Tuesday, September 29, 2009

ಷೋಡಷಿಯು ಅವಳು ....ಮನೆಯ ಮಂದಿರದಲ್ಲಿ ಮನದ ಆಳದ ಬೆಡಗಿ  
ಮನಸ್ಸನ್ನು ಕದ್ದಂಥ ಮಲೆನಾಡಿನ ಹುಡುಗಿ


ಮಲ್ಲಿಗೆಯೋ ಸಂಪಿಗೆಯೋ ಮನಸೆಲ್ಲ ಜಾಜಿ  
ಮಿಂಚಿನ ಸೆಳಕಿನಲಿ ತಪ್ಪೆಲ್ಲ ರಾಜಿ


ಮುದ್ದಿನ ಮಾವನ ಮುತ್ತಿನ ಮಗಳು 
ಮೆತ್ತನೆಯ ಮಾತಿಂದ ಮನವ ಗೆದ್ದಿಹಳು


ಮೈಮನದ ಮಕರಂದ ಮಾನಿನಿಗೆ ಚಂದ  
ಮನವನ್ನು ತಣಿಸುವಳು ನೋಡು ಮುದದಿಂದ


ಮಗುವಂತೆ ಬಂದು ಮಗುವನ್ನೇ ನೀಡಿದಳು 
ಮಕ್ಕಳಾದವು ಎರಡು ಒಂದು ಮರಿ ಮಗಳು


ಮಂದಹಾಸವ ಬೀರಿ ಈಗಲೂ ಕಾಯುವಳು  
ಹರೆಯ ಅರವತ್ತಾರು, ಷೋಡಷಿಯು ಅವಳು

Tuesday, September 22, 2009

ಅವಳ ನೆನಪು


-ಗುರು ಬಬ್ಬಿಗದ್ದೆ


ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು 
ಮಮತೆಯಿಂದ ಸಲಹಿದಂತ ತಾಯಿ ಮಡಿಲನು  
ತಿದ್ದಿ ತೀಡಿ ಬೆಳೆಸಿದಂತ ತಂದೆ ಮಾತನು  
ಅಣ್ಣ ಅಕ್ಕ ತೋರಿದಂತ ಪ್ರೀತಿ ನೆನಪನು 
 
ನಮ್ಮ ನೆಲದ ಗಂಧ ಗಾಳಿ ಇಲ್ಲಿ ರುಚಿಸದು  
ಇವರು ತೋರ್ವ ಮಮತೆ ಪ್ರೀತಿ ಕ್ಷಣಿಕವಾದುದು 
ಅಲ್ಲಿ ಸಿಗುವ ಮಣ್ಣ ವಸುಧೆ ಇಲ್ಲಿ ಇಲ್ಲವೊ  
ಇಲ್ಲಿ ಇರುವ ಮಣ್ಣಿನಲ್ಲಿ ಪ್ರಣಯ ಇಲ್ಲವೊ  

ನಮ್ಮ ಊರು ನಮ್ಮ ಜನ ಏನು ಚಂದವೋ  
ಬಡವನೂಟ ಬಾಳಿನಲ್ಲಿ ಸಿರಿಯ ಭಾಗ್ಯವೋ  
ಹರುಕ ಸೀರೆ ಮುರುಕ ಬಟ್ಟೆ ನಮ್ಮ ತಾಯಿಯೋ
ಆದರವಳು ನಮ್ಮ ಮನಸ ಪ್ರೇಮದಾಯಿಯೋ

ಎಲ್ಲ ಇದೆ ಇಲ್ಲಿ ಎಂಬ ಪೊಳ್ಳು ಮನಸಿದೋ  
ಹಣದ ಮುಂದೆ ಮನವು ಮಾನ ಮಾರಿಕೊಂಬುದೋ
ಅನುರಾಗದ ಸೆಲೆಗೆ ಇಲ್ಲಿ ಬೆಲೆಯೇ ಇಲ್ಲವೊ  
ಇದ್ದರೂನು ತಾಯ್ಗೆ ಬಟ್ಟೆ ಹರುಕೆ ಚಂದವೋ  

ಏನೇ ಆದರು ನಮ್ಮ ತಾಯ್ಗೆ ನಾವೇ ಮಕ್ಕಳು  
ನಿಂದಿಸಿದರೂ ಸಲಹುತಿಹುದು ಅವಳ ಹೊಕ್ಕಳು 
ನಮ್ಮ ನೀರು ನಮ್ಮ ಗಾಳಿ ಗಂಧದ ಗುಡಿಯೋ 
ಇರುವುದೆಲ್ಲ ಬಿಟ್ಟು ಇಲ್ಲಿ ಅಲ್ಲಿಗೆ ನಡಿಯೋ

Tuesday, September 15, 2009

ಆಧ್ಯಾತ್ಮದ ಹರಿಕಾರನಾಗಿ ವೈಜ್ಞಾನಿಕ ಕ್ರಾಂತಿಗೆ ಮುನ್ನುಡಿ ಬರೆದು ನಮ್ಮನ್ನಗಲಿದ ಶ್ರೀ ವಿಭುದೇಶರಿಗೆ ಭಾವಪೂರ್ಣ ನಮನ


-ಗುರು ಬಬ್ಬಿಗದ್ದೆ

ಧರ್ಮ ಹಾಗೂ ವಿಜ್ಞಾನ ಒಂದೇ ನೆರಳಿನಲ್ಲಿ ಇರುವುದು ಬಹಳ ಕಡಿಮೆ. ಒಂದು ಇನ್ನೊಂದಕ್ಕೆ ವಿರುದ್ದ. ಅದಕ್ಕಾಗಿಯೇ ಸ್ವಾಮೀಜಿಗಳು ಹಾಗೂ ವಿಜ್ಞಾನಿಗಳ ವಿಚಾರ ಸರಣಿಯೇ ಬೇರೆ ಬೇರೆ. ಒಬ್ಬರು ನಿರಾಕಾರ ಭಗವಂತನ ಆರಾಧಕರಾದರೆ ಇನ್ನೊಬ್ಬರು ಭಗವಂತನ ಅಸ್ತಿತ್ವವನ್ನೇ ಪ್ರಶ್ನಿಸುವವರು. ಇವರಿಬ್ಬರೂ ಒಂದೇ ಆಗಿದ್ದು ತುಂಬಾ ವಿರಳ. ಆದರೆ ಇಂದು ಬೆಳಿಗ್ಗೆ ನಮ್ಮನ್ನಗಲಿದ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥರು ಧರ್ಮದ ಹರಿಕಾರನಾಗಿ ವಿಜ್ಞಾನದ ಕ್ರಾಂತಿಗೆ ಚಾಲನೆ ಕೊಟ್ಟವರು ಎಂದರೆ ಅತಿಶಯೋಕ್ತಿಯಲ್ಲ. ಹೌದು, ಶ್ರೀ ವಿಭುದೇಶ ತೀರ್ಥರೆಂದರೆ , ಶ್ರೀ ಪೂರ್ಣಪ್ರಜ್ಞ ಸಂಸ್ಥೆಯ ಸಂಸ್ಥಾಪಕರೆಂದರೆ ಸಮಸ್ತ ಭಾರತಕ್ಕೂ ಗೊತ್ತು. ಇಂದು ಭಾರತದಾದ್ಯಂತ ಹೆಸರು ಮಾಡಿರುವ ಕೆಲವೇ ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಪೂರ್ಣಪ್ರಜ್ನವೂ ಒಂದು. ಇಂದು ಪೂರ್ಣಪ್ರಜ್ಞ ಸುಮಾರು ೨೭ ಶಾಲಾ , ಕಾಲೇಜುಗಳನ್ನು ಒಳಗೊಂಡಿದೆ. ಇದಕ್ಕೆಲ್ಲ ಕಾರಣೀಭೂತರಾದವರು ಶ್ರೀ ವಿಭುದೇಶರು. ಆಧ್ಯಾತ್ಮದ ನಡುವೆಯೇ ವಿಜ್ಞಾನದ ಅಪಾರ ಆಸಕ್ತಿ ಅವರ ವೈಶಿಷ್ಟ್ಯತೆ.
ಅವರ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಹಳಷ್ಟು ವಿಜ್ಞಾನಕ್ಕೆ ಪ್ರೋತ್ಸಾಹಿಸಿದ ಸ್ವಾಮೀಜಿಯವರು ಅಪಾರ ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಸ್ಥಾಪಿಸಿದ್ದಾರೆ.
ಯಾವ ಸ್ವಾಮೀಜಿಯವರು ಮಾಡದ ಈ ನೂತನ ಕೆಲಸ ಒಂದು ಮೈಲಿಗಲ್ಲೇ ಸರಿ. ಅವರ ಮಾತಿನಲ್ಲೇ ಹೇಳುವದಾದರೆ '' ಭಾರತೀಯರು ವಿದೇಶಗಳಲ್ಲಿ ಸಂಶೋಧನೆ ಮಾಡಿ ನೋಬಲ್ ಪಡೆಯುತ್ತಾರೆ, ಆದರೆ ನಮ್ಮ ಪ್ರತಿಭೆಗಳು ನಮ್ಮಲ್ಲೇ ಸಂಶೋಧನೆ ಮಾಡಿ ನೋಬಲ್ ಪಡೆಯಬೇಕು. ಅದೇ ದೇಶಕ್ಕೆ ಹೆಮ್ಮೆ, ಅದಕ್ಕಾಗಿಯೇ ಈ ಸಂಶೋಧನಾ ಕೇಂದ್ರ ನನ್ನ ಬಹುದಿನದ ಆಸೆ'' ಎಂದು ಸುಮಾರು 6 ವರ್ಷಗಳ ಹಿಂದೆ ಸ್ವಾಮೀಜಿ ಹೇಳಿದ್ದು ನನಗಿನ್ನೂ ನೆನಪಿದೆ. ಅದರಲ್ಲೂ ಭೌತಶಾಸ್ತ್ರದ ಬಗ್ಗೆ ವಿಶೇಷ ಒಲವು ಹೊಂದಿದ್ದ ಸ್ವಾಮೀಜಿ ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತರಾಗಿದ್ದರು. ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದ ಸ್ವಾಮೀಜಿಯವರು ಆಲಸ್ಯವನ್ನು ಎಂದಿಗೂ ಸಹಿಸುತ್ತಿರಲಿಲ್ಲ.
ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಟ್ಟು ನಿಟ್ಟಿನ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಸ್ವಾಮೀಜಿ ಶಿಕ್ಷಣಕ್ಕೆ ಒಂದು ಹೊಸ ರೂಪ ನೀಡಿದ್ದರು. ಬೆಂಗಳೂರಿನ ಜನರು ಪೂರ್ಣಪ್ರಜ್ಞಕ್ಕೆ ಇಂದಿಗೂ ಮುಗಿ ಬೀಳುವುದು ಇದಕ್ಕಾಗಿಯೇ.
ಸ್ವಾಮೀಜಿಯಾಗಿ ದೇವರ ಧ್ಯಾನದಲ್ಲಿಯೇ ನಿರತನಾಗದೆ ಸಮಾಜಕ್ಕೆ ಉಪಕಾರ ಮಾಡುತ್ತಾ ಶಿಕ್ಷಣಕ್ಕೆ ಅನುಪಮ ಸೇವೆ ಸಲ್ಲಿಸಿದ ಶ್ರೀ ವಿಭುದೇಶರ ಅಗಲಿಕೆಯ ನೋವು ಬಹುದಿನ ನಮ್ಮನ್ನು ಕಾಡುತ್ತದೆ.
ಅವರದೆ ವಿದ್ಯಾ ಸಂಸ್ಥೆಯಲ್ಲಿ ಕಲಿತ ನನಗೆ ಅವರನ್ನು ಹತ್ತಿರದಿಂದ ನೋಡಿದ ಭಾಗ್ಯವಿದೆ. ಅವರ ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮವನ್ನು ನಿರ್ವಹಣೆಯನ್ನು ಮಾಡಿದ್ದೇನೆ. ಅವರಿಂದ ಆಶೀರ್ವಾದ ಕೂಡ ಪಡೆದಿದ್ದೇನೆ. ಇಂದು ಬೆಳಗಿನ ಜಾವ ಬಂದ ಸುದ್ದಿ ಒಮ್ಮೆ ನನ್ನ ಮನಸ್ಸನ್ನೇ ವಿಚಲಿತಗೊಲಿಸಿತು. ಕೂಡಲೇ ಅವರ ಬಗೆಗೆ 4 ಮಾತುಗಳನ್ನಾಡುವ ಬಯಕೆ ತೋರಿತು.
ಅವರಿಲ್ಲ ನಿಜ, ಆದರೆ ಅವರ ಜ್ಞಾನದೀವಿಗೆ ಸದಾ ನಮ್ಮೊಂದಿಗಿದೆ. ಅವರ ದಿವ್ಯ ಉದ್ದೇಶ ನಮ್ಮೊಂದಿಗಿದೆ.
ಅವರ ಶಿಕ್ಷಣ ಸಂಸ್ಥೆ ಇನ್ನು ಹೆಚ್ಚು ಯಶಸ್ಸು ಪಡೆಯಲಿ ಎಂಬ ಹಾರೈಕೆಯೊಂದಿಗೆ ನನ್ನ ಬಾಳಿಗೆ ಬೆಳಕಾದ ಆ ಆಧ್ಯಾತ್ಮದ ಹರಿಕಾರನಿಗೊಂದು ದಿವ್ಯ ನಮನ, ಭಾವಪೂರ್ಣ ನಮನ,
ಸದಾ ನಿಮ್ಮ ನೆನಪಿನಲ್ಲಿ, ನಿಮ್ಮದೇ ಮಾರ್ಗದರ್ಶನದ ಅಡಿಯಲ್ಲಿ ಮುನ್ನಡೆಯುತ್ತಾ....

ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥರಿಗೆ ಕೊನೆಯ ದಿವ್ಯ ನಮನ

Saturday, September 12, 2009

ಮರೆಯದಿರು ಮನವೇ

- ಗುರು ಬಬ್ಬಿಗದ್ದೆ

ಮರೆಯಬೇಡ ಮರೆಯಬೇಡ ಮರೆಯಬೇಡ ನನ್ನ ಮನವೇ
ಮರೆತು ನೀನು ಮರುಗ ಬೇಡ ಮನದ ಪ್ರೇಮವೇ
ಕೊರಗಬೇಡ ಕೊರಗಬೇಡ ಕೊರಗಬೇಡ ಜೀವ ಸೆಲೆಯೇ
ಕೊರಗಿ ನೀನು ದುಡುಕಬೇಡ ಭಾವ ಬಿಂದುವೇ
ಸೊರಗಿ ಹೋದ ಮರವೂ ಕೂಡ ಮರಳಿ ಬಾಳ ಕಾಯುತಿಹುದು
ಪುನ: ಚಿಗುರಿ ಚಿಗುರಿ ಪುನ: ನಗುವ ತೋರ್ವದು
ಮುಗುದೆ ನೀನು ಮುದುಡಬೇಡ ಮುದದಿ ನಿನ್ನ ಅಪ್ಪಿಕೊಳುವೆ
ಕ್ಷಣದಿ ನೆನೆದು ನೆನೆದು ಕ್ಷಣದಿ ಬದುಕ ಬಯಸುವೆ
ಕಾಲನೆದೆಯ ಗರ್ಭದಲ್ಲಿ ಸತತ ಕೃಷಿಯು ನಡೆಯುತಿಹುದು
ಹುಟ್ಟು ಸಾವು ಸಾವು ಹುಟ್ಟು ವಿಧಿಯ ಬರಹವೋ
ಮನವಿದೆನ್ನ ಅರ್ಪಿಸಿಹೆನು ಕ್ಷಣದೊಳೆನ್ನ ವದನ ನೋಡು
ಕದನ ಸರಸ ಸರಸ ಕದನ ಬದುಕಿನಾಟವೋ