Sunday, July 24, 2011

ಮರೆತೆನೆಂದರ ಮರೆಯಲಿ ಹ್ಯಾಂಗ್ ..ಬದುಕಿನಲ್ಲಿ ಅಂದಿನಿಂದ ಇಂದಿನವರೆಗೂ ನಡೆದ ನಡೆಸಿದ ಜೀವನದ ಒಂದೊಂದು ರೀತಿಯೂ ನೆನಪಿನಂಗಳದಲ್ಲಿ ಮರೆಯದ ನೆನಪುಗಳನ್ನು ಹಾಗೆಯೇ ಉಳಿಸಿವೆ. ಬದುಕೇ ಹಾಗೆ... ಅದು ಕೇವಲ ಕೊಳದಲ್ಲಿ ಇರುವ ನೀರಲ್ಲ, ಹರಿಯುವ ಸಾಗರ, ಅದರಲ್ಲಿ ಬಂದು ಸೇರಿದ ನದಿಗಳೆಷ್ಟೋ, ಸಾಗರ ಧನ್ಯವಾಗುವುದೇ ಹಲವಾರು ನದಿಗಳ ನೀರಿನ ಸೆಳೆತದಿಂದ. ಹಾಗೆಯೇ ನಮ್ಮ ಬದುಕು ಕೂಡಾ, ಅಂದಿನಿಂದ ಇಂದಿನ ತನಕ ಪ್ರತಿ ಹೆಜ್ಜೆಯಲ್ಲಿಯೂ ನಮ್ಮನ್ನು ಸಾಗರದಂತೆ ಮಾಡಲು ಶ್ರಮಿಸಿದ ಅದೆಷ್ಟೋ ನದಿಗಳಿವೆ. ಅವರ ಶ್ರಮ, ಪ್ರೀತಿ, ಆಶೀರ್ವಾದ ಸದಾ ನಮ್ಮನ್ನು ಹರಸುತ್ತಿರುತ್ತದೆ.

ನೆನಪುಗಳ ಬುತ್ತಿ ಬಿಚ್ಚಿದಂತೆ ಒಂದೊಂದೇ ನಮ್ಮ ಮನಸ್ಸಿಗೆ ಆಪ್ತವೆನಿಸಲು ಆರಂಬವಾಗುತ್ತವೆ. ತಾಯಿಯ ಮಡಿಲ ಪ್ರೀತಿಯ ಧಾರೆ, ತಂದೆಯ ಶಿಸ್ತಿನ ಒಲವಿನ ಧಾರೆ, ಅಕ್ಕ ಅಣ್ಣರ ಪ್ರೀತಿ, ತಮ್ಮ ತಂಗಿಯ ತುಂಟತನ, ಮುದ್ದಿನ ಅಜ್ಜ ಅಜ್ಜಿಯ ತುಸು ಹೆಚ್ಚೇ ಎನಿಸುವ ಮುದ್ದು, ನಮ್ಮನ್ನು ಸಾಕಿ ಸಲಹುತ್ತ ಇರುವಾಗ ಅವುಗಳನ್ನ ಮರೆಯಲಿ ಹ್ಯಾಂಗ್.....

ಹಾಗೆಯೇ ಶಾಲೆಗೆ ಬಂದಾಗ ಗುರುಗಳ ತಿದ್ದುವಿಕೆ, ಬದುಕಿಗೆ ನಮ್ಮನ್ನು ಸಜ್ಜುಗೊಳಿಸುವಿಕೆ, ನಂತರ ಶಿಕ್ಷಣದ ಒಂದೊಂದೇ ಘಟ್ಟ ಏರಿದಂತೆ ಹೊಸ ಅನುಭವಗಳು, ನೋವು ನಲಿವುಗಳು, ಸ್ಪರ್ಧಾತ್ಮಕ ಜಗತ್ತು ಎಲ್ಲವೂ ನೆನಪಿಗೆ ಬಂದಂತೆ ಮರೆಯಲಿ ಹ್ಯಾಂಗ್...

ಯೇ ಕಹಾನಿ ಸ್ವೀಡನ್ನಿನ ದೇಶದ್ದು. ಮಲೇಶಿಯಾ ಕ್ಕೆ ಬಂದು ಒಂದು ತಿಂಗಳು ಕಳೆಯುತ್ತಿವೆ. ಬೆಚ್ಚಗಿನ ಚಾದರ ಹೊದ್ದು ಮಲಗುವ ದೇಶದಿಂದ ಸುಡುಬಿಸಿಲಿನ ದೇಶಕ್ಕೆ ಬಂದಿದ್ದೇನೆ. ಇಲ್ಲಿ ಚಾದರ ತೆಗೆದಂತೆ ಅಲ್ಲಿನ ಬದುಕಿನ ಕ್ಷಣಗಳು ಚಾದರ ತೆಗೆದು ಒಂದೊಂದಾಗಿ ಸ್ಮ್ರತಿ ಪಟಲ ದಲ್ಲಿ ಸುಳಿಯುತ್ತಿವೆ. ಯಾವುದೇ ದೇಶದ ಬಗೆಗೆ ಮಾತನಾಡುವ ಮೊದಲು ಆ ದೇಶದ ಜೀವನ, ಅಲ್ಲಿನ ಜನರು, ಅವರ ದೈನಂದಿನ ಕ್ಷಣಗಳು, ಇದನ್ನು ಅಭ್ಯಸಿಸಬೇಕು ಎನ್ನುವ ಜಾಯಮಾನ ನನ್ನದು. ಎಷ್ಟೋ ಸಲ ಭಾರತಕ್ಕೆ ಹೋದಾಗ ಅನೇಕರು

 ''ನಿನಗೆ ದೇಶದ ಮೇಲೆ ಪ್ರೀತಿ ಇಲ್ಲ, ದೇಶಾಭಿಮಾನ ವಿಲ್ಲ. ವಿದೇಶದ ಪ್ರೀತಿ,
ಹಣ ನಿನ್ನ ಮನಸ್ಸನ್ನು ಭಾರತಕ್ಕೆ ಬರದಂತೆ ಮಾಡಿದೆ ''

ಎಂದು ಹೇಳುತ್ತಾರೆ. ಆದರೆ ಕಳೆದು 5 ವರ್ಷಗಳಿಂದ ವಿದೇಶದಲ್ಲಿ ಬದುಕಿದ ಮೇಲೆ ನಮ್ಮ ದೇಶದ ಮೇಲಿನ ಪ್ರೀತಿ ಮೊದಲಿಗಿಂತ ನೂರು ಪಟ್ಟು ಹೆಚ್ಚಿದೆ. ಯಾವುದೇ ದೇಶದ ಮೇಲಿನ ಪ್ರೀತಿ ಹೆಚ್ಚಬೇಕಾದರೆ ಆ ದೇಶ ಬಿಟ್ಟು ಹೊರ ಬನ್ನಿ, ಯಾವುದೇ ವ್ಯಕ್ತಿಯ ಮಹತ್ವ ಅರಿಯಬೇಕಾದರೆ ಆ ವ್ಯಕ್ತಿಯನ್ನು ಬಿಟ್ಟು ಸ್ವಲ್ಪ ದಿನ ಇರಿ, ಆಗಲೇ ನಿಜವಾದ ಪ್ರೀತಿ ತಿಳಿಯುತ್ತದೆ. ಸುಮ್ಮನೆ ಉಪದೇಶ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬ ಸತ್ಯ ನಮಗೆ ತಿಳಿಯಬೇಕಿದೆ ಅಷ್ಟೇ.

3 ವರ್ಷಗಳ ಹಿಂದೆ ಬೇಸಿಗೆಯ ಕಿರಣಗಳು ನಿಧಾನವಾಗಿ ಮರೆಯಾಗುತ್ತಿರುವ, ಗಿಡಗಳ ಎಲೆಗಳು ತಮ್ಮ ವಿಧ ವಿಧದ ಬಣ್ಣವನ್ನು ಕಳಚಿಕೊಳ್ಳುವ ಚಳಿಗಾಲದ ಆರಂಬದ ಕಾಲ. ನಾವು ಸ್ವೀಡನ್ನಿನ ಗೊತ್ಹೆಂಬುರ್ಗ್ ಎಂಬ ಪುಟ್ಟ, ಚೊಕ್ಕ, ಚಿಕ್ಕ ನಗರದ ವಿಮಾನ ನಿಲ್ದಾಣದಲ್ಲಿ ಇಳಿದೆವು. ಆಗಲೇ ನನ್ನ ಬಾಸ್ ಪ್ರೊಫ್. ಲಾಚೆಜರ್ ಕೊಮಿತೊವ್ ನಮ್ಮನ್ನು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮೊದಲ ಬಾರಿಗೆ ಯೂರೋಪಿನ ಸಭ್ಯತೆಯ ದರ್ಶನ ಲಭಿಸಿದ್ದು ಅಲ್ಲಿ. ನಮ್ಮ ದೇಶದಲ್ಲಿ  ಎಂದಾದರೂ ತಮ್ಮ ಕೈ ಕೆಳಗೆ ಕೆಲಸ ಮಾಡುವ ವ್ಯಕ್ತಿಯನ್ನು ಕರೆದುಕೊಂಡು ಹೋಗಲು ಬಾಸ್ ಗಳು ಬಂದ ಉದಾಹರಣೆ ಬಹಳಷ್ಟು ಸಿಗಲು ಸಾದ್ಯವೇ? ನನಗಂತೂ ಇಲ್ಲ ಎಂದೇ ಅನಿಸುತ್ತದೆ. ಅಂದು ಅವರು ತಮ್ಮೆಲ್ಲ ಕೆಲಸ ಕಾರ್ಯ ಬಿಟ್ಟು ನನ್ನ ಹಾಗೂ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದಿದ್ದರು. ''ಆದರಾತಿಥ್ಯ ದ ಒಂದು ಅಮೋಘ ಉದಾಹರಣೆ'' ಎಂದೆನ್ನಬಹುದಲ್ಲ...

ಸ್ವೀಡನ್ನಿನ ನೆಲದಲ್ಲಿ ತದನಂತರದ 3 ವರ್ಷದಲ್ಲಿ ಪಡೆದ ಅನುಭವಗಳು, ಅಲ್ಲಿನ ಜನರ ಜೀವನ ಶೈಲಿ, ಅವರ ಸರಳ ಸಭ್ಯತೆ ಗಳ ಅನುಭವ, ಇವುಗಳನ್ನೆಲ್ಲ ಒಂದೇ ದಿನ ಹೇಳಿದರೆ ಸಾಕಾಗಲಿಕ್ಕಿಲ್ಲ.

ಅಲ್ಲಿಯತನಕ ಇದನ್ನೆಲ್ಲಾ ''ಮರೆತೆನೆಂದರ ಮರೆಯಲಿ ಹ್ಯಾಂಗ್''

ಮತ್ತೆ ಮುಂದಿನ ವಾರ ಸಿಗುತ್ತೇನೆ, ಸ್ವೀಡನ್ನಿಗರ ಬದುಕಿನ ಅನಾವರಣಗೊಳಿಸಲು.

ಸ್ನೇಹಿತರೆ, ಛಾಯಾ ಕನ್ನಡಿ ಬ್ಲಾಗ್ ನ ಶಿವೂ ಸರ್ ಹಾಗೂ ''ನಿಮ್ಮೊಳಗೊಬ್ಬ'' ಬ್ಲಾಗ್ ನ ಬಾಲು ಸರ್  ಅವರು ಕಳೆದ ಬಾರಿ ಸಿಕ್ಕಾಗ ಸ್ವೀಡನ್ನಿನ ಬಗೆಗೆ ಬರೆಯಿರು ಹೇಳಿದ್ದರು. ಆದರೆ ಬರೆಯಲು ಅದ್ಯಾಕೋ ಮನಸ್ಸು ಬರುತ್ತಿರಲಿಲ್ಲ. ಕಾರಣ ಅಲ್ಲಿನ ಸೊಗಸನ್ನು ಅನುಭವಿಸುತ್ತ ಕಾಲ ಕಳೆಯುತ್ತಾ ಅದರ ಬಗೆಗೆ ಬರೆಯಲು ಸಾದ್ಯವಾಗಲಿಲ್ಲವೇನೋ. ಆದರೆ ಮಲೇಶಿಯಾ ದಲ್ಲಿ ಕುಳಿತು ಅಲ್ಲಿನ ದೇಶದ ಬಗೆಗೆ ಬರೆಯಬೇಕೆಂಬ ಆಸೆ ಉತ್ಕಟವಾಗಿ ಮೂಡುತ್ತಿದೆ. ಅದಕ್ಕೆ ಈ ಲೇಖನ.

Friday, July 22, 2011

ಹುಟ್ಟಿದ ಹಬ್ಬದ ಶುಭಾಶಯಗಳು

ಇಂದು ಪ್ರೀತಿಯ ಮಡದಿಯ ಜನ್ಮ ದಿನ. ಕಳೆದ ಕೆಲವು ವರ್ಷಗಳಿಂದ ಅವಳ ಜನ್ಮದಿನವನ್ನು ಒಟ್ಟಿಗೆ ಆಚರಿಸುತ್ತಿದ್ದ ನನಗೆ ಈ ಸಲ ಮಾತ್ರ ಅವಳಿಂದ ದೂರವಾಗಿ ಮಲೇಶಿಯಾ ದಲ್ಲಿ ಇರುವ ಸಂದರ್ಭ ಬಂದೊದಗಿದೆ. ಅವಳ ನೆನಪು ಇಂದು ಕಾಡುತ್ತಿದೆ. ಜನ್ಮ ದಿನದ ಸಂದರ್ಭದಲ್ಲಿ ಹಾರ್ದಿಕ ಶುಭ ಹಾರೈಕೆಗಳು. ಜನ್ಮ ದಿನದ ಸಂಧರ್ಬದಲ್ಲಿ ಈ ಕವನ ಅವಳಿಗಾಗಿ...
ನನ್ನ ಒಲವೆ, ನನ್ನ ಬಲವೆ, ನನ್ನ ಪ್ರೇಮವೇ
ಮನವ ಗೆದ್ದ, ತನುವ ಗೆದ್ದ ನನ್ನ ಪ್ರೀತಿಯೇ
ಕಣ ಕಣದಲೂ ಅಣು ಅಣುವಲೂ ನಿನ್ನ ಕಾಣುವೆ
ಉಸಿರಿನ ಕೊನೆ ಉಸಿರಲ್ಲೂ ನಗುವ ನೀಡುವೆ

ಜನ್ಮ ದಿನದ ಕ್ಷಣವು ಇದುವು ಹರಸಿ ನಿನ್ನನು
ಇಂದು ನಿನ್ನ ನೆನಪು ಕಾಡುತಿಹುದು ಎನ್ನನು
ನೂರು ಕಾಲ ಬಾಳು ನೀನು, ಹರಸುತಿಹೆನು ನಾ
ಸದಾ ಸುಖವು ನಿನಗೆ ಸಿಗಲಿ, ಬೇಡುತಿರುವೆ ನಾ

ಜನ್ಮ ದಿನದಿ ನಿನ್ನ ಬಿಟ್ಟು ದೂರ ಇರುವೆನು
ಕ್ಷಮಿಸು ಎನ್ನ , ಬೇಗ ಬರುವೆ, ನೋಡ್ವೆ ನಿನ್ನನು
ಕಾಲವೆಂಬ ಪರಿಧಿಯಲ್ಲಿ, ಕಣವು ಎಲ್ಲರೂ
ಮರೆತ ಕ್ಷಣವ, ಬೆರೆತ ನಗುವ, ನೆನಪ ಮಾಡ್ವರು

ವರುಷ ಕಳೆದು ವರುಷ ಬಂತು ನಿನ್ನ ಬದುಕಲಿ
ಹರುಷವೆಂದೂ ಮರೆಯದಿರಲಿ ಬಾಳ ರಥದಲಿ
ಜನ್ಮದಿನದ ಸಮಯದಲ್ಲಿ ಎನ್ನ ಹರಕೆಯು
ನೂರು ಕಾಲ ಬಾಳು ನೀನು, ಭವ್ಯ ಪಥದಲಿ