Saturday, February 28, 2009
ನಗು..
- ಗುರು ಬಬ್ಬಿಗದ್ದೆ
ನಕ್ಕು ಬಿಡು ಮನದೆನ್ನೆ
ನಕ್ಕು ಬಿಡು ಒಮ್ಮೆ
ನೀನು ನಕ್ಕಾಗ ಆಗುವುದು ಸರ್ವಾಂಗಗಳಲು ಹೆಮ್ಮೆ
ನಗಲು ನಿನಗೇಕೆ ಬರ
ಇರಲು ನಗುವಿನಲಿ ಶಕ್ತಿ ಪ್ರಖರ
ಆ ನಿನ್ನ ನಗು ಬೆಂದ ಜೀವಕ್ಕೂ ತಂಪಿನ ಆಸರ
ದು:ಖವನು ಮರೆಮಾಚಿ
ಹುಸಿನಗೆಯ ನಗದಿರು
ನಿನ್ನ ನಗುವಿನಲ್ಲೇಷ್ಟೋ ದು:ಖದಲಿ ಪಾಲಿಡು
ನಕ್ಕು ನಗಿಸಲು ಹೋಗಿ
ಅಳುವುದ ಮರೆಯದಿರು
ಸಾಂತ್ವನದ ಚುಂಬನಕೆ ಸುಖ ದು:ಖ ಕಲ್ಪತರು
ಒಂದೊಮ್ಮೆ ಅಳಲು ಹೋಗಿ ನಗಲು ಬಿಟ್ಟರೆ
ಜಗತ್ತು ನಿನಗಾಗಿ ಎಂದು ಅಳದು
ನಕ್ಕು ಬಿಡು ಮನದೆನ್ನೆ ನಕ್ಕು ಬಿಡು ಒಮ್ಮೆ
Sunday, February 22, 2009
ಏನಿದು ಸಂಭ್ರಮವೋ...

ಮನಸುಗಳಾಚೆಗೆ ಮುದವನು ನೀಡುವ
ಬಾಸಿಂಗ ಕಟ್ಟಿದ ಕ್ಷಣ ಕ್ಷಣವೋ
ಪ್ರೇಮ ಮಹೋತ್ಸವವೋ ಮಿಲನ ಮಹೋತ್ಸವವೋ
ಸಂತಸದಾ ಹೊನಲೋ, ಸಖಿ ಮಿಲನ ಮಹೋತ್ಸವವೋ
ಧಾರೆಯ ಎರೆಯುವ ಕನ್ಯಾ ಪಿತರು
ಬಗೆ ಬಗೆ ಖಾದ್ಯದ ನಂಟು ರಸಮಯ
ಎಲ್ಲರೂ ಸೇರುವ ಉತ್ಸವವೋ , ಮಿಲನ ಮಹೋತ್ಸವವೋ
ವಧುವಿನ ಮಧುರ ಗಾನ ಸುಧೆ
ಏಳು ರಂಧ್ರಗಳು ಕೃಷ್ಣನ ಕೊಳಲು, ಏಳು ಹೆಜ್ಜೆಗಳಲೇನಿದೆ ತಿರುಳು
ಏಳು ಜನುಮದ ನಂಟಿದು ಕೇಳೋ, ಮಿಲನ ಮಹೋತ್ಸವವೋ
Thursday, February 19, 2009
ಜೈ ವಿಠ್ಠಲ ಹರಟೆ.....
- ಗುರು ಬಬ್ಬಿಗದ್ದೆ

Tuesday, February 17, 2009
೪೮ ರ ಹದಿನೆಂಟು..
- ಗುರು ಬಬ್ಬಿಗದ್ದೆ

ಕೇಳದಿರು ಗೆಳೆಯ, ಚೆಲುವೆಯರ ಹರೆಯ
ದಾಟದು ಹದಿನೆಂಟು, ಅವಳಿಗೆ ಆಗಿದ್ದು ನಲವತ್ತೆಂಟು
ಓ ಚೆಲುವೆ, ನಿನ್ನ ಕೂದಲೇಕೆ ಬಿಳಿಯಾಗಿದೆ
ಮನೆಯಲ್ಲಿ ಜೇನುತುಪ್ಪ ಸೋರುತಿದೆ
ಎಂದವಳ ವಾಕ್ಚಾತುರ್ಯಕೆ ಮರುಳಾದ ನನ್ನ ಗೆಳೆಯ
ಕೇಳದೆಯೆ ಹರೆಯ, ಕಟ್ಟಿದ ತಾಳಿಯ
ಮಧುಚಂದ್ರದಿ ಮೊದಲ ಬಾರಿ ನೋಡಿದ ಅವಳ ಮುಖ
ಸುಕ್ಕುಗಟ್ಟಿದ ಹಣೆ ಹಳಸಿದೆ ಚರ್ಮ
ಅವಳೆಂದಳು ಊಟಿಯ ಚಳಿ, ಬಿರಿದಿದೆ ತುಟಿ, ಒಡೆದಿದೆ ಚರ್ಮ
ನನಗಾಗದು ಚಳಿ ಗೆಳೆಯ, ಎಂದಳು ಹದಿನೆಂಟರ ಹರೆಯ
ಕೆಲಸದಿಂದ ಮನೆಗೆ ಬಂದ ಮೊದಲ ದಿನ, ಮಧುರ ಕ್ಷಣ
ಹಿಡಿದಿತ್ತು ಅವಳ ಬೆನ್ನು, ಕಾಣದಾಗಿತ್ತು ಕಣ್ಣು, ಮೈ ಕೈ ಎಲ್ಲ ನೋವು
ಹೇಳಿದಳು, ಮನೆಯಲ್ಲಿ ನ ಮುದ್ದಿನ ಮಗಳು
ನನಗೇನೂ ಕೆಲ್ಸ ಬಾರದು, ನನಗಿನ್ನೂ ಹದಿನೆಂಟರ ಹರೆಯ
ದಿನ ದಿನವೂ ಸುಳ್ಳಿನ ಕಂತೆ, ಕಾಣದಾಯಿತು ಚೆಲುವಿನ ಕಾಂತೆ
ಛೇಡಿಸತೊಡಗಿದರೆಲ್ಲ, ೪೮ ಅಲ್ಲ ಹದಿನೆಂಟರ ಹರೆಯ
ಹೇಳಿದ ಒಂದು ದಿನ ಎದೆಯುಬ್ಬಿಸಿ ಈ ಮಹಾಶಯ
ಇದ್ದರೂ ಅವಳಿಗೆ ನಲವತ್ತೆಂಟು , ನನಗೆಂದೂ ಕಾಣ್ವಳು ಹದಿನೆಂಟು
Friday, February 13, 2009
ಗೀತಾ ಪಾರಾಯಣ...
ನಿನ್ನಯ ಮಾತಿನ ಮುತ್ತುಗಳು ದೂಡಿವೆ ನನ್ನಯ ಕಡು ಶೋಕ ೧
ನೀನಿದ್ದರೆ ಜೊತೆಯಲಿ ಜಯವಿಹುದು ಎಲ್ಲವು ನನ್ನೆದೆ ತಟ್ಟುವುದು
ನಿನ್ನಿಂದಲೇ ಜೀವದ ಸೆಲೆಯಿಹುದು ಬದುಕಿದು ಮನವನು ಮುಟ್ಟುವುದು ೨
ನಿನಗಾಗಿಯೇ ಜೀವನ ಸವೆಸುವೆನು ಕಣ್ಣಲ್ಲೇ ಕಣ್ಣನು ಕೊಲ್ಲದಿರು
ನೀನಿರುವ ಕಡೆಯಲಿ ನಗುವಿಹುದು ಕೆಸರಲಿ ಕಮಲವು ಅರಳಿಹುದು ೩
ಮುಖದಲಿ ಸಿಟ್ಟನು ತೋರದಿರು ಮೈ ಮನದಲಿ ನೀನೆ ತುಂಬಿರುವೆ
ಒಲವಿನ ಸಹಚರ ಕಾದಿಹೆನು ಬಾಳಿಗೆ ಕೈಯನು ಹಿಡಿದಿರುವೆ ೪
ಬಿಟ್ಟೆನು ಎಲ್ಲವು ಮರುಗದಿರು ಹುಟ್ಟಲಿ ಎಲ್ಲವು ಅಡಗಿಹುದು
ಬಟ್ಟನೆ ಬಯಲಲಿ ಬಿಟ್ಟಿರುವ ಕರುಗಳು ನಾವು ಹೆದರದಿರು ೫
ಬದುಕಿದು ಒಲವಿನ ಮಧುರ ಕ್ಷಣ ಬಯಸದೆ ಬರದು ಇಂಥ ದಿನ
ಭಾವನೆ ತುಂಬಿರೊ ನಿನ ಪ್ರೀತಿಗೆ ಮನಸಿದು ತೆರೆದಿಹುದು ೬
ಚಿಂತೆಯ ಬಿಡುವ ಸಮಯವಿದು ಚಿಂತನೆ ಮಾಡಲು ಹೊತ್ತಿಹುದು
ಚೈತನ್ಯ ಚಿಲುಮೆ ಛಲವಿರಲಿ ನನ ಬಾಳಿಗೆ ಬೆಳಕು ಅರಿವಿರಲಿ ೭
ಅರಳಿದ ಮಲ್ಲಿಗೆ ಸುಮಘಮವು ನಿನ್ನಯ ಸನಿಹ ಅನುಪಮವು
ನೀನಿದ್ದರೆ ಹೃದಯಕೆ ಸಂಭ್ರಮವು ಮನಸುಗಳಾಚೆಗೆ ಸಂಗಮವು ೮
ನಾ ಬಡವನೆ ಆದರೂ ಬದುಕಿನಲಿ ನನ ಪ್ರೇಮಕೆ ಬಡತನವಿಲ್ಲ ಕಣೆ
ನನ್ನುಸಿರಿನ ಉಸಿರು ಇರೊವರೆಗೂ ನಾ ನಿನ್ನನು ಪ್ರೇಮಿಪೆ ಮನದಾಣೆ ೯
ಅರಿಯದೆ ಮಾಡಿದೆ ತಪ್ಪುಗಳ ಅದ ಮನ್ನಿಸು ನನ್ನನು ಆಧರಿಸು
ಮನವಿದು ಮರ್ಕಟನಂತಿಹುದು ಅದ ಬಳಿಯಲಿ ಸೇರಿಸಿ ನೇವರಿಸು ೧೦
ಮಾಡಿದೆ ನಿನಗೆ ನೋವುಗಳ ಕಣ್ಣಿನ ನೋವನು ಅರಿತಿಹೆನು
ಹೃದಯದ ಬೇಗೆಯ ಆಲಿಸಿಹೆ ಇನ್ನೆಂದೂ ಮನಸನು ನೋಯಿಸೆನು ೧೧
ನನ ಒಲವಿನ ಮಧುರ ಗೆಳತಿ ನೀ ನಿನ್ನೋಲವಿನ ಮಂದಿರ ಪೂಜಾರಿ
ಕರುಣಿಸು ನಿನ್ನಯ ದರುಶನವ ಬಾಳುವೆ ಮನದಲಿ ಶುಭ ಕೋರಿ ೧೨
ಮಾತಲಿ ಜ್ವಾಲೆಯ ಸುರಿಸದಿರು ಪ್ರೇಮದಿ ಮಾಲೆಯ ಹಿಡಿದಿಹೆನು
ಮುತ್ತಿನ ಮತ್ತಿನ ಪ್ರೇಮ ಪರಿ ನೀನಿಲ್ಲದೆ ಬಾಳನು ಸಾಗಿಸೆನು ೧೩
ಕಡು ಕಷ್ಟವೋ ನಷ್ಟವೋ ನಾನರಿಯೆ ಬದುಕಲಿ ನೋವು ನಲಿವುಗಳು
ನಮ್ಮಿಬ್ಬರ ಭಾವನೆ ಸೇರಿರಲು ಪ್ರತಿ ಕ್ಷಣ ಸಂತಸದಾ ಹೊನಲು ೧೪
ನಕ್ಕರೆ ಸಕ್ಕರೆ ಅಕ್ಕರೆಯ ನಿನ ತುಂಬಿದ ಕಣ್ಣಿನ ನೋಟವದು
ವಂಚನೆ ಇಲ್ಲದೆ ಮಿಂಚಿನಲಿ ಎದೆಯನು ಸೆಳೆಯುವ ಮಾಟವದು ೧೫
ಒಲವಿನ ಗೆಲುವಿನ ಪ್ರಾಣಸಖಿ ನಾನಿರುವೆನು ಅನುಕ್ಷಣ ಜೊತೆಯೆ ಸುಖಿ
ಕರುಣೆಯ ತರುಣಿಯೆ ನನ ನಂಬು ಮಾಡುವೆ ಜೀವನ ಬಣ್ಣದ ರಂಗು ೧೬
ಮಲೆನಾಡಿನ ಬೆಡಗಿನ ಹುಡುಗಿಯೆ ನೀ ಮಲೆನಾಡಿನ ಹುಡುಗನ ಹೃದಯವು ನೀ
ಕಾಡಿನ ಮೇಡಿನ ಬಳ್ಳಿಗಳ ಹುಡುಕಿ ತಂದೆ ನನ್ನವಳ ೧೭
ಸುತ್ತಲು ಕತ್ತಲೆ ಕವಿದಿಹುದು ನಕ್ಷತ್ರಗಳಲ್ಲಿ ಸೊಬಗಿಹುದು
ನಸುನಗೆ ಸೂಸುತ ಶಶಿಯಿಹನು ಬೆಳದಿಂಗಳ ಬಾಲೆ ಎನುತಿಹನು ೧೮
ಕವಿ ಕಲ್ಪನೆ ವರ್ಣನೆ ವಾಸ್ತವವೋ ಬಾಳಲಿ ಬಂದಿಹೆ ಅದ್ಭುತವೋ
ಹೆಜ್ಜೆಗೆ ಗೆಜ್ಜೆಯ ಸೇರಿಸುತ ಲಜ್ಜೆಯ ತೋರದೆ ಅನವರತ ೧೯
ತಾಳವೋ ಮೇಳವೋ ನಾನರಿಯೆ ಬಾಳನು ನಿನಗರ್ಪಿಸುವೆ ಪ್ರಿಯೆ
ಕಾಲನ ಗರ್ಭದ ಶಿಶು ನಾನು ಮಮತೆಯ ಮಡಿಲಿನ ಮಗು ನೀನು ೨೦
ವಿಧಿಯನು ಮೀರಿಸಿದವರುಂಟೆ ನಮ್ಮಿಬ್ಬರ ಪ್ರೀತಿಗೆ ಕರೆಗಂಟೆ
ಇಬ್ಬನಿ ಹಬ್ಬಿದ ಮುಂಜಾವು ತೊರೆದಿಹೆ ಪಕ್ಷಿಗಳು ಟಾವು ೨೧
ಶ್ರಂಗಾರದ ಪ್ರೇಮದ ಪುತ್ಥಳಿಯೆ ಬಂಗಾರವೆ ತುಂಬಿದ ನನ್ನೊಲವೆ
ಆಸೆಯೆ ದು:ಖಕೆ ಮೂಲ ಕಣೆ ಅದನರಿತರೆ ಜೀವನ ಹರ್ಷ ಕಣೆ ೨೨
ಕಾಲಗಳೆಷ್ಟೊ ನಾನರಿಯೆ ಸರ್ವಕಾಲದಲೂ ನೀನೆ ಪ್ರಿಯೆ
ದೇವಗೆ ಪ್ರಾರ್ಥನೆ ಸಲ್ಲಿಸುವೆ ಏಳು ಜನ್ಮದಲೂ ನಿನ ಪಡೆವೆ ೨೩
ವಸುಧೆಯ ಹಸಿರಿನ ಕನಸುಗಳು ನಿನ್ನೊಂದಿಗೆ ಸಾಗಿದ ಹೆಜ್ಜೆಗಳು
ಎಂದಿಗೂ ನಿನ್ನನು ವಂಚಿಸೆನು ನುಡಿದಿವೆ ಪ್ರೇಮದ ಹೃದಯಗಳು ೨೪
ನಿನ್ನಯ ಜಪವನು ಮಾಡುವೆನು ತಪದಲಿ ಕೂಡಾ ಕೈ ಬಿಡೆನು
ಮರೆತರೆ ನಿನ್ನನು ಕ್ಷಣ ಕ್ಷಣ ಬಳಿಯೆ ಇರುವುದೀ ಪಾರಾಯಣ ೨೫
Monday, February 9, 2009
ಪ್ರೇಮಿಗಳ ದಿನಕ್ಕೆ ...
ಪ್ರೇಮಿಗಳ ದಿನಕ್ಕೆ ಒಂದಷ್ಟು ಉಪ್ಪು, ಒಂದಷ್ಟು ಹುಳಿ, ಒಂದಷ್ಟು ಸಿಹಿ...

- ಗುರು ಬಬ್ಬಿಗದ್ದೆ
ಮನುಷ್ಯ ಯಾವತ್ತೂ ಚಪಲ ಚೆನ್ನಿಗರಾಯ. ಕೆಲವರಿಗೆ ತಿನ್ನುವ ಚಪಲ, ಇನ್ನು ಹಲವರಿಗೆ ಕಲಿಯುವ ಚಪಲ, ಕೆಲವರಿಗೆ ಆಡುವ ಚಪಲ, ಹಲವರಿಗೆ ಸಮಾಜ ಸೇವೆಯ ಚಪಲ, ಅಂತೂ ಒಂದಿಲ್ಲೊಂದು ಚಪಲ ಎಲ್ಲರನ್ನು ತುಂಬಿರುವುದರಲ್ಲಿ ಸಂಶಯವೇ ಇಲ್ಲ. ಪ್ರತಿದಿನವೂ ಭಾನುವಾರವೇ ಯಾಕಲ್ಲ? ಎನ್ನುವುದರಿಂದ ಹಿಡಿದು ಸುಮ್ಮನೆ ಮನೆಯಲ್ಲಿ ಕುಳಿತರೆ ಸಂಬಳ ಸಿಗುವಂತಾಗಿದ್ದರೆ ಎನ್ನುವವರೆಗೆ ಮಾನವನ ವಿವೇಚನಾ ಶೈಲಿ ಬೆಳೆದಿದೆ. ಪ್ರತಿದಿನ ಒಂದಿಲ್ಲೊಂದು ನೆವ ಹುಡುಕಿ ಮನರಂಜನೆ ಗಾಗಿ ಕಾಲ ಹರಣ ಮಾಡುವುದು ನಮ್ಮ ಪೂರ್ವಜರಿಂದಲೂ ಬಂದ ಬುದ್ದಿ. ಒಂದು ದಿನ ಆ ಹಬ್ಬ, ಇನ್ನೊಂದು ದಿನ ಮತ್ತೊಂದು ಹಬ್ಬ. ಒಮ್ಮೆ ಅಮ್ಮಂದಿರ ದಿನ, ಇನ್ನೊಮ್ಮೆ ಅಪ್ಪಂದಿರ ದಿನ, ಏಡ್ಸ್ ದಿನ, ಹುಟ್ಟಿದ ದಿನ, ಸತ್ತ ದಿನ ಅಬ್ಬಬ್ಬ ಒಂದೇ ಎರಡೇ ಒಟ್ಟಿನಲ್ಲಿ ಸಮಯ ಕಳೆಯಲು ಒಂದು ನೆವ "ಕಳ್ಳನಿಗೊಂದು ಪಿಳ್ಳೆ ನೆವ ಅಂದ ಹಾಗೆ".
ಅಂತೆಯೇ ಹುಟ್ಟಿಕೊಂಡದ್ದು ಪ್ರೇಮಿಗಳ ದಿನ. ಪ್ರತಿವರ್ಷ ಫೆಬ್ರವರಿ ೧೪ ರಂದು ಇದರ ವಿದ್ಯುಕ್ತ ಆಚರಣೆ. ವರ್ಷವಿಡಿ ಕಳ್ಳತನದಿಂದ ಆಚರಿಸಿದ ಹಬ್ಬಕ್ಕೆ ಒಂದು ದಿನ ರಾಜ ರೋಷ ದಿಂದ ಮೆರೆಯುವ ಸಂಭ್ರಮ. ಪ್ರೇಮಿಗಳ ದಿನದ ಬಗ್ಗೆ ಹಲವಾರು ಕಥೆಗಳಿವೆ. ೩ ನೇ ಶತಮಾನದಲ್ಲಿ ಜೀವಿಸಿದ್ದ ಸೆಂಟ್ ವೆಲೆಂಟಿನ ನೆನಪಿಗಾಗಿ ಇದನ್ನು ಆಚರಿಸಲಾಗುತ್ತಿದೆ ಎಂದು ಒಂದು ಕಡೆ ಹೇಳಿದರೆ ಸೆಂಟ್ ವೆಲೆಂಟಿನ ತನ್ನ ಪ್ರೇಯಸಿಯಾದ ಜೈಲಿನ ಅಧಿಕಾರಿಯ ಮಗಳಿಗೆ ಬರೆದ ಪತ್ರ ವೆಂದೂ ಸಂಬೋದಿಸಲಾಗುತ್ತಿದೆ. ಕಥೆ ಏನೇ ಇರಲಿ ಪ್ರೆಮಿಗಳಿಗಂತೂ ಇದೊಂದು ಸುಯೋಗವೇ ಸರಿ.
ಯಾವುದೇ ಹಬ್ಬ ಇರಲಿ, ಆಚರಣೆ ಇರಲಿ ಅದು ತನ್ನ ಪರಿಮಿತಿಯಲ್ಲಿದ್ದರೆ ಮಾತ್ರ ಅದಕೊಂದು ಅರ್ಥ ಹಾಗೂ ಗೌರವ. ನಮ್ಮ ಪ್ರಾಚೀನ ಕಾಲದ ಅದೆಷ್ಟೋ ಹಬ್ಬ ಹರಿದಿನಗಳು ನಶಿಸಿ ಹೋಗಿದ್ದೂ ಇದೆ ಕಾರಣದಿಂದ. ಮನುಷ್ಯ ತಾನೂ ಬೆಳೆದಂತೆಲ್ಲ ವಿನಾಶಕಾರಿಯಾಗುತ್ತ ಹೋದ. ಎಲ್ಲ ಹಬ್ಬ ಹರಿದಿನಗಳ ಬಗೆಗೆ ಪ್ರಶ್ನಿಸತೊಡಗಿದ. ಅದರಲ್ಲಿ ರಸವಿಲ್ಲ ಎಂದು ತಾನೆ ತೀರ್ಮಾನಿಸಿದ. ಅದರ ಫಲವೇ ನಾವು ಕಾಣುತ್ತಿರುವ ಸಂಸ್ಕ್ರತಿಯ ಅಧ:ಪತನ.
ಪ್ರೇಮಿಗಳ ದಿನ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಅಂದು ಅದಕ್ಕೊಂದು ವಿಶಾಲ ಅರ್ಥವಿತ್ತು. ಆದರೆ ಇಂದು ೧೪ ನೆ ದಿನಾಂಕಕ್ಕಾಗಿ ಕಾಯುತ್ತಾರೆ. ಆ ದಿನ ಏನೇ ಹೇಳಿದರೂ ಕ್ಷಮೆ ಇದೆ ಎಂಬ ಧೈರ್ಯ ಬೇರೆ. ಇಂದು ಫೆಬ್ರವರಿ ೧೪ ಅಂದರೆ ಕುಡಿತ ಮೋಜುಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಇನ್ಯಾವ ಅರ್ಥವೂ ಅದರಲ್ಲಿ ಉಳಿದಿಲ್ಲ. ತನಗಿಷ್ಟವಾದವನು ಅಥವಾ ಅವಳಿಗೆ ತನ್ನ ಭಾವನೆಗಳಿಗನುಸಾರವಾಗಿ ಹೂವನ್ನು ಕೊಟ್ಟು ಆ ದಿನ ಅವನೊಡನೆ ಪಾರ್ಟಿ ಮಾಡಿ ಮರುದಿನ ಅವನಿಗೆ ಕೈಯನ್ನು ಕೊಟ್ಟು ಮರಕೋತಿ ಆಟ ಆಡುವ ಹುಡುಗ ಹುಡುಗಿಯರಿಗೆ ಇದೊಂದು ಸುಯೋಗವೂ ಹೌದು.
ತನ್ನ ಹಳೆಯ ಪ್ರಿಯತಮನನ್ನು ನೆನಪಿಸಿಕೊಂಡು ಕೊರಗುವ ಪ್ರಿಯತಮೆಗೆ ಹೊಸ ಪ್ರಿಯತಮನನ್ನು ಹುಡುಕಿಕೊಳ್ಳುವ ಅವಕಾಶವೂ ಹೌದು ಪ್ರೇಮಿಗಳ ದಿನ. ವಿದ್ಯೆಯನ್ನು ಕಲಿಸುವ ವಿದ್ಯಾಲಯಗಳೂ ಇಂಥಹ ಆಚರಣೆಗೆ ಆಸ್ಪದ ಕೊಡುತ್ತಿರುವುದು ಖಂಡನೀಯ. ಅದರಲ್ಲೂ ನಮ್ಮ ಕಲೆಗೆ ಬೆಲೆ ಕೊಟ್ಟು ಆರಾಧಿಸುತ್ತಿರುವ ಪಾಶ್ಯಾತ್ಯ ದೇಶಗಳ ಮುಂದೆ ನಾವು ಸಣ್ಣವರಾಗುತ್ತಿದ್ದೇವೆ. ನಾವು ಅವರಿಂದ ಅಭಿವ್ರದ್ದಿ ಒಂದನ್ನು ಬಿಟ್ಟು ಉಳಿದೆಲ್ಲವನ್ನೂ ಕಲಿಯುತ್ತಿದ್ದೇವೆ. ನಮ್ಮ ಸಂಸ್ಕ್ರತಿಯೇ ನಮಗೆ ಭೂಷಣ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ರೇಮಿಗಳ ದಿನವನ್ನು ನಿಜವಾದ ಅರ್ಥದಿಂದ ಆಚರಿಸಿದರೆ ಅದೂ ಎಲ್ಲರಿಗೂ ಹರ್ಷ ನೆಮ್ಮದಿ ನೀಡುತ್ತಿದೆ. ಆದರೆ ಕೇವಲ ಒಂದು ಹುಡುಗನೋ, ಹುಡುಗಿಗೋ ಹೂವು ಕೊಟ್ಟು ಕುಡಿದು ರಾತ್ರಿಯಿಡೀ ನರ್ತಿಸುವ ಇಂಥಹ ಆಚರಣೆಗಳು ಆರೋಗ್ಯಕರ ಸಮಾಜಕ್ಕೆ ಅಪವಾದ."ನಾವೆಷ್ಟೇ ಹೇಳಿದರೂ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಜಾಯಮಾನ ನಮ್ಮದು". ನಮ್ಮ ಮಾತೆಲ್ಲ ಕೇಳಲು ಚಂದ ಆದರೆ ಆಚರಣೆಗೆ ದಂಡ. ಅದೇನೇ ಇರಲಿ ಬಿಸಿ ಹ್ರದಯಗಳ, ಹಸಿ ಮನಸುಗಳ, ಹುಸಿ ಕನಸುಗಳ , ನಸು ನಗೆಯ ಈ ಪ್ರೇಮಿಗಳ ದಿನಕ್ಕೆ ನನ್ನದೂ ಒಂದು ಸಣ್ಣ ಶುಭ ಹಾರೈಕೆ. ಮೈ ಮರೆತುಬಿಟ್ಟಿರೀ ಜೋಕೆ.
Wednesday, February 4, 2009
ಓ ಬನ್ನಿ ಬಾಂಧವರೇ...
- ಗುರು ಬಬ್ಬಿಗದ್ದೆ
ಬನ್ನಿರೆಲ್ಲ ಭಾಂಧವರೆ ಹೊಸ ನಾಡನು ಕಟ್ಟೋಣ
ಜಾತಿ ಮತಗಳ ಮೀರಿದ ಹೊಸ ಜಾಡನು ಹುಡುಕೋಣ
ಬಡತನ ಸಿರಿತನ ಬೇಡ ಒಂದೇ ಆಗೋಣ
ದುಡಿತದಿ ದೇಶದ ವಿಧಿಯ ನಾವು ಎತ್ತಿ ಮೆರೆಸೋಣ
ಪ್ರೀತಿ ಪ್ರೇಮದ ಪಾಠ ಜಗದಗಲಕೆ ಹರಡೋಣ
ಎಲ್ಲರೂ ಸೇರಿ ಬೆರೆತು ಹೊಸ ಪಥವ ಹಿಡಿಯೋಣ ಹೊಸ ಪಥವ ಹಿಡಿಯೋಣ ೧
ಮೇಲು ಕೀಳು ಭೇಧ ಭಾವ ಕಿತ್ತು ಒಗೆಯೋಣ
ನಾನು ಹೆಚ್ಚು ನೀನು ಹೆಚ್ಚು ಮರೆತೇ ಬಿಡೋಣ
ಕೈಗೆ ಕೈಯ ಸೇರಿಸು ಮತ್ಸರವ ಬಿಡೋಣ
ಭರತ ಮಾತೆಯ ಮಡಿಲಲಿ ಜೀವ ಪಾವನ ಜೀವ ಪಾವನ ೨
ಮೌಡ್ಯತೆ ಜಾಡ್ಯತೆ ಎಲ್ಲ ಮೆಟ್ಟಿ ನಿಲ್ಲೋಣ
ದ್ವೇಷಕೆ ಪ್ರೀತಿ ತೋರಿ ನಾವ್ ಸುಖವ ಹರಿಸೋಣ
ಪ್ರಗತಿಯ ಪಥದಲಿ ನಡೆದು ಎಲ್ಲರನು ಒಯ್ಯೋಣ
ಅನುಕ್ಷಣ ಭೂಮಿಯ ಋಣವ ನಾವು ತೀರಿಸಿ ಹೋಗೋಣ ನಾವು ತೀರಿಸಿ ಹೋಗೋಣ ೩
ಬುದ್ದ ಹುಟ್ಟಿದ ನಾಡಿದು ಶಾಂತಿಯ ತಾಣ
ಒಡನಾಡಿಗಳು ನಾವು ಹೊಡೆದಾಟ ಏಕಣ್ಣಾ
ಹೆತ್ತ ತಾಯಿ ಹೊತ್ತ ತಾಯಿ ಜೀವದಾತೆಯಣ್ಣ
ಓ ಬನ್ನಿ ಭಾಂಧವರೇ ಹೊಸ ನಾಡನು ಕಟ್ಟೋಣ ಹೊಸ ನಾಡನು ಕಟ್ಟೋಣ ೪