Friday, April 22, 2011

''ಹೆಸರೇ ಬೇಡ'' ದಿಂದ ''ಇದೇ ಇದರ ಹೆಸರು'' ನ ತನಕ....

ಬ್ಲಾಗ್ ಪ್ರಪಂಚ ಬೆಳೆದಂತೆ ಅನೇಕ ಸ್ನೇಹಿತರು, ಎತ್ತಣ ಮಾಮರ, ಎತ್ತಣ ಕೋಗಿಲೆ ಎನ್ನುವ ಹಾಗೆ ಎಲ್ಲೋ ಇರುವ ನಾವೆಲ್ಲಾ ಇಂದು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಸ್ನೇಹಕ್ಕೆ ಹೊಸ ಅರ್ಥ ಈ ಬ್ಲಾಗ್ ಪ್ರಪಂಚ ಕೊಟ್ಟಿದೆ. ಇದೇ ಸ್ನೇಹದ ಹೆಸರಿನಲ್ಲಿ  ನಮ್ಮ ಸ್ನೇಹವನ್ನು ದುರುಪಯೋಗ ಗೊಳಿಸಿ ಕೊಳ್ಳುವರ ಸಂಖ್ಯೆ ಯೂ ದಿನೇ ದಿನೇ ಹೆಚ್ಚುತ್ತಿದೆ. ಕೆಲವೊಮ್ಮೆ ಇಂಥಹ ಸ್ನೇಹಿತರ ನಡವಳಿಕೆಯಿಂದ ಬ್ಲಾಗ್ ಪ್ರಪಂಚದ ಬಗ್ಗೆ ಬೇಸರವೂ ಆಗಿದ್ದುಂಟು. ಆದರೆ ಹಿರಿಯ ಜನರ ಮಾತಿನಂತೆ ''ಸಜ್ಜನರ ಸಂಘವದು ಸವಿಜೇನು ಸವಿದಂತೆ''. ಅಂಥಹ ಒಳ್ಳೆಯ ಸ್ನೇಹಿತರು ಬ್ಲಾಗ್ ಲೋಕದಲ್ಲಿ ಇರುವುದರಿಂದ ಬ್ಲಾಗ್ ಲೋಕದ ಬಗೆಗೆ ಪ್ರೀತಿ ಮತ್ತೆ ಮತ್ತೆ ಜಾಸ್ತಿ ಆಗುತ್ತದೆ. 

                                                                 ಕ್ರಪೆ : ಶಿವೂ ಸರ್  ಬ್ಲಾಗ್ ನಿಂದ 

ಸುಮಾರು ಎರಡು ವರ್ಷದ ಹಿಂದೆ ಬ್ಲಾಗ್ ಆರಂಭಿಸಿದಾಗ ಅಣ್ಣನಂತೆ ಬ್ಲಾಗ್ ಅನ್ನು ಪ್ರೋತ್ಸಾಹಿಸಿದ ನೆಚ್ಚಿನ ಮೆಚ್ಚಿದ ಅಚ್ಚು ಮೆಚ್ಚಿನ ನಮ್ಮೆಲ್ಲರ ಪ್ರೀತಿಯ ''ಪ್ರಕಾಶಣ್ಣ'' ನ ಎರಡನೇ ಪುಸ್ತಕ ನಾಳೆ ಬಿಡುಗಡೆ ಆಗುತ್ತಿದೆ. ಪ್ರತಿ ಪುಸ್ತಕಕ್ಕೂ ಹೆಸರು ಇಡಲು ಹೋಗದೆ, ಹೆಸರನ್ನೇ ಹೆಸರು ಮಾಡಿ ಮೊದಲು ''ಹೆಸರೇ ಬೇಡ'' ಎಂದು ನಿರ್ಧರಿಸಿ ಇದೀಗ ''ಇದೇ ಇದರ ಹೆಸರು'' ಎಂದು ಹೇಳಿ ಅದರ ಬಿಡುಗಡೆಗೆ ಪ್ರಕಾಶಣ್ಣ ಸಿದ್ದರಾಗಿದ್ದಾರೆ.

ಅವರ ಕಥೆಗಳಲ್ಲಿ ಆತ್ಮೀಯತೆ ಇದೇ. ಕನ್ನಡ ಸಾಹಿತ್ಯಕ್ಕೆ ಅನೇಕ ಕಥೆಗಾರರು ಬಂದಿದ್ದಾರೆ. ಕೆಲವರು ಹಾಸ್ಯರಸದಲ್ಲಿ ಮಹಾನ ಸಿದ್ಧಿ ಸಾಧಿಸಿ ತೋರಿಸಿದ್ದಾರೆ . ಇನ್ನು ಕೆಲವರು ಕಥೆಯಿಂದ ಕಣ್ಣೀರಿನ ಕೊಡಿಯನ್ನೇ ಹರಿಸಿದ್ದಾರೆ. ಆದರೆ ಹಾಸ್ಯದ ಮಾಧ್ಯಮ ಬಳಸಿಕೊಂಡು ಗಂಬೀರ ವಿಷಯಗಳ ಬಗೆಗೆ ಬರೆದು ತನ್ಮೂಲಕ ಸಮಾಜದ ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲುವ ಕಥೆಗಳನ್ನು ಬರೆಯುವ ಕಲೆ ಯಲ್ಲಿ ಪ್ರಕಾಶಣ್ಣ ಸಿದ್ಧ ಹಸ್ತರು. 

ಸದಾ ನಗುಮೊಗದ, ನೋಡಿದ ಕೂಡಲೇ ಸ್ನೇಹ ಮಾಡಲೇಬೇಕು ಎಂದು ಮನಸಾಗುವ ಇಂಥಹ ಸ್ನೇಹಿತರೆ ಬ್ಲಾಗ್ ನ ಜೀವಾಳ. ಮೊದಲ ಬಾರಿಗೆ ಅವರ ಮನೆಗೆ ಹೋದಾಗ ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ ಯವರನ್ನು ನೋಡಿದಾಗ ನನ್ನದೇ ಅಣ್ಣ ಅತ್ತಿಗೆ ಯವರನ್ನು ನೋಡಿದ ಅನುಭವ ಆಯಿತು. ಅಷ್ಟೊಂದು ಆತ್ಮೀಯತೆ, ಪ್ರೀತಿ ತೋರುವ ಅವರ ಕುಟುಂಬ ದ ಬಗೆಗೆ ತುಂಬಾ ಹೆಮ್ಮೆ ಇದೆ.

ಇಂಥಹ ಪ್ರಕಾಶಣ್ಣ ನ ಪುಸ್ತಕ ಬಿಡುಗಡೆಗೆ ಬರಲಾಗುತ್ತಿಲ್ಲ ಎಂಬ ನೋವು ತುಂಬಾ ತುಂಬಿದೆ. ಆದರೂ ವಿದೇಶದಲ್ಲಿದ್ದು ಇಲ್ಲಿಂದಲೇ ಅವರ ಪುಸ್ತಕಕ್ಕೆ ಶುಭ ಹಾರೈಸುತ್ತಿದ್ದೇನೆ. ಅವರ ಪುಸ್ತಕಗಳು ಸಮಸ್ತ ಕನ್ನಡಿಗರ ಮನೆ-ಮನ ತುಂಬಲಿ. ಕಾರ್ಯಕ್ರಮ ಸಂಪೂರ್ಣ ಯಶಸ್ವೀ ಯಾಗಲಿ ಎಂಬ ಮನದಾಳದ ಹಾರೈಕೆ ಬ್ಲಾಗ್ ನ ಮೂಲಕ ತಿಳಿಸುತ್ತಿದ್ದೇನೆ.

 ಅವರ ಮುಂದಿನ ಪುಸ್ತಕದ ಹೆಸರು ಏನಿರಬಹುದು ಎಂಬ ಕುತೂಹಲ ಈಗಲೇ  ಆರಂಭವಾಗಿದೆ, '' ಕೊನೆಗೂ ಸಿಗದ ಹೆಸರು'' ಎಂದಿರಬಹುದೇ?  :)

ಕೊನೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಕೆಗಳು 

ಜೈ ಹೋ 

Saturday, April 16, 2011

ಕನಸೇ.....

ನೆನಪಿನ ಭಾವನೆಗಳೇ ಹಾಗೆ, ಲಗಾಮಿಲ್ಲದ ಹುಚ್ಚು ಕುದುರೆಯಂತೆ, ಕೆಲವೊಮ್ಮೆ ಬದುಕನ್ನು  ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸಿ, ಮರುಘಳಿಗೆ ಶೈಶವ ನರಕದಲ್ಲಿ ಹೊರಳಾಡಿಸುತ್ತವೆ. ಸಿಹಿ ನೆನಪುಗಳೇ ಇರಲಿ, ಕಹಿ ನೆನಪುಗಳೇ ಇರಲಿ, ಕನಸಾಗಿ ಬಂದು ಕಾಡುತ್ತವೆ. ಭಾವನೆಗಳ ಹುಚ್ಚೆಬ್ಬಿಸಿ, ಹೊತ್ತಲ್ಲದ ಹೊತ್ತಿನಲ್ಲಿ, ಬಿಚ್ಚಿಟ್ಟ ಭಾವನೆಗಳ ಬೆತ್ತಲಾಗಿಸುವ, ತನ್ಮೂಲಕ ಕಾಡುವ ಕನಸುಗಳಿಗೆ ಹೇಳುವುದು ಇಷ್ಟೇ...''ಎಲ್ಲವನ್ನೂ ಸ್ಮ್ರತಿ ಪಟಲದಲ್ಲಿ ಅಚ್ಚೊತ್ತಿ ಹೋಗಿಬಿಡು, ಬಿಟ್ಟೆ ಎನ್ನುವ ಆತಂಕ ಬೇಡ, ಬಚ್ಚಿಟ್ಟೆ ಎನ್ನುವ ಭಯ ಬೇಡ, ಆದರೆ ಮತ್ತೆ ಬಂದು ನನ್ನ ಕಾಡಬೇಡ '' ಎಂದು.   
ಸುತ್ತಲು ಕವಿದ ಕತ್ತಲ ನೋಡಿ
ಬೆತ್ತಲಾಗದಿರು ಮನಸೇ
ಹೊತ್ತಲ್ಲದೊತ್ತಿನಲಿ, ಕಗ್ಗತ್ತಲಲ್ಲಿ
ಬಂದೆನ್ನ ಕಾಡದಿರು ಕನಸೇ..

ಹುಚ್ಚೆದ್ದ ಭಾವ, ಬೆಚ್ಚಾದ ಜೀವ
ಚಿತ್ತಾರದಂತ ಸೊಗಸೇ..
ಮಚ್ಚೆತ್ತಿ ಬಂದ, ಹಚ್ಚನೆಯ ಬೆಳಕು
ತುಂಬೆನ್ನ ಒಲವ ಬೊಗಸೆ...

ಚುಚ್ಚಾಟವೇಕೆ, ಕಚ್ಚಾಟವೇಕೆ
ಬಿಚ್ಚಿಟ್ಟ ಭಾವನೆಯ ಹದಕೆ
ಅಚ್ಚೊತ್ತಿ ಹೋಗು, ಬಚ್ಚಿಡದೆ ಎಲ್ಲ
ಮತ್ತೆರಗಿ ಬರದೆ ಕನಸೇ..

Sunday, April 10, 2011

ನಶ್ವರ .............


ಪ್ರಕ್ರತಿಯ ವೈಚಿತ್ರ್ಯಗಳ ನೋಡಿ, ಯಾವ ತಂತ್ರಜ್ಞಾನದಲ್ಲಿಯೂ ಕಡಿಮೆ ಇರದ ಜಪಾನ್ ಗೆ ಅಪ್ಪಳಿಸಿದ ಭೂಕಂಪ, ಬೆನ್ನಿಗೆ ಬಂದ ಸುನಾಮಿ ಗೆ ಜಪಾನೀಯರು ಕಂಗಾಲಾಗಿದ್ದಾರೆ. ಅದರ ಜೊತೆಗೆ ಬಂದೆರಗಿದ ಅಣು ವಿಕಿರಣ ಸೋರುವಿಕೆ, ಒಂದೇ ಎರಡೇ, ಬೆನ್ನಿಗೊಂದರಂತೆ ಬಂದೆರಗಿರುವ ಸಂಕಷ್ಟಗಳ ನಿವಾರಣೆಗೆ ಜಪಾನೀಯರು ಹೆಣಗುತ್ತಿದ್ದಾರೆ. ಬದುಕು ಎಷ್ಟೊಂದು ''ನಶ್ವರ'' ಅಲ್ಲವೇ? ನಿನ್ನೆ ವರೆಗೆ, ಈ ಬದುಕು ನಮ್ಮದು, ಮನೆ ನಮ್ಮದು, ಆಸ್ತಿ ನಮ್ಮದು, ಮರುಕ್ಷಣ ಯಾವುದೂ ನಮ್ಮದಲ್ಲ, ದೇಹ ಮಾತ್ರ ನಮ್ಮದು, ಇಲ್ಲಿ ಸಾವು ಗೆದ್ದ ಮನೆಯೂ ಇಲ್ಲ, ಮನಸು ಇಲ್ಲ, ಸಾಸಿವೆ ಇಲ್ಲದ ಮನೆಯ ಹುಡುಕಾಟದಂತೆ....
ಆದರೂ ಬದುಕು, ಅದರ ಬಗೆಗಿನ ಪ್ರೀತಿ ಕಡಿಮೆ ಆಗದು, ಮತ್ತದೇ ಆಸೆ, ಮತ್ತದೇ ಅಶಾಂತಿಯ ಬದುಕು, ಶಾಂತಿಯ ಹುಡುಕಾಟ, ಹಣ ಮಾಡಲು ಕಿತ್ತಾಟ, ಇಷ್ಟು ಮಾಡಿ ಇಟ್ಟಿದ್ದಕ್ಕೆ ಅಷ್ಟು ಸೇರಿಸುವ ಆಸೆ, ಕೊನೆಗೆ ಎಲ್ಲ ಬಿಟ್ಟು ೬ ಅಡಿ ೩ ಅಡಿ ದೇಹದೊಂದಿಗೆ ಸಾವು. ಇದೆ ತಾನೇ ಬದುಕು., ಮೊನ್ನೆ ಜಪಾನ್ ಭೂಕಂಪ ಹಾಗೂ ಸುನಾಮಿಯಲ್ಲಿ ಜಪಾನಿನ ಆತ್ಮೀಯ ಸ್ನೇಹಿತನ ಕುಟುಂಬ ಕಳೆದುಹೋಗಿದೆ. ಆತನ ತಂದೆ, ತಾಯಿ, ಹಾಗೂ ಇಬ್ಬರು ಅಕ್ಕಂದಿರು ಕಾಣೆಯಾಗಿದ್ದಾರೆ. ಅವರು ಸತ್ತಿದ್ದಾರೆ ಎನ್ನಲು ಅವನ ಮನಸ್ಸು ಒಪ್ಪುತ್ತಿಲ್ಲ. ಯಾಕೆಂದರೆ ಇಲ್ಲಿಯವರೆಗೆ ಅವರ ಶವಗಳು ಸಿಗುತ್ತಿಲ್ಲ. ದಿನೇ ದಿನೇ ಆತ ಕುಗ್ಗಿ ಹೋಗುತ್ತಿದ್ದಾನೆ. ಆತನ ನೋವಿಗೆ ಸಾಂತ್ವನ ಹೇಳುವ ಧೈರ್ಯ ನನಗಿಲ್ಲ. ''ನಶ್ವರ'' ದ ಬದುಕಿನ ವಿವಿಧ ಮಜಲುಗಳು ಕಣ್ಣ ಪಟಲದಿಂದ ಸರಿಯುತ್ತಿವೆ. ತಾಯಿಯ ಗರ್ಭದಿಂದ ಹೊರಗೆ ಬಂದಾಗ ಸುತ್ತ ಎಲ್ಲರೂ ನಗುತ್ತಿದ್ದರೆ, ಜಗದ ಮೈ ಮಾಟಕ್ಕೆ ತಯಾರಾಗುವ ಮಗುವಿನ ಕಣ್ಣಲ್ಲಿ ತುಂಬಿರುವುದು ನೀರು. ಆದರೆ ಜಗದಿಂದ ಹೊರತು ನಿಂತಾಗ ಎಲ್ಲರ ಕಣ್ಣಲ್ಲಿ ನೀರು, ಆದರೆ ಹೊರಡುವವನ ಕಣ್ಣಲ್ಲಿ ನಗು ತುಂಬಿರಬೇಕು, ಆಗಲೇ ಬದುಕು ಸಾರ್ಥಕ.
ಆ ಸ್ನೇಹಿತನ ಕುಟುಂಬ ಬೇಗ ಅವನಿಗೆ ಸಿಗಲಿ ಎಂದು ಪ್ರಾರ್ಥಿಸುತ್ತ ಈ ಕವನ ಅವನ ಕುಟುಂಬದ ನೆನಪಿಗಾಗಿ...ಎಲ್ಲ ನೋವುಗಳ ಆಚೆಯೊಂದು 
ನಲಿವೆಂಬ ಭಾವ ಇಹುದು
''ಸಾವು'' ಗೆದ್ದ ಮನಸಿಲ್ಲ ಇಲ್ಲಿ
ನೆರಳಂತೆ ಜೀವ ಬರದು   

ಜನ್ಮ ಪಡೆದ ಕ್ಷಣ, ಸುತ್ತಲೆಲ್ಲ ನಗು
ನಿನ್ನ ಕಣ್ಣಲ್ಲಿ ನೀರು
ಇಷ್ಟವಾಗಲಿ ಜಗದ ಮೈಮಾಟ
ದು:ಖ ಸುಖದ ತೇರು 

ನಿನ್ನದೆಂಬುದು ದೇಹ ಮಾತ್ರ
ನಿನ ಹಿಂದೆ ಬರರು ಯಾರೂ
ಒಣಜಂಭ ಬಿಟ್ಟು, ಪ್ರೀತಿಯನು ಕಟ್ಟು
ಮಾಡದೆಯೇ ಬದುಕು ಬೋರು

ಅರಳುತಿರಲಿ ಸುಮ, ಬೆರೆಯುತಿರಲಿ ನಗು
ಕೆದಕದಿರಲೆಂದು ಬದುಕು
ಮೂರು ದಿನದ ಒಡನಾಟವಿಹುದಿಲ್ಲಿ
ಎಂದೆಂದೂ ಮೆಲುಕು ಹಾಕು         

Sunday, April 3, 2011

ಖರ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ,

ಸ್ನೇಹಿತರೆ,

ಹೊಸ ಸಂವತ್ಸರ ಬರುತ್ತಿದೆ, ಎಂಥಹ ಸಿಹಿ ಸುದ್ದಿ, ದೇಶದ ಜನರಿಗೆ ವಿಶ್ವಕಪ್ಪಿನ ಉಡುಗೊರೆ ಒಂದೆಡೆಯಾದರೆ, ಟೆನ್ನಿಸ್ ನಲ್ಲಿ ಮಿಯಾಮಿ ಓಪನ್ ಗೆದ್ದು ವಿಶ್ವದ ನಂಬರ್ 1 ಜೋಡಿ ಯಾದ ಮಹೇಶ ಭೂಪತಿ, ಪೇಸ್ ಅವರ ಜುಗಲ್ ಬಂದಿ ಇನ್ನೊಂದೆಡೆ.
ಒಟ್ಟಿನಲ್ಲಿ ಹೊಸ ವರ್ಷ ಭರ್ಜರಿ ಆರಂಭವಾಗಿದೆ.
ದೇಶದ ಕೋಟ್ಯಾಂತರ ಅಭಿಮಾನಿಗಳ ಮನದ ದೇವರು ಸಚಿನ ಗೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇಕೇ....
ಕಳೆದ 20 -21 ವರ್ಷಗಳಿಂದ ದೇಶದ ಕ್ರಿಕೆಟ್ ನ ಹೊರೆ ಹೊತ್ತ ಸಚಿನ್ ನ ಸಾಧನೆಗೆ ಒಂದು ಸಲಾಮು.

ಖರ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ,

ಕಳೆದ ಎರಡು ತಿಂಗಳಿಂದ ಅನಿವಾರ್ಯ ಕಾರಣಗಳು ಬ್ಲಾಗ್ ಗೆ ಬರದಂತೆ ಮಾಡಿದ್ದವು. ಹೊಸ ವರ್ಷದಲ್ಲಿ ಮತ್ತೆ ನಿಮ್ಮೊಂದಿಗೆ ಬರುತ್ತೇನೆ,

ಹೊಸ ವರ್ಷ ನಿಮಗೆಲ್ಲ ಹೊಸತನ್ನು ನೀಡಲಿ,