Sunday, September 25, 2011

ನಿಮ್ಮ ಬೈಗುಳ ತಾಗದೆ ಇದ್ದಿದ್ದರೆ ....


ಆ ದಿನಗಳೇ ಹಾಗಿತ್ತು, ಒಂದು ಬೈದರೆ ಕಡಿಮೆ , ಎರಡು ಬೈದರೆ ಹೆಚ್ಚು. ಕ್ಲಾಸಿನ ಬಾಗಿಲ ತುದಿಯಲ್ಲಿ ಹುಡುಗಿಯೊಬ್ಬಳು ನಕ್ಕರೆ ಅವಳು ನಮ್ಮನ್ನೇ ನೋಡಿ ನಕ್ಕಳೋ? ಅವಳಿಗೆ ನಮ್ಮ ಕಂಡರೆ ಇಷ್ಟವೇನೋ? ಎಂದೆಲ್ಲ ಚಿಂತಿಸಿ ಅವಳಿಗೆ ನಮ್ಮ ಮೇಲೆ ಪ್ರೀತಿ ಬಂದಿದೆ ಎಂದು ತರ್ಕಿಸಿ ಅದನ್ನು ಎಲ್ಲ ಗೆಳೆಯರಲ್ಲಿ ಟಂ ಟಂ ಮಾಡುವ ವಯಸ್ಸದು. ತರಗತಿಯಲ್ಲಿ ಉಪನ್ಯಾಸಕರು ಸಿಟ್ಟಿನಿಂದ ನಮಗೆ ಅವಮಾನ ಮಾಡಿದರೆ ಅವರು ನಮ್ಮ ಆಜನ್ಮ ಶತ್ರುಗಳು ಎಂದು ಭಾವಿಸಿ ಅವರ ಮೇಲೆ ಸೇಡು ಹೇಗೆ ತೀರಿಸಿಕೊಳ್ಳಬೇಕು ಎಂದು ಮನದೊಳಗೆ ಲೆಕ್ಕ ಹಾಕುವ ಮನಸ್ಸದು. ರಸ್ತೆಯಲ್ಲೆಲ್ಲೋ ಮಂತ್ರಿ ಮಾಗಧರು ಭಾಷಣ ಮಾಡುತ್ತಿದ್ದರೆ ನಾವೇ ಮಂತ್ರಿಗಳೆನೋ ಎಂದು ಭಾವಿಸಿ ಮನದೊಳಗೆ ಮಂತ್ರಿಯಾದಂತೆ ಭವಿಷ್ಯದ ರಾಷ್ಟ್ರ ರೂಪಿಸುವ ಹೊಸ ಕನಸ್ಸದು. ಒಟ್ಟಿನಲ್ಲಿ ಬದುಕಿಗೆ ಸರ್ವಸ್ವವನ್ನೂ ಬಯಸುವ ತುಂಟ ಮನಸಿನ ಸೊಗಸು ಅದು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ದಿನಗಳ ನೆನಪು ನನಗೆ ಸದಾ ಮನದಲ್ಲಿ ಉಳಿಯುವಂತಾದ್ದು. ಅದಕ್ಕೆ ಅನೇಕ ಕಾರಣಗಳಿವೆ. ಆ ದಿನಗಳಲ್ಲಿ ಕಷ್ಟವಿತ್ತು, ಸುಖವಿತ್ತು, ಸಾಧನೆಯಿತ್ತು , ನೋವಿತ್ತು, ನಲಿವಿತ್ತು, ಕಲಿಯುವ ಅದಮ್ಯ ಉತ್ಸಾಹವಿತ್ತು. ಬಹುಶ: ಉಡುಪಿಗೆ ನಾನು ಅಂದು ಹೋಗದೇ ಇದ್ದಿದ್ದರೆ ಇಂದು ಇಲ್ಲಿ ನಾನು ಇರುತ್ತಿರಲಿಲ್ಲ. ಪೂರ್ಣಪ್ರಜ್ಞ ಕಾಲೇಜು ನೆನಪಾದ ಕೂಡಲೇ ನೆನಪಾಗುವ ವ್ಯಕ್ತಿತ್ವ ಪ್ರೊಫೆಸರ್ ಡಿ ಜಿ ಹೆಗಡೆ ಅವರದ್ದು. ನಾನು ಅಲ್ಲಿರುವಷ್ಟು ಕಾಲ ನನ್ನನ್ನು ಮಗನಂತೆ ಅವರು ನೋಡಿಕೊಂಡಿದ್ದರು. ಅನೇಕ ಸಂದರ್ಭಗಳಲ್ಲಿ ನನಗೆ ಬಹಳಷ್ಟು ಸಹಾಯ ಮಾಡಿದ ಮಹಾನ್ ವ್ಯಕ್ತಿತ್ವ ಅವರದ್ದು. ಉಡುಪಿಯ ಕಾಲೇಜಿನ ನೆನಪಾದಾಗಲೆಲ್ಲ ನಮ್ಮನ್ನಗಲಿದ ಅವರ ನೆನಪು ಕಾಡುತ್ತದೆ. ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಅವರ ಪಾಲು ಬಹು ದೊಡ್ಡದು. ಕಾಲೇಜಿನ ದಿನಗಳೆಂದರೆ ಒಂಥರಾ ಮರ ಹತ್ತುವ ಮಂಗನ ಮನಸ್ಸು. ಎಲ್ಲ ಮರವೂ ನಮ್ಮದೇ ಎನ್ನುವ ಹುಂಬತನ. ಎಲ್ಲ ವಿಷಯಗಳಲ್ಲೂ ಪ್ರಾವೀಣ್ಯತೆ ಸಾಧಿಸುವ ಭಂಡತನ. ಅದು ಸರಿಯಾಗಿ ಅರ್ಥ ಆಗುವಷ್ಟರಲ್ಲಿ ನಾವು ಇಳಿಯುವ station ಬಂದಿರುತ್ತದೆ. ತಿರುಗಿ ಹೋಗುವಂತಿಲ್ಲ.ಮುಂದುವರೆಯಲು ಬೇರೆ ರಸ್ತೆಗಳು ಹೆಚ್ಚಿಲ್ಲ ಎನ್ನುವ ಸ್ಥಿತಿ. ಆದರೆ ಸಾಂಸ್ಕ್ರತಿಕ ರಾಜಧಾನಿ ಉಡುಪಿಯಲ್ಲಿ ಶಿಕ್ಷಣದ ಜೊತೆಗೆ ಕಲಿಯುವ ಪಾಠವಿದೆಯಲ್ಲ ಅದನ್ನು ಬೇರೆ ಎಲ್ಲಿಯೂ ಕಲಿಯುವುದು ಕಷ್ಟ. ಉಡುಪಿ ಶಿಕ್ಷಣದ ಜೊತೆ ಬದುಕನ್ನು ಕಲಿಸುತ್ತದೆ. ಪ್ರತಿದಿನ ಬರುವ  ಲಕ್ಷಾಂತರ ಭಕ್ತಾದಿಗಳು,  ಶ್ರೀ ಕ್ರಷ್ಣನ ಸನ್ನಿಧಾನದಲ್ಲಿ ಭಕ್ತಿ ಪರವಶರಾಗಿ ತಮ್ಮನ್ನು ಆ ಜಗನ್ನಿಯಾಮಕನಿಗೆ ಅರ್ಪಿಸಿಕೊಳ್ಳುವ ಪರಿ, ಅವನಿಗಾಗಿ ಮಾಡುವ ಸೇವೆ ಇವೆಲ್ಲವೂ ನೋಡಿಯೇ ಕಣ್ಣು ತಣಿಸಿಕೊಳ್ಳಬೇಕು. 

ಕಾಲೇಜಿನ ಆ ದಿನಗಳಲ್ಲಿ ನಾನು ಬಹಳಷ್ಟು ಚರ್ಚಾ ಸ್ಪರ್ಧೆಗಳಲ್ಲಿ , ಭಾಷಣ ಸ್ಪರ್ಧೆಗಳಲ್ಲಿ, ಭಾಗವಹಿಸಿದ್ದೇನೆ. ನನ್ನೊಂದಿಗೆ ನನ್ನ ಆತ್ಮೀಯ ಸ್ನೇಹಿತರಾದ ಅಶ್ವಥ್ ಭಾರದ್ವಾಜ ಮತ್ತು ಕಮಲಾಕರ್ ಕೂಡಾ ಇದ್ದರು. ನಾವು ಮೂರು ಜನ ಬಹಳಷ್ಟು ಪ್ರಶಸ್ತಿ ಗೆದ್ದಿದ್ದೇವೆ. ಇಂದಿಗೂ ಅಲ್ಲಿಗೆ ಹೋದರೆ ಇದನ್ನೆಲ್ಲಾ ನೆನಪಿಸಿಕೊಳ್ಳುವ ಉಪನ್ಯಾಸಕರ ಸಮೂಹವಿದೆ, ಅದಕ್ಕೆ ನಾನು ಋಣಿ. ತಿಂಗಳಿಗೆ ಸುಮಾರು 7 -8  ದಿನ ಕೇವಲ ಅದು ಇದು ಸ್ಪರ್ಧೆಗಳಲ್ಲೇ ಕಾಲ ಕಳೆಯುವ ನಾನು ನಮ್ಮ ವಿಜ್ಞಾನ ವಿಭಾಗದ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದೆ.  ನಮ್ಮಲ್ಲಿ ಒಂದು ಮಾತಿದೆ ''ವಿಜ್ಞಾನದ ವಿಧ್ಯಾರ್ಥಿಯೆಂದರೆ ಆತ ಪುಸ್ತಕ ಬಿಟ್ಟು ಏಳುವಂತಿಲ್ಲ, ಅವನಿಗೆ ಆಟ ಅಲರ್ಜಿ, ಊಟ ಬೇಕಿದ್ದರೆ ಮಾತ್ರ, ಸದಾ ಪುಸ್ತಕದ ಬದನೇಕಾಯಿ ತಿಂದೆ ಆತ ಬದುಕಬೇಕು, 90 % ಗಿಂತ ಕಡಿಮೆ ಬಂದರೆ ಆತ ಬದುಕಲು ಅನರ್ಹ'' ಹೀಗೆಯೇ ಪಟ್ಟಿ ಸಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಭೆಟ್ಟಿ ಕೊಟ್ಟಾಗ ಎಲ್ಲ ತಂದೆ ತಾಯಿಗಳ ಮಾನಸಿಕ ಒತ್ತಡ ಗಮನಿಸಿದ್ದೇನೆ. ಅವರ ಮಾತುಗಳೇನು    ಗೊತ್ತ ''ನನ್ನ ಮಗಳು/ಮಗ ಓದುತ್ತಿಲ್ಲ, ಅವರು ಇಂಜಿನಿಯರ್ ಅಥವಾ ವೈದ್ಯರು ಆಗಬೇಕು. ಆದರೆ ಹಿಂದಿನ ಸಲದ ಪರೀಕ್ಷೆಯಲ್ಲಿ 95 % ಮಾತ್ರ ತೆಗೆದುಕೊಂಡಿದ್ದಾರೆ. ಹೀಗಾದರೆ ನಾವು ದುಡಿದದ್ದು ವ್ಯರ್ಥ. ಇಡೀ ದಿನ ಟ್ಯುಶನ್ ಗೆ ಹೋದರು ಮಾರ್ಕ್ಸ್ ತೆಗೆಯುವುದಿಲ್ಲ ಎಂದು'' ನಾವು ಮಕ್ಕಳಿಗೆ ಬದುಕಿನ ಪಾಠ ಹೇಳುತ್ತಿಲ್ಲ ಬದಲಿಗೆ ಹಣದ ಪಾಠ ಹೇಳುತ್ತಿದ್ದೇವೆ. ಅವರಿಗೆ ಆಡುವ ಮನಸ್ಸು ಹೋಗುತ್ತಿದೆ, ಪಾಲಕರ ಒತ್ತಾಯಕ್ಕೆ ಓಡುವ ಕುದುರೆಗಳು ಆಗಿವೆ ಅವೆಲ್ಲ. ಇಂಥಹ ಒತ್ತಡವೇ ಅವರನ್ನು ಆತ್ಮಹತ್ಯೆ ಯಂತ ಹೇಡಿತನಕ್ಕೆ ದಾರಿ ಮಾಡಿಕೊಡುತ್ತದೆ. ಮೊದಲಿಗೆ ಬದುಕನ್ನು ಅವರು ಕಲಿಯಲಿ, ನಂತರ ಬದುಕೇ ಅವರಿಗೆ ಎಲ್ಲವನ್ನು ಕಲಿಸುತ್ತದೆ.

ಉಡುಪಿಯ ಕಾಲೇಜಿನ ರಸಾಯನ ಶಾಸ್ತ್ರದ ಉಪನ್ಯಾಸಕರಲ್ಲಿ ಕೆಲವರಿಗೆ ನನ್ನ ಮೇಲೆ ಬಹಳ ಕೋಪವಿತ್ತು. ಸದಾ ಭಾಷಣಕ್ಕೆ  ಹೋಗುವ ನಾನು ನನ್ನ ಬದುಕನ್ನೇ ಹಾಳು ಮಾಡಿಕೊಳ್ಳುತ್ತೇನೆ, ನಾನು ಏನು ಸಾಧಿಸುವುದಿಲ್ಲ ಎಂಬ ಕೊರಗಿತ್ತು. ಸಿಟ್ಟು ಯಾವಾಗಲೂ ಪ್ರೀತಿ ಇರುವವರಲ್ಲಿ ಹೆಚ್ಚಾಗಿ ಸುಳಿಯುತ್ತದೆ. ಆ ಮಟ್ಟಿಗೆ ನಾನು ತುಂಬಾ ಅದ್ರಷ್ಟವಂತ. ಆ ಎಲ್ಲ ರಸಾಯನ ಶಾಸ್ತ್ರ ದ ಉಪನ್ಯಾಸಕರಿಗೆ ನನ್ನ ಮೇಲೆ ಕೋಪ, ಸೊ ನಾನು ಅಂದುಕೊಂಡೆ ನನ್ನ ಮೇಲೆ ವಿಪರೀತ ಪ್ರೀತಿ ಅದಕ್ಕೆ ಕೋಪ ಎಂದು :)
 ಕೆಲವೊಮ್ಮೆ ಹೀಗೆ ಅಂದುಕೊಳ್ಳೋದು ಮನಸನ್ನ ಹಗುರ ಮಾಡತ್ತೆ. ಇಲ್ದೆ ಇದ್ರೆ ಚಿಂತೇನೆ ತಲೆ ಹೊಕ್ಕಿ ನಮ್ಮನ್ನ ಚಿತೆ ಮಾಡಿ ಹಾಕುತ್ತೆ. ನನಗೆ ಇನ್ನು ನೆನಪಿದೆ, ನಾನಾಗ ಬಿ ಎಸ್ಸ್ ಸಿ ಕೊನೆಯ ವರ್ಷದಲ್ಲಿದ್ದೆ. ಪರೀಕ್ಷೆ ಹತ್ತಿರ ಬರ್ತಾ ಇತ್ತು. ಜನವರಿ  ತಿಂಗಳ ಅನಿಸತ್ತೆ. ರಸಾಯನ ಶಾಸ್ತ್ರದ ಉಪನ್ಯಾಸಕರು  (chemistry ಗೆ ನಾನು ಕರೆಯೋದು ಕೆಮ್ಮು ಎಷ್ತ್ರಿ ಅಂತಾನೆ ಯಾವಾಗಲು) ಪ್ರಾಕ್ಟಿಕಲ್ ತಗೋತ ಇದ್ರು. ಆ ದಿನಗಳಲ್ಲಿ ನನ್ನ ಮೇಲೆ ಅವ್ರಿಗೆಕೋ ವಿಪರೀತ ಕೋಪ. ತುಂಬಾ ಸಿಡುಕ್ತ ಇದ್ರು, ಬಹುಶ: ಈಗ ಆಗಿದ್ರೆ ಅವರ ಸಿಡುಕಿನ ಮುಖ ಫೋಟೋ ತೆಗೆದು facebook  ನಲ್ಲಿ ಹಾಕ್ತಿದ್ನೇನೋ. ಆದರೆ ಆ ದಿನಗಳು ಹಾಗಿರಲಿಲ್ಲ. ನಾನು ಭಾಷಣಕ್ಕೆ ಹೋಗೋದು ಬೇಡಾ ಅಂತ ತುಂಬಾ ಸಲ ಕ್ಲಾಸಿನಲ್ಲಿ ಹೇಳಿದ್ರು. ಆದ್ರೂನು ಅವರ ಮಾತನ್ನ ಮೀರಿ ನಾನು ತುಂಬಾ ಸಲ ಹೋಗಿದ್ದೆ. ಅದು ಒಂತರ ಗಣಪತಿ ದೇವಸ್ಥಾನಕ್ಕೆ ಹೋಗಿ ಆಮೇಲೆ, ದೇವಿ, ದುರ್ಗೆ, ಶ್ರೀ ಹರಿ ಹೀಗೆ ಬೇರೆ ಬೇರೆ ದೇವಸ್ಥಾನಕ್ಕೆ ಹೋದ ಹಾಗೆ, ಇವರು ಬೈದರು ಅಂತ ಇನ್ನೊಂದು ಕಡೆ ಹೋಗೋದು ಬಿಡೋಕೆ ಆಗುತ್ತ ಅನ್ನೋ ಹುಂಬ ಮನಸ್ಸು ಅದು. 

ಪ್ರಾಕ್ಟಿಕಲ್ ಪ್ರಾರಂಭ ಆಗಿತ್ತು. ಎಲ್ಲರ ಪ್ರಾಕ್ಟಿಕಲ್ ಬುಕ್ ಚೆಕ್ ಮಾಡ್ತಾ ಬಂದ್ರು. ನಾನು ಎಷ್ಟೇ ಭಾಷಣಕ್ಕೆ ಹೊದ್ರುನು ಕ್ಲಾಸಿನ ಕೆಲಸನ ಕರೆಕ್ಟ್ ಆಗಿ ಮಾಡಿರ್ತಿದ್ದೆ. ಆ ದಿನ ನನ್ನ ಪ್ರಾಕ್ಟಿಕಲ್ ಬುಕ್ ಚೆಕ್ ಮಾಡೋಕೆ ತಗೊಂಡ್ರು. ಏನೋ, ಅದು ಇದು ಅಂತ 4  ಪೇಜ್ ತಿರುಗಿಸಿ ಕಸದ ಬುಟ್ಟಿಯ ಕಡೆ ಬಿಸಾಕಿ ಬಿಟ್ರು. ನನಗೆ ಥರ ಥರ ನಡುಕ. ಇದೇನಾಯ್ತು ಇವರಿಗೆ ಅಂತ. ಅವರಿಗೆ ಅದೆಲ್ಲಿಂದ ಸಿಟ್ಟು ಬಂದಿತ್ತೋ ಗೊತ್ತಿಲ್ಲ, ''ನೀನು ಇನ್ನು ಮೇಲೆ ನನ್ನ ಕ್ಲಾಸ್ ಗೆ ಆಗಲಿ, ಲ್ಯಾಬ್ ಗೆ ಆಗಲಿ ಬರಬೇಡ. ಇದೇನು ಪ್ರಾಕ್ಟಿಕಲ್ ಬುಕ್, ಗಬ್ಬೆದ್ದು ಹೋಗಿದೆ, ನೀನು ಬದುಕಲ್ಲಿ ಉದ್ದಾರ ಆಗಲ್ಲ, ಹಾಳಾಗಿ ಹೋಗ್ತಿಯ, ನಿನಗೆ ವಿಜ್ಞಾನ ದ ವಿಷಯ ಯಾಕೆ ಬೇಕಿತ್ತು, ಹೋಗು ಎಲ್ಲಾದರು ಭಾಷಣ ಮಾಡ್ಕೊಂಡೆ ಜೀವನ ಮಾಡು'' ಅಂತ ಒಂದೇ ಸಮನೆ ರುದ್ರಾಭಿಷೇಕ ಮಾಡೋಕೆ ಆರಂಭ್ಸಿದ್ರು. ನನಗೋ ಏನು ಹೇಳಬೇಕು ಅಂತ ಗೊತ್ತಾಗ್ಲಿಲ್ಲ. ಕೆಲವೊಮ್ಮೆ ಧೋ ಅಂತ ಸುರಿಯೋ ಮಳೇನ ನಿಲ್ಲಿಸಿದರೆ ಮತ್ತೆ ಅದು ತನ್ನ ಆಟ ತೋರಿಸತ್ತೆ. ಅದ್ಕೆ ಎಷ್ಟು ಬೇಕಾದರು ಬೈಕೊಳ್ಳಿ ಅಂತ ಬೈಸ್ಕೊತ ಇದ್ದೆ, ತಿರುಗಿ ಒಂದೇ ಒಂದು ಮಾತು ಹೇಳಲಿಲ್ಲ. ಹಾಗೆಯೇ ಅವರು 20  ನಿಮಿಷ ಉಗಿದು ನನ್ನ ಪ್ರಾಕ್ಟಿಕಲ್ ಬುಕ್ ನ 4  ಪೇಜ್ ಹರಿದು ಲ್ಯಾಬ್ ನಿಂದ ಹೊರಗೆ ಹಾಕಿದ್ರು. 

ಹೊರಗೆ ಬಂದವನಿಗೆ ನಿಜವಾಗಿ ನಡುಕ ಆರಂಬವಾಯ್ತು. ನನ್ನ ಬದುಕನ್ನ ಸರ್ವನಾಶ ಮಾಡಿಕೊಂಡು ಬಿಟ್ನ ಅಂತ. ಗುರುವಿನ ಶಾಪ ಒಳ್ಳೇದಲ್ಲ ಅಂತಾರೆ ನಮ್ಮ ಹಿರಿಯರು. ಅವತ್ತು ಅವರು ಉಪಯೋಗಿಸಿದ ಶಬ್ದಗಳು ಇನ್ನು ನೆನಪಾದಾಗ ಕಿವಿಯ ಮೇಲೆ ಬಿಳತ್ವೆ. ಅವರು ಯಾವತ್ತು ಯಾರಿಗೂ ಅಷ್ಟೊಂದು ಬೈದಿರಲಿಲ್ಲ ಅಂತೆ. ನಾನೇ ಫಸ್ಟ್ ಮತ್ತು ನಾನೇ ಲಾಸ್ಟ್. ಮನಸ್ಸಿಗೆ ತುಂಬಾನೇ ಬೇಜಾರು ಆಗಿ ಹೋಯ್ತು. ಇಲ್ಲಿ ಯಾರು ಸರಿ, ಯಾರು ತಪ್ಪು ಅಂತ ಹೇಳೋದು ಕಷ್ಟ, ಒಬ್ಬ ಭಾಷಣಕ್ಕೆ ಹೋದ ವಿಧ್ಯಾರ್ಥಿಯನ್ನು ಬೈದಿದ್ದು ಅವರದು ತಪ್ಪು ಹಾಗೆ ಓದೋಕೆ ಅಂತ ಬಂದ ನಾನು ಭಾಷಣಕ್ಕೆ ಹೋಗಿದ್ದು ನನ ತಪ್ಪು. ಅಂತೂ ಎಲ್ಲ ರಸಾಯನ ಶಾಸ್ತ್ರದ ಉಪನ್ಯಾಸಕರು ಸೇರಿ ನನಗೆ ಅವರಿಗೆ ರಾಜಿ ಮಾಡಿಸಿ ಕೊಟ್ರು. ಅದಾದ ಮೇಲೆ ಅವರು ನನ್ನನ್ನು ಅಷ್ಟೊಂದು ಬಯ್ಯಲಿಲ್ಲ. ಅಷ್ಟೊಂದು ವಿಚಾರಿಸಲು ಇಲ್ಲ.

ಆದರೆ ಪೂರ್ಣಪ್ರಜ್ಞ ಕಾಲೇಜು ಬಿಟ್ಟು ಬಂದ ಎಷ್ಟೋ ದಿನಗಳ ನಂತರ ಅವರ ಬೈಗುಳದ ನಿಜ ಅರ್ಥ ತಿಳಿಯಿತು. ಕೊನೆಗೆ ಅವರಿಷ್ಟದಂತೆ ಪಿ ಎಚ್ ಡಿ ಮಾಡಿ ಕೆಲಸದಲ್ಲಿದ್ದೇನೆ, ಈಗ ಆ ಗುರು ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ಅಂದು ಅವರ ''ಬೈಗುಳ ತಾಗದೆ ಹೋಗಿದ್ದರೆ'' ಇಂದು ನಾ ಇಲ್ಲಿರುತ್ತಿರಲಿಲ್ಲ. ಇಂದಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂತಾದರೆ ಅವರ ಬೈಗುಳದ ನೆನಪು ಆಗುತ್ತದೆ. ನನ್ನ ಬದುಕಿನ ಬಗ್ಗೆ ವಿಪರೀತ ತಲೆಕೆಡಿಸಿಕೊಂಡು ಅವರು ಬೈದಿದ್ದರು. ಯಾರಿಗೂ ಬಯ್ಯದ ಅವರ ಆ ನಡವಳಿಕೆ ಅಂದು ಕೋಪ ತರಿಸಿದರೂ ಇಂದು ಅವರು ಸಿಕ್ಕರೆ ಅವರ ಪಾದಗಳಲ್ಲಿ ಎರಗಿ ಆಶಿರ್ವಾದ ಪಡೆಯುವ ಆಸೆ. ಆದರೆ ಅವರು ಕಾಲೇಜು ನಿಂದ ನಿವ್ರತ್ತರಾಗಿ ಮಕ್ಕಳೊಂದಿಗೆ ಭಾರತದ ಯಾವುದೋ ಕಡೆ ಇದ್ದಾರೆ ಎಂಬ ಸುದ್ದಿಯಿದೆ. 
ಕವಿಯ ಮಾತುಗಳು ನೆನಪಿಗೆ ಬರುತ್ತಿದೆ,

''ಗುರುವಿನ ಗುಲಾಮ 
ನಾಗದ ಹೊರತು
ದೊರೆಯದಣ್ಣ ಮುಕುತಿ ''

ಬದುಕು ಕೇವಲ ಪುಸ್ತಕದ ಬದನೇಕಾಯಿ ಅಲ್ಲ, ಅದು ಎಲ್ಲಕ್ಕೂ ಮೀರಿದ್ದು. ಬದುಕನ್ನ ನಾವು ಕಲಿತರೆ, ಉಳಿದೆಲ್ಲವೂ ನಮ್ಮ ಹಿಂದೆಯೇ ಬರುತ್ತದೆ. ಇಂದು ಶಾಲೆಗಳಲ್ಲಿ ಶಿಕ್ಷರು ಮಕ್ಕಳನ್ನು ಬೈಯ್ಯುವ ಹಾಗಿಲ್ಲ. ಬೆದರಿಸುವ ಹಾಗೆ ಇಲ್ಲ. 

 ಗದರಿಸಿ ಬೆದರಿಸಿ ಹೇಳಿದ ಪಾಠ
ನಡುಗಿಸಿ ಗುಡುಗಿಸಿ ಕಲಿತ ವಿದ್ಯೆ
ನಗುತ ನಲಿಯುತ ಆಡಿದ ಆಟ
ವಂದಿಸಿ, ಆಲಿಸಿ ಪಡೆದ ಬದುಕು 

ಇವೆಲ್ಲವೂ ಪರಿಪಕ್ವ ಮಾನವನನ್ನಾಗಿಸುತ್ತವೆ. ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬೇಕಾದರೆ ಅಲ್ಲಿ ಸಣ್ಣ ಹೆದರಿಕೆಯೂ ಇರಬೇಕು. 

ಮತ್ತದೇ ಕವಿವಾಣಿ ಕಿವಿಯಲ್ಲಿ ಸುಳಿಯುತ್ತಿದೆ,

      ಅಂದು,

         ಮುಂದೆ ಗುರಿಯಿತ್ತು
         ಹಿಂದೆ ಗುರುವಿದ್ದ
         ಸಾಗಿತ್ತು ಧೀರರ ಹಿಂಡು ಹಿಂಡು

        ಇಂದು,

           ಮುಂದಕ್ಕೆ ಗುರಿಯಿಲ್ಲ
            ಹಿಂದಕ್ಕೆ ಗುರುವೂ ಇಲ್ಲ
            ಸಾಗುತಿದೆ ರಣ ಹೇಡಿಗಳ ದಂಡು ದಂಡು 
ನನ್ನ  ಕಾಲೇಜಿನ  ದಿನಗಳ ಬದುಕಿನ ಕಥೆ ''ಬದುಕಿನ ಪುಟಗಳಿಂದ'' ಮುಂಚೆ ಒಮ್ಮೆ ಆರಂಬಿಸಿದ್ದೆ. ಕೆಲವು ಅನಿವಾರ್ಯ ಕಾರಣಗಳಿಂದ ಅದನ್ನ ಮುಂದುವರಿಸೋಕೆ ಆಗಿರಲಿಲ್ಲ. ಈಗ  ಮತ್ತೆ ಬರಿತ ಇದ್ದೀನಿ, ಇದರ ಮೊದಲಿನ  ಭಾಗ ನೀವು ಮುಂಚೆ ಓದದೆ ಇದ್ರೆ  ಓದೋಕೆ  ಕೆಳಗೆ ಕ್ಲಿಕ್ ಮಾಡಿ.


http://gurumurthyhegde.blogspot.com/2011/01/1.ಹ್ತ್ಮ್ಲ್  Part 1


http://gurumurthyhegde.blogspot.com/2011/02/50.html  Part 2 


http://gurumurthyhegde.blogspot.com/2011/02/part-3.html Part 3 


http://gurumurthyhegde.blogspot.com/2011/05/blog-post.html Part 4  ಮತ್ತೆ ಮುಂದಿನ ವಾರ ಸಿಗೋಣ
ಗುರು ಬಬ್ಬಿಗದ್ದೆ


Sunday, September 18, 2011

ಅಭಿನವ ಉವಾಚ .....

ಪ್ರೀತಿಯ ಸ್ನೇಹಿತರೆ, ಕಳೆದ ತಿಂಗಳು ನಮ್ಮ ಪ್ರೀತಿಯ ಮಗ ಹುಟ್ಟಿದ್ದು ನಿಮಗೆ ತಿಳಿದೇ ಇದೆ. ಗುರುಹಿರಿಯರ ಆಶೀರ್ವಾದ  ದಿಂದ ''ಅಭಿನವ್'' ಎಂದು ಹೆಸರು ಇಟ್ಟಿದ್ದೇವೆ. ಅವನು ಹುಟ್ಟಿದ  ಕಥೆ ಅವನ ಬಾಯಿಂದಲೇ ಕೇಳಿ :) 


ಅಬ್ಬಾ, 9 ತಿಂಗಳು ಕತ್ತಲೆ ನಲ್ಲಿ ಇದ್ದಿದ್ದೆ, ಇದೇನಪ್ಪ, ಒಂದು ಲೈಟ್ ಕೂಡಾ ಹಾಕದೆ ಕಂಜೂಸ್ ಮಾಡ್ತಾರೆ ಅಂತ ಅಂದ್ಕೊಂಡಿದ್ದೆ,
ಎಲ್ಲಿ ನೋಡಿದ್ರುನು ಕತ್ತಲೆ, ಬರೆ ಆಚೆಯಿಂದ ಈಚೆ ಗೆ  ಓಡೋದು, ಒದೆಯೋದು ಇದೆ ನನ್ನ ಪ್ರಪಂಚ ಆಗಿತ್ತು. ಬದುಕು ಅಂದ್ರೆ ಇದೇನಾ, ಜಗತ್ತು ಅಂದ್ರೆ ಇದೇನಾ ಅಂತ ಆಶ್ಚರ್ಯ ಆಗಿತ್ತು. ನನ್ನೊಳಗಿನ ನಾನು ದೊಡ್ಡ ಆಗ್ತಾ ಇದ್ದೆ ಹೊಟ್ಟೆ ಒಳಗೆ. ''ಬದುಕು ಅಂದ್ರೆ ಬೆಳೆಯೋದು, ಬಾಳು ಅಂದ್ರೆ ಬೆಳಗೋದು'' ಅಂತ ಇದ್ದವನಿಗೆ ಎಲ್ಲ ಕಡೆ ಕತ್ತಲೆ ಮಾತ್ರ ಕಾಣುತ್ತ ಇತ್ತು. ಕತ್ತಲೆ ಮನಸ್ಸನ್ನು ತುಂಬಾ ನೋಯಿಸ್ತ ಇತ್ತು. ದೊಡ್ಡ ಆಗ್ತಾ ಇದ್ದಂತೆ ಗೊತ್ತಾಗ್ತಾ ಹೋಯ್ತು, ನನ್ನ ಪ್ರಪಂಚ ಇದಲ್ಲ, ಇದು ಅಮ್ಮನ ಪ್ರೀತಿಯ ಪ್ರಪಂಚ. ಜಗತ್ತಿನ ಎಲ್ಲ ಕೆಟ್ಟ ಶಕ್ತಿಗಳಿಂದ ನನ್ನನ್ನು ರಕ್ಷಿಸಿ ಪ್ರಪಂಚಕ್ಕೆ ಯೋಗ್ಯವಾಗಿ ಬರಲು ಶ್ರಮಿಸಿದ ಅಮ್ಮನ ಪ್ರೀತಿಯ ಪ್ರಪಂಚ ಇದು ಎಂದು ನಿಧಾನ ಅರಿವಾಗತೊಡಗಿತು. 

ಅಮ್ಮನಿಗೆ ಆ ದಿನಗಳಲ್ಲಿ ತುಂಬಾ ಕಷ್ಟ ಕೊಟ್ಟೆ. ಪಾಪ, ನನ್ನ ಪ್ರಪಂಚಕ್ಕೆ ತರಲು ಸ್ವೀಡನ್ನಿನಿಂದ ಭಾರತಕ್ಕೆ ಬರುವಂತೆ ಮಾಡಿದೆ. ನನಗೋ ಭಾರತದಲ್ಲೇ ಹುಟ್ಟುವ ಬಯಕೆ ಇತ್ತು. ಅಪ್ಪ, ಅಮ್ಮನ ಆಸೆಯೂ ಅದೇ ಆದದ್ದರಿಂದ ವಿದೇಶದ ಮಣ್ಣಿನಲ್ಲಿ ಹುಟ್ಟುವ ಸಂಕಷ್ಟ ತಪ್ಪಿತು.
 ಮಣ್ಣಿನ ಸುಗಂಧ, ಬದುಕನ್ನೇ ಬದಲಿಸುತ್ತದಂತೆ. 
ಗಂಗೆ ಹರಿದ, ತುಂಗೆ ನಲಿದ, ನಾಡಿನ ಮಣ್ಣಿನ ಸತ್ವವೇ ಅಂತದ್ದು.  ಹುಟ್ಟಿದ ಘಳಿಗೆ ಇನ್ನು ನೆನಪಿದೆ, ಅಮ್ಮನ ಹೊಟ್ಟೆಯಿಂದ ಹೊರಗೆ ಬರಲು ತುಂಬಾ ಚಡಪಡಿಸುತ್ತಿದ್ದೆ. ಅಮ್ಮನಿಗಂತೂ ನೋವು ತಡೆಯಲು ಆಗುತ್ತಿರಲಿಲ್ಲ. ಅಮ್ಮನ ಬಾಯಿಯಿಂದ  ''ಅಮ್ಮ'' , ''ಅಮ್ಮ'' ಎಂಬ ನೋವು ಕಿವಿಗೆ ತಟ್ಟುತಿತ್ತು. ಅವಳಿಗೆ ನೋವು ಕೊಟ್ಟು ನಾನು ಹೊರಗೆ ಬರುವ ಆಸೆ ಖಂಡಿತ ನನಗೆ ಇರಲಿಲ್ಲ. ಆದರೆ ಏನು ಮಾಡಲಿ, ಕತ್ತಲೆ ಯಲ್ಲಿ ಇದ್ದು ಇದ್ದು ನನಗೂ ಬೇಸರ ಬಂದಿತ್ತು. ಅಂತೂ ಆಗಸ್ಟ್ 16 ನೆ ತಾರೀಖು ಮಧ್ಯಾನ್ಹ   3 ಘಂಟೆ ಸುಮಾರಿಗೆ ನಾನು ಜನಿಸಿದೆ. ಸುಮಾರು 3.4 kg ಇದ್ದ ನನ್ನನ್ನು ಹೊರ ತರುವಲ್ಲಿ ವೈದ್ಯರು ತುಂಬಾ ಶ್ರಮಿಸಿದರು.


ಜನಿಸಿದ ಹೊತ್ತು ಅಮ್ಮನಿಗೆ ಅರ್ಧ ಎಚ್ಚರ ಇತ್ತು. ಕಣ್ಣಲ್ಲಿ ನೀರಿತ್ತು. ಬಹುಶ: ಬದುಕಿನ ಎಲ್ಲ ಘಟ್ಟದಲ್ಲಿ 

''ನಿನ್ನ ನೋವು ನನಗಿರಲಿ, ನನ್ನೆಲ್ಲ ನಲಿವು ನಿನಗಿರಲಿ'' 

ಎಂದು ಅಮ್ಮ ನನಗೆ ಹೇಳುತ್ತಿದ್ದಂತೆ ಕಿವಿಯಲ್ಲಿ ಭಾಸವಾಗುತ್ತಿತ್ತು. 


9 ತಿಂಗಳು ಹೊತ್ತು, ನೋವನ್ನು ನುಂಗಿ , ನನ್ನನ್ನು ಈ ಪ್ರಪಂಚಕ್ಕೆ ತಂದ ಅಮ್ಮನ ಪ್ರೀತಿಗೆ ಕೋಟಿ ಕೋಟಿ ನಮನಗಳು. ಆ ಹೊರಗೆ ಬಂದ ಮೊದಲ ಕ್ಷಣ ಅಪ್ಪನಿಗೆ ನನ್ನ ನೋಡುವ ತವಕ. ಅಪ್ಪನ ಕಣ್ಣಲ್ಲಿ ಆನಂದದ ಕಣ್ಣೀರು ಬಂದಿದ್ದು ಕಾಣುತ್ತಿತ್ತು. ಅಪ್ಪಂದಿರ ಪ್ರೀತಿಯೇ ಅಂತಾದ್ದು. ಅಮ್ಮನ ಮಡಿಲ ಸಾಂತ್ವನ ಇಲ್ಲದಿದ್ದರೂ, ಬದುಕಿಗೆ ಸವಾಲು ಹಾಕುವ ವಿಶ್ವಾಸವಿರುತ್ತದೆ. ಅಂದು ಅಪ್ಪನ ಕೈ ನನ್ನ ಕೆನ್ನೆ ಸವರಿದಾಗ ಅನಿಸಿದ್ದು ಅದೇ.

 ಹುಟ್ಟಿದ ಕೆಲವು ದಿನಗಳು ಬರೆ ಅಳುವುದು. ನಿದ್ದೆ ಮಾಡುವುದು. ಅಪ್ಪ, ಅಮ್ಮನಿಗೆ ಕೊಟ್ಟ ಕಾಟವನ್ನು ಅವರಿಂದಲೇ ದೊಡ್ಡವನಾದಾಗ ಕೇಳುವ ಆಸೆಯಿದೆ. ನನ್ನ ಹಠ ತುಂಬಾ ಇತ್ತು. ಅಮ್ಮನಿಗಂತೂ  ನಿದ್ದೆ ಇಲ್ಲ, ಬೆನ್ನು ನೋವು ಬೇರೆ, ನನ್ನ ಹಠ ಒಂದೇ ಸಮನೆ. ಆದರೆ ನಾನು ಏನು ಮಾಡಲಿ, ನನಗೆ ಆಗ ಅಳುವುದು ಬಿಟ್ಟು ಬೇರೇನೂ ಬಾರದು. ಅದು ಬಿಟ್ಟರೆ ನಂಗೆ ಗೊತ್ತಿದದ್ದು ನಿದ್ದೆ ಮಾಡುವುದು ಮಾತ್ರ. ಹಠ ನನಗೆ ಆಟವಿದ್ದಂತೆ, ಕಾರಣ ನನ್ನ ಬಗ್ಗೆ ಯಾರಾದರೂ ಲಕ್ಷ ಕೊಡದಿದ್ದರೆ ಅತ್ತು ಹೆದರಿಸುತ್ತಿದ್ದೆ. ಅಂತೂ ಹುಟ್ಟಿದ 11 ನೇ ದಿನ ಅಪ್ಪ, ಅಮ್ಮ ಇಬ್ಬರು ಸೇರಿ ನನಗೆ ''ಅಭಿನವ್' ಎಂಬ ಸುಂದರ ಹೆಸರನ್ನು ಇಟ್ಟರು.


 ನಂತರದ ದಿನಗಳಲ್ಲಿ ನಾನು ಅಳುವುದನ್ನು ಕಡಿಮೆ ಮಾಡದಿದ್ದರೂ ಅಮ್ಮನಿಗೆ ಕಾಟ ಕೊಡುವುದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ. ಅಪ್ಪನಂತು ನನ್ನ ಬಿಟ್ಟು ಕೆಲಸಕ್ಕೆಂದು ಮಲೇಶಿಯಾ ಕ್ಕೆ ಹೋಗಿದ್ದಾರೆ. ಅವರ ನೆನಪಿನಲ್ಲಿ ಇದ್ದೇನೆ. ಅಪ್ಪನಿಗೂ ನನ್ನ ತುಂಬಾ ನೆನಪು,,,, ಪಾಪ, ಅಪ್ಪ ಬೇಗನೆ ಬರುತ್ತಾರೆ ಎಂಬ ನೀರೀಕ್ಷೆ ನನ್ನದು.

ಪುಟ್ಟ ಕಾಲುಗಳನ್ನು ಇಟ್ಟು ನಡೆಯುವ ತವಕ ನನಗೆ, ಆದರೆ ಏನು ಮಾಡಲಿ, ಇನ್ನು ಕಾಯಬೇಕಂತೆ, ಅಮ್ಮನ ಅಪ್ಪಣೆಯಿದೆ, ನಾನಿನ್ನೂ ಚಿಕ್ಕವನಂತೆ, ಸರಿ, ಅಮ್ಮನ ಮಾತು ನನಗೆ ವೇದ ವಾಕ್ಯ ಇದ್ದಂತೆ. ಬೇಗ ದೊಡ್ಡವನಾಗುವ ಆಸೆ ಇದೆ :)


ಅಪ್ಪನ ಅಪ್ಪಣೆಯ ಮೇರೆಗೆ ಅಪ್ಪನ ಬ್ಲಾಗ್ ನಲ್ಲಿ ನನ್ನ ಹುಟ್ಟಿದ ಕಥೆ ಹೇಳಿದ್ದೇನೆ. ಸದ್ಯದಲ್ಲಿಯೇ ಅಪ್ಪನ ಸಹಾಯದಿಂದ ''ಅಭಿನವ ಉವಾಚ'' ಎಂಬ ಬ್ಲಾಗ್ ನಲ್ಲಿ ಇನ್ನು ಹೆಚ್ಚು ಬರೆಯುತ್ತೇನೆ. ನನ್ನ ಬ್ಲಾಗ್ ''http://gurubabbigadde.blogspot.com/'' ಇಲ್ಲಿಯೇ ಬರೆಯುತ್ತೇನೆ. ಸದ್ಯಕೆ ನನ್ನ ಕೆಲವು ಫೋಟೋಗಳು ನಿಮಗಾಗಿ ಹಾಕಿದ್ದೇನೆ. ನೋಡುತ್ತಿರಲ್ಲ,


ಬೇಡ ಅಂದ್ರು ಕೇಳೋಲ್ಲ, ಏನೋ ಹಚ್ಚಿದ್ದಾರೆ ತಲೆಗೆ 


ಯಾರೋ ಇಣುಕಿ ನೋಡ್ತಾ ಇದಾರೆ ನನ್ನ, ಎದುರಿಗೆ ಬರೋಕೆ ಏನು ಕಷ್ಟ?


ಏನು ಮಾಡೋದು, ಅಮ್ಮ  ಯಾರತ್ರನೋ ಮಾತಾಡ್ತಾ ಇದಾಳೆ, ಈಗ ಹಠ ಮಾಡಿದ್ರೆ ಬರ್ತಾಳೆ ನೋಡೋಕೆ, ಆದ್ರೆ ಪಾಪ ಯಾಕೆ ತೊಂದ್ರೆ ಕೊಡೋದು?


ಸರಿ ನಿದ್ದೆ ಬರೋ ಟೈಮ್ ಆಯಿತು 


ಮಲಗ್ತಿನಪ್ಪ ನಾನು, ನೀವು ಮಲ್ಕೊಳ್ಳಿ, ಮತ್ತೆ ಸಿಗೋಣ, ಟಾ ಟಾ 


ಅಲ್ಲಿಯತನಕ ನಿಮ್ಮೆಲ್ಲರ ಪ್ರೀತಿ ಹಾರೈಕೆ ನನ್ನ ಮೇಲೆ ಇರಲಿ ,
ಪ್ರೀತಿಯ
ಅಭಿನವ