Thursday, December 30, 2010

ಸಮಯಕ್ಕೀಗ ಸಮಯವಿಲ್ಲ...

ವೈರಸ್ ಹಾವಳಿ ಗಿಂತ ವೇಗವಾಗಿ ಹಾಗೂ ಅಷ್ಟೇ ವ್ಯವಸ್ಥಿತವಾಗಿ ಹಬ್ಬುತ್ತಿರುವ ದೊಡ್ಡ ವೈರಸ್ ''I am Busy'' ಎನ್ನುವ ಶಬ್ದ. ಯಾರನ್ನೇ ಕೇಳಿ ''ನಮಗೆ ಟೈಮ್ ಇಲ್ರಿ, ಆಫೀಸ್ ಕೆಲಸದ ನಡುವೆ ಬೇರೆ ಏನು ಮಾಡೋಕೂ ಟೈಮ್ ಇಲ್ಲ'' ಅನ್ನೋ ಮಾತು. ಬಹುಷ: ಇದೇ ಕಾರಣಕ್ಕೆ ಇಂದು ಚಿತ್ರಕಾರರು, ಸಾಹಿತಿಗಳು, ಕವಿಗಳ, ಮಾತುಗಾರರ ಸಂಖ್ಯೆ ಗಣನೀಯವಾಗಿ ನಶಿಸುತ್ತಿದೆ. ಮೊದಲೆಲ್ಲ ಎಷ್ಟೇ ಕಲಿತರೂ ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆ ಆಗಿರಲಿಲ್ಲ. ಆದರೆ ಇಂದು ಗಂಭೀರ ವದನದ ಲಂಬೋದರಗಳ (ಇಡೀ ದಿನ ಕುರ್ಚಿಯ ಮೇಲೆ ಕುಳಿತು ಗಣಕ ಯಂತ್ರ ಕುಟ್ಟಿದರ ಫಲ )ಸಂಖ್ಯೆ ಎಲ್ಲೆಡೆ  ಕಂಡು ಬರುತ್ತಿದೆ. ಇಂಥಹ ಲಂಬೋದರಗಳ ನಡುವೆ ದಿನದ 24 ಘಂಟೆ ಒದ್ದಾಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ''ಸಮಯಕ್ಕೇ ಸಮಯವಿಲ್ಲದ'' ಪರಿಸ್ಥಿತಿ ಬಂದಿದೆ.

ಹಾಗಾದ್ರೆ ಸಮಯ ಎಲ್ಲಿ ಹೋಯಿತು ಎಂಬುದರ ವಿಶ್ಲೇಷಣೆ ಅಗತ್ಯ ಅಲ್ಲವೇ? ದಿನದ 24 ಘಂಟೆಗಳನ್ನು  ಮನುಷ್ಯ ನ ದಿನಚರಿ ನೋಡಿ ಮಾಡಲಿಲ್ಲ. ಇಂದು 24 ಘಂಟೆ, ನಾಳೆ 26 ಘಂಟೆ ಎಂದು ಬದಲಿಸಲು. ಅವು ಜಗತ್ತಿನ ಪ್ರತಿಯೊಂದು ಜೀವಿಗೂ ಒಂದೇ ತೆರನಾಗಿದೆ. ಆದರೆ ಅದೇ 24 ಘಂಟೆಗಳನ್ನೇ ಉಪಯೋಗಿಸಿಕೊಂಡು ಅಸಾಮಾನ್ಯವಾದುದನ್ನು ಸಾಧಿಸಿದ ಸಾಮಾನ್ಯ ಮನುಷ್ಯರ ಜೀವನ ಗಾಥೆ ನಮಗೊಂದು ನೀತಿ ಪಾಠ ಅಲ್ಲವೇ? ಅವರಿವರ್ಯಾಕೆ? ನಮ್ಮವರೇ ಆದ ನೆಚ್ಚಿನ ಬರಹಗಾರ ರವಿ ಬೆಳೆಗೆರೆ ಅವರನ್ನೇ ತೆಗೆದುಕೊಳ್ಳಿ. 24 ಘಂಟೆಗಳಲ್ಲಿ ಅದೆಷ್ಟೊಂದು ಕೆಲಸ ಮಾಡುತ್ತಾರೆ. ಟಿ.ವಿ ಸಿರಿಯಲ್ಲುಗಳು, ಬೆಳಗಿನ ರೆಡಿಯೋ ಕಾರ್ಯಕ್ರಮ, ನಂತರ ಹಾಯ್ ಬೆಂಗಳೂರಿಗೆ ಲೇಖನ, ರಾತ್ರಿ   Crime Story, ಕಥೆ ಕವನಗಳ ಬಿಡುಗಡೆ ಸಮಾರಂಭ, ಸಾಲದೆಂಬಂತೆ ಅಸಂಖ್ಯಾತ ಪುಸ್ತಕಗಳ ಪ್ರಕಟಣೆ, ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ, ಒಂದೇ ಎರಡೇ, ಯಾವುದನ್ನೂ ತಪ್ಪಿಸುವಂತಿಲ್ಲ. ವಿಶ್ರಾಂತಿ ನೋ ಚಾನ್ಸ್.

ಅವರ ನೋಡಿ ನನಗೆ ಅನ್ನಿಸಿದೆ, ಅದೇಗೆ ಸಮಯವನ್ನು ಅವರು ಅಷ್ಟೊಂದು ಕರೆಕ್ಟ್ ಆಗಿ ಉಪಯೋಗಿಸ್ಕೊಳ್ಳುತ್ತಾರೆ ಎಂದು. ನಾವು ನಮ್ಮ ಮನಸ್ಸನ್ನು ಅಡ್ಜಸ್ಟ್ ಮಾಡಿಕೊಂಡು ಬಿಟ್ಟಿದ್ದೇವೆ ''ದಿನದ 24 ಘಂಟೆಗಳು  ನಮಗೆ ಸಾಕಾಗುವುದಿಲ್ಲ, ಆದ್ದರಿಂದ ನಾವು ನಮ್ಮ ಕೆಲಸಗಳನ್ನು ಮುಗಿಸಲು ಆಗುವುದಿಲ್ಲ'' ಎಂದು. ಮೊನ್ನೆ ಮೊನ್ನೆ ಬ್ಲಾಗ್ ಬರೆಯದ, ಬ್ಲಾಗ್  ಓದದ ಸ್ನೇಹಿತರೊಬ್ಬರು ಕೇಳಿದರು, ''ನಿಮಗೆ ಆಫೀಸ್ ನಲ್ಲಿ ಮಾಡಲು ಕೆಲಸ ಇಲ್ಲವೇ? ಯಾವಾಗಲು ಬ್ಲಾಗ್ ಬರೆಯುತ್ತಿರಲ್ಲ? ಎಂದು''. ಅವರ ಪ್ರಕಾರ ಬ್ಲಾಗ್ ಎನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಎಂಬುದಾಗಿ. ಸಮಯದ ಪರಿಕಲ್ಪನೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಮಾತಾಡಬಲ್ಲ. ತಾನೊಬ್ಬನೇ ಕೆಲಸ ಮಾಡುತ್ತಿದ್ದೇನೆ, ತಾನೊಬ್ಬನೇ ದೇಶದ ಉದ್ಧಾರ ದ ಹೊಣೆ ಹೊತ್ತಿದ್ದೇನೆ, ಉಳಿದವರೆಲ್ಲ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಎಂಬ ಉಡಾಫೆಯ ಧೋರಣೆಯ ಜನರ ಮಾತುಗಳು ಬೇಸರ ತರಿಸುವುದಿಲ್ಲ ಬದಲಿಗೆ ಅವರ ಬಗೆಗೆ ಅತೀವ ಕನಿಕರ ಮೂಡಿಸುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಸಮಯವೇ ಸಿಗದ ಸ್ಥಿತಿ ನೋಡಿ ನಿಜಕ್ಕೂ ದು:ಖ ವಾಗುತ್ತದೆ. ಅವರ ಪ್ರಕಾರ ವಿದೇಶದವರು ಸುಮ್ಮನೆ ನಮ್ಮನ್ನು ಕರೆದುಕೊಂಡು ಬಂದು ಕುರ್ಚಿಯಲ್ಲಿ ಕೂರಿಸಿ ಧರ್ಮಕ್ಕೆ ಸಂಬಳ ಕೊಡುತ್ತಾರೆ ಎಂಬುದಾಗಿ. ಸಮಯ ಎಲ್ಲರಿಗೂ ಒಂದೇ ತೆರನಾಗಿದೆ, ಕೆಲಸವೂ ನಮ್ಮ ಜಾಣ್ಮೆ ಯಲ್ಲಿದೆ. ಒಬ್ಬ ಅಂಬಾನಿಗೆ,  ಸಿಕ್ಕ ಸಮಯದಲ್ಲಿಯೇ ಅಷ್ಟೊಂದು ಸಾಧನೆ ಮಾಡಲು ಸಮಯವಿದೆ ಎಂದಾದರೆ ನಮಗೆ ಯಾಕೆ ಸಾದ್ಯವಿಲ್ಲ. ಅವರೆಲ್ಲ ''ಇಂದೇ ಕೊನೆಯ ದಿನ'' ಎಂಬಂತೆ ಬದುಕನ್ನು ತಿಳಿದು ಸಮಯವನ್ನು ಸದುಪಯೋಗ ಪಡಿಸಿಕೊಂದಿದ್ದಕ್ಕೆ ಅವರು ಅಲ್ಲಿದ್ದಾರೆ, ನಾವು ಇಲ್ಲಿದ್ದಿವಿ.

 ಸಮಯವೇ ಇಲ್ಲದ ಸ್ಥಿತಿ ಎಲ್ಲೆಡೆ ತುಂಬಿ ಹೋಗಿದೆ, ಕಲಿಯುವ ಮಕ್ಕಳಿಗೆ ನಲಿಯಲು ಸಮಯವಿಲ್ಲ, ವಿಪರೀತ ಸ್ಪರ್ಧೆ ಅವರ ಸೃಜನಾತ್ಮಕ ವ್ಯಕ್ತಿತ್ವವನ್ನೇ ಕೊಂದು ಹಾಕುತ್ತಿದೆ. ಸದಾ ಗಣಕ ಯಂತ್ರದ ಮುಂದೆ ಕುಳಿತು ಆಡುವ ಅವರ ಸ್ಥಿತಿ ನೆನೆದು ಸಂಕಟ ಆಗುತ್ತದೆ. 
ಇನ್ನು ಪ್ರೇಮಿಗಳಿಗೆ ಪ್ರೀತಿಸಲು ಸಮಯವಿಲ್ಲ. ಸದಾ ಆಫೀಸ್ ಕೆಲದಲ್ಲಿಯೇ ಬ್ಯುಸಿ ಆಗಿರುವ ಅವರು ಕೇವಲ ಮೊಬೈಲ್ ಮೂಲಕ ಪ್ರೀತಿಸುತ್ತಿದ್ದಾರೆ.
 ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಮನೆಗೆ ಹೋಗಲು ಸಮಯವಿಲ್ಲ. ತಮ್ಮೆಲ್ಲ ಭಾವನೆಗಳನ್ನು ವಾರದ ಕೊನೆಗೆ ದೂಡುತ್ತಾರೆ. ಎಲ್ಲ ಭಾವನೆಗಳಿಗೆ ವಾರಾಂತ್ಯ ಉತ್ತರ ಅಲ್ಲವಲ್ಲ ಎಂಬ ನಗ್ನ ಸತ್ಯ ಅವ್ರಿಗೆ ಇನ್ನು ತಿಳಿದಿಲ್ಲ. ತಮಗೋಸ್ಕರ ಒಂದು ಜೀವ ಮನೆಯಲ್ಲಿ ಕಾಯುತ್ತಿದೆ ಎಂಬ ಸತ್ಯ ಗೊತ್ತಿದ್ದರೂ ವಿಪರೀತ ಸ್ಪರ್ಧಾತ್ಮಕ ಜಗತ್ತು ಮನೆಗೆ ಹೋಗಲು ಬಿಡುತ್ತಿಲ್ಲ. ಪುನಃ ಸಮಯವಿಲ್ಲ. ಭಾರತದಂಥ ಬೆಳೆಯುತ್ತಿರುವ ದೇಶಗಳಲ್ಲಿ ಅತೀ ವೇಗದ ಸ್ಪರ್ಧೆ ಮನುಷ್ಯನ ಮಾನಸಿಕ ಒತ್ತಡಗಳನ್ನು ಹೆಚ್ಚಿಸುತ್ತಿದೆ. ಮಿತಿ ಮೀರಿದ ಸಿಟ್ಟು, ಕೋಪ, ಅಸಹನೆ ಮಾನವನಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸಮಾಧಾನ ಪಡಲು ಸಮಯವೇ ಇಲ್ಲದ ಪರಿಸ್ಥಿತಿ ಇರುವಾಗ ತಂಗಾಳಿಯ ಜೊತೆ ಓಡಾಡುವ  ಅವಕಾಶವೆಲ್ಲಿ. 

''ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ, ಸುಳಿದಾಡಬೇಡ ಗೆಳತಿ''

ಎಂದು ಹೇಳಲೂ ಸಮಯವಿಲ್ಲದ ಸನ್ನಿವೇಶ ನಿರ್ಮಾಣವಾಗಿದೆ.

 ಪರಿಸ್ಥಿತಿ ಎಷ್ಟೊಂದು ಮಿತಿ ಮೀರಿದೆ ಎಂದರೆ ಹೆತ್ತವರ ಮಾತನಾಡಿಸಲು ನಮಗೆ ಸಮಯವಿಲ್ಲ. ಜೀವನದ ಕೊನೆಯ ಕ್ಷಣ ಗಳನ್ನು   ನೋಡುತ್ತಿರುವ ಅದೆಷ್ಟೋ ಪಾಲಕರು ತಮ್ಮ ಮಕ್ಕಳನ್ನು ನೋಡಲು ಹಂಬಲಿಸುತ್ತಾರೆ. ಆದರೆ ಸಮಯ ಇಲ್ಲದ ಮಕ್ಕಳು ದಿನೇ ದಿನೇ ಮುಂದುಡುತ್ತಾ ಕೊನೆಗೆ ಪಾಲಕರ ಚಿತೆಗೆ ಅಗ್ನಿ ಸ್ಪರ್ಶ ಮಾಡಲು ಸಮಯ ಸಿಗಲಿಲ್ಲ ಅನ್ನುತ್ತಾರೆ. ''ಮನಸಿದ್ದಲ್ಲಿ ಮಾರ್ಗವಿದೆ''. ಸಮಯದ ಉಪಯೋಗ ತಿಳಿಯಬೇಕಷ್ಟೆ.

ಇಲ್ಲದಿರೆ
ಜಾನೆ ಕಹಾ ಗಯೇ ವೋ ದಿನ, ಕಹತೇ ತೆ ತೆರಿ ರಾಹ್ ಮೇ....

ಎನ್ನುವಂತಾಗುತ್ತದೆ ನಮ್ಮ ಬದುಕು. 

ಇತ್ತೀಚಿನ ದಿನಗಳಲಿ ಓದುವ ಗೀಳು ಬಿಟ್ಟೆ ಹೋಗುತ್ತಿದೆ. ಪುಸ್ತಕಗಳನ್ನು ಓದಲು ಯಾರಿಗೂ ಸಮಯವಿಲ್ಲ. ಏನೇ ಹೇಳಿ, ಗೂಗಲ್ ಮಾಡಿ ತಿಳಿದುಕೊಳ್ಳುವ ತವಕ, ಆದರೆ ಸುಂದರ ಬರಹಗಳ, ಕಾದಂಬರಿಗಳ ಓದುವ  ವ್ಯವಧಾನ ಇಲ್ಲವೇ ಇಲ್ಲ. ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಎಂದಿಗೂ ಬಸ್ ನಲ್ಲಿ ಶಾಲಾ, ಕಾಲೇಜುಗಳಿಗೆ ಆಗಲಿ, ಆಫೀಸ್ ಗೆ ಆಗಲಿ ಹೋದವನು ಅಲ್ಲ. ಆಫೀಸ್ ಹತ್ತಿರವೇ ಮನೆ ಬಾಡಿಗೆ ತೆಗೆದುಕೊಳ್ಳುವ ದುರಭ್ಯಾಸ ಮೊದಲಿನಿಂದಲೂ ಇದೆ. ಆದರೆ ಕಳೆದ 6 ತಿಂಗಳಿನ ಹಿಂದೆ ಆಫೀಸ್ ನ ಹತ್ತಿರ ಮನೆ ಮಾಡುವ ದುರಭ್ಯಾಸ ಹೆಂಡತಿಗೂ ಬಂದಿದ್ದರಿಂದ ಅನಿವಾರ್ಯವಾಗಿ ಮನೆ ಬದಲಿಸುವ ಪರಿಸ್ಥಿತಿ ಬಂತು. ಅವಳ ಆಫೀಸ್ ನ ಹತ್ತಿರ ನಾವು ಮನೆ ಮಾಡಿದ್ದರಿಂದ ನನಗೆ ಸುಮಾರು 15 ಕಿ ಮೀ ಬಸ್ ನಲ್ಲಿ ಪ್ರಯಾಣಿಸಬೇಕಾದ ಸನ್ನಿವೇಶ ನಿರ್ಮಾಣ ಆಯಿತು. ಬಹುಷ: ಬಸ್ ನಲ್ಲಿ ಪ್ರಯಾಣಿಸಬೇಕಾದರೆ ಎಷ್ಟೊಂದು ಕಷ್ಟ ಆಗುತ್ತದೆ ಎಂಬುದನ್ನು ನನಗೆ ತಿಳಿಸಲು ನನ್ನ ಮಡದಿ ಮಾಡಿದ  ಉಪಾಯವೂ ಇದ್ದಿರಬಹುದು :)
ಹೇಗಪ್ಪ ಬಸ್ ನಲ್ಲಿ ಪ್ರತಿ ದಿನ ಹೋಗುವುದು ಎಂಬ ದುಗುಡ ಬೇರೆ. ಬಸ್ ಕಾಯಬೇಕು, ಇಲ್ಲಿನ ಕೊರೆಯುವ  ಚಳಿಗೆ ಬಸ್ ಕಾಯುವ ದಿದೆಯಲ್ಲ, ಅದು ನನ್ನ ಶತ್ರುವಿಗೂ ಬೇಡಾ. ಬೀಸುವ ಗಾಳಿ, ಸುರಿಯುತ್ತಿರುವ ಹಿಮ ಮಳೆ, ಜಾರುತ್ತಿರುವ ರಸ್ತೆಗಳು, ಮೈ ಮೇಲೆ ಹೊದ್ದ 3-4 ಸ್ವೆಟರ್  ಗಳು, ತಲೆಗೆ ಟೊಪ್ಪಿ, ಕೈಗೆ ಗ್ಲೌಸ್ ಅಯ್ಯೋ, ಬೇಡಪ್ಪ ಬೇಡ. ಇದನ್ನೆಲ್ಲಾ ನೆನಪು ಮಾಡಿಕೊಂಡು ದೇವರಿಗೆ ಒಂದು ದೀಪ ಹಚ್ಚಿ ಬಸ್ ಹಿಡಿದು ಆಫೀಸ್ ಹೋಗುವ ಮೊದಲ ಯಾನಕ್ಕೆ ಮಾನಸಿಕವಾಗಿ ಸಿದ್ದವಾದೆ. ಹೆಂಡತಿ ಬಂದು Dan Brown ಅವರ ಹೊಸ ಕಾದಂಬರಿ ''The Lost Symbol'' ಕೈಗೆ ಕೊಟ್ಟು ಹೇಳಿದಳು ''ಇದನ್ನು ಬಸ್ ನಲ್ಲಿ ಓದುತ್ತ ಹೋಗಿ, ಸಮಯದ ಹಿಂದೆ ನೀವು ಓಡುತ್ತಿರಿ'' ಎಂದು. ಉಪಾಯವೇನೋ ಅಪಾಯವಿಲ್ಲದಂತೆ ತೋರಿತು. ಆದರೆ ಬಸ್ ಹತ್ತಿದಾಗ ಹೊಳೆಯುವ ಮೊದಲ ಕೆಲಸ ''ನಿದ್ದೆ'' ಮಾಡುವುದು. ನಾನು ಬೆಂಗಳೂರಿನ ಬಸ್ ಹತ್ತಿದಾಗ ಇಷ್ಟ ಪಡುವುದು ಅದನ್ನೇ. ಎಷ್ಟೊಂದು ಟ್ರಾಫಿಕ್ , ಸಿಗ್ನಲ್ ಗಳು, ಕನಿಷ್ಟವೆಂದರೂ ಒಂದು ಘಂಟೆ ಪ್ರಯಾಣ ಗ್ಯಾರಂಟೀ. ಆರಾಮವಾಗಿ ನಿದ್ದೆ ಮಾಡಬಹುದಲ್ಲ ಎನ್ನುವ ದೂರಾಲೋಚನೆ. ಹಾಗಾಗಿ ಬೆಂಗಳೂರು ಟ್ರಾಫಿಕ್ ಬಗ್ಗೆ No Comments.
ಹೆಂಡತಿ ಪುಸ್ತಕ ಕೊಟ್ಟಾಗ ''ನಿದ್ರಾ ದೇವಿಯ ತೆಕ್ಕೆಗೆ ಬೀಳುವ ನನಗೆ ಸರಸ್ವತಿಯ ಒಲಿಸಿಕೊಳ್ಳುವ'' ಹೆಚ್ಚುವರಿ ಖಾತೆಯೂ ಬಂದು ಸೇರಿದಂತೆ ಆಯಿತು. ನಮ್ಮ ರಾಜಕಾರಣಿಗಳಾದರೆ  ಬಿಡಿ '' 4-5 ಖಾತೆಗಳನ್ನು ಸಲೀಸಾಗಿ ತೆಗೆದುಕೊಂಡು ಆ ಖಾತೆಗಳಲ್ಲಿ ಯಾವ ಸಣ್ಣ ಕಂಡಿಯನ್ನು ಬಿಡದೆ ಗುಡಿಸಿ ಗುಂಡಾಡಿ ಬಿಡುತ್ತಾರೆ''. ನಾವು ಹುಲು ಮಾನವರು, ಹಾಗಾಗಿ ಮೊದಲ ದಿನ ಕೇವಲ 5 ಪೇಜು ಗಳನ್ನು ಓದಲು ಹರ ಸಾಹಸ ಪಟ್ಟೆ. ಹಾಗೆಂದು ಪುಸ್ತಕ ಓದುವುದು ನನಗೆ ತುಂಬಾ ಇಷ್ಟ. ಆದರೆ ಬಸ್ ನಲ್ಲಿ ಓದುವ ಪ್ರವೃತ್ತಿ ಇರಲಿಲ್ಲ. ಇನ್ನು Dan Brown ಅವರ ಕಾದಂಬರಿಗಳಲ್ಲಿ ಮೊದಲ 50 ಪೇಜುಗಳಲ್ಲಿ ವಿಪರೀತ ವಿಷಯ ತುಂಬಿ ನಮ್ಮ ತಲೆಯನ್ನು  mixer    ನಂತೆ ತಿರುಗಿಸಿಬಿಡುತ್ತಾರೆ. ಹಾಗಾಗಿ ಅಂತೂ ಕಷ್ಟ ಪಟ್ಟು 50 ಪೇಜು ಮುಗಿಸಿದೆ, ನಂತರ 550 ಪೇಜು ಗಳ ಹೇಗೆ ಮುಗಿದವೆಂದೆ ತಿಳಿಯಲಿಲ್ಲ. ಬಸ್ ಗೆ ಹೋಗಲು ಹಾತೊರೆಯುತ್ತಿದ್ದೆ. ಬಸ್ ತಪ್ಪಿದರೂ ಮನದಲ್ಲೇ ಸಂತಸ. ಒಂದೊಂದು ಕ್ಷಣವನ್ನು ಹಾಳು ಮಾಡದೆ ಸಮಯದ ಸದುಪಯೋಗ ಪಡಿಸಿಕೊಂಡು ಆ ಮಹಾನ ಕಾದಂಬರಿ  ಓದಿ ಮುಗಿಸಿದೆ. ಅದಾದ ನಂತರ 2-3 ಕಾದಂಬರಿ  ಬಸ್ ನಲ್ಲಿ ಓದಿದ್ದೇನೆ. ಇದರಿಂದ ನನಗೆ ತಿಳಿದಿದ್ದು ಇಷ್ಟೇ. ಸಮಯ ನಮ್ಮಲ್ಲೂ ಇದೆ, ಆದರೆ ನಾವು ಸುಮ್ಮನೆ ಬ್ಯುಸಿ ಬ್ಯುಸಿ ಎನ್ನುತ್ತೇವೆ. ಮನಸ್ಸು ಮಾಡಿದರೆ ಎಷ್ಟೊಂದು ಕೆಲಸ ಮಾಡಬಹುದು ಎಂದು.

ಹೊಸ ವರ್ಷ ಬರುತ್ತಿದೆ, ಹಳೆಯ ವರ್ಷ ಸವಿ ನೆನಪುಗಳೋ, ಕಹಿ ನೆನಪು ಗಳೋ, ಒಟ್ಟಿನಲ್ಲಿ ಮತ್ತೊಂದು ವರ್ಷ ಎದುರಿಗಿದೆ. ಹೊಸ ಆಲೋಚನೆಗಳು, ಹೊಸ ಸಂಕಲ್ಪಗಳು ಇದ್ದಿದ್ದೆ. ಬೆಳಿಗ್ಗೆ ಬೇಗನೆ ಇನ್ನು ಮೇಲೆ ಏಳಬೇಕು, ಎದ್ದು ಒಂದರ್ಧ ಘಂಟೆ ವ್ಯಾಯಾಮ, ಜಾಗ್ಗಿಂಗ್ ಮಾಡಬೇಕು. ಅಮ್ಮನಿಗೆ ಮನೆ ಕೆಲಸಕ್ಕೆ ನೆರವಾಗಬೇಕು, ಆಫೀಸ್ ನಲ್ಲಿ ಹೆಚ್ಚು ಸಮಯ ಹಾಳು ಮಾಡದೇ ಬೇಗ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರ ಜೊತೆ ಸಮಯ ಕಳೆಯಬೇಕು. ಎಂಬಂಥ ಸಂಕಲ್ಪಗಳೂ ಸಂಕಲ್ಪಗಳಾಗೆ ಉಳಿದಿರುತ್ತವೆ ಎಂಬುದು ನನಗೂ ಗೊತ್ತು, ನಿಮಗೂ ಗೊತ್ತು.

                          ಕೆಲವೊಮ್ಮೆ ಎಂಥಹ ಸಂಕಲ್ಪ ಮಾಡಿರುತ್ತೇವೆ ಎಂದರೆ''ಹೊಸ ವರ್ಷದಲ್ಲಿ ಪ್ರತೀ ವಾರ ದೇವಸ್ಥಾನಕ್ಕೆ ತಪ್ಪದೆ ಹೋಗುತ್ತೇನೆ, ಪೂಜೆ ಹವನ, ಮಾಡಿಸುತ್ತೇನೆ'' ಎಂಬ ಸಂಕಲ್ಪಗಳು. ಹೊಸ ವರ್ಷದಲ್ಲಾದರೂ ಇಂಥಹ ನಂಬಿಕೆಗಳನ್ನು ಬಿಡೋಣಾ.

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ
ಗುರುತಿಸದಾದೆನು ನಮ್ಮೋಳಗೆ

ನಮ್ಮ ಮನದಲ್ಲೇ ಇರುವ ದೇವರ ಆರಾಧನೆ ಬಿಟ್ಟು ಪೂಜೆ, ಪುನಸ್ಕಾರ, ಹವನ, ಚಂಡಿ ಯಾಗ ಎಂಬ ಮಾತುಗಳು ಕೇಳಲು ಚೆಂದ. ಆದರೆ ನಮ್ಮ ಅನೇಕ ಕುಟುಂಬಗಳು ಇಂಥ ಮೂಡ ನಂಬಿಕೆಗಳಿಂದ ಬೀದಿಗೆ ಬಂದಿವೆ. ತಿನ್ನಲು  ಅನ್ನವಿಲ್ಲದಿದ್ದರೂ ಹೊನ್ನಿನ ಅಂಬಾರಿ ಮಾಡಿಸುವ ಹರಕೆಗಳನ್ನು ಯಾವ ದೇವರೂ ಇಷ್ಟ ಪಡುವುದಿಲ್ಲ. ಪರಸ್ಪರ ರಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಮಮತೆ ಸದಾ ತುಂಬಿದ್ದರೆ ಅದೇ ಗೋಕುಲ.

ಹೊಸ ವರ್ಷದ ಹೊಸ್ತಿಲಲ್ಲಿ ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನಸ್ಕರಾಗಿ ಹೆತ್ತವರನ್ನು, ಹೊತ್ತಿರುವ ಭೂಮಿಯನ್ನು ಕಾಪಾಡುವ ಸಂಕಲ್ಪ ಮಾಡೋಣ.

ಹೊಸ ವರ್ಷ ಸರ್ವರಿಗೂ ಒಳಿತನ್ನು ಮಾಡಲಿ

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 



ನಿಮ್ಮವ ಗುರು




Wednesday, December 22, 2010

ಹೃದಯದ ಪಿಸುಮಾತು ...

ಬದುಕಿನಲ್ಲಿ ಎಲ್ಲ ಕಡೆಯೂ ಸಂತಸ ಒದ್ದು ಕೊಂಡು ಬಿದ್ದಿರುವುದಿಲ್ಲ. ಅದೊಂದು ಹೂವಿನ ಮುಳ್ಳಿನ ಹಾಸಿಗೆ. ಮುಳ್ಳನ್ನು ಮೆಟ್ಟಿ ನೋವು ಸಿಕ್ಕಂತೆ  ಹೂವನ್ನು ಮುಟ್ಟಿ ನಲಿವು. ಎಂಥಹ ಸಮಯ ಬಂದರೂ ನಾವು ನಮ್ಮ ಹೆತ್ತವರ ಪ್ರೀತಿಯ ಮರೆಯಬಾರದು. ಕಷ್ಟಕಾಲದಲ್ಲಿ ಜೊತೆಗೆ ಬರುವ ಆತ್ಮೀಯ ಸ್ನೇಹಿತನ ಮಾತುಗಳು ಎಂದಿಗೂ ಪೂರಕ ಮತ್ತು ಪ್ರೇರಕ. ಕೆಟ್ಟ ನೆನಪುಗಳು ಬಾಳಿನ ಅರ್ಧ  ಸುಖವನ್ನೇ ತಿಂದು ಹಾಕುತ್ತವೆ. ನಾಳಿನ ಸುಂದರ ಬದುಕಿಗೆ ಕಾಯಬೇಕೆ ಹೊರತು ನಿನ್ನೆಯ ಕಹಿ ನೆನಪುಗಳಿಗೆ ಮರುಗುವುದಲ್ಲ. ಸಂಸಾರದಲ್ಲಿ ಸಮರಸ, ಬದುಕಿನಲ್ಲಿ ಸಂತಸ ಎರಡೂ ಮುಖ್ಯ. ಕೆಲವೊಮ್ಮೆ ನಮಗೆ ಇನ್ನೊಬ್ಬರ ಸಾಧನೆ ಸಹಿಸಲು ಅಸಾದ್ಯವಾಗುತ್ತದೆ. ಅವರ ಬಗೆಗೆ ಇಲ್ಲ ಸಲ್ಲದ ಆರೋಪ ಮಾಡಿ ಆದಷ್ಟು ಅವರನ್ನು ತುಳಿಯಲು ಪ್ರಯತ್ನ ಪಡುತ್ತೇವೆ. ನಮಗೆ ಇನ್ನೊಬ್ಬರು ಇಷ್ಟವಾಗದಿದ್ದರೆ ಅವರಿಂದ ದೂರವಿರಬೇಕೆ ಹೊರತು ಅವರನ್ನು, ಅವರ ಹೆಸರನ್ನು ಹಾಳು ಮಾಡುವುದಲ್ಲ. ಇನ್ನೊಬ್ಬರ ಮೇಲಿನ ಧ್ವೇಷ ನಮ್ಮನ್ನೇ ಕೊಲ್ಲುತ್ತದೆಯಷ್ಟೇ. ಈ ಮಣ್ಣಿನ ಋಣ ಎಲ್ಲಕ್ಕಿಂತ, ಎಲ್ಲರಿಗಿಂತ ದೊಡ್ಡದು. ಅದರ ಋಣ ತೀರಿಸುವ ಜವಾಬ್ದಾರಿ ಪ್ರತೀ ಒಬ್ಬರ ಕರ್ತವ್ಯ. ಜನನಿ ಮತ್ತು ಜನ್ಮಭೂಮಿಯ  ಮೇಲಿನ ಪ್ರೀತಿ ಇಮ್ಮಡಿಯಾಗುತ್ತ  ಬದುಕು ಹಸನ್ಮುಖಿ ಯಾಗಬೇಕು ಎಂಬುದೇ ಕವನ ಆಶಯ.   


ಮರೆಯುವ ಕ್ಷಣಗಳ ಬರೆದು ಇಡು
ಮನಸಿನ ಪುಟಗಳ ತೆರೆದು ಬಿಡು 

ಕಾಡುವ ನೆನಪ ಕೆದಕದಿರು
ಸಿಹಿನೆನಪಿನ ಜೊತೆಗೆ ಬಾಳುತಿರು

ಇನಿಯನ ಮಾತಿಗೆ ಮುನಿಯದಿರು
ಸಂಗಾತಿಯ ಕಣ್ಣಲಿ ಬದುಕನಿಡು

ಸ್ನೇಹಿತನ ಹಿತನುಡಿ ಸತತ ಇಡು
ಕುಹಕವ ಬಗೆವರ ದೂರವಿಡು

ಹೆತ್ತವರ ಪ್ರೀತಿಯ ಅಳಿಸದಿರು
ಹೊತ್ತಿರುವ ಜನನಿಯ ಮರೆಯದಿರು

ಚುಚ್ಚುತ ಮನಸನು ಕೊಲ್ಲದಿರು
ಇಷ್ಟವಾಗದಿರೆ ದೂರವಿರು

ನೊಂದವರ ನೋವಿಗೆ ಅಭಯವಿಡು
ಕಂಡರಿಯದ ಮಾತಿಗೆ ಮರುಗದಿರು

ಜನ್ಮಭೂಮಿಯನು ಬೆಳಗುತಿರು
ಋಣ ತೀರಿಸದೆ ತೊಲಗದಿರು

ಪಿಸುಮಾತಿದು ಹೃದಯದ ನೆನಪಲಿಡು
ಬದುಕಿನ ಪುಟಗಳ ಮುಚ್ಚದಿರು


Wednesday, December 15, 2010

ಧ್ವನಿಯೊಂದು ಕರೆಯುತಿದೆ...

ಹೆಣ್ಣಿಗೆ ತವರುಮನೆ ಎಂದರೆ ಸ್ವರ್ಗವಿದ್ದಂತೆ. ಅಲ್ಲಿ ಬರುವ ಎಲ್ಲ ಕಷ್ಟವನ್ನು ಅವಳು ಕಷ್ಟ ಅಂದುಕೊಳ್ಳುವುದೇ ಇಲ್ಲ. ಅದರಲ್ಲೂ ಮದುವೆಯಾಗಿ ವರುಷವಾದರೂ ತವರು ಮನೆಗೆ ಹೋಗದೆ ಗಂಡನ ಮನೆಯಲ್ಲಿ ಅತ್ತೆ-ಮಾವರ ಸೇವೆ ಮಾಡುತ್ತಾ, ಪತಿಯ ಸೇವೆ ಮಾಡುತ್ತಾ ಇದ್ದ ಹೆಣ್ಣಿಗೆ ಒಮ್ಮೆಲೇ ಊರಿಗೆ ಹಬ್ಬಕ್ಕೆ ಬಾ, ಎಂಬ ಅಣ್ಣನ ಕರೆಯೋಲೆ ಬಂದರಂತೂ ಸ್ವರ್ಗಕ್ಕೆ ಮೂರೇ ಗೇಣು. ಆ ಸಂದರ್ಭದಲ್ಲಿ ಅವಳಿಗೆ ಊಟ ರುಚಿಸದು, ಇನಿಯನ ಸನಿಹ ಬೇಡ, ಅತ್ತೆ ಮಾವರ ನೋಟವೂ ಬೇಡ. ಒಟ್ಟಿನಲ್ಲಿ ಅವಳಿಗೆ ತನ್ನ ತವರುಮನೆಯ ಚಿತ್ರಣವೇ ಎದುರಿಗಿರುತ್ತದೆ. ಅಲ್ಲಿ ತಾ ಆಡಿದ್ದು, ನಲಿದಿದ್ದು, ಅಪ್ಪ-ಅಮ್ಮರ ಮಡಿಲಲ್ಲಿ ಮುದ್ದು ಕಂದನಾಗಿ ಬೆಳೆದದ್ದು, ಗೆಳತಿಯರ ನಗು ಎಲ್ಲ ಕಣ್ಮುಂದೆ ಬಂದು ಯಾವಾಗ ತಾನು ತವರು ಸೇರುತ್ತೇನೆಯೋ ಎಂಬ ತವಕ ಅವಳಿಗೆ. ಅಂಥಹ ಹೆಣ್ಣಿನ ಮನದ ಭಾವನೆಗಳ ಅನಾವರಣ ಈ ಕವನದಲ್ಲಿದೆ.



ದೂರದ ಊರಿಂದ ಧ್ವನಿಯೊಂದು ಬರುತಲಿದೆ
ತಂಗಿ, ನೀ ಬಾ ಬಾರೆ, ಎಂದೆನ್ನ ಕರೆಯುತಿದೆ
ಕಳೆದು ಹೋಯಿತು ವರುಷ, ತವರೂರ ಆ ಹರುಷ
ಮರೆಯಲಾರೆನು ನಾನು, ಅನುಗಾಲ ನಿಮಿಷ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಅಣ್ಣನ ಒಡನಾಟ, ತಮ್ಮನೊಂದಿಗೆ  ಕಾಟ
ಅಕ್ಕನ ಜೊತೆಯಲಿ, ಕಳೆದ ಆ ಕ್ಷಣದೂಟ 
ತಂಗಿಯ ತೆಕ್ಕೆಯಲಿ, ಸರಸ ವಿರಸದ ಆಟ
ಗೆಳತಿಯರ ಒಡನಾಟ, ಗೆಳೆಯರ ಸವಿಮಾತ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಹೆತ್ತ ತಾಯಿಯ ನೋಟ, ಪಿತನ ಹಿತನುಡಿ ಪಾಠ 
ಸುತ್ತ ನೂರೆಂಟು ತರುಲತೆಗಳ ಮುದ್ದಾಟ
ಕೆಲಸದ ರಂಗಿಯ, ಕಿಲ ಕಿಲ ನಗುವಾಟ
ಹೊಲದಲ್ಲಿ ಬೆಳೆದ, ಭತ್ತದ ಸವಿನೋಟ
ಹಸಿರನ್ನೇ ಹೊತ್ತ, ಉಸಿರು ಅಡಿಕೆಯ ತೋಟ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಬೇಡವಾಗಿದೆ ಇಂದು, ಇನಿಯನ ಸರಸದ ಮಾತು
ಕಾಡತೊಡಗಿದೆ ನನಗೆ, ಅತ್ತೆ ಮಾವರ ಕಾಟ
ಮಡಿಲ ಸೇರುವ ತವಕ, ತವರ ಸೇರುವ ತನಕ
ಅಪ್ಪ-ಅಮ್ಮರ ಮಡಿಲ, ಕಂದನಾಗುವ ತನಕ
ದೂರದ ಊರಿಂದ, ಧ್ವನಿಯೊಂದು ಬರುತಲಿದೆ


Wednesday, December 8, 2010

ನೆನಪಾಯ್ತೆ ಇಂದು ...

ಸ್ವೀಡನ್ನಿನಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಹಿಮಮಳೆ ಆಗುತ್ತಿದೆ. ಎಲ್ಲಿ ನೋಡಿದರೂ ಹಿಮದ ರಾಶಿಯೇ ಬಿದ್ದಿದೆ. ಈ ಸಂದರ್ಭದಲ್ಲಿ ಹಿಮಗಳ ನಡುವೆ, ಸಂಗಾತಿಯೊಂದಿಗೆ ಮಲೆನಾಡಿನಲ್ಲಿ ಕಳೆದ ಕ್ಷಣಗಳ ನೆನಪು ಈ ಕವನದ ಹೂರಣ. ಇಲ್ಲಿನ ಹಿಮಗಳ ನಡುವೆ ಅಲ್ಲಿನ ಮಲೆನಾಡಿನ, ಸೌಂದರ್ಯದ, ತರು ಲತೆಗಳ ಮಧುಬನಗಳಲ್ಲಿ ಮನ ತೇಲಾಡಿದೆ. ಇರುಳಿನ ಸಂಜೆಯ ಹೊತ್ತಿನಲ್ಲಿ, ದೇವರಿಗೆ ಅಂಗನೆಯರು ದೀಪ ಬೆಳಗುವ ಹೊತ್ತಿನಲ್ಲಿ, ಚಂದ್ರಮನ ಆಗಮನದ ಹೊತ್ತಿನಲ್ಲಿ, ಮಧುರಗೀತೆಯ ನೆನಪು ಸುಳಿದಾಡಿದೆ. ಮೊನ್ನೆ ಡಿಸೆಂಬರ್ 6 ಕ್ಕೆ ಮದುವೆಯಾಗಿ 3 ವರ್ಷ ತುಂಬಿತು. ನನ್ನೊಂದಿಗೆ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ, ನೋವು ನಲಿವುಗಳಿಗೆ ಜೊತೆಯಾಗಿ ಉಸಿರಾದ ಬಾಳ ಸಂಗಾತಿ ಗೀತಾ ಳಿಗೆ ಬರೆದ ಕವನವಿದು.



ಮೆತ್ತನೆಯ ಮಲ್ಲಿಗೆಯೇ, ,ಮುತ್ತೊಂದ ಕೊಡುವೆ
ಮಾತಾಡು ಮಾತಾಡು, ಮಕರಂದ ಹೀರುವೆ
ಅಧರದಲಿ ಮಧುರಗೀತೆ, ಬರಲಿ ಎಂದೆಂದೂ 
ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 

ಮಲೆನಾಡ ಸಂಪಿಗೆ, ಮಧುಬನದ ಅಂಚಿಗೆ
ಮುಚ್ಚು ಮರೆ ಇಲ್ಲದೆ, ಮೊಂಬೆಳಕಿನ ಹೊತ್ತಿಗೆ 
ಮದನಾರಿ, ಶುಭಕೋರಿ, ಮುದ್ದಾಡುವೆ ಇಂದು
     ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 

ಬಾನಿನಲಿ ಹಾರ್ಯಾವ್ , ಹಕ್ಕಿಗಳ ದಂಡು
ಅಂಗನೆಯರು ಬೆಳಗಿಹರು, ದೀಪಗಳ ಬಂದು
ಇರುಳಾಯ್ತು ಚಂದ್ರಮನು, ಬರುತಾನೆ ಇಂದು
ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 


Tuesday, November 23, 2010

ಬರೆಯಲೆಂದು ಹೊರಟೆ ಬ್ಲಾಗ ವಿಷಯಕೆಲ್ಲ ಬೀಗ...



ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ರಾಜಕೀಯವೆಂಬ ವಿಷಯ, ಸದಾ ಜನರ ಬಾಯಲಿಹುದು
ಯಡ್ಡಿ ಅಣ್ಣ, ಕುಮಾರಣ್ಣನ ಬಗ್ಗೆ ಬರೆದೆನು
ಸಾಲು ಸಾಲು ಬರೆದೆ, ಪೇಜು ಪೇಜು ಕೊರೆದೆ
ಪಕ್ಕದಲ್ಲೇ ಇದ್ದ ಒಬ್ಬ, ಕೇಳಿಬಿಟ್ಟ ನನ್ನನು 
ಕೆಲಸವಿಲ್ಲವೇನು ನಿನಗೆ, ಬೇಕೇ ಇಂಥ ವಿಷಯ
ಪಾಳುಬಿದ್ದ ಗುಡಿಯೇ ಲೇಸು, ಹೊಲಸು ರಾಜಕೀಯ


ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಚಲನಚಿತ್ರವೆಂಬ ಮಾಯೆ, ಸದಾ ಗಾಸಿಪ್ , No ಚುಪ್ ಚುಪ್
ಬರೆಯ ಹೊರಟೆ, ತುಂಡು ಲಂಗ, ಬಿಪಾಶಾಳ ಬಗೆಗೆ
ನಡುವೆ ತಡೆದ ಮಿತ್ರನೊಬ್ಬ, ಬಿಪಾಶಾಳ ''ಪಾಶ'' ಬೇಡ,
ಬರೆಯಬೇಡ ಇಂಥ ವಿಷಯ, ಎಂದು ಹೋದ ಮಹಾಶಯ

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಪ್ರೀತಿಯೆಂಬ ಮೋಹದಲ್ಲಿ, ಸಿಲುಕಿ ಇರದೇ ಉಳಿದೋರ್ಯಾರು
ಇಂಥ ವಿಷಯಕಿಂತ ಬೇರೆ ವಿಷಯ ಎಲ್ಲಿದೆ
ಗೀಚಿ ಬಿಟ್ಟೆ ಪ್ರೇಮ ಕವನ ಗೆಳತಿ ನಿನ್ನ ಮೋಹ ಕುರಿತು
ಓದಿ ಬಿಟ್ಟ ಗೆಳೆಯ ನುಡಿದ, ನಿನ್ನ ತಲೆಯು ಎಲ್ಲಿದೆ?
ಪ್ರೇಮ-ಗೀಮ ಬರೆಯುತಿರುವೆ, ಕೆಲಸವಿಲ್ಲವೇನು ನಿನಗೆ
ಇದ್ದ ಸಮಯವನ್ನು ಯಾಕೆ ಹಾಳು ಮಾಡುವೆ?

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಬದುಕ ಸೊಗಸ ಬಿಟ್ಟು ಹೊರಟ, ತ್ಯಾಗಜೀವಿ ಬುದ್ದ ದೇವ 
ಅವನ ಬಗ್ಗೆ ಯಾರಿಗಿಲ್ಲ ಪ್ರೇಮ-ಅಕ್ಕರೆ
ಬೆಳಗುತಿರುವ ಜಗದಿ ಬೆಳಕ, ಬರೆದೆ ಬಿಟ್ಟೆ ಎಂಥ ಪುಳಕ
ಕೊಂಕು ನುಡಿಯ ನುಡಿದು ಬಿಟ್ಟ ಮಿತ್ರ ಮೆಲ್ಲಗೆ
''ಮಡದಿ ಜೊತೆಗೆ ಜಗಳವೇನು? ಕೋಪವೇನು? ತಾಪವೇನು?
ಸರಸ-ವಿರಸ ಬಾಳಿನೆರಡು ಚಕ್ರ ಅಲ್ಲವೇ?
ಸುಮ್ಮನೇಕೆ ಬರೆವೆ ನೀನು? ಬದುಕು ನಿನಗೆ ಭಾರವೇನು?
ಬರೆದರೊಮ್ಮೆ ಇಂಥ ವಿಷಯ, 
ಹೊಡೆದು ಬಿಡುವೆನೆಂದನು''

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಥತ್ ಎಂದು ತಲೆಯ ಕೆರೆದು, ಬರೆದೆ ನನ್ನ ಸಂಶೋಧನೆಯ ಬಗೆಗೆ
ಹಾಕಲೆಂದು ಹೋದೆ ನಾನು, ಇಂದು ಬ್ಲಾಗಿಗೆ
ಅದನು ಓದಿ ನುಡಿದ ಗೆಳತಿ
''ಅಂದು ತೀರಿ ಹೋದ ಗಾಂಧಿ, ಇಂದು ಹುಟ್ಟಿ ಬಂದನು
ಸದಾ ನಿನ್ನ ಸಂಶೋಧನೆ , ಬಿಟ್ಟು ಹೊರಗೆ ಬಂದು ನೋಡು,
ಜಗದ ತುಂಬಾ ಹಸಿರು ತುಂಬಿ,
ಮನವ ಸೆಳೆಯುತಿರುವುದು''

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಹುಡುಕುತಿರುವೆ ವಿಷಯ ನಾನು
ಹೊಳೆಯಲಿಲ್ಲ ಏನೂ
ಬರೆದರೊಂದು ಕೊಂಕು ಜನರ ಬಾಯಲಿರುವುದು 
ಬಿಟ್ಟು ಅವರ ಬದುಕಲಾರೆ, ಅವರ ಬಿಟ್ಟು ಬಾಳಲಾರೆ 
ಧೈರ್ಯ ಮಾಡಿ ಕವನ ಒಂದು ಹಾಕುತಿರುವೆನು

    
ಸ್ನೇಹಿತರೆ, ಬಹಳ ದಿನಗಳಿಂದ ಕೆಮ್ಮು, ಜ್ವರ, ಜೊತೆಗೆ ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಬ್ಲಾಗ್ ಕಡೆಗೆ ಬರಲಾಗಲಿಲ್ಲ. ಹಾಗೆಯೇ ನಿಮ್ಮೆಲ್ಲರ ಬ್ಲಾಗ್ ಓದಲು ಆಗಲಿಲ್ಲ, ಅದಕ್ಕೆ ಕ್ಷಮೆ ಇರಲಿ
ಮತ್ತೆ ಎಂದಿನಂತೆ ಬ್ಲಾಗ್ ಓದುವ ಓದುಗನಾಗುತ್ತೇನೆ.
ಪ್ರೀತಿ ಇರಲಿ
ನಿಮ್ಮವ
ಗುರು 

Sunday, November 7, 2010

ಸಿಹಿಸುದ್ದಿಯೊಂದ ಕೊಡುವೆ ನಿಮಗೆ...

ಆತ್ಮೀಯ ಸ್ನೇಹಿತರೆ,
ಕನ್ನಡದ ಪ್ರೇಮಕವಿ ಕೆ ಎಸ ನರಸಿಂಹ ಸ್ವಾಮಿಯವರ ಹೆಸರಿನಲ್ಲಿ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ನನ್ನೆರಡು ಕವನಗಳಿಗೆ ''ರಾಜ್ಯಮಟ್ಟದ ಕೆ ಎಸ ಏನ್ ನೆನಪಿನ ಪ್ರೇಮಕವಿ ಪುರಸ್ಕಾರ'' ಪ್ರಶಸ್ತಿ ಲಭಿಸಿದೆ ಎನ್ನಲು ಸಂತಸವೆನಿಸುತ್ತದೆ.
ಸ್ಪರ್ಧೆ ನಡೆಸಿದ ನಮ್ಮೆಲ್ಲರ ಪ್ರೀತಿಯ ಸಾಧಕ ಭೇರ್ಯ  ರಾಮಕುಮಾರ್ ಅವರಿಗೆ ಹಾಗೂ ಅವರ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗಕ್ಕೆ ನಾನು ಅಭಾರಿ.
ನನ್ನನ್ನು ಪ್ರೋತ್ಸಾಹಿಸಿದ ನಿಮಗೆಲ್ಲ ಚಿರಋಣಿ.
ಮತ್ತೆ ಮುಂದಿನ ವಾರ ಹೊಸ ಲೇಖನದೊಂದಿಗೆ ಬರುತ್ತೇನೆ
ಗುರು 

Sunday, October 31, 2010

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಆತ್ಮೀಯ ಕನ್ನಡಿಗರೇ,


ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು


ಕನ್ನಡ ಉಸಿರಾಗಲಿ, ಕನ್ನಡ ಬದುಕಾಗಲಿ, ಕನ್ನಡ ಜೀವನವಾಗಲಿ 


ಸಿರಿಗನ್ನಡಂ ಗೆಲ್ಗೆ 

Thursday, October 14, 2010

ಬಚ್ಚಿಡದೆ ಬಿಚ್ಚಿಟ್ಟಿಹೆ..

ಪ್ರೀತಿ ಎಲ್ಲಿ ಯಾವಾಗ ಹುಟ್ಟುತ್ತದೋ ಬಲ್ಲವರು ಯಾರು. ಹರೆಯದ ಮನಸುಗಳ ಮುಗ್ಧ ಪ್ರೀತಿ, ಬದುಕಿನ ಸುಂದರ ಕ್ಷಣಗಳಲ್ಲೊಂದು. ಇಲ್ಲಿ ಪ್ರೇಮಿಕೆಯ ಪ್ರೇಮದಲ್ಲಿ ಶರಣಾದ ಪ್ರೇಮಿ, ತನ್ನ ಪ್ರಿಯತಮೆಯ ಸೌಂದರ್ಯದ ಅನಾವರಣ ಮಾಡುತ್ತಿದ್ದಾನೆ. ಆತ ಅವಳನ್ನು ಹೊಗಳುತ್ತಿಲ್ಲ ಬದಲಿಗೆ ಅವಳ ಸ್ನಿಗ್ಧ ಸೌಂದರ್ಯಕೆ ಸಾಕ್ಷಿಯಾಗುತ್ತಿದ್ದಾನೆ. ಆತನಿಗೆ ಅವಳ ಸೌಜನ್ಯ, ಸಲ್ಲಾಪ, ಸವಿಗನಸು ಕಾಣುವಂತೆ ಮಾಡಿದೆ. ಪ್ರೇಮದ ಮತ್ತಿನಲ್ಲಿ ಬಾಯಾರಿಕೆ ಆಗಿದೆ. ಇದಕ್ಕೆ ನೀರು ಪರಿಹಾರವಲ್ಲ. ಪ್ರೇಮಿಕೆಯ ಅಧರದ ಪಾನಕ್ಕೆ ಆತ ಕಾದಿದ್ದಾನೆ. ಅದೊಂದು ನಿಷ್ಕಲ್ಮಶ: ಪ್ರೀತಿ. ಕಾಮಕ್ಕೆ ಅಲ್ಲಿ ಜಾಗವೇ ಇಲ್ಲ. ತನ್ನ ಬದುಕಿನ ಎಲ್ಲ ಸತ್ಯಗಳನ್ನು, ರಹಸ್ಯಗಳನ್ನು ಬಚ್ಚಿಡದೆ ಆತ ಬಿಚ್ಚಿಟ್ಟಿದ್ದಾನೆ. ದೂರದಲ್ಲೆಲ್ಲೋ ಮಾಮರದಲಿ ಆತನಿಗೆ ಕೋಗಿಲೆಗಳ ಸದ್ದು ಕೇಳುತ್ತಿದೆ. ಹೌದು, ಸಂಗಾತಿಯ ಸಂಪ್ರೀತಿಗೆ ವಸಂತ ಕಾಲ ಸಜ್ಜಾಗಿದೆ. ಆ ಮೋಹಕ ಘಳಿಗೆಗೆ ಆಕೆಯ ಸೆಳೆಯಲು ಮದನನ ಮೋಹಕ ಬಾಣವನ್ನೇ ಅವಳಿಗೆ ಎಸೆದಿದ್ದಾನೆ. ಗೋಪಿಕೆಯರ ಆರಾದ್ಯ ದೈವ ಗೋಪಿನಂದನ ಕೊಳಲ ನಾದಕ್ಕೆ ಮೋಹಕ ಮುತ್ತಿನ ನೆನಪು ಆತನಿಗೆ ಕಾಡಿದೆ. ಇದು ಕೇವಲ ಪ್ರೇಮವೇ? ಎರಡು ಮನಸುಗಳ, ಎರಡು ದೇಹಗಳ,ಅಮರ ಪ್ರೇಮ....


ನವಯವ್ವನ, ನಳನಳಿಸುವ, ನಲಿದಾಟದ ತರುಣ
ನಾಜೂಕಿನ, ನವೋ ನವದ, ನಿಗಿನಿಗಿಸುವ ತರುಣಿ
ನುಡಿದಂತೆ ನಾಲಿಗೆ, ನಡೆದಂತೆ ನಾಚಿಕೆ
ನಯನಗಳು ನಿಂತಲ್ಲಿ ನಿಲ್ಲದಿರೆ, ನೋಟಕೆ

ಸಂಗಾತಿಯೇ, ಸಂಪ್ರೀತಿಯೇ, ಸೌಮ್ಯೋಕ್ತಿಯ ಸೌಧ 
ಸೌಜನ್ಯದಿ, ಸಲಹುತಿರೆ, ಸುಶ್ರಾವ್ಯದ ನಾದ
ಸುದಿನವಿದು, ಸಜನಿ ನಿನಗೆ, ಸುಕುಮಾರನ ಸುಂದರಿ
ಸಲ್ಲಾಪದಿ, ಸವಿಗನಸಿದೆ, ಸೌಂದರ್ಯವ ಸವರಿ

ಬಳಲಿಕೆಯು, ಬಾಯಾರಿದೆ, ಬಳಿಗೆ ಬಾರೆ ಮಯೂರಿ
ಬೆದರದಿರು, ಬಳಿಯಲಿರು, ಬಿಡದೆ ನನ್ನ ನಾರಿ
ಬಚ್ಚಿಡದೆ ಬಿಚ್ಚಿಟ್ಟಿಹೆ, ಬದುಕಿನ ಬಟ್ಟಲ ಒಳಗೆ
ಬಂಗಾರಿಯೇ, ಬಿನ್ನಾಣವೇ, ಬದುಕಿನ ಘಳಿಗೆ 

ಮಾಮರದಲಿ ಸದ್ದಾಗಿದೆ, ಮರೆಮಾಚಿದೆ ಮೌನ
ಮಾಟಗಾರ, ಮಾತಿನಲ್ಲೇ, ಮಾರನ ಮೈ ಬಾಣ
ಮುದ್ದಾಡುವೆ ಮೆಲ್ಲನೆ, ಮೆಲುನಗೆಯಲಿ ಮೆತ್ತಗೆ
ಮೋಹನ ಮುರಳಿಯ ನಾದ, ಮೋಹಕತೆ ಮುತ್ತಿಗೆ

Thursday, September 23, 2010

ಹೂವುಗಳ್ ಅಂದಾವ .

 ಹೂವಿನ ಅಂದ ಆಕರ್ಷಿಸದ ಮನಗಳಿವೆಯೇ? ಬದುಕು ಹೂವಿನಂತೆ ಇದ್ದರೆ ಚೆಂದ ಎನ್ನುತ್ತಿರಾ? ಆದರೆ ಆ ಅರಳುವ ಮುಂಚಿನ ವೇದನೆ ಹೂವಿಗೆ ಮಾತ್ರ ಮೀಸಲು. ಸುಂದರ ಗುಲಾಬಿ, ಮುಳ್ಳಿನ ಜೊತೆಗೆ ಹುಟ್ಟಿ ನೋವು ನಲಿವುಗಳ ಚಿತ್ರಣಕ್ಕೆ ಸಾಕ್ಷಿಯಾಗುವಂತೆ ಬದುಕು ಕೂಡಾ.

                                    
 ಮುಗಿಲಿನ ಮುಟ್ಟುವ ತವಕವು ಯಾಕೆ? 
ನಿನ್ನಯ ಮೊಗವನು ಕದ್ದಾರು ಜೋಕೆ....

ಏನಿದು ನಿನ್ನಯ ರೂಪ, ಕರಗಿತು ಮನಸಿನ ಕೋಪ....

ಇನಿಯನ ಜೊತೆಯಲಿ ನಿನ್ನಯ ಆಟವೇ? ಚೆಲುವೆ ನೀ ಎಲ್ಲಿರುವೆ.....

ಬಣ್ಣದ ಚಿಟ್ಟೆಗೆ ಮಕರಂದದ ಚಿಂತೆ... ಹೂವಿಗೆ ತನ್ನೊಡಲ ಒಳಗಿರುವ ರಸವ ಉಣಬಡಿಸುವ ಆಸೆ...
ಈ ಸುಂದರ ತರುಲತೆಗಳ ಬ್ರಂದಾವನ ಲೀಲೆ....

ನಿನ್ನ ಪ್ರೇಮದಾಳದಲ್ಲಿ, ಮುಳುಗಿ ಹೋದ ಮೀನು ನಾನು....

ತನ್ನೊಳಗೆ ಜಗತ್ತನ್ನೇ ಸೆಳೆಯುವ ಅಪ್ರತಿಮ ಚೆಲುವೆ ಈಕೆ....
ಬಿರಿದ ಮಲ್ಲಿಗೆ ಹೂವ ನೆನಪು ಬಾರದೆ....

ನಿನ್ನ ಮೋಹಕತೆಗೆ, ಸೌಂದರ್ಯಕ್ಕೆ ಎಣೆಯುಂಟೆ  ...
ಚೆಲುವೆ ನೀನು ನಕ್ಕರೆ, ಬದುಕು ಬಾಳ ಸಕ್ಕರೆ...

ಮಕರಂದವ ಕುಡಿದು ಮರೆಯದಿರು ಎನ್ನ, ಬಾ ಇಲ್ಲಿ ಮತ್ತೊಮ್ಮೆ, ಕೊಡುವೆ ಮಕರಂದವನ...


ನಿಮ್ಮವ

ಗುರು ಬಬ್ಬಿಗದ್ದೆ

Monday, September 13, 2010

ಉರಿಸದಿರಲೆಂದೂ ನಿನ್ನ ಸಹನೆ...


ನೋವು ನಲಿವು ಬದುಕಿನ ಬಂಡಿಯ ಎರಡು ಚಕ್ರಗಳಿದ್ದಂತೆ. ನಲಿವೆಗೆ ನೂರೆಂಟು ಮಿತ್ರರು, ನೋವಿಗೆ ನೀನೊಬ್ಬನೇ ಮಿತ್ರ ಎಂಬ ಮಾತು ಅಕ್ಷರಶ: ಸತ್ಯ. ನೋವಿನಲ್ಲಿ ಜೊತೆಗೆ ಬರುವವರು ಮಾತ್ರ ನಿಜವಾದ ಮಿತ್ರರು. ಮನಸು ನೋವಿನಿಂದ ಆವ್ರತವಾದಾಗ, ಬದುಕು ಪಾತಾಳ ಸೇರಿದ ಅನುಭವ ಆಗುತ್ತದೆ. ಬದುಕಿನ ಬಗೆಗಿನ ಅಸಹನೆ ಎಂದಿಗೂ ನಿನ್ನ ''ಸಹನೆ'' ಯ ಕೆಣಕದಿರಲಿ. ನಿನ್ನ ನೋವುಗಳು ಕಲ್ಲ ಗೋಡೆಗೆ ಮಾತ್ರ ಕೇಳಿಸುತ್ತದೆ, ಅದನ್ನು ಅರಿತವರಿಗೆ  ಮಾತ್ರ ಅದರ ಅಗಾಧತೆ ಅರ್ಥವಾಗುತ್ತದೆ. ನೀನು ಒಲ್ಲೆ ಎಂದರೂ ವಿಶಾಲ ಬದುಕು ನಿನಗಾಗಿ ಕಾದಿದೆ, ಕಾಯುತಿದೆ, ಹೂವಿನಿಂದ ಪೊಕಳೆ ಉದುರಿತು ಎಂಬ ನೋವು ಬೇಡ, ಹೊಸ ಹೂವು ಅದೇ ಜಾಗದಿಂದ ಮೂಡುವುದು ಹಾಗೂ ಮೂಡಬೇಕು, ಅದೇ ಬದುಕು, ಅದೇ ಬಾಳು.

                                                                      ಚಿತ್ರ  ಕ್ರಪೆ: ಗೂಗಲ್ 

ನಿನ್ನ ನೋವುಗಳ ಮನದ ಭಾವಗಳ
ಆಗಸಕೆ ಹಾರಿಬಿಡು ನನ್ನ ಗೆಳತಿ
ಬೀಸೋ ಗಾಳಿಗೆ ಅದರ ವೇಗಕೆ
ಸುಟ್ಟು ಹೋಗಲಿ ಎಲ್ಲ , ಪ್ರೀತಿಯೊಡತಿ

ಸುತ್ತ ಹರಿಯುತಿದೆ ಆಳಕಿಳಿಯುತಿದೆ
ಭೂವ್ಯೋಮ ಪಾತಾಳ, ಎಲ್ಲ ಒಡನೆ
ಹಸಿವಿನ ಕಿಚ್ಚು, ಮೈಯ್ಯೊಳಗೆ ಹುಚ್ಚು
ಉರಿಸದಿರಲೆಂದೂ ನಿನ್ನ ಸಹನೆ
 
ಕಲ್ಲ ಗೋಡೆಯಲಿ, ಮೆಲ್ಲನುಸಿರುತಿರೆ
 ಬಲ್ಲ ಮನಸಿಗದು, ಕಬ್ಬಿಣದ ಕಡಲೆ
ಒಲ್ಲೆನೆಂದರೂ ಜೀವ, ಬಿಡಿಸಲಾಗದ ಭಾವ
ಇಲ್ಲೇ ಇರು ಎನ್ನುತಿದೆ ಮನದ ಪೊಕಳೆ

Monday, September 6, 2010

ಕಿಸ್ ಒಂದು ಮಿಸ್ ಆಯ್ತು,,,,,




ಮನಸೇಕೋ ಕಾಯುತಿದೆ ಬರಲಿಲ್ಲ ಅವಳು
ಮಿಸ್ಸಾಯ್ತು ಬಸ್ಸೆಂದು ಕಾರಣವು ಹಲವು
ಟುಸ್ಸ್ ಆಯ್ತು ಪ್ಲಾನ್ ಎಲ್ಲ ನೀ ಬರದೆ ಹೋದೆ
ಕಿಸ್ ಒಂದು ಮಿಸ್ ಆಯ್ತು, ಬಳಿಗೆ ನೀ ಬರದೆ


ಬಿಸಿಲೇಕೋ ಬಹು ಉರಿಯು, ಫ್ಯಾನಿಲ್ಲ ಇಲ್ಲಿ
ಬಾಯೆಲ್ಲ ಇಂಗೊಯ್ತು, ನೀರಿಲ್ಲದ ನಲ್ಲಿ
ಲಾಲ್ಬಾಗ್ನ ಒಡಲಲ್ಲಿ, ನಾ ಕಾಯ್ತಾ ಇರುವೆ
ಯಾಕ್ ಹಿಂಗೆ ಮಾಡ್ತಿ, ಓ ನನ್ನ ಒಲವೆ


 ಹಲ್ಲಿಲ್ಲದ ಕಡ್ಲೆ, ಆಯ್ತಲ್ಲೇ  ಚೆಲುವೆ
ವಿಲ್ ಬರಿದೆ ಸಾಯೋಕೆ, ಮನಸಿಲ್ವೆ ಹೂವೆ
ಎಲ್ನೋಡು ಅಲ್ಲೆಲ್ಲ, ತುಂಬೈತೆ ಪುಷ್ಪ
ಕಾಯ್ತಾನೆ ಕುಂತಿವ್ನಿ, ಎಲ್ಲೋದ್ಲೋ ''ಪುಷ್ಪ''
  

Tuesday, August 24, 2010

ಮರೆಯಲಾಗದ ನಾರ್ವೆ, ಪ್ರವಾಸ ಕಥನದ ಅಂತಿಮ ಭಾಗ

ನೋಡೇ ಗೆಳತಿ, ಬಾನ ತುಂಬಾ ಮೋಡ ಕವಿದಿದೆ, ಚೆಲುವ ಬರುವ ಎಂದು ಮನವು ಪುಳಕಗೊಂಡಿದೆ. 

ಭಳಿರೆ, ಭಳಿರೆ...

Flam ದಲ್ಲಿ ಕಳೆದು ಒಂದು ದಿನ ಜೀವನದಲ್ಲಿಯೇ ಮರೆಯಲಾಗದ್ದು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಅಪಾರ್ಟ್ಮೆಂಟ್ ಬಾಡಿಗೆಗೆ ಒಂದು ದಿನ ಸಿಕ್ಕಿತ್ತು. ನಾರ್ವೆಯ ಮನೆಯಲ್ಲಿ ಕುಳಿತು ಕರ್ನಾಟಕದ ಚಿತ್ರಾನ್ನ, ಪಲಾವ್ ತಿನ್ನುವ ಯೋಗ ನೋಡಿ. ಹತ್ತಿರದಲ್ಲಿಯೇ ಇದ್ದ ನದಿ ತೀರ, ಬೆಟ್ಟ ಗುಡ್ಡಗಳು ಎಲ್ಲವನ್ನೂ ಮನಸೋ ಇಚ್ಛೆ ಸುತ್ತಿ ಕುಣಿದೆವು, ನಲಿದೆವು.

ಮನೆಯ ಅಡಿಗೆ ಯಾರಿಗೆ ಬೇಡ ಹೇಳಿ....
ನಾವು ನಾಲಕ್ಕು ಜನ ಹೋಗಿದ್ದು ನಾರ್ವೆಗೆ  ...
ನೋಟದಲ್ಲೇ ಎನ್ನ ಸೆಳೆದೆ, ಬರುವೆ ಮತ್ತೆ ನಿನ್ನ ಜೊತೆಗೆ...

ನಾವುಳಿದುಕೊಂಡ ಮನೆಯಿಂದ ಕಾಣುವ ದ್ರಶ್ಯ  

ಇಲ್ಲಿನ ವೈಚಿತ್ರ್ಯ ನೋಡಿ, ಹವಾಮಾನ ಎಷ್ಟು ಬೇಗ ಬದಲಾಗುತ್ತದೆ ಎಂದರೆ ಊಹಿಸಲು ಅಸಾದ್ಯ. ಬೆಳಿಗ್ಗೆ ಬಿಸಿಲಿತ್ತು, ನೋಡು ನೋಡು  ತ್ತಿದ್ದಂತೆ ಮೋಡ, ಮತ್ತೆ ಮಳೆ, ಕೂಡಲೇ ಮೋಡದ ಮರೆಯಲ್ಲಿ ಸೂರ್ಯನ ಕಣ್ಣು ಮುಚ್ಚಾಲೆ, ನಂತರ ಸಂಪೂರ್ಣ ಬಿಸಿಲು. ಇವೆಲ್ಲವೂ ಸುಮಾರು 20 ನಿಮಿಷದಲ್ಲಿ ನಡೆದು ಹೋಯಿತು. ಮೋಡ ಗಳಂತೂ  ಎಕ್ಸ್ ಪ್ರೆಸ್ ರೈಲಿನಂತೆ ಓಡುತ್ತಿರುತ್ತವೆ.ಒಂದು ದಿನ ಇಂಥಹ ಪ್ರಕ್ರತಿಯ ಒಡಲಿನಲ್ಲಿ ಕಳೆದ ಮೇಲೆ ಇಲ್ಲಿಯೇ Permanent ಆಗಿ ಇದ್ದು ಬಿಡೋಣ ಅಂತ ಅನ್ನಿಸದೆ ಇರದು. 

ಮೋಡಗಳ ಸರಸ ನೋಡಿ....

ಬೆಟ್ಟದ ಮೇಲಿಂದ ಚೆಲುವೆಯ ದರ್ಶನ 

ಮಾರನೆ ದಿನ ಮಧ್ಯಾನ್ಹ ಅಲ್ಲಿಗೆ ಬ್ರಹತ್ ಹಡಗು '' Alexander''    ಬಂದಿತ್ತು. 
Alexander van  Hombalt
ಅಷ್ಟು  ಚಿಕ್ಕ ಊರಿಗೆ ಎಷ್ಟೊಂದು ಜನ ಭೇಟಿ ಕೊಡುತ್ತಾರೆ ಎಂದರೆ ಸೋಜಿಗವೇ ಸರಿ.  ನಂತರ ಸುಮಾರು 3 ಘಂಟೆಗೆ ಆರಂಬವಾಯಿತು ನೋಡಿ ಹಡಗಿನ ಪ್ರಯಾಣ. ಅದೊಂದು ಮರೆಯಲಾಗದ ಅನುಭವ.
ಕ್ಷಣಾರ್ಧದಲ್ಲಿ ಬಂದ ಬೋಟೊಂದು ನೀರನ್ನು ಅಲುಗಾಡಿಸಿ ಫೋಟೋದ ಪ್ರತಿಬಿಂಬಕ್ಕೆ ಪೆಟ್ಟು ಕೊಟ್ಟಿತು.... 

ನಾರ್ವೆಗೆ ಹೋದವರು Flam ನಿಂದ Gudvangen ವರೆಗಿನ ಹಡಗಿನ ಪ್ರಯಾಣ ಅನುಭವಿಸದೆ ಹೋದರೆ ಬಂದಿದ್ದು ವ್ಯರ್ಥ.

Good Bye Flam... we miss you


 ಆ ಬ್ರಹದಾಕಾರದ ಶಿಕರಗಳ ನಡುವೆ ನೀರಿನಲ್ಲಿ ಹೋಗುವ ಮಜವೇ ಬೇರೆ. ನಮ್ಮೊಂದಿಗೆ ಜೊತೆಗಾರರಾಗಿ ಹಕ್ಕಿಗಳು ಇದ್ದವು. ಅವರ ಹಾರಾಟ, ಆಹಾರ ಕ್ಕಾಗಿ ಕಿತ್ತಾಟ, ಎಲ್ಲವೂ ಮನಸೂರೆಗೊಳ್ಳುವ ರೀತಿಯಲ್ಲಿದ್ದವು.
ಎಲ್ಲಿ ನೋಡುತ್ತಿರುವೆ?

ನಾವೂ ನಿಮ್ಮೊಂದಿಗೆ ಪ್ರಕ್ರತಿ ವೀಕ್ಷಣೆಗೆ ಬರುತ್ತೇವೆ....

 ಛಾಯಾಗ್ರಾಹಕರಿಗೆ ಇದೊಂದು ಹಬ್ಬದ ವಾತಾವರಣ. 400 ವರ್ಷಗಳಿಂದ ಇರುವ ಕೆಲವು ಒಂಟಿ ಹಳ್ಳಿಗಳನ್ನು ನೋಡಿದಾಗ ಅಬ್ಬ ಇವರ ಬದುಕೇ ಎನಿಸಿತು. ರಸ್ತೆಯೂ ಇಲ್ಲದೆ ಕೇವಲ ನೀರನ್ನೇ ನಂಬಿಕೊಂಡು ಬದುಕುವ ಇವರ ಬದುಕು ಸೋಜಿಗವೆನಿಸಿತು.
ಪ್ರಾಚೀನ ಹಳ್ಳಿ, ಇಲ್ಲಿ ರಸ್ತೆಯ ವ್ಯವಸ್ಥೆ ಇಲ್ಲದೆ ಎಸ್ಟೋ ವರ್ಷಗಳು ಆಗಿತ್ತಂತೆ. ಇತ್ತೀಚಿಗೆ ರಸ್ತೆ ನಿರ್ಮಾಣ ಮಾಡಲಾಗಿದೆ.

ಇಲ್ಲಿನ ಕೆಲವು ಪರ್ವತಗಳು ಹಿಮದಿಂದಲೇ ನಿರ್ಮಾಣವಾಗಿದ್ದು ಶತ ಶತಮಾನಗಳಿಂದ ಹಿಮ ಬಿದ್ದು ಬಿದ್ದು ಅಲ್ಲಿಯೇ ಗಟ್ಟಿಯಾಗಿ ಹೋಗಿವೆ. ಸಾಲದ್ದಕ್ಕೆ ಉಷ್ನತೆಯೂ ಕಡಿಮೆ ಇರುವುದರಿಂದ ಅವು ಇನ್ನೂ ಬಿಳಿಯದಾಗಿಯೇ ಕಾಣುತ್ತವೆ.  ಇದರ ಬಗ್ಗೆ ವರ್ಣಿಸಿದರೆ ಸಾಲದು. ಅದಕ್ಕೆ ಫೋಟೋ ಗಳನ್ನು ಹಾಕಿದ್ದೇನೆ. ನೋಡಿ ಆನಂದಿಸಿ.
ಮೋಡಗಳು ಪರ್ವತಕ್ಕೆ  ಕೊಡುವ ಮುತ್ತೆ ಇದು?

ಓಡಿ ಹೋಗದಿರಿ, ನಿಲ್ಲಿ ಮೋಡಗಳೇ, ನಾನು ಬರುವೆ ಜೊತೆಗೆ....

ಮೋಡದ ಮಿಲನ ಶಿಖರದ ತುದಿಗೆ....

ಕನಕನ ಕಿಂಡಿ .....

ಎರಡು ಪರ್ವತಗಳು ಒಂದೇ ಜಾಗದಲ್ಲಿ ಸಂಧಿಸುತ್ತಿವೆ....

ಸುಮಾರು 3 ತಾಸಿನ ಪ್ರಯಾಣ ಇನ್ನೂ ಇದ್ದರೆ ಚೆನ್ನ ಎಂದು ತೋರುತ್ತಿತ್ತು. ಮಾರ್ಗ ಮದ್ಯದಲ್ಲಿ ಸಿಗುವ ಜಲಪಾತಗಳು ಕಣ್ಮನ ಸೆಳೆಯುವಂತಿದ್ದವು. 
ಎಲ್ಲರೂ ಖುಷ್.....

ಪಯಣ ಎಲ್ಲಿಗೆ.....

ಉಂಚಳ್ಳಿಯ ಜಲಪಾತ ನೆನಪಾಗುತ್ತಿಲ್ಲವೇ?

ಒಟ್ಟಿನಲ್ಲಿ ನಾರ್ವೆಯ ಪ್ರವಾಸ ಮರೆಯಲಾರದ ಪ್ರವಾಸವಾಗಿ ಉಳಿದಿದೆ. ನಾರ್ವೆಯ ಮತ್ತೊಂದು ಸುಂದರ ಜಾಗ ''Bergen'' ಎಂಬುವುದರ ಬಗೆಗೆ ಮುಂದೆ ಎಂದಾದರೂ ಬರೆಯುತ್ತೇನೆ. ನಾರ್ವೆಯ  ಬಗ್ಗೆ ಹೆಚ್ಚಿನ ವಿವರ ಬೇಕಾದರೆ ''http://www.norwaynutshell.com/'' ಎಂಬ ಅಂತರ್ಜಾಲ ತಾಣಕ್ಕೆ ಭೆಟ್ಟಿ ಕೊಟ್ಟು ಓದಿ. 

ಕಿಸೆಯಲ್ಲಿ ಹಣ, ಕಾಲಲ್ಲಿ ಶಕ್ತಿ, ಮನಸಲ್ಲಿ ಇಚ್ಛೆ ಈ ಮೂರು ಇದ್ದರೆ ನಾರ್ವೆ ನಿಮಗಾಗಿ ಕಾಯುತ್ತಿದೆ.

ಸ್ನೇಹಿತರೆ,
ಕಳೆದ ಕೆಲವು ವಾರಗಳಿಂದ ನಾರ್ವೆಗೆ ನನ್ನೊಂದಿಗೆ ಪ್ರಯಾಣಿಸಿದ್ದಿರಿ. ಅಲ್ಲಿನ ವಿವರಗಳನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಿರಿ. ನಿಮ್ಮೆಲ್ಲರಿಗೂ ಧನ್ಯವಾದಗಳು  ಕಳೆದ ಸಂಚಿಕೆಗಳು ಇಲ್ಲಿವೆ. ಓದಲು ಕೆಳಗೆ ಕ್ಲಿಕ್ಕಿಸಿ.




ಮುಂದಿನ ವಾರ ಮತ್ತೆ ಸಿಗುತ್ತೇನೆ.

ನಿಮ್ಮವ

ಗುರು 

Tuesday, August 17, 2010

ಚಕೋರ ಚಂದ್ರಮನಿಗೂ ಪೈಪೋಟಿಯೇ....

ಹೌದು, ಅವಳ ಸೌಂದರ್ಯವೇ ಹಾಗಿತ್ತು. ''ಸೌಂದರ್ಯ'' ವನ್ನು ಯಾವಾಗಲೂ ಹೆಣ್ಣಿಗೆ ಹೋಲಿಸುತ್ತ ಬಂದಿರುವುದು ಜನಜನಿತ. ''ಸಿಂಹದ ಕಟಿ'', ''ಹಂಸದ ನಡಿಗೆ'' ''ಬಾಳೇ ದಿಂಡಿನಂಥ ತೊಡೆ'' ''ತೊಂಡೆ ಹಣ್ಣಿನಂತ ತುಟಿ''  ಅದು ಇದು ಎಂದು ಹೆಣ್ಣನ್ನು ಹೊಗಳಲು ಕವಿ ಮಹಾಶಯರು ಬಳಸಿದ ಪದಕ್ಕೆ ಲೆಕ್ಕವಿಲ್ಲ. ಕಾಳಿದಾಸನಂತೂ ತನ್ನ ಕಾವ್ಯದಲ್ಲಿ ಹೆಣ್ಣನ್ನು ಸೌಂದರ್ಯದ ಪರಮ ದೇವತೆ ಯಾಗಿ ಚಿತ್ರಿಸಿದ್ದಾನೆ. ಇಂಥಹ ಅನುಪಮ ಚೆಲುವೆಯ ಕಥೆಯೇ ನನ್ನ ಈ ವಾರದ ಕಥಾವಸ್ತು. ಆ ಕಥಾ ನಾಯಕಿಯ ಸೌಂದರ್ಯವೂ ಚಕೋರ ಚಂದ್ರಮನನ್ನು ನಾಚಿಸುತ್ತಿತ್ತು. ಚಂದ್ರ ನೋಡಿದರೆ ಆತನೇ ನಾಚಿ ತನಗೊಬ್ಬ ಪೈಪೋಟಿ ನೀಡುವ ಸುಂದರಿ ಬಂದಳೋ ಎನ್ನುವಂತೆ ಬೇಸರಗೊಳ್ಳುತ್ತಿದ್ದ. ಇಂಥಹ ಅನುಪಮ ಚೆಲುವೆ ಯನ್ನು ನಾನೊಬ್ಬ ನೋಡಿದರೆ ನಿಮಗೆ ಬೇಸರವಾಗಬಹುದು. ಬನ್ನಿ, ನೋಡೋಣ ಅವಳ  ರೂಪ ಲಾವಣ್ಯ ರಾಶಿಯನ್ನು. 

ಅದೊಂದು 450 ಜನರು ವಾಸಿಸುವ ಪುಟ್ಟ ಹಳ್ಳಿ. ಹಳ್ಳಿ ಅನ್ನುವುದಕಿಂತ ''ಸ್ವರ್ಗ'' ಅಂದರೆ ಸೂಕ್ತವಾದೀತೇನೋ. ಪುಟ್ಟ ಹಳ್ಳಿಗೆ ನೆಟ್ಟಗೆ ಕರೆಂಟ್  ಕೂಡಾ ಇರದ ಸ್ಥಿತಿಯನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿಯ ಹಳ್ಳಿ ಹಾಗಿಲ್ಲ, ಇಲ್ಲಿ ಎಲ್ಲವೂ ಇತ್ತು, ಬಹುಷ: TV-9 ಯವರು ಬಂದಿದ್ದರೆ ''ಹೀಗೂ ಉಂಟೆ'' ಎನ್ನುತ್ತಿದ್ದರೇನೋ. ಹಾಗಿತ್ತು ಇಲ್ಲಿನ ಹಳ್ಳಿ. ಆ ಪುಟ್ಟ ಹಳ್ಳಿಯ ಹೆಸರೇ ಇಂದಿನ ಕಥಾ ನಾಯಕಿ. ''Flam'' ಎಂಬ ಹೆಸರಿನ ಈ ರೂಪವತಿ ನಾರ್ವೆ ಯ ದಕ್ಷಿಣ ಕ್ಕೆ ನೆಲಸಿದ್ದಾಳೆ. ಸುತ್ತ ಸುತ್ತುವರಿದ ಬ್ರಹತ್ ಬೆಟ್ಟ ಗುಡ್ಡಗಳು, ನಡುವೆ ಮೈ ಪುಳಕಗೊಳಿಸುವ ಜಲ ರಾಶಿ, ಸುಂದರ ಜಲಪಾತಗಳು 

''ಚೆಲುವೆಯೇ ನಿನ್ನ ನೋಡಲು, 
ಮಾತುಗಳು ಬರದವನು, 
ಬರೆಯುತಾ, ಹೊಸ ಕವಿತೆಯ
 ಹಾಡುವ ನೋಡಿ ಅಂದವನು''

ಎಂದು ಹಾಡಿದ ಕನ್ನಡದ ಕಣ್ಮಣಿ ಡಾ.ರಾಜಕುಮಾರ್ ನೆನಪಾದರೆ ಆಶ್ಚರ್ಯವೇನು  ಇಲ್ಲ.  ಇಲ್ಲಿನ ತರು ಲತೆಗಳು, ಗಿಡ ಮರಗಳು, ಜಲ ಕೊಳಗಳು, ಬ್ರಹದಾಕಾರದ ಪರ್ವತ ಶಿಖರಗಳು, ಹಸಿರು ಹುಲ್ಲುಗಾವಲುಗಳು ಒಹ್, ಏನೆಂದು ವರ್ಣಿಸಲಿ ಇದರ ಸೊಬಗ. ಸ್ಫಟಿಕದಂತ ಶುಭ್ರತೆ ಹೊಂದಿದ ನೀರು, ಗಂಗೆಯ ಶುಭ್ರತೆ ನೋಡಿದ್ದೇನೆ, ಆ ಗಂಗೆಯ ಶುಭ್ರತೆಯನ್ನೂ ಮೀರಿಸುವ ನೀರಿನ ಶುಭ್ರತೆ ಕಂಡು ಮೂಕ ವಿಸ್ಮಿತ ರಾದ ಜನರೆಷ್ಟೋ. ಒಟ್ಟಿನಲ್ಲಿ  Beauty Queen ಕಣ್ರೀ ಇದು.

Oslo ದಿಂದ ಬೆಳಗಿನ ಜಾವ 7 ಘಂಟೆಗೆ ಈ ಸುಂದರಿಯ ನೋಡಲು ಹೊರಟೆವು. ಓಸ್ಲೋ ದಿಂದ ಮಿರ್ಡಾಲ್ ವರೆಗೆ ರೈಲಿನಲ್ಲಿ ಬಂದು ಅಲ್ಲಿಂದ ಇನ್ನೊಂದು ರೈಲು ತೆಗೆದುಕೊಳ್ಳಬೇಕು. ನಾರ್ವೆಯ ಪ್ರಕೃತಿಯ ದರ್ಶನದ ಮೊದಲ ಹೆಜ್ಜೆ ಇಲ್ಲಿನ ರೈಲಿನ ಪ್ರಯಾಣ. ಮಾರ್ಗ ಮದ್ಯದಲ್ಲಿ ಸಿಗುವ ಸುಂದರ ಹುಲ್ಲುಗಾವಲು, ಮನೆಗಳು, ನದಿ, ಕಣ್ಮನ ಸೆಳೆಯುತ್ತವೆ.



1222 ಮೀಟರ್ ಎತ್ತರದಲ್ಲಿರುವ  Finse


ಸುಮಾರು 4-30 ತಾಸು ಪ್ರಯಾಣಿಸಿದ ಮೇಲೆ ಮಿರ್ಡಾಲ್ ಬರುತ್ತದೆ. ಇಲ್ಲಿಂದ ಆರಂಭವಾಗುವುದೇ Flam ಎಂಬ ಸುಂದರಿಯ ಭೆಟ್ಟಿಯಾಗಲು ಇರುವ ಅಡಚಣೆಗಳು, ಸಾಹಸಗಾಥೆ, ಯಶೋಗಾಥೆ ಎಲ್ಲವೂ.
Flam ಎಂಬ  ರಂಭೆಯನ್ನು ಭೆಟ್ಟಿಯಾಗಲು ಬರುವುದು ಅಷ್ಟೊಂದು ಸುಲಭ ಅಂದುಕೊಳ್ಳಬೇಡಿ. ತನ್ನ ಸುತ್ತಲೂ ಸೈನಿಕರ ಕಾವಲು ಇರುವಂತೆ ಬೆಟ್ಟ ಗುಡ್ದಗಳನ್ನೇ ನಿರ್ಮಿಸಿಕೊಂಡಿದ್ದಾಳೆ. ಎಂಥೆಂಥ ಬಾಲಿವುಡ್ ಲಲನೆಯರಿಗೆ ಸೆಕ್ಯೂರಿಟಿ ಬೇಕಿರುವಾಗ ಪ್ರಪಂಚದಾದ್ಯಂತ ಪ್ರವಾಸಿಗರ ಸೆಳೆಯುವ ಈ ಚೆಲುವೆಗೆ ಬೇಡವೇ ರಕ್ಷಣೆ. ಈ ಚೆಲುವೆ ಯ ಕಥೆಯೂ ಅಷ್ಟೇ ರೋಮಾಂಚನೀಯ. ಬರುವ ಪ್ರತೀ ಪ್ರವಾಸಿಗನ ಮನಸಿನಲ್ಲೂ ''ಅಬ್ಬಬ್ಬ ಹೆಣ್ಣೇ'' ಎಂಬ ಮಾತುಗಳನ್ನು ಹೇಳಿಸದೇ ಇರದು ನೋಡಿ. ಒಂದು ಕಾಲದಲ್ಲಿ ಇಲ್ಲಿಗೆ ಬರುವುದೇ ಅಸಾದ್ಯ ಎಂಬ ಸ್ಥಿತಿ ಇತ್ತಂತೆ.  ಈ ಲಲನೆಗೆ ಚಳಿಗಾಲ ಬಂತೆಂದರೆ ''ವೈಧವ್ಯ'' ಪ್ರಾಪ್ತಿ. ಸುತ್ತಲೂ ಬಿಳಿಯ ಹಿಮದಿಂದ ತುಂಬಿ ಹೋಗುವ ಇವಳು ಅಕ್ಷರಶ: ನತದೃಷ್ಟ ಹತಭಾಗ್ಯೆ ಯಂತೆ ಚಳಿಗಾಲದಲ್ಲಿ ಗೋಚರಿಸುತ್ತಾಳೆ. ಆದರೆ ಬೇಸಿಗೆಯ ಹೊಂಗಿರಣ ಬಂದ ಕೂಡಲೇ 
''ಈ ಸಮಯ ಶೃಂಗಾರ ಮಯ
ನೂತನ ಬಾಳಿಗೆ ಶುಭೋದಯ''
ಎಂದು ಹಾಡಬೇಕೆನಿಸುತ್ತದೆ.
ಅದೇ ಚಳಿಗಾಲ ಬಂದರೆ,
''ಈ ಸಮಯ ಶೃಂಗಾರ ಮಾಯಾ''
ಎಂದು ಹಾಡಬೇಕಾಗುತ್ತದೆ.

''Flam'' ಅಂದರೆ  ''Little place between steep mountains'' ಎಂದರ್ಥ. ಪ್ರಕ್ರತಿಯ ಆರಾಧಕರಿಗೆ ಇದೊಂದು ತಪಸ್ಯಾ ಸ್ಥಳ. ಇಲ್ಲಿಗೆ ಬರಬೇಕಾದರೆ ಸಿಗುವ ಅನುಭವ ಜೀವನದಲ್ಲೇ ಮರೆಯಲಾರದ್ದು. Thanks to Flam Railway. ಸುಮಾರು 1800 ಇಸವಿಯಲ್ಲಿ ಬ್ರೀಟಿಷರು ಮತ್ತು ಜರ್ಮನ್ನರು ಇಲ್ಲಿನ ಸ್ನಿಗ್ಧ ಸೌಂದರ್ಯ ಸವಿಯಲು ಹಡಗಿನಲ್ಲಿ ಬರುತ್ತಿದ್ದದು ಬಿಟ್ಟರೆ ಇದೊಂದು ಮನುಷ್ಯರು ಬಂದು ಹೋಗಲು ಅಸಾಧ್ಯವಾದ ಜಾಗವಾಗಿತ್ತು. ಆದರೆ 1923 ರಲ್ಲಿ ಕೆಲವು ಶೂರ Engineer ಗಳ ತಂಡ ಒಂದು ದುಸ್ಸಾಹಸಕ್ಕೆ ಕೈ ಹಾಕಿದರು. 20 ಕಿ ಮಿ ಗಳಷ್ಟು ಉದ್ದದ ಕಲ್ಪನೆಗೂ ನಿಲುಕದ ರೈಲು  ಮಾರ್ಗವನ್ನು Flam  ಮತ್ತು   Myrdal   ನಡುವೆ ನಿರ್ಮಿಸುವ ಸಂಕಲ್ಪ ತೊಟ್ಟೆ ಬಿಟ್ಟರು. ಅಲ್ಲಿನ 1400 ಮೀಟರ್ ಎತ್ತರದ ಪರ್ವತಗಳನ್ನು ನೋಡಿದರೆ ಎಂಥಹ ಅಂಜದ ಗಂಡಿನಲ್ಲೂ ಗಡ ಗಡ ನಡುಗುವ ಚಳಿ ಆವರಿಸುತ್ತದೆ.




 ಆದರೆ ಕೆಲವರು ಸಾಧನೆ ಮಾಡಲೆಂದೇ ಹುಟ್ಟಿರುತ್ತಾರೆ. ನಾವು ಜಗತ್ತನ್ನು ನೋಡುವ ದೃಷ್ಟಿಗಿಂತ ಅವರು ನೋಡುವ ದೃಷ್ಟಿಕೋನ ಬೇರೆಯೇ ಇರುತ್ತದೆ. ಅದಕ್ಕೆ ಶತಮಾನಕ್ಕೊಬ್ಬ ವಿವೇಕಾನಂದ, ಮಹಾತ್ಮ ಗಾಂಧೀಜಿ, ಯಂಥ  ಮಹಾತ್ಮರು ಕಾಣುತ್ತಾರೆ. 

Flam Railway, well-known as ''Master of Engineering''

ಆ Engineer ಗಳ ತಂಡಕ್ಕೆ ಇದ್ದ ಸವಾಲಾದರೂ ಎಂಥದ್ದು, ಬ್ರಹತ್ ಬೆಟ್ಟ, ಕಡಿದಾದ ಪ್ರಪಾತ, ರಭಸದಿಂದ ಧುಮ್ಮಿಕ್ಕುವ ಜಲಧಾರೆ ಎಲ್ಲ ಕಡೆ, ವರ್ಷದ 6 ತಿಂಗಳು ತುಂಬಿದ ಹಿಮ ರಾಶಿ, ಎಲ್ಲಿಯೂ ಸೌಂದರ್ಯ ನಾಶ ಮಾಡದೆ, ಅದೇ ವೇಳೆಗೆ ಅತ್ಯಂತ ಅಪಾಯಕರವಾದ ಪರ್ವತಗಳ ತುದಿಯಲ್ಲಿ ರಸ್ತೆ ನಿರ್ಮಾಣ ಮಾಡುವ ಕೆಲಸ. ಹೇಳಿದರೆ ನಿಮಗೆ ನಂಬಿಕೆ ಆಗಲಿಕ್ಕಿಲ್ಲ. ಅಲ್ಲಿ ಹೋಗಿ ಬಂದರೆ ನಿಜಕ್ಕೂ ಆ ರೈಲು ಮಾರ್ಗ ನಿರ್ಮಾಣ ಮಾಡಿದ ಮಹಾತ್ಮರಿಗೆ ಒಂದು ಸಲಾಂ ಎನ್ನಲೇ ಬೇಕಿದೆ.
ರೈಲು  ಮಾರ್ಗದ  ನೀಲ  ನಕ್ಷೆ  
 ಸುಮಾರು 20 ವರುಷಗಳ ಕಠಿಣ ಪರಿಶ್ರಮ, ಹಗಲು ರಾತ್ರಿ ಕೆಲಸ, ಎಲ್ಲಿಯೂ ಮೋಸ ಮಾಡಲಿಲ್ಲ. 1923 ರಲ್ಲಿ ಆರಂಬಿಸಿ 1940 ರ ಸುಮಾರಿಗೆ ರೈಲು ಮಾರ್ಗ ವಿಶ್ವಕ್ಕೆ ತೆರೆದುಕೊಂಡಿತು. ಅಷ್ಟೇ ಅಲ್ಲ, ಆ ಅಪರೂಪದ ಚೆಲುವೆಯ ದರ್ಶನ ಎಲ್ಲರಿಗೂ ಲಭ್ಯವಾಯಿತು. ಈ ರೈಲು ಮಾರ್ಗದಲ್ಲಿ ಸುಮಾರು 20 Tunnel ಗಳಿವೆ. 

ನೋಡಿ, ಎಂಥಹ ಪರ್ವತವನ್ನು ಕೈಯ್ಯಲ್ಲೇ ಕೊರೆದು ಸುರಂಗ  ಮಾಡಿದ್ದಾರೆ ಎಂದು...

ಇಲ್ಲಿನ ಕೆಲಸಗಾರರಿಗೆ ಹೆಚ್ಚಿನ ಸಮಯ ಸುರಂಗ  ನಿರ್ಮಾಣಕ್ಕೆ  ಬೇಕಾಯಿತಂತೆ. ಯಾಕೆಂದರೆ 20 ರಲ್ಲಿ 18 ಸುರಂಗಗಳನ್ನು ಕೈಯಲ್ಲಿಯೇ ಕೆತ್ತಿ ಮಾಡಿದ್ದೆಂದರೆ ಅವರ ಸಾಹಸ ನಿಮಗೆ ತಿಳಿಯಬಹುದು. ಯಾಕೆಂದರೆ ಯಾವ  ದೊಡ್ಡ ದೊಡ್ಡ ಯಂತ್ರಗಳು ಅಲ್ಲಿಗೆ ಹೋಗಲು ಸಾದ್ಯವಿಲ್ಲದ ದುರ್ಗಮ ಜಾಗವದು. ಆ ಸಾಹಸ ಕಥೆ ಓದಲು ಇಲ್ಲಿ ಕ್ಲಿಕ್ಕಿಸಿ http://www.flaamsbana.no/eng/
ಕಡಿದಾದ ಪರ್ವತಗಳು ಕೆಲಸಗಾರರಿಗೆ ಬಹುದೊಡ್ಡ ಸಮಸ್ಯೆ ಆಗಿತ್ತಂತೆ. ಅದಕ್ಕೆಂದೇ ಹಲವಾರು Hairpin  ಸುರಂಗ ನಿರ್ಮಿಸಿದ್ದಾರೆ. ಅತ್ಯಂತ   ಅಪಾಯಕರವಾದ ''avalanches'' ಮತ್ತು ಜಲಪಾತಗಳ ರಭಸ ತಪ್ಪಿಸಲು ರೈಲು ಮಾರ್ಗವನ್ನು 3 ಸಲ ನದಿಯ ಎಡಕ್ಕೆ ಮತ್ತು ಬಲಕ್ಕೆ ಬರುವಂತೆ ನೋಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಸೇತುವೆಯ ಮೇಲೆಯೂ ನದಿ ದಾಟದಂತೆ ಮುತುವರ್ಜಿ ವಹಿಸಲಾಗಿದೆ. 


ರೈಲಿನ ಒಳಗಿನಿಂದ ಕಾಣುವ ದ್ರಶ್ಯ 

ಈ ರೈಲು ಮಾರ್ಗಕ್ಕೆ ವಿಶ್ವದ ಅತೀ ಸುಂದರ ರೈಲು ಮಾರ್ಗ ಎಂಬ ಪ್ರಶಸ್ತಿಯೂ ಲಭಿಸಿದೆ. 2007 ರಲ್ಲಿ ಸುಮಾರು 6 ಲಕ್ಷ ದಷ್ಟು ಪ್ರಯಾಣಿಕರು ಈ ರೈಲಿನಲ್ಲಿ Flam ಗೆ ಪ್ರಯಾಣಿಸಿದರಂತೆ. ಅದೊಂದು ದಾಖಲೆ. ರೈಲಿನಲ್ಲಿ ಪ್ರಯಾಣಿಸುವಾಗ ಇಕ್ಕೆಲಗಳಲ್ಲಿ ಕಡಿದಾದ ಪ್ರಪಾತ, ನಯನ ಮನೋಹರ ಜಲಪಾತಗಳು, ಎದೆ ನಡುಗಿಸುವ ಪರ್ವತಗಳ ಸಾಲು, ಎಲ್ಲವನ್ನು ನೋಡುತ್ತಿದ್ದರೆ ಯಾವುದೋ ಬೇರೆಯ ಲೋಕಕ್ಕೆ ಬಂದಂತೆ ಅನಿಸುತ್ತದೆ. ಸುಮಾರು ಒಂದು ಘಂಟೆಗಳ ಈ ಪ್ರಯಾಣ ಇನ್ನು ಇದ್ದಿದ್ರೆ ಚೆನ್ನ ಅನ್ನಿಸದೆ ಇರದು.
ಮಾರ್ಗ ಮದ್ಯದಲ್ಲಿ ಸಿಗುವ ಎತ್ತರದ  Kjosfossen ಜಲಪಾತ ನೋಡುಗರಿಗೆ, ಪ್ರಕ್ರತಿ ಪ್ರಿಯರಿಗೆ, ಛಾಯಾ ಚಿತ್ರಗ್ರಾಹಕರಿಗೆ ಹಬ್ಬದೂಟ ನೀಡುತ್ತದೆ. ಇಲ್ಲಿ ರೈಲನ್ನು 10  ನಿಮಿಷ ಸೌಂದರ್ಯ ನೋಡಲೆಂದೇ ನಿಲ್ಲಿಸಲಾಗುತ್ತದೆ.

ಇಲ್ಲಿನ ಜಲಪಾತದ ತುಣುಕು ವೀಡಿಯೊ ದಲ್ಲಿದೆ ನೋಡಿ,
 ಜಲಪಾತ ಕಳೆದ ಮರುಕ್ಷಣವೇ 180 ಡಿಗ್ರಿ ಯ ಹೈರ್ ಪಿನ್ ಆಕಾರದ ಸೇತುವೆ ಛಾಯಾ ಚಿತ್ರಗ್ರಾಹಕರಿಗೆ ಸುಗ್ಗಿ ನೀಡುತ್ತದೆ. 180 ಡಿಗ್ರಿ ಯಷ್ಟು ರೈಲು ತಿರುಗಿದಾಗ ಸುತ್ತಲಿನ ಬೆಟ್ಟದ ಪನೋರಮಿಕ್   ಸೌಂದರ್ಯ ಕಣ್ಣಿಗೆ ಲಭಿಸುತ್ತದೆ.

ಇಲ್ಲಿನ ದೃಶ್ಯಗಳು ಪ್ರತಿಕ್ಷಣವೂ ಮರೆಯಲಾರದ ನೆನಪಾಗಿ ಸ್ಮ್ರತಿ ಪಟಲ ದಲ್ಲಿ ಉಳಿದು ಹೋಗುತ್ತದೆ. ಒಂದು ತಾಸಿನ ರೋಮಾಂಚನೀಯ ಮಾರ್ಗದಲ್ಲಿ ಬೆಟ್ಟದ ಮೇಲಿನಿಂದ ಬೆಟ್ಟದ ಕೆಳಗೆ ಬಂದಿಳಿದರೆ ಸಿಗುವುದೇ ಸೌಂದರ್ಯದ ಖನಿ Flam.







ಈ ಸುಂದರಿಯ ಬಗ್ಗೆ ಮುಂದಿನ ವಾರ ಹೇಳ್ತೀನಿ, ಯಾಕಂದ್ರೆ ಅತೀಯಾದ್ರೆ ಅಮ್ರತಾನು ವಿಷ ಅಂತೆ.

ನಿಮ್ಮವ ಗುರು