Tuesday, August 24, 2010

ಮರೆಯಲಾಗದ ನಾರ್ವೆ, ಪ್ರವಾಸ ಕಥನದ ಅಂತಿಮ ಭಾಗ

ನೋಡೇ ಗೆಳತಿ, ಬಾನ ತುಂಬಾ ಮೋಡ ಕವಿದಿದೆ, ಚೆಲುವ ಬರುವ ಎಂದು ಮನವು ಪುಳಕಗೊಂಡಿದೆ. 

ಭಳಿರೆ, ಭಳಿರೆ...

Flam ದಲ್ಲಿ ಕಳೆದು ಒಂದು ದಿನ ಜೀವನದಲ್ಲಿಯೇ ಮರೆಯಲಾಗದ್ದು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಅಪಾರ್ಟ್ಮೆಂಟ್ ಬಾಡಿಗೆಗೆ ಒಂದು ದಿನ ಸಿಕ್ಕಿತ್ತು. ನಾರ್ವೆಯ ಮನೆಯಲ್ಲಿ ಕುಳಿತು ಕರ್ನಾಟಕದ ಚಿತ್ರಾನ್ನ, ಪಲಾವ್ ತಿನ್ನುವ ಯೋಗ ನೋಡಿ. ಹತ್ತಿರದಲ್ಲಿಯೇ ಇದ್ದ ನದಿ ತೀರ, ಬೆಟ್ಟ ಗುಡ್ಡಗಳು ಎಲ್ಲವನ್ನೂ ಮನಸೋ ಇಚ್ಛೆ ಸುತ್ತಿ ಕುಣಿದೆವು, ನಲಿದೆವು.

ಮನೆಯ ಅಡಿಗೆ ಯಾರಿಗೆ ಬೇಡ ಹೇಳಿ....
ನಾವು ನಾಲಕ್ಕು ಜನ ಹೋಗಿದ್ದು ನಾರ್ವೆಗೆ  ...
ನೋಟದಲ್ಲೇ ಎನ್ನ ಸೆಳೆದೆ, ಬರುವೆ ಮತ್ತೆ ನಿನ್ನ ಜೊತೆಗೆ...

ನಾವುಳಿದುಕೊಂಡ ಮನೆಯಿಂದ ಕಾಣುವ ದ್ರಶ್ಯ  

ಇಲ್ಲಿನ ವೈಚಿತ್ರ್ಯ ನೋಡಿ, ಹವಾಮಾನ ಎಷ್ಟು ಬೇಗ ಬದಲಾಗುತ್ತದೆ ಎಂದರೆ ಊಹಿಸಲು ಅಸಾದ್ಯ. ಬೆಳಿಗ್ಗೆ ಬಿಸಿಲಿತ್ತು, ನೋಡು ನೋಡು  ತ್ತಿದ್ದಂತೆ ಮೋಡ, ಮತ್ತೆ ಮಳೆ, ಕೂಡಲೇ ಮೋಡದ ಮರೆಯಲ್ಲಿ ಸೂರ್ಯನ ಕಣ್ಣು ಮುಚ್ಚಾಲೆ, ನಂತರ ಸಂಪೂರ್ಣ ಬಿಸಿಲು. ಇವೆಲ್ಲವೂ ಸುಮಾರು 20 ನಿಮಿಷದಲ್ಲಿ ನಡೆದು ಹೋಯಿತು. ಮೋಡ ಗಳಂತೂ  ಎಕ್ಸ್ ಪ್ರೆಸ್ ರೈಲಿನಂತೆ ಓಡುತ್ತಿರುತ್ತವೆ.ಒಂದು ದಿನ ಇಂಥಹ ಪ್ರಕ್ರತಿಯ ಒಡಲಿನಲ್ಲಿ ಕಳೆದ ಮೇಲೆ ಇಲ್ಲಿಯೇ Permanent ಆಗಿ ಇದ್ದು ಬಿಡೋಣ ಅಂತ ಅನ್ನಿಸದೆ ಇರದು. 

ಮೋಡಗಳ ಸರಸ ನೋಡಿ....

ಬೆಟ್ಟದ ಮೇಲಿಂದ ಚೆಲುವೆಯ ದರ್ಶನ 

ಮಾರನೆ ದಿನ ಮಧ್ಯಾನ್ಹ ಅಲ್ಲಿಗೆ ಬ್ರಹತ್ ಹಡಗು '' Alexander''    ಬಂದಿತ್ತು. 
Alexander van  Hombalt
ಅಷ್ಟು  ಚಿಕ್ಕ ಊರಿಗೆ ಎಷ್ಟೊಂದು ಜನ ಭೇಟಿ ಕೊಡುತ್ತಾರೆ ಎಂದರೆ ಸೋಜಿಗವೇ ಸರಿ.  ನಂತರ ಸುಮಾರು 3 ಘಂಟೆಗೆ ಆರಂಬವಾಯಿತು ನೋಡಿ ಹಡಗಿನ ಪ್ರಯಾಣ. ಅದೊಂದು ಮರೆಯಲಾಗದ ಅನುಭವ.
ಕ್ಷಣಾರ್ಧದಲ್ಲಿ ಬಂದ ಬೋಟೊಂದು ನೀರನ್ನು ಅಲುಗಾಡಿಸಿ ಫೋಟೋದ ಪ್ರತಿಬಿಂಬಕ್ಕೆ ಪೆಟ್ಟು ಕೊಟ್ಟಿತು.... 

ನಾರ್ವೆಗೆ ಹೋದವರು Flam ನಿಂದ Gudvangen ವರೆಗಿನ ಹಡಗಿನ ಪ್ರಯಾಣ ಅನುಭವಿಸದೆ ಹೋದರೆ ಬಂದಿದ್ದು ವ್ಯರ್ಥ.

Good Bye Flam... we miss you


 ಆ ಬ್ರಹದಾಕಾರದ ಶಿಕರಗಳ ನಡುವೆ ನೀರಿನಲ್ಲಿ ಹೋಗುವ ಮಜವೇ ಬೇರೆ. ನಮ್ಮೊಂದಿಗೆ ಜೊತೆಗಾರರಾಗಿ ಹಕ್ಕಿಗಳು ಇದ್ದವು. ಅವರ ಹಾರಾಟ, ಆಹಾರ ಕ್ಕಾಗಿ ಕಿತ್ತಾಟ, ಎಲ್ಲವೂ ಮನಸೂರೆಗೊಳ್ಳುವ ರೀತಿಯಲ್ಲಿದ್ದವು.
ಎಲ್ಲಿ ನೋಡುತ್ತಿರುವೆ?

ನಾವೂ ನಿಮ್ಮೊಂದಿಗೆ ಪ್ರಕ್ರತಿ ವೀಕ್ಷಣೆಗೆ ಬರುತ್ತೇವೆ....

 ಛಾಯಾಗ್ರಾಹಕರಿಗೆ ಇದೊಂದು ಹಬ್ಬದ ವಾತಾವರಣ. 400 ವರ್ಷಗಳಿಂದ ಇರುವ ಕೆಲವು ಒಂಟಿ ಹಳ್ಳಿಗಳನ್ನು ನೋಡಿದಾಗ ಅಬ್ಬ ಇವರ ಬದುಕೇ ಎನಿಸಿತು. ರಸ್ತೆಯೂ ಇಲ್ಲದೆ ಕೇವಲ ನೀರನ್ನೇ ನಂಬಿಕೊಂಡು ಬದುಕುವ ಇವರ ಬದುಕು ಸೋಜಿಗವೆನಿಸಿತು.
ಪ್ರಾಚೀನ ಹಳ್ಳಿ, ಇಲ್ಲಿ ರಸ್ತೆಯ ವ್ಯವಸ್ಥೆ ಇಲ್ಲದೆ ಎಸ್ಟೋ ವರ್ಷಗಳು ಆಗಿತ್ತಂತೆ. ಇತ್ತೀಚಿಗೆ ರಸ್ತೆ ನಿರ್ಮಾಣ ಮಾಡಲಾಗಿದೆ.

ಇಲ್ಲಿನ ಕೆಲವು ಪರ್ವತಗಳು ಹಿಮದಿಂದಲೇ ನಿರ್ಮಾಣವಾಗಿದ್ದು ಶತ ಶತಮಾನಗಳಿಂದ ಹಿಮ ಬಿದ್ದು ಬಿದ್ದು ಅಲ್ಲಿಯೇ ಗಟ್ಟಿಯಾಗಿ ಹೋಗಿವೆ. ಸಾಲದ್ದಕ್ಕೆ ಉಷ್ನತೆಯೂ ಕಡಿಮೆ ಇರುವುದರಿಂದ ಅವು ಇನ್ನೂ ಬಿಳಿಯದಾಗಿಯೇ ಕಾಣುತ್ತವೆ.  ಇದರ ಬಗ್ಗೆ ವರ್ಣಿಸಿದರೆ ಸಾಲದು. ಅದಕ್ಕೆ ಫೋಟೋ ಗಳನ್ನು ಹಾಕಿದ್ದೇನೆ. ನೋಡಿ ಆನಂದಿಸಿ.
ಮೋಡಗಳು ಪರ್ವತಕ್ಕೆ  ಕೊಡುವ ಮುತ್ತೆ ಇದು?

ಓಡಿ ಹೋಗದಿರಿ, ನಿಲ್ಲಿ ಮೋಡಗಳೇ, ನಾನು ಬರುವೆ ಜೊತೆಗೆ....

ಮೋಡದ ಮಿಲನ ಶಿಖರದ ತುದಿಗೆ....

ಕನಕನ ಕಿಂಡಿ .....

ಎರಡು ಪರ್ವತಗಳು ಒಂದೇ ಜಾಗದಲ್ಲಿ ಸಂಧಿಸುತ್ತಿವೆ....

ಸುಮಾರು 3 ತಾಸಿನ ಪ್ರಯಾಣ ಇನ್ನೂ ಇದ್ದರೆ ಚೆನ್ನ ಎಂದು ತೋರುತ್ತಿತ್ತು. ಮಾರ್ಗ ಮದ್ಯದಲ್ಲಿ ಸಿಗುವ ಜಲಪಾತಗಳು ಕಣ್ಮನ ಸೆಳೆಯುವಂತಿದ್ದವು. 
ಎಲ್ಲರೂ ಖುಷ್.....

ಪಯಣ ಎಲ್ಲಿಗೆ.....

ಉಂಚಳ್ಳಿಯ ಜಲಪಾತ ನೆನಪಾಗುತ್ತಿಲ್ಲವೇ?

ಒಟ್ಟಿನಲ್ಲಿ ನಾರ್ವೆಯ ಪ್ರವಾಸ ಮರೆಯಲಾರದ ಪ್ರವಾಸವಾಗಿ ಉಳಿದಿದೆ. ನಾರ್ವೆಯ ಮತ್ತೊಂದು ಸುಂದರ ಜಾಗ ''Bergen'' ಎಂಬುವುದರ ಬಗೆಗೆ ಮುಂದೆ ಎಂದಾದರೂ ಬರೆಯುತ್ತೇನೆ. ನಾರ್ವೆಯ  ಬಗ್ಗೆ ಹೆಚ್ಚಿನ ವಿವರ ಬೇಕಾದರೆ ''http://www.norwaynutshell.com/'' ಎಂಬ ಅಂತರ್ಜಾಲ ತಾಣಕ್ಕೆ ಭೆಟ್ಟಿ ಕೊಟ್ಟು ಓದಿ. 

ಕಿಸೆಯಲ್ಲಿ ಹಣ, ಕಾಲಲ್ಲಿ ಶಕ್ತಿ, ಮನಸಲ್ಲಿ ಇಚ್ಛೆ ಈ ಮೂರು ಇದ್ದರೆ ನಾರ್ವೆ ನಿಮಗಾಗಿ ಕಾಯುತ್ತಿದೆ.

ಸ್ನೇಹಿತರೆ,
ಕಳೆದ ಕೆಲವು ವಾರಗಳಿಂದ ನಾರ್ವೆಗೆ ನನ್ನೊಂದಿಗೆ ಪ್ರಯಾಣಿಸಿದ್ದಿರಿ. ಅಲ್ಲಿನ ವಿವರಗಳನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಿರಿ. ನಿಮ್ಮೆಲ್ಲರಿಗೂ ಧನ್ಯವಾದಗಳು  ಕಳೆದ ಸಂಚಿಕೆಗಳು ಇಲ್ಲಿವೆ. ಓದಲು ಕೆಳಗೆ ಕ್ಲಿಕ್ಕಿಸಿ.




ಮುಂದಿನ ವಾರ ಮತ್ತೆ ಸಿಗುತ್ತೇನೆ.

ನಿಮ್ಮವ

ಗುರು 

Tuesday, August 17, 2010

ಚಕೋರ ಚಂದ್ರಮನಿಗೂ ಪೈಪೋಟಿಯೇ....

ಹೌದು, ಅವಳ ಸೌಂದರ್ಯವೇ ಹಾಗಿತ್ತು. ''ಸೌಂದರ್ಯ'' ವನ್ನು ಯಾವಾಗಲೂ ಹೆಣ್ಣಿಗೆ ಹೋಲಿಸುತ್ತ ಬಂದಿರುವುದು ಜನಜನಿತ. ''ಸಿಂಹದ ಕಟಿ'', ''ಹಂಸದ ನಡಿಗೆ'' ''ಬಾಳೇ ದಿಂಡಿನಂಥ ತೊಡೆ'' ''ತೊಂಡೆ ಹಣ್ಣಿನಂತ ತುಟಿ''  ಅದು ಇದು ಎಂದು ಹೆಣ್ಣನ್ನು ಹೊಗಳಲು ಕವಿ ಮಹಾಶಯರು ಬಳಸಿದ ಪದಕ್ಕೆ ಲೆಕ್ಕವಿಲ್ಲ. ಕಾಳಿದಾಸನಂತೂ ತನ್ನ ಕಾವ್ಯದಲ್ಲಿ ಹೆಣ್ಣನ್ನು ಸೌಂದರ್ಯದ ಪರಮ ದೇವತೆ ಯಾಗಿ ಚಿತ್ರಿಸಿದ್ದಾನೆ. ಇಂಥಹ ಅನುಪಮ ಚೆಲುವೆಯ ಕಥೆಯೇ ನನ್ನ ಈ ವಾರದ ಕಥಾವಸ್ತು. ಆ ಕಥಾ ನಾಯಕಿಯ ಸೌಂದರ್ಯವೂ ಚಕೋರ ಚಂದ್ರಮನನ್ನು ನಾಚಿಸುತ್ತಿತ್ತು. ಚಂದ್ರ ನೋಡಿದರೆ ಆತನೇ ನಾಚಿ ತನಗೊಬ್ಬ ಪೈಪೋಟಿ ನೀಡುವ ಸುಂದರಿ ಬಂದಳೋ ಎನ್ನುವಂತೆ ಬೇಸರಗೊಳ್ಳುತ್ತಿದ್ದ. ಇಂಥಹ ಅನುಪಮ ಚೆಲುವೆ ಯನ್ನು ನಾನೊಬ್ಬ ನೋಡಿದರೆ ನಿಮಗೆ ಬೇಸರವಾಗಬಹುದು. ಬನ್ನಿ, ನೋಡೋಣ ಅವಳ  ರೂಪ ಲಾವಣ್ಯ ರಾಶಿಯನ್ನು. 

ಅದೊಂದು 450 ಜನರು ವಾಸಿಸುವ ಪುಟ್ಟ ಹಳ್ಳಿ. ಹಳ್ಳಿ ಅನ್ನುವುದಕಿಂತ ''ಸ್ವರ್ಗ'' ಅಂದರೆ ಸೂಕ್ತವಾದೀತೇನೋ. ಪುಟ್ಟ ಹಳ್ಳಿಗೆ ನೆಟ್ಟಗೆ ಕರೆಂಟ್  ಕೂಡಾ ಇರದ ಸ್ಥಿತಿಯನ್ನು ನಾವು ಕೇಳಿದ್ದೇವೆ. ಆದರೆ ಇಲ್ಲಿಯ ಹಳ್ಳಿ ಹಾಗಿಲ್ಲ, ಇಲ್ಲಿ ಎಲ್ಲವೂ ಇತ್ತು, ಬಹುಷ: TV-9 ಯವರು ಬಂದಿದ್ದರೆ ''ಹೀಗೂ ಉಂಟೆ'' ಎನ್ನುತ್ತಿದ್ದರೇನೋ. ಹಾಗಿತ್ತು ಇಲ್ಲಿನ ಹಳ್ಳಿ. ಆ ಪುಟ್ಟ ಹಳ್ಳಿಯ ಹೆಸರೇ ಇಂದಿನ ಕಥಾ ನಾಯಕಿ. ''Flam'' ಎಂಬ ಹೆಸರಿನ ಈ ರೂಪವತಿ ನಾರ್ವೆ ಯ ದಕ್ಷಿಣ ಕ್ಕೆ ನೆಲಸಿದ್ದಾಳೆ. ಸುತ್ತ ಸುತ್ತುವರಿದ ಬ್ರಹತ್ ಬೆಟ್ಟ ಗುಡ್ಡಗಳು, ನಡುವೆ ಮೈ ಪುಳಕಗೊಳಿಸುವ ಜಲ ರಾಶಿ, ಸುಂದರ ಜಲಪಾತಗಳು 

''ಚೆಲುವೆಯೇ ನಿನ್ನ ನೋಡಲು, 
ಮಾತುಗಳು ಬರದವನು, 
ಬರೆಯುತಾ, ಹೊಸ ಕವಿತೆಯ
 ಹಾಡುವ ನೋಡಿ ಅಂದವನು''

ಎಂದು ಹಾಡಿದ ಕನ್ನಡದ ಕಣ್ಮಣಿ ಡಾ.ರಾಜಕುಮಾರ್ ನೆನಪಾದರೆ ಆಶ್ಚರ್ಯವೇನು  ಇಲ್ಲ.  ಇಲ್ಲಿನ ತರು ಲತೆಗಳು, ಗಿಡ ಮರಗಳು, ಜಲ ಕೊಳಗಳು, ಬ್ರಹದಾಕಾರದ ಪರ್ವತ ಶಿಖರಗಳು, ಹಸಿರು ಹುಲ್ಲುಗಾವಲುಗಳು ಒಹ್, ಏನೆಂದು ವರ್ಣಿಸಲಿ ಇದರ ಸೊಬಗ. ಸ್ಫಟಿಕದಂತ ಶುಭ್ರತೆ ಹೊಂದಿದ ನೀರು, ಗಂಗೆಯ ಶುಭ್ರತೆ ನೋಡಿದ್ದೇನೆ, ಆ ಗಂಗೆಯ ಶುಭ್ರತೆಯನ್ನೂ ಮೀರಿಸುವ ನೀರಿನ ಶುಭ್ರತೆ ಕಂಡು ಮೂಕ ವಿಸ್ಮಿತ ರಾದ ಜನರೆಷ್ಟೋ. ಒಟ್ಟಿನಲ್ಲಿ  Beauty Queen ಕಣ್ರೀ ಇದು.

Oslo ದಿಂದ ಬೆಳಗಿನ ಜಾವ 7 ಘಂಟೆಗೆ ಈ ಸುಂದರಿಯ ನೋಡಲು ಹೊರಟೆವು. ಓಸ್ಲೋ ದಿಂದ ಮಿರ್ಡಾಲ್ ವರೆಗೆ ರೈಲಿನಲ್ಲಿ ಬಂದು ಅಲ್ಲಿಂದ ಇನ್ನೊಂದು ರೈಲು ತೆಗೆದುಕೊಳ್ಳಬೇಕು. ನಾರ್ವೆಯ ಪ್ರಕೃತಿಯ ದರ್ಶನದ ಮೊದಲ ಹೆಜ್ಜೆ ಇಲ್ಲಿನ ರೈಲಿನ ಪ್ರಯಾಣ. ಮಾರ್ಗ ಮದ್ಯದಲ್ಲಿ ಸಿಗುವ ಸುಂದರ ಹುಲ್ಲುಗಾವಲು, ಮನೆಗಳು, ನದಿ, ಕಣ್ಮನ ಸೆಳೆಯುತ್ತವೆ.



1222 ಮೀಟರ್ ಎತ್ತರದಲ್ಲಿರುವ  Finse


ಸುಮಾರು 4-30 ತಾಸು ಪ್ರಯಾಣಿಸಿದ ಮೇಲೆ ಮಿರ್ಡಾಲ್ ಬರುತ್ತದೆ. ಇಲ್ಲಿಂದ ಆರಂಭವಾಗುವುದೇ Flam ಎಂಬ ಸುಂದರಿಯ ಭೆಟ್ಟಿಯಾಗಲು ಇರುವ ಅಡಚಣೆಗಳು, ಸಾಹಸಗಾಥೆ, ಯಶೋಗಾಥೆ ಎಲ್ಲವೂ.
Flam ಎಂಬ  ರಂಭೆಯನ್ನು ಭೆಟ್ಟಿಯಾಗಲು ಬರುವುದು ಅಷ್ಟೊಂದು ಸುಲಭ ಅಂದುಕೊಳ್ಳಬೇಡಿ. ತನ್ನ ಸುತ್ತಲೂ ಸೈನಿಕರ ಕಾವಲು ಇರುವಂತೆ ಬೆಟ್ಟ ಗುಡ್ದಗಳನ್ನೇ ನಿರ್ಮಿಸಿಕೊಂಡಿದ್ದಾಳೆ. ಎಂಥೆಂಥ ಬಾಲಿವುಡ್ ಲಲನೆಯರಿಗೆ ಸೆಕ್ಯೂರಿಟಿ ಬೇಕಿರುವಾಗ ಪ್ರಪಂಚದಾದ್ಯಂತ ಪ್ರವಾಸಿಗರ ಸೆಳೆಯುವ ಈ ಚೆಲುವೆಗೆ ಬೇಡವೇ ರಕ್ಷಣೆ. ಈ ಚೆಲುವೆ ಯ ಕಥೆಯೂ ಅಷ್ಟೇ ರೋಮಾಂಚನೀಯ. ಬರುವ ಪ್ರತೀ ಪ್ರವಾಸಿಗನ ಮನಸಿನಲ್ಲೂ ''ಅಬ್ಬಬ್ಬ ಹೆಣ್ಣೇ'' ಎಂಬ ಮಾತುಗಳನ್ನು ಹೇಳಿಸದೇ ಇರದು ನೋಡಿ. ಒಂದು ಕಾಲದಲ್ಲಿ ಇಲ್ಲಿಗೆ ಬರುವುದೇ ಅಸಾದ್ಯ ಎಂಬ ಸ್ಥಿತಿ ಇತ್ತಂತೆ.  ಈ ಲಲನೆಗೆ ಚಳಿಗಾಲ ಬಂತೆಂದರೆ ''ವೈಧವ್ಯ'' ಪ್ರಾಪ್ತಿ. ಸುತ್ತಲೂ ಬಿಳಿಯ ಹಿಮದಿಂದ ತುಂಬಿ ಹೋಗುವ ಇವಳು ಅಕ್ಷರಶ: ನತದೃಷ್ಟ ಹತಭಾಗ್ಯೆ ಯಂತೆ ಚಳಿಗಾಲದಲ್ಲಿ ಗೋಚರಿಸುತ್ತಾಳೆ. ಆದರೆ ಬೇಸಿಗೆಯ ಹೊಂಗಿರಣ ಬಂದ ಕೂಡಲೇ 
''ಈ ಸಮಯ ಶೃಂಗಾರ ಮಯ
ನೂತನ ಬಾಳಿಗೆ ಶುಭೋದಯ''
ಎಂದು ಹಾಡಬೇಕೆನಿಸುತ್ತದೆ.
ಅದೇ ಚಳಿಗಾಲ ಬಂದರೆ,
''ಈ ಸಮಯ ಶೃಂಗಾರ ಮಾಯಾ''
ಎಂದು ಹಾಡಬೇಕಾಗುತ್ತದೆ.

''Flam'' ಅಂದರೆ  ''Little place between steep mountains'' ಎಂದರ್ಥ. ಪ್ರಕ್ರತಿಯ ಆರಾಧಕರಿಗೆ ಇದೊಂದು ತಪಸ್ಯಾ ಸ್ಥಳ. ಇಲ್ಲಿಗೆ ಬರಬೇಕಾದರೆ ಸಿಗುವ ಅನುಭವ ಜೀವನದಲ್ಲೇ ಮರೆಯಲಾರದ್ದು. Thanks to Flam Railway. ಸುಮಾರು 1800 ಇಸವಿಯಲ್ಲಿ ಬ್ರೀಟಿಷರು ಮತ್ತು ಜರ್ಮನ್ನರು ಇಲ್ಲಿನ ಸ್ನಿಗ್ಧ ಸೌಂದರ್ಯ ಸವಿಯಲು ಹಡಗಿನಲ್ಲಿ ಬರುತ್ತಿದ್ದದು ಬಿಟ್ಟರೆ ಇದೊಂದು ಮನುಷ್ಯರು ಬಂದು ಹೋಗಲು ಅಸಾಧ್ಯವಾದ ಜಾಗವಾಗಿತ್ತು. ಆದರೆ 1923 ರಲ್ಲಿ ಕೆಲವು ಶೂರ Engineer ಗಳ ತಂಡ ಒಂದು ದುಸ್ಸಾಹಸಕ್ಕೆ ಕೈ ಹಾಕಿದರು. 20 ಕಿ ಮಿ ಗಳಷ್ಟು ಉದ್ದದ ಕಲ್ಪನೆಗೂ ನಿಲುಕದ ರೈಲು  ಮಾರ್ಗವನ್ನು Flam  ಮತ್ತು   Myrdal   ನಡುವೆ ನಿರ್ಮಿಸುವ ಸಂಕಲ್ಪ ತೊಟ್ಟೆ ಬಿಟ್ಟರು. ಅಲ್ಲಿನ 1400 ಮೀಟರ್ ಎತ್ತರದ ಪರ್ವತಗಳನ್ನು ನೋಡಿದರೆ ಎಂಥಹ ಅಂಜದ ಗಂಡಿನಲ್ಲೂ ಗಡ ಗಡ ನಡುಗುವ ಚಳಿ ಆವರಿಸುತ್ತದೆ.




 ಆದರೆ ಕೆಲವರು ಸಾಧನೆ ಮಾಡಲೆಂದೇ ಹುಟ್ಟಿರುತ್ತಾರೆ. ನಾವು ಜಗತ್ತನ್ನು ನೋಡುವ ದೃಷ್ಟಿಗಿಂತ ಅವರು ನೋಡುವ ದೃಷ್ಟಿಕೋನ ಬೇರೆಯೇ ಇರುತ್ತದೆ. ಅದಕ್ಕೆ ಶತಮಾನಕ್ಕೊಬ್ಬ ವಿವೇಕಾನಂದ, ಮಹಾತ್ಮ ಗಾಂಧೀಜಿ, ಯಂಥ  ಮಹಾತ್ಮರು ಕಾಣುತ್ತಾರೆ. 

Flam Railway, well-known as ''Master of Engineering''

ಆ Engineer ಗಳ ತಂಡಕ್ಕೆ ಇದ್ದ ಸವಾಲಾದರೂ ಎಂಥದ್ದು, ಬ್ರಹತ್ ಬೆಟ್ಟ, ಕಡಿದಾದ ಪ್ರಪಾತ, ರಭಸದಿಂದ ಧುಮ್ಮಿಕ್ಕುವ ಜಲಧಾರೆ ಎಲ್ಲ ಕಡೆ, ವರ್ಷದ 6 ತಿಂಗಳು ತುಂಬಿದ ಹಿಮ ರಾಶಿ, ಎಲ್ಲಿಯೂ ಸೌಂದರ್ಯ ನಾಶ ಮಾಡದೆ, ಅದೇ ವೇಳೆಗೆ ಅತ್ಯಂತ ಅಪಾಯಕರವಾದ ಪರ್ವತಗಳ ತುದಿಯಲ್ಲಿ ರಸ್ತೆ ನಿರ್ಮಾಣ ಮಾಡುವ ಕೆಲಸ. ಹೇಳಿದರೆ ನಿಮಗೆ ನಂಬಿಕೆ ಆಗಲಿಕ್ಕಿಲ್ಲ. ಅಲ್ಲಿ ಹೋಗಿ ಬಂದರೆ ನಿಜಕ್ಕೂ ಆ ರೈಲು ಮಾರ್ಗ ನಿರ್ಮಾಣ ಮಾಡಿದ ಮಹಾತ್ಮರಿಗೆ ಒಂದು ಸಲಾಂ ಎನ್ನಲೇ ಬೇಕಿದೆ.
ರೈಲು  ಮಾರ್ಗದ  ನೀಲ  ನಕ್ಷೆ  
 ಸುಮಾರು 20 ವರುಷಗಳ ಕಠಿಣ ಪರಿಶ್ರಮ, ಹಗಲು ರಾತ್ರಿ ಕೆಲಸ, ಎಲ್ಲಿಯೂ ಮೋಸ ಮಾಡಲಿಲ್ಲ. 1923 ರಲ್ಲಿ ಆರಂಬಿಸಿ 1940 ರ ಸುಮಾರಿಗೆ ರೈಲು ಮಾರ್ಗ ವಿಶ್ವಕ್ಕೆ ತೆರೆದುಕೊಂಡಿತು. ಅಷ್ಟೇ ಅಲ್ಲ, ಆ ಅಪರೂಪದ ಚೆಲುವೆಯ ದರ್ಶನ ಎಲ್ಲರಿಗೂ ಲಭ್ಯವಾಯಿತು. ಈ ರೈಲು ಮಾರ್ಗದಲ್ಲಿ ಸುಮಾರು 20 Tunnel ಗಳಿವೆ. 

ನೋಡಿ, ಎಂಥಹ ಪರ್ವತವನ್ನು ಕೈಯ್ಯಲ್ಲೇ ಕೊರೆದು ಸುರಂಗ  ಮಾಡಿದ್ದಾರೆ ಎಂದು...

ಇಲ್ಲಿನ ಕೆಲಸಗಾರರಿಗೆ ಹೆಚ್ಚಿನ ಸಮಯ ಸುರಂಗ  ನಿರ್ಮಾಣಕ್ಕೆ  ಬೇಕಾಯಿತಂತೆ. ಯಾಕೆಂದರೆ 20 ರಲ್ಲಿ 18 ಸುರಂಗಗಳನ್ನು ಕೈಯಲ್ಲಿಯೇ ಕೆತ್ತಿ ಮಾಡಿದ್ದೆಂದರೆ ಅವರ ಸಾಹಸ ನಿಮಗೆ ತಿಳಿಯಬಹುದು. ಯಾಕೆಂದರೆ ಯಾವ  ದೊಡ್ಡ ದೊಡ್ಡ ಯಂತ್ರಗಳು ಅಲ್ಲಿಗೆ ಹೋಗಲು ಸಾದ್ಯವಿಲ್ಲದ ದುರ್ಗಮ ಜಾಗವದು. ಆ ಸಾಹಸ ಕಥೆ ಓದಲು ಇಲ್ಲಿ ಕ್ಲಿಕ್ಕಿಸಿ http://www.flaamsbana.no/eng/
ಕಡಿದಾದ ಪರ್ವತಗಳು ಕೆಲಸಗಾರರಿಗೆ ಬಹುದೊಡ್ಡ ಸಮಸ್ಯೆ ಆಗಿತ್ತಂತೆ. ಅದಕ್ಕೆಂದೇ ಹಲವಾರು Hairpin  ಸುರಂಗ ನಿರ್ಮಿಸಿದ್ದಾರೆ. ಅತ್ಯಂತ   ಅಪಾಯಕರವಾದ ''avalanches'' ಮತ್ತು ಜಲಪಾತಗಳ ರಭಸ ತಪ್ಪಿಸಲು ರೈಲು ಮಾರ್ಗವನ್ನು 3 ಸಲ ನದಿಯ ಎಡಕ್ಕೆ ಮತ್ತು ಬಲಕ್ಕೆ ಬರುವಂತೆ ನೋಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಸೇತುವೆಯ ಮೇಲೆಯೂ ನದಿ ದಾಟದಂತೆ ಮುತುವರ್ಜಿ ವಹಿಸಲಾಗಿದೆ. 


ರೈಲಿನ ಒಳಗಿನಿಂದ ಕಾಣುವ ದ್ರಶ್ಯ 

ಈ ರೈಲು ಮಾರ್ಗಕ್ಕೆ ವಿಶ್ವದ ಅತೀ ಸುಂದರ ರೈಲು ಮಾರ್ಗ ಎಂಬ ಪ್ರಶಸ್ತಿಯೂ ಲಭಿಸಿದೆ. 2007 ರಲ್ಲಿ ಸುಮಾರು 6 ಲಕ್ಷ ದಷ್ಟು ಪ್ರಯಾಣಿಕರು ಈ ರೈಲಿನಲ್ಲಿ Flam ಗೆ ಪ್ರಯಾಣಿಸಿದರಂತೆ. ಅದೊಂದು ದಾಖಲೆ. ರೈಲಿನಲ್ಲಿ ಪ್ರಯಾಣಿಸುವಾಗ ಇಕ್ಕೆಲಗಳಲ್ಲಿ ಕಡಿದಾದ ಪ್ರಪಾತ, ನಯನ ಮನೋಹರ ಜಲಪಾತಗಳು, ಎದೆ ನಡುಗಿಸುವ ಪರ್ವತಗಳ ಸಾಲು, ಎಲ್ಲವನ್ನು ನೋಡುತ್ತಿದ್ದರೆ ಯಾವುದೋ ಬೇರೆಯ ಲೋಕಕ್ಕೆ ಬಂದಂತೆ ಅನಿಸುತ್ತದೆ. ಸುಮಾರು ಒಂದು ಘಂಟೆಗಳ ಈ ಪ್ರಯಾಣ ಇನ್ನು ಇದ್ದಿದ್ರೆ ಚೆನ್ನ ಅನ್ನಿಸದೆ ಇರದು.
ಮಾರ್ಗ ಮದ್ಯದಲ್ಲಿ ಸಿಗುವ ಎತ್ತರದ  Kjosfossen ಜಲಪಾತ ನೋಡುಗರಿಗೆ, ಪ್ರಕ್ರತಿ ಪ್ರಿಯರಿಗೆ, ಛಾಯಾ ಚಿತ್ರಗ್ರಾಹಕರಿಗೆ ಹಬ್ಬದೂಟ ನೀಡುತ್ತದೆ. ಇಲ್ಲಿ ರೈಲನ್ನು 10  ನಿಮಿಷ ಸೌಂದರ್ಯ ನೋಡಲೆಂದೇ ನಿಲ್ಲಿಸಲಾಗುತ್ತದೆ.

ಇಲ್ಲಿನ ಜಲಪಾತದ ತುಣುಕು ವೀಡಿಯೊ ದಲ್ಲಿದೆ ನೋಡಿ,
 ಜಲಪಾತ ಕಳೆದ ಮರುಕ್ಷಣವೇ 180 ಡಿಗ್ರಿ ಯ ಹೈರ್ ಪಿನ್ ಆಕಾರದ ಸೇತುವೆ ಛಾಯಾ ಚಿತ್ರಗ್ರಾಹಕರಿಗೆ ಸುಗ್ಗಿ ನೀಡುತ್ತದೆ. 180 ಡಿಗ್ರಿ ಯಷ್ಟು ರೈಲು ತಿರುಗಿದಾಗ ಸುತ್ತಲಿನ ಬೆಟ್ಟದ ಪನೋರಮಿಕ್   ಸೌಂದರ್ಯ ಕಣ್ಣಿಗೆ ಲಭಿಸುತ್ತದೆ.

ಇಲ್ಲಿನ ದೃಶ್ಯಗಳು ಪ್ರತಿಕ್ಷಣವೂ ಮರೆಯಲಾರದ ನೆನಪಾಗಿ ಸ್ಮ್ರತಿ ಪಟಲ ದಲ್ಲಿ ಉಳಿದು ಹೋಗುತ್ತದೆ. ಒಂದು ತಾಸಿನ ರೋಮಾಂಚನೀಯ ಮಾರ್ಗದಲ್ಲಿ ಬೆಟ್ಟದ ಮೇಲಿನಿಂದ ಬೆಟ್ಟದ ಕೆಳಗೆ ಬಂದಿಳಿದರೆ ಸಿಗುವುದೇ ಸೌಂದರ್ಯದ ಖನಿ Flam.







ಈ ಸುಂದರಿಯ ಬಗ್ಗೆ ಮುಂದಿನ ವಾರ ಹೇಳ್ತೀನಿ, ಯಾಕಂದ್ರೆ ಅತೀಯಾದ್ರೆ ಅಮ್ರತಾನು ವಿಷ ಅಂತೆ.

ನಿಮ್ಮವ ಗುರು


Friday, August 6, 2010

ನಗ್ನತೆಯೇ ಮೈವೆತ್ತ ಓಸ್ಲೋ ದ ಶಿಲ್ಪಕಲಾ ಉದ್ಯಾನವನ - ಭಾಗ 2

ಕಳೆದ ವಾರ ನಾರ್ವೆ ಯ ಕಿರು ಪರಿಚಯ ದ ಲೇಖನ ಬರೆದಿದ್ದೆ (http://gurumurthyhegde.blogspot.com/2010/07/blog-post_29.html). ಆ ದೇಶದ ಬಗೆಗೆ ಹೇಳುತ್ತಾ ಹೋದರೆ ಮುಗಿಯದಷ್ಟು ವಿಷಯ ಹೊತ್ತು ತಂದಿದ್ದೇನೆ. ಅದನ್ನು ಎತ್ತಿ ಸಲಹುವ ಕೆಲಸ ನಿಮ್ಮದು.
  
ಬರಹ ಆರಂಬವಾಗುವುದೇ ನಾರ್ವೆಯ ಹ್ರದಯಭಾಗ, ರಾಜಧಾನಿ ಓಸ್ಲೋ ದ ಮೂಲಕ. ಸುಮಾರು 1048 ರಲ್ಲಿ ಹೆರಾಲ್ಡ್ 3, ರಾಜನಿಂದ ನಿರ್ಮಿತವಾದ ಓಸ್ಲೋ , ಸುಮಾರು 1624 ರಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಬಹುತೇಕ ನಿರ್ನಾಮ ವಾಯಿತು. ಪುನಃ ಅದನ್ನು ಡ್ಯಾನಿಶ್ ರಾಜ ಕ್ರಿಸ್ತಿಯನ್ 3 ಕಟ್ಟಿದ. ಅದಕ್ಕೆ ''ಕ್ರಿಸ್ತಯಾನ'' ಎಂದು ಕರೆಯಲಾಯಿತು. 1925 ರಲ್ಲಿ ಪುನಃ ಅದರ ಸ್ವಂತ ಹೆಸರಾದ ಓಸ್ಲೋ ವನ್ನು ನೀಡಲಾಯಿತು. ಇದು ಓಸ್ಲೋ ದ ಬಗೆಗಿನ ಚಿಕ್ಕ ಚೊಕ್ಕ ವಿವರಣೆ.

ಇಂಥಹ ರಾಜಧಾನಿಯನ್ನು ನಾವು ತಲುಪಿದಾಗ ಬೆಳಗಿನ  ಸುಮಾರು 10-45 ಆಗಿತ್ತು. ಕೈಯಲ್ಲಿ ನಕ್ಷೆ ಇದ್ದಿದ್ದರಿಂದ ನಾವು ಉಳಿದುಕೊಂಡಿದ್ದ ಹೋಟೆಲ್ ಹುಡುಕಲೇನು ಕಷ್ಟವಾಗಲಿಲ್ಲ. ಓಸ್ಲೋ ದ ರೈಲು ನಿಲ್ದಾಣ ಅತ್ಯಂತ ವ್ಯವಸ್ತಿತ ವಾದ ರೈಲು ನಿಲ್ದಾಣ. ಹೆಚ್ಚಿನ ಮಾಹಿತಿಗೆ ಇಲ್ಲಿ ಓದಿ (http://en.wikipedia.org/wiki/Oslo_Central_Station). ಹೋಟೆಲ್ ಗೆ ಹೋದ ಕೂಡಲೇ ಹೊಟ್ಟೆಗೆ ವ್ಯವಸ್ತೆ ಮಾಡಿಕೊಂಡು ಓಸ್ಲೋ ದಲ್ಲಿ ಇರುವ ಸ್ವಲ್ಪ ಸಮಯವನ್ನು ಹೇಗೆ ಉಪಯೋಗಿಸುವುದು ಎಂದು ಯೋಚಿಸಿದೆವು. ಕೆಲವೊಮ್ಮೆ ಏನೋ ನೋಡಲು ಹೋಗಿ, ಏನೇನೋ ನೋಡಿ, ಕೊನೆಗೆ ಏನು ಇಷ್ಟವಾಗದೆ, ಆ ನಗರವನ್ನೇ ಬೈದು ಬರುತ್ತೇವೆ. ಯಾವುದೇ ನಗರಕ್ಕೆ ಹೋದಾಗ ಅಲ್ಲಿನ ಬಹು ಮುಕ್ಯವಾದ ಕೆಲವನ್ನು ನೋಡಲೇಬೇಕು ಎನ್ನುವ ಸಿದ್ದಾಂತ ನನ್ನದು. ಎಲ್ಲ ನಗರಗಳಂತೆಯೇ ಓಸ್ಲೋ ದಲ್ಲೂ ನೋಡಲು ಬೇಕಾದಷ್ಟು ಚರ್ಚ್ ಗಳಿವೆ. ಪಾರ್ಕ್ ಗಳಿವೆ. ಮ್ಯುಸಿಯುಂ ಗಳಿವೆ. ಆದರೆ ಇರುವ ಸ್ವಲ್ಪ ಸಮಯದಲ್ಲಿ ಇದನ್ನೆಲ್ಲಾ ನೋಡುತ್ತಾ ಕುಳಿತರೆ ಹೇಗೆ? ಅಲ್ಲವೇ. ಸಮಯದ ಅಭಾವ  ಯಾಕೆ ಕೇಳ್ತಿರಾ?
ನಾವು ಮರುದಿನ ಬೆಳಿಗ್ಗೆ ಓಸ್ಲೋ ದಿಂದ ನಾರ್ವೆ ನೋಡಲು ಪ್ಯಾಕೇಜ್ ಟ್ರಿಪ್ ತೆಗೆದುಕೊಂಡಿದ್ದೆವು. ಹಿಂದಿನ ದಿನವೇ ಓಸ್ಲೋ ಬಂದು ಸ್ವಲ್ಪ ವಿಶ್ರಾಂತಿ ಪಡೆದು ಹೋಗಬೇಕೆಂದು ಓಸ್ಲೋ ಬಂದಿಳಿದೆವು. ಅದಕ್ಕೆ ಹೇಳಿದ್ದು ''ಇರುವ ಸ್ವಲ್ಪ ಸಮಯ'' ಎಂದು. ಯಾಕೆಂದರೆ ಓಸ್ಲೋ ನೋಡಲು ಒಂದು ದಿನ ಸಾಲದು.  

ನಗ್ನತೆಯೇ ಮೈವೆತ್ತ ಓಸ್ಲೋ ದ ಶಿಲ್ಪಕಲಾ ಉದ್ಯಾನವನ ಓಸ್ಲೋ ದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಓಸ್ಲೋ ಗೆ ಬಂದವರು ಇಲ್ಲಿನ ವಿಗೆಲಂದ್ ಶಿಲ್ಪಕಲಾ ಉದ್ಯಾನವನಕ್ಕೆ (Vigeland Sculpture Park)  ಬಾರದೆ ಹೋಗುವುದಿಲ್ಲ. ಸುಮಾರು 80 ಎಕರೆ ಗಳಷ್ಟು ವಿಸ್ತಾರವುಳ್ಳ ಉದ್ಯಾನವನದ ಪ್ರವೇಶವೇ ನಿಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಇಲ್ಲಿನ ಸ್ವಚ್ಛತೆ, ಪ್ರಕ್ರತಿ ಸೌಂದರ್ಯ ಹೊಸ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಸುಮಾರು 212 ಕಂಚಿನ ಹಾಗೂ ಗ್ರಾನೈಟ್ ನ ಮೂರ್ತಿಗಳಿರುವ ಜಗಹ ತನ್ನ ಅಪ್ರತಿಮ ಸೌಂದರ್ಯಕ್ಕೆ ಹೆಸರುವಾಸಿ. ''ಗುಸ್ತಾವ್ ವಿಗಿಲೆಂದ್'' ಎಂಬಾತ ಸ್ವತಹ ತಾನೇ ನಿಂತು ಕೆತ್ತಿದ ಶಿಲ್ಪಗಳಂತೆ ಇವು. ಬೇಲೂರಿನ ಶಿಲ್ಪಕಲೆ, ಅಜಂತಾ ಎಲ್ಲೋರಿನ ಶಿಲ್ಪಗಳೆಲ್ಲ ನಮ್ಮ ಕಣ್ಣೆದುರಿಗೆ ಬಂದು ನಿಂತು ನರ್ತಿಸಿದಂತೆ ಭಾಸವಾಯಿತು. ಸುಮಾರು 1924-1947 ರಲ್ಲಿ ಉದ್ಯಾನವನ ನಿರ್ಮಾಣ ವಾಯಿತು ಎಂದು ಹೇಳುತ್ತದೆ ಇಲ್ಲಿನ ಇತಿಹಾಸ.





 ಇಂಥಹ ಸ್ಥಳಗಳಿಗೆ ಬಂದರೆ ಇರುವ ದೊಡ್ಡ ತಲೆನೋವೆಂದರೆ ಕ್ಯಾಮೆರ ಜೊತೆಗಿರುವುದು. ಅಷ್ಟೊಂದು ಶಿಲ್ಪಕಲೆಗಳ ಫೋಟೋ ತೆಗೆಯುವುದು. ನಂತರ ಅದರೊಂದಿಗೆ ನಿಂತ ಜೀವಂತ ಶಿಲ್ಪಗಳು (ನಾವು ಎಂದು ಬೇರೆ ಹೇಳಬೇಕಾಗಿಲ್ಲ ತಾನೇ ), ನಂತರ ಆ ಶಿಲ್ಪಗಳೊಂದಿಗೆ ನಮ್ಮ ನರ್ತನ ಫೋಟೋ ಎಲ್ಲ ಸೇರಿ ದಿನದ ಕೊನೆಗೆ ಕ್ಯಾಮೆರ ಗುಂಡಿ ಒತ್ತಿ ಒತ್ತಿ ಕೈಯೆಲ್ಲ ಗುಂಡಿ ಒತ್ತುತ್ತಿರುವಂತೆ ಭಾಸವಾಗುತ್ತಿತ್ತು. ಇಲ್ಲಿನ ಶಿಲ್ಪಗಳ ವೈಶಿಷ್ಟ್ಯ ವೆಂದರೆ ಸಂಸಾರದ ಸಂಭಂಧ ಗಳ  ಬಗೆಗಿನ ಚಿತ್ರಣ. ಹೆಣ್ಣಿನ ಗಂಡಿನ ಸಮಾಗಮದ ಚಿತ್ರಣ. ಎಲ್ಲಿಯೂ ಕಾಮಕ್ಕೆ ಆಸ್ಪದ ಕೊಡದೆ, ಪ್ರೇಮವನ್ನು ಬಿಡದೆ, ನಗ್ನತೆಯನ್ನೇ ಬಿಂಬಿಸಿ ತೋರಿಸುವ ಒಂದೊಂದು ಶಿಲ್ಪವೂ ಒಂದು ಶತಮಾನದ ಕಥೆ ನಮ್ಮೊಂದಿಗೆ ಹೇಳುತ್ತಿರುವಂತೆ ಭಾಸವಾಗುತ್ತದೆ. ಇಲ್ಲಿನ ಪ್ರತಿ ಶಿಲ್ಪದಲ್ಲಿಯೂ ಯಾವುದೋ ಜನ್ಮದ ಕಥೆಯಿದೆ, ಅದರ ಒಳಗಿನ ಭಾವನಗಳ ಮಿಳಿತವಿದೆ. ಮನುಷ್ಯನ ದಿನನಿತ್ಯದ ಹೋರಾಟದ ಮಾದರಿ ಇಲ್ಲಿದೆ, ನ್ರತ್ಯ, ಸಿಟ್ಟು, ಕೋಪ, ತಾಳ್ಮೆ, ಪ್ರೀತಿ, ಸ್ನೇಹ ಇವೆಲ್ಲವುಗಳ ಮೂರ್ತರೂಪವೇ ಉದ್ಯಾನವನ ಎಂದರೆ ತಪ್ಪಾಗಲಾರದೇನೋ. 



                                       


ಇಲ್ಲಿಯ ಮೂರ್ತಿಗಳಿಗೆ, ನಾವೇ ಅಲ್ಲಿ ಹೋಗಿ ನಿಂತಂತೆ ನಮ್ಮನ್ನು ಕರೆಯುವ ಸೆಳೆತವಿದೆ.  ಆ ಮುಗ್ಧ ಮಗುವಿನ ಚಿತ್ರ, ಮಗುವನ್ನು ಆಡಿಸುತ್ತಿರುವ ಚಿತ್ರ, ಪ್ರೇಮದ ಪರಕಾಷ್ಟೆಯ ಚಿತ್ರ, ಆಗಸವನ್ನೇ ನೋಡುತ್ತಿರುವ ಚಿತ್ರ, ಒಂದೇ ಎರಡೇ, ಪ್ರತೀ ಚಿತ್ರವೂ ನನ್ನ ಕಾಡಿದೆ. ಚಿತ್ರದ ಹಿಂದೆ ಅದನ್ನು ಕೆತ್ತಿದ ಶಿಲ್ಪಿಯ ಮನೋಭಾವನೆಯ ತಿಳಿಯುವ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕುವಂತೆ ಮಾಡಿದೆ.
ಹೆಣ್ಣು ಹೆಣ್ಣಿನ ಸಮಾಗಮದ ಕೆಲವು ಫೋಟೋಗಳು ಇಲ್ಲಿದ್ದರೂ ಎಲ್ಲಿಯೂ ಕಾಮದ ಸುಳಿವು ನೀಡುವುದಿಲ್ಲ. ಮನುಷ್ಯ ಮನುಷ್ಯನ ಸಹಜ ಪ್ರೀತಿಯನ್ನು ಸಹಜವಾಗಿಯೇ ಕೆತ್ತಿದ ಗುಸ್ತಾವ್ ಗೆ ಒಂದು ಸಲಾಂ.

ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಬ್ರಹತ್ ಫೌಂಟೆನ್ (ಕಾರಂಜಿ). ಸುಮಾರು 41 ವರ್ಷಗಳೇ ಬೇಕಾಯಿತಂತೆ ಇದನ್ನು ನಿರ್ಮಿಸಲು. ಸಾವಿನ ನಂತರ ಹೊಸ ಜೀವನವಿದೆ. ಬದುಕು ಕೇವಲ ನಶ್ವರವಲ್ಲ. ಅದೊಂದು ಶಾಶ್ವತ. ಸಾವಿನ ನಂತರದ ಬದುಕಿಗೆ ಹೊಸ ಮಾರ್ಗ ಎಂಬ ಸಂಕೇತ ಇಲ್ಲಿಯ ಕಾರಂಜಿ ಯ ಒಳಗೆ ಇರುವ ಶಿಲ್ಪಗಳಲ್ಲಿ ಇವೆ. ''ಸಾವು ಹೊಸ ಜೀವಕ್ಕೆ ನಾಂದಿ'' ಎನ್ನುವ ಗುಸ್ತಾವ್ ನ ಕಲ್ಪನೆಗೆ ಮನಸಲ್ಲೇ ತಲೆದೂಗಿದೆ. ಕಾರಂಜಿಯ ನೀರಿನ ಅಲೆಗಳನ್ನು ಫೋಟೋದಲ್ಲಿ ಸೆರೆ ಹಿಡಿಯುವ ಪ್ರಯತ್ನವೂ ಇಲ್ಲಿ ನಮ್ಮಿಂದ ನಡೆಯಿತು. ನೀರ ಮೇಲೆ ಕುಳಿತ ಹಕ್ಕಿ ಇತಿಹಾಸಕ್ಕೆ ಕಳಶವಿಟ್ಟಂತೆ ತೋರಿತು. 





ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಸಿಗುವುದೇ ಇಲ್ಲಿನ ಉದ್ಯಾನವನದ ಬಹುಮುಖ್ಯ ಶಿಲ್ಪ ''ಮೊನೋಲಿತ್'' . ಜೀವನ ಚಕ್ರ (The Circle of Life) ವನ್ನು ಬಿಂಬಿಸುವ ಚಿತ್ರ ಎಂಥಹ ನಿರ್ಭಾವುಕನಲ್ಲೂ ಭಾವನೆಗಳ ಅಲೆ ಎಬ್ಬಿಸುತ್ತದೆ. ಹಲವಾರು ಶಿಲ್ಪಗಳು ಒಂದರ ಮೇಲೆ ಒಂದು ಬಿದ್ದು ಕೊಂಡಂತೆ ಭಾಸವಾಗುವ ಮೊನೋಲಿತ್ ಗುಸ್ತಾವ್ ನ ಶಿಲ್ಪಕಲೆಗೆ ಸಾಕ್ಷಿಯೂ ಹೌದು. ಗ್ರೀಕ್ ಪದವಾದ ಮೊನೋಲಿಥಸ್ ನಿಂದ ಬಂದ ಮೊನೋಲಿತ್ ನ ನಿಜವಾದ ಅರ್ಥ ''ಒಂದೇ ಕಲ್ಲು'' ಎಂದು. ಶಿಲ್ಪ ನೋಡಿದರೆ ಹಾಗೆಂದು ಅನ್ನಿಸುವುದಿಲ್ಲ. ಹಲವಾರು ಕಲ್ಲುಗಳನ್ನು ಕೆತ್ತಿ ನಿಲ್ಲಿದಂತೆ ಗೋಚರಿಸುತ್ತದೆ.




 ಇದನ್ನು ಒಂದೇ ಕಲ್ಲಿನಲ್ಲಿ ನಿರ್ಮಿಸಿದ ಗುಸ್ತಾವ್ ನ ಚಾಕ ಚಕ್ಯತೆ ಯಾವ ಜಕಣಾಚಾರಿಗೂ ಕಡಿಮೆ ಇರಲಿಲ್ಲ ಎಂದು ಒಮ್ಮೆ ಅನ್ನಿಸದೆ ಇರದು. ಸುಮಾರು 14 ಮೀಟರ್ ಗಳಷ್ಟು ಎತ್ತರವಿರುವ ಮೊನೋಲಿತ್ 121 ಮನುಷ್ಯರ ಆಕ್ರತಿಯನ್ನು ಹೊಂದಿದೆ. ಪ್ರತಿ ಆಕ್ರತಿಯೂ ಆಕಾಶದ ಕಡೆ ಚಲಿಸುತ್ತಿರುವಂತೆ ಗೋಚರಿಸುತ್ತದೆ. 

ಇದರ ಬಗ್ಗೆ ಸ್ಥಳೀಯರಲ್ಲಿ ಕೇಳಿದಾಗ '' ಮನುಷ್ಯನ ಆಸೆಗಳು ಅಧ್ಯಾತ್ಮದ ಕಡೆಗೆ, ಭಗವಂತನ ಕಡೆಗೆ, ಅಲೌಕಿಕ ದ ಕಡೆಗೆ ಸಾಗುವಂತಿರಬೇಕು '' ಎಂಬುದೇ ಅದರ ಮೂಲ ಮಂತ್ರ ಎಂದರು.

 ಪುನಃ ಅವರಲ್ಲಿ ಕೇಳಿದೆ, ''ಅದೇನೋ ಸರಿ, ಆದರೆ ಮನುಷ್ಯರು ಒಬ್ಬರಿಗೊಬ್ಬರು ಅಂಟಿ ಕೊಂಡಿದ್ದು ಯಾಕೆ? '' 


ಅವರಿಂದ ಉತ್ತರ ''ಮನುಷ್ಯ ಸದಾ ಜೊತೆಯಾಗಿರಬೇಕು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ, ಕಷ್ಟ ಸುಖ ಹಂಚಿಕೊಳ್ಳುತ್ತ ಅಲೌಕಿಕದ  ಕಡೆಗೆ ಹೆಜ್ಜೆ ಹಾಕಬೇಕು, ನಮ್ಮ ನಮ್ಮಲ್ಲೇ ಕಚ್ಚಾಡಿ ಕೊಳ್ಳುತ್ತಾ, ಇನ್ನೊಬ್ಬರ ಬಗೆಗೆ ಅಸೂಯೆ ಪಡುತ್ತ ಬದುಕುವುದು ಮಾನವೀಯ ಬದುಕಲ್ಲ ಎಂಬುದೇ ಅದರ ಸಂಕೇತ'' ಎಂದರು. 






ಅಷ್ಟು ವಿವರಣೆ ನನಗೆ ಸಾಕಾಗಿತ್ತು. ಎಂಥಹ ಅದ್ಭುತ ಕಲ್ಪನೆ, ಶತ ಮಾನಗಳು ಕಳೆಯುತ್ತಿದ್ದರೂ ನಮ್ಮ ಮೂಲ ಬುದ್ದಿ ಬದಲಾಗುತ್ತಿಲ್ಲ. ಸದಾ ಇನ್ನೊಬ್ಬರ ಬಗೆಗೆ ಮಾತಾಡಿಕೊಳ್ಳುತ್ತ, ಇನ್ನೊಬ್ಬನ ತಪ್ಪನ್ನೆ ದೊಡ್ಡದು ಮಾಡುತ್ತಾ, ನಮ್ಮ ಮನೆಯ ಮುಂದಿರುವ ಆನೆಯ ಬಗ್ಗೆ ಚಿಂತಿಸದೆ, ನೆರೆಮನೆಯವನ ಮುಂದಿರುವ ಇರುವೆಯನ್ನೇ ದೊಡ್ಡ ವಿಷಯ ಮಾಡುವ ನಮ್ಮ ಭಾವನೆಗಳು ಬದಲಾಗುವುದು ಎಂದು? ಎಂಬ ಚಿಂತೆ ಕೊರೆಯಲಾರಂಬಿಸಿತು.









ಉದ್ಯಾನವನ ತುತ್ತ ತುದಿಗೆ ''Wheel of Life'' ಎಂಬ ಪ್ರತಿಮೆಯಿದ್ದು ಬದುಕಿನ ಚಕ್ರಕ್ಕೆ ಕನ್ನಡಿಯಂತಿದೆ. ಇದನ್ನೆಲ್ಲಾ ನೋಡುತ್ತಾ ನೋಡುತ್ತಾ ಕೆಲವು ಕೀಟಲೆಗಳನ್ನು ಮಾಡುತ್ತಾ ಇರುವಾಗಲೇ ಸಮಯ ಕಳೆದು ಹೋಯಿತು. ಅಲ್ಲಿನ ಕಲಾಕ್ರತಿಯೊಂದಿಗೆ ವಿವಿದ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡು ನೆನಪಿನ ಬುತ್ತಿಯಲ್ಲಿ ಎಲ್ಲವನ್ನೂ ತುಂಬಿಕೊಂಡು ಗುಸ್ತಾವ್ ನ ಪ್ರತಿಭೆಗೆ ವಂದಿಸುತ್ತಾ ಹೋಟೆಲ್ ಕಡೆ ಹೆಜ್ಜೆ ಹಾಕಿದೆವು.



ಮುಂದಿನ ವಾರ ನಾರ್ವೆ ಯ ರಮಣೀಯ ಸ್ಥಳ ಗಳಲ್ಲಿ ಒಂದಾದ ''ಫ್ಲಾಂ'' ''Flam'' ಬಗ್ಗೆ ಹೇಳುತ್ತೇನೆ. ನನ್ನ ಬದುಕಿನಲ್ಲಿಯೇ ನೋಡದ  ಅತ್ಯಂತ ಸುಂದರ ವರ್ಣನೆಗೂ ಸಿಲುಕದ ರಮಣೀಯ ಸ್ಥಳವದು. ಅಲ್ಲಿನ ಬೆಟ್ಟ ಗುಡ್ಡಗಳು, ಸುಂದರ ನದಿ, ಮನಸಿನಲ್ಲಿ ತುಂಬಿದೆ. ಅದನ್ನೆಲ್ಲ ಮುಂದಿನ ವಾರ ಹಂಚಿ ಕೊಳ್ಳುತ್ತೇನೆ.

                                           ಕಾಯುತ್ತಿರಲ್ಲ.
                                          ನಿಮ್ಮವ ಗುರು