Tuesday, May 12, 2009

ನನ್ನ ಅಂತರಂಗ....

- ಗುರು ಬಬ್ಬಿಗದ್ದೆ

ಜೀವನ ಎಂಬುದು ಒಂದು ನಾಟಕ ರಂಗ, ಅವರವರ ಪಾತ್ರವನ್ನು ಅವರವರು ನಿರ್ವಹಿಸುತ್ತಾ ಹೋಗಬೇಕು ಎನ್ನುವುದೇನೋ ಸರಿ. ಆದರೆ ಬಡವನ ಪಾತ್ರ ಯಾವಾಗಲೂ ಬಡವನ ಪಾತ್ರವೇ ಆಗಿರುತ್ತದೆ. ಸಿರಿವಂತಿಕೆಯ ದರ್ಪದಲ್ಲಿ ಬಡಜನರ ಮೇಲೆ ಅದೆಷ್ಟೋ ದೌರ್ಜನ್ಯಗಳಾಗುತ್ತಿವೆ. ಮೊನ್ನೆ ಮೊನ್ನೆಯಷ್ಟೆ ಮೇಲ್ಜಾತಿಯ ಹುಡುಗನೊಬ್ಬ ಕೆಳಜಾತಿಯ ಹುಡುಗಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ಅವಳು ಪ್ರತಿಭಟಿಸಿದಾಗ ಆತ ಅವಳನ್ನೇ ಸಜೀವವಾಗಿ ಸುಟ್ಟು ಹಾಕಿದ ಘಟನೆ ಕಣ್ಣಂಚಿನಲ್ಲಿ ಜೀವಂತವಾಗಿದೆ. ಇದಕ್ಕೆಲ್ಲ ಕೊನೆ ಎಂದು? ಧರಿಸಿಕೊಳ್ಳಲೂ ವಸ್ತ್ರವಿಲ್ಲದೆ ಒದ್ದಾಡುವ ಕಿತ್ತು ತಿನ್ನುವ ಬಡತನ ಒಂದೆಡೆಯಾದರೆ, ಮೈ ಮೇಲಿನ ಬಟ್ಟೆಯೇ ಭಾರ ಎನ್ನುವಂತೆ ಅದನ್ನು ಕಳಚಿ ಹೊರಟಿರುವ ಶೋಕಿ ಜನಾಂಗ ಇನ್ನೊಂದೆಡೆ. ಎಲ್ಲಿಯ ಸಮಾನತೆ, ಎಲ್ಲಿಯ ಸ್ವಾತಂತ್ರ್ಯ. ಈ ಕವನದಲ್ಲಿ ನನ್ನ ಅಂತರಂಗದ ಸುಪ್ತ ಭಾವನೆಗಳನ್ನು ಅನಾವರಣಗೊಳಿಸಿದ್ದೇನೆ. ತಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳಿಗೆ ಸದಾ ಸ್ವಾಗತ. 

ಭೋರ್ಗರೆದಿದೆ ನೀರ್ಗರೆದಿದೆ ಶೃಂಗಾರದ ಧಾತ್ರಿ

ಮೈ ಮನ ನವಿರೇಳಿಸುತಲಿ ಸಾಗಿದೆ ಹೊಸ ಮೈತ್ರಿ ೧


ಮಿಡಿಯುತ್ತಲಿ ಮಿಡಿಸುತ್ತಲಿ ನವ್ಯದ ನವ್ಯತೆಯನ್ನು
ಹುಟ್ಟುತ್ತಲಿ ಸಾಯುತ್ತಲಿ ಸಾಗಿಸಿ ಜೀವನವನ್ನು     ೨


ಸ್ವಾತಂತ್ರ್ಯದ ಹೆಸರಲಿ ಸ್ವೇಚ್ಚಾಚಾರದ ಬದುಕು
‌ಉದ್ಧಾರದ ನೆಪದಲಿ ಸೃಷ್ಟಿಸುತಿವೆ ಒಡಕು          ೩


ಆನಂದದ ಆಕ್ರಂದನ ಹೆಚ್ಚಿಸುತಿವೆ ಬಡತನ
ಸಿರಿವಂತಿಕೆ ಸಾಮ್ರಾಜ್ಯದಲಿ ಕರಗುತಿದೆ ತನು-ಮನ ೪


ಅನ್ನ ವಸ್ತ್ರದ ಬರದಿ ನಿರ್ಗತಿಕರ ಪಾಡೇನು
ಶೋಕಿ ಯುವತಿಯರಿಗೆ ಇದ್ದರೂ ವಸ್ತ್ರ ತೊಡಲು ಬರವೇನು  ೫


ಹಗರಣಗಳ ಸರಮಾಲೆಯಲಿ ಕರಗುತಿದೆ ಹಣವು
ವಯ್ಯಾರದ ಶ್ರಂಗಾರಕೆ ಮುಡುಪಾಗಿದೆ ಸಿರಿತನವು        ೬


ಹೇಳಲೂ ಆಗದೆ ಬಿಡಲೂ ಆಗದೆ ಸಾಗಿದೆ ಜೀವನ ನಾಟಕ ರಂಗ
‌ಇದನೆಲ್ಲವ ನೋಡಿದೊಡೆ ವಿಷಾದಿಪುದು ನನ್ನ ಅಂತರಂಗ                ೭

11 comments:

shivu said...

ಗುರುಮೂರ್ತಿ ಸರ್,

ಬಡವರ ಬಗೆಗಿನ ಕಾಳಜಿ ನಿಮ್ಮ ಲೇಖನ ಮತ್ತು ಕವನದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.

ಅಭಿನಂದನೆಗಳು..

ಬಿಸಿಲ ಹನಿ said...

ಕವನದ ಆಶಯ ತುಂಬಾ ಚನ್ನಾಗಿ ಒಡಮೂಡಿದೆ.

PARAANJAPE K.N. said...

ಗುರುಮೂರ್ತಿಯವರೇ,
ಕವನ ಚೆನ್ನಾಗಿದೆ. ಕವನ ರಚನೆಯ ಹಿ೦ದೆ ನಿಮಗಿರುವ ಕಳಕಳಿ, ಸಮಾಜದಲ್ಲಿರುವ ಸಾಮಾಜಿಕ-ಆರ್ಥಿಕ ಏರುಪೇರು ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ನಿಮಗಿರುವ ಕಾಳಜಿ ಮೆಚ್ಚುವ೦ಥಾದ್ದು

Guru's world said...

ನಿಮ್ಮ ಅಂತರಂಗದ ಅಳಲು,, ಬಡವರ ಬಗೆಗಿನ ಕಾಳಜಿ,, ಅದರ ಬಗ್ಗೆ ಇರುವ ಕವನ,,, ತುಂಬ ಚೆನ್ನಾಗಿ ಇದೆ...
ಗುರು

ಮನಸು said...

ಗುರು,
ತುಂಬಾ ಚೆನ್ನಾಗಿದೆ, ಹಣ ಎನೆಲ್ಲಾ ಮಾಡಿಬಿಡುತ್ತೆ ಜನರನ್ನು......ನಿಮ್ಮ ಕವನ ಇಷ್ಟವಾಯಿತು

ಶಿವಪ್ರಕಾಶ್ said...

ಕವನ ತುಂಬಾ ಚನ್ನಾಗಿ ಬರೆದಿದ್ದೀರಿ..
ಪ್ರತಿಯೊಂದು ಸಾಲುಗಳು ಅರ್ಥಗರ್ಭಿತವಾಗಿವೆ.

"ಅನ್ನ ವಸ್ತ್ರದ ಬರದಿ ನಿರ್ಗತಿಕರ ಪಾಡೇನು
ಶೋಕಿ ಯುವತಿಯರಿಗೆ ಇದ್ದರೂ ವಸ್ತ್ರ ತೊಡಲು ಬರವೇನು ೫"
ಈ ಪ್ಯಾರ ಬಹಳ ಇಷ್ಟವಾಯಿತು..

ಸಾಗರದಾಚೆಯ ಇಂಚರ said...

@ ಶಿವೂ ಸರ್,
ಮೊದಲಿಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಪ್ರೀತಿ ಇರಲಿ,

@ ಬಿಸಿಲ ಹನಿ,
ಅಭಿಪ್ರಾಯಕ್ಕೆ ಧನ್ಯವಾದಗಳು

@ ಪರಾಂಜಪೆ ಸರ್
ಕೆಲವೊಮ್ಮೆ ಸಮಾಜ ಎತ್ತ ಸಾಗುತ್ತಿದೆ ಎಂದು ನೋಡಿದಾಗ ಮನಸ್ಸಿಗೆ ಬೇಸರವಾಗುತ್ತದೆ. ಹೀಗೆಯೇ ಬರುತ್ತಿರಿ

@ ಗುರು
ಅಭಿಪ್ರಾಯಕ್ಕೆ ಧನ್ಯವಾದಗಳು

@ ಮನಸು
ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು

@ ಶಿವಪ್ರಕಾಶ್,
ನಿಮಗೆ ಇಷ್ಟವಾಗಿದಕ್ಕೆ ನನಗೆ ಹೆಮ್ಮೆ ಇದೆ, ಹೀಗೆಯೇ ಬರುತ್ತಿರಿ

ಧರಿತ್ರಿ said...

ಗುರುಮೂರ್ತಿ ಸರ್..
ಏನ ಹೇಳಲಿ ಕವನದ ಕುರಿತು? ಕವನದ ಆಶಯ ಇಷ್ಟವಾಯಿತು. ಕಷ್ಟವನ್ನೇ ಮೈಮೇಲೆ ಹೊದ್ದು ಮಲಗಿರುವ ನಿರ್ಗತಿಕರ ಬದುಕಿನ ಬಗ್ಗೆ ಅಂತರಂಗ ಅಳಲನ್ನಷ್ಟೇ ತೋಡಿಕೊಳ್ಳಬಹುದು..ಪರಿಹಾರ ಏನಿದೆ? ನಿಮ್ಮ ಕವನ ಓದುತ್ತಿದ್ದಂತೆ ಅಂತರಂಗದ ಅಳಲಿನ ಅಲೆಗಳು ಮಡುಗಟ್ಟಿ ದುಃಖದ ಮಂಜುಗಡ್ಡೆಗಳಾದುವು ಅಷ್ಟೇ. ಬಡವರ ಗೋರಿಯ ಮೇಲೆ ಬದುಕು ಕಟ್ಟುವ ದುಷ್ಟರಿಗೆ ಪಾಠ ಕಲಿಸುವವರಾರು?
-ಧರಿತ್ರಿ

ಹರೀಶ ಮಾಂಬಾಡಿ said...

ಸಿರಿವಂತಿಕೆಯ ದರ್ಪದಲ್ಲಿ ಬಡಜನರ ಮೇಲೆ ಅದೆಷ್ಟೋ ದೌರ್ಜನ್ಯ. ಶತಶತಮಾನಗಳಿಂದ ಇಡೀ ವಿಶ್ವದಲ್ಲಿ ನಡೆಯುತ್ತಿರುವುದು ಇದೇ.
ಅತ್ಯಾಚಾರಿಗಳು ಜಾತಿ ನೋಡುವುದಿಲ್ಲ. ಬಡತನಕ್ಕೂ ಜಾತಿಯಿಲ್ಲ. ನಮ್ಮ ಸುತ್ತಮುತ್ತ ನಾವು ಕಾಣುತ್ತಿರುದೊಂದೇ ಬಡತನ-ಸಿರಿತನ ಮತ್ತು ಅಹಂಕಾರ. ಇವಕ್ಕೆ ಜಾತಿ ಇಲ್ಲ. ನಿಮ್ಮ ಅಭಿಪ್ರಾಯಗಳು ಸರಿಯಾಗೇ ಇವೆ

ಕ್ಷಣ... ಚಿಂತನೆ... Thinking a While.. said...

ಸರ್‍, ನಿಮ್ಮಂತರಗದ ಭಾವನೆಗಳ ಮಿಡಿತ, ಮಿಳಿತ ಎಲ್ಲವನ್ನೂ ಕವನದಲ್ಲಿ ಮೂಡಿಸಿದ್ದೀರಿ. ಈ ಭಾವನೆಗಳು ಅನೇಕರ ಅಂತರಂಗದ ಮಿಡಿತವೂ ಹೌದು ಎಂದು ನನ್ನ ಅನಿಸಿಕೆ. ಈ ಪರಿಯ ಕಾಳಜಿಯ ಕವಿತೆಗೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

@ ಧರಿತ್ರಿ,
ನೀವು ಅಂದಿದ್ದು ಸರಿ, ಅದೇ ಕವನದ ಆಶಯ ಕೂಡಾ. ಧನ್ಯವಾದಗಳು

@ ಹರೀಶ್,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆ ಬರುತ್ತಿರಿ

@ ಕ್ಷಣ ಚಿಂತನೆ
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ಸಂತಸವಾಯಿತು, ಹೀಗೆಯೇ ಬರುತ್ತಿರಿ