Thursday, December 30, 2010

ಸಮಯಕ್ಕೀಗ ಸಮಯವಿಲ್ಲ...

ವೈರಸ್ ಹಾವಳಿ ಗಿಂತ ವೇಗವಾಗಿ ಹಾಗೂ ಅಷ್ಟೇ ವ್ಯವಸ್ಥಿತವಾಗಿ ಹಬ್ಬುತ್ತಿರುವ ದೊಡ್ಡ ವೈರಸ್ ''I am Busy'' ಎನ್ನುವ ಶಬ್ದ. ಯಾರನ್ನೇ ಕೇಳಿ ''ನಮಗೆ ಟೈಮ್ ಇಲ್ರಿ, ಆಫೀಸ್ ಕೆಲಸದ ನಡುವೆ ಬೇರೆ ಏನು ಮಾಡೋಕೂ ಟೈಮ್ ಇಲ್ಲ'' ಅನ್ನೋ ಮಾತು. ಬಹುಷ: ಇದೇ ಕಾರಣಕ್ಕೆ ಇಂದು ಚಿತ್ರಕಾರರು, ಸಾಹಿತಿಗಳು, ಕವಿಗಳ, ಮಾತುಗಾರರ ಸಂಖ್ಯೆ ಗಣನೀಯವಾಗಿ ನಶಿಸುತ್ತಿದೆ. ಮೊದಲೆಲ್ಲ ಎಷ್ಟೇ ಕಲಿತರೂ ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆ ಆಗಿರಲಿಲ್ಲ. ಆದರೆ ಇಂದು ಗಂಭೀರ ವದನದ ಲಂಬೋದರಗಳ (ಇಡೀ ದಿನ ಕುರ್ಚಿಯ ಮೇಲೆ ಕುಳಿತು ಗಣಕ ಯಂತ್ರ ಕುಟ್ಟಿದರ ಫಲ )ಸಂಖ್ಯೆ ಎಲ್ಲೆಡೆ  ಕಂಡು ಬರುತ್ತಿದೆ. ಇಂಥಹ ಲಂಬೋದರಗಳ ನಡುವೆ ದಿನದ 24 ಘಂಟೆ ಒದ್ದಾಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ''ಸಮಯಕ್ಕೇ ಸಮಯವಿಲ್ಲದ'' ಪರಿಸ್ಥಿತಿ ಬಂದಿದೆ.

ಹಾಗಾದ್ರೆ ಸಮಯ ಎಲ್ಲಿ ಹೋಯಿತು ಎಂಬುದರ ವಿಶ್ಲೇಷಣೆ ಅಗತ್ಯ ಅಲ್ಲವೇ? ದಿನದ 24 ಘಂಟೆಗಳನ್ನು  ಮನುಷ್ಯ ನ ದಿನಚರಿ ನೋಡಿ ಮಾಡಲಿಲ್ಲ. ಇಂದು 24 ಘಂಟೆ, ನಾಳೆ 26 ಘಂಟೆ ಎಂದು ಬದಲಿಸಲು. ಅವು ಜಗತ್ತಿನ ಪ್ರತಿಯೊಂದು ಜೀವಿಗೂ ಒಂದೇ ತೆರನಾಗಿದೆ. ಆದರೆ ಅದೇ 24 ಘಂಟೆಗಳನ್ನೇ ಉಪಯೋಗಿಸಿಕೊಂಡು ಅಸಾಮಾನ್ಯವಾದುದನ್ನು ಸಾಧಿಸಿದ ಸಾಮಾನ್ಯ ಮನುಷ್ಯರ ಜೀವನ ಗಾಥೆ ನಮಗೊಂದು ನೀತಿ ಪಾಠ ಅಲ್ಲವೇ? ಅವರಿವರ್ಯಾಕೆ? ನಮ್ಮವರೇ ಆದ ನೆಚ್ಚಿನ ಬರಹಗಾರ ರವಿ ಬೆಳೆಗೆರೆ ಅವರನ್ನೇ ತೆಗೆದುಕೊಳ್ಳಿ. 24 ಘಂಟೆಗಳಲ್ಲಿ ಅದೆಷ್ಟೊಂದು ಕೆಲಸ ಮಾಡುತ್ತಾರೆ. ಟಿ.ವಿ ಸಿರಿಯಲ್ಲುಗಳು, ಬೆಳಗಿನ ರೆಡಿಯೋ ಕಾರ್ಯಕ್ರಮ, ನಂತರ ಹಾಯ್ ಬೆಂಗಳೂರಿಗೆ ಲೇಖನ, ರಾತ್ರಿ   Crime Story, ಕಥೆ ಕವನಗಳ ಬಿಡುಗಡೆ ಸಮಾರಂಭ, ಸಾಲದೆಂಬಂತೆ ಅಸಂಖ್ಯಾತ ಪುಸ್ತಕಗಳ ಪ್ರಕಟಣೆ, ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ, ಒಂದೇ ಎರಡೇ, ಯಾವುದನ್ನೂ ತಪ್ಪಿಸುವಂತಿಲ್ಲ. ವಿಶ್ರಾಂತಿ ನೋ ಚಾನ್ಸ್.

ಅವರ ನೋಡಿ ನನಗೆ ಅನ್ನಿಸಿದೆ, ಅದೇಗೆ ಸಮಯವನ್ನು ಅವರು ಅಷ್ಟೊಂದು ಕರೆಕ್ಟ್ ಆಗಿ ಉಪಯೋಗಿಸ್ಕೊಳ್ಳುತ್ತಾರೆ ಎಂದು. ನಾವು ನಮ್ಮ ಮನಸ್ಸನ್ನು ಅಡ್ಜಸ್ಟ್ ಮಾಡಿಕೊಂಡು ಬಿಟ್ಟಿದ್ದೇವೆ ''ದಿನದ 24 ಘಂಟೆಗಳು  ನಮಗೆ ಸಾಕಾಗುವುದಿಲ್ಲ, ಆದ್ದರಿಂದ ನಾವು ನಮ್ಮ ಕೆಲಸಗಳನ್ನು ಮುಗಿಸಲು ಆಗುವುದಿಲ್ಲ'' ಎಂದು. ಮೊನ್ನೆ ಮೊನ್ನೆ ಬ್ಲಾಗ್ ಬರೆಯದ, ಬ್ಲಾಗ್  ಓದದ ಸ್ನೇಹಿತರೊಬ್ಬರು ಕೇಳಿದರು, ''ನಿಮಗೆ ಆಫೀಸ್ ನಲ್ಲಿ ಮಾಡಲು ಕೆಲಸ ಇಲ್ಲವೇ? ಯಾವಾಗಲು ಬ್ಲಾಗ್ ಬರೆಯುತ್ತಿರಲ್ಲ? ಎಂದು''. ಅವರ ಪ್ರಕಾರ ಬ್ಲಾಗ್ ಎನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಎಂಬುದಾಗಿ. ಸಮಯದ ಪರಿಕಲ್ಪನೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಮಾತಾಡಬಲ್ಲ. ತಾನೊಬ್ಬನೇ ಕೆಲಸ ಮಾಡುತ್ತಿದ್ದೇನೆ, ತಾನೊಬ್ಬನೇ ದೇಶದ ಉದ್ಧಾರ ದ ಹೊಣೆ ಹೊತ್ತಿದ್ದೇನೆ, ಉಳಿದವರೆಲ್ಲ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಎಂಬ ಉಡಾಫೆಯ ಧೋರಣೆಯ ಜನರ ಮಾತುಗಳು ಬೇಸರ ತರಿಸುವುದಿಲ್ಲ ಬದಲಿಗೆ ಅವರ ಬಗೆಗೆ ಅತೀವ ಕನಿಕರ ಮೂಡಿಸುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಸಮಯವೇ ಸಿಗದ ಸ್ಥಿತಿ ನೋಡಿ ನಿಜಕ್ಕೂ ದು:ಖ ವಾಗುತ್ತದೆ. ಅವರ ಪ್ರಕಾರ ವಿದೇಶದವರು ಸುಮ್ಮನೆ ನಮ್ಮನ್ನು ಕರೆದುಕೊಂಡು ಬಂದು ಕುರ್ಚಿಯಲ್ಲಿ ಕೂರಿಸಿ ಧರ್ಮಕ್ಕೆ ಸಂಬಳ ಕೊಡುತ್ತಾರೆ ಎಂಬುದಾಗಿ. ಸಮಯ ಎಲ್ಲರಿಗೂ ಒಂದೇ ತೆರನಾಗಿದೆ, ಕೆಲಸವೂ ನಮ್ಮ ಜಾಣ್ಮೆ ಯಲ್ಲಿದೆ. ಒಬ್ಬ ಅಂಬಾನಿಗೆ,  ಸಿಕ್ಕ ಸಮಯದಲ್ಲಿಯೇ ಅಷ್ಟೊಂದು ಸಾಧನೆ ಮಾಡಲು ಸಮಯವಿದೆ ಎಂದಾದರೆ ನಮಗೆ ಯಾಕೆ ಸಾದ್ಯವಿಲ್ಲ. ಅವರೆಲ್ಲ ''ಇಂದೇ ಕೊನೆಯ ದಿನ'' ಎಂಬಂತೆ ಬದುಕನ್ನು ತಿಳಿದು ಸಮಯವನ್ನು ಸದುಪಯೋಗ ಪಡಿಸಿಕೊಂದಿದ್ದಕ್ಕೆ ಅವರು ಅಲ್ಲಿದ್ದಾರೆ, ನಾವು ಇಲ್ಲಿದ್ದಿವಿ.

 ಸಮಯವೇ ಇಲ್ಲದ ಸ್ಥಿತಿ ಎಲ್ಲೆಡೆ ತುಂಬಿ ಹೋಗಿದೆ, ಕಲಿಯುವ ಮಕ್ಕಳಿಗೆ ನಲಿಯಲು ಸಮಯವಿಲ್ಲ, ವಿಪರೀತ ಸ್ಪರ್ಧೆ ಅವರ ಸೃಜನಾತ್ಮಕ ವ್ಯಕ್ತಿತ್ವವನ್ನೇ ಕೊಂದು ಹಾಕುತ್ತಿದೆ. ಸದಾ ಗಣಕ ಯಂತ್ರದ ಮುಂದೆ ಕುಳಿತು ಆಡುವ ಅವರ ಸ್ಥಿತಿ ನೆನೆದು ಸಂಕಟ ಆಗುತ್ತದೆ. 
ಇನ್ನು ಪ್ರೇಮಿಗಳಿಗೆ ಪ್ರೀತಿಸಲು ಸಮಯವಿಲ್ಲ. ಸದಾ ಆಫೀಸ್ ಕೆಲದಲ್ಲಿಯೇ ಬ್ಯುಸಿ ಆಗಿರುವ ಅವರು ಕೇವಲ ಮೊಬೈಲ್ ಮೂಲಕ ಪ್ರೀತಿಸುತ್ತಿದ್ದಾರೆ.
 ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಮನೆಗೆ ಹೋಗಲು ಸಮಯವಿಲ್ಲ. ತಮ್ಮೆಲ್ಲ ಭಾವನೆಗಳನ್ನು ವಾರದ ಕೊನೆಗೆ ದೂಡುತ್ತಾರೆ. ಎಲ್ಲ ಭಾವನೆಗಳಿಗೆ ವಾರಾಂತ್ಯ ಉತ್ತರ ಅಲ್ಲವಲ್ಲ ಎಂಬ ನಗ್ನ ಸತ್ಯ ಅವ್ರಿಗೆ ಇನ್ನು ತಿಳಿದಿಲ್ಲ. ತಮಗೋಸ್ಕರ ಒಂದು ಜೀವ ಮನೆಯಲ್ಲಿ ಕಾಯುತ್ತಿದೆ ಎಂಬ ಸತ್ಯ ಗೊತ್ತಿದ್ದರೂ ವಿಪರೀತ ಸ್ಪರ್ಧಾತ್ಮಕ ಜಗತ್ತು ಮನೆಗೆ ಹೋಗಲು ಬಿಡುತ್ತಿಲ್ಲ. ಪುನಃ ಸಮಯವಿಲ್ಲ. ಭಾರತದಂಥ ಬೆಳೆಯುತ್ತಿರುವ ದೇಶಗಳಲ್ಲಿ ಅತೀ ವೇಗದ ಸ್ಪರ್ಧೆ ಮನುಷ್ಯನ ಮಾನಸಿಕ ಒತ್ತಡಗಳನ್ನು ಹೆಚ್ಚಿಸುತ್ತಿದೆ. ಮಿತಿ ಮೀರಿದ ಸಿಟ್ಟು, ಕೋಪ, ಅಸಹನೆ ಮಾನವನಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸಮಾಧಾನ ಪಡಲು ಸಮಯವೇ ಇಲ್ಲದ ಪರಿಸ್ಥಿತಿ ಇರುವಾಗ ತಂಗಾಳಿಯ ಜೊತೆ ಓಡಾಡುವ  ಅವಕಾಶವೆಲ್ಲಿ. 

''ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ, ಸುಳಿದಾಡಬೇಡ ಗೆಳತಿ''

ಎಂದು ಹೇಳಲೂ ಸಮಯವಿಲ್ಲದ ಸನ್ನಿವೇಶ ನಿರ್ಮಾಣವಾಗಿದೆ.

 ಪರಿಸ್ಥಿತಿ ಎಷ್ಟೊಂದು ಮಿತಿ ಮೀರಿದೆ ಎಂದರೆ ಹೆತ್ತವರ ಮಾತನಾಡಿಸಲು ನಮಗೆ ಸಮಯವಿಲ್ಲ. ಜೀವನದ ಕೊನೆಯ ಕ್ಷಣ ಗಳನ್ನು   ನೋಡುತ್ತಿರುವ ಅದೆಷ್ಟೋ ಪಾಲಕರು ತಮ್ಮ ಮಕ್ಕಳನ್ನು ನೋಡಲು ಹಂಬಲಿಸುತ್ತಾರೆ. ಆದರೆ ಸಮಯ ಇಲ್ಲದ ಮಕ್ಕಳು ದಿನೇ ದಿನೇ ಮುಂದುಡುತ್ತಾ ಕೊನೆಗೆ ಪಾಲಕರ ಚಿತೆಗೆ ಅಗ್ನಿ ಸ್ಪರ್ಶ ಮಾಡಲು ಸಮಯ ಸಿಗಲಿಲ್ಲ ಅನ್ನುತ್ತಾರೆ. ''ಮನಸಿದ್ದಲ್ಲಿ ಮಾರ್ಗವಿದೆ''. ಸಮಯದ ಉಪಯೋಗ ತಿಳಿಯಬೇಕಷ್ಟೆ.

ಇಲ್ಲದಿರೆ
ಜಾನೆ ಕಹಾ ಗಯೇ ವೋ ದಿನ, ಕಹತೇ ತೆ ತೆರಿ ರಾಹ್ ಮೇ....

ಎನ್ನುವಂತಾಗುತ್ತದೆ ನಮ್ಮ ಬದುಕು. 

ಇತ್ತೀಚಿನ ದಿನಗಳಲಿ ಓದುವ ಗೀಳು ಬಿಟ್ಟೆ ಹೋಗುತ್ತಿದೆ. ಪುಸ್ತಕಗಳನ್ನು ಓದಲು ಯಾರಿಗೂ ಸಮಯವಿಲ್ಲ. ಏನೇ ಹೇಳಿ, ಗೂಗಲ್ ಮಾಡಿ ತಿಳಿದುಕೊಳ್ಳುವ ತವಕ, ಆದರೆ ಸುಂದರ ಬರಹಗಳ, ಕಾದಂಬರಿಗಳ ಓದುವ  ವ್ಯವಧಾನ ಇಲ್ಲವೇ ಇಲ್ಲ. ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಎಂದಿಗೂ ಬಸ್ ನಲ್ಲಿ ಶಾಲಾ, ಕಾಲೇಜುಗಳಿಗೆ ಆಗಲಿ, ಆಫೀಸ್ ಗೆ ಆಗಲಿ ಹೋದವನು ಅಲ್ಲ. ಆಫೀಸ್ ಹತ್ತಿರವೇ ಮನೆ ಬಾಡಿಗೆ ತೆಗೆದುಕೊಳ್ಳುವ ದುರಭ್ಯಾಸ ಮೊದಲಿನಿಂದಲೂ ಇದೆ. ಆದರೆ ಕಳೆದ 6 ತಿಂಗಳಿನ ಹಿಂದೆ ಆಫೀಸ್ ನ ಹತ್ತಿರ ಮನೆ ಮಾಡುವ ದುರಭ್ಯಾಸ ಹೆಂಡತಿಗೂ ಬಂದಿದ್ದರಿಂದ ಅನಿವಾರ್ಯವಾಗಿ ಮನೆ ಬದಲಿಸುವ ಪರಿಸ್ಥಿತಿ ಬಂತು. ಅವಳ ಆಫೀಸ್ ನ ಹತ್ತಿರ ನಾವು ಮನೆ ಮಾಡಿದ್ದರಿಂದ ನನಗೆ ಸುಮಾರು 15 ಕಿ ಮೀ ಬಸ್ ನಲ್ಲಿ ಪ್ರಯಾಣಿಸಬೇಕಾದ ಸನ್ನಿವೇಶ ನಿರ್ಮಾಣ ಆಯಿತು. ಬಹುಷ: ಬಸ್ ನಲ್ಲಿ ಪ್ರಯಾಣಿಸಬೇಕಾದರೆ ಎಷ್ಟೊಂದು ಕಷ್ಟ ಆಗುತ್ತದೆ ಎಂಬುದನ್ನು ನನಗೆ ತಿಳಿಸಲು ನನ್ನ ಮಡದಿ ಮಾಡಿದ  ಉಪಾಯವೂ ಇದ್ದಿರಬಹುದು :)
ಹೇಗಪ್ಪ ಬಸ್ ನಲ್ಲಿ ಪ್ರತಿ ದಿನ ಹೋಗುವುದು ಎಂಬ ದುಗುಡ ಬೇರೆ. ಬಸ್ ಕಾಯಬೇಕು, ಇಲ್ಲಿನ ಕೊರೆಯುವ  ಚಳಿಗೆ ಬಸ್ ಕಾಯುವ ದಿದೆಯಲ್ಲ, ಅದು ನನ್ನ ಶತ್ರುವಿಗೂ ಬೇಡಾ. ಬೀಸುವ ಗಾಳಿ, ಸುರಿಯುತ್ತಿರುವ ಹಿಮ ಮಳೆ, ಜಾರುತ್ತಿರುವ ರಸ್ತೆಗಳು, ಮೈ ಮೇಲೆ ಹೊದ್ದ 3-4 ಸ್ವೆಟರ್  ಗಳು, ತಲೆಗೆ ಟೊಪ್ಪಿ, ಕೈಗೆ ಗ್ಲೌಸ್ ಅಯ್ಯೋ, ಬೇಡಪ್ಪ ಬೇಡ. ಇದನ್ನೆಲ್ಲಾ ನೆನಪು ಮಾಡಿಕೊಂಡು ದೇವರಿಗೆ ಒಂದು ದೀಪ ಹಚ್ಚಿ ಬಸ್ ಹಿಡಿದು ಆಫೀಸ್ ಹೋಗುವ ಮೊದಲ ಯಾನಕ್ಕೆ ಮಾನಸಿಕವಾಗಿ ಸಿದ್ದವಾದೆ. ಹೆಂಡತಿ ಬಂದು Dan Brown ಅವರ ಹೊಸ ಕಾದಂಬರಿ ''The Lost Symbol'' ಕೈಗೆ ಕೊಟ್ಟು ಹೇಳಿದಳು ''ಇದನ್ನು ಬಸ್ ನಲ್ಲಿ ಓದುತ್ತ ಹೋಗಿ, ಸಮಯದ ಹಿಂದೆ ನೀವು ಓಡುತ್ತಿರಿ'' ಎಂದು. ಉಪಾಯವೇನೋ ಅಪಾಯವಿಲ್ಲದಂತೆ ತೋರಿತು. ಆದರೆ ಬಸ್ ಹತ್ತಿದಾಗ ಹೊಳೆಯುವ ಮೊದಲ ಕೆಲಸ ''ನಿದ್ದೆ'' ಮಾಡುವುದು. ನಾನು ಬೆಂಗಳೂರಿನ ಬಸ್ ಹತ್ತಿದಾಗ ಇಷ್ಟ ಪಡುವುದು ಅದನ್ನೇ. ಎಷ್ಟೊಂದು ಟ್ರಾಫಿಕ್ , ಸಿಗ್ನಲ್ ಗಳು, ಕನಿಷ್ಟವೆಂದರೂ ಒಂದು ಘಂಟೆ ಪ್ರಯಾಣ ಗ್ಯಾರಂಟೀ. ಆರಾಮವಾಗಿ ನಿದ್ದೆ ಮಾಡಬಹುದಲ್ಲ ಎನ್ನುವ ದೂರಾಲೋಚನೆ. ಹಾಗಾಗಿ ಬೆಂಗಳೂರು ಟ್ರಾಫಿಕ್ ಬಗ್ಗೆ No Comments.
ಹೆಂಡತಿ ಪುಸ್ತಕ ಕೊಟ್ಟಾಗ ''ನಿದ್ರಾ ದೇವಿಯ ತೆಕ್ಕೆಗೆ ಬೀಳುವ ನನಗೆ ಸರಸ್ವತಿಯ ಒಲಿಸಿಕೊಳ್ಳುವ'' ಹೆಚ್ಚುವರಿ ಖಾತೆಯೂ ಬಂದು ಸೇರಿದಂತೆ ಆಯಿತು. ನಮ್ಮ ರಾಜಕಾರಣಿಗಳಾದರೆ  ಬಿಡಿ '' 4-5 ಖಾತೆಗಳನ್ನು ಸಲೀಸಾಗಿ ತೆಗೆದುಕೊಂಡು ಆ ಖಾತೆಗಳಲ್ಲಿ ಯಾವ ಸಣ್ಣ ಕಂಡಿಯನ್ನು ಬಿಡದೆ ಗುಡಿಸಿ ಗುಂಡಾಡಿ ಬಿಡುತ್ತಾರೆ''. ನಾವು ಹುಲು ಮಾನವರು, ಹಾಗಾಗಿ ಮೊದಲ ದಿನ ಕೇವಲ 5 ಪೇಜು ಗಳನ್ನು ಓದಲು ಹರ ಸಾಹಸ ಪಟ್ಟೆ. ಹಾಗೆಂದು ಪುಸ್ತಕ ಓದುವುದು ನನಗೆ ತುಂಬಾ ಇಷ್ಟ. ಆದರೆ ಬಸ್ ನಲ್ಲಿ ಓದುವ ಪ್ರವೃತ್ತಿ ಇರಲಿಲ್ಲ. ಇನ್ನು Dan Brown ಅವರ ಕಾದಂಬರಿಗಳಲ್ಲಿ ಮೊದಲ 50 ಪೇಜುಗಳಲ್ಲಿ ವಿಪರೀತ ವಿಷಯ ತುಂಬಿ ನಮ್ಮ ತಲೆಯನ್ನು  mixer    ನಂತೆ ತಿರುಗಿಸಿಬಿಡುತ್ತಾರೆ. ಹಾಗಾಗಿ ಅಂತೂ ಕಷ್ಟ ಪಟ್ಟು 50 ಪೇಜು ಮುಗಿಸಿದೆ, ನಂತರ 550 ಪೇಜು ಗಳ ಹೇಗೆ ಮುಗಿದವೆಂದೆ ತಿಳಿಯಲಿಲ್ಲ. ಬಸ್ ಗೆ ಹೋಗಲು ಹಾತೊರೆಯುತ್ತಿದ್ದೆ. ಬಸ್ ತಪ್ಪಿದರೂ ಮನದಲ್ಲೇ ಸಂತಸ. ಒಂದೊಂದು ಕ್ಷಣವನ್ನು ಹಾಳು ಮಾಡದೆ ಸಮಯದ ಸದುಪಯೋಗ ಪಡಿಸಿಕೊಂಡು ಆ ಮಹಾನ ಕಾದಂಬರಿ  ಓದಿ ಮುಗಿಸಿದೆ. ಅದಾದ ನಂತರ 2-3 ಕಾದಂಬರಿ  ಬಸ್ ನಲ್ಲಿ ಓದಿದ್ದೇನೆ. ಇದರಿಂದ ನನಗೆ ತಿಳಿದಿದ್ದು ಇಷ್ಟೇ. ಸಮಯ ನಮ್ಮಲ್ಲೂ ಇದೆ, ಆದರೆ ನಾವು ಸುಮ್ಮನೆ ಬ್ಯುಸಿ ಬ್ಯುಸಿ ಎನ್ನುತ್ತೇವೆ. ಮನಸ್ಸು ಮಾಡಿದರೆ ಎಷ್ಟೊಂದು ಕೆಲಸ ಮಾಡಬಹುದು ಎಂದು.

ಹೊಸ ವರ್ಷ ಬರುತ್ತಿದೆ, ಹಳೆಯ ವರ್ಷ ಸವಿ ನೆನಪುಗಳೋ, ಕಹಿ ನೆನಪು ಗಳೋ, ಒಟ್ಟಿನಲ್ಲಿ ಮತ್ತೊಂದು ವರ್ಷ ಎದುರಿಗಿದೆ. ಹೊಸ ಆಲೋಚನೆಗಳು, ಹೊಸ ಸಂಕಲ್ಪಗಳು ಇದ್ದಿದ್ದೆ. ಬೆಳಿಗ್ಗೆ ಬೇಗನೆ ಇನ್ನು ಮೇಲೆ ಏಳಬೇಕು, ಎದ್ದು ಒಂದರ್ಧ ಘಂಟೆ ವ್ಯಾಯಾಮ, ಜಾಗ್ಗಿಂಗ್ ಮಾಡಬೇಕು. ಅಮ್ಮನಿಗೆ ಮನೆ ಕೆಲಸಕ್ಕೆ ನೆರವಾಗಬೇಕು, ಆಫೀಸ್ ನಲ್ಲಿ ಹೆಚ್ಚು ಸಮಯ ಹಾಳು ಮಾಡದೇ ಬೇಗ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರ ಜೊತೆ ಸಮಯ ಕಳೆಯಬೇಕು. ಎಂಬಂಥ ಸಂಕಲ್ಪಗಳೂ ಸಂಕಲ್ಪಗಳಾಗೆ ಉಳಿದಿರುತ್ತವೆ ಎಂಬುದು ನನಗೂ ಗೊತ್ತು, ನಿಮಗೂ ಗೊತ್ತು.

                          ಕೆಲವೊಮ್ಮೆ ಎಂಥಹ ಸಂಕಲ್ಪ ಮಾಡಿರುತ್ತೇವೆ ಎಂದರೆ''ಹೊಸ ವರ್ಷದಲ್ಲಿ ಪ್ರತೀ ವಾರ ದೇವಸ್ಥಾನಕ್ಕೆ ತಪ್ಪದೆ ಹೋಗುತ್ತೇನೆ, ಪೂಜೆ ಹವನ, ಮಾಡಿಸುತ್ತೇನೆ'' ಎಂಬ ಸಂಕಲ್ಪಗಳು. ಹೊಸ ವರ್ಷದಲ್ಲಾದರೂ ಇಂಥಹ ನಂಬಿಕೆಗಳನ್ನು ಬಿಡೋಣಾ.

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ
ಗುರುತಿಸದಾದೆನು ನಮ್ಮೋಳಗೆ

ನಮ್ಮ ಮನದಲ್ಲೇ ಇರುವ ದೇವರ ಆರಾಧನೆ ಬಿಟ್ಟು ಪೂಜೆ, ಪುನಸ್ಕಾರ, ಹವನ, ಚಂಡಿ ಯಾಗ ಎಂಬ ಮಾತುಗಳು ಕೇಳಲು ಚೆಂದ. ಆದರೆ ನಮ್ಮ ಅನೇಕ ಕುಟುಂಬಗಳು ಇಂಥ ಮೂಡ ನಂಬಿಕೆಗಳಿಂದ ಬೀದಿಗೆ ಬಂದಿವೆ. ತಿನ್ನಲು  ಅನ್ನವಿಲ್ಲದಿದ್ದರೂ ಹೊನ್ನಿನ ಅಂಬಾರಿ ಮಾಡಿಸುವ ಹರಕೆಗಳನ್ನು ಯಾವ ದೇವರೂ ಇಷ್ಟ ಪಡುವುದಿಲ್ಲ. ಪರಸ್ಪರ ರಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಮಮತೆ ಸದಾ ತುಂಬಿದ್ದರೆ ಅದೇ ಗೋಕುಲ.

ಹೊಸ ವರ್ಷದ ಹೊಸ್ತಿಲಲ್ಲಿ ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನಸ್ಕರಾಗಿ ಹೆತ್ತವರನ್ನು, ಹೊತ್ತಿರುವ ಭೂಮಿಯನ್ನು ಕಾಪಾಡುವ ಸಂಕಲ್ಪ ಮಾಡೋಣ.

ಹೊಸ ವರ್ಷ ಸರ್ವರಿಗೂ ಒಳಿತನ್ನು ಮಾಡಲಿ

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 



ನಿಮ್ಮವ ಗುರು




Wednesday, December 22, 2010

ಹೃದಯದ ಪಿಸುಮಾತು ...

ಬದುಕಿನಲ್ಲಿ ಎಲ್ಲ ಕಡೆಯೂ ಸಂತಸ ಒದ್ದು ಕೊಂಡು ಬಿದ್ದಿರುವುದಿಲ್ಲ. ಅದೊಂದು ಹೂವಿನ ಮುಳ್ಳಿನ ಹಾಸಿಗೆ. ಮುಳ್ಳನ್ನು ಮೆಟ್ಟಿ ನೋವು ಸಿಕ್ಕಂತೆ  ಹೂವನ್ನು ಮುಟ್ಟಿ ನಲಿವು. ಎಂಥಹ ಸಮಯ ಬಂದರೂ ನಾವು ನಮ್ಮ ಹೆತ್ತವರ ಪ್ರೀತಿಯ ಮರೆಯಬಾರದು. ಕಷ್ಟಕಾಲದಲ್ಲಿ ಜೊತೆಗೆ ಬರುವ ಆತ್ಮೀಯ ಸ್ನೇಹಿತನ ಮಾತುಗಳು ಎಂದಿಗೂ ಪೂರಕ ಮತ್ತು ಪ್ರೇರಕ. ಕೆಟ್ಟ ನೆನಪುಗಳು ಬಾಳಿನ ಅರ್ಧ  ಸುಖವನ್ನೇ ತಿಂದು ಹಾಕುತ್ತವೆ. ನಾಳಿನ ಸುಂದರ ಬದುಕಿಗೆ ಕಾಯಬೇಕೆ ಹೊರತು ನಿನ್ನೆಯ ಕಹಿ ನೆನಪುಗಳಿಗೆ ಮರುಗುವುದಲ್ಲ. ಸಂಸಾರದಲ್ಲಿ ಸಮರಸ, ಬದುಕಿನಲ್ಲಿ ಸಂತಸ ಎರಡೂ ಮುಖ್ಯ. ಕೆಲವೊಮ್ಮೆ ನಮಗೆ ಇನ್ನೊಬ್ಬರ ಸಾಧನೆ ಸಹಿಸಲು ಅಸಾದ್ಯವಾಗುತ್ತದೆ. ಅವರ ಬಗೆಗೆ ಇಲ್ಲ ಸಲ್ಲದ ಆರೋಪ ಮಾಡಿ ಆದಷ್ಟು ಅವರನ್ನು ತುಳಿಯಲು ಪ್ರಯತ್ನ ಪಡುತ್ತೇವೆ. ನಮಗೆ ಇನ್ನೊಬ್ಬರು ಇಷ್ಟವಾಗದಿದ್ದರೆ ಅವರಿಂದ ದೂರವಿರಬೇಕೆ ಹೊರತು ಅವರನ್ನು, ಅವರ ಹೆಸರನ್ನು ಹಾಳು ಮಾಡುವುದಲ್ಲ. ಇನ್ನೊಬ್ಬರ ಮೇಲಿನ ಧ್ವೇಷ ನಮ್ಮನ್ನೇ ಕೊಲ್ಲುತ್ತದೆಯಷ್ಟೇ. ಈ ಮಣ್ಣಿನ ಋಣ ಎಲ್ಲಕ್ಕಿಂತ, ಎಲ್ಲರಿಗಿಂತ ದೊಡ್ಡದು. ಅದರ ಋಣ ತೀರಿಸುವ ಜವಾಬ್ದಾರಿ ಪ್ರತೀ ಒಬ್ಬರ ಕರ್ತವ್ಯ. ಜನನಿ ಮತ್ತು ಜನ್ಮಭೂಮಿಯ  ಮೇಲಿನ ಪ್ರೀತಿ ಇಮ್ಮಡಿಯಾಗುತ್ತ  ಬದುಕು ಹಸನ್ಮುಖಿ ಯಾಗಬೇಕು ಎಂಬುದೇ ಕವನ ಆಶಯ.   


ಮರೆಯುವ ಕ್ಷಣಗಳ ಬರೆದು ಇಡು
ಮನಸಿನ ಪುಟಗಳ ತೆರೆದು ಬಿಡು 

ಕಾಡುವ ನೆನಪ ಕೆದಕದಿರು
ಸಿಹಿನೆನಪಿನ ಜೊತೆಗೆ ಬಾಳುತಿರು

ಇನಿಯನ ಮಾತಿಗೆ ಮುನಿಯದಿರು
ಸಂಗಾತಿಯ ಕಣ್ಣಲಿ ಬದುಕನಿಡು

ಸ್ನೇಹಿತನ ಹಿತನುಡಿ ಸತತ ಇಡು
ಕುಹಕವ ಬಗೆವರ ದೂರವಿಡು

ಹೆತ್ತವರ ಪ್ರೀತಿಯ ಅಳಿಸದಿರು
ಹೊತ್ತಿರುವ ಜನನಿಯ ಮರೆಯದಿರು

ಚುಚ್ಚುತ ಮನಸನು ಕೊಲ್ಲದಿರು
ಇಷ್ಟವಾಗದಿರೆ ದೂರವಿರು

ನೊಂದವರ ನೋವಿಗೆ ಅಭಯವಿಡು
ಕಂಡರಿಯದ ಮಾತಿಗೆ ಮರುಗದಿರು

ಜನ್ಮಭೂಮಿಯನು ಬೆಳಗುತಿರು
ಋಣ ತೀರಿಸದೆ ತೊಲಗದಿರು

ಪಿಸುಮಾತಿದು ಹೃದಯದ ನೆನಪಲಿಡು
ಬದುಕಿನ ಪುಟಗಳ ಮುಚ್ಚದಿರು


Wednesday, December 15, 2010

ಧ್ವನಿಯೊಂದು ಕರೆಯುತಿದೆ...

ಹೆಣ್ಣಿಗೆ ತವರುಮನೆ ಎಂದರೆ ಸ್ವರ್ಗವಿದ್ದಂತೆ. ಅಲ್ಲಿ ಬರುವ ಎಲ್ಲ ಕಷ್ಟವನ್ನು ಅವಳು ಕಷ್ಟ ಅಂದುಕೊಳ್ಳುವುದೇ ಇಲ್ಲ. ಅದರಲ್ಲೂ ಮದುವೆಯಾಗಿ ವರುಷವಾದರೂ ತವರು ಮನೆಗೆ ಹೋಗದೆ ಗಂಡನ ಮನೆಯಲ್ಲಿ ಅತ್ತೆ-ಮಾವರ ಸೇವೆ ಮಾಡುತ್ತಾ, ಪತಿಯ ಸೇವೆ ಮಾಡುತ್ತಾ ಇದ್ದ ಹೆಣ್ಣಿಗೆ ಒಮ್ಮೆಲೇ ಊರಿಗೆ ಹಬ್ಬಕ್ಕೆ ಬಾ, ಎಂಬ ಅಣ್ಣನ ಕರೆಯೋಲೆ ಬಂದರಂತೂ ಸ್ವರ್ಗಕ್ಕೆ ಮೂರೇ ಗೇಣು. ಆ ಸಂದರ್ಭದಲ್ಲಿ ಅವಳಿಗೆ ಊಟ ರುಚಿಸದು, ಇನಿಯನ ಸನಿಹ ಬೇಡ, ಅತ್ತೆ ಮಾವರ ನೋಟವೂ ಬೇಡ. ಒಟ್ಟಿನಲ್ಲಿ ಅವಳಿಗೆ ತನ್ನ ತವರುಮನೆಯ ಚಿತ್ರಣವೇ ಎದುರಿಗಿರುತ್ತದೆ. ಅಲ್ಲಿ ತಾ ಆಡಿದ್ದು, ನಲಿದಿದ್ದು, ಅಪ್ಪ-ಅಮ್ಮರ ಮಡಿಲಲ್ಲಿ ಮುದ್ದು ಕಂದನಾಗಿ ಬೆಳೆದದ್ದು, ಗೆಳತಿಯರ ನಗು ಎಲ್ಲ ಕಣ್ಮುಂದೆ ಬಂದು ಯಾವಾಗ ತಾನು ತವರು ಸೇರುತ್ತೇನೆಯೋ ಎಂಬ ತವಕ ಅವಳಿಗೆ. ಅಂಥಹ ಹೆಣ್ಣಿನ ಮನದ ಭಾವನೆಗಳ ಅನಾವರಣ ಈ ಕವನದಲ್ಲಿದೆ.



ದೂರದ ಊರಿಂದ ಧ್ವನಿಯೊಂದು ಬರುತಲಿದೆ
ತಂಗಿ, ನೀ ಬಾ ಬಾರೆ, ಎಂದೆನ್ನ ಕರೆಯುತಿದೆ
ಕಳೆದು ಹೋಯಿತು ವರುಷ, ತವರೂರ ಆ ಹರುಷ
ಮರೆಯಲಾರೆನು ನಾನು, ಅನುಗಾಲ ನಿಮಿಷ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಅಣ್ಣನ ಒಡನಾಟ, ತಮ್ಮನೊಂದಿಗೆ  ಕಾಟ
ಅಕ್ಕನ ಜೊತೆಯಲಿ, ಕಳೆದ ಆ ಕ್ಷಣದೂಟ 
ತಂಗಿಯ ತೆಕ್ಕೆಯಲಿ, ಸರಸ ವಿರಸದ ಆಟ
ಗೆಳತಿಯರ ಒಡನಾಟ, ಗೆಳೆಯರ ಸವಿಮಾತ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಹೆತ್ತ ತಾಯಿಯ ನೋಟ, ಪಿತನ ಹಿತನುಡಿ ಪಾಠ 
ಸುತ್ತ ನೂರೆಂಟು ತರುಲತೆಗಳ ಮುದ್ದಾಟ
ಕೆಲಸದ ರಂಗಿಯ, ಕಿಲ ಕಿಲ ನಗುವಾಟ
ಹೊಲದಲ್ಲಿ ಬೆಳೆದ, ಭತ್ತದ ಸವಿನೋಟ
ಹಸಿರನ್ನೇ ಹೊತ್ತ, ಉಸಿರು ಅಡಿಕೆಯ ತೋಟ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಬೇಡವಾಗಿದೆ ಇಂದು, ಇನಿಯನ ಸರಸದ ಮಾತು
ಕಾಡತೊಡಗಿದೆ ನನಗೆ, ಅತ್ತೆ ಮಾವರ ಕಾಟ
ಮಡಿಲ ಸೇರುವ ತವಕ, ತವರ ಸೇರುವ ತನಕ
ಅಪ್ಪ-ಅಮ್ಮರ ಮಡಿಲ, ಕಂದನಾಗುವ ತನಕ
ದೂರದ ಊರಿಂದ, ಧ್ವನಿಯೊಂದು ಬರುತಲಿದೆ


Wednesday, December 8, 2010

ನೆನಪಾಯ್ತೆ ಇಂದು ...

ಸ್ವೀಡನ್ನಿನಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಹಿಮಮಳೆ ಆಗುತ್ತಿದೆ. ಎಲ್ಲಿ ನೋಡಿದರೂ ಹಿಮದ ರಾಶಿಯೇ ಬಿದ್ದಿದೆ. ಈ ಸಂದರ್ಭದಲ್ಲಿ ಹಿಮಗಳ ನಡುವೆ, ಸಂಗಾತಿಯೊಂದಿಗೆ ಮಲೆನಾಡಿನಲ್ಲಿ ಕಳೆದ ಕ್ಷಣಗಳ ನೆನಪು ಈ ಕವನದ ಹೂರಣ. ಇಲ್ಲಿನ ಹಿಮಗಳ ನಡುವೆ ಅಲ್ಲಿನ ಮಲೆನಾಡಿನ, ಸೌಂದರ್ಯದ, ತರು ಲತೆಗಳ ಮಧುಬನಗಳಲ್ಲಿ ಮನ ತೇಲಾಡಿದೆ. ಇರುಳಿನ ಸಂಜೆಯ ಹೊತ್ತಿನಲ್ಲಿ, ದೇವರಿಗೆ ಅಂಗನೆಯರು ದೀಪ ಬೆಳಗುವ ಹೊತ್ತಿನಲ್ಲಿ, ಚಂದ್ರಮನ ಆಗಮನದ ಹೊತ್ತಿನಲ್ಲಿ, ಮಧುರಗೀತೆಯ ನೆನಪು ಸುಳಿದಾಡಿದೆ. ಮೊನ್ನೆ ಡಿಸೆಂಬರ್ 6 ಕ್ಕೆ ಮದುವೆಯಾಗಿ 3 ವರ್ಷ ತುಂಬಿತು. ನನ್ನೊಂದಿಗೆ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ, ನೋವು ನಲಿವುಗಳಿಗೆ ಜೊತೆಯಾಗಿ ಉಸಿರಾದ ಬಾಳ ಸಂಗಾತಿ ಗೀತಾ ಳಿಗೆ ಬರೆದ ಕವನವಿದು.



ಮೆತ್ತನೆಯ ಮಲ್ಲಿಗೆಯೇ, ,ಮುತ್ತೊಂದ ಕೊಡುವೆ
ಮಾತಾಡು ಮಾತಾಡು, ಮಕರಂದ ಹೀರುವೆ
ಅಧರದಲಿ ಮಧುರಗೀತೆ, ಬರಲಿ ಎಂದೆಂದೂ 
ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 

ಮಲೆನಾಡ ಸಂಪಿಗೆ, ಮಧುಬನದ ಅಂಚಿಗೆ
ಮುಚ್ಚು ಮರೆ ಇಲ್ಲದೆ, ಮೊಂಬೆಳಕಿನ ಹೊತ್ತಿಗೆ 
ಮದನಾರಿ, ಶುಭಕೋರಿ, ಮುದ್ದಾಡುವೆ ಇಂದು
     ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 

ಬಾನಿನಲಿ ಹಾರ್ಯಾವ್ , ಹಕ್ಕಿಗಳ ದಂಡು
ಅಂಗನೆಯರು ಬೆಳಗಿಹರು, ದೀಪಗಳ ಬಂದು
ಇರುಳಾಯ್ತು ಚಂದ್ರಮನು, ಬರುತಾನೆ ಇಂದು
ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು