Wednesday, August 3, 2011

ಚಳಿಯ ನಾಡಿನ ಬೆವರಿನ ನೋಟ ....Part 2

ಬದುಕಿಗೆ ವಿದೇಶ ಬೇಕಿರಲಿಲ್ಲ, ಅದು ಅನಿವಾರ್ಯವೂ ಆಗಿರಲಿಲ್ಲ. ಆದರೆ ಬದುಕಿನ ಸಾರ್ಥಕತೆಗೆ ಹೊರದೇಶದ ಕೆಲಸದ ಅನುಭವ ಬೇಕಿತ್ತು. ಆ ತುಡಿತವೇ ವಿದೇಶಕ್ಕೆ ಹೋಗಲು ಪೂರಕ ಹಾಗೂ ಪ್ರೇರಕ. ಹಾಗೆಂದು ವಿದೇಶದಲ್ಲಿ ಇದ್ದ ಮಾತ್ರಕ್ಕೆ ದೇಶ ಪ್ರೇಮ ಕಡಿಮೆ ಆಗದು. ಅದು ನಿರಂತರ ಶಾಶ್ವತ. ವಿದೇಶದಲ್ಲಿ ಕೆಲಸ ಮಾಡುವುದೇ ತಪ್ಪು ಎಂದಾದರೆ, ದೇಶದಲ್ಲೇ ಇದ್ದು ''ವಿದೇಶಿ ಕಂಪನಿಗಳಿಗೆ'' ಕೆಲಸ ಮಾಡುವುದು ಇನ್ನು ತಪ್ಪಲ್ಲವೇ? ತಪ್ಪನ್ನು ಹುಡುಕುತ್ತ ಹೋದರೆ ಅದಕ್ಕೆ ಕೊನೆಯಿಲ್ಲ. ಆದರೆ ಅದು ಎಷ್ಟರ ಮಟ್ಟಿಗೆ ಅವಶ್ಯಕ ಎನ್ನುವುದನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಮೊದ ಮೊದಲು ವಿದೇಶಕ್ಕೆ ಹೋದಾಗ ಅಲ್ಲಿನ ಪರಿಸರ, ನಮ್ಮವರ ಪ್ರೀತಿ ಸ್ನೇಹದ ಕೊರತೆ ಕಾಡುವುದು ಬಹಳ ಸಹಜ. ಆದರೆ ಕ್ರಮೇಣ ಅಲ್ಲಿನ ಪರಿಸರಕ್ಕೆ ಬದುಕು ಹೊಂದಿಕೊಳ್ಳುವ ಅನಿವಾರ್ಯತೆ ಎದುರಿಸುತ್ತದೆ, ಆ ಅನಿವಾರ್ಯತೆ ಮುಂದೆ ಅವಶ್ಯಕತೆ ಎನಿಸುತ್ತದೆ. ಆ ಅವಶ್ಯಕತೆಯ ಮೇಲೆ ನಮ್ಮದೇ ವ್ಯಾಕ್ಯಾನ ಬರೆದು ನಮ್ಮ ದೇಶಕ್ಕೆ ಹೋಗಲು ಸಾದ್ಯವೇ ಇಲ್ಲದ ಸನ್ನಿವೇಶ ಸ್ರಷ್ಟಿಯಾಗುತ್ತದೆ. ಇದೆಲ್ಲವೂ ಮನಸ್ಸಿನ ಕೆಲವು ಕ್ಷಣ ಗಳು ಅಷ್ಟೇ. 

''ತೆರೆದಿಡು ಮನವನ್ನು, ಅರೆಕ್ಷಣ ಚಿಂತಿಸುವ  ಮುನ್ನ
ಹರಿಯಬಿಡು ಕ್ಷಣವನ್ನ, ಬಾಚಿಕೋ ನೀ ಆಹ್ವಾನ''

ಬದುಕಿಗೆ ಅವಕಾಶಗಳು ಸಿಗುವುದು ಬಹಳ ಕಡಿಮೆ. ''ಎಲ್ಲ ಅವಕಾಶಗಳು ನಿಮ್ಮ ಮನೆಯ ಬಾಗಿಲಿಗೆ ಬಂದು, ಸ್ವೀಕರಿಸು ನನ್ನ, ಸ್ವೀಕರಿಸು ನನ್ನ ಎಂದು ಗೋಗರೆಯುವುದೂ ಇಲ್ಲ'' ಹಾಗಾಗಿ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳುವುದೇ ಬುದ್ದಿವಂತಿಕೆ. ನಾವು ಸದಾ ನಮ್ಮ ರಾಜಕೀಯದವರು ಏನು ಮಾಡಿದ್ದಾರೆ, ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎನ್ನುತ್ತಿದ್ದೆವೆಯೇ ಹೊರತು ನಾವು ಏನು ಮಾಡಿದ್ದೇವೆ ಎಂದು ಚಿಂತಿಸುವುದೇ ಇಲ್ಲ. ಕೆನಡಿಯವರ ಮಾತು ನೆನಪಾಗುತ್ತದೆ,

''Don't ask what country can do for you
Ask what you can do for your country''

ಹಾಗಾಗಿ ದೇಶ ಪ್ರೇಮ ಕೇವಲ ಅಕ್ಷರಗಳ ಮಾತಾಗದೆ ಅದು ಕಾರ್ಯರೂಪಕ್ಕೆ ಇಳಿಯಬೇಕಿದೆ. ನಮ್ಮ ದೇಶಕ್ಕೆ ನಾವು ಕೊಡುವ ಅಲ್ಪ ಕಾಣಿಕೆಯೂ ಬ್ರಹದಾಕಾರವಾಗಿ ಬೆಳೆದು ದೊಡ್ಡ ಪರ್ವತವೆ ಆಗುತ್ತದೆ. ಸುಧಾರಣೆ ನಿನ್ನಿಂದಲೇ ಆರಂಬವಾಗಲಿ ಎಂಬ ಕವಿವಾಣಿ ಎಂದಿಗೂ ಸತ್ಯ. ಇದೆಲ್ಲ ಅನುಭವಕ್ಕೆ ಬಂದಿದ್ದು 3 ವರ್ಷಗಳ ಹಿಂದೆ ಸ್ವೀಡನ್ ದೇಶಕ್ಕೆ ಬಂದಾಗ. 

ನನ್ನನ್ನು ಬಹಳಷ್ಟು ಚಿಂತನೆಗೆ ಹಚ್ಚಿದ ದೇಶ ಇದು. ಸ್ವೀಡನ್ ಎಂದರೆ ''IKEA'' ಎಂಬ ನಾನ್ನುಡಿಯಿದೆ. ಕಾರಣ ಸ್ವೀಡನ್ ದ ಭಾಗವೇ ಆದ  ''IKEA''  ಕಂಪನಿ ಯಲ್ಲಿ ಶಿಸ್ತು ಹಾಗೂ ಅಚ್ಚು ಕಟ್ಟುತನ ಎಲ್ಲೆಡೆ ನೋಡಲು ಸಿಗುತ್ತದೆ. ಪ್ರತಿಯೊಬ್ಬರ ಮನೆಯ ಎಲ್ಲ ವಸ್ತುಗಳು  ''IKEA''  ಕಂಪನಿಯಿಂದಲೇ ಬರುತ್ತದೆ. ಜನರ ಆಸೆಗೆ, ರುಚಿಗೆ ತಕ್ಕಂತೆ ಎಲ್ಲ ಸಾಮಾನುಗಳನ್ನು ಅವರು ತಯಾರಿಸುತ್ತಾರೆ. ಸದ್ಯದಲ್ಲಿಯೇ ನಮ್ಮ ದೇಶದ ಮುಂಬೈ ಗೆ  ''IKEA''  ಕಂಪನಿ ಬರುತ್ತದೆ ಎಂಬ ಸುದ್ದಿ ಇದೆ. ಸ್ವೀಡನ್ ಅಂದರೆ ನೆನಪಾಗುವುದು ''VOLVO'' ಕಾರು ಗಳು. ಅತ್ಯಂತ ಬೆಲೆಬಾಳುವ ಜನರ ಮೆಚ್ಚಿನ ಕಾರುಗಳು ಜಗತ್ಪ್ರಸಿದ್ದ. ಅಷ್ಟೇ ಯಾಕೆ ನಮ್ಮ ರಸ್ತೆಗಳಲ್ಲಿ ಸಂಚರಿಸುವ ಸುಖದ ಸುಪ್ಪತ್ತಿಗೆಯಂತೆ  ಇರುವ ''VOLVO'' ಬಸ್ ಗಳು ಈ ದೇಶದ ಉತ್ಪಾದನೆ. ದೊಡ್ಡ ದೊಡ್ಡ ಮಹಡಿಗಳ ನಿರ್ಮಾಣ ತಯಾರಿಕೆ, ರಸ್ತೆ ನಿರ್ಮಾಣ ತಯಾರಿಕೆ ಗಳಲ್ಲಿ ಉಪಯೋಗಿಸುವ ಬಹುತೇಕ ಬ್ರಹತ್ ಉಪಕರಣಗಳು ''VOLVO'' ಕಂಪನಿಯಿಂದಲೇ ತಯಾರಾದದ್ದು. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಸ್ವೀಡನ್ ಎಂದರೆ ನೆನಪಾಗುವುದು ''SKF'' ಕಂಪನಿ. ನಟ್ಟು, ಬೋಲ್ಟ್ ಗಳ ತಯಾರಿಕೆಯಲ್ಲಿ ವಿಶ್ವದ ನಂಬರ್ ಒನ್ ಕಂಪನಿಯಾದ ಇದು ಜಗತ್ತಿನ ಎಲ್ಲ ದೇಶಗಳಲ್ಲಿ ತನ್ನ ಸೇವೆ ನೀಡುತ್ತಿದೆ. ನೋಡಿ, ಎಷ್ಟು ಸಣ್ಣ ದೇಶ, ಆದರೆ ಅವರ ಸಾಧನೆ ಜಗತ್ತಿನಾದ್ಯಂತ ವಿಸ್ತರಿಸಿದೆ. ''ಮನಸ್ಸಿದ್ದರೆ ಮಾರ್ಗ'' ಎನ್ನುವುದಕ್ಕೆ ಈ ದೇಶದ ಜನ ಜೀವಂತ ಉದಾಹರಣೆ. ಸರಿ, ಏನಪ್ಪಾ ಇವರ ಜನಸಂಖ್ಯೆ ಅಂತಿರಾ, ಅಬ್ಬಬಬ್ಬ ಅಂದ್ರೆ 9 ಮಿಲಿಯನ್ ನಷ್ಟು. ನೋಡಿದ್ರ, 9 ಮಿಲಿಯನ ಜನ ಸೇರಿ ಇಷ್ಟೊಂದು ಸಾಧನೆ ಮಾಡೋದಾದ್ರೆ 1 .3 ಬಿಲಿಯನ್ ಜನ ಏನೇನು ಮಾಡಬಹುದಿತ್ತು. ಆಲ್ವಾ?

ಏನೋ, ಬೇಕಾದಷ್ಟು ಹಣ ಇದೆ ಅವ್ರಿಗೆ, ಏನು ಬೇಕಾದರು ಮಾಡ್ತಾರೆ ಅಂತಿರಾ? ಕಷ್ಟನೆ ಇಲ್ಲ ಅವರಿಗೆ ಅಂದ್ಕೊಂಡ್ರ? ಇಲ್ಲ ಸ್ವಾಮೀ. ನಿಮ್ಮ ಊಹೆ ತಪ್ಪು. ವರ್ಷದ 6 ತಿಂಗಳು ವಿಪರೀತ ಚಳಿ. ಎಷ್ಟು ಅಂದ್ರೆ ಇಲ್ಲಿನ ಉಷ್ಣತೆ  - 25 ಡಿಗ್ರಿ ಹೋಗುತ್ತದೆ. ನಮಗೆ + 15 ಹೋದ್ರೆ ಸಿಕ್ಕಾಪಟ್ಟೆ ಚಳಿ ಅಂತಿವಿ, ಅದ್ರಲ್ಲಿ -25 ಅಂದ್ರೆ ಹೇಗಿರಬೇಡ. ಸದಾ ಹಿಮ ಬಿಳ್ತಾ ಇರತ್ತೆ, ಇದೆಲ್ಲ ಸಾಲದು ಅನ್ನೋ ಹಾಗೆ ವಿಪರೀತ ಅನ್ನೋ ಕತ್ತಲು. ದಿನದ 20 ಘಂಟೆ  ಕತ್ತಲು ಕತ್ತಲು ಎಷ್ಟು ಘೋರ ಅನ್ನೋದು ಇಲ್ಲಿ ಬಂದ ಮೇಲೆ ನಮಗೆ ತಿಳೀತು. ನೀವೇನಾದ್ರು ಬ್ರಮ್ಹಚಾರಿ ಆಗಿದ್ರೆ ನಿಮ್ಮ ಕಥೆ ಮುಗಿತು, ಸದಾ ಕತ್ತಲು, ಹೊರಗಡೆ ಹೋಗೋ ಹಾಗಿಲ್ಲ, ಮಾತಾಡೋಕೆ ಯಾರು ಸಿಗಲ್ಲ, ರಸ್ತೆ ಎಲ್ಲ ಖಾಲಿ ಖಾಲಿ, ಒಂಥರಾ ಸಮೂಹ ಸನ್ನಿ ಅಂತಾರಲ್ಲ, ಹಾಗೆ ಆಗತ್ತೆ ಎಲ್ಲಾರಿಗೂ. ತುಂಬಾನೇ Depression ಸ್ಟಾರ್ಟ್ ಆಗುತ್ತೆ.


ಅಂಥಹ ಕತ್ತಲನ್ನೇ ಗೆದ್ದು ಬಂದಿದ್ದಾರೆ ಅವರೆಲ್ಲ. ಅವರ ಇಂದಿನ ಶ್ರೀಮಂತಿಕೆ ಅವರು ಬೆವರು ಸುರಿಸಿ ಗಳಿಸಿದ್ದು. ಅವರಿಗೆ ನಮ್ಮ ದೇಶದ ಹಾಗೆ ಶ್ರೀಮಂತ ಪರಂಪರೆಯಿಲ್ಲ. ಒಂದು ಕಾಲದಲ್ಲಿ ಕಡು ಬಡವರೇ ಆಗಿದ್ದ ಅವರು ಸುಧಾರಣೆಯ ಟೊಂಕ ಕಟ್ಟಿದ ಕ್ಷಣದಿಂದ ಬದಲಾದರು. ಅಲ್ಲೀಗ  ಕೇವಲ ''ಸುಧಾರಣೆ, ಸುಧಾರಣೆ, ಸುಧಾರಣೆ''

ದಿನಕರ ದೇಸಾಯಿ ಯವರ ಮಾತೊಂದು ನೆನಪಾಗ್ತಾ ಇದೆ 

''ಮನುಕುಲದ ರಕ್ತಮಯ ಇತಿಹಾಸ ಕೂಗಿತ್ತು
ನೆಲವು ನಂದನವಾಗಲೇನು ಬೇಕು
ತಿಳಿವು ತುಂಬಿದ ಕಣ್ಣು, ಅರಿವು ತುಂಬಿದ ಎದೆಯು 
ಛಲವನರಿಯದ  ಬದುಕು ಇಷ್ಟೇ ಸಾಕು''


ಬದುಕಲ್ಲಿ ಸಾಧಿಸುವ ಮನೋಭಾವ, ಮಾನವೀಯತೆ ತುಂಬಿದರೆ ಏನನ್ನಾದರೂ ಮಾಡಬಹುದು ಅನ್ನೋದಕ್ಕೆ ಸ್ವೀಡನ್ ಜನರ ಸಾಧನೆಯೇ ಉದಾಹರಣೆ.

ಅಲ್ಲಿನ ಬದುಕಾದರೂ ಎಂತದ್ದು, ಅವರ ದಿನನಿತ್ಯದ ಜೀವನ ಶೈಲಿ ಹೇಗೆ, ಬದುಕನ್ನು ಅವರು ನೋಡುವ ರೀತಿ ಹೇಗೆ ಇದನ್ನೆಲ್ಲಾ ಮುಂದಿನ ವಾರ ನಿಮ್ಮೊಂದಿಗೆ ಹಂಚೋಕೊತಿನಿ, ಅಲ್ಲಿತನಕ ಕಾಯ್ತಿರಲ್ಲ....

ನಿಮ್ಮವ
ಗುರು 


ಹಿಂದಿನ ವಾರ ಇದೆ ಸರಣಿಯ ಮೊದಲ ಭಾಗ ಬರೆದಿದ್ದೆ, ನೀವು ಓದಿಲ್ಲ ಅಂದ್ರೆ ಇಲ್ಲಿದೆ ಓದಿ 
ಮರೆತೆನೆಂದರ ಮರೆಯಲಿ ಹ್ಯಾಂಗ್ 
http://gurumurthyhegde.blogspot.com/