Friday, December 18, 2009

''ನೀವು ತುಂಬಾ ಒಳ್ಳೆಯವರು ಕಣ್ರೀ, ಅವರ ಹಾಗೇ ಅಲ್ಲ''

ಕೆಲವರು ಇರುತ್ತಾರೆ, ಸದಾ ಹೊಗಳುವುದೇ ಅವರ ಜಾಯಮಾನ, ಅದು ಅವರ ಮಾತಿನ ಚಾಕಚಕ್ಯತೆ ಅಂತಲೇ ಅವರು ತಿಳಿದಿರುತ್ತಾರೆ. ಹಾಗೆಯೇ ತಮ್ಮನ್ನೂ ಇತರರು ಹೊಗಳಲಿ ಎಂದು ಬಯಸುತ್ತಿರುತ್ತಾರೆ. ಅವರ ಮಾತಿನ ನಡು ನಡುವೆ ''ಎಷ್ಟು Friendly ನೀವು, ತುಂಬಾ ಒಳ್ಳೆಯವರು, ನಿಮ್ಮಂಥವರು ಸಿಗೋದು ಬಲು ಅಪರೂಪ (ಎಷ್ಟು ಜನರಿಗೆ ಇದೆ ರೀತಿಯ ಮಾತನ್ನು ಆಡಿದ್ದಾರೋ ದೇವರೇ ಬಲ್ಲ)'' ಎಂದೆಲ್ಲ ಹೇಳುತ್ತಿರುತ್ತಾರೆ. ಇವರ ಉದ್ದೇಶ ಒಂದೇ, ತಾವು ಎಲ್ಲರನ್ನೂ ಬುಟ್ಟಿಗೆ ಬೀಳಿಸಿಕೊಳ್ಳುವುದು. ಒಂಥರಾ ವಿಷವಿಲ್ಲದ ನಾಗರಹಾವಿನಂತೆ.


ಇನ್ನೂ ಕೆಲವರು ಇರುತ್ತಾರೆ, ಅವರ ಮಾತುಗಳು ಬಹಳಷ್ಟು ಮಟ್ಟಿಗೆ ಮೇಲಿನಂತೆಯೇ ಇರುತ್ತವೆ ಆದರೆ ಅವರು ಉತ್ಪ್ರೇಕ್ಷಾಲಂಕಾರದ ಜೊತೆ ಉಪಮೆಗಳನ್ನೂ ಕೊಡುತ್ತಾರೆ. ಅವರಿಗೆ ನಮ್ಮನ್ನಷ್ಟೆ ಹೊಗಳಿದರೆ ಸಾಲದು, ನಮಗೆ ಗೊತ್ತಿರುವ ಕೆಲವು ಜನರನ್ನೂ ತೆಗಳಬೇಕು ''ಏನು ಜನಾರೀ ಅವರು, ನಿಮ್ಮ ಹಾಗೇ ಇಲ್ಲ, ನಿಮ್ಮ ಜೊತೆ ನಾವು ಅದೆಷ್ಟು Comfortable ಆಗಿ ಇರ್ತಿವಿ ಆದರೆ ಅವರ ಜೊತೆ ಏನೋ ಮುಳ್ಳು ಚುಚ್ಚಿದ ಅನುಭವ ಆಗುತ್ತೆ ಕಣ್ರೀ'' ಅಂತಾರೆ. ಇಂಥವರು ಒಂಥರಾ ವಿಷ ಸರ್ಪದ ಹಾಗೇ. ಮೈಯೆಲ್ಲಾ ಕಣ್ಣಾಗಿರಬೇಕು. ಅಪ್ಪಿ ತಪ್ಪಿ ಇವರಲ್ಲಿ ''ಅವರ'' ಬಗ್ಗೆ ಹೇಳಿದರೋ, ನಿಮ್ಮ ಸರ್ವ ಪುರಾಣವೂ ಕಾಲು ಬಾಯಿಗಳೊಂದಿಗೆ ''ಅವರ'' ಮನೆಯಲ್ಲಿ ರಸಾಯನವಾಗಿರುತ್ತದೆ.


ಇಂಥವರು ಒಂಥರಾ ಕಂಕುಳಲ್ಲಿ ಇದ್ದ ಬೆಣ್ಣೆಯ ಹಾಗೇ, ಬಿಡೋಕೂ ಆಗಲ್ಲ, ಹಾಗಂತ ಬಹಳ ದಿನ ಇರೋಕ್ಕೂ ಆಗಲ್ಲ. ಒಬ್ಬರನ್ನು ಹೊಗಳ್ತಾ, ಇನ್ನೊಬ್ರನ್ನ ತೆಗಳುತ್ತಾ, ಕೊನೆಗೆ ತಮ್ಮಷ್ಟಕ್ಕೆ ತಾವೇ ತಮ್ಮ ಚಾಣಾಕ್ಷ ಬುದ್ಧಿಗೆ ನಗುತ್ತಾ ಕಾಲ ಕಳೆಯುವುದೇ ಇಂಥವರ ಹವ್ಯಾಸ. ದುರ್ದೈವವಶಾತ್ ಇಂಥವರಿಗೆ ಬಹಳಷ್ಟು ಜನರ ಪರಿಚಯ ಇರುತ್ತೆ. ''ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು''  ಎನ್ನುವಂತೆ ಸದಾ ಬೇರೊಬ್ಬರ ಋಣಾತ್ಮಕ ಅಂಶಗಳ ಬಗೆಗೆ ಆಸಕ್ತಿ ಇವರಿಗೆ ಹೆಚ್ಚು. ಜೀವನದ ಬಂಡಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನಾವು ಇಂಥಹ ಜನರಾಗಿಯೋ, ಜನರೊಂದಿಗೋ ಸಂಪರ್ಕ ಇಟ್ಟುಕೊಂಡಿರುತ್ತೇವೆ.


ಕೆಲವೊಮ್ಮೆ ನಾವೇ ನಮಗೆ ಗೊತ್ತಿಲ್ಲದಂತೆ ನೆಚ್ಚಿನ ಸ್ನೇಹಿತನ ಮಾತಿನಿಂದ ಕೋಪಗೊಂಡು ಇನ್ನೊಬ್ಬ ಸ್ನೇಹಿತನಲ್ಲಿ ಅವನ ಬಗ್ಗೆ ಕೀಳಾಗಿ ಮಾತನಾಡಿರುತ್ತೇವೆ. ಇದೊಂದು ಆ ಕ್ಷಣದ ಕೆಟ್ಟ ಮನಸ್ಥಿತಿ. ಆ ಕ್ಷಣ ಧಾಟಿದಾಗ ಪುನಃ ಚಿತ್ರಣದ ಅರಿವಾಗಿ ಒಂದಾಗುತ್ತೇವೆ. ಆದರೆ ನಗು ನಗುತ್ತಾ ಹಿಂದಿನಿಂದ ನಮ್ಮ ಬಗ್ಗೆ ಆಡಿಕೊಳ್ಳುವುದಿದೆಯಲ್ಲ  ಅದು ಮಾತ್ರ ವಿಚಿತ್ರ ಮನಸ್ಥಿತಿ. ಅಂಥವರು ಯಾವಾಗಲೂ ನಮ್ಮ ಚಿತ್ತ ಕೆಡಿಸಲು ಕಟಿ ಬದ್ಧರಾಗಿರುತ್ತಾರೆ. ಇನ್ನೊಬ್ಬರ ಏಳ್ಗೆ ಅವರಿಗೆ ಸಹಿಸಲು ಸಾದ್ಯವೇ ಇಲ್ಲ.
ನಮ್ಮನ್ನೇ ತೆಗೆದುಕೊಳ್ಳಿ, ನಮಗೆ ಊಟ ಮಾಡುವಾಗ ಸುಮ್ಮನೆ ಊಟ ಮಾಡಿ ಗೊತ್ತಿಲ್ಲ, ಇರುವ ೧೦ ನಿಮಿಷದ ಊಟದಲ್ಲಿ ದೇಶ ವಿದೇಶಗಳ ಅಥಿತಿಗಳು ಊಟದಲ್ಲಿ ಬಂದಿರುತ್ತಾರೆ. ನಮಗೆ ಊಟಕ್ಕೆ ಕೂತಾಗ ''ಒಬಾಮ ಏನು ಮಾಡಿದ, ಮನಮೋಹನ ಸಿಂಗ್ ಯಾಕೆ ಹೀಗೆ?, ಅಣ್ವಸ್ತ್ರ ಬೇಕೇ ಬೇಡವೇ? ಸಚಿನ್ ತೆಂಡೂಲ್ಕರ್ ಕೌಂಟಿ ಯಲ್ಲಿ ಆಡಲು ಯಾಕೆ ಒಪ್ಪಿಕೊಂಡ'' ಎಂಬ ವಿಷಯಗಳು ಬೇಕೇ ಬೇಕು. ನಮ್ಮದೇ ಮನೆಯ ಮುಂದೆ ಬಿದ್ದ ಕಸದ ರಾಶಿ ನಮಗೆ ಕಾಣಿಸದು ಆದರೆ ಪಕ್ಕದ ಮನೆ ಜಾನಕಮ್ಮನ ಮನೆಯ ಸ್ವಚ್ಛತೆ ಬಗ್ಗೆ ನಾವು ಬೆರಳು ತೋರಿಸುತ್ತೇವೆ. ನಮ್ಮನ್ನು ನಾವು ಸುಧಾರಿಸಿಕೊಳ್ಳಲು ನಮಗೆ ಪುರುಸೊತ್ತಿಲ್ಲ, ಯಥೇಚ್ಚವಾಗಿ ಇನ್ನೊಬ್ಬರಿಗೆ ಬದುಕಲು ಉಪದೇಶ ಕೊಡುತ್ತೇವೆ. ಅದರಲ್ಲೂ ಹಿರಿಯರು ಎನ್ನಿಸಿಕೊಂಡವರ ಬಾಯಿಯಿಂದ ಬರುವುದು ಕೇವಲ ಉಪದೇಶ ಮಾತ್ರ. ಉಪದೇಶ ಕೊಡಬೇಕಾಗಿಲ್ಲ, ನಿಮ್ಮನ್ನು ನೋಡಿ ಅನುಸರಿಸಬೇಕು ಎಂಬುದು ನಮಗೆ ಮರೆತು ಎಷ್ಟೋ ವರ್ಷಗಳೇ ಕಳೆದಿವೆ.


        ನೀವು ಹಳ್ಳಿಯ ಹೆಂಗಸರು ಕುಳಿತು ಮಾತನಾಡುವುದು ಕೇಳಿರಬೇಕು (ಪಟ್ಟಣದ ಹೆಂಗಸರಿಗೆ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ಗೊತ್ತಿಲ್ಲ ಇನ್ನು ಮಾತನಾಡುವುದು ದೂರದ ವಿಚಾರವಾದ್ದರಿಂದ ಪ್ರಸ್ತಾಪಿಸುತ್ತಿಲ್ಲ)  ''ಅಲ್ರಿ, ಆ ಸಾವಿತ್ರಮ್ಮನ ಸೊಸೆಗೆ ಏನು ಬಂತು ಅಂತ, ಅಷ್ಟು ಒಳ್ಳೆ ಸಾವಿತ್ರಮ್ಮನ ಜೊತೆ ಜಗಳ ಮಾಡ್ತಾಳಂತೆ'' ''ಹೌದೇನ್ರಿ, ಇನ್ನೊಂದು ವಿಷಯ ಗೊತ್ತಾ, ಆ ರಾಮಣ್ಣ ದಿನಾ ರಾತ್ರಿ ಕುಡಿದು ಬಂದು ಹೆಂಡತಿಗೆ ಹೊಡಿತಾನಂತೆ , ನಿಮ್ಮಂತ ಒಳ್ಳೆಯವರ ಮನೆ  ಪಕ್ಕದಲ್ಲಿದ್ದುಕೊಂಡೂ   ಹೀಗೆ ಮಾಡೋದಾ (ಪಕ್ಕದಲ್ಲಿದ್ದರೆ ಹುಟ್ಟು ಗುಣ ತಪ್ಪಿ ಹೋಗುತ್ತಾ) ''. ಕೊನೆಯಲ್ಲಿ ಎಲ್ಲರ ಬಗ್ಗೆ ಮಾತನಾಡಿದ  ಮೇಲೆ ಅವರಲ್ಲೇ ಹಿರಿಜೀವ (ವಯಸ್ಸಿನಲ್ಲಾದರೂ ಆಗಬಹುದು, ಬಾಯಿಯಲ್ಲಾದರೂ ಆಗಬಹುದು, size ನಲ್ಲಾದರೂ ಆಗಬಹುದು) ಎದ್ದು ನಿಂತು ''ಅವರಿವರ ಮನೆ ಸುದ್ದಿ ನಮಗೆ ಯಾಕೆ, ನಮ್ಮಷ್ಟಕ್ಕೆ ನಾವು ಇದ್ದು ಬಿಡೋಣಾ'' ಅನ್ನೋ ವೇದ ವಾಕ್ಯದೊಂದಿಗೆ ಮುಕ್ತಾಯ ಮಾಡ್ತಾರೆ. 


ಎದುರಿಗೆ ನಮ್ಮನ್ನೇ ಹೊಗಳಿ ಹಿಂದಿನಿಂದ ನಮ್ಮ ಬಗ್ಗೆಯೇ ಮಾತನಾಡುವ ಜನರನ್ನು ಗುರುತಿಸುವುದು ಕಷ್ಟದಾಯಕ ಕೆಲಸವೇ? ಮನುಷ್ಯ ಸಂಘಜೀವಿ, ನಮಗೆ ಸುತ್ತ ಮುತ್ತಲಿನ ಜನ ಬೇಕು, ಒಡನಾಟ ಬೇಕು. ಇಂಥವರು ನಮ್ಮ ಸುತ್ತ ಮುತ್ತಲೂ ಇದ್ದೇ ಇರುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ.ನಾವೇ ಎಷ್ಟೋ ಸಲ ಇಂಥಹ ಸ್ನೇಹಿತರೊಂದಿಗೆ ಬದುಕುತ್ತಿರುತ್ತೇವೆ. ಆದರೆ ಅವರ ಇನ್ನೊಂದು ಮುಖದ ದರ್ಶನ ಆಗಿರುವುದೇ ಇಲ್ಲ. ನಮ್ಮ ಜೊತೆ ನಗು ನಗುತ್ತಾ ನಮ್ಮಿಂದ ಎಲ್ಲ ಮಾಹಿತಿ ಪಡೆದು ಕೊನೆಗೆ ಆದಷ್ಟು ನಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಾರೆ. ಅದೇನು ಕೆಟ್ಟ ಸುಖವೋ ಅವರಿಗೆ ಇದರಲ್ಲಿ ನಾ ಕಾಣೆ. ಇಂಥಹ ಸ್ನೇಹಿತರು ಮಹಾ ವಂಚಕರು. ಒಡನೆಯೇ ಇಂಥವರನ್ನು ಗುರುತಿಸಿ ನಡುವೆ ಒಂದು ಬೇಲಿ  ನಿರ್ಮಿಸಿಕೊಳ್ಳುವುದು ಒಳ್ಳೆಯದು ಇಲ್ಲದಿರೆ ನಮ್ಮ ಜೀವನವನ್ನೇ ಹೊಸಕಿ ಹಾಕಿ ಬಿಡುವ ಮಹಾ ಶತ್ರುಗಳು ಇವರು. ಇಂಥವರು ಸಹಾಯ ಬೇಕಾದಾಗ ಮಾತ್ರ ನಮ್ಮ ಬಳಿ ತಲೆ ತಗ್ಗಿಸಿ ಬರುತ್ತಾರೆ ಅಷ್ಟೇ ಅಲ್ಲ ನಮ್ಮನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಾರೆ ಕೂಡಾ. ಒಮ್ಮೆ ಕೆಲಸವಾಯಿತೋ ನಂತರ ನಿಮ್ಮ ಮನೆಯ ಕಸದ ಬುಟ್ಟಿಯಲ್ಲಿಯೇ ನಿಮ್ಮನ್ನು ಹಾಕಿ ಹೋಗುತ್ತಾರೆ. ''ದುಷ್ತಂ ದೂರ ವರ್ಜಿತಂ'' ಎಂಬಂತೆ ಆದಷ್ಟು ಇಂಥವರ ಸಹವಾಸದಿಂದ ದೂರವಿರುವುದು ಒಳ್ಳೆಯದು.


ಯಾರು ಕಷ್ಟದಲ್ಲಿ ನೆರವಾಗುತ್ತಾರೋ ಅವರೇ ನಿಜವಾದ ಸ್ನೇಹಿತರು, ಆತ್ಮೀಯರು. ಇಂಥಹ ಆತ್ಮೀಯರ ಆಯ್ಕೆ ಮಾತ್ರ ನಮಗೆ ಬಿಟ್ಟದ್ದು. ಆದರೂ ''ಸಜ್ಜನರ ನಡವಳಿಕೆ ಹೆಜ್ಜೇನು ಸವಿದಂತೆ'' ಎಂಬ ನಾಣ್ನುಡಿ ಯಂತೆ ಉತ್ತಮ ಸ್ನೇಹಿತರ ಒಳ್ಳೆಯತನ ಮನಸ್ಸಿಗೆ ತಿಳಿದೇ ತಿಳಿಯುತ್ತದೆ. ಕೇವಲ ಸಮಯವೊಂದೇ ಅದಕ್ಕೆ ಉತ್ತರ ನೀಡಲು ಸಾದ್ಯ.


ನಿಮ್ಮ ನಡುವೆ ನಿಮ್ಮನ್ನು ಹೊಗಳಿ ನಿಮ್ಮನ್ನೇ ಆಡಿಕೊಳ್ಳುವ ಜನರಿರಬಹುದು ''ನೀವು ಒಳ್ಳೆಯವರು ಕಣ್ರೀ, ಅವರ ಹಾಗೇ ಅಲ್ಲ'' ಎನ್ನುವವರಿಂದ ಸ್ವಲ್ಪ ದೂರ ಇರಿ ಇಲ್ಲ ಒಂದು ಕಣ್ಣಿಡಿ.

Friday, December 11, 2009

ಅವನಿಗೆ ಎಲ್ಲವನು ಕೊಡು, ಅವನೇನು ಬೇಡುವುದಿಲ್ಲ

ಇದು ನನ್ನ 50 ನೆ  ಬರಹ, ನನ್ನ ಬರಹವನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು. ಹೀಗೆಯೇ ನನಗೆ ನಿಮ್ಮ ಪ್ರೀತಿ ಹಾರೈಕೆ ಸಿಗುತ್ತದೆ ಎಂಬ ವಿಶ್ವಾಸದೊಂದಿಗೆ ಮುಂದುವರಿಯುತ್ತಿದ್ದೇನೆ.ಘಟನೆ 1 : ಮಗು ಗೊಂಬೆಯೊಂದಿಗೆ ಆಡುತ್ತಿದೆ, ಅಲ್ಲಿಗೆ ಇನ್ನೊಂದು ಮಗುವಿನ ಪ್ರವೇಶ, ತನಗೂ ಗೊಂಬೆ ಬೇಕೆಂದು ಹಠ. ಆದರೆ ಮೊದಲಿನ ಮಗು ತನ್ನ ಗೊಂಬೆ ಕೊಡಲು ಒಪ್ಪುವುದಿಲ್ಲ. ಎರಡನೇ ಮಗು ಗೊಂಬೆ ಕೊಡಿಸುವವರೆಗೂ ಅಳು ನಿಲ್ಲಿಸುವುದಿಲ್ಲ.

ಘಟನೆ 2 : ಬಿಕ್ಷುಕ ನಾಲ್ಕಾಣೆ ಹಾಕಿರೆಂದು ಜನ ನಿಬಿಡ ಪ್ರದೇಶದಲ್ಲಿ ಗೋಗರೆಯುತ್ತಿದ್ದಾನೆ, ಯಾರೂ ಅವನಿಗೆ ನಾಲ್ಕಾಣೆ  ಹಾಕಲು ತಯಾರಿಲ್ಲ.  ಹಾಗೆಂದು ಆತ  ಬಲಿಷ್ಟನೂ ಅಲ್ಲ ದುಡಿದು ಬದುಕಲು,  ಕೊನೆಗೆ ದಾರಿ ಕಾಣದೆ ಅಲ್ಲಿಯೇ ಇದ್ದ ಅಂಗಡಿಯಿಂದ ಹಣ್ಣನ್ನು  ಕದಿಯುತ್ತಾನೆ, ಹಸಿದು ಆತ 3 ದಿನಗಳೇ ಕಳೆದು ಹೋಗಿದೆ.

 ಘಟನೆ 3 : ವಿದ್ಯಾವಂತ ಪದವೀಧರ, ಅಪ್ರತಿಭ ಪ್ರತಿಭಾವಂತ, ಕೆಲಸಕ್ಕೆಂದು ಅರ್ಜಿ ಹಾಕಿ ಹಾಕಿ ಸೋತಿದ್ದಾನೆ. ಆದರೆ ಎಲ್ಲ ಕಡೆ ಲಂಚ ಕೇಳುತ್ತಿದ್ದಾರೆ. ಬೇರೆ ದಾರಿ ಕಾಣದೆ ನಕ್ಸಲೀಯರ  ಸಂಘಟನೆಗೆ ಸೇರಿ ತನ್ನ ಬುದ್ದಿಶಕ್ತಿಯಿಂದ ಬೇಗನೆ ನಾಯಕನಾಗಿ ಅಸಂಖ್ಯಾತ ಮುಗ್ಧರ  ಸಾವಿಗೆ ಮುನ್ನುಡಿ ಬರೆಯುತ್ತಾನೆ.

ಘಟನೆ 4 : ವಯೋವ್ರದ್ದ  ತಂದೆ ತಾಯಿಗಳನ್ನು ನೋಡಿಕೊಳ್ಳಲಾಗದ ಮಕ್ಕಳು,  ತಮ್ಮನ್ನು ಸರಿಯಾಗಿ ವಿಚಾರಿಸುತ್ತಿಲ್ಲ ಎಂದು ಸಿಡುಕುವ ತಂದೆ ತಾಯಿಗಳು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಜಗಳವಾಗಿ ತಂದೆ ತಾಯಿಗಳನ್ನು ರಸ್ತೆಗೆ ನೂಕಿದ ಮಕ್ಕಳು.

ಘಟನೆ 5 : ಮಂತ್ರಿ ಮಹೋದಯರು ಪ್ರಜೆಗಳ ಬಗೆಗೆ ಕಿಂಚಿತ್ತು ಧ್ವನಿ ಎತ್ತದೆ ಪ್ರಜೆಗಳ ದೃಷ್ಟಿಯಲ್ಲಿ ಹೊಟ್ಟೆ ಬೆಳೆಸುತ್ತಿದ್ದಾರೆ. ಆದರೆ ಬಡ ನಾಗರಿಕ ಇನ್ನೂ ಸೊರಗುತಿದ್ದಾನೆ. ಸಿರಿವಂತ ಸಿರಿವಂತನೆ ಎಂಬ ನಾಣ್ನುಡಿ ಯಂತೆ  ಜನರಿಂದಲೇ ಆರಿಸಿಹೋದ  ಜನ ನಾಯಕ "ನಾಲಾಯಕ್ " ಎನಿಸಿಕೊಳ್ಳುತ್ತಿದ್ದಾನೆ.

ಘಟನೆ 6 : ತಮ್ಮ ಪ್ರೀತಿಗೆ ಮನೆಯವರು ಒಪ್ಪುತ್ತಾರೋ ಇಲ್ಲವೋ  ಎಂಬ ಭಯ, ದಿನೇ ದಿನೇ ಮನೆಯವರ ಕಿರುಕುಳ,  ಹುಡುಗಿ - ಹುಡುಗ ಸಾವಿಗೆ ಶರಣು.

ಘಟನೆ 7 : ತಾಯಿ ಆಸ್ಪತ್ರೆಯಲ್ಲಿ ಸಾವು-ಬದುಕುಗಳ ನಡುವೆ ಹೋರಾಡುತ್ತಿದ್ದಾಳೆ. ಒಬ್ಬಳೇ ಮಗಳು. ಕಿತ್ತು ತಿನ್ನುವ ಬಡತನ, ಆಪರೇಷನ್ ಗಾಗಿ  ಲಕ್ಷಗಟ್ಟಲೆ ಹಣ ಕೇಳಿದ ವೈದ್ಯರು. ತಾನು ಕೆಲಸ ಮಾಡುವ ಬ್ಯಾಂಕಿನ ಮ್ಯಾನೇಜರ್ ಹತ್ತಿರ ಕೇಳಲು ಹೋದರೆ ''ಒಂದು ದಿನ ನನ್ನೊಂದಿಗೆ ಹಾಸಿಗೆಯಲ್ಲಿ ನನಗೆ ಸುಖ ಕೊಡು, ಬೇಕಾದಷ್ಟು ಹಣ ಕೊಡುತ್ತೇನೆ'' ಎಂದ ಮ್ಯಾನೇಜರ್. ತಾಯಿಯ ಜೀವ ಉಳಿಸಲು ತನ್ನ ಶೀಲವನ್ನೇ ಬಲಿಕೊಟ್ಟ ಅಸಹಾಯಕ ಹೆಣ್ಣು.


ಸಮಾಜದ ವಿವಿಧ ಸ್ತರಗಳಲ್ಲಿ ನಡೆಯುವ ಮೇಲಿನ 7  ಘಟನೆಗಳ ಮೂಲ ಮಂತ್ರ ಒಂದೇ "ಮಾನವೀಯ ಚಿಂತನೆಗಳ ಕೊರತೆ ". ಹಾಗೆಂದರೇನು ಅನ್ನುತಿರಾ?


ಈ ಮೇಲಿನ 7  ಘಟನೆಗಳು ಹೆಚ್ಚಾಗಿ ನಮ್ಮ ದೇಶದ ಮೂಲೆಮೂಲೆಯಲ್ಲೂ  ಹಬ್ಬುತ್ತಿದೆ.
                        ಮುಂದುವರೆಯುತ್ತಿರುವ  ದೇಶ ನಮ್ಮದು ? ಎಂದು ಕಳೆದ  30 ವರ್ಷಗಳಿಂದಲೂ ಕೇಳುತ್ತಿದ್ದೇವೆ. ಆದರೆಯಾವಾಗ ನಾವು ಮುಂದುವರಿದ ದೇಶವಾಗುವುದು ? ಎಂಬ ಪ್ರಶ್ನೆ ಪ್ರತಿಯೊಬ್ಬನಲ್ಲೂ  ಕಾಡುತ್ತಿದೆ.  ಇಷ್ಟೊಂದು ಸಂಪತ್ತಿದೆ, ಆರ್ಥಿಕವಾಗಿ ಬಲವಾಗಿದ್ದೇವೆ, "ನಮ್ಮಲ್ಲಿ ಅತ್ಯಾಧುನಿಕ ಸಾಫ್ಟ್ವೇರ್ ತಂತ್ರಜ್ಞಾನ " ವಿದೆ ಎನ್ನುತ್ತೇವೆ. ಅದರೆ ನಮ್ಮ ಬಡತನದ ರೇಖೆಯ ಕಡೆ ಒಮ್ಮೆ ಕಣ್ಣುಹಾಯಿಸಿ. ಅದಿನ್ನೂ  ಅಲ್ಲಿಯೇ ಇದೆ. ಅದನ್ನು ಬದಲಾಯಿಸುವ ಪ್ರಯತ್ನ ಮಾಡಿದ್ದೆವೆಯೇ? ದೇಶದಲ್ಲಿ ಬಿಕ್ಷುಕರ  ಸಂಖ್ಯೆ, ನಿರ್ಗತಿಕರ ಸಂಖ್ಯೆ ಹೆಚ್ಚುತ್ತಿದೆನಿರುದ್ಯೋಗಿತನ ತಾಂಡವವಾಡುತ್ತಿದೆ. ಎಲ್ಲದಕ್ಕೂ ನಮ್ಮ ಜನಸಂಖ್ಯೆಯೇ  ಕಾರಣ ಎನ್ನುವುದಾದರೆ  ಜನ ಸಂಖ್ಯೆ ಇಳಿಸಲು ನಮ್ಮ ಪಾತ್ರವೇನು ಎಂದು ವಿಚಾರಿಸಿದ್ದೆವೆಯೇ?
    ಇತ್ತಿಚಿನ ದಿನಗಳಲ್ಲಿ  ಅನೇಕ ಜನ "ಬುದ್ದಿವಂತರು"  ಎನಿಸಿಕೊಂಡವರ ಬಾಯಿಯಿಂದ ದೇಶದ ಬಗೆಗೆ ಪುಂಖಾನು ಪುಂಖವಾಗಿ  ಬೈಗುಳಗಳು, ಅಸಡ್ಡೆ, ನಿರ್ಲಕ್ಷತೆಯ ಮಾತುಗಳು ಬರುತಿವೆ. ಒಮ್ಮೆ ಇಂಥವರಿಗೆ   ದೇಶದ ಚುಕ್ಕಾಣಿ ಕೊಟ್ಟರೆ ದೇಶ ಸುದಾರಿಸಿದಂತೆಯೇ ಎಂದು ನಿಮಗೆ ಅನ್ನಿಸದೆ ಇರದು. ಆದರೆ ಇದೇ ಸೊ called "ಬುದ್ದಿವಂತರು"  ಶುಕ್ರವಾರ ತಮ್ಮ ಕೆಲಸ ಮುಗಿಸಿ ಕಂಠ ಪೂರ್ತಿ  ಕುಡಿದು ತೂರಾಡುತ್ತಾ  ಜನರ  ನೆಮ್ಮದಿಗೆ ಭಂಗ ತರುತ್ತಾರೆ, ಚುನಾವಣೆಯ ದಿನ ಮತ ಚಲಾಯಿಸದೇ ರಜೆಯ  ಮೋಜನ್ನು  ಅನುಭವಿಸುತ್ತಿರುತ್ತಾರೆ. ದೇವಸ್ತಾನದ ಹುಂಡಿಗೆ ಹಣ ಹಾಕುತ್ತಾರೆಯೇ  ಹೊರತು ಅದೇ ಬಾಗಿಲಿನಲ್ಲಿ ಅನ್ನವಿಲ್ಲದೆ ಸಾಯುತಿರುವ ಮುದುಕಿಗೆ ಅನ್ನ ನೀಡುವುದಿಲ್ಲ .
             ಯಾರು ಕಾರಣರು? ಎಲ್ಲರೂ  ಕಾರಣರೆ ...ಮೊದಲು ನಮಗೆ ಮೂಲಭೂತ ಸೌಕರ್ಯಗಳು ಸಿಗುವಂತಾಗಬೇಕು. "ಅನ್ನ , ನೀರು, ವಸ್ತ್ರ " ಸಿಕ್ಕರೆ ಯಾವ  ಜಾತಿಯಾದರೂ ಒಂದೇ. ಮೊದಲು ಅದನ್ನು ಕೊಡಿಸುವ ಪ್ರಯತ್ನ ಮಾಡಬೇಕು. ವಿಶ್ವದ ಅತಿ ಸುಂದರ ಹಾಗೂ ಸ್ವಚ್ಛ  ನಗರಗಳೆನಿಸಿದ Norway, Sweden , Switzerland  ಗಳಲ್ಲಿ ಬಡವರೇ  ಇಲ್ಲ. ಇಲ್ಲಿ ಕದಿಯುವವರಿಲ್ಲ. ತಂದೆ - ತಾಯಿಗಳನ್ನು ಮನೆಯಿಂದ ಹೊರಗೆ ಹಾಕುತ್ತಾರೆ  ಎಂಬ ಚಿಂತೆ ಇಲ್ಲ.  ಕಾರಣ ಇಲ್ಲಿನ ಸರ್ಕಾರದ ಕಾನೂನು ಹಾಗಿದೆ. ನಾವು ಕಟ್ಟುವ ಒಂದು ಒಂದು ರೂಪಾಯಿ ತೆರಿಗೆಗೂ ಲೆಕ್ಕವಿದೆ.ನಮ್ಮ ತೆರಿಗೆಯನ್ನು ಸದ್ವಿನಿಯೋಗಗೋಳಿಸಲಾಗುತ್ತದೆಮನುಷ್ಯರಿಗೆ ಕನಿಷ್ಠ  ವ್ಯವಸ್ಥೆ ನೀಡಲಾಗುತ್ತದೆ. ನಮ್ಮದು ಬೃಹತ್ ದೇಶ, ಹೋಲಿಸಲು ಸಾಧ್ಯವೆ ಇಲ್ಲ, ಬಿಲಿಯಗಟ್ಟಲೆ  ಜನರಿರುವ ದೇಶದಲ್ಲಿ ಇಂತಹ ವ್ಯವಸ್ಥೆ  ನೀಡಲು ಸಾಧ್ಯವೇ? ಒಮ್ಮೆ ಚಿಂತಿಸಿ... ಪಕ್ಕದ ಚೀನಾ ಜನರಿಗೆ ಬೇಕಾದ ಮೂಲಭೂತ ಸೌಕರ್ಯ ನೀಡಿ ವಿಶ್ವದಲ್ಲೇ ಮಾದರಿ ರಾಷ್ಟ್ರವಾಗುವತ್ತ ಮುನ್ನಡೆದಿದೆ. ಆರ್ಥಿಕತೆಯಲ್ಲಿ ನಾವೂ ವೇಗವಾಗಿ ಮುನ್ನುಗ್ಗುತ್ತಿದ್ದೇವೆ. ಕೇವಲ ಹಣ ಮಾಡುವುದು ಒಂದೇ ಜೀವನದ ಉದ್ದೇಶವಲ್ಲ. ಗಳಿಸಿದ ಹಣವನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯವಲ್ಲವೇ? ನಮ್ಮಲ್ಲಿ ಹಣವಿದೆ ನಿಜಾ, ಅದು ಕೇವಲ ಕಾಗದದ ಮೇಲೆ ಮಾತ್ರ ಅಲ್ಲ, ನಮ್ಮ ರಸ್ತೆಗಳಲ್ಲಿ, ನಮ್ಮ ಜನರ ಮುಖಗಳಲ್ಲಿ, ದಾರಿದೀಪಗಳಲ್ಲಿ, ಕೊಳಗೇರಿಗಳ ನಿರ್ಮೂಲನೆಯಲ್ಲಿ ಕೂಡಾ ವಿನಿಯೋಗಿಸಲಾಗುತ್ತದೆ ಎಂಬುದು ನಮಗೆ ದಿಟ ವಾಗಬೇಕು. ಆಗ ಮಾತ್ರ ಇನ್ನೊಬ್ಬ ಬಡವ ಇಲ್ಲಿ ಹುಟ್ಟಲಾರ. ಬಡತನ ಇಷ್ಟ ಪಟ್ಟು ಆಯ್ದುಕೊಂಡದ್ದಲ್ಲ. ಅದು ಸಿರಿವಂತರ ದೌರ್ಜನ್ಯದ ಪರಮಾವಧಿಯ ಪ್ರತೀಕ.
ನಿಮ್ಮಲ್ಲಿ ಎಷ್ಟು ಜನ ರಸ್ತೆಯಲಿ ಉಗುಳದೆ, ಕಸ ಹಾಕದೆ ಕಸದ ತೊಟ್ಟಿಯಲಿ, ಶೌಚಾಲಯವನ್ನು ಉಪಯೋಗಿಸುತ್ತಿರಿ? ಸರಕಾರ ಬಹಳಷ್ಟು ಕಡೆ ಕಸದ ತೊಟ್ಟಿಗಳನ್ನು ಮಾಡಿದೆ. ಇಂತಹ ಸಣ್ಣ ಸಣ್ಣ ಕೆಲಸದ ಕಡೆಗೆ ನಾವು ಜಾಗೃತರಾದರೆ ಎಷ್ಟೊಂದು   ಸಾಧಿಸಬಹುದು.
 ರಸ್ತೆಗಳ ಗೋಡೆಗಳ ಮೇಲೆ ಬರೆಯುವುದು, ಎಲ್ಲಿಂದರಲ್ಲಿ ಬಿತ್ತಿ ಪತ್ರ ಅಂಟಿಸುವುದು ಇವೆಲ್ಲವುಗಳೂ ನಮ್ಮ ವಿಕ್ರತ ಮನಸನ್ನೇ ಅವಲಂಬಿಸಿವೆ. ಸರಕಾರವನ್ನು ಅಲುಗಾಡಿಸುವ ಶಕ್ತಿ ನಮಗಿದೆ. ಆಳಲ್ಪಡುವ ಸರ್ಕಾರದಿಂದ ಬೇಕಾದನ್ನು ಪಡೆವ ಹಕ್ಕು ನಮಗಿದೆ. ಆದರೆ ನಾವು ಮೊದಲು ಬೇಧ ಬಾವ  ಮರೆತು ಶ್ರೀಮಂತ - ಬಡವ ಎನ್ನದೆ ಬಾಳಲು ಮುಂದಾಗಬೇಕು. ಹಣ ಸಮ ಪ್ರಮಾಣದಲ್ಲಿ ಹಂಚಿಕೆಯಾಗಬೇಕು. "ಸರ್ವೇ ಜನ ಸುಖಿನೋಭವಂತು" ಎನ್ನುವಂತೆ ಎಲ್ಲರ ನೆಮ್ಮದಿಯ ಬದುಕಿಗಾಗಿ ಎಲ್ಲರೂ ಶ್ರಮಿಸಬೇಕು.  ಆಗ ಎಲ್ಲರಿಗೂ  ಎಲ್ಲವೂ ಸಿಗುತ್ತೆ. "ತನಗೆ ಉಣ್ಣಲು ಅನ್ನ , ತೊಡಲು ವಸ್ತ್ರ " ಸಿಕ್ಕ ಮೇಲೆ  ಕಳ್ಳ ಕದಿಯುವುದಿಲ್ಲ. ಪ್ರತಿಬೆಗೆ ತಕ್ಕ ಬೆಲೆ ಸಿಕ್ಕರೆ ಪದವಿಧರ ಉಗ್ರಗಾಮಿ ಆಗುವುದಿಲ್ಲ. ಪ್ರೀತಿಗೆ ಬೆಲೆ ಕೊಟ್ಟರೆ ಪ್ರೇಮಿಗಳು ಸಾಯುವುದಿಲ್ಲ.  ಹಿರಿತನವನ್ನು   ಗೌರವಿಸಿದರೆ ತಂದೆ -ಮಕ್ಕಳ ಬಂಧ ಬೇರ್ಪಡುವುದಿಲ್ಲ. ಅಸಹಾಯಕರಿಗೆ ಸಹಾಯ ಹಸ್ತ ಸಿಕ್ಕರೆ ಸುಸಂಸ್ಕ್ರತ ಹೆಣ್ಣು ಶೀಲ ಮಾರಿಕೊಳ್ಳುವಷ್ಟು ಶೋಚನೀಯ ಸ್ಥಿತಿಗೆ ಮುಟ್ಟುವುದಿಲ್ಲ
ಅದಕ್ಕೆ ಇನ್ನೊಮ್ಮೆ ಹೇಳುತ್ತಿದ್ದೇನೆ "ಅವನಿಗೆ ಎಲ್ಲವನ್ನು ಕೊಡು ಅವನೇನು ಬೇಡುವುದಿಲ್ಲ"