Tuesday, January 20, 2009

ಚಿಂತಿಸದಿರು ಮನವೆ....

ಚಿಂತಿಸದಿರು ಮನವೆ....

- ಗುರು ಬಬ್ಬಿಗದ್ದೆ

ಮನಸ್ಸು ಮಂಗನಂತೆ, ಅದನ್ನು ಹಿಡಿದಿಡುವುದು ಪ್ರಯಾಸದ ಕೆಲಸ.ಅದು ಆದಿಯಿಂದ ಅಂತ್ಯದವರೆಗೆ ನಮ್ಮೊಂದಿಗೇ ಇದ್ದು ನಮಗೆ ಅರಿವಿಗೆ ಬಾರದಂತೆ ತನ್ನ ಕಾರ್ಯವನ್ನು ಪೂರೈಸುತ್ತದೆ. ಇಂಥಹ ಮನಸ್ಸು ನಮ್ಮನ್ನು ಸದಾ ಚಿಂತನೆಗೆ ಒಳಪಡಿಸಿ ಕೊಲ್ಲುತ್ತಲೇ ಇರುತ್ತದೆ. ಚಿಂತಿಸುತ್ತಿದ್ದರೆ ನಾವು ಚಿತೆಯಾಗಿಬಿಡುತ್ತೇವೆ. ಕಾಲದೊಂದಿಗೆ ಮುಂದಡಿ ಇಡುತ್ತಾ, ನಗುಮೊಗದಿ ಬಾಳಬೇಕೆಂಬುದೇ ಕವಿಯ ಆಶಯ ಮಾತ್ರವಲ್ಲ ಕವನದ ವಿಷಯವೂ ಹೌದು. ನಿಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳಿಗೆ ಸದಾ ಸ್ವಾಗತ.ನನ್ನ ಈ-ಮೇಲ್ ವಿಳಾಸ: murthyhedge@gmail.com

ಚಿಂತಿಸದಿರು ಮನವೆ, ಚಿತೆಯಾಗುವೆ
ಚಿಂತನೆ ಮಾಡುತಲಿ ಚರಿತೆಯಾಗುವೆ
ಚಿತ್ರದಿಂದ ನೀ ಪತ್ರವಾದೆವಿ
ಚಿತ್ರದಲ್ಲಿಯೇ ಸಚಿತ್ರವಾದೆ
ಕಣ್ಣಾದೆ, ಕಿವಿಯಾದೆ, ಕನಸುಗಳ ಜೊತೆಯಾದೆ
ನನ್ನೆದೆಯ ಭಾವನೆಗೆ, ನನ್ನೊಲವೇ ನೀನಾದೆ ೧

ಚಿನ್ನದಂತ ನೀ ನಯನವಾದೆ
ಚಂಚಲ ಮನಸಿಗೆ ಸತಿಯಾದೆ
ಒಗಟಾದೆ, ನೆರಳಾದೆ, ಆಸೆಗಳ ಸೆಳವಾದೆ
ಆಶಿಸುವ ಆಸರೆಗೆ, ಕೈ ಹಿಡಿದ ಪತಿಯಾದೆ ೨

ಚೆಲ್ಲಿದ ಮಲ್ಲಿಗೆ ಹೂವಾದೆ
ಸಾಧಿಸುವ ಗುರಿಗೆ ಛಲವಾದೆ
ಹಿತವಾದೆ, ಹಸನಾದೆ,
ಹದಿಹರೆಯಕೆ ಬೆಳಕಾದೆ
ನನ್ನಯ ಸುಂದರ ಕನಸಿನಲಿ,
ಜೀವಕೆ ಜೀವವೇ ನೀನಾದೆ ೩

ಚರಮಗೀತೆಗೆ ನುಡಿಯಾದೆ
ಚರಿತ್ರೆಯ ಪುಟದಲಿ ಹೆಸರಾದೆ
ಆದಿ ಅಂತ್ಯಗಳ ಕರ್ತನು ಆದೆ
ಸರ್ವವೂ ನೀನಾದೆ, ಚಿಂತಿಸದಿರು ಮನವೆ ೪