Monday, May 4, 2009

ಹೃದಯ ಕದ್ದ ಕಳ್ಳಿ...


 -ಗುರು ಬಬ್ಬಿಗದ್ದೆ 

ನನ್ನ ಒಲವ ಬಳ್ಳಿ ನೀ ಹೃದಯ ಕದ್ದ ಕಳ್ಳಿ

ಪ್ರೇಮಪಾಠದಲ್ಲಿ ನನ್ನನ್ನೇ ಗೆದ್ದ ಮಳ್ಳಿ 

ಬಾಳಿನಲ್ಲಿ ಬಂದೆ ಯಾಕೆ ನೀನು ಎನ್ನ ಬಳಿಗೆ

ನಿನ್ನ ಪ್ರೀತಿ ರಾಗದಲ್ಲಿ ಹಾಕಿ ಹೋದೆ ಬೆಸುಗೆ

ಅರಿಯದಾದೆ ನನ್ನೆ ನಾನು ಎಲ್ಲಿ ಹೋದೆ ಸುಂದರಿ

ನಿನ್ನ ಬಿಟ್ಟು ಬದುಕಲಾರೆ ಬಳಿಗೆ ಬಾರೆ ಚಕೋರಿ ... 1


ಮಾತಿನಲ್ಲೆ ಮೌನ ನಿನ್ನ ಮೌನದಲ್ಲೇ ಮಾತಿದೆ 

ನಿನ್ನ ರಸಿಕ ಕಂಗಳು ಮೈಮನದ ಗೀತೆ ಹಾಡಿದೆ

ವಿರಹಿಯಾದೆ ಇನ್ನು ನಾನು ನಿನ್ನ ನೆನಪಿನಾಳದಿ

ಮರುಗದಂತೆ ಮಾಡು ಎನ್ನ ಹರಿಸಿ ಪ್ರೇಮದಾ ನದಿ ... 2


ಮಾಮರದ ಕೋಗಿಲೆ ನೀ ಅರಳಿದಂತೆ ತಾವರೆ

ಚೈತ್ರದ ಕುಸುಮಾಂಜಲಿ ನೀನೇ ಎನಗೆ ಆಸರೆ

ಕಳೆಯದಾದೆ ಕ್ಷಣಗಳನ್ನು ಬಿಟ್ಟು ನಿನ್ನ ಅನುದಿನ

ಸುಳಿಯುವಂತೆ ಮಾಡು ಮನವ ಸದಾ  ನಿನ್ನ ಮೈಮನ ... 3


ಇತ್ತ ನೋಡು ಅತ್ತ ನೋಡು ಎತ್ತ ನೋಡು ನೀನಿರೆ

ನನ್ನ ಚಿತ್ತವೆಲ್ಲ ನಿನ್ನ ಮಡಿಲಿನಲ್ಲೆ ಮಲಗಿರೆ

ಸಹಿಸದಾದೆ ವೇದನೆ ಓಡಿ ಬಾರೆ ಸುಮ್ಮನೆ

ಹೃದಯ ಕದ್ದ ಕಳ್ಳಿ ನೀನು ನನ್ನೇ ನಿನಗೆ ಅರ್ಪಣೆ ...  4

24 comments:

shivu.k said...

ಗುರುಮೂತ್ರಿ ಹೆಗಡೆ ಸರ್,

ಪ್ರೇಮ ಕವಿತೆ ಸಕ್ಕತ್ತಾಗಿದೆ...ಆದ್ರೆ ಇದೇ ಕವಿತೆಯನ್ನು ದೈರ್ಯವಾಗಿ ನಿಮ್ಮ ಶ್ರಿಮತಿಯವರಿಗೆ ತೋರಿಸಿ ಅನುಮತಿ ಪಡೆದಿದ್ದೀರಾ..?[ತಮಾಷೆಗೆ]

ಧನ್ಯವಾದಗಳು..

ಸಾಗರದಾಚೆಯ ಇಂಚರ said...

ಇದು ಮದುವೆಗೆ ಮುಂಚೆಯೇ ಬರೆದ ಕವಿತೆ, ಶ್ರಿಮತಿಯವರಿಗಾಗಿಯೇ ಬರೆದದ್ದು,
ಓದಿ ಕಮೆಂಟಿಸಿದ್ದಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಮನಸು said...

ನಿಮ್ಮ ಕವನ ಪ್ರೇಮಮಯವಾಗಿದೆ.... ನಿಮ್ಮ ಹೃದಯಯ ಕದ್ದವರು ನಿಮ್ಮೊಂದಿಗೆ ಇದ್ದಾರಲ್ಲಾ ಬಿಡಿ ಈಗೇನು ತೊಂದರೆ ಇಲ್ಲ...ಹ ಹ ಹ ಎಲ್ಲಾಸಾಲುಗಳು ಚೆನ್ನಾಗಿವೆ ಹಾಗು ಪ್ರಾಸಬದ್ಧವಾಗಿವೆ........
ಮತ್ತಷ್ಟು ಕವನಗಳು ಬರಲೆಂದು ಆಶಿಸುತ್ತೇವೆ.
ಧನ್ಯವಾದಗಳು...

Umesh Balikai said...

ಕವಿತೆ ಚೆನ್ನಾಗಿದೆ ಗುರುಮೂರ್ತಿ ಸರ್, ಹೃದಯ ಕದ್ದ ಕಳ್ಳಿ ಈಗ ನಿಮ್ಮ ಬಾಳನ್ನು ಬೆಳಗುತ್ತಿರುವುದು ಸಂತಸದ ಸಂಗತಿ. ಹೀಗೇ ಹರಿಯುತ್ತಿರಲಿ ನಿಮ್ಮ ಪ್ರೇಮಕವನ ಧಾರೆ :)

PARAANJAPE K.N. said...

ಗುರುಗಳೇ
ಚೆನ್ನಾಗಿದೆ ನಿಮ್ಮ ಕವನ. ಮದುವೆಗೆ ಮುನ್ನ ಇನ್ನು ಏನೇನು ಕವನ ಬರೆದಿದ್ದಿರೋ ಅವನ್ನೆಲ್ಲ ಪ್ರಕಟಿಸಿಬಿಡಿ. ಓದುವ ಭಾಗ್ಯ ನಮ್ಮದಾಗಲಿ.

ಶಿವಪ್ರಕಾಶ್ said...

ನೀವು ಹೃದಯ ಕದ್ದವರ, ಮನಗೆದ್ದ ಕಳ್ಳ ??
:) ಬೇಜಾರ ಮಾಡ್ಕೋಬೇಡಿ, ತಮಾಷೆಗೆ ಅಂದೆ.
ಚನ್ನಾಗಿದೆ :)

ಸಾಗರದಾಚೆಯ ಇಂಚರ said...

ಮನಸು,
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ನಿಮ್ಮ ಹಾರೈಕೆ ಸದಾ ಇರಲಿ ,

ಸಾಗರದಾಚೆಯ ಇಂಚರ said...

ಉಮೇಶ ಸರ್,
ತಮ್ಮ ಹಾರೈಕೆಗೆ ಒಂದು ಥ್ಯಾಂಕ್ಸ್ , ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ಮದುವೆಗೆ ಮುನ್ನ ಬರೆದ ಕವನಗಳನ್ನು ಮುಂದೆ ಪ್ರಕಟಿಸುತ್ತಿರುತ್ತೇನೆ. ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವಪ್ರಕಾಶ್,
ನೀವು ಅಂದಿದ್ದು ನಿಜ, ಅವರ ಮನ ವನ್ನು ನಾನು ಗೆದ್ದಿದಿನಲ್ಲ, ಅದೇ ಸೌಭಾಗ್ಯ ಆಲ್ವಾ,
ಹೀಗೆ ಬರ್ತಾ ಇರಿ,

sunaath said...

ನಾಲ್ಕೇ ನುಡಿಗಳಲ್ಲಿ ಮನದೊಳಗಿನ ಒಲವನ್ನೆಲ್ಲ ಸೂರೆ ಮಾಡಿಬಿಟ್ಟಿದ್ದೀರಿ!

ಸಾಗರದಾಚೆಯ ಇಂಚರ said...

ಸುನಾಥ ಸರ್,
ಇಷ್ಟವಾಗಿದ್ದಕ್ಕೆ ತುಂಬಾ ಧನ್ಯವಾದಗಳು,

ಬಿಸಿಲ ಹನಿ said...

ಆಹಾ, ಏನ್ರೀ ಮತ್ತೆಲ್ಲಿ ಜಾರುತಿದೆ ನಿಮ್ಮ ಮನವು?

ಸಾಗರದಾಚೆಯ ಇಂಚರ said...

ಬಿಸಲ ಹನಿ,
ಇನ್ನೆಲ್ಲಿ ಜಾರುತ್ತೆ ಮನ ಹೇಳಿ, ಅಭಿಪ್ರಾಯಕ್ಕೆ ಧನ್ಯವಾದಗಳು

ಧರಿತ್ರಿ said...

ಹೃದಯ ಕದ್ದ ಕಳ್ಳಿ...?! ಯಾರು ಅಂತ ಕೇಳಕೆ ಹೊರಟ್ರೆ 'ಮದುವೆಗೆ ಮೊದಲೇ ಶ್ರೀಮತಿಗೆ ಬರೆದದ್ದು' ಅಂತ ಹೇಳ್ತಾ ಇದ್ದೀರಲ್ಲಾ..ಸರ್!!ನಿಮ್ಮ ಹೃದಯ ಕದ್ದ ಚೋರಿ ಚೋರನಿಗಾಗಿ ಏನೂ ಬರೆದಿಲ್ವಾ? ಚೆನ್ನಾಗಿದೆ ಕವನ. ಅಭಿನಂದನೆಗಳು
-ಧರಿತ್ರಿ

ಸಾಗರದಾಚೆಯ ಇಂಚರ said...

ಧರಿತ್ರಿಯವರೇ,
ಹ್ರದಯ ಕದ್ದ ಕಳ್ಳಿಯ ಕವನಗಳನ್ನು ಒಮ್ಮೆ ಪ್ರಕಟಿಸುತ್ತೇನೆ, ಧನ್ಯವಾದಗಳು, ಹೀಗೆಯೇ ಬರುತ್ತಿರಿ

ಏಕಾಂತ said...

ಕವನ ತುಂಬಾ ಆಪ್ತವಾಗಿದೆ. ಮೆಚ್ಚಿ ಬರೆದಿದ್ದೀರಿ. ಕೊನೆಯ ಎರಡು ಸಾಲುಗಳು ಹಿಡಿಸಿದವು.

ಸಾಗರದಾಚೆಯ ಇಂಚರ said...

ಏಕಾಂತ್ ಸರ್,
ಬ್ಲಾಗ್ ಗೆ ಸ್ವಾಗತ, ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ

ಕ್ಷಣ... ಚಿಂತನೆ... said...

ಸರ್‍, ಈ ಪ್ರೇಮ ಕವಿತೆ ಅಲ್ಲಲ್ಲಿಯ ಪ್ರಾಸದೊಂದಿಗೆ ಸೇರಿ ಮಧುರವಾಗಿದೆ.

ಸಾಗರದಾಚೆಯ ಇಂಚರ said...

ಕ್ಷಣ ಚಿಂತನೆ ಸರ್,
ತುಂಬಾ ಥ್ಯಾಂಕ್ಸ್, ಹೀಗೆ ಬರ್ತಾ ಇರಿ

ಮಿಥುನ ಕೊಡೆತ್ತೂರು said...

ಚೆಂದವಿದೆ.

ವಿನುತ said...

ಸು೦ದರ ಪ್ರೇಮ ನಿವೇದನೆ.

ಸಾಗರದಾಚೆಯ ಇಂಚರ said...

@ ಮಿಥುನ್
ಧನ್ಯವಾದಗಳು ಮಿಥುನ್ ಹೀಗೆಯೇ ಬರುತ್ತಿರಿ

@ ವಿನುತಾ
ಧನ್ಯವಾದಗಳು, ಹೀಗೆಯೇ ಬರುತ್ತಿರಿ

SHUBHA said...

HRUDYA DA MAATU MAUNA....HELALU ASADYA...SADHA KUSHIYAGIRU..