Friday, January 30, 2009

ಮರೆತು ಹೋಗುವ ಮುನ್ನ.....

ಮರೆತು ಹೋಗುವ ಮುನ್ನ.....

- ಗುರು ಬಬ್ಬಿಗದ್ದೆ.

೨೦೦೯ ವಿಶ್ವಕ್ಕೆ ಮಾರಕವಾಗಿ ಪರಿಣಮಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ೨೦೦೭ ರಲ್ಲಿ ಬೀಗುತ್ತಿದ್ದ ಕಂಪನಿಗಳು ೨೦೦೯ ಕ್ಕೆ ತೆರೆಮರೆಗೆ ಸರಿಯುತ್ತಿವೆ. ಸಾಫ್ಟವೇರ್ ಕಂಪನಿಗಳು ಹಾರ್ಡ್ ಆಗುತ್ತಿವೆ. ಹಾರ್ಡ್ವೇರ್ ಕಂಪನಿಗಳು ಅರ್ಥಿಕ ಹಿಂಜರಿತದಿಂದ ಸಾಫ್ಟ್ ಆಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬದುಕುವುದು ಹೇಗೆ ಎಂಬ ಯೋಚನೆ ಎಲ್ಲರಿಗೂ ಆರಂಭವಾಗಿದೆ. ಅನಿಶ್ಚಿತತೆ ವಿಶ್ವದ ಪ್ರತಿ ನಾಗರಿಕನಲ್ಲೂ ತಾಂಡವವಾಡುತ್ತಿದೆ. ಇದ್ದ ಹಣ ಕರ್ಚು ಮಾಡಲು ಈಗ ಆತಂಕದ ಸನ್ನಿವೇಶ. "ನಾಳೆ ಹೇಗೆ ಎಂಬ ಚಿಂತೆ ಸದಾ ಮನದಲಿ" ಎಂಬ ಕವಿವಾಣಿಯಂತೆ ತ್ರಿಶಂಕು ಸ್ವರ್ಗ ನಮ್ಮಲ್ಲೇ ನಿರ್ಮಾಣವಾಗಿದೆ.

ವಿಶ್ವದ ದೊಡ್ಡಣ್ಣ ಎಂದು ಮೆರೆಯುತ್ತಿದ್ದ ಅಮೇರಿಕಾವೇ ಇಂದು ತತ್ತರಿಸುತ್ತಿದೆ. ಯಾವ ಬಾಗಿಲಿನಿಂದ ತಪ್ಪಿಸಿಕೊಳ್ಳುತ್ತಿದ್ದರೋ ಅದೇ ಬಾಗಿಲು ಇಂದು ಮುಚ್ಚುತ್ತಿದೆ. ಎಲ್ಲಡೆಯೂ ಅಂಧಕಾರ. ಯಾರಿಗೆ ಹಿತವಚನ ಹೇಳಲು ಸದಾ ಕಾಯುತ್ತಿದ್ದರೋ ಅವರದೇ ಸ್ಥಿತಿ ಗಂಭೀರ. ಭೂಮಿ ಗೋಳಾಕಾರವಾಗಿದೆ ಎನ್ನುವುದು ಸುಳ್ಳಲ್ಲ. ಮೆರೆದವನು ಬೀಳಲೇ ಬೇಕು. ಇನ್ನೊಬ್ಬ ಮೆರೆಯಲೇಬೇಕು ಅಲ್ಲವೇ. ಆರ್ಥಿಕ ಒತ್ತಡ ತಾಳಲಾರದೆ ಎಲ್ಲ ಬ್ಯಾಂಕಗಳೂ ಮುಚ್ಚುತ್ತಿವೆ. ಕಂಪನಿಗಳೂ ದಿವಾಳಿಯಾಗುತ್ತಿವೆ. ವಿಶ್ವವನ್ನು ಮುನ್ನಡೆಸುವ ಸಾಮರ್ಥ್ಯ ಪಶ್ಚಿಮ ದೇಶಗಳಿಗೆ ಸಾದ್ಯವಿಲ್ಲ ಅದು ಏಶಿಯ ದ ದೇಶಗಳಿಗೆ ಮಾತ್ರ ಸಾದ್ಯ ಎಂಬ ಕಾಲ ದೂರವಿಲ್ಲ. ಇನ್ನೆಷ್ಟು ದಿನಗಳು ಬೇಕೋ ಗೊತ್ತಿಲ್ಲ ಸುಧಾರಿಸಲು. ಮರೆತು ಹೋಗುವ ಮುನ್ನ ಒಂದು ಸುತ್ತು ಅಷ್ಟೆ.

ಮರೆತು ಹೋಗುವ ಮುನ್ನ ಮರೆಯದೆ ಇರುವ ಇನ್ನೊಂದು ಘಟನೆ ಎಂದರೆ ವಿಶ್ವವನ್ನು ಭಾದಿಸುತ್ತಿರುವ ಉಗ್ರಗಾಮಿ ಚಟುವಟಿಕೆಗಳು ಹಾಗೂ ಭಯೋತ್ಪಾದನೆ. ಘಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಮಾರಣ ಹೋಮ, ಮುಂಬೈ ಮೇಲೆ ನಡೆದ ಭೀಕರ ದಾಳಿ, ನಸು ಮುಂಜಾವಿನ ಕನಸಿನಲ್ಲಿಯೇ ಇಹದ ನಂಟನ್ನು ಮುಗಿಸುವ ಮುಗ್ಧ ಜೀವಿಗಳ ಕರುಣಾಭರಿತ ರೋಧನ, ಮನುಕುಲದ ಬಗೆಗೆ ಅನುಮಾನವನ್ನು ಮೂಡಿಸಿವೆ. ಮಾನವ ಬೆಳೆದಂತೆಲ್ಲ ಮೃಗೀಯ ಭಾವನೆಗಳ ಸರದಾರನಾಗುತ್ತಿದ್ದಾನೆ. ಆತ ಎಷ್ಟೇ ಸಾಧನೆ ಮಾಡಿದರೂ ತನ್ನವರೊಂದಿಗೆ ಬಾಳಲಾಗದು ಎಂದರೆ ಮ್ರಗಕ್ಕಿಂತಲೂ ಕಡೆ. ತನ್ನ ಪಾಶವೀ ಕ್ರತ್ಯದಿಂದ ಇನ್ನೊಬ್ಬ ಮುಗ್ಧನನ್ನು ಕೊಲ್ಲುವ ನೀಚ ಹಂತಕ್ಕೆ ಇಳಿಯುವ ಮನುಜನಿಂದ ಶಾಂತಿ ಮಂತ್ರವನ್ನು ನಿರೀಕ್ಷಿಸಲು ಸಾದ್ಯವೇ? ನಾವಿನ್ನೂ ಹಳೆಯ ಶಿಲಾಯುಗದಲ್ಲಿದ್ದೇವೆ ಎಂಬುದನ್ನು ಪದೇ ಪದೇ ತೋರಿಸುತ್ತಾ ಪ್ರಾಣಿಗಳಂತೆ ಕಚ್ಚಾಡುತ್ತಿರುವ ಮಾನವನ ಸುಧಾರಣೆ ಇಂದಿನ ಮೊದಲ ಆದ್ಯ ವಿಷಯ. ಪದೇ ಪದೇ ನಮ್ಮ ಮೇಲೆ ಎರಗುತ್ತಿರುವ ಧರ್ಮದ ಹೆಸರಿನಲ್ಲಿ ಮುಗ್ಧರನ್ನು ಕೊಲ್ಲುವ ಪಾಕಿಸ್ತಾನಿ ಭಯೋತ್ಪಾದಕನ ತಾಂಡವವಾಟಕ್ಕೆ ತೆರೆ ಎಳೆಯಲೇಬೇಕಾಗಿದೆ.

ಮರೆತು ಹೋಗುವ ಮುನ್ನ ಮರೆಯಲಾಗದ ಇನ್ನೊಂದು ಘಟನೆ ವಿಶ್ವವನ್ನೇ ತಲ್ಲಣಿಸಿದ ಸತ್ಯಮ್ ಪ್ರಕರಣ. ಅತ್ಯಂತ ಲೆಕ್ಕಾಚಾರದ ಭಯೋತ್ಪಾದಕನಂತೆ, ನೋವಾಗದೇ ಜೀವ ತೆಗೆಯುವ ಪ್ರಕ್ರಿಯೆಯನ್ನು ಕರಗತ ಮಾಡಿಕೊಂಡ ಸತ್ಯಮ್ ನ ರಾಮ ಲಿಂಗ ರಾಜು ದೇಶದ ಪ್ರತಿಷ್ಟೆಗೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವಾಗ ಕೇವಲ ಒಬ್ಬ ವ್ಯಕ್ತಿ ಮಾತ್ರ ಕಾರಣನೆ? ಇಲ್ಲ ಇನ್ನು ಕಾಣದ ಕೈಗಳ ನಿಘೂಢತೆ ಇದೆಯೇ ಎಂಬುದು ಮುಂದಿರುವ ಪ್ರಶ್ನೆ. ಇಷ್ಟೊಂದು ವರ್ಷ ನಾಜೂಕಾಗಿ ಜನರನ್ನು ವಂಚಿಸುತ್ತಿದ್ದ ರಾಮ ಲಿಂಗಾ ರಾಜು ಗೆ ಅನೇಕರು ಬೆಂಬಲ ನೀಡಿರಲೇಬೇಕು. ಲೆಕ್ಕ ಪತ್ರ ವಿಭಾಗದ ಸಹಾಯವಿಲ್ಲದೆ ಇದನ್ನು ಮಾಡಲು ಸಾದ್ಯವಿಲ್ಲ ಎನ್ನುವುದು ಎಂಥ ದಡ್ಡನಿಗೂ ತಿಳಿಯುವ ವಿಚಾರ. ಹಣ ಬಲ, ತೋಳ್ಬಲ, ರಾಜಕಾರಣಿಯ ಬಲ ಎಲ್ಲ ಇರುವ ರಾಮ ಲಿಂಗಾ ರಾಜು ಪ್ರಕರಣವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲದ ವಿಷಯ. ಘನತೆವೆತ್ತ ನ್ಯಾಯಾಲಯ ಇನ್ನೆಂದೂ ಇಂಥಹ ಪ್ರಕರಣ ದೇಶದ ಮರ್ಯಾದೆಯನ್ನು ಹರಾಜಾಕದಂತ ತೀರ್ಮಾನವನ್ನು ನೀಡುತ್ತದೆಯೇ? ಕಾಡು ನೋಡೋಣ.

ಮರೆತು ಹೋಗುವ ಮುನ್ನ ದೇಶದ ಕ್ರೀಡಾ ರಂಗದ ಸಾಧನೆಯನ್ನು ಹೊಗಳಲೆಬೇಕಾಗಿದೆ. ಆಸ್ತ್ರೇಲಿಯನ ಓಪನ್ ನನ್ನು ಗೆದ್ದ ಮಹೇಶ ಭೂಪತಿ ಹಾಗೂ ಸಾನಿಯಾ ಮಿರ್ಜಾ, ಜೂನಿಯರ್ ಚಾಂಪಿಯನ್ ಯೂಕಿ ಭಾಂಬ್ರಿ ಅವರ ಸಾಧನೆ ಮುಂಬರುವ ದಿನಗಳಲ್ಲಿ ಟೆನ್ನಿಸ್ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ನೆರವು ನೀಡುವುದರಲ್ಲಿ ಅನುಮಾನವೇ ಇಲ್ಲ. ತಾನು ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ಮಾಡುವ ಮಾಯಗಾರ ಮಹೇಂದ್ರ ಸಿಂಗ್ ಧೋನಿ ಪಡೆಯ ಗೆಲುವು ಕ್ರಿಕೆಟ್ ಭಾರತದಲ್ಲಿ ಯಾಕೆ ಜನಪ್ರಿಯ ಎಂಬ ಪ್ರಶ್ನೆಗೆ ಉತ್ತರ ನೀಡಿದೆ. ಬಲಿಷ್ಟ ಆಸ್ಟ್ರೇಲಿಯವನ್ನು ಬಗ್ಗು ಬಡಿದು, ನಂತರ ಇಂಗ್ಲೆಂಡನ್ನು ಮಣಿಸಿ, ಇದೀಗ ಶ್ರೀಲಂಕಾವನ್ನು ಸೋಲಿಸುವ ಸನಿಹದಲ್ಲಿರುವ ಟೀಮ್ ಇಂಡಿಯಾ ಪಡೆಗೆ ಒಂದು ಸಲಾಮು. ಇದನ್ನಂತೂ ಮರೆಯಲೂ ಸಾದ್ಯವೇ ಇಲ್ಲ.

ಮರೆತು ಹೋಗುವ ಮುನ್ನ ಮರೆಯದ ಅದೆಷ್ಟೋ ಸಂಗತಿಗಳು ಸ್ಮ್ರತಿ ಪಟಲದಲ್ಲಿ ಸುಳಿಯುತ್ತಿದೆ. ಕೆಲವನ್ನು ವಿವರಿಸಿ ಇನ್ನುಳಿದದ್ದು ಅನುಭವಿಸಿ ನೆನಪಿಡಲು ಪ್ರಯತ್ನಿಸಿ. ಮರೆತು ಹೋಗುವ ಮುನ್ನ ಒಮ್ಮೆ ಸಿಂಹಾವಲೋಕನ ಮಾಡಲು ಮರೆಯದಿರಿ. ಮರೆತು ಹೋಗುವ ಮುನ್ನ ನನ್ನದೊಂದು ಸಣ್ಣ ನಮನ ಹಾಗೂ ೨೦೦೯ ಕ್ಕೆ ಶುಭ ಹಾರೈಕೆ.4 comments:

ಮನಸು said...

ಮರೆತು ಹೋಗುವ ಮುನ್ನ ಎಲ್ಲವನು ನೆನಪಿಸಿದ್ದೀರಿ.. ಧನ್ಯವಾದಗಳು..

ಚಕ್ರ ತಿರುಗಲೇ ಬೇಕಲ್ಲವೇ.. ಮೇಲಿದ್ದವ ಕೆಳಗಿಳಿಯಲೇ ಬೇಕು.. ಇದು ಎಲ್ಲದಕ್ಕೋ ಅನುವಹಿಸುತ್ತದೆ...

ಇನ್ನು ದೇಶದ ಶಾಂತಿ ಕೆಡುಕಿಗೆ ಕಾರಣವಾದನಿಗೆ ಮಾನವೀಯತೆ ಇರುವುದೇ ಇಲ್ಲ....
ನಿಮ್ಮ ವಿಮರ್ಶೆ ಎಲ್ಲರ ಮನಮುಟ್ಟಲೆಂದು ಆಶಿಸುತ್ತೇನೆ..


ವಂದನೆಗಳು..

ಸಿಮೆಂಟು ಮರಳಿನ ಮಧ್ಯೆ said...

ಗುರು....

ತುಂಬಾ ಚೆನ್ನಾಗಿ ಬರೆದಿದ್ದೀರಿ....

ಇಷ್ಟವಾಯಿತು...

ನಮ್ಮ ರಾಜಕೀಯ ವ್ಯವಸ್ಥೆ ಸರಿಯಾದರೆ ಎಲ್ಲವೂ ಸರಿಯಾಗಬಹುದೇನೋ...

ಮರೆತು ಹೋಗುವ ಮುನ್ನ ...

ಹಳೆಯದನ್ನೆಲ್ಲ..ಮೆಲುಕು ಹಾಕಿಸಿದ್ದಕ್ಕೆ...


ವಂದನೆಗಳು...

ತೇಜಸ್ವಿನಿ ಹೆಗಡೆ- said...

ಗುರು ಅವರೆ,

ಮೊದಲಿಗೆ ಮಾನಸವನ್ನು ಹಿಂಬಾಲಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು.

ಸಾಗರದಾಚೆಯ ಇಂಚರ ಇಂಪಾಗಿದೆ. ಬರಹ ಕಾರ್ಯವನ್ನು ಮುಂದುವರೆಸಿ.

ನಿಮ್ಮ "ಓ ತಾವರೆ" ಕವನ ತುಂಬಾ ಇಷ್ಟವಾಯಿತು.:)

ಮೂಕಜ್ಜಿಯ ಕನಸುಗಳು ನನ್ನಚ್ಚುಮೆಚ್ಚಿನ ಪುಸ್ತಕಗಳಲ್ಲೊಂದು. ಕುವೆಂಪು ಅವರ ಕಾದಂಬರಿಯ ಹೆಸರಿನಲ್ಲಿ ಸಣ್ಣ ತಪ್ಪಾಗಿದೆ. ಮಲೆಯಲ್ಲಿ ಮದುಮಗಳು ಎಂದಾಗಬೇಕಿದೆ ನೋಡಿ.."ಮಧುಮಗಳು" ಅಲ್ಲ.... ಸ್ವಲ್ಪ Typing error ಆಗಿದೆ ಅಷ್ಟೇ.

ಬರೆಯುತ್ತಿರಿ. ಬರುತ್ತಿರುವೆ.

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ said...

ಗುರು,
ಬರಹ ತುಂಬಾ ಉತ್ತಮವಾಗಿದೆ.
ಕೆಲವನ್ನ ಮರೆಯುವುದು ಅನಿವಾರ್ಯ,ಕೆಲವನ್ನು ನೆನಪಿನಲ್ಲಿಡುವುದು ಅನಿವಾರ್ಯ,ಇನ್ನು ಕೆಲವನ್ನು ಮೆಲುಕು ಹಾಕುವುದು,ಹಾಕುತ್ತಿರುವುದು ಅಗತ್ಯ.
ಒಮ್ಮೆ ಹಿಂತಿರುಗಿ ನೋಡುವಂತೆ ಮಾಡಿದ ನಿಮಗೆ ಧನ್ಯವಾದಗಳು.