Thursday, May 28, 2009

ಅವಳು...

- ಗುರು ಬಬ್ಬಿಗದ್ದೆ

 ಅವಳಿಂದಲೇ ಬಾಳು, ಅವಳಿಲ್ಲದೇ  ಗೋಳು

ನನ್ನೆದೆಯ ಬಾಂದಳದಿ ಹೊಳೆವ ತಾರೆ  ಅವಳು

ಚೈತ್ರಮಾಸದ ಕೋಗಿಲೆ, ಮಾಧುರ್ಯದವಳು

ಮುಂಗಾರಿನ ಮೋಡದ ಹಿಂದೆ ಸ್ವಾತಿಮುತ್ತು  ಅವಳು    

 

ನನ್ನ ಜೀವನ ಪುಟದಿ, ಅಕ್ಷರವಾದವಳು

ಸಕ್ಕರೆಯ ಮಾತಿನಲಿ, ಪ್ರೀತಿ ಕೊಟ್ಟವಳು

ನೋವಿರಲಿ, ನಲಿವಿರಲಿ, ಅನುಸರಿಸಿದವಳು

ತುಳಿದು ಸಪ್ತಪದಿ, ಸಂಗಾತಿಯಾದವಳು          

 

ಹೊತ್ತು ಹೆತ್ತವರನೆಲ್ಲ, ಬಿಟ್ಟೆಲ್ಲ ಬಂದಿಹಳು

ಚಿತ್ತದಿ ನನ್ನಯ ಮನವ, ಮುದದಿ ಗೆದ್ದಿಹಳು

ತಾಯಿ ಮಮತೆಯ ಎನಗೆ ಧಾರೆ ಎರೆದಿಹಳು

ಎನ್ನಯ ಸಾಧನೆಗೆ ಸ್ಪೂರ್ಥಿ ಚಿಲುಮೆಯು  ಅವಳು    

Monday, May 25, 2009

ಸ್ವೀಡನ್ನಿನ ಪತ್ರಿಕೆಯಲ್ಲೊಂದು ನನ್ನ ಬಗೆಗಿನ ಬರಹ....

ಇದೆ ತಿಂಗಳು ಸ್ವೀಡನ್ನಿನ ಪತ್ರಿಕೆಯೊಂದು ನನ್ನ ಇಂಟರ್ವ್ಯೂ ತೆಗೆದುಕೊಂಡು ಅದನ್ನು ಪ್ರಕಟಿಸಿದೆ. ನನ್ನ ಸಂಶೋಧನೆಯ ಜೊತೆಗೆ ಕ್ರಿಕೆಟ್ ಆಟದ ಬಗೆಗೂ ಅದರಲ್ಲಿ ವರ್ಣಿಸಿದ್ದಾರೆ. ಇದನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
 


ತಮ್ಮವ 

ಗುರು ಬಬ್ಬಿಗದ್ದೆ

Thursday, May 21, 2009

ವಾಸ್ತವತೆ.....

  -ಗುರು ಬಬ್ಬಿಗದ್ದೆ


ಹೊತ್ತು ಮೂಡುವ ಮೊದಲೇ ಹೊತ್ತಿ ಉರಿಯಿತು ಬೆಂಕಿ
ಹಚ್ಚ ಹಸುರಿನ ಹಸುಳೆ ಬಾಳದಾರಿಯ ಕನಸು
ಹಚ್ಚನೆಯ ಕೆಸರಿನಲಿ ನುಚ್ಚು ನೂರಾಯಿತು 

ನಿತ್ಯ ಬರುವ ಗಾಳಿ ಎತ್ತಿ ತಂದಿತು ಉರಿಯ
ನಗುವ ಮರೆಸುತ ಮನದಿ ವಿಷ ತುಂಬಿತು
ಜಾತಿ-ಜಾತಿಯ ನಡುವೆ ದ್ವೇಷಾಸೂಯೆಯ ಬೆಂಕಿ
ಜಾತ್ಯಾತೀತತೆ ನಮ್ಮ ಕನಸಾಯಿತು

ಕಣ್ಣ ಬೆಳಗುವ ಬೆಳಕು ಕಣ್ಣನ್ನೇ ಕೊರೆದಿತ್ತು
ಹಣ್ಣ ಕೊಯ್ಯುವ ಕತ್ತಿ ಕತ್ತು ಕೊಯ್ದಿತ್ತು
ನಾ ಮೇಲು ನೀ ಮೇಲು ಎಂಬ ಒಣ ಭಾವನೆಯು
ಬಟ್ಟ ಬಯಲಲಿ ಬಿಟ್ಟ ಕರುವಾಯಿತು

ಎಚ್ಚೆತ್ತ ಎಚ್ಚರಿಕೆ ಅಚ್ಚಳಿಯದೇ ಉಳಿದು
ಬಿತ್ತುತ್ತ ಪ್ರೇಮವನು ದ್ವೇಷವನು ತೊರೆದು‌
ಒಟ್ಟಿನಲಿ ಒಂದಾಗಿ ಬೆಚ್ಚನೆ ಹೊದಿಕೆಯ ಹೊದ್ದು
ಹೊತ್ತು ಇಳಿಯುವ ಮೊದಲೇ ಬೆಂಕಿ ಆರಿಸಿ ಜಗದಿ 

ಹತ್ತಾರು ಹಸುಳೆಗಳ ಭವ್ಯ ದೇಶದ ಕನಸು
ಹೊತ್ತಿ ಬೆಳಗಲಿ ಮನದಿ ನಮಗೂ ವಯಸಾಯಿತು

Tuesday, May 12, 2009

ನನ್ನ ಅಂತರಂಗ....

- ಗುರು ಬಬ್ಬಿಗದ್ದೆ

ಜೀವನ ಎಂಬುದು ಒಂದು ನಾಟಕ ರಂಗ, ಅವರವರ ಪಾತ್ರವನ್ನು ಅವರವರು ನಿರ್ವಹಿಸುತ್ತಾ ಹೋಗಬೇಕು ಎನ್ನುವುದೇನೋ ಸರಿ. ಆದರೆ ಬಡವನ ಪಾತ್ರ ಯಾವಾಗಲೂ ಬಡವನ ಪಾತ್ರವೇ ಆಗಿರುತ್ತದೆ. ಸಿರಿವಂತಿಕೆಯ ದರ್ಪದಲ್ಲಿ ಬಡಜನರ ಮೇಲೆ ಅದೆಷ್ಟೋ ದೌರ್ಜನ್ಯಗಳಾಗುತ್ತಿವೆ. ಮೊನ್ನೆ ಮೊನ್ನೆಯಷ್ಟೆ ಮೇಲ್ಜಾತಿಯ ಹುಡುಗನೊಬ್ಬ ಕೆಳಜಾತಿಯ ಹುಡುಗಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ಅವಳು ಪ್ರತಿಭಟಿಸಿದಾಗ ಆತ ಅವಳನ್ನೇ ಸಜೀವವಾಗಿ ಸುಟ್ಟು ಹಾಕಿದ ಘಟನೆ ಕಣ್ಣಂಚಿನಲ್ಲಿ ಜೀವಂತವಾಗಿದೆ. ಇದಕ್ಕೆಲ್ಲ ಕೊನೆ ಎಂದು? ಧರಿಸಿಕೊಳ್ಳಲೂ ವಸ್ತ್ರವಿಲ್ಲದೆ ಒದ್ದಾಡುವ ಕಿತ್ತು ತಿನ್ನುವ ಬಡತನ ಒಂದೆಡೆಯಾದರೆ, ಮೈ ಮೇಲಿನ ಬಟ್ಟೆಯೇ ಭಾರ ಎನ್ನುವಂತೆ ಅದನ್ನು ಕಳಚಿ ಹೊರಟಿರುವ ಶೋಕಿ ಜನಾಂಗ ಇನ್ನೊಂದೆಡೆ. ಎಲ್ಲಿಯ ಸಮಾನತೆ, ಎಲ್ಲಿಯ ಸ್ವಾತಂತ್ರ್ಯ. ಈ ಕವನದಲ್ಲಿ ನನ್ನ ಅಂತರಂಗದ ಸುಪ್ತ ಭಾವನೆಗಳನ್ನು ಅನಾವರಣಗೊಳಿಸಿದ್ದೇನೆ. ತಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳಿಗೆ ಸದಾ ಸ್ವಾಗತ. 

ಭೋರ್ಗರೆದಿದೆ ನೀರ್ಗರೆದಿದೆ ಶೃಂಗಾರದ ಧಾತ್ರಿ

ಮೈ ಮನ ನವಿರೇಳಿಸುತಲಿ ಸಾಗಿದೆ ಹೊಸ ಮೈತ್ರಿ ೧


ಮಿಡಿಯುತ್ತಲಿ ಮಿಡಿಸುತ್ತಲಿ ನವ್ಯದ ನವ್ಯತೆಯನ್ನು
ಹುಟ್ಟುತ್ತಲಿ ಸಾಯುತ್ತಲಿ ಸಾಗಿಸಿ ಜೀವನವನ್ನು     ೨


ಸ್ವಾತಂತ್ರ್ಯದ ಹೆಸರಲಿ ಸ್ವೇಚ್ಚಾಚಾರದ ಬದುಕು
‌ಉದ್ಧಾರದ ನೆಪದಲಿ ಸೃಷ್ಟಿಸುತಿವೆ ಒಡಕು          ೩


ಆನಂದದ ಆಕ್ರಂದನ ಹೆಚ್ಚಿಸುತಿವೆ ಬಡತನ
ಸಿರಿವಂತಿಕೆ ಸಾಮ್ರಾಜ್ಯದಲಿ ಕರಗುತಿದೆ ತನು-ಮನ ೪


ಅನ್ನ ವಸ್ತ್ರದ ಬರದಿ ನಿರ್ಗತಿಕರ ಪಾಡೇನು
ಶೋಕಿ ಯುವತಿಯರಿಗೆ ಇದ್ದರೂ ವಸ್ತ್ರ ತೊಡಲು ಬರವೇನು  ೫


ಹಗರಣಗಳ ಸರಮಾಲೆಯಲಿ ಕರಗುತಿದೆ ಹಣವು
ವಯ್ಯಾರದ ಶ್ರಂಗಾರಕೆ ಮುಡುಪಾಗಿದೆ ಸಿರಿತನವು        ೬


ಹೇಳಲೂ ಆಗದೆ ಬಿಡಲೂ ಆಗದೆ ಸಾಗಿದೆ ಜೀವನ ನಾಟಕ ರಂಗ
‌ಇದನೆಲ್ಲವ ನೋಡಿದೊಡೆ ವಿಷಾದಿಪುದು ನನ್ನ ಅಂತರಂಗ                ೭

Monday, May 4, 2009

ಹೃದಯ ಕದ್ದ ಕಳ್ಳಿ...


 -ಗುರು ಬಬ್ಬಿಗದ್ದೆ 

ನನ್ನ ಒಲವ ಬಳ್ಳಿ ನೀ ಹೃದಯ ಕದ್ದ ಕಳ್ಳಿ

ಪ್ರೇಮಪಾಠದಲ್ಲಿ ನನ್ನನ್ನೇ ಗೆದ್ದ ಮಳ್ಳಿ 

ಬಾಳಿನಲ್ಲಿ ಬಂದೆ ಯಾಕೆ ನೀನು ಎನ್ನ ಬಳಿಗೆ

ನಿನ್ನ ಪ್ರೀತಿ ರಾಗದಲ್ಲಿ ಹಾಕಿ ಹೋದೆ ಬೆಸುಗೆ

ಅರಿಯದಾದೆ ನನ್ನೆ ನಾನು ಎಲ್ಲಿ ಹೋದೆ ಸುಂದರಿ

ನಿನ್ನ ಬಿಟ್ಟು ಬದುಕಲಾರೆ ಬಳಿಗೆ ಬಾರೆ ಚಕೋರಿ ... 1


ಮಾತಿನಲ್ಲೆ ಮೌನ ನಿನ್ನ ಮೌನದಲ್ಲೇ ಮಾತಿದೆ 

ನಿನ್ನ ರಸಿಕ ಕಂಗಳು ಮೈಮನದ ಗೀತೆ ಹಾಡಿದೆ

ವಿರಹಿಯಾದೆ ಇನ್ನು ನಾನು ನಿನ್ನ ನೆನಪಿನಾಳದಿ

ಮರುಗದಂತೆ ಮಾಡು ಎನ್ನ ಹರಿಸಿ ಪ್ರೇಮದಾ ನದಿ ... 2


ಮಾಮರದ ಕೋಗಿಲೆ ನೀ ಅರಳಿದಂತೆ ತಾವರೆ

ಚೈತ್ರದ ಕುಸುಮಾಂಜಲಿ ನೀನೇ ಎನಗೆ ಆಸರೆ

ಕಳೆಯದಾದೆ ಕ್ಷಣಗಳನ್ನು ಬಿಟ್ಟು ನಿನ್ನ ಅನುದಿನ

ಸುಳಿಯುವಂತೆ ಮಾಡು ಮನವ ಸದಾ  ನಿನ್ನ ಮೈಮನ ... 3


ಇತ್ತ ನೋಡು ಅತ್ತ ನೋಡು ಎತ್ತ ನೋಡು ನೀನಿರೆ

ನನ್ನ ಚಿತ್ತವೆಲ್ಲ ನಿನ್ನ ಮಡಿಲಿನಲ್ಲೆ ಮಲಗಿರೆ

ಸಹಿಸದಾದೆ ವೇದನೆ ಓಡಿ ಬಾರೆ ಸುಮ್ಮನೆ

ಹೃದಯ ಕದ್ದ ಕಳ್ಳಿ ನೀನು ನನ್ನೇ ನಿನಗೆ ಅರ್ಪಣೆ ...  4