Monday, February 9, 2009

ಪ್ರೇಮಿಗಳ ದಿನಕ್ಕೆ ...

ಪ್ರೇಮಿಗಳ ದಿನಕ್ಕೆ ಒಂದಷ್ಟು ಉಪ್ಪು, ಒಂದಷ್ಟು ಹುಳಿ, ಒಂದಷ್ಟು ಸಿಹಿ...


- ಗುರು ಬಬ್ಬಿಗದ್ದೆ



ಮನುಷ್ಯ ಯಾವತ್ತೂ ಚಪಲ ಚೆನ್ನಿಗರಾಯ. ಕೆಲವರಿಗೆ ತಿನ್ನುವ ಚಪಲ, ಇನ್ನು ಹಲವರಿಗೆ ಕಲಿಯುವ ಚಪಲ, ಕೆಲವರಿಗೆ ಆಡುವ ಚಪಲ, ಹಲವರಿಗೆ ಸಮಾಜ ಸೇವೆಯ ಚಪಲ, ಅಂತೂ ಒಂದಿಲ್ಲೊಂದು ಚಪಲ ಎಲ್ಲರನ್ನು ತುಂಬಿರುವುದರಲ್ಲಿ ಸಂಶಯವೇ ಇಲ್ಲ. ಪ್ರತಿದಿನವೂ ಭಾನುವಾರವೇ ಯಾಕಲ್ಲ? ಎನ್ನುವುದರಿಂದ ಹಿಡಿದು ಸುಮ್ಮನೆ ಮನೆಯಲ್ಲಿ ಕುಳಿತರೆ ಸಂಬಳ ಸಿಗುವಂತಾಗಿದ್ದರೆ ಎನ್ನುವವರೆಗೆ ಮಾನವನ ವಿವೇಚನಾ ಶೈಲಿ ಬೆಳೆದಿದೆ. ಪ್ರತಿದಿನ ಒಂದಿಲ್ಲೊಂದು ನೆವ ಹುಡುಕಿ ಮನರಂಜನೆ ಗಾಗಿ ಕಾಲ ಹರಣ ಮಾಡುವುದು ನಮ್ಮ ಪೂರ್ವಜರಿಂದಲೂ ಬಂದ ಬುದ್ದಿ. ಒಂದು ದಿನ ಆ ಹಬ್ಬ, ಇನ್ನೊಂದು ದಿನ ಮತ್ತೊಂದು ಹಬ್ಬ. ಒಮ್ಮೆ ಅಮ್ಮಂದಿರ ದಿನ, ಇನ್ನೊಮ್ಮೆ ಅಪ್ಪಂದಿರ ದಿನ, ಏಡ್ಸ್ ದಿನ, ಹುಟ್ಟಿದ ದಿನ, ಸತ್ತ ದಿನ ಅಬ್ಬಬ್ಬ ಒಂದೇ ಎರಡೇ ಒಟ್ಟಿನಲ್ಲಿ ಸಮಯ ಕಳೆಯಲು ಒಂದು ನೆವ "ಕಳ್ಳನಿಗೊಂದು ಪಿಳ್ಳೆ ನೆವ ಅಂದ ಹಾಗೆ".


ಅಂತೆಯೇ ಹುಟ್ಟಿಕೊಂಡದ್ದು ಪ್ರೇಮಿಗಳ ದಿನ. ಪ್ರತಿವರ್ಷ ಫೆಬ್ರವರಿ ೧೪ ರಂದು ಇದರ ವಿದ್ಯುಕ್ತ ಆಚರಣೆ. ವರ್ಷವಿಡಿ ಕಳ್ಳತನದಿಂದ ಆಚರಿಸಿದ ಹಬ್ಬಕ್ಕೆ ಒಂದು ದಿನ ರಾಜ ರೋಷ ದಿಂದ ಮೆರೆಯುವ ಸಂಭ್ರಮ. ಪ್ರೇಮಿಗಳ ದಿನದ ಬಗ್ಗೆ ಹಲವಾರು ಕಥೆಗಳಿವೆ. ೩ ನೇ ಶತಮಾನದಲ್ಲಿ ಜೀವಿಸಿದ್ದ ಸೆಂಟ್ ವೆಲೆಂಟಿನ ನೆನಪಿಗಾಗಿ ಇದನ್ನು ಆಚರಿಸಲಾಗುತ್ತಿದೆ ಎಂದು ಒಂದು ಕಡೆ ಹೇಳಿದರೆ ಸೆಂಟ್ ವೆಲೆಂಟಿನ ತನ್ನ ಪ್ರೇಯಸಿಯಾದ ಜೈಲಿನ ಅಧಿಕಾರಿಯ ಮಗಳಿಗೆ ಬರೆದ ಪತ್ರ ವೆಂದೂ ಸಂಬೋದಿಸಲಾಗುತ್ತಿದೆ. ಕಥೆ ಏನೇ ಇರಲಿ ಪ್ರೆಮಿಗಳಿಗಂತೂ ಇದೊಂದು ಸುಯೋಗವೇ ಸರಿ.


ಯಾವುದೇ ಹಬ್ಬ ಇರಲಿ, ಆಚರಣೆ ಇರಲಿ ಅದು ತನ್ನ ಪರಿಮಿತಿಯಲ್ಲಿದ್ದರೆ ಮಾತ್ರ ಅದಕೊಂದು ಅರ್ಥ ಹಾಗೂ ಗೌರವ. ನಮ್ಮ ಪ್ರಾಚೀನ ಕಾಲದ ಅದೆಷ್ಟೋ ಹಬ್ಬ ಹರಿದಿನಗಳು ನಶಿಸಿ ಹೋಗಿದ್ದೂ ಇದೆ ಕಾರಣದಿಂದ. ಮನುಷ್ಯ ತಾನೂ ಬೆಳೆದಂತೆಲ್ಲ ವಿನಾಶಕಾರಿಯಾಗುತ್ತ ಹೋದ. ಎಲ್ಲ ಹಬ್ಬ ಹರಿದಿನಗಳ ಬಗೆಗೆ ಪ್ರಶ್ನಿಸತೊಡಗಿದ. ಅದರಲ್ಲಿ ರಸವಿಲ್ಲ ಎಂದು ತಾನೆ ತೀರ್ಮಾನಿಸಿದ. ಅದರ ಫಲವೇ ನಾವು ಕಾಣುತ್ತಿರುವ ಸಂಸ್ಕ್ರತಿಯ ಅಧ:ಪತನ.


ಪ್ರೇಮಿಗಳ ದಿನ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಅಂದು ಅದಕ್ಕೊಂದು ವಿಶಾಲ ಅರ್ಥವಿತ್ತು. ಆದರೆ ಇಂದು ೧೪ ನೆ ದಿನಾಂಕಕ್ಕಾಗಿ ಕಾಯುತ್ತಾರೆ. ಆ ದಿನ ಏನೇ ಹೇಳಿದರೂ ಕ್ಷಮೆ ಇದೆ ಎಂಬ ಧೈರ್ಯ ಬೇರೆ. ಇಂದು ಫೆಬ್ರವರಿ ೧೪ ಅಂದರೆ ಕುಡಿತ ಮೋಜುಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಇನ್ಯಾವ ಅರ್ಥವೂ ಅದರಲ್ಲಿ ಉಳಿದಿಲ್ಲ. ತನಗಿಷ್ಟವಾದವನು ಅಥವಾ ಅವಳಿಗೆ ತನ್ನ ಭಾವನೆಗಳಿಗನುಸಾರವಾಗಿ ಹೂವನ್ನು ಕೊಟ್ಟು ಆ ದಿನ ಅವನೊಡನೆ ಪಾರ್ಟಿ ಮಾಡಿ ಮರುದಿನ ಅವನಿಗೆ ಕೈಯನ್ನು ಕೊಟ್ಟು ಮರಕೋತಿ ಆಟ ಆಡುವ ಹುಡುಗ ಹುಡುಗಿಯರಿಗೆ ಇದೊಂದು ಸುಯೋಗವೂ ಹೌದು.


ತನ್ನ ಹಳೆಯ ಪ್ರಿಯತಮನನ್ನು ನೆನಪಿಸಿಕೊಂಡು ಕೊರಗುವ ಪ್ರಿಯತಮೆಗೆ ಹೊಸ ಪ್ರಿಯತಮನನ್ನು ಹುಡುಕಿಕೊಳ್ಳುವ ಅವಕಾಶವೂ ಹೌದು ಪ್ರೇಮಿಗಳ ದಿನ. ವಿದ್ಯೆಯನ್ನು ಕಲಿಸುವ ವಿದ್ಯಾಲಯಗಳೂ ಇಂಥಹ ಆಚರಣೆಗೆ ಆಸ್ಪದ ಕೊಡುತ್ತಿರುವುದು ಖಂಡನೀಯ. ಅದರಲ್ಲೂ ನಮ್ಮ ಕಲೆಗೆ ಬೆಲೆ ಕೊಟ್ಟು ಆರಾಧಿಸುತ್ತಿರುವ ಪಾಶ್ಯಾತ್ಯ ದೇಶಗಳ ಮುಂದೆ ನಾವು ಸಣ್ಣವರಾಗುತ್ತಿದ್ದೇವೆ. ನಾವು ಅವರಿಂದ ಅಭಿವ್ರದ್ದಿ ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ಕಲಿಯುತ್ತಿದ್ದೇವೆ. ನಮ್ಮ ಸಂಸ್ಕ್ರತಿಯೇ ನಮಗೆ ಭೂಷಣ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರೇಮಿಗಳ ದಿನವನ್ನು ನಿಜವಾದ ಅರ್ಥದಿಂದ ಆಚರಿಸಿದರೆ ಅದೂ ಎಲ್ಲರಿಗೂ ಹರ್ಷ ನೆಮ್ಮದಿ ನೀಡುತ್ತಿದೆ. ಆದರೆ ಕೇವಲ ಒಂದು ಹುಡುಗನೋ, ಹುಡುಗಿಗೋ ಹೂವು ಕೊಟ್ಟು ಕುಡಿದು ರಾತ್ರಿಯಿಡೀ ನರ್ತಿಸುವ ಇಂಥಹ ಆಚರಣೆಗಳು ಆರೋಗ್ಯಕರ ಸಮಾಜಕ್ಕೆ ಅಪವಾದ."ನಾವೆಷ್ಟೇ ಹೇಳಿದರೂ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಜಾಯಮಾನ ನಮ್ಮದು". ನಮ್ಮ ಮಾತೆಲ್ಲ ಕೇಳಲು ಚಂದ ಆದರೆ ಆಚರಣೆಗೆ ದಂಡ. ಅದೇನೇ ಇರಲಿ ಬಿಸಿ ಹ್ರದಯಗಳ, ಹಸಿ ಮನಸುಗಳ, ಹುಸಿ ಕನಸುಗಳ , ನಸು ನಗೆಯ ಈ ಪ್ರೇಮಿಗಳ ದಿನಕ್ಕೆ ನನ್ನದೂ ಒಂದು ಸಣ್ಣ ಶುಭ ಹಾರೈಕೆ. ಮೈ ಮರೆತುಬಿಟ್ಟಿರೀ ಜೋಕೆ.

4 comments:

ಮನಸು said...

ಗುರು ರವರೆ...

ಪ್ರೇಮಿಗಳ ದಿನದ ಬಗೆ ವಿವರಿಸಿದ್ದು ಚೆನ್ನಾಗಿದೆ... ನಮ್ಮತನ ಎಲ್ಲೋ ಒಂದು ಕಡೆ ನಶಿಸುತ್ತಿದೆ... ನಮ್ಮ ಸಂಸ್ಕೃತಿಗೆ ಧಕ್ಕೆ ಬರುವಂತಾಗಿದೆ ಇಂದಿನ ಆಚರಣೆಗಳು..

ಮೂರ್ತಿ ಹೊಸಬಾಳೆ. said...

Hey you are not a bad writer.
It's too good keep rocking (writing).

Ittigecement said...

ಗುರು..

ಮಾಡುವವರು ಮಾಡಿ ಕೊಳ್ಳಲಿ..

ಸಂಸ್ಕ್ರತಿ ಬಿಡದೆ.. ಹಾಳಾಗದೆ..

ಉತ್ತಮ ಲೇಖನ..

ಅಭಿನಂದನೆಗಳು..

ತೇಜಸ್ವಿನಿ ಹೆಗಡೆ said...

ಹಿತ ಮಿತವಾದ ಲೇಖನ. ಖಂಡನೆಯನ್ನು ಕೇವಲ ತೀವ್ರವಾದ ಭಾಷೆ/ಪದಗಳ ಮೂಲಕವೇ ಮಾಡಬೇಕೆಂದಿಲ್ಲ. ಇಂತಹ ಸರಳ, ಮೃದು ಧೋರಣೆಯಲ್ಲೂ ವ್ಯಂಗವಾಗಿ ಟೀಕಿಸಬಹುದೆಂದು ನಿಮ್ಮ ಬರಹ ತೋರುತ್ತಿದೆ. ಇಷ್ಟವಾಯಿತು ಶೈಲಿ ಹಾಗೂ ನಿಮ್ಮ ಉತ್ತಮ ಯೋಚನೆ ಎರಡೂ...