Monday, October 3, 2011

ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು...

ಬದುಕಿನ ತುಂಬಾ ನೋವುಗಳಿವೆ, ಆಸೆಗಳಿವೆ, ಕೊಳಕು ಮನಸುಗಳಿವೆ, ಮೋಸದ ಮುಖಗಳಿವೆ. ಯಾರನ್ನು ನಂಬುವುದು, ಯಾರನ್ನು ಮೆಚ್ಚುವುದು, ಮುತ್ತುಗಳ ಆಸೆಯಲ್ಲಿ ಎಲ್ಲರೂ ಮತ್ತೇರಿದಂತೆ ನಶೆಯಲ್ಲಿ ಮುಳುಗಿದ್ದಾರೆ. ಎಷ್ಟು ಹಣ ಇದ್ದರೂ ಸುಖವಿಲ್ಲ. ಎರಡಗಲ ಭೂಮಿಯಲ್ಲಿ ಮಣ್ಣಾಗುವ ದೇಹವಿದು, ಅಂಥಹ ದೇಹ ಮಣ್ಣಾಗುವ ಮುನ್ನ, ಬಾಯಿ ತುಂಬಾ ನಗಲು ಕೂಡಾ ಹಿಂದೆ ಮುಂದೆ ನೋಡುವ ನಾವು ಸಾಧಿಸುವುದಾದರೂ  ಏನನ್ನು? 

ಇಲ್ಲಿ ಸಖ ತನ್ನ ಸಖಿಗೆ ಹೇಳುತ್ತಿದ್ದಾನೆ,  ನಿನ್ನ ಮುಖದಲ್ಲಿ ನನಗೆ ನಗು ಕಂಡರೆ ಅದಕ್ಕೆ ಕಾರಣ ನಾ ಹುಡುಕುವುದಿಲ್ಲ, ನಿನ್ನ ಸುಂದರ ಮಾತುಗಳಿಗೆ ನನಗೆ ಟಿಪ್ಪಣಿ ಬೇಕಾಗಿಲ್ಲ, ಆದರೆ ನೀನು ಬಿಕ್ಕಳಿಸದಿರು ಗೆಳತಿ, ಅದು ನನಗೆ ಹಿಂಸೆ ನೀಡುತ್ತದೆ. ಬತ್ತದ ಅದೆಷ್ಟೋ ನದಿಗಳು, ಅವುಗಳ ದಂಡೆಯಲ್ಲಿ ಬೆಳೆಯ ಬೆಳೆಯುತ್ತ ಇರುವ ಅದೆಷ್ಟೋ ಜನರಿದ್ದಾರೆ. ಎಲ್ಲೆಡೆ ಭತ್ತದ ಬಿತ್ತನೆ ಮುಗಿದು ತೆನೆ ಹಸನಾಗಿ ತೋರುತ್ತಿದೆ, ಮತ್ತೆ ಚಿಂತೆ ಬೇಡ, ಸದಾ ನಗುವಿರಲಿ ಮುಖದಿ, ಎನ್ನುತ್ತಿದ್ದಾನೆ. ಮೇಲುನೋಟಕ್ಕೆ ಇದು ಕೇವಲ ಗೆಳತಿಯ ಸಮಾಧಾನ ನೀಡುವ ಗೆಳೆಯನ ಪ್ರೀತಿಯೇ ಆದರೂ ಇದು ಸಮಾಜಕ್ಕೆ ಹಿಡಿದ ಕನ್ನಡಿಯೂ ಹೌದು. ಇಲ್ಲಿ ಬತ್ತದ ನದಿಗಳೆಂದರೆ, ''ಮನಸು''. ಬಿತ್ತಿದ ಬೆಳೆ ''ಪ್ರೀತಿ''. ಹುಟ್ಟಿ ನಳ ನಳಿಸುತ್ತಿರುವ ತೆನೆಗಳೆಂದರೆ ''ನಾಳೆಯ ಕಂದಮ್ಮಗಳು''. ಅವುಗಳಿಗೆ ಸರಿಯಾದ ನೀರಿನ ಪೋಷಣೆ ಸಿಕ್ಕರೆ ನಾಳಿನ ಉತ್ತಮ ಫಸಲಿಗೆ ಚಿಂತಿಸುವ ಅಗತ್ಯವಿಲ್ಲ. ಹಾಗೆಯೇ ಪ್ರೀತಿ, ನಗು ತುಂಬಿದ್ದರೆ ಅಲ್ಲಿ ಬಿಕ್ಕಳಿಸುವ ಪ್ರಮೇಯವಿಲ್ಲ ಎಂದು ತನ್ನ ಸಖಿಗೆ ಪ್ರಿಯ ಸಖ ಹೇಳುತ್ತಿದ್ದಾನೆ.




ನಿನ್ನ ನಗು ಕಂಡಾಗ ಕಾರಣವು ಬೇಕಿಲ್ಲ
ಅಂದದ ಮೊಗದಲ್ಲಿ, ಗೆರೆಗಳೇಕೆ
ಅಕ್ಕರೆಯ ನುಡಿಗಳಿಗೆ ಒಕ್ಕಣಿಕೆ ಬೇಕಿಲ್ಲ
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?

ಮುತ್ತಿನ ಮಾತುಗಳ ಮಾಲೆಯ ಹೆಣೆಯುವರು
ಕಿತ್ತಾಡುತಿಹರೆಲ್ಲ ಜಗದ ಒಳಗೆ
ಮುತ್ತುಗಳ ಆಸೆಯಲಿ ಮತ್ತೇರಿಹರೆಲ್ಲ
ಬಿಕ್ಕಳಿಸು ಗೆಳತಿ ಸುಖವು ಬೇಕೇ?


ಬತ್ತದ ನದಿಗಳಿವು ಬಿತ್ತುತಿರು ಬೆಳೆಯ
ಹೊತ್ತಲ್ಲದೊತ್ತಿನಲಿ ಹಸನು ಹಸನು
ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?

ಅಡಿಯಗಲ ಭೂಮಿಯಲಿ ಮಣ್ಣಾಗುವ ಮುನ್ನ
ಮನದಗಲ ನಗುವಿಗೆ ಸುಂಕ ಯಾಕೆ?
ನಿನ್ನ ನಗುವಿನಲೆನಗೆ ಕಾರಣವು ಬೇಕಿಲ್ಲ 
ಮಗುವಿನ  ಮೊಗವಿರಲಿ, ಬದುಕಿರುವುದ್ಯಾಕೆ?