ಳುವ ಬದುಕಿದೆಯಲ್ಲ ಅದರ ಮಜವೇ ಬೇರೆ. ಮುಖದ ನಗು, ಬದುಕಿನ ಅನೇಕ ಹುಳುಕನ್ನು , ಕ್ರೋಧವನ್ನು , ಹೊಲಸನ್ನು, ಅಸೂಯೆಯನ್ನು ಮುಚ್ಚುತ್ತದೆ.  ಅದಕ್ಕೆ ನಾವು ಹಾಗೆ ನಿರ್ಧಾರ ಮಾಡಿದ್ದು . ಕೆಲವೊಮ್ಮೆ ನಮ್ಮ ನಿರ್ಧಾರ ತಪ್ಪು ಎನ್ನುವಷ್ಟರ ಮಟ್ಟಿಗೆ ಅಭಿನವ ಸತಾಯಿಸಿದ್ದು ಇದೆ.  ಈಗೆಲ್ಲ ಮನೆಗೆ ಹೋದರೆ ಅವನಿಗೆ ಆಟ ಆಡಲು  ನಾವು ಬೇಕೇ ಬೇಕು . ಒಂದು ಘಂಟೆ ಅವನಲ್ಲಿ ಆಡಿದರೆ ಉಳಿದ ಎರಡು ಘಂಟೆ ಅವನೇ ಅವನಷ್ಟಕ್ಕೆ ಆಡಿಕೊಳ್ಳುತ್ತಾನೆ . ಇಂತಿಪ್ಪ ಸನ್ನಿವೇಷದಲ್ಲಿ ಮಲೇಶಿಯದ ಆ ದಿನದ ರಾತ್ರಿಯ 8 ಘಂಟೆಯ ಊಟ ಮಾಡುವ ವೇಳೆಯಲ್ಲಿ ಅದೊಂದು ಘಟನೆ ನಡೆದು ಹೋಯಿತು .
ಅಡಗಿಕೊಳ್ಳುವ ಆಟ ಆಡುತ್ತಿದ್ದ ಮುದ್ದು ಪೋರ ಅಡಗಲೆಂದು bedroom ಗೆ ಹೋದ . ಅದ್ಯಾವ ಘಳಿಗೆಯೋ ಕಾಣೆ, ಆತನಿಗೆ ಬಾಗಿಲು ಹಾಕಿ ಅಡಗಿಕೊಳ್ಳುವ ಮನಸ್ಸಾಯಿತು . ಬಾಗಿಲು ಎಳೆದೇ  ಬಿಟ್ಟ . ಆ autolock ಬಾಗಿಲು ಮುಚ್ಸಿಕೊಂಡಿತು . ರಾತ್ರಿ 8 ಘಂಟೆ, ರೂಮಿನ ಒಳಗಡೆ ಕತ್ತಲೆ ಬೇರೆ . ಕತ್ತಲಿನ ಪ್ರಪಂಚದ ಅರಿವೆಯೇ ಇಲ್ಲದ ಬಾಲಕ ಕತ್ತಲಿಗೆ ಹೆದರಿ ಬೆಚ್ಚಿ ಹೋಗಿದ್ದ .
ದುರ್ದೈವಕ್ಕೆ ಮನೆಯ ಮೇನ್ ಡೋರ್ ನ ಕೀ ನಮ್ಮ ಬಳಿ ಇತ್ತೇ ಹೊರತು ಎಲ್ಲ ಬಾಗಿಲುಗಳದಲ್ಲ . ಆ ದಿನ ಶನಿವಾರ ಬೇರೆ . ನಾವು ಯೂನಿವರ್ಸಿಟಿ ಅಪಾರ್ಟ್ ಮೆಂಟ್ ನಲ್ಲಿ ಇದ್ದಿದ್ದರಿಂದ ಸೆಕ್ಯೂರಿಟಿ ಯವರನ್ನು ಕರೆಯೋಣ ಎಂದರೆ ಎಲ್ಲರಿಗೂ ರಜೆ. ಅಭಿನವ ಒಂದೇ ಸವನೆ ಅಳುತ್ತಿದ್ದಾನೆ, ಬಹುಶ: ಅಂದು ಎಲ್ಲ ದೇವರ ನೆನಪಾಗಿದ್ದು ಸುಳ್ಳಲ್ಲ . ಅಭಿನವ  14 ತಿಂಗಳ ಪೋರ . ಅವನಿಗೆ ಬಾಗಿಲು ತೆಗೆಯುವುದು ಹೇಗೆಂದು ಗೊತ್ತಿಲ್ಲ. ಹೆದರಿಕೆಯಿಂದ ಕಂಗಾಲಾದ ಅಭಿನವನ ಅಳು ಕರುಳು ಹಿಂಡುವಂತೆ ಇತ್ತು. ಅವನ ಪ್ರತಿ ಶಬ್ದ ಅಂದು ಮನೆಯಲ್ಲಿ ನೋವಿನ  ಅಲೆ ತಂದಿತ್ತು . ಅವನನ್ನು ಹೊರಗಡೆಯಿಂದ ಎಷ್ಟು ಸಮಾಧಾನ ಪಡಿಸಿದರೂ ಪ್ರಯೋಜನವಾಗಲಿಲ್ಲ . ನಾವಿದ್ದದ್ದು ಎರಡನೇ ಅಂತಸ್ತಿನ ಮನೆಯಲ್ಲಿ. ಕಿಡಕಿಯಿಂದ ಕರೆಯಲಾಗದ ಸ್ಥಿತಿ .
ಅದೇ ಸಮಯಕ್ಕೆ ಕೆಳಗಿನ ಮನೆಯ ನನ್ನ ಸ್ನೇಹಿತ ಬಂದು ಅವನು ಸಹಾಯಕ್ಕೆ ಯತ್ನಿಸಿದ. ನಾವು ಬಾಗಿಲು ಒಡೆಯಲು ಯತ್ನಿಸಿದೆವು ಆದರೆ ಬಾಗಿಲಿನ ಹಿಂದೆ ಅಭಿನವ ನಿಂತಿದ್ದಾನೆ . ಬಾಗಿಲು ಬಿದ್ದರೆ ಅವನ ಮೈಮೇಲೆ ಬೀಳುತ್ತದೆ . ಕೆಲವೊಮ್ಮೆ ಸನ್ನಿವೇಷಗಳು ಬದುಕಿನ ಅನೇಕ ದಾರಿಗಳನ್ನು ತೊರಿಸುತ್ತವೆ. ಅಭಿನವನಿಗೂ ಏನನ್ನಿಸಿತೋ ಏನೋ, ಬಾಗಿಲಿನ ಕೆಳಗೆ ಕಿಂಡಿಯಿಂದ ಸಣ್ಣ ಬೆಳಕು ಅವನಿಗೆ ಕಾಣುತ್ತಿತ್ತು . ಆ ಕಿಂಡಿಯಿಂದ ಅವನ ಪುಟ್ಟ ಬೆರಳು ಗಳನ್ನು ಹೊರ ಹಾಕಿ ಅಳುತ್ತಿದ್ದ .
ಆ ಸಂಧರ್ಭ ಬದುಕಿನಲ್ಲಿಯೇ ಮರೆಯಲಾಗದ್ದು. ಹ್ರದಯ ಹಿಂಡುವ ಆ ಸನ್ನಿವೇಷ ಕಣ್ಣಿನಲ್ಲಿ ಕಣ್ನೀರ ಧಾರೆಯನ್ನೇ ಹರಿಸಿತ್ತು. ಆ ಪುಟ್ಟು ಬೆರಳುಗಳನ್ನು ಪಟ ಪಟನೆ ಹೊಡೆಯುತ್ತ ಆತ ಅಳುತ್ತಿದ್ದ . ಹೊರಗೆ ನಿಸ್ಸಹಾಯಕತೆಯಿಂದ ನಾವು ಅವನನ್ನು ರೂಮಿನಿಂದ ಹೊರಗೆ ತರುವುದು ಹೇಗೆಂದು ಯೋಚಿಸುತ್ತಿದ್ದೆವು . ಸ್ನೇಹಿತನ ಸಹಾಯದಿಂದ ಪಕ್ಕದ ಮನೆಯ ಕಿಡಕಿ ಯನ್ನು ಹಾರಿ ನಮ್ಮ ಮನೆಯ ಕಿಡಕಿಯ ಹತ್ತಿರ ಬಂದು ಅಭಿನವನನ್ನು ನೋಡಿದ ಕೂಡಲೇ ಆತ  ಓಡಿ  ಕಿಡಕಿಯ ಹತ್ತಿರ ಬಂದು ನನ್ನ ನೋಡಲಾರಂಭಿಸಿದ . ದೂರ ಸರಿ, ನಾನು ಕಿಡಕಿ ಯ ಗ್ಲಾಸ್ ಒಡೆದು ಒಳಗೆ ಬರುತ್ತೇನೆ ಎಂದು ಎಷ್ಟು ಹೇಳಿದರೂ ಅವನಿಗೆ ಅರ್ಥವಾಗದು. ರಾತ್ರಿಯ ಕತ್ತಲಿನ ಪ್ರಪಂಚಕ್ಕೆ ಆತ ಹೆದರಿ ಕಂಗಾಲಾಗಿ ಹೋಗಿದ್ದ . ಕೊನೆಗೆ ದೇವರ ಮೇಲೆ ಭಾರ ಇಟ್ಟು ಗ್ಲಾಸ್ ನ ಡೋರ್ ಅನ್ನು ನನ್ನ ಕಡೆಗೆ ಜೋರಾಗಿ ಎಳೆದುಕೊಂಡೆ . ಗ್ಲಾಸ್ ಒಡೆದರೂ ಅಧ್ರಷ್ಟಕ್ಕೆ ಯಾರಿಗೂ ಪೆಟ್ಟಾಗಲಿಲ್ಲ . ಕೂಡಲೇ ಕಿಡಕಿ ಹಾರಿ ರೂಮಿನ ಒಳಗೆ ಹೋಗಿ ಅವನ ಅಪ್ಪಿಕೊಂಡೆ . ಆ ಕ್ಷಣ ಜೀವನದ ಮರೆಯಲಾರದ ಕ್ಷಣಗಳಲ್ಲಿ ಒಂದು . ಅಭಿನವ ಅತ್ತು ಅತ್ತು ಎಚ್ಚರ ತಪ್ಪುವ ಸ್ಥಿತಿಯಲ್ಲಿ ಇದ್ದ.  ಆ ದಿನ ಇಡೀ ರಾತ್ರಿ ಅಭಿನವನ ಮುಖ ನೋಡುತ್ತಾ ನಾನು ನನ್ನಾಕೆ ದಿನ ಕಳೆದೆವು .

ಅಂದಿನಿಂದ ಇಂದಿನವರೆಗೂ ಕತ್ತಲಿಗೆ ಆತ  ಸ್ವಲ್ಪ ಹೆದರುತ್ತಾನೆ. ಆ ಭಯ ಇನ್ನೂ ಮನಸ್ಸಿನಲ್ಲಿ ನೆಟ್ಟಿದೆ . ಆ ಪುಟ್ಟ ಬೆರಳುಗಳು ಬಾಗಿಲಿನ ಕೆಳಗಿಂದ ಬಂದ ಆ ಘಟನೆ ನೆನಪಿನಲ್ಲಿ ಉಳಿಯುವ ಒಂದು ಘಟನೆ . ಈಗ ಅಭಿಗೆ 4 ವರ್ಷ , ಪ್ರತಿ ದಿನ ರಾತ್ರಿ ಮಲಗುವಾಗ ತನ್ನ ಬಾಲ್ಯದ ಕಥೆ ಕೇಳುತ್ತಾನೆ . ನಿನ್ನೆ ಹೀಗೆಯೇ ಈ ಘಟನೆ ಹೇಳುವಾಗ ಮತ್ತೆ ಕಣ್ಣು ನೀರಾಯಿತು . ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.
ಓದಿ ನಿಮ್ಮ ಅಭಿಪ್ರಾಯ ಹೇಳುತ್ತಿರಲ್ಲ ...
ನಿಮ್ಮವನೇ
ಗುರು ಬಬ್ಬಿಗದ್ದೆ