Friday, January 30, 2009

ಮರೆತು ಹೋಗುವ ಮುನ್ನ.....

ಮರೆತು ಹೋಗುವ ಮುನ್ನ.....

- ಗುರು ಬಬ್ಬಿಗದ್ದೆ.

೨೦೦೯ ವಿಶ್ವಕ್ಕೆ ಮಾರಕವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ೨೦೦೭ ರಲ್ಲಿ ಬೀಗುತ್ತಿದ್ದ ಕಂಪನಿಗಳು ೨೦೦೯ ಕ್ಕೆ ತೆರೆಮರೆಗೆ ಸರಿಯುತ್ತಿವೆ. ಸಾಫ್ಟವೇರ್ ಕಂಪನಿಗಳು ಹಾರ್ಡ್ ಆಗುತ್ತಿವೆ. ಹಾರ್ಡ್ವೇರ್ ಕಂಪನಿಗಳು ಅರ್ಥಿಕ ಹಿಂಜರಿತದಿಂದ ಸಾಫ್ಟ್ ಆಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬದುಕುವುದು ಹೇಗೆ ಎಂಬ ಯೋಚನೆ ಎಲ್ಲರಿಗೂ ಆರಂಭವಾಗಿದೆ. ಅನಿಶ್ಚಿತತೆ ವಿಶ್ವದ ಪ್ರತಿ ನಾಗರಿಕನಲ್ಲೂ ತಾಂಡವವಾಡುತ್ತಿದೆ. ಇದ್ದ ಹಣ ಕರ್ಚು ಮಾಡಲು ಈಗ ಆತಂಕದ ಸನ್ನಿವೇಶ. "ನಾಳೆ ಹೇಗೆ ಎಂಬ ಚಿಂತೆ ಸದಾ ಮನದಲಿ" ಎಂಬ ಕವಿವಾಣಿಯಂತೆ ತ್ರಿಶಂಕು ಸ್ವರ್ಗ ನಮ್ಮಲ್ಲೇ ನಿರ್ಮಾಣವಾಗಿದೆ.

ವಿಶ್ವದ ದೊಡ್ಡಣ್ಣ ಎಂದು ಮೆರೆಯುತ್ತಿದ್ದ ಅಮೇರಿಕಾವೇ ಇಂದು ತತ್ತರಿಸುತ್ತಿದೆ. ಯಾವ ಬಾಗಿಲಿನಿಂದ ತಪ್ಪಿಸಿಕೊಳ್ಳುತ್ತಿದ್ದರೋ ಅದೇ ಬಾಗಿಲು ಇಂದು ಮುಚ್ಚುತ್ತಿದೆ. ಎಲ್ಲಡೆಯೂ ಅಂಧಕಾರ. ಯಾರಿಗೆ ಹಿತವಚನ ಹೇಳಲು ಸದಾ ಕಾಯುತ್ತಿದ್ದರೋ ಅವರದೇ ಸ್ಥಿತಿ ಗಂಭೀರ. ಭೂಮಿ ಗೋಳಾಕಾರವಾಗಿದೆ ಎನ್ನುವುದು ಸುಳ್ಳಲ್ಲ. ಮೆರೆದವನು ಬೀಳಲೇ ಬೇಕು. ಇನ್ನೊಬ್ಬ ಮೆರೆಯಲೇಬೇಕು ಅಲ್ಲವೇ. ಆರ್ಥಿಕ ಒತ್ತಡ ತಾಳಲಾರದೆ ಎಲ್ಲ ಬ್ಯಾಂಕಗಳೂ ಮುಚ್ಚುತ್ತಿವೆ. ಕಂಪನಿಗಳೂ ದಿವಾಳಿಯಾಗುತ್ತಿವೆ. ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯ ಪಶ್ಚಿಮ ದೇಶಗಳಿಗೆ ಸಾದ್ಯವಿಲ್ಲ ಅದು ಏಶಿಯ ದ ದೇಶಗಳಿಗೆ ಮಾತ್ರ ಸಾದ್ಯ ಎಂಬ ಕಾಲ ದೂರವಿಲ್ಲ. ಇನ್ನೆಷ್ಟು ದಿನಗಳು ಬೇಕೋ ಗೊತ್ತಿಲ್ಲ ಸುಧಾರಿಸಲು. ಮರೆತು ಹೋಗುವ ಮುನ್ನ ಒಂದು ಸುತ್ತು ಅಷ್ಟೆ.

ಮರೆತು ಹೋಗುವ ಮುನ್ನ ಮರೆಯದೆ ಇರುವ ಇನ್ನೊಂದು ಘಟನೆ ಎಂದರೆ ವಿಶ್ವವನ್ನು ಭಾದಿಸುತ್ತಿರುವ ಉಗ್ರಗಾಮಿ ಚಟುವಟಿಕೆಗಳು ಹಾಗೂ ಭಯೋತ್ಪಾದನೆ. ಘಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಮಾರಣ ಹೋಮ, ಮುಂಬೈ ಮೇಲೆ ನಡೆದ ಭೀಕರ ದಾಳಿ, ನಸು ಮುಂಜಾವಿನ ಕನಸಿನಲ್ಲಿಯೇ ಇಹದ ನಂಟನ್ನು ಮುಗಿಸುವ ಮುಗ್ಧ ಜೀವಿಗಳ ಕರುಣಾಭರಿತ ರೋಧನ, ಮನುಕುಲದ ಬಗೆಗೆ ಅನುಮಾನವನ್ನು ಮೂಡಿಸಿವೆ. ಮಾನವ ಬೆಳೆದಂತೆಲ್ಲ ಮೃಗೀಯ ಭಾವನೆಗಳ ಸರದಾರನಾಗುತ್ತಿದ್ದಾನೆ. ಆತ ಎಷ್ಟೇ ಸಾಧನೆ ಮಾಡಿದರೂ ತನ್ನವರೊಂದಿಗೆ ಬಾಳಲಾಗದು ಎಂದರೆ ಮ್ರಗಕ್ಕಿಂತಲೂ ಕಡೆ. ತನ್ನ ಪಾಶವೀ ಕ್ರತ್ಯದಿಂದ ಇನ್ನೊಬ್ಬ ಮುಗ್ಧನನ್ನು ಕೊಲ್ಲುವ ನೀಚ ಹಂತಕ್ಕೆ ಇಳಿಯುವ ಮನುಜನಿಂದ ಶಾಂತಿ ಮಂತ್ರವನ್ನು ನಿರೀಕ್ಷಿಸಲು ಸಾದ್ಯವೇ? ನಾವಿನ್ನೂ ಹಳೆಯ ಶಿಲಾಯುಗದಲ್ಲಿದ್ದೇವೆ ಎಂಬುದನ್ನು ಪದೇ ಪದೇ ತೋರಿಸುತ್ತಾ ಪ್ರಾಣಿಗಳಂತೆ ಕಚ್ಚಾಡುತ್ತಿರುವ ಮಾನವನ ಸುಧಾರಣೆ ಇಂದಿನ ಮೊದಲ ಆದ್ಯ ವಿಷಯ. ಪದೇ ಪದೇ ನಮ್ಮ ಮೇಲೆ ಎರಗುತ್ತಿರುವ ಧರ್ಮದ ಹೆಸರಿನಲ್ಲಿ ಮುಗ್ಧರನ್ನು ಕೊಲ್ಲುವ ಪಾಕಿಸ್ತಾನಿ ಭಯೋತ್ಪಾದಕನ ತಾಂಡವವಾಟಕ್ಕೆ ತೆರೆ ಎಳೆಯಲೇಬೇಕಾಗಿದೆ.

ಮರೆತು ಹೋಗುವ ಮುನ್ನ ಮರೆಯಲಾಗದ ಇನ್ನೊಂದು ಘಟನೆ ವಿಶ್ವವನ್ನೇ ತಲ್ಲಣಿಸಿದ ಸತ್ಯಮ್ ಪ್ರಕರಣ. ಅತ್ಯಂತ ಲೆಕ್ಕಾಚಾರದ ಭಯೋತ್ಪಾದಕನಂತೆ, ನೋವಾಗದೇ ಜೀವ ತೆಗೆಯುವ ಪ್ರಕ್ರಿಯೆಯನ್ನು ಕರಗತ ಮಾಡಿಕೊಂಡ ಸತ್ಯಮ್ ನ ರಾಮ ಲಿಂಗ ರಾಜು ದೇಶದ ಪ್ರತಿಷ್ಟೆಗೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವಾಗ ಕೇವಲ ಒಬ್ಬ ವ್ಯಕ್ತಿ ಮಾತ್ರ ಕಾರಣನೆ? ಇಲ್ಲ ಇನ್ನು ಕಾಣದ ಕೈಗಳ ನಿಘೂಢತೆ ಇದೆಯೇ ಎಂಬುದು ಮುಂದಿರುವ ಪ್ರಶ್ನೆ. ಇಷ್ಟೊಂದು ವರ್ಷ ನಾಜೂಕಾಗಿ ಜನರನ್ನು ವಂಚಿಸುತ್ತಿದ್ದ ರಾಮ ಲಿಂಗಾ ರಾಜು ಗೆ ಅನೇಕರು ಬೆಂಬಲ ನೀಡಿರಲೇಬೇಕು. ಲೆಕ್ಕ ಪತ್ರ ವಿಭಾಗದ ಸಹಾಯವಿಲ್ಲದೆ ಇದನ್ನು ಮಾಡಲು ಸಾದ್ಯವಿಲ್ಲ ಎನ್ನುವುದು ಎಂಥ ದಡ್ಡನಿಗೂ ತಿಳಿಯುವ ವಿಚಾರ. ಹಣ ಬಲ, ತೋಳ್ಬಲ, ರಾಜಕಾರಣಿಯ ಬಲ ಎಲ್ಲ ಇರುವ ರಾಮ ಲಿಂಗಾ ರಾಜು ಪ್ರಕರಣವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲದ ವಿಷಯ. ಘನತೆವೆತ್ತ ನ್ಯಾಯಾಲಯ ಇನ್ನೆಂದೂ ಇಂಥಹ ಪ್ರಕರಣ ದೇಶದ ಮರ್ಯಾದೆಯನ್ನು ಹರಾಜಾಕದಂತ ತೀರ್ಮಾನವನ್ನು ನೀಡುತ್ತದೆಯೇ? ಕಾಡು ನೋಡೋಣ.

ಮರೆತು ಹೋಗುವ ಮುನ್ನ ದೇಶದ ಕ್ರೀಡಾ ರಂಗದ ಸಾಧನೆಯನ್ನು ಹೊಗಳಲೆಬೇಕಾಗಿದೆ. ಆಸ್ತ್ರೇಲಿಯನ ಓಪನ್ ನನ್ನು ಗೆದ್ದ ಮಹೇಶ ಭೂಪತಿ ಹಾಗೂ ಸಾನಿಯಾ ಮಿರ್ಜಾ, ಜೂನಿಯರ್ ಚಾಂಪಿಯನ್ ಯೂಕಿ ಭಾಂಬ್ರಿ ಅವರ ಸಾಧನೆ ಮುಂಬರುವ ದಿನಗಳಲ್ಲಿ ಟೆನ್ನಿಸ್ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ನೆರವು ನೀಡುವುದರಲ್ಲಿ ಅನುಮಾನವೇ ಇಲ್ಲ. ತಾನು ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ಮಾಡುವ ಮಾಯಗಾರ ಮಹೇಂದ್ರ ಸಿಂಗ್ ಧೋನಿ ಪಡೆಯ ಗೆಲುವು ಕ್ರಿಕೆಟ್ ಭಾರತದಲ್ಲಿ ಯಾಕೆ ಜನಪ್ರಿಯ ಎಂಬ ಪ್ರಶ್ನೆಗೆ ಉತ್ತರ ನೀಡಿದೆ. ಬಲಿಷ್ಟ ಆಸ್ಟ್ರೇಲಿಯವನ್ನು ಬಗ್ಗು ಬಡಿದು, ನಂತರ ಇಂಗ್ಲೆಂಡನ್ನು ಮಣಿಸಿ, ಇದೀಗ ಶ್ರೀಲಂಕಾವನ್ನು ಸೋಲಿಸುವ ಸನಿಹದಲ್ಲಿರುವ ಟೀಮ್ ಇಂಡಿಯಾ ಪಡೆಗೆ ಒಂದು ಸಲಾಮು. ಇದನ್ನಂತೂ ಮರೆಯಲೂ ಸಾದ್ಯವೇ ಇಲ್ಲ.

ಮರೆತು ಹೋಗುವ ಮುನ್ನ ಮರೆಯದ ಅದೆಷ್ಟೋ ಸಂಗತಿಗಳು ಸ್ಮ್ರತಿ ಪಟಲದಲ್ಲಿ ಸುಳಿಯುತ್ತಿದೆ. ಕೆಲವನ್ನು ವಿವರಿಸಿ ಇನ್ನುಳಿದದ್ದು ಅನುಭವಿಸಿ ನೆನಪಿಡಲು ಪ್ರಯತ್ನಿಸಿ. ಮರೆತು ಹೋಗುವ ಮುನ್ನ ಒಮ್ಮೆ ಸಿಂಹಾವಲೋಕನ ಮಾಡಲು ಮರೆಯದಿರಿ. ಮರೆತು ಹೋಗುವ ಮುನ್ನ ನನ್ನದೊಂದು ಸಣ್ಣ ನಮನ ಹಾಗೂ ೨೦೦೯ ಕ್ಕೆ ಶುಭ ಹಾರೈಕೆ.



Tuesday, January 27, 2009

ಕರುನಾಡ ಕಂಪು..

ಕರುನಾಡ ಕಂಪು..


-ಗುರು ಬಬ್ಬಿಗದ್ದೆ


ನಮ್ಮ ನಾಡು, ನಮ್ಮ ನುಡಿ, ನಮ್ಮ ಭಾಷೆ, ನಮ್ಮ ನೆಲ

ಕನ್ನಡದ ಸಿರಿಗಂಪು ಪಸರಿಸಲಿ ಉದ್ದಗಲ ೧


ಬೇಲೂರಿನ ಶಿಲ್ಪಕಲೆ, ಹಳೆಬೀಡಿನ ಕೆತ್ತನೆ

ಶೃಂಗೇರಿಯ ಶಾರದೆಗೆ, ಶಿರಬಾಗಿ ವಂದನೆ

ಶ್ರೀರಂಗನ ಸನ್ನಿಧಿ, ಮೈಸೂರಿನ ಅರಮನೆ

ಕೃಷ್ಣರಾಜಸಾಗರದ, ಸುಮನೋಹರ ನರ್ತನೆ ೨


ಕಾವೇರಿ, ಕಾಳಿಯು, ತುಂಗಭದ್ರೆ ನಾಲೆಯು

ಮಲೆನಾಡಿನ ತಪ್ಪಲಲಿ ಹಚ್ಚ ಹಸಿರು ಛಾಯೆಯು

ಜೋಗದ ಸಿರಿವೈಭವ, ಖಗಸಂಕುಲ ಕಲರವ

ಐಹೊಳೆ ಬಾದಾಮಿಯ, ನೆನಪುಳಿಯುವ ಅನುಭವ ೩


ವಿಜ್ಞಾನದ ದೇಗುಲ, ತಂತ್ರಜ್ಞಾನದಾಲಯ

ಎಲ್ಲರನೂ ಕೈ ಬೀಸಿ ಸೆಳೆವ ಪ್ರೇಮದಾಲಯ

ಅತಿಥಿ ದೇವರೆಂಬ ನಮ್ಮ ಮನದಿ ಇರಲಿ ಆಶಯ

ನಾಡಿಗಾಗಿ ದುಡಿಯುತಲಿ ಬದುಕು ನೀ ಮಹಾಶಯ ೪


ರನ್ನ ಪಂಪ ಮಾಸ್ತಿ ಬೇಂದ್ರೆ ಮೆರೆಸಿದಾ ಭೂಮಿಯು

ವರನಟನ ಕಲೆಯ ಬಲೆಗೆ ಬೆರಗಾದ ಊರಿದು

ಬನವಾಸಿ, ಧರ್ಮಸ್ಥಳ, ಭಗವಂತನ ತವರಿದು

ನಮ್ಮನೆಲ್ಲ ಉಳಿಸಿ ಬೆಳೆಸೋ ಕನ್ನಡದ ನಾಡಿದು ೫

Monday, January 26, 2009

आपके महफिल ने...

आपके महफिल ने समजा प्यार के काबिल मुझे....

मेरे जिंदगी की वो महफिल, कितने बार सोचा था की तुम्हें ख़त लिखू मगर क्या लिखू? हम दोनों समुन्दर के किनारे हाथ पकड़कर जिंदगी को भूलकर आसमान के तारोंको तोड़ने की सोच रहे थे, क्या उसके बारे में लिखू? साथ समुन्दर पार करके भागने के लिए सोच रहे थे, क्या उसके बारे में लिखू? किसके बारे में लिखू? यही सोच सोचकर ख़त नही लिखा. आज निर्णय लिया हम, ख़त पूर्ण करके ही रहूँगा.
ओ मेरी जिंदगी, तुम्हें याद है वो लम्हा, जब हम पहेले बार मिले थे? तुमारी मुस्कराहट ने मुझे पागल बना दिया था, आज भी पागल बना रही है. ये जिंदगी एक अजीबा है ना? उस दिन से आजा तक हम ने अपने हर क्षण को साथ साथ गुजारे है, कभी आसू, कभी आहे, कभी शिखवे, कभी नाले, तेरा चेहरा मुझे नजर में आया है.
मुझे मालूम है की तुम मेरे बारे में क्या सोचती हो, तुम कुछ भी बोलो वो मेरे बले के लिए ही होता है, तुम हसती हो, हसाती हो, रुलाती भी हो. मुझे तुमारी साथ बीताने की हर फल अच्छा लगता है, सच्चा लगता है. तुम्हें भी ऐसा ही लगता है क्या? ऐसा ही होगा, हम साथ जिंदगी गुजारने की वादा जो लिए है, हर फल, हर आँसू, हर खुशी, हर गम में हम तुमरे है सनम.
लिखना तो बहुत है, मगर दिन भी तो बहुत है, एक एक करके लिखता हु. अभी मुझे जाना है, फ्हिर कभी लिखूंगा. तब तक तुम भी मुझे ख़त लिखो.तेरे प्यारा अनामिका

Tuesday, January 20, 2009

ಹೇ ಮಾರಿಕಾಂಬೇ

ಹೇ ಮಾರಿಕಾಂಬೇ

- ಗುರು ಬಬ್ಬಿಗದ್ದೆ

ವಂದಿಪೆನು ಮಾರಿಕಾಂಬೆ ನಿನ್ನ ಮಡಿಲಿಗೆ

ಭಕ್ತ ಜನರ ಪೊರೆವ ಪ್ರೀತಿವಿತ್ತ ತಾಯಿಗೆ

ಸಿರಸಿಪುರದ ನಡುವೆ ಇರುವ ಲೋಕಮಾತೆಗೆ

ಕರುಣೆಯಿಂದ ವರವ ನೀಡ್ವ ಲೋಕಜನನಿಗೆ ೧

ನಿನ್ನ ಮಹಿಮೆ ಅರಿಯದಾದೆ ಇಂದಿಗೂ ನಾನು

ನನ್ನ ಮನವ ಅರಿತಿಹೆ ಮಮತಾಮಯಿ ನೀನು

ಕಷ್ಟ ನಷ್ಟ ಬಾಳಲಿಹುದು ನೀ ಪರಿಹರಿಸು

ಇಷ್ಟ ದೇವಿ ನಿನ್ನ ನೆನೆವೆ ನಮ್ಮನು ಹರಸು ೨


ಅಲ್ಪ ಮತಿಯು ನಾನು ದಿವ್ಯ ಸುತೆಯು ನೀನು

ನಿನ್ನ ದಿವ್ಯ ಕಂಗಳಿಂದ ನೋಡು ನಮ್ಮನು

ಬೆಳೆದು ನಿಂತ ಗದ್ದೆ ತೋಟ ನಿನ್ನದೆ ತಾಯೆ

ಭಕ್ತಿಯಿಂದ ನಮಿಸುವೆವು ಕಾಯು ನೀ ಮಾಯೆ ೩

ಎರಡು ವರ್ಷಕೊಮ್ಮೆ ಬರುವ ನಿನ್ನಯ ಜಾತ್ರೆ

ವಿಶ್ವದಲ್ಲೇ ಜನರ ಸೆಳೆವ ಅಕ್ಷಯ ಪಾತ್ರೆ

ನಿನ್ನ ನಾಮ ಸ್ಮರಣೆಯಲ್ಲೇ ಜಗವ ಕಾಣುವೆ

ಸಿರಸಿ ಮಾರಿಕಾಂಬೆ ನಿನಗೆ ಶರಣು ಎನ್ನುವೆ ೪

ಎಲ್ಲಿಂದ ನೀ ಬಂದೆ?

ಎಲ್ಲಿಂದ ನೀ ಬಂದೆ?

-ಗುರು ಬಬ್ಬಿಗದ್ದೆ

ನನ್ನ ಜೀವನದ ಹಲವು ವರ್ಷಗಳನ್ನು ಒಂಟಿಯಾಗಿಯೇ ಕಳೆದರೂ ಹೀಗಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ನಾನಾಗಿಲ್ಲ. ಏನಾಗುತ್ತಿದೆ ನನಗೆ ಅದೂ ತಿಳಿಯುತ್ತಿಲ್ಲ. ನಿನ್ನ ಭೂತ ನನ್ನ ವರ್ತಮಾನವನ್ನು ಆವರಿಸಿದೆ. ಹೇಳು ನೀನೇಕೆ ಬಂದೆ ನನ್ನ ಬಾಳಿಗೆ. ಬರುವವಳು ಬಂದೆ, ಆದರೆ ಎಲ್ಲಿಂದ ಬಂದೆ? ಯಾಕಾಗಿ ಬಂದೆ? ನನಗೆ ಉತ್ತರ ಕೊಡು. ಉತ್ತರ ಸಿಗದ ಎಷ್ಟೋ ಪ್ರಶ್ನೆಗಳು ನಿನ್ನಲ್ಲಿ ಇವೆ ಎಂದು ನನಗೆ ಗೊತ್ತು ಆದರೆ ನನಗೆ ಉತ್ತರ ಬೇಕು. ಹೇಳು, ನಾನೇಕೆ ಹೀಗಾದೆ?

ಒಮ್ಮೊಮ್ಮೆ ನಿರ್ಧರಿಸುತ್ತೇನೆ, ನಾನು ನಿನ್ನ ಬಿಟ್ಟು ಬದುಕಬೇಕೆಂದು. ಆದರೆ ಸಾಧ್ಯವಾಗುವುದಿಲ್ಲ. ನಿನ್ನ ಪರಿಸರವೇ ಅಂತಹುದು. ಗೊತ್ತಿಲ್ಲದೆ ಎದೆಯೊಳಗೆ ನುಗ್ಗಿ ಬಿಡುತ್ತಿಯಾ, ಆಮೇಲೆ ಬೇಕಾದರೆ ನನ್ನನ್ನೇ ಆಡಿಸುತ್ತಿಯ. ನಿಜ ಕಣೆ, ನಿನ್ನಲ್ಲಿ ಲೀನವಾಗಿ ಹೋಗಿದ್ದೇನೆ. ಸರ್ವವೂ ನಿನ್ನದಾಗಿದೆ. ನನ್ನದೇನಿದ್ದರೂ ದೇಹ ಮಾತ್ರ. ಭಾವವೆಲ್ಲವೂ ನೀನಾಗಿದ್ದಿಯಾ. ನಿನ್ನೊಂದಿಗೆ ಹೆಜ್ಜೆ ಹಾಕಿದ ಗೆಜ್ಜೆಯ ನಾದಗಲಿನ್ನೂ ಹಾಗೆಯೇ ಇವೆ. ನನಗಿನ್ನೂ ನೆನಪಿದೆ. ನೀನು ನನ್ನ ಮೊದಲು ನೋಡಿದಾಗ ನಾಚಿ ನೀರಾಗಿ ಹೋಗಿದ್ದೆ? ಏನು ಹೇಳಬೇಕೆಂದೇ ನಿನಗೆ ತೋಚಿರಲಿಲ್ಲ. ಹಾಗೆಮ್ದೂ ನೀನು ಬಹಳ ಸ್ವಾಭಿಮಾನಿ, ಏನನ್ನೂ ಹೇಳುವವಳಲ್ಲ, ಎಲ್ಲವೂ ನನ್ನಿಂದಲೇ ಹೇಳಿಸಿದ್ದಿಯ. ನಾನೂ ನಿನ್ನಲ್ಲಿ ಅನುರಕ್ತನಾಗುತ್ತ ಹೋದಂತೆ ನಿನ್ನ ಬಗ್ಗೆ ಎಲ್ಲವನ್ನೂ ಅರಿತೆ. ನೀನೆ ನಾನಾದೆ, ನಾನೇ ನೀನಾದೆ.

ನನ್ನ ಪ್ರತಿಯೊಂದೂ ನಡೆಗಳೂ ನಿನಗೆ ಗೊತ್ತು. ಒಂದು ರೀತಿಯಲ್ಲಿ ನಿನ್ನ ಪರಿಧಿಯಲ್ಲಿ ನನ್ನ ಕಟ್ಟಿ ಹಾಕಿದವಳು ನೀನು. ನನ್ನೊಂದಿಗೆ ಮಾತನಾಡುತ್ತಾ ಮಾತನಾಡುತ್ತಾ ನನ್ನ ಪ್ರೀತಿಯನ್ನೇ ಗಳಿಸಿದವಳು ನೀನು. ಅದೇನೋ ಗೊತ್ತಿಲ್ಲ, ನಿನ್ನ ನೋಡಿದಾಗಿನಿಂದ ನಾನು ಸಂತೋಷದ ಬುಗ್ಗೆಯಾಗಿದ್ದೇನೆ. ನನ್ನೊಳಗೆ ಸಂಭ್ರಮಿಸುತ್ತಿದ್ದೇನೆ. ಯಾಕೆ ಡಿಯರ್, ಏನಾಗಿದೆ ನನಗೆ? ಉತ್ತರ ಇದೆಯೇ ನಿನ್ನಲ್ಲಿ. ಸುಮ್ಮನೆ ನನ್ನಲ್ಲಿ ಪ್ರಶ್ನೆಗಳ ಸುರಿಮಳೆ ಸ್ರಷ್ಟಿಸುತ್ತಿಯಾ. ಉತ್ತರ ಕೊಡುವುದಿಲ್ಲ. ಕೋಪಾನಾ? ಅಥವಾ ಈ ಸಖನ ಮೇಲೆ ಸಿಟ್ಟೇ? ನನಗೆ ಗೊತ್ತು. ನಾನು ನಿನ್ನ ಮನಸ್ಸಿನಲ್ಲಿ ಗಾಢವಾದ ಮುದ್ರೆ ಒತ್ತಿದ್ದೇನೆ ಎಂದು, ಹಾಗೆಂದೂ ನೀನು ಹೇಳಲಾರೆ, ನಿನ್ನ ಕಣ್ಣುಗಳು ಸಾರಿ ಹೇಳುತ್ತಿವೆ.

ನೀನು ಗೊಂದಲದಲ್ಲಿದ್ದಿಯಾ, ಏನು ಮಾಡಲೂ ನಿನಗೆ ದಾರಿ ತೋಚುತ್ತಿಲ್ಲ. ಯಾಕೆ ತಬ್ಬಿಬ್ಬಾಗಿದ್ದಿಯ. ನನ್ನ ಅನುರೇಣ ತ್ರಣಕಾಷ್ಟಗಳೂ ನಿನ್ನಲ್ಲೇ ಇವೆ. ನನ್ನ ಜೀವನದ ಪೇಟೆಂಟ್ ಅನ್ನೇ ಕಸಿದುಕೊಂಡವಳು ನೀನು. ಈಗ ಸುಮ್ಮನೆ ಕೂತಿದ್ದಿಯಾ ಕಣೆ. ನಾನೇನು ಮಾಡಲಿ. ನಾನೇಕೆ ಹೀಗಾದೆ? ಹಾಗೆಂದೂ ನನ್ನ ಸಂತಸ ಮಾತ್ರ ನೀನು ಬಯಸಿ ಬಂದಿಲ್ಲ, ನಿನಗೆ ನನ್ನ ದು:ಖವೂ ಬೇಕು. ನನ್ನ ಸಂಕಷ್ಟಗಳಿಗೆ ನೀನೇ ದಾರಿದೀಪ. ನೀ ನನಗಿದ್ದರೆ ನಾ ನಿನಗೆ ಕಣೆ. ನೀ ನನ್ನಲ್ಲಿ ಸೇರಿದಾಗಿನಿಮ್ದ ನಾನು ಸಮಾಜಕ್ಕೆ ಹೆದರುತ್ತಿಲ್ಲ. ನೀನಿದ್ದರೆ ಜಗತ್ತನ್ನೇ ಗೆಲ್ಲುತ್ತೇನೆ ಎಂಬ ಹುಂಬ ಧೈರ್ಯವೂ ಸೇರಿಕೊಂಡು ನಾನು ಮೊದಲಿಗಿಂತಲೂ ಚಟುವಟಿಕೆಯ ಕೆಂದ್ರವಾಗಿದ್ದೇನೆ. ಆದರೆ ನಿನ್ನ ಮೇಲೆ ಕೋಪವೂ ಇದೆ. ಕೆಲವೊಮ್ಮೆ ಹೇಳದೆ ಕೇಳದೆ ನನ್ನ ಬಿಟ್ಟು ಹೋಗಿಬಿದುತ್ತಿಯಾ? ಯಾಕೆ. ನನ್ನ ಸ್ನೇಹ ಬೇಕಾಗಿಲ್ಲವೇ? ನಿನಗೆ ಬೇಕು. ಈ ಜಗತ್ತಿನಲ್ಲಿ ನಾನು ಮತ್ತು ನೀನು ಇಬ್ಬರೂ ಏಕಾಂಗಿತನದಿಂದ ನರಳುತ್ತಿದ್ದೇವೆ. ನಿನಗೆ ನನ್ನ ಸಾಂಗತ್ಯ ಅಗತ್ಯವಿದೆ, ಹಾಗೆಯೇ ನನಗೂ. ಆದರೆ ಇಬ್ಬರೂ ಒಪ್ಪಿಕೊಳ್ಳುತ್ತಿಲ್ಲ ಅಷ್ಟೆ.

ಮೊದ ಮೊದಲು ನನ್ನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದವಳು ನೀನು. ನನಗೋ ನಿನ್ನ ಜೊತೆ ಸ್ನೇಹ ಮಾಡುವಾಸೆ. ನಿನ್ನ ವಶೀಕರಿಸಿಕೊಳ್ಳುವಾಸೆ. ಆದರೆ ನೀನೋ ಎಲೆಯ ಮರೆಯ ಕಾಯಿ. ಮಿಂಚಿ ಮಾಯವಾಗುವ ಕಾಮನ ಬಿಲ್ಲು. ಕಸ್ತೂರಿ ಮ್ರಗ ತನ್ನಲ್ಲೇ ಇರುವ ಸುವಾಸನೆಯನ್ನು ಅರಿಯಲಾರದೆ ಕಾಡನ್ನೆಲ್ಲಾ ಸುತ್ತುವಂತೆ ನಿನ್ನ ಸುಮವನ್ನು ಅರಿಯಲಾರದೆ ತೊಳಲಾಡಿದವನು ನಾನು. ನಿನ್ನ ಒಂದು ನಗು ನನ್ನ ದಿನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ ಡಿಯರ್. ಕಾಡಬೇಡ ನನ್ನ ನನ್ನರಗಿಣಿಯೇ. ನಿನ್ನ ಮಾತುಗಳಿಗೆ, ನಿನ್ನ ಚಲನೆಯ ಪರಿಕ್ರಮಣೆಗೆ, ನಿನ್ನ ಮುದ್ದು ನಗುವಿಗೆ, ನಿನ್ನ ಸೌಂದರ್ಯಕ್ಕೆ ಸೋತು ಹೋದೆ. ಇನ್ನೆಷ್ಟು ದಿನ ಈ ಸಂಭ್ರಮವೋ ಅರಿಯಲಾರೆ. ನಿನ್ನ ಬಿಟ್ಟು ಹೋಗಲು ಮನಸ್ಸಿಲ್ಲ, ನಿನ್ನೊಳಗೆ ನಾನಿರಲೂ ನಿನಗೆ ಇಷ್ಟವಿಲ್ಲ. ಹಾಗಾದರೆ ನಮ್ಮ ಸಂಬಂಧಗಳ ಕೊನೆ ಹೇಗೆ.

ನಿನ್ನ ಬಗ್ಗೆ ನನಗೆ ಯಾವುದೇ ಕಂಪ್ಲೆಂಟ ಗಳಿಲ್ಲ . ನೀನು ನಿರುಪದ್ರವಿ. ನಿರಹಂಕಾರಿ. ನೀನು ನನ್ನ ಜೊತೆಯಿದ್ದೆ ಎನ್ನುವ ಭಾವವೇ ನನಗೆ ಅಹಂಕಾರಿ ಪಟ್ಟ ಕೊಟ್ಟಿದೆ. ಅದು ನಿನ್ನ ತಪ್ಪಲ್ಲ. ನೀನು ಎಂದೂ ನನ್ನ ಕೆಟ್ಟ ಗುಣ ಸಹಿಸಿಕೊಂಡವಳಲ್ಲ. ಹಾಗೆಂದು ನನ್ನೆದುರಿಗೆ ನನ್ನ ನಿಂದಿಸದವಳೂ ಅಲ್ಲ. ಆದರೂ ನಿನಗೆ ನಾನು ಒಳ್ಳೆಯವನಾಗಿರಬೇಕು ಎಂಬ ಆಸೆಯಿದೆ. ಆದರೆ ನಿನ್ನ ಜೊತೆಯೇ ಇರಬೇಕು ಎನ್ನುವ ಸ್ವಾರ್ಥವೂ ಇದೆ. ನನ್ನ ಒಂಟಿತನ ಹೇಗೆ ನೀನು ಪರಿಹರಿಸಿದ್ದಿಯೋ ಹಾಗೆಯೇ ನಿನ್ನ ಒಂಟಿತನಕ್ಕೂ ನಾನು ಜೊತೆಯಾಗಿದ್ದೇನೆ. ನನ್ನ ಬಿಟ್ಟರೆ ನಿನ್ನ ಮನಸ್ಸಿಗೆ ಬೇಸರವಾಗುವುದಿಲ್ಲವೇ ಪ್ರಿಯೆ. ನನಗೆ ಗೊತ್ತು, ನೀನು ನನ್ನ ಎಷ್ಟು ಇಷ್ಟಪಡುತ್ತಿಯಾ ಎಂದು. ಎಲ್ಲದಕ್ಕೂ ಮಾತಾಡಬೇಕೇನೇ ಹುಚ್ಚಿ. ನಿನ್ನ ಕಣ್ಣುಗಳು, ಬಿರಿದ ತುಟಿಗಳು, ನಾಚಿಸುವ ಕೆನ್ನೆಗಳು, ಎಲ್ಲವೂ ನನ್ನ ಬಗ್ಗೆ ನಿನ್ನ ಒಲವನ್ನು ತೋರಿವೆ. ಹೌದು, ನಾನು ಕೆಲವೊಮ್ಮೆ ನಿನಗೆ ಒಗಟಾಗಿದ್ದೇನೆ ನಿಜ. ಆದರೆ ನಿನ್ನ ಬಿಟ್ಟು ಇರಲೂ ಆಗುತ್ತಿಲ್ಲ. ನಿನ್ನ ಜೊತೆ ಮಾತನಾಡುತ್ತಿರಬೇಕೆಬ ಆಸೆ. ನಿನ್ನಲ್ಲಿ ಹುಸಿಕೋಪ ಮಾಡುತ್ತೇನೆ, ಯಾಕೆಂದರೆ ತಿರುಗಿ ನೀನು ನನ್ನ ಮಾತನಾಡಿಸುತ್ತಿಯಲ್ಲ ಅದು ನನಗೆ ಇಷ್ಟ. ಆಗ ಎಷ್ಟೊಂದು ಮಧುರತೆ ನಿನ್ನಲ್ಲಿ. ನಿನಗೆ ಕೆಲವು ಕಟ್ಟುಪಾಡುಗಳು ಇವೆ ಎನ್ನುವುದು ನನಗೆ ತಿಳಿದಿದೆ. ಆದರೆ ನನಗೆ ನಿನ್ನ ಸ್ನೇಹ ಬೇಕು. ಜೀವನದ ತುದಿಯವರೆಗೂ ನಾನು ನಿನ್ನ ಜೊತೆಯಿರುತ್ತೇನೆ, ನೀನೂ ಇರುತ್ತಿಯಲ್ಲ. ನೀನು ನನ್ನ ಬಾಳನ್ನು ಪ್ರವೇಶಿಸುವಾಗಲೇ ತಡವಾಗಿದೆ, ಆದರೆ ಹೋಗುವ ನಿರ್ಧಾರ ಮಾಡಬೇಡ ಪ್ಲೀಸ್ .

ಓ ನನ್ನ ಪ್ರೀತಿಯ ಮನಸೇ, ಇಷ್ಟೆಲ್ಲಾ ಕಥೆ ನಿನ್ನ ಬಗ್ಗೆ ಹೇಳಿದ್ದೇನೆ. ನೀನು ನನ್ನ ಮನಸ್ಸು, ನನ್ನೆದೆಯ ಭಾಗ. ನನ್ನ ಜೀವದ ರಾಗ. ಇದನ್ನೆಲ್ಲಾ ನಿನಗೆ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಇಲ್ಲಿಯವರೆಗೂ ನನ್ನ ಮುನ್ನಡೆಸಿದವಳೂ ನೀನೆ ತಾನೆ. ಮುಂದೆಯೂ ಜೊತೆಯೇ ಇರು. ಸುಖವೋ ದು:ಖವೋ ನನ್ನ ಕೈ ಬಿಡದಿರು. ನನ್ನ ಮುನ್ನೆಡೆಸು. ಪುನಃ ನೀ ಎಲ್ಲಿಂದ ಬಂದೆ ಎಂಬ ಪ್ರಶ್ನೆ ಕೇಳುವುದಿಲ್ಲ ಆದರೆ ಎಲ್ಲಿಗೂ ಹೋಗಬೇಡ ಎಂಬ ನಿವೇದನೆ ಮಾಡುತ್ತೇನೆ. ಇರುತ್ತಿಯಾ ತಾನೆ? ಇರಲೇಬೇಕು. ನಿನ್ನ ಬಿಡುವವರಾರು. ನಿನಗೂ ನನ್ನ ಬಿಟ್ಟು ಪ್ರಪಂಚದಲ್ಲಿ ಏನಿದೆ? ಓ ಮನಸೇ ರಿಲಾಕ್ಸ್ ಪ್ಲೀಸ್.

ಓ ತಾವರೆ

ಓ ತಾವರೆ

-ಗುರು ಬಬ್ಬಿಗದ್ದೆ

ಮರೆಯಬೇಡ ಮರೆಯಬೇಡ ಮರೆಯಬೇಡ ಎನ್ನ
ಮರೆತರೆ ಮರೆಯಾಗುವೆ ಮನದಿಂದ ಚಿನ್ನ
ಮದನನ ಮದವೇರಿದ ಮನಸಿದು ಮಾಗುವ ಮುನ್ನ
ಮಾಮರದ ಮಾರ್ದನಿಗೆ ಮಾಲೆಯ ಹಾಕುವ ಮುನ್ನ ೧

ಮಸುಕಾಗಿದೆ ಮಬ್ಬಿನಲಿ ಮಿಸುಕಾಡಿದೆ ಮುಖವು
ಮನಗಾಣಿಸು ಮಮತೆಯಲಿ ಮರಳಿದೆ ಸುಖವು
ಮಹನೀಯಳೆ ಮಾಣಿಕ್ಯವೆ ಮೆಚ್ಚಿದೆ ನಿನ್ನನ್ನ
ಮಾಂತ್ರಿಕ ಮೃದು ಸ್ಪರ್ಶಕೆ ಮಾಗಿದೆ ಮೈ ಬಣ್ಣ ೨

ಮೆಲ ಮೆಲ್ಲನೆ ಮೆಲುನುಡಿಯಲಿ ಸೆಳೆದಿದೆ ಜೀವ
ಮೈ ಮರೆತಿಹೆ ಮೇಳ್ಯಸಿಹೆ ಮೊಳೆತಿದೆ ಭಾವ
ಮುಗಿಲಿನ ಮೋಡದ ಹಿಂದೆ ಮರೆ ಬೇಡ ರನ್ನ
ಮತ್ತಲಿ ಮುತ್ತನು ಸುರಿವೆ ಮರೆಯಬೇಡ ಎನ್ನ ೩

ಮೂಡುತ ಮೂಡಲಿನಲಿ ಮುದುಡಿದ ಮಿಹಿರ
ಮಾಧುರ್ಯದ ಮಾಟಗಾತಿ ಮೆಚ್ಚಿ ನಿನ್ನ ಅಧರ
ಮಲ್ಲಿಗೆಯ ಮಂದಾಕಿನಿ ಮೋಹಿಸುತ ನಿನ್ನ
ಮರೆಯಬೇಡ ಮರೆಯಬೇಡ ಮರೆಯಬೇಡ ಎನ್ನ ೪

Copenhagen-ಪ್ರವಾಸ ಕಥನ


Copenhagen ಎಂಬ ಡ್ಯಾನಿಶ್ ಸುಂದರಿಯ ಸುತ್ತ........ಪ್ರವಾಸ ಕಥನ
- ಗುರು ಬಬ್ಬಿಗದ್ದೆ

ವಾರದ ಕೊನೆ ಬಂತೆಂದರೆ ಬೆಂಗಳೂರಿನಲ್ಲಿ ಪುರುಸೊತ್ತೇ ಇರುವುದಿಲ್ಲ. ಆತ್ಮೀಯರ ಭೇಟಿ, ನೆಂಟರ ಆಮಂತ್ರಣ, ಸಿನಿಮಾ, ಪಾರ್ಟಿ,ಒಂದೇ, ಎರಡೇ, ಜೊತೆಯಲ್ಲಿ ಆಟ ಬೇರೆ, ಹಾಗಾಗಿ ಕೆಲಸದ ವೇಳೆಗಿಂತ ವಾರದ ಕೊನೆಗೆ ಬ್ಯುಸಿ ಜಾಸ್ತಿ. ಆದರೆ ದೇಶ ಬಿಟ್ಟು ಪರದೇಶಕ್ಕೆ ಬಂದಾಗ ವಾರದ ಕೊನೆಗೆ ಸಮಯದ ಅಭಾವವಿರುವುದಿಲ್ಲ.
Copenhagen ಅಥವಾ Kobenhavn ಅಂದರೆ ಮರ್ಚಂಟ್ಸ ಹಾರ್ಬರ್ ಎಂದರ್ಥ. ತನ್ನ ವಿಶಿಷ್ಟ ಸಂಸ್ಕ್ರತಿ, ಫ್ಯಾಷನ್,ಕುಡಿತ ಎಲ್ಲವುಗಳಿಂದಾಗಿ ಇದು ವಿಶ್ವದಲ್ಲಿಯೇ ಬಹು ಪ್ರಸಿದ್ದಿ ಪಡೆದ ನಗರ. ೨೦೦೮ ರಲ್ಲಿ ಈ ನಗರಕ್ಕೆ ಮೊನೋಕ್ಲೆ ಎಂಬ ಸುದ್ದಿ ಪತ್ರಿಕೆ ವಿಶ್ವದ ೨೫ ಚಟುವಟಿಕೆಯ ನಗರಗಳಲ್ಲಿ ಒಂದೆಂದು ತೀರ್ಮಾನಿಸಿ "ಅತ್ಯುತ್ತಮ ಅಲಂಕ್ರತ ನಗರ" ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಈ ನಗರ ಬಂಡವಾಳ ಹೂಡಿಕೆದಾರರ ಸ್ವರ್ಗ ಎಂದು ಕರೆಯಲಾಗುತ್ತದೆ. ಇನ್ನು ಮುಂದೆ ಹೋಗಿ ಈ ನಗರವನ್ನು "ಉತ್ತರದ ಪ್ಯಾರಿಸ್" ಎಂದೂ ಸಂಭೋದಿಸಲಾಗುತ್ತದೆ. ಇಂಥಹ ನಗರದ ವೀಕ್ಷಣೆ ಎಂದರೆ ಅದೊಂದು ಸುಯೋಗವೇ ಸರಿ.
ನಾವು ೪ ಜನ ಹಾಗೂ ಒಂದು ಪುಟ್ಟ ಮಗು ಸೇರಿ Gothenburg ನಿಂದ ಒಂದು ಶನಿವಾರ ನಸು ಮುಂಜಾವಿನಲ್ಲಿ ಹೊರಟೆವು. ಚುಮು ಚುಮು ಚಳಿ ಒಂದೆಡೆ,ತಣಿಯಲಾರದ ಕುತೂಹಲ ಒಂದೆಡೆ. Gothenburg ನಿಂದ ಸುಮಾರು ೩-೩೦ ಗಂಟೆಯ ಪ್ರಯಾಣ. ಸ್ವೀಡನಿನ ದಕ್ಷಿಣದ ತುದಿಯಲ್ಲಿಯ ಕೊನೆಯ ನಗರವೇ Malmo.ಅಲ್ಲಿಂದ ಒಂದು ಬ್ರಹತ್ ಸಮುದ್ರ.ಅದರ ಆಚೆ ಇರುವುದೇ Copenhagen ನಗರ. ಈ ಎರಡು ನಗರಗಳ ನಡುವೆ ಯೋರೆಸುಂದ್ ಸೇತುವೆ. ಸುಮಾರು ೨೦೦೦ ನೆ ಇಸವಿಯಲ್ಲಿ ನಿರ್ಮಾಣವಾದ ಈ ಬ್ರಹತ್ ಸೇತುವೆ ಎರಡು ದೇಶಗಳನ್ನು ಸೇರಿಸುವ ವಿಶ್ವದ ಅತೀ ದೊಡ್ಡ ಸೇತುವೆ.ಸುಮಾರು ೮ ಕಿಲೋ ಮೀಟರಗಳಷ್ಟು ಉದ್ದವಿರುವ ಸೇತುವೆಯನ್ನು ನೋಡುವುದೇ ಒಂದು ಸೊಬಗು. ಇದರ ತೂಕ ಸುಮಾರು ೮೨೦೦೦ ಟನ್ಗಳಷ್ಟು ಎಂದರೆ ಅದರ ಅಗಾಧತೆ ನಿಮ್ಮ ಗಮನಕ್ಕೆ ಬರಬಹುದು. ಇಲ್ಲಿಂದಲೇ ರೋಚಕತೆಯ ಅಧ್ಯಾಯ ಆರಂಭವಾಯಿತು. ಇಲ್ಲಿಯ ರೈಲುಗಳಲ್ಲಿನ ಪ್ರಯಾಣವೇ ಒಂದು ರೀತಿಯ ಆನಂದಕರ ಅನುಭವ ಕೊಡುತ್ತದೆ.ನಿಸರ್ಗ ರಮಣೀಯ ಪ್ರಕ್ರತಿಯ ಸೊಬಗು ಸವಿಯುತ್ತಿದ್ದಂತೆ ಮಲೆನಾಡಿನ ಕಾಡುಗಳಲ್ಲಿ ಸೇರಿ ಹೋದ ಅನುಭವ ಆಯಿತು. ಆದರೆ ಛಳಿಗಾಲ ವಾದ್ದರಿಂದ ಗಿಡಕ್ಕೆ ಎಲೆ ಒಂದು ಇರಲಿಲ್ಲ. ಇಲ್ಲದಿದ್ದರೆ ಇಲ್ಲಿಯ ಹಳ್ಳಿಗೂ ಮಲೆನಾಡಿನ ಹಳ್ಳಿಗೂ ಪ್ರಕ್ರತಿ ಸೌಂದರ್ಯದಲ್ಲಿ ಯಾವುದೇ ಭಿನ್ನತೆ ಕಾಣದು.
ಸರಿ ಸುಮಾರು ೧೧ ಗಂಟೆಗೆ Copenhagen ನಗರ ರೈಲು ನಿಲ್ದಾಣ ತಲುಪಿದೆವು.ಇಲ್ಲಿಯ ಚಲಾವಣೆಯ ಕರೆನ್ಸಿ ಡೆನ್ಮಾರ್ಕ್ ಕ್ರೌನೆಸ್ (ಡಿ.ಕೆ.ಕೆ). ಅಲ್ಲಿಯೇ ಹತ್ತಿರದಲ್ಲಿ ಕರೆನ್ಸಿ ಬದಲಾಯಿಸಿಕೊಂಡು ಪ್ರಯಾಣ ಮುಂದುವರೆಸಿದೆವು. ಮೊದಲಿಗೆ Norlandia ಸ್ಟಾರ್ ಹೋಟೆಲ್ ಗೆ ಹೋದೆವು. ನಮ್ಮ ವಾಸ ಅಲ್ಲಿಯೇ ಆಗಿತ್ತು. ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು, ಸ್ವಲ್ಪ ಉದರ ತ್ರಪ್ತಿ ಗೊಳಿಸಿ ನಗರ ಸಂಚಾರಕ್ಕೆ ಅಣಿಯಾದೆವು.
ಮೊದಲಿಗೆ ಬೋಟಿನಲ್ಲಿ ನಗರ ಸುತ್ತಲು ಹೋದೆವು. ಸುಮಾರು ಒಂದು ತಾಸು ನಯನ ಮನೋಹರ ವೀಕ್ಷಣೆ ಇಲ್ಲಿ ಸಾದ್ಯ. ಆದರೆ ಮೇಘರಾಜ ನಮ್ಮ ಮೇಲೆ ಮುನಿಸಿಕೊಂಡತಿತ್ತು.ಮಳೆ ಹನಿಗಳ ನಡುವೆಯೂ ಕಾಲುವೆಗಳ ನಡುವೆ ಹೋಗುವ ದ್ರಶ್ಯ ಮೈ ನವಿರೇಳಿಸುತ್ತದೆ. ಯುರೋಪಿಯನ್ ದೇಶಗಳ ಜನರಿಗೆ ನೀರಿಲ್ಲದೆ ಜೀವನವೇ ಇಲ್ಲ. ಅವರು ನೀರನ್ನು ಮತ್ತು ಸೂರ್ಯನನ್ನು ಬಹು ಇಷ್ಟ ಪಡುತ್ತಾರೆ. ಕಾಲುವೆಯಲ್ಲಿ ಹೋಗುವಾಗ ಈ ನಗರದ ವೈಭವಗಳೂ ಕಣ್ಣಿಗೆ ಕಟ್ಟುತ್ತವೆ. ನಯನ ಮನೋಹರ ವಜ್ರ ಕಟ್ಟಡ, ವಿಶಾಲವಾದ ಮ್ಯುಸಿಯಮಗಳು,ಬ್ರಹದಾಕಾರದ ಮಿಲಿಟರಿ ಹಡಗುಗಳು, ಎಲ್ಲವೂ ಇಲ್ಲಿಯ ಸೊಬಗಿಗೆ ಕಳಶವಿಟ್ಟಂತೆ ಗೋಚರಿಸುತ್ತವೆ. ಹೇಳಿ ಕೇಳಿ ಇದು ಶ್ರೀಮಂತಿಕೆಯಲ್ಲಿ ಬಾಳಿದ ನಗರ, ಕೇಳಬೇಕೆ?
ಕಾಲುವೆಗಳ ವೀಕ್ಷಣೆಯ ನಂತರ ಬರಿಗಾಲಿನಲ್ಲಿ ನಗರ ನೋಡುವುದೇ ಒಂದು ಸಂಭ್ರಮ. ಇಲ್ಲಿಯ ತಿವೋಲಿ ಗಾರ್ಡೆನ್ ವಿಶ್ವವಿಖ್ಯಾತ ವಾದದ್ದು. ಈಗಂತೂ ಕ್ರಿಸ್ಮಸ್ ಸಲುವಾಗಿ ಬೆಳಕಿನ ಅಲಂಕಾರ ಬೇರೆ, ಅದನ್ನು ವರ್ಣಿಸಲು ಶಬ್ದಗಳೇ ಸಿಗದು. ನಡುರಾತ್ರಿಯವರೆಗೂ ಜನರಿಂದ ತುಂಬು ತುಳುಕುವ ಇಲ್ಲಿ ಸಮಯ ಕಳೆಯಲು ಬೇಕಾದಷ್ಟು ಆಟಗಳಿವೆ. ನೋಟಗಳಿವೆ, ಸುಂದರ ಇಸ್ಲಾಂ ಶೈಲಿಯ ಅರಮನೆಯಿದೆ, ನೇಪಾಳಿ ಶೈಲಿಯ ಭಗವಂತನ ಮಂದಿರವಿದೆ. ಏನಿದೆ ಏನಿಲ್ಲ ಇಲ್ಲಿ ಎನ್ನುವುದೇ ಒಂದು ದೊಡ್ಡ ಕೌತಕ. ಇದನ್ನು ಸಂಪೂರ್ಣವಾಗಿ ವರ್ಣಿಸಲು ದಿನಗಳೇ ಬೇಕಾದಿತು. ಸಾದ್ಯವಾದಷ್ಟು ಕಣ್ಣಿಗೆ ಕಟ್ಟುವ ಪ್ರಯತ್ನ ಮಾತ್ರ ನನ್ನದು. ರಾತ್ರಿಯ ೧೨ ಗಂಟೆಯವರೆಗೂ ಅಲ್ಲಿ ಕಳೆದು ಪುನಃ ಹೋಟೆಲಿಗೆ ವಾಪಸ್ ಬಂದೆವು. ಇಲ್ಲಿಯ ಇನ್ನೊಂದು ವೈಶಿಷ್ಟ್ಯತೆ ಎಂದರೆ ಕುಡಕರು, ರಾತ್ರಿ ಇಡೀ ಕಿರುಚಾಡುತ್ತಲೇ ಇರುತ್ತಾರೆ.ಪಾನಮತ್ತರಾಗಿ ವಾಹನ ಚಲಾಯಿಸಬಾರದು ಎಂಬ ನಿಯಮ ಇವರನ್ನು ಒಂದು ಹದ್ದುಬಸ್ತಿನಲ್ಲಿಟ್ಟಿದೆ. ಹೇಳಲೇಬೇಕಾದ ಇನ್ನೊಂದು ಸಂಗತಿಯೆಂದರೆ ಈ ನಗರ ಸಲಿಂಗಕಾಮಿಗಳ ಸ್ವರ್ಗವಂತೆ. ರಾತ್ರಿ ರಸ್ತೆಯಲ್ಲಿ ಬರುವಾಗ ತುಂಬ ಎಚ್ಚರಿಕೆಯಿಂದ ಇರಬೇಕಾದದ್ದು ನಮ್ಮ ಕೆಲಸ.
ದಿನವಿಡೀ ಆಯಾಸವಾದ್ದರಿಂದ ಕಣ್ಣಿಗೆ ನಿದ್ದೆ ಹತ್ತಿದ್ದೆ ತಿಳಿಯಲಿಲ್ಲ. ಮರುದಿನ ಸೂರ್ಯದೇವ ಪ್ರತ್ಯಕ್ಷವಾಗಿ ನಮ್ಮೆಲ್ಲ್ಲರ ಮೊಗದಲ್ಲಿ ನಗುವನ್ನು ತಂದಿದ್ದ. ಈ ನಗರ ಜಿಲಾಂಡ್ ಮತ್ತು ಅಮೆಗರ್ ಎಂಬ ನಡುಗಡ್ಡೆಯ ನಡುವೆ ಇದೆ. ಸುಮಾರು ೬೫೬,೫೮೨ ದಷ್ಟು ಜನಸಂಖ್ಯೆ ಯುಳ್ಳ ಇದು ನಮಗೆ ಯಾವ ಲೆಕ್ಕವೂ ಅಲ್ಲ. ಆದರೆ ವೈಭೊವೋಪೇತಕ್ಕೆ, ರಾಜರ ಕಾಲದ ಸಂಸ್ಕ್ರತಿಗೆ, ಫಾಶನ್ನಿಗೆ, ಸ್ವಚ್ಚತೆಯ ಮುಂದೆ ಇದಕ್ಕೆ ನಾವು ಯಾವ ಲೆಕ್ಕವೂ ಅಲ್ಲ. ವಿಶ್ವ ಯುದ್ಧ ದಲ್ಲಿ ಆಕ್ರಮಣಕ್ಕೆ ತುತ್ತಾದ ಇದು ಜರ್ಮನಿಯ ಅಧೀನಲ್ಲಿಯು ಇತ್ತೆಂಬುದು ಕುತೂಹಲದ ಸಂಗತಿ. ಇಷ್ಟೆಲ್ಲಾ ಆದರೂ ಸಂಸ್ಕ್ರತಿಯನ್ನು ಬಿಡದ ಇಲ್ಲಿಯ ಜನರು ರಾಣಿಯನ್ನೇ ಪೂಜ್ಯ ಭಾವನೆಯಿಂದ ನೋಡುತ್ತಾರೆ.
ಇದೆ ಗುಂಗಿನಲ್ಲಿ ಪ್ರವಾಸೋದ್ಯಮದ ಬಸ್ಸನ್ನು ಹಿಡಿದು ಕೆಲವು ಆಕರ್ಷಣೀಯ ಸ್ಥಳಗಳಿಗೆ ಭೇಟಿ ಇಟ್ಟೆವು. ಎಲ್ಲವನ್ನು ವಿವರಿಸಲು ಸಮಯವಿಲ್ಲ. ಆದರೂ ಕೆಲವನ್ನು ಹೇಳಲೇಬೇಕು. ಇಲ್ಲಿಯ ವಿಶಿಷ್ಟತೆಯೆಂದರೆ ಚಿತ್ತಾಕರ್ಷಕ ಚರ್ಚಗಳು, ಬಣ್ಣ ಬಣ್ಣದ ಕಟ್ಟಡಗಳು, ಹಡಗುಗಳು, ಹಾಗೂ ಅತೀ ಮುಖ್ಯವಾದ "ಲಿಟಲ್ ಮೆರ್ಮೈಡ" ವಿಗ್ರಹ. ಯಾರಾದರೂ Copenhagen ಹೋಗಿ "ಲಿಟಲ್ ಮೆರ್ಮೈಡ" ವಿಗ್ರಹ ನೋಡಲಿಲ್ಲ ಎಂದರೆ ಆಶ್ಯರ್ಯ ಪಡುತ್ತಾರೆ. ಇದು ಡೆನ್ಮಾರ್ಕಿನ ಹೆಮ್ಮೆಯೂ ಹೌದು. ಇದರ ಬಗ್ಗೆ ಸ್ವಲ್ಪ ಹೇಳುತ್ತೇನೆ. ಮೆರ್ಮೈಡ ಎಂದರೆ ದೇಹದ ಮೇಲಿನ ಭಾಗ ಹೆಣ್ಣಿನದು ಹಾಗೂ ಕೆಳಗಿನ ಭಾಗ ಮೀನಿನದು ಎಂದರ್ಥ. ಮನುಷ್ಯನ ಆತ್ಮ ಹಾಗೂ ರಾಜನ ಪ್ರೀತಿಯ ದ್ಯೋತಕ ಇದು. ಸುಮಾರು ವರ್ಷಗಳ ಹಿಂದೆ ಸಮುದ್ರ ರಾಜನ ಮಗಳಾಗಿ ಜನಿಸಿದ ಈ ಮೆರ್ಮೈಡ ಎಂಬಾಕೆ ತನ್ನೊಂದಿಗೆ ತನ್ನ ೫ ಜನ ಸಹೋದರಿಯರೊಂದಿಗೆ ಸಂತಸದಿಂದಿದ್ದಳು. ಒಂದು ದಿನ ಜಗತ್ತನ್ನು ನೋಡುವ ಆಸೆಯಿಂದ ಅದು ಸಮುದ್ರದಿಂದ ಮೇಲಕ್ಕೆ ಬಂದಾಗ ನೀರಿನ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿರುವ ರಾಜಕುವರನ ಕಂಡು ಕನಿಕರವುಂಟಾಯಿತು.




ಅವನನ್ನು ರಕ್ಷಿಸಿದವಳಿಗೆ ಅವನ ಮೇಲೆ ಅನುರಾಗ ಬೆಳೆಯಿತು. ತದನಂತರ ಅದು ರಾಜಕುವರನ ವರಿಸಲೆಂದು ಹೆಣ್ಣಿನ ರೂಪ ಧರಿಸಿ ಬಂದಾಗ ರಾಜಕುವರ ಅವಳನ್ನು ತಿರಸ್ಕರಿಸಿದ.ಬಯಸಿದ್ದರೆ ಅವಳು ರಾಜನನ್ನು ಕೊಂದು ಪುನಃ ತನ್ನ ರೂಪವನ್ನು ಪಡೆದುಕೊಳ್ಳಬಹುದಿತ್ತು. ಆದರೆ ಪ್ರೀತಿಯೇ ದೊಡ್ಡದು ಎಂದು ತೀರ್ಮಾನಿಸಿ ತನ್ನನ್ನೇ ಸಮರ್ಪಿಸಿ ತನ್ನ ಲೋಕಕ್ಕೆ ಹೋಗಲಾಗದೆ ಸದಾ ಸಮುದ್ರದಂಚಿನಲ್ಲಿ ಕಾಯುತ್ತಾ ಕುಳಿತಳು. ಅವಳ ನೆನಪೇ ಈ ಲಿಟಲ್ ಮೆರ್ಮೈಡ. ಇದೊಂದು ಹ್ರದಯಸ್ಪರ್ಶೀ ಕಥೆ. ನೀಚ ಬುದ್ದಿಯ ಮನುಜ ಈ ವಿಗ್ರಹದ ಮೇಲೆ ಹಲುವಾರು ಸಲ ದಾಳಿ ನಡೆಸಿದ್ದಾನೆ ಎಂಬ ವಿಷಯ ತಿಳಿದಾಗ ನಮ್ಮದೂ ಒಂದು ಜನ್ಮವೇ ಎಂಬ ತಿರಸ್ಕಾರ ಮನಸ್ಸಿನಂಚಿನಲ್ಲಿ ಸುಳಿದಾಡಿ ಹೋಯಿತು.ಆದರೆ ಆ ವಿಗ್ರಹ ಅನೇಕ ಯೋಚನೆಗಳಿಗೆ ನಾಂದಿ ಹಾಡುತ್ತದೆ. ತ್ಯಾಗಕ್ಕೆ, ಪ್ರೀತಿಗೆ, ಕಲೆಗಾರನ ನೈಪುಣ್ಯತೆಗೆ ಮೂಕಸಾಕ್ಷಿಯಾಗಿದ್ದೂ ಸತ್ಯ. ಅಲ್ಲಿ ನಿಂತು ಕ್ಷಣ ಕಳೆಯುವುದು ಒಂದು ರೋಚಕ ಅನುಭವ.
ಇದೊಂದು ಜ್ನಾನವಂತರ ಬೀಡು ಕೂಡ. ನೊಬೆಲ್ ಪಾರಿತೋಷಕ ಪಡೆದ ಹಲವರ ಮನೆ ಇಲ್ಲಿದೆ. ಈ ನಗರದ ಇನ್ನೊಂದು ಪ್ರಮುಖ ಆಕರ್ಷಣೆ ಇಲ್ಲಿನ ಶಾಪಿಂಗ್ ಓಣಿ. ಸ್ತೋರ್ಗೆತ್ ಎಂಬ ಹೆಸರಿನ ಯುರೋಪಿನಲ್ಲಿಯೇ ಅತೀ ಉದ್ದದ ಶಾಪಿಂಗ್ ಓಣಿ ಇದು. ಇಲ್ಲಿ ಸಿಗದ ವಸ್ತುಗಳೇ ಇಲ್ಲ. ಎಲ್ಲವು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ ಇದರಲ್ಲಿ. ಸುಮಾರು ೩ ಕಿಲೋಮೀಟರ್ ಗಳಷ್ಟು ಉದ್ದವಾದ ಈ ಓಣಿ ಯಲ್ಲಿ ಎಂದಿನಂತೆ ಸ್ತ್ರೀಯರದೇ ದರಬಾರು. ಈ ನಗರದಲ್ಲಿಯೇ ತಾಜ್ಮಹಲ್ ಎಂಬ ಭಾರತದ ರೆಸ್ಟೋರಂಟ್ ಇದೆ ಎಂದು ತಿಳಿದು ಅಲ್ಲಿಗೆ ಹೋದೆವು. ಸ್ವಾದಿಷ್ಟವಾದ ಭೋಜನ ಕರ್ನಾಟಕದ ಭೋಜನವನ್ನು ನೆನಪಿಸುವಂತಿತ್ತು.
ಈ ನಗರದ ಇನ್ನೊಂದು ಭವ್ಯತೆ ಇಲ್ಲಿನ ಅಮೊಲಿನಿಬೋರ್ಗ್ ಅರಮನೆ. ನೂರಾರು ವರ್ಷಗಳಷ್ಟು ಹಳೆಯದಾದ ಈ ಅರಮನೆ ರಾಜರ ವೈಭವವನ್ನು ನೆನಪಿಗೆ ತರಿಸುತ್ತದೆ. ಅತ್ಯಂತ ಸುಸ್ಥಿತಿಯಲ್ಲಿರುವ ಇಂದಿಗೂ ರಾಣಿಯಾ ಅಧಿಕ್ರತ ವಾಸಸ್ಥಾನ ವಾಗಿರುವ ಈ ಅರಮನೆ ಎಂಥವರನ್ನು ಮಂತ್ರಮುಗ್ಧಗೊಳಿಸಿಬಿಡುತ್ತದೆ.ಪ್ರತಿದಿನ ಮಧ್ಯಾನ್ಹ ೧೨ ಗಂಟೆಯ ಸುಮಾರಿಗೆ ರಾಣಿ ಬಂದು ತನ್ನ ರಕ್ಷಣಾ ತುಕಡಿಯನ್ನು ಬದಲಾಯಿಸುವ ದ್ರಶ್ಯ ಹಳೆಯ ಕಾಲದ ರಾಜರ ಶ್ರೀಮಂತಿಕೆಯನ್ನು ನೆನಪಿಸುತ್ತದೆ. ಅರಮನೆಯ ಮುಂದೆ ನಯನ ಮನೋಹರ

ಕಾರಂಜಿ, ಅಲ್ಲಿಯೇ ಹರಿಯುವ ಸಮುದ್ರ, ವಿಶಾಲವಾದ ಪ್ರಾಂಗಣ ನಮ್ಮ ಜೀವನ ಸಾರ್ಥಕ ಎನಿಸಿಬಿಡುತ್ತದೆ. ಹತ್ತು ಹಲವು ದಾಳಿಗಳಾದರೂ ತನ್ನ ಪ್ರತಿಷ್ಠೆಯನ್ನು ಉಳಿಸಿ ಬೆಳೆಸಿಕೊಂಡು ಬಂದ ಈ ಅರಮನೆಯನ್ನು ಒಮ್ಮೆ ನೋಡಲೇಬೇಕು. ಇಲ್ಲಿ ಯಾವುದೇ ತರಹದ ಅಸಹ್ಯವೆನಿಸುವಷ್ಟು ಪೋಲಿಸು ಕಾವಲು ಇಲ್ಲ. ಎಲ್ಲವು ಮನಸ್ಸಿಗೆ ಮುದ ಕೊಡುತ್ತವೆ.
ಈ ನಗರದ ವೈಭವಕ್ಕೆ ಕಾರಣವೇನು ಎಂದು ಕುತೂಹಲದಿಂದ ಪ್ರಶ್ನಿಸಿದಾಗ, ಇಲ್ಲಿನ ಸರ್ಕಾರ ಜನರಿಂದ ಸುಮಾರು ೪೦% ತೆರಿಗೆ ವಸೂಲು ಮಾಡುವ ವಿಚಾರ ಬೆಳಕಿಗೆ ಬಂತು.ಈ ತೆರಿಗೆಯಿಂದಲೇ ಜನರ ಸಮಸ್ತ ವ್ಯವಸ್ಥೆಗಳನ್ನು ಪೂರೈಸಲಾಗುತ್ತದಂತೆ. ಅದಕ್ಕಾಗಿಯೇ ಹುಡುಕಿದರೂ ಬಿಕ್ಷುಕರು ಇಲ್ಲಿ ಸಿಗಲಾರರು.
ಇನ್ನು ಅನೇಕ ಸ್ಥಳಗಳು ಇಲ್ಲಿ ನೋಡುವನ್ಥವುಗಳು ಆದರೆ ಅತೀ ಮಹತ್ವವಾದದ್ದನ್ನು ಮಾತ್ರ ತಿಳಿಸಿದ್ದೇನೆ.
ಭಾನುವಾರ ರಾತ್ರಿ ಅಲ್ಲಿಂದ ಹೊರತು ಪುನಃ Gothenburg ಸೇರುವಷ್ಟರಲ್ಲಿ ೧೧ ಗಂಟೆ ಆಗಿತ್ತು.
ಒಟ್ಟಿನಲ್ಲಿ ಈ ನಗರ ಎಲ್ಲ ಅಧುನಿಕ ತಂತ್ರಜ್ಞಾನಗಳು, ಹಾಗೂ ಹಳೆಯ ತಲೆಮಾರಿನ ಸಂಸ್ಕ್ರತಿ ಸೇರಿ "ಹಳೆ ಬೇರು ಹೊಸ ಚಿಗುರು, ಕೂಡಿರಲು ಮರ ಸೊಗಸು" ಎಂಬ ಕವಿ ವಾಣಿಯನ್ನು ನೆನಪಿಗೆ ತರಿಸುವಂತಿದೆ. ಸಾದ್ಯವಾದರೆ ನೋಡಲೇಬೇಕಾದ ನಗರ ಇದು. ಇನ್ನು ಹೆಚ್ಚಿನ ವಿವರಗಳಿಗೆ murthyhegde@gmail.com ಗೆ ಸಂಪರ್ಕಿಸಿ.

ಸಂಚಲನ

ಸಂಚಲನ

- ಗುರು ಬಬ್ಬಿಗದ್ದೆ


ಸಾಗರದಾಚೆಯ ಸಮ್ಮಿಲನ,
ಸಾಗುತಲಿದೆ ಈ ಸಂವಹನ
ಸಮಯದ ಸುಧೆಯೊಳು ಸಂಚಲನ,
ಸರ ಸರ ಸಾಗಿದೆ ಸಂಕಲನ ೧



ಸಂದೇಶವ ಹೊತ್ತಿಹ ಸಂಕ್ರಮಣ,
ಸುಮಗಳ ಒಳಗಿದೆ ಸಂತಾನ
ಸಾಧಿಸೋ ಮನಸಿಗೆ ಸನ್ಮಾನ,
ಸೇರಿಸೋ ಉಸಿರಿಗೆ ಸತ್ಯಾನ ೨


ಸೇವೆಯ ಸಂಗಮ ಸಾಗಿಹುದು,
ಸುಮಧುರ ಸಡಗರದಾಹ್ವಾನ
ಸಮ್ಮತವಾಗಲಿ ಸರ್ವರಿಗೂ,
ಸೇರುವ ಮೊದಲೇ ಸಾವನ್ನ ೩


ಸಿಹಿ ಕಹಿ ಬಾಳಲಿ ಸುಡುತಲಿರೆ,
ಸಕ್ಕರೆ ಮನಸಿದು ಸೊರಗಿಹುದು
ಸಂತನ ಕನಸಿದು ಸುಳ್ಳು ಕಣೋ,
ಸಂಸಾರದಿ ಸುಖವ ನೀ ಕಾಣೋ ೪


ಸಿಂಗರಗೊಂಡಿಹ ಸುಜನರಲಿ,
ಸುವಾರ್ತೆಯ ಸುದ್ದಿ ಸುರಿದಿರಲಿ
ಸಂಗೀತದ ಸ್ವರಕೆ ಸರಿಗಮ ನೀ,
ಸಂಸ್ಕಾರದ ಸಂಸ್ಕ್ರತಿ ಸಂಗಮ ನೀ ೫

ದ್ರವ ಸ್ಫಟಿಕಗಳ ಮಾಯಾಲೋಕ...

ದ್ರವ ಸ್ಫಟಿಕಗಳ ಮಾಯಾಲೋಕ...


- ಗುರು ಬಬ್ಬಿಗದ್ದೆ

ವಿಜ್ಞಾನವೆಂಬ ಸಮುದ್ರದಲ್ಲಿ "ಈಸಬೇಕು, ಇದ್ದು ಜಯಿಸಬೇಕು' ಎಂಬುದು ಹಾಸ್ಯಾಸ್ಪದವಾಗುತ್ತದೆ. ಇಲ್ಲಿ ಈಸಲು ಸಾಧ್ಯ ಆದರೆ ಈಜಿ ಜಯಿಸಲು ಸಾಧ್ಯವೇ?
ಹಲವಾರು ವರ್ಷಗಳಿಂದ ಇಂತಹ ಪ್ರಶ್ನೆಗಳು ಏಳುತ್ತಲೇ ಇವೆ. ಇಲ್ಲಿ ಮಗೆದಷ್ಟೂ ನೀರು, ಅಳೆದಷ್ಟೂ ಪ್ರಪಾತ. ಇದಕ್ಕೆ ಕೊನೆ ಮೊದಲೆಂಬುದೇ ಇಲ್ಲ. ಪ್ರಪಂಚದ ಅಸಂಖ್ಯಾತ ಸಂಶೋಧನೆಗಳು ಆಕಸ್ಮಿಕವಾಗಿ ನಮಗೆ ಸಿಕ್ಕಿದ್ದು. ಆದರೆ ಅದನ್ನು ಹುಡುಕುವ ತಾಳ್ಮೆ ಮಾತ್ರ ನಮಗೆ ಬೇಕು. ವಿಜ್ಞಾನವೇ ಅಂಥದ್ದು, ಅದು ಕವಿಯ ಕಲ್ಪನೆಗೆ ನಿಲುಕುವ ಚಂದ್ರನಲ್ಲ, ಅಥವಾ ಕಲಾವಿದನ ಕುಂಚಕ್ಕೆ ನಿಲುಕುವ ಹಂಸವೂ ಅಲ್ಲ, ಅದು ನಡೆದಾಡುವ ಹಾರಾಡುವ ಓಡಾಡುವ ಒಂದು ಅದ್ಭುತ. ವರ್ಣಿಸಲಾಗದ್ದು ಆದರೆ ಅನುಭವಿಸುವಂಥದ್ದು. "ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು " ಎನ್ನುವಂತೆ ಇಲ್ಲಿ ಎಲ್ಲದೂ ಪ್ರತ್ಯಕ್ಷ ದರ್ಶನಕ್ಕೆ ಸಿಗುವುದು.

ನಮಗೆಲ್ಲ ತಿಳಿದಿರುವಂತೆ ವಸ್ತುವನ್ನು ೩ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಘನ, ದ್ರವ, ಅನಿಲ ಎಂಬುದಾಗಿ. ಆದರೆ ೧೮೮೮ ರಲ್ಲಿ ಆಸ್ಟ್ರಿಯಾದ ರಸಾಯನಶಾಸ್ತ್ರದ ಪ್ರೊಫ಼ೆಸ್ಸರ್ ಫ಼್ರೆಡ್ರಿಕ್ ರಿನಿಟ್ಜರ್ ಗೆ ಅದು ಬಹುಷ ೪ ಎಂಬುದಾಗಿ ತೋರಿರಬೇಕು. ಬನ್ನಿ ಅವರ ಸಂಶೋಧನೆಯ ಒಳಗೆ ಹೊಕ್ಕಿ ನೋಡೋಣ.

೧೮೮೮ ರಲ್ಲಿ ಅವರು ಸೂಕ್ಶ್ಮ ದರ್ಶಕದಲ್ಲಿ ಘನವಸ್ತುವನ್ನು ಕಾಯಿಸುತ್ತಾ ಹೋದರು. ಸಾಧಾರಣವಾಗಿ ನಮಗೆಲ್ಲ ತಿಳಿದಿರುವಂತೆ, ಘನ ಕಾಯಿಸಿದರೆ ದ್ರವ ವಾಗುತ್ತದೆ. ಇನ್ನು ಕಾಯಿಸಿದರೆ ಅನಿಲವಾಗುತ್ತದೆ. ಹಾಗೆ ಅವರು ಘನ ವಸ್ತುವನ್ನು ಕಾಯಿಸುತ್ತಾ ಹೋದಂತೆ ಅದು ದ್ರವಕ್ಕೆ ಹೋಗುವ ಮೊದಲು ಇನ್ನೊಂದು ರೂಪಕ್ಕೆ ತಿರುಗಿತು. ಸ್ವಲ್ಪ ಸಮಯದ ನಂತರ ಅದು ದ್ರವರೂಪಕ್ಕೆ ಹೋಯಿತು. ಅದನ್ನು ವಿಶ್ಲೇಷಿಸಿದಾಗ, ದ್ರವಕ್ಕೆ ಹೋಗುವ ಮೊದಲು ಅದು ಅತ್ತ ಘನವೂ ಅಲ್ಲದ, ಇತ್ತ ದ್ರವವೂ ಅಲ್ಲದ ವಿಚಿತ್ರ ಸ್ಥಿತಿಗೆ ತಿರುಗುತ್ತಿದ್ದುದು ಕಂಡುಬಂತು. ಅದನ್ನು ಅವರು ತಮ್ಮ ಆತ್ಮೀಯ ಸ್ನೇಹಿತನಿಗೆ ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಿದರು. ಆ ಸ್ನೇಹಿತ ಈ ವಿಚಿತ್ರ ವಾದ ಸ್ಥಿತಿಗೆ ದ್ರವ ಸ್ಫಟಿಕ (ಲಿಕ್ವಿಡ್ ಕ್ರಿಸ್ಟಲ್ಸ್) ಎಂಬುದಾಗಿ ಹೆಸರಿಟ್ಟರು. ಹೀಗೆ ದ್ರವ ಸ್ಫಟಿಕದ ಉದಯ ಒಂದು ಆಕಸ್ಮಿಕ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಯಿತು.

ದ್ರವಸ್ಫಟಿಕವನ್ನು ಜಗತ್ತಿಗೆ ನೀಡಿದ ರೆನಿಟ್ಜರ್ ಅವರನ್ನು ದ್ರವ ಸ್ಫಟಿಕದ ಪಿತಾಮಹ ಎಂಬುದಾಗಿ ಸಂಬೋಧಿಸಲಾಗುತ್ತದೆ. ಅತ್ತ ಘನವೂ ಅಲ್ಲದ, ಇತ್ತ ದ್ರವವೂ ಅಲ್ಲದ ಸ್ಥಿತಿಗೆ ದ್ರವ ಸ್ಫಟಿಕ ಎಂಬುದಾಗಿ ಕರೆಯಲಾಗುತ್ತದೆ. ಎಲ್ಲ ಸ್ಫಟಿಕಗಳೂ ಘನವಸ್ತುಗಳೇ, ಆದರೆ ಎಲ್ಲ ಘನವಸ್ತುಗಳೂ ಸ್ಫಟಿಕ ವಸ್ತುಗಳಲ್ಲ. ಅವುಗಳಲ್ಲಿ ಅಣುಗಳ ರಚನೆ ಕ್ರಮಬದ್ಧವಾಗಿರುತ್ತವೆ. ಆದರೆ ದ್ರವವಸ್ತುಗಳು ಕಾಲೇಜುಗಳಲ್ಲಿ ಅಲೆಯುವ ಪೋಲಿ ಹುಡುಗರಂತೆ ತಮಗೆ ಬೇಕಾದಲ್ಲಿ ಚಲಿಸುತ್ತವೆ. ಈ ದ್ರವ ಸ್ಫಟಿಕ ಈ ಎರಡರ ಪ್ರಭಾವದಿಂದ ಪ್ರೇರೇಪಿತವಾದದ್ದು. ಇದಕ್ಕೆ ಸ್ಫಟಿಕಗಳಿಗೆ ಇರುವಂತೆ ಕೆಲವು ಕ್ರಮಬದ್ಧ ಜೋಡಣೆಗಳಿವೆ. ದ್ರವಗಳಿಗೆ ಇರುವಂತೆ ಚಲಿಸುವ ಗುಣವಿದೆ. ಆದ್ದರಿಂದಲೇ ಇದಕ್ಕೆ ದ್ರವ ಸ್ಫಟಿಕ ಎಂಬ ಹೆಸರು ಸೂಕ್ತವಾಗಿದೆ.

ಇಂದು ಜಗತ್ತಿನಲ್ಲಿ ಕ್ಯಾಲ್ಕುಲೇಟರ್ ಉಪಯೋಗಿಸದವರಾರು? ೨+೨ ಮಾಡಲು ನಮಗೆ ಅದು ಬೇಕು. ನಮಗೆ ಇಂದು ಲಾಪ್ ಟಾಪ್ ಬೇಕು. ಟಚ್ ಸ್ಕ್ರೀನ್ ಕಾಮೆರಾ ಬೇಕು, ಮೊಬೈಲ್ ಬೇಕು. ಇವೆಲ್ಲವುಗಳಲ್ಲಿ ದ್ರವ ಸ್ಫಟಿಕ ಮೂಲ ಪಾತ್ರ ವಹಿಸುತ್ತದೆ.

ನಮ್ಮ ದೇಹದಲ್ಲೂ ದ್ರವಸ್ಫಟಿಕಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದಲ್ಲವೇ? ಆದರೆ ಅದು ನಿಜ ಕೂಡಾ. ಹಕ್ಕಿಗಳ ವಿಧ ವಿಧವಾದ ಬಣ್ಣದಲ್ಲಿ, ಬಳಸುವ ಸೋಪಿನಲ್ಲಿ, ಆಧುನಿಕ ಯಂತ್ರೋಪಕರಣಗಳಲ್ಲಿ, ವೈದ್ಯಕೀಯ ಉಪಕರಣಗಳಲ್ಲಿ, ಉಷ್ಣತಾಮಾಪಿಯಾಗಿ... ಒಂದೇ ಎರಡೆ... ಹಲವಾರು ದಿನಬಳಕೆಯ ಸಾಮಗ್ರಿಗಳಲ್ಲಿ ದ್ರವ ಸ್ಫಟಿಕ ಬಳಕೆಯಾಗುತ್ತದೆ. ಇಷ್ಟೆಲ್ಲ ಉಪಯೋಗಗಳಿದ್ದರೂ ಅದರ ಬಗ್ಗೆ ಸುಮಾರು ೧೦೦ ವರ್ಷಗಳ ಕಾಲ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ೧೯೭೦ ರ ನಂತರ ದ್ರವ ಸ್ಫಟಿಕ ವನ್ನು ಡಿಸ್ ಪ್ಲೇ ಗಳಲ್ಲಿ ಉಪಯೋಗಿಸಲು ಸಾಧ್ಯ ಎಂದು ತಿಳಿದ ನಂತರ ಹಲವಾರು ಸಂಶೋಧನೆಗಳು ನಡೆಯುತ್ತಿವೆ.

ದ್ರವ ಸ್ಫಟಿಕಗಳಲ್ಲಿ ಥರ್ಮೋಟ್ರೋಪಿಕ್ ( ಇದು ಉಷ್ಣತೆಯ ಮೇಲೆ ಅವಲಂಬಿಸಿದೆ) ಮತ್ತು ಲಯೋಟ್ರೋಪಿಕ್ (ಇದು ದ್ರಾವಣಗಳ ಮೇಲೆ ಅವಲಂಬಿಸಿದೆ) ಎಂಬುದಾಗಿ ಎರಡು ವಿಧ. ಹೆಚ್ಚಿನ ಕಡೆಗಳಲ್ಲಿ ಥರ್ಮೋಟ್ರೋಪಿಕ್ ದ್ರವ ಸ್ಫಟಿಕಗಳನ್ನು ಉಪಯೋಗಿಸಲಾಗುತ್ತದೆ. ಕೆಲವು ವೈಜ್ಞಾನಿಕ ಸಂಶೋಧನೆಗಳಲ್ಲಿ ಲಯೋಟ್ರೋಪಿಕ್ ಗಳನ್ನು ಉಪಯೋಗಿಸಲಾಗುತ್ತದೆ. ಇಲ್ಲಿ ಥರ್ಮೋಟ್ರೊಪಿಕ್ ಗಳ ಬಗೆಗೆ ಹೆಚ್ಚು ಒತ್ತು ನೀಡಲಾಗಿದೆ. ಈ ಥರ್ಮೋಟ್ರೋಪಿಕ್ ದ್ರವ ಸ್ಫಟಿಕಗಳಲ್ಲಿ, ಮುಖ್ಯವಾಗಿ, ನೆಮಾಟಿಕ್ (ದಾರದಂತೆ ಗೋಚರಿಸುವುದರಿಂದ ಆ ಹೆಸರು, ಗ್ರೀಕ್ ಪದ, ನೆಮಾ ಅಂದರೆ ದಾರ ಎಂದರ್ಥ), ಸ್ಮೆಕ್ಟಿಕ್ (ಪದರುಗಳಲ್ಲಿ ಇರುತ್ತದೆ) ಎಂಬುದಾಗಿ ವಿಂಗಡಿಸಲಾಗಿದೆ. ತದ ನಂತರ ಡಿಸ್ಕೊಟಿಕ್ (ಬಟ್ಟಲಿನ ಆಕಾರದಂತೆ ಕಾಣುವುದರಿಂದ ಆ ಹೆಸರು, ಇದನ್ನು ಮೊದಲಿಗೆ ಭಾರತದ ಖ್ಯಾತ ವಿಜ್ಞಾನಿ ಫ್ರೊ ಚಂದ್ರಶೇಖರ್ ಕಂಡುಹಿಡಿದರು), ಬನಾನಾ (ಬಾಳೆಹಣ್ಣಿನ ಆಕಾರದಲ್ಲಿ ಗೋಚರಿಸುವುದರಿಂದ ಆ ಹೆಸರು) ಹೀಗೆ ಅನೇಕ ವಿಂಗಡಣೆಗಳಾಗಿವೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ, ಜೀವಶಾಸ್ತ್ರ ಈ ಎಲ್ಲವುಗಳ ಸಂಗಮವೇ ದ್ರವ ಸ್ಫಟಿಕ ವಿಜ್ಞಾನ. ಇದಕ್ಕೆ ಇವರೆಲ್ಲರ ಕೊಡುಗೆ ಅಗತ್ಯ. ಇದೊಂದು ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ. ಎಲ್ಲರ ಸಹಾಯವಿದ್ದರೆ ಮಾತ್ರ ಇದರ ಸಂಶೋಧನೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ.

ಇತ್ತೀಚಿನ ದಿನಗಳಲ್ಲಿ ಅತ್ಯಂತ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿರುವ ಸಂಶೋಧನಾಕ್ಷೇತ್ರವೂ ಹೌದು. ಕ್ಯಾಲ್ಕುಲೇಟರ್ ಗಳಿಂದ, ನೋಟ್ ಬುಕ್, ಟಿ.ವಿ ಗಳವರೆಗೆ ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲಯ್ ತನ್ನ ಕರಾಮತ್ತು ತೋರಿದೆ. ಮೊದಲಿನ ಹಾಗೆ ಗಜ ಗಾತ್ರದ ಟಿ.ವಿ ನೋಡಬೇಕಾಗಿಲ್ಲ. ಹರೆಯದ, ಬಳುಕುವ ಸುಂದರಿಯ ಸೊಂಟದಂತೆ ಅವುಗಳ ಗಾತ್ರವೂ ಗಣನೀಯ ಪ್ರಮಾಣದಲ್ಲಿ ಇಳಿದಿರುವುದರಿಂದ ದ್ರವ ಸ್ಫಟಿಕಗಳನ್ನು ಶ್ಲಾಘಿಸಲೇಬೇಕಾಗಿದೆ. ಅವುಗಳು ಅತೀ ಕಡಿಮೆ ವಿದ್ಯುತ್ ನಲ್ಲಿ ಕೆಲಸ ಮಾಡುವುದರಿಂದ ವಿದ್ಯುತ್ ಕೂಡಾ ಉಳಿಸಬಹುದು. ಹಾನಿಕಾರಕ ಕ್ಯಾಥೋಡ್ ಕಿರಣಗಳನ್ನು ಅವು ವಿಸರ್ಜಿಸುವುದಿಲ್ಲವಾದ್ದರಿಂದ ಕಣ್ಣಿಗೆ ಯಾವುದೇ ಅಪಾಯವಿಲ್ಲ. ಸಾಗಿಸುವುದು ತುಂಬಾ ಸುಲಭ. ಕೈಯಲ್ಲಿ ಹಿಡಿದುಕೊಂಡು ಎಲ್ಲಿಗೆ ಬೇಕಾದರೂ ಹೋಗಬಹುದು. ದ್ರವ ಸ್ಫಟಿಕಗಳಲ್ಲಿ ಗಣನೀಯ ಪ್ರಮಾಣದ ಸುಧಾರಣೆ ಕಂಡು ಬರುತ್ತಿದೆ. ಇದೊಂದು ಲಾಭದಾಯಕ ಉದ್ಯಮವಾದ್ದರಿಂದ ಅತ್ಯಂತ ಶ್ರೀಮಂತ ಲಿಕ್ವಿಡ್ ಕ್ರಿಸ್ಟಲ್ ಕಂಪನಿಗಳೂ ಪೈಪೋಟಿಗೆ ಬಿದ್ದಿವೆ. ಸಾಮ್ಸಂಗ್, ಪಿಲಿಪ್ಸ್, ಎಲ್ ಜಿ, ಸೋನಿ ಹೀಗೆ ಹಲವಾರು ಕಂಪನಿಗಳಿಂದ ಉತ್ಕೃಷ್ಟದ ಲಾಪ್ ಟೋಪ್ ಗಳು, ಟಿ.ವಿ ಗಳು ಬರುತ್ತಿವೆ.

ಇಂದು ಹತ್ತು ಹಲವು ಸರ್ಜರಿಗಳಿಗೆ ದ್ರವ ಸ್ಫಟಿಕದ ಸಹಾಯವನ್ನು ತೆಗೆದುಕೊಳ್ಳಲಾಗುತ್ತದೆ. ದ್ರವಸ್ಫಟಿಕದ ಸಂಶೋಧನೆಗಾಗಿ ಇಂದು ಬಿಲಿಯನ್ ಗಟ್ಟಲೆ ಹಣವನ್ನು ಸುರಿಯಲಾಗುತ್ತಿದೆ ಅಂದರೆ ಇದರ ಪ್ರಭಾವ ಎಷ್ಟು ಎಂಬುದರ ಬಗೆಗೆ ನಿಮಗೆ ಅರಿವಾಗಿರಬೇಕಲ್ಲ.

ಇಷ್ಟೇ ಅಲ್ಲ, ಈ ದ್ರವ ಸ್ಫಟಿಕಗಳ ನಡವಳಿಕೆಗಳೂ ವಿಚಿತ್ರವಾಗಿರುತ್ತವೆ. ಅವು ಹೇಗೆ ತಮ್ಮನ್ನು ತಾವು, ಉಷ್ಣತೆಗೆ, ವಿದ್ಯುತ್ ಕ್ಷೇತ್ರಕ್ಕೆ, ಬೆಳಕಿಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ. ಇದು ನಿಮ್ಮೆಲ್ಲರಿಗೆ ದೈನಂದಿನ ಜೀವನದಲ್ಲಿ ಉಪಯೋಗಿಸುವ ಸಾಧನವಾದ ದ್ರವ ಸ್ಫಟಿಕಗಳ ಬಗೆಗೆ ಒಂದು ಸಣ್ಣ ಮಾಹಿತಿ ಅಷ್ಟೇ.

ನೋಡಿದಿರಾ, ಈಗ ಹೇಳಿ, ಇದು ವಸ್ತುವಿನ ೪ ನೇ ವಿಧವಾಗಿ ವಿಂಗಡಿಸಬಹುದಲ್ಲ, ಬಹುಶ: ಮುಂಬರುವ ದಿನಗಳಲ್ಲಿ, ವಸ್ತುವನ್ನು ಘನ, ದ್ರವ ಸ್ಫಟಿಕ, ದ್ರವ, ಅನಿಲ ಎಂಬುದಾಗಿ ಗುರುತಿಸುವ ದಿನ ದೂರವಿಲ್ಲ ಅಲ್ಲವೇ?

ನಿಮ್ಮ ಸದಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.

ಚಿತ್ತಾರ ಬಿಡಿಸಿಹನು ....

ಚಿತ್ತಾರ ಬಿಡಿಸಿಹನು ನೋಡು ಬಾರಾ.........

- ಗುರು ಬಬ್ಬಿಗದ್ದೆ

ಚೆಲ್ಲಿದನು ಕಿರಣವನು ಬಾನ ಚಂದಿರನು
ಚಿತ್ತಾರ ಬಿಡಿಸು ಬಾರಾ
ಚುಕ್ಕಿ ಚಂದ್ರಮನಲ್ಲಿ ಪ್ರೇಮದ ಗಿಳಿಹುದು
ಹಿಡಿಯೋಣು ಓಡಿ ಬಾರಾ ಹಿಡಿಯೋಣು ಓಡಿ ಬಾರಾ ೧

ಚಿಲಿಪಿಲಿ ಹಕ್ಕಿಗಳು, ಚಿಮುಕಿಸುವ ಹನಿಗಳು
ಚಾದರದ ಒಳಗಿಂದ ಹೊರಟು ಬಾರಾ
ಚೆಲ್ಲಿದರು ಆಗಸದಿ ಹೊಳಪಿನ ಕನಸುಗಳು
ಒಂದಾಗಿ ಹೆಣೆಯ ಬಾರಾ‌ಒಂದಾಗಿ ಹೆಣೆಯ ಬಾರಾ ೨

ಮನಸಿಂದ ವೇದನೆಯ ಹೊರಗೆ ನೀ ಹಾಕುತ
ಮನವನ್ನು ತಣಿಸು ಬಾರಾ
ಮೈ ಮನದ ತುಂಬೆಲ್ಲ ನೀಲಿ ಆಕಾಶವೋ
ತಾರೆಗಳ ಕುಣಿಸು ಬಾರಾತಾರೆಗಳ ಕುಣಿಸು ಬಾರಾ ೩

ಬಾಳು ಬೆಳದಿಂಗಳು ಚಂದ್ರಮನೇ ಕಂಗಳು
ಆನಂದ ಸವಿಯ ಬಾರಾತಂಪಾದ ತಂಗಾಳಿ
ಕಾದಿಹುದು ನಿನಗಾಗಿ ಜಗವನ್ನೇ ಮರೆತು ಬಾರಾ
ಜಗವನ್ನೇ ಮರೆತು ಬಾರಾ ೪

ಮತ್ತೊಬ್ಬ ರಾಜ..

ಮತ್ತೊಬ್ಬ ರಾಜ, ಇನ್ನೊಂದು ಅರಮನೆ, ತೀರದು ಗೋಳಿನ ಕೊನೆ...

- ಗುರು ಬಬ್ಬಿಗದ್ದೆ

ಕನ್ನಡ ನಾಡಿನಲ್ಲಿ ಅಕಾಲಿಕ ಮಳೆಯಂತೆ ಇನ್ನೊಂದು ಅಕಾಲಿಕ ಪ್ರಸವವಾಗುತ್ತಿದೆ ಅರ್ಥಾಥ್ ಮತ್ತೊಮ್ಮೆ ಚುನಾವಣೆ ನಡೆಯುತ್ತಿದೆ. ಇತ್ತೀಚೆಗೆ ಚುನಾವಣೆಯೂ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ವಿಶ್ವದ ಅದೇಷ್ಟೋ ರಾಷ್ತ್ರಗಳು ಕಮ್ಯೂನಿಸಮ್ ದಾಳಿಗೆ ಸಿಲುಕಿ ನರಳುತ್ತಿವೆ ಆದರೆ ನಮ್ಮದು ಸರ್ವತಂತ್ರ ಪ್ರಜಾತಂತ್ರ ವ್ಯವಸ್ಥೆ ಅಲ್ಲಲ್ಲ ಅವ್ಯವಸ್ಥೆ. ಯಾರು ಪ್ರಜೆ, ಯಾರು ಪ್ರಭು ಇಲ್ಲಿ ಎಲ್ಲರೂ ಒಂದೇ ಎಂಬ ಮಾತು ಕೇಳಿ ಕೇಳಿ ಬೇಸರವಾಗಿ ಹೋಗಿದೆ. ಸಿರಿವಂತರು ೧೦ ಅಂತಸ್ತೂ ಸಾಲದೆಂಬಂತೆ ಇನ್ನೆರಡು ಕಟ್ಟುತ್ತಿದ್ದಾರೆ. ಆದರೆ ಬಡವ ದಿನದಿಂದ ದಿನಕ್ಕೆ ಸೊರಗಿ ಹೋಗುತ್ತಿದ್ದಾನೆ. ರೈತ ಬೆಳೆದ ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ಇವೆಲ್ಲದರ ನಡುವೆ ನಮಗೆ ಚುನಾವಣೆಯೆಂಬ ಕ್ರತಕ ಗರ್ಭದ ಹೆರಿಗೆ ಸಮಯ. ಕನ್ನಡಿಗರು ಅತೀ ಬುದ್ದಿವಂತರು, ಅದರಲ್ಲೂ ಸಾಫ಼್ತವೇರ್ ತಂತ್ರಜ್ನಾನದಲ್ಲಿ ಹೆಸರುವಾಸಿಯಾದ ಬೆಂಗಳೂರು ಬುದ್ದಿವಂತರ ಅಡ್ಡೆ. ಚುನಾವಣೆಯಲ್ಲಿ ಅತೀ ಕಡಿಮೆ ಮತದಾನ ನಡೆದಿದ್ದು ಸಹ ಅತೀ ಬುದ್ದಿವಂತರು ಇರುವ ಜಾಗದಲ್ಲೇ. ಸರಕಾರ ತಮಗೆ ರಸ್ತೆ ಕೊಡಲಿಲ್ಲ, ಟ್ರಾಫ಼ಿಕ್ ಜಾಮ್ ಎಂದೆಲ್ಲ ಬಡ ಬಡಿಸುವ ಮಂದಿಗೆ ತಮಗೆ ಬೇಕಾದವರನ್ನು ಚುನಾಯಿಸಲು ಮತ ಹಾಕಲು ಆಗದಷ್ಟು ಉದಾಸೀನ ಅಲ್ಲ ಆ ದಿನವಿಡೀ ಮನೆಯಲ್ಲೇ ಆಸೀನ. ನಾಚಿಕೆಯಾಗುತ್ತಿದೆ, ಹೆಚ್ಚು ಹೆಚ್ಚು ಕಲಿತಂತೆ ದಡ್ಡರಾಗುತ್ತಿದ್ದೇವೆ. ಮತದಾನ ಮಾಡಲೂ ಹೋಗದೇ ಸುಮ್ಮನೆ ಸರಕಾರವನ್ನು ಬೈಯ್ಯುವುದು ನ್ಯಾಯವಲ್ಲ. ಸುಧಾರಣೆ ದಿನ ಬೆಳಗಾಗುವುದರೊಳಗೆ ಆಗುವುದಿಲ್ಲ. ಅದನ್ನು ಆರಂಭಿಸಬೇಕು. ಇಂದು ಚುನಾವಣೆ ಬಂತೆಂದರೆ ಎಲ್ಲ ಅಭ್ಯರ್ಥಿಗಳು ಹಳ್ಳಿಗೆ ಓಡುತ್ತಾರೆ ಕಾರಣ ಅಲ್ಲಿ ಓಟಿನ ಬ್ಯಾಂಕ್ ಇದೆ. ಹಳ್ಳಿಯವರಿಗೆ ಹಣದ, ಅಮಲಿನ, ಮತ್ತೇನೋ ಆಮಿಶ ಒಡ್ಡಿ ಮತ ಪಡೆಯುತ್ತಾರೆ. ಪ್ರಜ್ನಾವಂತ ಎನಿಸಿಕೊಂಡವರೆಲ್ಲ ಚುನಾವಣೆಯ ದಿನ ಮನೆಯಲ್ಲಿ ರಜೆಯ ಮೋಜನ್ನು ಅನುಭವಿಸುತ್ತಿದ್ದರೆ ಇನ್ನೇನಾಗಲು ಸಾದ್ಯ ಹೇಳಿ. ಮೊನ್ನೆ ಮೊನ್ನೆ ಒಂದು ಆರ್ಟಿಕಲ್ ಓದಿದೆ, ಅದರ ಸಾರಾಂಶ ಇಷ್ಟೇ, "ನಮಗೆ ಒಳ್ಳೆಯ ಮೊಬೈಲ್ ಬೇಕು. ಅತ್ಯುತ್ತಮ ಡಿಸೈನ್ ಇರಬೇಕು, ಉತ್ತಮ ವೀಡಿಯೊ ಮತ್ತು ಆಡಿಯೊ ರೆಕಾರ್ಡಿಂಗ್ ಇರಬೇಕು. ಫೋಟೊ ಚೆನ್ನಾಗಿ ಬರಬೇಕು. ಜಗತ್ತಿನ ಎಲ್ಲ ಮೊಬೈಲ್ ಗಳಲ್ಲಿ ಇರುವ ಸೌಕರ್ಯ ಇದರಲ್ಲಿ ಬೇಕು. ಬೆಲೆ ಮಾತ್ರ ಎಲ್ಲಕ್ಕಿಂಥ ಕಡಿಮೆ ಇರಬೇಕು". ಎಲ್ಲಿ ಸಾದ್ಯ ಹೇಳಿ, ನಮಗೆ ಏನು ಬೇಕು ಎನ್ನುವುದು ನಮ್ಮ ಮನಸ್ಥಿತಿಯ ಮೇಲೆ ಅವಲಂಬಿಸಿದೆ. ನಿಮಗೆ ಬೇಕಾದವರನ್ನು ಆರಿಸದೆ ಅದು ಮಾಡಿ, ಇದು ಮಾಡಿ ಎನ್ನಲು ಆಗುವುದಿಲ್ಲ ಅಲ್ಲವೇ? ಇನ್ನೇನು ಚುನಾವಣೆ ಮುಗಿಯುತ್ತಿದೆ, ಮತ್ತೊಮ್ಮೆ ಅತಂತ್ರ ಸರಕಾರ ಅಸ್ತಿತ್ವಕ್ಕೆ ಬರುತ್ತದೆ, ಪುನಹ ಯಾವುದೋ ಪಕ್ಷ ಇನ್ಯಾವುದೋ ಪಕ್ಷಕ್ಕೆ ಸೆರಗು ಹಾಸುತ್ತದೆ. ಮತ್ತೆ ಸ್ವಲ್ಪ ದಿನ ಆಡಳಿತದ ಕಣ್ಣು ಮುಚ್ಚಾಲೆ, ಮತ್ತದೇ ಚುನಾವಣೆಯ ಗೋಳು. ಕರ್ನಾಟಕವೇನು ಇವರಪ್ಪನ ಮನೆಯ ಆಸ್ತಿಯೇ ಹರಿದು ಹಂಚಿ ತಿನ್ನಲು. ಮತದಾರನೇ ಈಗ ಏಳದಿದ್ದರೆ ಇನ್ನೆಂದೂ ಸಾದ್ಯವಿಲ್ಲ. ಯಾರನ್ನಾದರೂ ಆರಿಸು ಆದರೆ ಬಹುಮತವನ್ನು ನೀಡು. ಯಾವ ಪಕ್ಷವೂ ಸಾಚಾ ಅಲ್ಲ. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಇನ್ನೊಬ್ಬ ಮುಖ್ಯಮಂತ್ರಿ ಬರುತ್ತಾನೆ. ಇನ್ನೊಂದು ಮಂತ್ರಿ ಮಂಡಳ, ಆದರೆ ಜನಸಾಮಾನ್ಯರ ಗೋಳಿನ ಕಥೆ ಮಾತ್ರ ಹಾಗೆಯೇ ಮುಂದುವರಿಯುತ್ತದೆ. ನೂರಾರು ವರುಷ ನಮ್ಮಲ್ಲಿನ ಸಣ್ಣತನವನ್ನೇ ಬಂಡವಾಳವಾಗಿಸಿಕೊಂಡು ಒಡೆದು ಆಳಿದ ಆಂಗ್ಲರೇ ಇವರಿಗಿಂತ ಮೇಲು. ಅವರಿಗೆ ಒಂದು ಮಹತ್ವಾಕಾಂಕ್ಷೆಯಾದರೂ ಇತ್ತು. ಆದರೆ ನಮ್ಮ ಮಂತ್ರಿಗಳಿಗೆ ಹಣ ನುಂಗುವುದನ್ನು ಬಿಟ್ಟು ಇನ್ನೇನು ಗೊತ್ತಿಲ್ಲ. ವಿದೇಶ ಪ್ರವಾಸಗಳಿಗೆ ಹೋಗಿ ಅಲ್ಲಿನ ತಂತ್ರಜ್ನಾನದ ಮೋಜನ್ನು ಅನುಭವಿಸಿ ಬರುತ್ತಾರೆ. ನಮ್ಮಲ್ಲಿಗೆ ಬಂದ ಕೂಡಲೇ ತಂತ್ರಜ್ನಾನವನ್ನು ಅತಂತ್ರ ಮಾಡಿ ಬಿಡುತ್ತಾರೆ. ಇಂಥವರಿಂದ ಹೆಚ್ಚಿನದೇನು ನಿರೀಕ್ಷಿಸಲು ಸಾದ್ಯವಿಲ್ಲ. ಬಹುಮತವನ್ನು ನೀಡಿದರೆ ಕಾಲ ಕಾಲಕ್ಕೆ ಚುನಾವಣೆಯ ದುಂದು ವೆಚ್ಚವನ್ನಾದರೂ ತಪ್ಪಿಸಬಹುದು. ವಿರೋಧ ಪಕ್ಷ ಕೇವಲ ವಿರೋಧ ಮಾಡುವುದೊಂದೇ ತನ್ನ ಕರ್ತವ್ಯ ಎಂದುಕೊಂಡಿದೆ. ಆಡಳಿತದಲ್ಲಿರುವವರು ಮುಂದಿನ ಚುನಾವಣೆಗೆ ಸಿದ್ದರಾಗುತ್ತಾರೆ. ಒಟ್ಟಿನಲ್ಲಿ ಬಡವನ ಗೋಳು ನೀರಿನಲ್ಲಿ ತೊಳೆದ ಹುಳಸೇಹಣ್ಣಿನಂತಾಗುತ್ತದೆ. ನಮ್ಮ ಚುನಾವಣಾ ವ್ಯವಸ್ಥೆಯೇ ಇದಕ್ಕೆಲ್ಲ ಹೊಣೆ. ಬಹುಮತ ಬಂದ ಪಕ್ಷಕ್ಕೆ ಅಧಿಕಾರ ಎನ್ನುವುದರ ಬದಲು ಯವುದೇ ಪಕ್ಷಕ್ಕೆ ಹೆಚ್ಚಿನ ಮತ ಲಭಿಸಿದರೂ ಅವರೇ ಅಧಿಕಾರ ವಹಿಸಿಕೊಳ್ಳಬೇಕು ಎಂಬ ನಿಯಮ ಜಾರಿಗೆ ಬರಬೇಕು. ವಿರೋಧ ಪಕ್ಷ ಒಂದೇ ಸಾಕು. ಹತ್ತು ಹಲವು ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವುದನ್ನು ತಪ್ಪಿಸಬೇಕು. ನೇರ ಹಾಗೂ ನ್ಯಾಯಸಮ್ಮತ ತೀರ್ಮಾನ ಚುನಾವಣಾ ಮಂಡಳಿ ತೆಗೆದುಕೊಳ್ಳಬೇಕು. ದಾರ್ಶನಿಕ ಜಿಡ್ಡು ಕ್ರಷ್ಣಮೂರ್ತಿ ಯವರು ಹೇಳುವಂತೆ "ನೀವೇ ಜಗತ್ತು, ನೀವು ಬದಲಾಗದೇ ಯಾವುದೂ ಬದಲಾಗದು" ಮೊದಲು ನಮ್ಮಿಂದಲೇ ಸುಧಾರಣೆ ಆರಂಭಿಸಬೇಕಿದೆ. ಇದು ಸರ್ವತಂತ್ರ ಪ್ರಜಾವ್ಯವಸ್ಥೆ. ಪ್ರಜೆಗಳಿಗೆ ಎಲ್ಲ ಹಕ್ಕನ್ನು ಸಂವಿಧಾನ ನೀಡಿದೆ. ಆದ್ದರಿಂದ ಒಳ್ಳೆಯ ಆಡಳಿತ ನಡೆಸಲು ಸರಕಾರವನ್ನು ಒತ್ತಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕಳೆದ ಹಲವು ವರ್ಷಗಳಿಂದ ನೋಡುತ್ತಿದ್ದೇವೆ. ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳೂ ಆಶ್ವಾಸನೆಯ ಮೇಲೆಯೇ ನಿಂತಿವೆ. ವಿಶ್ವಾಸಘಾತುಕತನದ ಪರಮಾವಧಿಯನ್ನೇ ಮೀರಿವೆ. ಚುನಾವಣೆ ಬಂತೆಂದರೆ ಸುಧಾರಣೆ ನೆನಪಾಗುವ ಅಧಿಕಾರದಾಹಿ ನಾಯಕರೇ ಹೆಚ್ಚಾಗಿದ್ದಾರೆ. ಒಮ್ಮೆ ಚುನಾವಣೆ ಮುಗಿದರೆ ಮತ್ತೆ ಕ್ಷೇತ್ರದ ದರ್ಶನ ಮುಂದಿನ ಚುನಾವಣೆ ಬಂದಾಗ. ಅಲ್ಲಿಯವರೆಗೆ ಜನಸಾಮಾನ್ಯರ ಗೋಳಿನ ಕಥೆ ಕೇಳುವವರಾರೂ ಇಲ್ಲ. ದಿನ ಬೆಳಗಾದರೆ ರೈತನ ಆತ್ಮಹತ್ಯೆ, ಕೋಮುಗಲಭೆ, ವರದಕ್ಷಿಣೆ ಸಾವು, ಒಂದೇ ಎರಡೇ ಸಮಸ್ಯೆಗಳ ಸುಳಿಯೇ ತುಂಬಿದೆ. ಕೊನೆ ಎಂದು? ನಮ್ಮನ್ನು ಆಳುವ ನಾಯಕರು ಒಂದು ದಿನವಾದರೂ ತಲೆ ಕೆಡಿಸಿಕೊಂಡಿದ್ದಾರೆಯೇ? ನಮ್ಮ ಬಗ್ಗೆ ಅವರಿಗೆ ನಿಜವಾದ ಕಳಕಳಿ ಇದೆಯೇ? ಒಮ್ಮೆ ಅಧಿಕಾರಕ್ಕೆ ಬಂದರೆ ತಲೆಮಾರುಗಳವರೆಗೂ ಆಸ್ತಿ ಮಾಡುತ್ತಾ ಹೋಗುವ ನಾಯಕರಿಂದ ಆಶ್ವಾಸನೆ ಸಿಗಲು ಸಾದ್ಯವೇ ಹೊರತು ಸುಧಾರಣೆ ಅಲ್ಲ. ಸತ್ತರೆ ಬೊಗಳೆ ಕಣ್ಣೀರು ಹಾಕುವ, ಬದುಕಿದರೆ ಅವರನ್ನೇ ಸಾಯಿಸುವ ಅಧಿಕಾರಿಗಳೂ ಹಾಗೂ ಅವರನ್ನು ಪೋಷಿಸುವ ಮಂತ್ರಿಗಳು, ರೈತ ಬೆಳೆದ ಬೆಳೆಗೆ ಮೂರು ಕಾಸಿನ ಕಿಮ್ಮತ್ತು ನೀಡಿ ಖರೀದಿಸಿ ಅಪಾರ ಹಣ ದೋಚುವ ಮದ್ಯವರ್ತಿಗಳು, ಇವ್ಯಾವುದೂ ಸಂಭಂಧವೇ ಇಲ್ಲದಂತೆ ಭಾವಿಸುವ "ಪ್ರಜ್ನಾವಂತರು" , ಯಾರಿಗಿದೆ ಸ್ವಾಮಿ ಸುಧಾರಣೆಯ ಪ್ರಜ್ನೆ. ನೀವು ಗಮನಿಸರಬೇಕು, ಹಳ್ಳಿಯ ಜನರಿಗೆ ಚುನಾವಣೆಯ ಬಗ್ಗೆ ಇರುವಷ್ಟು ಆಸಕ್ತಿ ಪಟ್ಟಣದವರಿಗೆ ಇಲ್ಲ. ಮತದಾನ ಹಾಕಲೂ ಆಗದ ಜನರಿಗೆ ಯಾರು ಅಧಿಕಾರಕ್ಕೆ ಬಂದರೂ ಅಷ್ಟಕ್ಕಷ್ಟೇ. ಅವರಿಗೆ ತಿಂಗಳ ಕೊನೆಯ ಸಂಬಳ, ಮೇಲೆರಡು ಗಿಂಬಳ ಸಿಕ್ಕಿದರೆ ಸಾಕು. ನಮ್ಮಲ್ಲಿ ಹುಚ್ಚು ಬ್ಯುರಾಕ್ರಸಿಯಿಂದಾಗಿ ಡೆಮಾಕ್ರಸಿ ನಶಿಸುತ್ತಿದೆ. ಚುನಾವಣೆಯೊಂದೇ ಇದಕ್ಕೆ ಪರಿಹಾರ. ಇದು ನಿಮ್ಮ ಹಕ್ಕು. ಅಹ್ರತೆಯಿಲ್ಲದೆ ಇರುವವನನ್ನು ನಿರ್ದಾಕ್ಷಿಣ್ಯವಾಗಿ ಸೋಲಿಸಿ. ಪ್ರಜಾಪ್ರಭುತ್ವದ ಸತ್ವವನ್ನು ಪರಿಚಯಿಸಿಕೊಡಿ. ಆಗ ಮಾತ್ರ ಒಂದು ಅರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾದ್ಯ. ಇಲ್ಲದಿದ್ದರೆ ಮೊದಲೇ ಹೇಳಿದಂತೆ "ಮತ್ತೊಬ್ಬ ರಾಜ, ಇನ್ನೊಂದು ಅರಮನೆ, ತೀರದು ಗೋಳಿನ ಕಥೆ", ಆಯ್ಕೆ ನಿಮಗೆ ಬಿಟ್ಟಿದ್ದು.....

ಚಿಂತಿಸದಿರು ಮನವೆ....

ಚಿಂತಿಸದಿರು ಮನವೆ....

- ಗುರು ಬಬ್ಬಿಗದ್ದೆ

ಮನಸ್ಸು ಮಂಗನಂತೆ, ಅದನ್ನು ಹಿಡಿದಿಡುವುದು ಪ್ರಯಾಸದ ಕೆಲಸ.ಅದು ಆದಿಯಿಂದ ಅಂತ್ಯದವರೆಗೆ ನಮ್ಮೊಂದಿಗೇ ಇದ್ದು ನಮಗೆ ಅರಿವಿಗೆ ಬಾರದಂತೆ ತನ್ನ ಕಾರ್ಯವನ್ನು ಪೂರೈಸುತ್ತದೆ. ಇಂಥಹ ಮನಸ್ಸು ನಮ್ಮನ್ನು ಸದಾ ಚಿಂತನೆಗೆ ಒಳಪಡಿಸಿ ಕೊಲ್ಲುತ್ತಲೇ ಇರುತ್ತದೆ. ಚಿಂತಿಸುತ್ತಿದ್ದರೆ ನಾವು ಚಿತೆಯಾಗಿಬಿಡುತ್ತೇವೆ. ಕಾಲದೊಂದಿಗೆ ಮುಂದಡಿ ಇಡುತ್ತಾ, ನಗುಮೊಗದಿ ಬಾಳಬೇಕೆಂಬುದೇ ಕವಿಯ ಆಶಯ ಮಾತ್ರವಲ್ಲ ಕವನದ ವಿಷಯವೂ ಹೌದು. ನಿಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳಿಗೆ ಸದಾ ಸ್ವಾಗತ.ನನ್ನ ಈ-ಮೇಲ್ ವಿಳಾಸ: murthyhedge@gmail.com

ಚಿಂತಿಸದಿರು ಮನವೆ, ಚಿತೆಯಾಗುವೆ
ಚಿಂತನೆ ಮಾಡುತಲಿ ಚರಿತೆಯಾಗುವೆ
ಚಿತ್ರದಿಂದ ನೀ ಪತ್ರವಾದೆವಿ
ಚಿತ್ರದಲ್ಲಿಯೇ ಸಚಿತ್ರವಾದೆ
ಕಣ್ಣಾದೆ, ಕಿವಿಯಾದೆ, ಕನಸುಗಳ ಜೊತೆಯಾದೆ
ನನ್ನೆದೆಯ ಭಾವನೆಗೆ, ನನ್ನೊಲವೇ ನೀನಾದೆ ೧

ಚಿನ್ನದಂತ ನೀ ನಯನವಾದೆ
ಚಂಚಲ ಮನಸಿಗೆ ಸತಿಯಾದೆ
ಒಗಟಾದೆ, ನೆರಳಾದೆ, ಆಸೆಗಳ ಸೆಳವಾದೆ
ಆಶಿಸುವ ಆಸರೆಗೆ, ಕೈ ಹಿಡಿದ ಪತಿಯಾದೆ ೨

ಚೆಲ್ಲಿದ ಮಲ್ಲಿಗೆ ಹೂವಾದೆ
ಸಾಧಿಸುವ ಗುರಿಗೆ ಛಲವಾದೆ
ಹಿತವಾದೆ, ಹಸನಾದೆ,
ಹದಿಹರೆಯಕೆ ಬೆಳಕಾದೆ
ನನ್ನಯ ಸುಂದರ ಕನಸಿನಲಿ,
ಜೀವಕೆ ಜೀವವೇ ನೀನಾದೆ ೩

ಚರಮಗೀತೆಗೆ ನುಡಿಯಾದೆ
ಚರಿತ್ರೆಯ ಪುಟದಲಿ ಹೆಸರಾದೆ
ಆದಿ ಅಂತ್ಯಗಳ ಕರ್ತನು ಆದೆ
ಸರ್ವವೂ ನೀನಾದೆ, ಚಿಂತಿಸದಿರು ಮನವೆ ೪

ಎಲ್ಲಿದ್ದೆ ಇಲ್ಲಿ ತನಕ...

ಎಲ್ಲಿದ್ದೆ ಇಲ್ಲಿ ತನಕ...

- ಗುರು ಬಬ್ಬಿಗದ್ದೆ

ಮದುವೆಯ ಮನೆಯಲ್ಲಿ ಸೂತಕದ ಛಾಯೆ. ಮದುವೆಯ ಸಂಭ್ರಮದಲ್ಲಿದ್ದ ಮದುವಣಗಿತ್ತಿ ವರನ ಸುಳಿವಿಲ್ಲದೇ ಕಂಗಾಲಾಗಿದ್ದಾಳೆ. ನಿನ್ನೆ ಮೊನ್ನೆ ತನಕ ಭರವಸೆಯ ಕಿರಣ ಹರಿಸಿದ್ದ ವರ ಮಹಾಶಯ ಇದೀಗ ತನ್ನ ವಿಚಿತ್ರ ಸ್ವಭಾವದ ಪರಿಚಯ ಮಾಡಿಕೊಟ್ಟಿದ್ದಾನೆ. ಈ ಶಾಕ್ ನಿಂದ ಹೊರಬರಲು ಬಹಳಷ್ಟು ಸಮಯವೇ ಬೇಕು. ಮದುವೆಯ ಮನೆಯವರಿಗೆ ಮಾತ್ರ ಗೊತ್ತು ಅದರ ನೋವು, ದು:ಖ. ಅದೊಂದು ಬಿಸಿ ತುಪ್ಪದಂತೆ, ನುಂಗಲೂ ಆಗದೆ, ಉಗುಳಲೂ ಆಗದ ವಿಚಿತ್ರ ಮನೋವೇದನೆ.
ಆಶ್ಚರ್ಯವಾಗಿರಬಹುದಲ್ಲ, ಇದೇನಪ್ಪ, ಮದುವೆ, ವರ, ಎನೇನೋ ಹೇಳುತ್ತಿದ್ದಾನೆ ಎಂದು. ನಾನು ಹೇಳ ಹೊರಟಿರುವುದು ಭಾರತವೆಂಬ ಮದುವಣಗಿತ್ತಿಯ ಕಥೆ ಅಲ್ಲ ವ್ಯಥೆ. ಇಲ್ಲಿ ವರ ಮಹಾಶಯನ ಸ್ಥಾನದಲ್ಲಿ ನಮ್ಮ ಅರ್ಥಿಕತೆ ಕುಳಿತಿದೆ. ದಿನೇ ದಿನೇ ದೇಶವನ್ನು ತಲ್ಲಣಗೊಳಿಸುತ್ತಿರುವ ಆರ್ಥಿಕತೆ ನಿಜಕ್ಕೂ ಕೈ ಕೊಟ್ಟ ವರನೇ ಸರಿ. ನೋಡಿ, "ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಯಾಕೆ" ಎಂದು ಕೇಳುವ ಜನರ ಮಧ್ಯೆ "ಹೊಟ್ಟೆಯ ಹಿಟ್ಟಿಗೋಸ್ಕರವಾದರೂ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಯಲೇಬೇಕಾದ ಅನಿವಾರ್ಯತೆಯನ್ನು" ತೋರಿಸಿಕೊಟ್ಟು ವಿಶ್ವಕ್ಕೇ ವಿಶ್ವವೇ ಮೂಗಿನ ಮೇಲೆ ಬೆರಳು ಇಡುವಷ್ಟರ ಮಟ್ಟಿಗೆ ಬೆಳೆದಿದ್ದೇವೆ. ಮೊನ್ನೆ ಮೊನ್ನೆಯಷ್ಟೇ ಚಂದ್ರಯಾನ ಉಡಾಯನ ಮಾಡಿ ಶಹಬ್ಬಾಸ್ ಎನಿಸಿಕೊಂಡಿದ್ದೇವೆ. ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವಾಗಲೇ ಆರ್ಥಿಕ ಬಿಕ್ಕಟ್ಟು ದೇಶದ ಬೆನ್ನನ್ನೇ ಮುರಿದಿದೆ.ಒಮ್ಮೆ ಯೋಚಿಸಿ, ವಿಶ್ವದ ದೊಡ್ಡಣ್ಣ, ಬಲಿಷ್ಟ ಆರ್ಥಿಕತೆಯ ಸಾರ್ವಭೌಮ, ಶ್ರೀಮಂತಿಕೆಯ ಸರದಾರ ಎನಿಸಿಕೊಂಡಿದ್ದ ಅಮೇರಿಕಾವೇ ಆರ್ಥಿಕ ದಿವಾಳಿತನದಿಂದ ಕಂಗೆಟ್ಟಿದೆ. ಇಂಥಹ ಸನ್ನಿವೇಶದಲ್ಲಿ ಭಾರತದಂತಹ ದೇಶ ಉಸಿರಾಡಲೂ ಆಗದ ಸ್ಥಿತಿ ನಿರ್ಮಾಣವಾಗಬೇಕಿತ್ತು. ಆದರೆ ಪುಣ್ಯಕ್ಕೆ ಹಾಗೆ ಆಗಲಿಲ್ಲ. ನಾವಿನ್ನೂ ಶೋಚನೀಯ ಸ್ಥಿತಿ ಮುಟ್ಟಿಲ್ಲ. ಶತಮಾನಗಳ ಖ್ಯಾತಿಯ ಲೆಹ್ಮನ್ ಬ್ರದರ್ಸ್ , ಬೆರ್ ಸ್ಟೆರ್ನ್ಸ್ ನಂಥ ಘಟಾನುಘಟಿಗಳೇ ಮಣ್ಣು ಮುಕ್ಕಿವೆ. ಆದರೆ ನಮ್ಮಲ್ಲಿ ಇಲ್ಲಿ ತನಕ ಯಾವ ಕಂಪನಿಯೂ ದಿವಾಳಿಯಾಗಿಲ್ಲ. ನಿಜ, ಅರ್ಥಿಕವಾಗಿ ನಾವು ಸುದೃಢವಾಗುತ್ತಿರುವಾಗಲೇ ಒಕ್ಕರಿಸಿದ ಈ ಬಿಸಿ ನಮ್ಮನ್ನು ಚಿಂತೆಗೀಡುಮಾಡಿದೆ.
ಕೇಳಲೇಬೇಕಾದ ಅನಿವಾರ್ಯತೆಯಿಂದ ಕೇಳುತ್ತಿದ್ದೇನೆ "ಎಲ್ಲಿದ್ದೆ ಇಲ್ಲಿ ತನಕ" ಎಂದು. ಕಲ್ಪನೆಗೂ ನಿಲುಕದ ರೀತಿಯಲ್ಲಿ ಕುಸಿದ ಷೇರುಪೇಟೆ, ಗಗನಕ್ಕೇರುತ್ತಿರುವ ಸಾಮಾನುಗಳ ಬೆಲೆ, ಹಣ ಕಳೆದುಕೊಂಡು ಸೊರಗುತ್ತಿರುವ ಅದೇಷ್ಟೋ ಜನರ ಮಧ್ಯೆಯೇ ಆಶಾ ಕಿರಣವಾಗಿ ಬಂದ ಚಂದ್ರಯಾನ, ಕೇವಲ ಭಾರತ ಮಾತ್ರ ಮಾಡಲು ಸಾಧ್ಯ ಎಂಬುದನ್ನು ತೋರಿಸಿದಂತಾಗಿದೆ. ಒಂದು ಬಿಲಿಯನ್ ಜನಸಂಖ್ಯೆಯುಳ್ಳ ದೇಶ, ಬಡತನದಿಂದ ಮುಕ್ತವಾಗಿರದ ನಾಡು, ವೈರಿಗಳ ಕಾಟದಿಂದ ಬಳಲುತ್ತಿರುವ ಭಾರತ ಎಲ್ಲವುಗಳ ನಡುವೆಯೂ ತನ್ನತನವನ್ನು ಉಳಿಸಿಕೊಂಡು ಮುನ್ನಡಿ ಇಡುತ್ತಿದೆ.
ಇನ್ನು ಅರ್ಥವ್ಯವಸ್ಥೆಯ ಕಡೆಗೆ ಬರೋಣ. ಮೊನ್ನೆ ಮೊನ್ನೆಯವರೆಗೆ ಬಲಿಷ್ಟವೆನ್ನುತ್ತಿದ್ದ ಹಲವು ಕಂಪನಿಗಳು ಕೂಡಾ ನಷ್ಟ ಅನುಭವಿಸಿವೆ. ಮುಂಬರುವ ದಿನಗಳ ಸ್ಪಷ್ಟ ಮೂನ್ಸುಚನೆ ನಮಗೆ ಲಭಿಸುತ್ತಲಿದೆ. ಅಂದುಕೊಂಡದ್ದೆಲ್ಲ ಬಂಗಾರವಾಗದು ಎನ್ನುವ ಕಾಲ ದೂರವಿಲ್ಲ. ಜನರು ಬರುವ ದಿನಗಳಲ್ಲಿ ಹಣವನ್ನು ಯೋಚಿಸಿ ವ್ಯಯಿಸಬೇಕಾಗಿದೆ. ಬ್ಯಾಂಕ್ ಗಳು ಸಾಲ ಕೊಡುವಾಗ ಅದರ ಹಿಂಪಡೆತವನ್ನು ಪರಿಗಣಿಸಬೇಕಾಗಿದೆ. ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ. ಅದೇಷ್ಟೋ ಜನ ಷೇರು ಪೇಟೆಯಲ್ಲಿ ಹಣ ಕಳೆದು ಕೊಂಡಿದ್ದಾರೆ. ಅವರಿಗೆ ಧೈರ್ಯ ತುಂಬಬೇಕಾಗಿದೆ.
ನೋಡಿದಿರಾ, ಒಂದು ಮದುವೆ ಮನೆಯಲ್ಲಿ ತಾಳಿ ಕಟ್ಟುವ ಕಾಲಕ್ಕೆ ವರನೇ ಕಾಣೆಯಾದರೆ ಆಗುವ ದುಗುಡ ದಂತೆ ನಮ್ಮ ಸ್ಥಿತಿಯೂ ಆಗಿದೆ. ಆದರೆ ಮನಸ್ಸು ಸರಿಯಾಗಿದ್ದರೆ ಎಲ್ಲವೂ ಸಾಧ್ಯ. ದುಂದುವೆಚ್ಚವನ್ನು ನಿಯಂತ್ರಿಸಿ, ಕೈ ಗೆ ಕೈ ಸೇರಿಸಿದರೆ ಭರತಭೂಮಿಯನ್ನು ಪುನಹ ಸಪ್ತಪದಿಯ ಬಾಗಿಲಿಗೆ ತಂದು ನಿಲ್ಲಿಸಬಹುದು. ತಪ್ಪಿದ ವರನ ಮನವೊಲಿಸಿ ಅವನನ್ನು ಪುನಹ ಮದುವೆಗೆ ಅಣಿಗೊಳಿಸಬೇಕಾಗಿದೆ. ಅಲ್ಲಿಯವರೆಗೂ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಾಗಿಲ್ಲ. ಗೌರವಾನ್ವಿತ ಪ್ರಧಾನಮಂತ್ರಿಗಳು ಹಾಗೂ ಹಣಕಾಸು ಸಚಿವರು ಮಾಡುತ್ತಿರುವ ಸತತ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲ ನೀಡಿದಾಗ ಮಾತ್ರ ಇದೆಲ್ಲ ಸಾದ್ಯ, ಎಂಥಹ ಕಾಲಘಟ್ಟದಲ್ಲಿ ನಾವು ಸಿಲುಕಿದ್ದೇವೆಂದರೆ ಹಣ ವಿಲ್ಲದೇ ಉಸಿರಾಡಲು ಸಾದ್ಯವಿಲ್ಲದಷ್ಟು.
ಜಾಗತಿಕ ಅರ್ಥಿಕ ಬಿಕ್ಕಟ್ಟನ್ನು ಯಶಸ್ವಿಯಾಗಿ ಎದುರಿಸಿ ಬಲಿಷ್ಟ ಅರ್ಥ ವ್ಯವಸ್ಥೆಗೆ ಪಣತೊಟ್ಟು ಜಾಗತಿಕ ಮಟ್ಟದಲ್ಲಿ ಹೊಸ ನಕ್ಷತ್ರದಂತೆ ಉದಯಿಸೋಣ.