Friday, December 18, 2009

''ನೀವು ತುಂಬಾ ಒಳ್ಳೆಯವರು ಕಣ್ರೀ, ಅವರ ಹಾಗೇ ಅಲ್ಲ''

ಕೆಲವರು ಇರುತ್ತಾರೆ, ಸದಾ ಹೊಗಳುವುದೇ ಅವರ ಜಾಯಮಾನ, ಅದು ಅವರ ಮಾತಿನ ಚಾಕಚಕ್ಯತೆ ಅಂತಲೇ ಅವರು ತಿಳಿದಿರುತ್ತಾರೆ. ಹಾಗೆಯೇ ತಮ್ಮನ್ನೂ ಇತರರು ಹೊಗಳಲಿ ಎಂದು ಬಯಸುತ್ತಿರುತ್ತಾರೆ. ಅವರ ಮಾತಿನ ನಡು ನಡುವೆ ''ಎಷ್ಟು Friendly ನೀವು, ತುಂಬಾ ಒಳ್ಳೆಯವರು, ನಿಮ್ಮಂಥವರು ಸಿಗೋದು ಬಲು ಅಪರೂಪ (ಎಷ್ಟು ಜನರಿಗೆ ಇದೆ ರೀತಿಯ ಮಾತನ್ನು ಆಡಿದ್ದಾರೋ ದೇವರೇ ಬಲ್ಲ)'' ಎಂದೆಲ್ಲ ಹೇಳುತ್ತಿರುತ್ತಾರೆ. ಇವರ ಉದ್ದೇಶ ಒಂದೇ, ತಾವು ಎಲ್ಲರನ್ನೂ ಬುಟ್ಟಿಗೆ ಬೀಳಿಸಿಕೊಳ್ಳುವುದು. ಒಂಥರಾ ವಿಷವಿಲ್ಲದ ನಾಗರಹಾವಿನಂತೆ.


ಇನ್ನೂ ಕೆಲವರು ಇರುತ್ತಾರೆ, ಅವರ ಮಾತುಗಳು ಬಹಳಷ್ಟು ಮಟ್ಟಿಗೆ ಮೇಲಿನಂತೆಯೇ ಇರುತ್ತವೆ ಆದರೆ ಅವರು ಉತ್ಪ್ರೇಕ್ಷಾಲಂಕಾರದ ಜೊತೆ ಉಪಮೆಗಳನ್ನೂ ಕೊಡುತ್ತಾರೆ. ಅವರಿಗೆ ನಮ್ಮನ್ನಷ್ಟೆ ಹೊಗಳಿದರೆ ಸಾಲದು, ನಮಗೆ ಗೊತ್ತಿರುವ ಕೆಲವು ಜನರನ್ನೂ ತೆಗಳಬೇಕು ''ಏನು ಜನಾರೀ ಅವರು, ನಿಮ್ಮ ಹಾಗೇ ಇಲ್ಲ, ನಿಮ್ಮ ಜೊತೆ ನಾವು ಅದೆಷ್ಟು Comfortable ಆಗಿ ಇರ್ತಿವಿ ಆದರೆ ಅವರ ಜೊತೆ ಏನೋ ಮುಳ್ಳು ಚುಚ್ಚಿದ ಅನುಭವ ಆಗುತ್ತೆ ಕಣ್ರೀ'' ಅಂತಾರೆ. ಇಂಥವರು ಒಂಥರಾ ವಿಷ ಸರ್ಪದ ಹಾಗೇ. ಮೈಯೆಲ್ಲಾ ಕಣ್ಣಾಗಿರಬೇಕು. ಅಪ್ಪಿ ತಪ್ಪಿ ಇವರಲ್ಲಿ ''ಅವರ'' ಬಗ್ಗೆ ಹೇಳಿದರೋ, ನಿಮ್ಮ ಸರ್ವ ಪುರಾಣವೂ ಕಾಲು ಬಾಯಿಗಳೊಂದಿಗೆ ''ಅವರ'' ಮನೆಯಲ್ಲಿ ರಸಾಯನವಾಗಿರುತ್ತದೆ.


ಇಂಥವರು ಒಂಥರಾ ಕಂಕುಳಲ್ಲಿ ಇದ್ದ ಬೆಣ್ಣೆಯ ಹಾಗೇ, ಬಿಡೋಕೂ ಆಗಲ್ಲ, ಹಾಗಂತ ಬಹಳ ದಿನ ಇರೋಕ್ಕೂ ಆಗಲ್ಲ. ಒಬ್ಬರನ್ನು ಹೊಗಳ್ತಾ, ಇನ್ನೊಬ್ರನ್ನ ತೆಗಳುತ್ತಾ, ಕೊನೆಗೆ ತಮ್ಮಷ್ಟಕ್ಕೆ ತಾವೇ ತಮ್ಮ ಚಾಣಾಕ್ಷ ಬುದ್ಧಿಗೆ ನಗುತ್ತಾ ಕಾಲ ಕಳೆಯುವುದೇ ಇಂಥವರ ಹವ್ಯಾಸ. ದುರ್ದೈವವಶಾತ್ ಇಂಥವರಿಗೆ ಬಹಳಷ್ಟು ಜನರ ಪರಿಚಯ ಇರುತ್ತೆ. ''ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು''  ಎನ್ನುವಂತೆ ಸದಾ ಬೇರೊಬ್ಬರ ಋಣಾತ್ಮಕ ಅಂಶಗಳ ಬಗೆಗೆ ಆಸಕ್ತಿ ಇವರಿಗೆ ಹೆಚ್ಚು. ಜೀವನದ ಬಂಡಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನಾವು ಇಂಥಹ ಜನರಾಗಿಯೋ, ಜನರೊಂದಿಗೋ ಸಂಪರ್ಕ ಇಟ್ಟುಕೊಂಡಿರುತ್ತೇವೆ.


ಕೆಲವೊಮ್ಮೆ ನಾವೇ ನಮಗೆ ಗೊತ್ತಿಲ್ಲದಂತೆ ನೆಚ್ಚಿನ ಸ್ನೇಹಿತನ ಮಾತಿನಿಂದ ಕೋಪಗೊಂಡು ಇನ್ನೊಬ್ಬ ಸ್ನೇಹಿತನಲ್ಲಿ ಅವನ ಬಗ್ಗೆ ಕೀಳಾಗಿ ಮಾತನಾಡಿರುತ್ತೇವೆ. ಇದೊಂದು ಆ ಕ್ಷಣದ ಕೆಟ್ಟ ಮನಸ್ಥಿತಿ. ಆ ಕ್ಷಣ ಧಾಟಿದಾಗ ಪುನಃ ಚಿತ್ರಣದ ಅರಿವಾಗಿ ಒಂದಾಗುತ್ತೇವೆ. ಆದರೆ ನಗು ನಗುತ್ತಾ ಹಿಂದಿನಿಂದ ನಮ್ಮ ಬಗ್ಗೆ ಆಡಿಕೊಳ್ಳುವುದಿದೆಯಲ್ಲ  ಅದು ಮಾತ್ರ ವಿಚಿತ್ರ ಮನಸ್ಥಿತಿ. ಅಂಥವರು ಯಾವಾಗಲೂ ನಮ್ಮ ಚಿತ್ತ ಕೆಡಿಸಲು ಕಟಿ ಬದ್ಧರಾಗಿರುತ್ತಾರೆ. ಇನ್ನೊಬ್ಬರ ಏಳ್ಗೆ ಅವರಿಗೆ ಸಹಿಸಲು ಸಾದ್ಯವೇ ಇಲ್ಲ.
ನಮ್ಮನ್ನೇ ತೆಗೆದುಕೊಳ್ಳಿ, ನಮಗೆ ಊಟ ಮಾಡುವಾಗ ಸುಮ್ಮನೆ ಊಟ ಮಾಡಿ ಗೊತ್ತಿಲ್ಲ, ಇರುವ ೧೦ ನಿಮಿಷದ ಊಟದಲ್ಲಿ ದೇಶ ವಿದೇಶಗಳ ಅಥಿತಿಗಳು ಊಟದಲ್ಲಿ ಬಂದಿರುತ್ತಾರೆ. ನಮಗೆ ಊಟಕ್ಕೆ ಕೂತಾಗ ''ಒಬಾಮ ಏನು ಮಾಡಿದ, ಮನಮೋಹನ ಸಿಂಗ್ ಯಾಕೆ ಹೀಗೆ?, ಅಣ್ವಸ್ತ್ರ ಬೇಕೇ ಬೇಡವೇ? ಸಚಿನ್ ತೆಂಡೂಲ್ಕರ್ ಕೌಂಟಿ ಯಲ್ಲಿ ಆಡಲು ಯಾಕೆ ಒಪ್ಪಿಕೊಂಡ'' ಎಂಬ ವಿಷಯಗಳು ಬೇಕೇ ಬೇಕು. ನಮ್ಮದೇ ಮನೆಯ ಮುಂದೆ ಬಿದ್ದ ಕಸದ ರಾಶಿ ನಮಗೆ ಕಾಣಿಸದು ಆದರೆ ಪಕ್ಕದ ಮನೆ ಜಾನಕಮ್ಮನ ಮನೆಯ ಸ್ವಚ್ಛತೆ ಬಗ್ಗೆ ನಾವು ಬೆರಳು ತೋರಿಸುತ್ತೇವೆ. ನಮ್ಮನ್ನು ನಾವು ಸುಧಾರಿಸಿಕೊಳ್ಳಲು ನಮಗೆ ಪುರುಸೊತ್ತಿಲ್ಲ, ಯಥೇಚ್ಚವಾಗಿ ಇನ್ನೊಬ್ಬರಿಗೆ ಬದುಕಲು ಉಪದೇಶ ಕೊಡುತ್ತೇವೆ. ಅದರಲ್ಲೂ ಹಿರಿಯರು ಎನ್ನಿಸಿಕೊಂಡವರ ಬಾಯಿಯಿಂದ ಬರುವುದು ಕೇವಲ ಉಪದೇಶ ಮಾತ್ರ. ಉಪದೇಶ ಕೊಡಬೇಕಾಗಿಲ್ಲ, ನಿಮ್ಮನ್ನು ನೋಡಿ ಅನುಸರಿಸಬೇಕು ಎಂಬುದು ನಮಗೆ ಮರೆತು ಎಷ್ಟೋ ವರ್ಷಗಳೇ ಕಳೆದಿವೆ.


        ನೀವು ಹಳ್ಳಿಯ ಹೆಂಗಸರು ಕುಳಿತು ಮಾತನಾಡುವುದು ಕೇಳಿರಬೇಕು (ಪಟ್ಟಣದ ಹೆಂಗಸರಿಗೆ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ಗೊತ್ತಿಲ್ಲ ಇನ್ನು ಮಾತನಾಡುವುದು ದೂರದ ವಿಚಾರವಾದ್ದರಿಂದ ಪ್ರಸ್ತಾಪಿಸುತ್ತಿಲ್ಲ)  ''ಅಲ್ರಿ, ಆ ಸಾವಿತ್ರಮ್ಮನ ಸೊಸೆಗೆ ಏನು ಬಂತು ಅಂತ, ಅಷ್ಟು ಒಳ್ಳೆ ಸಾವಿತ್ರಮ್ಮನ ಜೊತೆ ಜಗಳ ಮಾಡ್ತಾಳಂತೆ'' ''ಹೌದೇನ್ರಿ, ಇನ್ನೊಂದು ವಿಷಯ ಗೊತ್ತಾ, ಆ ರಾಮಣ್ಣ ದಿನಾ ರಾತ್ರಿ ಕುಡಿದು ಬಂದು ಹೆಂಡತಿಗೆ ಹೊಡಿತಾನಂತೆ , ನಿಮ್ಮಂತ ಒಳ್ಳೆಯವರ ಮನೆ  ಪಕ್ಕದಲ್ಲಿದ್ದುಕೊಂಡೂ   ಹೀಗೆ ಮಾಡೋದಾ (ಪಕ್ಕದಲ್ಲಿದ್ದರೆ ಹುಟ್ಟು ಗುಣ ತಪ್ಪಿ ಹೋಗುತ್ತಾ) ''. ಕೊನೆಯಲ್ಲಿ ಎಲ್ಲರ ಬಗ್ಗೆ ಮಾತನಾಡಿದ  ಮೇಲೆ ಅವರಲ್ಲೇ ಹಿರಿಜೀವ (ವಯಸ್ಸಿನಲ್ಲಾದರೂ ಆಗಬಹುದು, ಬಾಯಿಯಲ್ಲಾದರೂ ಆಗಬಹುದು, size ನಲ್ಲಾದರೂ ಆಗಬಹುದು) ಎದ್ದು ನಿಂತು ''ಅವರಿವರ ಮನೆ ಸುದ್ದಿ ನಮಗೆ ಯಾಕೆ, ನಮ್ಮಷ್ಟಕ್ಕೆ ನಾವು ಇದ್ದು ಬಿಡೋಣಾ'' ಅನ್ನೋ ವೇದ ವಾಕ್ಯದೊಂದಿಗೆ ಮುಕ್ತಾಯ ಮಾಡ್ತಾರೆ. 


ಎದುರಿಗೆ ನಮ್ಮನ್ನೇ ಹೊಗಳಿ ಹಿಂದಿನಿಂದ ನಮ್ಮ ಬಗ್ಗೆಯೇ ಮಾತನಾಡುವ ಜನರನ್ನು ಗುರುತಿಸುವುದು ಕಷ್ಟದಾಯಕ ಕೆಲಸವೇ? ಮನುಷ್ಯ ಸಂಘಜೀವಿ, ನಮಗೆ ಸುತ್ತ ಮುತ್ತಲಿನ ಜನ ಬೇಕು, ಒಡನಾಟ ಬೇಕು. ಇಂಥವರು ನಮ್ಮ ಸುತ್ತ ಮುತ್ತಲೂ ಇದ್ದೇ ಇರುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ.ನಾವೇ ಎಷ್ಟೋ ಸಲ ಇಂಥಹ ಸ್ನೇಹಿತರೊಂದಿಗೆ ಬದುಕುತ್ತಿರುತ್ತೇವೆ. ಆದರೆ ಅವರ ಇನ್ನೊಂದು ಮುಖದ ದರ್ಶನ ಆಗಿರುವುದೇ ಇಲ್ಲ. ನಮ್ಮ ಜೊತೆ ನಗು ನಗುತ್ತಾ ನಮ್ಮಿಂದ ಎಲ್ಲ ಮಾಹಿತಿ ಪಡೆದು ಕೊನೆಗೆ ಆದಷ್ಟು ನಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಾರೆ. ಅದೇನು ಕೆಟ್ಟ ಸುಖವೋ ಅವರಿಗೆ ಇದರಲ್ಲಿ ನಾ ಕಾಣೆ. ಇಂಥಹ ಸ್ನೇಹಿತರು ಮಹಾ ವಂಚಕರು. ಒಡನೆಯೇ ಇಂಥವರನ್ನು ಗುರುತಿಸಿ ನಡುವೆ ಒಂದು ಬೇಲಿ  ನಿರ್ಮಿಸಿಕೊಳ್ಳುವುದು ಒಳ್ಳೆಯದು ಇಲ್ಲದಿರೆ ನಮ್ಮ ಜೀವನವನ್ನೇ ಹೊಸಕಿ ಹಾಕಿ ಬಿಡುವ ಮಹಾ ಶತ್ರುಗಳು ಇವರು. ಇಂಥವರು ಸಹಾಯ ಬೇಕಾದಾಗ ಮಾತ್ರ ನಮ್ಮ ಬಳಿ ತಲೆ ತಗ್ಗಿಸಿ ಬರುತ್ತಾರೆ ಅಷ್ಟೇ ಅಲ್ಲ ನಮ್ಮನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಾರೆ ಕೂಡಾ. ಒಮ್ಮೆ ಕೆಲಸವಾಯಿತೋ ನಂತರ ನಿಮ್ಮ ಮನೆಯ ಕಸದ ಬುಟ್ಟಿಯಲ್ಲಿಯೇ ನಿಮ್ಮನ್ನು ಹಾಕಿ ಹೋಗುತ್ತಾರೆ. ''ದುಷ್ತಂ ದೂರ ವರ್ಜಿತಂ'' ಎಂಬಂತೆ ಆದಷ್ಟು ಇಂಥವರ ಸಹವಾಸದಿಂದ ದೂರವಿರುವುದು ಒಳ್ಳೆಯದು.


ಯಾರು ಕಷ್ಟದಲ್ಲಿ ನೆರವಾಗುತ್ತಾರೋ ಅವರೇ ನಿಜವಾದ ಸ್ನೇಹಿತರು, ಆತ್ಮೀಯರು. ಇಂಥಹ ಆತ್ಮೀಯರ ಆಯ್ಕೆ ಮಾತ್ರ ನಮಗೆ ಬಿಟ್ಟದ್ದು. ಆದರೂ ''ಸಜ್ಜನರ ನಡವಳಿಕೆ ಹೆಜ್ಜೇನು ಸವಿದಂತೆ'' ಎಂಬ ನಾಣ್ನುಡಿ ಯಂತೆ ಉತ್ತಮ ಸ್ನೇಹಿತರ ಒಳ್ಳೆಯತನ ಮನಸ್ಸಿಗೆ ತಿಳಿದೇ ತಿಳಿಯುತ್ತದೆ. ಕೇವಲ ಸಮಯವೊಂದೇ ಅದಕ್ಕೆ ಉತ್ತರ ನೀಡಲು ಸಾದ್ಯ.


ನಿಮ್ಮ ನಡುವೆ ನಿಮ್ಮನ್ನು ಹೊಗಳಿ ನಿಮ್ಮನ್ನೇ ಆಡಿಕೊಳ್ಳುವ ಜನರಿರಬಹುದು ''ನೀವು ಒಳ್ಳೆಯವರು ಕಣ್ರೀ, ಅವರ ಹಾಗೇ ಅಲ್ಲ'' ಎನ್ನುವವರಿಂದ ಸ್ವಲ್ಪ ದೂರ ಇರಿ ಇಲ್ಲ ಒಂದು ಕಣ್ಣಿಡಿ.

56 comments:

ತೇಜಸ್ವಿನಿ ಹೆಗಡೆ said...

ಮೂರ್ತಿಯವರೆ,

ಇವು ನಿಮ್ಮ ಸ್ವ ಅನುಭವದಿಂದ ಹೊರಟ ಮಾತುಗಳೆನಿಸುತ್ತವೆ. :) ಆದರೆ ನೀವಂದದ್ದು ನಿಜ. ನಮ್ಮನ್ನು ಬೇರೊಬ್ಬರಿಗೆ ಹೋಲಿಸಿ ಹೊಗಳುವವರನ್ನು ಖಂಡಿತ ನಂಬಬಾರದು. ನಮ್ಮನ್ನು ಇದ್ದಹಾಗೇಯೆ ಸ್ವೀಕರಿಸಿ, ಸ್ನೇಹ ಬೆಳೆಸುವವರನ್ನು ಮಾತ್ರ ನಾವೂ ಸ್ವೀಕರಿಸಬೇಕು.

ಇನ್ನು ಎಲ್ಲರ ಮನೆಯ ದೋಸೆಯೂ ತೂತೇ ಎಂದು ಅರಿಯದ ಹಲವರು ಇನ್ನೊಬ್ಬರ ಬದುಕಲ್ಲಿರುವ ಕೊರತೆಯನ್ನಷ್ಟೇ ಆಡಿಕೊಂಡು, ಆ ಮೂಲಕ ಸಮಾಧಾನ ಪಟ್ಟುಕೊಳ್ಳುತ್ತಾರೆ. ಏನು ಮಾಡಲೂ ಬರದು. ಕಾರಣ "ಲೋಕೋ ಭಿನ್ನ ರುಚಿ:" :)

ಚಿಂತನಶೀಲ ಬರಹ.

Guruprasad said...

ಮನುಷ್ಯರ ಗುಣ ಸ್ವಭಾವ ಅರಿಯುವ ಹಾಗೆ ತಿಳಿಯುವ ಬಗ್ಗೆ ವಿವರವಾಗಿ ತಿಲಿಸಿದ್ದಿರ.... ಕೆಲವೊಬ್ಬರು ಇರುತ್ತಾರೆ ಯಾವಾಗಲು ಹೇಗೆ ಬೇರೆಯವರ ಬಗ್ಗೆ ಮಾತನಾದುವುದರಲ್ಲೇ ಕಲ ಕಳೆಯುತ್ತಾರೆ....ಅದಸ್ಟು ಅಂಥವರಿಂದ ದೂರ ಇರಬೇಕು,,,,
ಒಳ್ಳೆಯ ಚಿಂತನ ಲೇಖನಕ್ಕೆ ಅಭಿನಂದನೆಗಳು.....

ಸಾಗರದಾಚೆಯ ಇಂಚರ said...

ತೇಜಸ್ವಿನಿಯವರೇ,
ನೀವು ಅಂದಿದ್ದು ನಿಜ, ಇದೊಂದು ಸ್ವ ಅನುಭವವೇ. ಎಷ್ಟೋ ಸಲ ಹೀಗೆ ಆಗಿದೆ
ಕೆಲವೊಮ್ಮೆ ಸ್ನೇಹ ಮಾಡುವಾಗ ಚಿಂತಿಸುವಷ್ಟರ ಮಟ್ಟಿಗೆ ವಂಚಿಸಿದವರಿದ್ದಾರೆ
ಆದರೆ ಬ್ಲಾಗ್ ಆರಂಬಿಸಿದಾಗಿನಿಂದ ಅನೇಕ ಹೊಸ ಹೊಸ ಸ್ನೇಹಿತರು ಸಿಕ್ಕಿದ್ದಾರೆ,
ಅವರ ಪ್ರೀತಿ ಹಾರೈಕೆ ಸದಾ ಹೊಸತನ ನೀಡಿದೆ
ಜಗತ್ತಿನಲ್ಲಿ ಇದೆಲ್ಲ ಇದ್ದದ್ದೇ ಅಲ್ಲವೇ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಗುರು,
ಕೆಲವರ ಕೆಲಸವೇ ಅದು, ಬೇರೆಯವರ ಬಗ್ಗೆ ಮಾತನಾಡುವುದು
ಅದರಿಂದ ಅವರಿಗೆ ಏನು ಲಾಭ ಎಂದು ಇದುವರೆಗೆ ತಿಳಿದಿಲ್ಲ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಚುಕ್ಕಿಚಿತ್ತಾರ said...

ಜೀವನದಲ್ಲಿ ಈ ರೀತಿಯ ಜನ ಆಗಿ೦ದಾಗ್ಗೆ ಎದುರಾಗುತ್ತಲೆ ಇರುತ್ತಾರೆ. ನಮ್ಮಲ್ಲಿ ನಮ್ಮ೦ತೆ ಇದ್ದು ಆಚೆ ಮನೆಗೆ ಹೋಗಿ ಕಿವಿ ಚುಚ್ಚುವ ಜನ ಬಹಳ . ಅವರದು ಒ೦ಥರಾ ವಿಚಿತ್ರ ತ್ರುಪ್ತಿ. ಆದರೆ ಅ೦ತವರ ಸ್ವಭಾವ ಬಹು ಬೇಗ ಗೊತ್ತಾಗಿ ಸಮಾಜದಲ್ಲಿ ಬೆಲೆ ಕಳೆದುಕೊಳ್ಳುತ್ತಾರೆ.. ಅಷ್ಟೆ. ಒಳ್ಳೆಯ ಬರಹ.

ಕ್ಷಣ... ಚಿಂತನೆ... said...

ಗುರು ಅವರೆ, ಲೇಖನ ಓದುತ್ತಿದ್ದಂತೆ ಒಬ್ಬರಲ್ಲಾ ಒಬ್ಬರು ಹೀಗೆಯೇ ಇರುತ್ತಾರೆ (ನಮ್ಮಗಳನ್ನೂ ಸೇರಿಸಿ) ಎನಿಸಿತು. ನಾವೇ ಕೆಲವೊಮ್ಮೆ ಹೀಗಾಡಿರುತ್ತೇವೆ. ಜೊತೆಗೆ ಇದರಲ್ಲಿ ಸ್ವಾನುಭವದ ಹೂರಣವನ್ನೂ ಸೇರಿಸದ್ದೀರಿ ಎಂದು ತಿಳಿಯುತ್ತೇನೆ. ಇಲ್ಲವಾದರೆ ಇಂತಹ ಚಿಂತನಶೀಲ ಬರಹ ಬರೆಯಲು ಸ್ವಲ್ಪ ಕಷ್ಟವೆನ್ನಬಹುದು. ಒಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ. ಒಳ್ಳೆಯ ಬರಹ.

ಸ್ನೇಹದಿಂದ,

ದಿನಕರ ಮೊಗೇರ said...

ಗುರು ಸರ್,
ನಿಮ್ಮ ಬರಹ ಬಹಳ ಚಿಂತನೆಗೆ ಹಚ್ಚಿತು...... ಜನರಿಗೆ ನಾವು ಬೇಕಾದಾಗ ನಮ್ಮನ್ನು ದೇವರು ಅಂತಾರೆ, ಬೇಡವಾದಾಗ ದೆವ್ವ ಅಂತಾರೆ...... ನಾವು ಏನೆಂದು ನಮಗೆ ಗೊತ್ತಿರತ್ತೆ...... ಅದನ್ನೇ, ನಾವು ಮಾಡಿದರೆ ಆಯಿತು......

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ,
ಇಂಥಹ ಜನರಿಗೆ ತಮ್ಮ ಮಾತು ನಡವಳಿಕೆ ವಿರುದ್ಧವಾಗಿದೆ ಎಂದು ಅನ್ನಿಸುವುದೇ ಇಲ್ಲ
ಅವರ ಮಾತು ಇನ್ನೊಬ್ಬರಿಗೆ ನೋವನ್ನು ತರುತ್ತದೆ ಎಂಬ ಪರಿಕಲ್ಪನೆಯೂ ಅವರಿಗೆ ಇರುವುದಿಲ್ಲ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಚಂದ್ರು ಸರ್
ನಾವು ಎಷ್ಟೋ ಸಲ ಗೊತ್ತಿಲ್ಲದೇ ಬೇರೆಯವರ ಬಗ್ಗೆ ಮಾತನಾದಿದ್ರುತ್ತೇವೆ, ಇದೊಂದು ವಿಚಿತ್ರ ಮನಸ್ಥಿತಿ
ನೀವಂದಂತೆ ಸ್ವಲ್ಪ ಸ್ವಾನುಬವ ಇದೆ. ಎಷ್ಟೋ ಸಲ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿ ನೋವನ್ನು
ಉಂಡಿದ್ದೇನೆ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿನಕರ್ ಸರ್,
ನಾವು ಲೋಕದ ಮಾತನ್ನು ಕೇಳುತ್ತಿದ್ದರೆ ನಮಗೆ ಉಸಿರಾಡಲು ಸಮಯ
ಇರುವುದಿಲ್ಲ,
ನಮ್ಮಷ್ಟಕ್ಕೆ ನಾವು ಇರುವುದು
ಅದೇ ಒಳಿತು ಅಲ್ಲವೇ?
ಅಭಿಪ್ರಾಯಕ್ಕೆ ಧನ್ಯವಾದಗಳು

ಮನಮುಕ್ತಾ said...

ಬೇರೆಯವರನ್ನು ತೆಗಳಿ ನಮ್ಮನ್ನು ಹೊಗಳಿದಾಗ ನಕ್ಕುಬಿಟ್ಟು ಸುಮ್ಮನಾಗುವುದೇ ಲೇಸು.ಸ್ವ೦ತದ ಮನಸ್ಸು ಅತೃಪ್ತ ವಾಗಿರುವುದರಿ೦ದ ಬೇರೆಯವರ ಮನಸ್ಥಿತಿಯನ್ನು ಹಾಳುಮಾಡಿ ಸ೦ತಸ ಪಡುವ ಮನೋಭಾವ ಅವರದ್ದಾಗಿರುತ್ತದೆ.ಅದಕ್ಕೆ ಔಷಧಿಯೇ ಇಲ್ಲ.
ನೈಜತೆ ತು೦ಬಿದ ಬರಹ..
ಧನ್ಯವಾದಗಳು... ಬರೆಯುತ್ತಿರಿ..

ಸಾಗರದಾಚೆಯ ಇಂಚರ said...

ಮನಮುಕ್ತ
ಹೌದು, ಇದೊಂದು ವಿಚಿತ್ರ ಕಾಯಿಲೆ
ಆ ಅಲ್ಪ ತ್ರಪ್ತಿಯಿಂದ ಅವರು ಒಳ್ಳೆಯದೇನೂ ಪಡೆಯುವುದಿಲ್ಲ
ಬದಲಿಗೆ ಅವರೇ ಖಿನ್ನತೆಯಿಂದ ಬಳಲುತ್ತಾರೆ
ಆದರೂ ಅದರಿಂದ ಸುಧಾರಿಸುವುದಿಲ್ಲ
ಪ್ರೋತ್ಸಾಹ ಹೀಗೆಯೇ ಇರಲಿ

Ranjita said...

ಗುರು ಅಣ್ಣ ನಿಜ ಸ್ನೇಹ ಮಾಡೋವಾಗ ಎಚ್ಚರವಹಿಸಬೇಕು .. ಇದು ನನಗೂ ಆದ ಅನುಭವ :(

ಸಾಗರದಾಚೆಯ ಇಂಚರ said...

ರಂಜಿತ,
ಹೌದು, ಸ್ನೇಹ ಮಾಡಿ ಆಮೇಲೆ ನೋವಾದರೆ ಮನಸ್ಸಿಗೆ ತುಂಬಾ ಬೇಜಾರಾಗುತ್ತೆ
ಆದರೆ ಜೀವನದಲ್ಲಿ ಎಲ್ಲ ತರದ ಜನರನ್ನು ನೋಡಲೇಬೇಕು
ದ್ರೋಹ ಆಗುತ್ತೆ ಅಂತ ಸ್ನೇಹ ಮಾಡೋದೇ ನಿಲ್ಸೋಕೆ ಆಗುತ್ತಾ
ಅಭಿಪ್ರಾಯಕ್ಕೆ ಧನ್ಯವಾದಗಳು

sunaath said...

ಗುರುಮೂರ್ತಿಯವರೆ,
ಈ ಲೋಕವು ವಿಚಿತ್ರ ಜನರಿಂದ ತುಂಬಿದೆ. ನಮ್ಮ ಎಚ್ಚರದಲ್ಲಿ ನಾವಿರಬೇಕು. ಎಚ್ಚರಿಕೆಗಾಗಿ ಧನ್ಯವಾದಗಳು.

Snow White said...

ನಿಜ ಸರ್ ನಿಮ್ಮ ಮಾತು ..ಆದಷ್ಟು ಹುಷರಾಗಿರುವುದು ಒಳ್ಳೆಯದು ಎಂದು ನನಗೆ ಅನಿಸುತ್ತೆ ಸರ್ :) ಲೇಖನ ತುಂಬಾ ಚೆನ್ನಾಗಿದೆ :)

ಸಾಗರದಾಚೆಯ ಇಂಚರ said...

ಸುನಾಥ್ ಸರ್
ಲೋಕೋ ಬಿನ್ನ ರುಚಿ ಅಂತಾರಲ್ಲ ಹಾಗೆ
ಒಬ್ಬೊಬ್ಬರು ಒಂದೊಂದು ತರ
ನಾವೇ ಎಚ್ಚರ ತಗೋಬೇಕು
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಹೌದು, ಜಗತ್ತಿನ ಯಾವ ಮೂಲೆಯಲ್ಲಿ ಏನಿರುತ್ತೆ ಗೊತ್ತಾಗೋದು ಕಷ್ಟ
ನಮ್ಮ ಎಚ್ಚರ ನಮಗೆ ಬೇಕು
ಪ್ರೋತ್ಸಾಹ ಹೀಗೆಯೇ ಇರಲಿ

SANTOSH MS said...

Sir,

All are very true incidents and to be frank I have seen and delt with all soughts of people. Very good article to make people aware of their surroundings.

shivu.k said...

ಡಾ.ಗುರುಮೂರ್ತಿ ಸರ್,

ನೀವು ಹೇಳಿದ್ದು ನೂರಕ್ಕೆ ನೂರು ನಿಜ. ನಮ್ಮ ಸುತ್ತ ಇಂಥವರು ಇದ್ದೇ ಇರುತ್ತಾರೆ. ಅದರಲ್ಲೂ ನಮ್ಮ ಪತ್ರಿಕೆ ವಿತರಣೆ ಸ್ಥಳದಲ್ಲಿ ಒಂದು ಪತ್ರಿಕೆಯ ಪ್ರತಿನಿಧಿಯು ಮತ್ತೊಂದು ಪತ್ರಿಕೆಯ ಗುಟ್ಟನ್ನು ತಮಾಷೆಯಾಗಿ ಹೇಳುತ್ತಾನೆ. ನಂತರ ಇವನು ಬಂದು ಅವರ ಬಗ್ಗೆ ಹೇಳುತ್ತಾನೆ. ಇದರ ಉದ್ದೇಶ ಅವರವರ ಪತ್ರಿಕೆಯ ಮಾರಾಟವನ್ನು ನಮ್ಮ ಮೂಲಕ ಹೆಚ್ಚಿಸಿಕೊಳ್ಳಬೇಕೆನ್ನುವುದೇ ಆಗಿರುವುದು. ಇವರ ಬಗ್ಗೆ ಬರೆದರೆ ಅದೇ ದೊಡ್ಡ ಲೇಖನವಾಗುವಷ್ಟಿದೆ.

ಆದ್ರೂ ನೀವು ಹೇಳಿದಂತೆ ಅವರೆಲ್ಲರನ್ನು ಬಿಟ್ಟು ನಾವು ಬದುಕುವಂತಿಲ್ಲ ನೋಡಿ...
ಒಳ್ಳೆಯ ಬರಹ.

ಶಿವಪ್ರಕಾಶ್ said...

ಅವರಿವರ ಮನೆ ಸುದ್ದಿ ನಮಗೆ ಯಾಕೆ, ನಮ್ಮಷ್ಟಕ್ಕೆ ನಾವು ಇದ್ದು ಬಿಡೋಣಾ...
ಹ್ಹಾ ಹ್ಹಾ ಹ್ಹಾ...
ಬಹಳ ಜನ ಹೀಗೆನೇ ಇರೋದು...

ಸವಿಗನಸು said...

ಡಾ.ಗುರು,
ಮನುಷ್ಯರ ಗುಣ ಸ್ವಭಾವದ ಬಗೆ ಒಳ್ಳೆ ಲೇಖನ ಕೊಟ್ಟಿದ್ದೀರ....
ನಿಜ ಈಗ ಬಹಳ ಹುಷರಾಗಿರಬೇಕು....

PARAANJAPE K.N. said...

ನಿಮ್ಮದು ಚಿಂತನೆಗೆ ಹಚ್ಚುವ ಬರಹ, ಹೌದು, ನೀವ೦ದಿದ್ದು ನಿಜ,

Nisha said...

ಒಳ್ಳೆಯ ಬರಹ

ಗೌತಮ್ ಹೆಗಡೆ said...

guranna olle baradde. tilkaladu baala iddu ..

ಬಿಸಿಲ ಹನಿ said...

ಗುರು ಅವರೆ,
ವಿವಿಧ ವ್ಯಕ್ತಿತ್ವಗಳನ್ನು ಹೊಂದಿರುವವರ ಬಗ್ಗೆ ಚನ್ನಾಗಿ ತಿಳಿಸಿದ್ದೀರಿ. ಇಂಥವರನ್ನು ನಾನು ಬಹಳ ಸಾರಿ ನೋಡಿದ್ದೇನೆ. ಇರಲಿ. “ಒಡನೆಯೇ ಇಂಥವರನ್ನು ಗುರುತಿಸಿ ನಡುವೆ ಒಂದು ಸೇತುವೆ ನಿರ್ಮಿಸಿಕೊಳ್ಳುವುದು ಒಳ್ಳೆಯದು ಇಲ್ಲದಿರೆ ನಮ್ಮ ಜೀವನವನ್ನೇ ಹೊಸಕಿ ಹಾಕಿ ಬಿಡುವ ಮಹಾ ಶತ್ರುಗಳು ಇವರು.” ಈ ವಾಕ್ಯದಲ್ಲಿ ಒಂದು ತಪ್ಪಿದೆ. ಸೇತುವೆ ಬದಲಾಗಿ ಬೇಲಿ ಎಂದು ಬಳಸಿ. ಏಕೆಂದರೆ ಸೇತುವೆ ಸಂಪರ್ಕವನ್ನು ಸಾಧಿಸಲು ಇರುವ ಸಾಧನ. ಬೇಲೆ ಸಂಪರ್ಕವನ್ನು ಮುರಿಯುವ ಸಾಧನ. ಈ ವಾಕ್ಯದಲ್ಲಿ ಬೇಲಿ ಎಂದು ಬಳಸಿದಲ್ಲಿ ಆ ವಾಕ್ಯದ ಅರ್ಥ ಸರಿ ಹೋಗುವದು. Hope you don’ mind about it.

ಸಾಗರದಾಚೆಯ ಇಂಚರ said...

Santhosh,

even i also experienced such kind of people in my life. Thanks for the comments

ಸಾಗರದಾಚೆಯ ಇಂಚರ said...

ಶಿವೂ ಸರ್
ಇಂಥಹ ಜನರ ನಡುವೆ ಬದುಕಲೇಬೇಕು,
ಅದು ಅನಿವಾರ್ಯತೆ ಕೂಡಾ
ಆದರೂ ಅವರ ಬಗ್ಗೆ ಒಂದು ಕಣ್ಣಿಟ್ಟರೆ ಒಳ್ಳೆಯದು ಅಲ್ಲವೇ?
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶಿವ ಪ್ರಕಾಶ್ ಅವರೇ,
ಎಷ್ಟೋ ಸಲ ಹಳ್ಳಿಯ ಹೆಂಗಸರು ಹೀಗೆ ಮಾತನಾದೊದನ್ನ ನಾನು ಕೇಳಿದೀನಿ
ಏನೇ ಅದರೂ ನಮ್ಮ ಎಚ್ಚರ ನಮಗೆ ಇರೋದು ಒಳ್ಳೇದು
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸವಿಗನಸು,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಮನುಷ್ಯ ಬೆಳೆದಂತೆಲ್ಲ ಅವನ ಪಾಶವೀ ಗುಣಗಳೂ ಬೆಳೆಯುತ್ತಿವೆ
ನಮ್ಮೊಳಗಿನ ನಮ್ಮನ್ನು ಗುರುತಿಸುವುದೇ ಕಷ್ಟವಾಗಿದೆ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ಪ್ರತ್ಯಕ್ಷವೋ, ಪರೋಕ್ಷವೋ ತುಂಬಾ ಸಲ ಇದರ ಅನುಭವ ನನಗೆ
ಆಗಿದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ನಿಶಾ,
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಗೌತಮ,
ನಿಂಗೆ ಇಷ್ಟ ಆದ್ರೆ ನಂಗೆ ಅದೇ ಖುಷಿ
ಹಿಂಗೆ ಬರ್ತಾ ಇರು

ಸಾಗರದಾಚೆಯ ಇಂಚರ said...

ಬಿಸಿಲ ಹನಿ ಸರ್
ನೀವು ಅಂದಿದ್ದು ನಿಜ, ನನ್ನ ಮನಸ್ಸಿನ ಅರ್ಥವೂ ಅದೇ ಆಗಿತ್ತು
ಆದರೆ ಶಬ್ದ ಸೇತುವೆ ಎಂದು ಬಂದಿದೆ
ಇದೀಗ ಅದನ್ನು ಬದಲಿಸಿ ಬೇಲಿ ಎಂದು ಸರಿ ಮಾಡಿದ್ದೇನೆ
ತಪ್ಪನ್ನು ತಿದ್ದುತ್ತಿರಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

VENU VINOD said...

ಗುರು,
ಇದಕ್ಕೇ ಇರಬಹುದೇನೋ ‘ನಂಬಿದಂತೆ ಇರು ಆದರೆ ನಂಬದೆಲೆ ಇರು’ ಎನ್ನೋ ಮಾತು ಬಂದಿರೋದು... :)ಹೊಗಳಿಕೆಗೆ ಉಬ್ಬದೆ, ಟೀಕೆಗಳಿಗೆ ಕುಗ್ಗದೆ ಇದ್ದರೆ ಇಂತಹವರ ಬೇಳೆ ಬೇಯದು...

ಸಾಗರದಾಚೆಯ ಇಂಚರ said...

ವೇಣು,
ನಿಜಾ, ನಾವು ತಟಸ್ಥ ಮನೋಭಾವ ದವರಾದರೆ
ಹೊಗಳಿ ಹೊನ್ನ ಶೂಲಕ್ಕೆ ಏರಿಸುವವರ ಬಾಯಿ ಸ್ವಲ್ಪ
ನಿಯಂತ್ರಣ ದಲ್ಲಿರುತ್ತದೆ ಅಲ್ಲವೇ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಮನಸು said...

ನಿಮ್ಮ ಮಾತು ಅಕ್ಷರಸಹ ನಿಜ, ನಾವು ಒಪ್ಪುತ್ತೇವೆ ನಮ್ಮನ್ನು ಯೋಚನೆಗೀಡು ಮಾಡುವ ಬರಹ

ಸಾಗರದಾಚೆಯ ಇಂಚರ said...

ಮನಸು
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ತುಂಬಾ ಸಂತೋಷ
ಹೀಗೆಯೇ ಪ್ರೋತ್ಸಾಹ ಇರಲಿ

Ittigecement said...

ಗುರುಮೂರ್ತಿಯವರೆ..

ವಾಸ್ತವಿಕತೆಯ ನೆಲಗಟ್ಟಿನಲ್ಲಿ ಬರೆದ ಲೇಖನ.
ಬದುಕಿನ ಅನುಭವ ಕಲಿಸುವ ಈ ಪಾಠವನ್ನು ತುಂಬಾ ಸೊಗಸಾಗಿ ಬರೆದಿದ್ದೀರಿ.

"ಇದಿರು ಬಣ್ಣಿಸ ಬೇಡ" ಎಂದು ವಚನಕಾರರು ಹೇಳಿದ್ದಾರೆ..

ಪ್ರತಿಯೊಬ್ಬರಿಗೂ ಇಂಥಹ ಜನರು ಸಿಕ್ಕಿರುತ್ತಾರೆ..
ಇದು ನಮ್ಮದೇ ಅನುಭವ, ನಮ್ಮದೇ ಲೇಖನ....

ಸೊಗಸಾದ ಬರಹಕ್ಕೆ ಅಭಿನಂದನೆಗಳು.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಮ್ಮ ಪ್ರೀತಿಯ ಹಾರೈಕೆಗೆ ಅಭಿಪ್ರಾಯಕ್ಕೆ ಧನ್ಯವಾದಗಳು
ನಾವು ಇಂಥಹ ಜನರ ಬಗ್ಗೆ ಎಷ್ಟು ಜಾಗರೂಕರಾಗಿದ್ದರೂ
ಇವರ ನಡುವೆಯೇ ಬದುಕಬೇಕು ಅಲ್ಲವೇ?
ಒಬ್ಬರು ಇಂಥವರು ಸಿಕ್ಕರೆ ನೂರಾರು ಜನ ಹಿತೈಷಿಗಳು ಸಿಗುತ್ತಾರೆ
ಬದುಕು ನಡೆಯುತ್ತಾ ಇರುತ್ತದೆ
ಹೀಗೆಯೇ ಬರುತ್ತಿರಿ

ಸುಧೇಶ್ ಶೆಟ್ಟಿ said...

:) ಚೆನ್ನಾಗಿ ಹೇಳಿದ್ದೀರಿ...

ಸಾಗರದಾಚೆಯ ಇಂಚರ said...

ಸುದೇಶ್,
ಧನ್ಯವಾದಗಳು
ಹೀಗೆಯೇ ಬರುತ್ತಿರಿ

Shweta said...

satyakke bahala hattiravaagide sir,,
thought provoking too.

ಸಾಗರದಾಚೆಯ ಇಂಚರ said...

Shwetha,
thanks for your comments, keep visiting

ಜಿ.ಎಸ್.ಬಿ. ಅಗ್ನಿಹೋತ್ರಿ said...

baraha istavaytu....

ವಿನುತ said...

ಎಚ್ಚರಿಕೆಯ ಮಾತುಗಳು, ಸೊಗಸಾಗಿ ಮೂಡಿಬಂದಿವೆ. ತುಂಬಾ ತಡವಾಗಿ ಬಂದಿದ್ದೇನೆ ಕ್ಷಮೆಯಿರಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಸಾಗರದಾಚೆಯ ಇಂಚರ said...

ಅಗ್ನಿಹೋತ್ರಿ ಸರ್,
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ವಿನುತ,
ನಿಮಗೂ ಹೊಸ ವರುಷದ ಶುಭಾಶಯಗಳು
ತಡವಾಗಿಯಾದರೂ ಬಂದು ಪ್ರೋತ್ಸಾಹಿಸಿದ್ದಿರಲ್ಲ ಅದೇ ಸಂತೋಷ
ಹೀಗೆಯೇ ಬರುತ್ತಿರಿ

ಬಾಲು said...

ಮನುಷ್ಯನ ಮೂಲಭೂತ ಗುಣಗಳನ್ನ ಬದಲಿಸುವುದು ಕಷ್ಟ, ಅಂತಹ ಜನರನ್ನ ಗುರುತಿಸಿ ಅವರಿಂದ ಸುರಕ್ಷಾ ದೂರವನ್ನು ಕಾಯ್ದು ಕೊಳ್ಳೋದು ಕಷ್ಟ ಸಾದ್ಯ. (ಇಂತಹ ಜನ ಅಂತ ನಮಗೆ ಗೊತ್ತಾಗೋ ಹೊತ್ತಿಗೆ ಬಹಳ ತಡ ಆಗಿರುತ್ತೆ)

ಆದರೆ ಒಬ್ಬರ ಒಳ್ಳೆಯ ಗುಣಗಳನ್ನ ಗಮನಿಸಿ ಅದನ್ನ ಹೊಗೊಳೋದು ಒಳ್ಳೆಯ ಕೆಲಸವೆಂದು ಅನ್ನಿಸುತ್ತದೆ.

Paulo Tennis said...

Hi, Great blog. I learn some new things. Keep doing.
Please, visit my blog.

Happy new year!

ಸಾಗರದಾಚೆಯ ಇಂಚರ said...

ಬಾಲು
ಮನ ದುಂಬಿ ಹೊಗಳುವುದು ಬೇರೆ,
ಮನಸ್ಸಿಲ್ಲದೆ ಹೊಗಳುವುದು ಬೇರೆ ಅಲ್ಲವೇ?
ಇದರ ನಡುವಿನ ಅಂತರ ನಮಗೆ ತಿಳಿದರೆ ಒಳ್ಳೆಯದು ಎಂಬುದೇ ಲೇಖನದ ಉದ್ದೇಶ
ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

Dear Paulo,
thanks for the comments, keep visiting

ಜಲನಯನ said...

ಗುರು, ಮಾತು ಮನಸ್ಸಿನ ಕನ್ನಡಿ ಅಂತಾರೆ..ನಿಜ..ಆದರೆ ಅದನ್ನು ಓದಬೇಕು ನೋಡಬಾರದು ಎನ್ನುವುದು ನನ್ನ ಅನ್ನಿಸಿಕೆ. ಅಂದರೆ ಓದುವವನಿಗೆ ಓದುವಾಗ ತಿಳಿದುಕೊಳ್ಳುವ ಸ್ವಾತಂತ್ರ್ಯ ಹೇಗಿರುತ್ತೋ ಹಾಗೇ ಓದಿದ್ದು ಅರ್ಥವಾದದ್ದು ಪರಸ್ಪರ ತಾಳೆಯಾಗುತ್ತವೆಯೋ ಎಂದು ಪುಟ ಹಿಂದಕ್ಕೆ ತಿರುಗಿಸಿ ನೋಡುವ ಸೌಲಭ್ಯವೂ ಇರುತ್ತೆ..ಹಾಗಾಗಿ ಮಾತನ್ನು ಮಾತನಾಡಿದವನನ್ನು ಅರ್ಥೈಸಿಕೊಳ್ಳಲು ಅನುವಾಗುತ್ತೆ. ಬಹಳ ವೈಚಾರಿಕತೆಪೂರ್ಣ ಲೀಖನ....ಸುನಾಥ್ ಸರ್ ಸಹಾ ಇಂತಹುದೇ ಮಂಥನಯೋಗ್ಯ ಲೇಖನ ಬ್ಲಾಗಿಸಿದ್ದಾರೆ...ಹೊಸ ವರ್ಷಕ್ಕೆ ಪ್ರಬುದ್ಧರಿಂದ ಪ್ರಬುದ್ಧ ಪ್ರಸ್ತುತಿ...

ಸಾಗರದಾಚೆಯ ಇಂಚರ said...

ಜಲನಯನ ಸರ್,
ನಿಮ್ಮ ಮಾತು ನಿಜ,
ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅವರವರ
ಭಾವನೆಗೆ ಬಿಟ್ಟದ್ದು ಅಲ್ಲವೇ?
ನಿಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಾಗಳು\
ಹೀಗೆಯೇ ಬರುತ್ತಿರಿ

ಓ ಮನಸೇ, ನೀನೇಕೆ ಹೀಗೆ...? said...

ಗುರು ಅವ್ರೆ....ಸಮಾಜದ ಸತ್ಯವನ್ನು ತುಂಬಾ ಸ್ವಾರಸ್ಯಕರವಾಗಿ ಬರೆದಿದ್ದೀರಿ.ನಿಮ್ಮ ಈ ಲೇಖನ "ಬಿಗ್ ಬ್ರದರ್ " ರಿಯಾಲಿಟೀ ಶೋ ವನ್ನು ನೆನಪಿಸುತ್ತದೆ. ಮನುಷ್ಯರು ಹೇಗೆ ಒಬ್ಬರಿಂದೊಬ್ಬರಿಗೆ ಚಾಡಿ ಹೇಳುತ್ತಾರೆ. ಮುಂದೆ ಪ್ರೀತಿಯಿಂದ ಮಾತನಾಡಿ ಹಿಂದಿನಿಂದ ಅವರ ಬಗೆಗೇ ಹೇಗೆ ಕೆಟ್ಟದಾಗಿ ಮಾತನಾಡುತ್ತಾರೆ...ಎಂಬುದನ್ನು ಅರ್ಥಪೂರ್ಣವಾಗಿ ಬರೆದಿದ್ದೀರಿ.

Sweetie said...

Cityyalli pakkada maneli yaaru irthare antha gothilde irabahudu aadrey aavru yenu halli janakintha kammilla. Avara social circle, relatives & friends.. Avaru kooDa icy-spicy conversations maadthare..
Manushyana swabhaava adhu.. Yellirthivi annodara mele nirdhaaravaagolla..