Friday, January 20, 2012

ಈ ಸಡಗರ ಎಲ್ಲವೂ ನನಗಾಗಿ, ನಾನೇ ಇಲ್ಲದಿದ್ದರೆ?????


      

ಅಂದು ನನ್ನ ಎರಡನೇ ವಧು ಪರೀಕ್ಷೆ. ವರನ ಮುಖದಲ್ಲಿ ಪ್ರಪಂಚವನ್ನೇ ಗೆದ್ದ ಅಲೆಗ್ಸಾಂಡರನ ಸಂತಸ. ಆತ ನನ್ನನ್ನು ಮದುವೆಯಾಗಲು ಬಂದಿದ್ದಾನೋ ಅಥವಾ ನನ್ನ ಸ್ವಾತಂತ್ರ್ಯ ಹರಣಕ್ಕೆ ಟೊಂಕ ಕಟ್ಟಿದ್ದಾನೋ ಇಂದಿಗೂ ತಿಳಿಯಲೇ ಇಲ್ಲ. ಮನೆಯಲ್ಲಿ ಸಂಭ್ರಮದ ವಾತಾವರಣ. 

ಸಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಕೋಣ ಬಲಿ ನಡೆಯುತ್ತಿದ್ದಾಗ ಸಮಸ್ತ ಜನತೆಗೆ ಸಂಭ್ರಮದ ವಾತಾವರಣವಂತೆ, ಆದರೆ ಕೋಣಕ್ಕೆ............... 

ಇಲ್ಲಿ ನಾನೂ ಕೂಡಾ ಹರಕೆಯ ಕುರಿ ಯಂತೆ ಎಂದು ಅನ್ನಿಸುತ್ತಿತ್ತು. ಈ ಸಂಭ್ರಮ, ಈ ಸಂತೋಷ, ಈ ಸಡಗರ ಎಲ್ಲವೂ ನನಗಾಗಿ, ನಾನೇ ಇಲ್ಲದಿದ್ದರೆ????? ಇಂಥಹ ಹುಚ್ಚು ಮನಸ್ಸಿನ ಹತ್ತು ಮುಖಗಳು ನನಗಿವೆ ಆದರೆ ಅವೆಲ್ಲ ಕ್ಷಣ ಮಾತ್ರ. ಆದರೆ ಅಮ್ಮನ ಸಂಭ್ರಮ ಮಾತ್ರ ಇಂದಿಗೂ ಮರೆಯಲಾರದ ಕ್ಷಣ. ಅವಳು ಅಂದು ಸಂತೋಷದ ಖನಿ ಆಗಿದ್ದಳು.

 ಬಹುಷ: ನನಗೆ ಜೀವ ಇರದೆ ಇದ್ದಿದ್ದರೆ ಅಂದೇ ನನ್ನ ಮದುವೆಯ ಜೊತೆಗೆ ಬಾಳಂತನ ವನ್ನು ಮುಗಿಸಿಬಿಡುತ್ತಿದ್ದರೇನೋ???? 

ಅಂಥಹ ತರಾ  ತುರಿ ಅಲ್ಲಿ ಕಾಣುತ್ತಿತ್ತು.

ಮದುವೆ ಯಾಕೆ ಬೇಕು ಎಂಬುವುದರ ಬಗೆಗೆ ಇಂದಿಗೂ ಸರಿ ಉತ್ತರ ನನಗೆ ಯಾರಿಂದಲೂ ಸಿಗಲಿಲ್ಲ . ಆಮ್ಮನಿಗೆ ಅದೊಂದು ಪದ್ದತಿ. ಅಪ್ಪನಿಗೆ ಅದೊಂದು ಕಾಲಕ್ಕೆ ತಕ್ಕಂತೆ ನಡೆಯಲೇಬೇಕಾದ ಕ್ರಿಯೆ. ಇನ್ನು ಮದುವೆಯಾದ ಗೆಳೆಯ ಗೆಳತಿಯರಿಗೆ ಅರ್ಥವೇ ಗೊತ್ತಿರದ ಒಂದು ಹನಿಮೂನ್ ಪ್ರಯಾಣ. ಪೆಟ್ರೋಲ್ ಇರುವ ತನಕ ಓಡುವ ಬಸ್ ಪ್ರಯಾಣ. ಅಜ್ಜನಿಗೆ ಅದೊಂದು ಜವಬ್ದಾರಿ ತರುತ್ತದೆ ಎಂಬುವ ನಂಬಿಕೆ. ಇನ್ನು ಅಜ್ಜಿಗೆ ಜವಾಬ್ದಾರಿ ಕಳೆದುಕೊಂಡ ಸಮಾಧಾನ. ಮನೆಯಲ್ಲಿ ಕಿರಿಯ ತಂಗಿ ಇದ್ದರೆ, ಅವಳಿಗೆ ಅಕ್ಕನ ಮದುವೆ ಬೇಗ ಆದರೆ ಮುಂದಿನ ತಯಾರಿ ತನ್ನದೇ ಎಂಬ ಅವ್ಯಕ್ತ ಸುಖ. ಒಟ್ಟಿನಲ್ಲಿ ಮದುವೆ ಯ ನಿಜವಾದ ಅವಶ್ಯಕತೆಯ ಬಗೆಗೆ ಎಲ್ಲಿಯೂ ಸಮರ್ಪಕ ನಿಲುವುಗಳು ಕಂಡಿಲ್ಲ. 

ಯಾವುದೋ ಕಾಲದಲ್ಲಿ ಶ್ರಾದ್ದದ ದಿನ ಮನೆಯ ಬೆಕ್ಕು ಗಲಾಟೆ ಮಾಡುತ್ತಿತ್ತಂತೆ. ಅದನ್ನು ಬುಟ್ಟಿಯಲ್ಲಿ ಮುಚ್ಚಿಡುತ್ತಿದ್ದರಂತೆ. ತದ ನಂತರ ಅದೆಷ್ಟೋ ತಲೆಮಾರು ನಂತರವೂ ಬೆಕ್ಕು ಮನೆಯಲ್ಲಿ ಇಲ್ಲದಿದ್ದರೂ ಪಕ್ಕದ ಮನೆಯಿಂದ ತಂದು ಶ್ರಾದ್ದ ದ ದಿನ ಮುಚ್ಚಿ ಇಡುತ್ತಿದ್ದರಂತೆ. ಅಲ್ಲಿ  ಬೆಕ್ಕು ಯಾಕೆ ಬೇಕು ಎಂಬುವುದು ಯಾರಿಗೂ ಬೇಕಿರಲಿಲ್ಲ ಮತ್ತು ತಿಳಿಯುವ ವ್ಯವಧಾನವೂ ಇರಲಿಲ್ಲ, ಆದರೆ ಒಂದಂತೂ ನಿಜ, ದೊಡ್ಡವರ ಮಾತಿಗೆ ಎದುರಾಡದೇ ಹೇಳಿದ್ದನ್ನು ಮಾಡುವ ಮನಸ್ಸು ಹಿಂದಿನವರಿಗೆ ಇತ್ತು. ಸಂಪ್ರದಾಯ ದ ನೆರಳಿನಲ್ಲಿ ಮೂಢನಂಬಿಕೆ ಜಾಡ್ಯ ಅವರಲ್ಲಿ ಅಂಟಿ ಕೊಂಡಿತ್ತು. ನಾನು ಆ ಜಾತಿಯವಳಲ್ಲ. ನನಗೆ ಅವಶ್ಯಕತೆಯಿಲ್ಲದೆ ಯಾವ ಬೆಕ್ಕು ಇರುವುದು ಬೇಕಿಲ್ಲ. 

ಅಮ್ಮ ನಿಗೆ ನನಗೆ ಇದೇ ದ್ವಂದ್ವ ದ ಬಗೆಗೆ ಸಿಕ್ಕಪಟ್ಟೆ ಜಗಳವಾಗಿ ಅಮ್ಮ ಕಣ್ಣೀರು ಹರಿಸಿದಾಗ (ಅದು ಅವಳ ಭ್ರಮ್ಹಾಸ್ತ್ರವೂ ಹೌದು) ನಾನೇ ಮಾತಿಗೆ ಮಾತು ಬೆಳಸದೇ ಮೌನಕ್ಕೆ ಶರಣಾಗಿ ಬಂದಿದ್ದೇನೆ. 

ಆ ದಿನ ಮದುಮಗ ನಿಗೆ ನನ್ನ ಪ್ರತಿಭೆಗಿಂತ ಮುಖ್ಯವಾಗಿ ನನ್ನ ಸೌಂದರ್ಯ ಬೇಕಾಗಿತ್ತು. ಸೀರೆ ಉಟ್ಟು ಹಣೆಗೆ ಕುಂಕುಮ ಇಟ್ಟು ಪಕ್ಕಾ ದೇವಿ ಜಾತ್ರೆಯಲ್ಲಿ ಕಾಣುವ ದೇವಿಯ ನೋಡಲು ಆತ ಕಾತರನಾಗಿದ್ದ. ಅಂತೂ ಅಮ್ಮನ ಮಾತಿಗೆ ಎದುರಾಡದೇ ಒಲ್ಲದ ಮನಸ್ಸಿನಿಂದ ಸೀರೆ ಉಟ್ಟು  ಕಾಫಿ  ಹಿಡಿದು ಕೊಂಡು ಬಂದು ಎಲ್ಲರಿಗೂ ಕೊಟ್ಟೆ. ಅವನ ಕಣ್ಣುಗಳು ನನ್ನೇ ನೋಡುತ್ತಿದ್ದವೋ ಇಲ್ಲ ತಿನ್ನುತ್ತಿದ್ದವೋ ನಾ ಕಾಣೆ. ಆದರೆ ಇದೊಂದು ಅಸಹನೀಯ ಕ್ಷಣ ಮಾತ್ರ ಹೌದು. ಎಲ್ಲ ಮಾತುಕತೆಗಳು ಮುಗಿದ ಮೇಲೆ ವರ ಮಹಾಶಯ ನಿಗೆ ನನ್ನೊಂದಿಗೆ ಮಾತನಾಡುವ ತವಕ. ಅಂತೂ ಇನ್ನೊಂದು ಪ್ರಶ್ನೆ ಪತ್ರಿಕೆ ಸಿದ್ದವಾಗಿತ್ತು, ಉತ್ತರ ಪತ್ರಿಕೆ ಕಾಯುತ್ತಿತ್ತು. ಬರೆಯುವ ಕೆಲಸ ನನ್ನದಾಗಿತ್ತು ಅಷ್ಟೆ.......

ಆ ದಿನ ಇನ್ನೂ ನೆನಪಿದೆ, ಆತ ಕೇಳಿದ್ದಾದರೂ ಏನು?  ನೀವೆ ಓದಿ ನಮ್ಮಿಬ್ಬರ ನಡುವಿನ ಶಾಂತಿ (ಅಲ್ಲಲ್ಲ ವಾಂತಿ) ಮಾತುಕತೆ.....

ಆದರೆ ಆ ದಿನದ ಮಾತುಕತೆ ಆರಂಬಿಸಿದ್ದು ಮಾತ್ರ ನಾನೆ....

ವಧು : ನಿಮಗೆ ಯಾವ ತರದ ಹುಡುಗಿ ಬೇಕು ಎನ್ನುವುದನ್ನು ನೇರವಾಗಿ ಹೇಳಿದರೆ ಅನುಕೂಲ. ಸುಮ್ಮನೆ ಸುತ್ತಿ ಬಳಸಿ ಮಾತನಾಡಿ ಇಬ್ಬರ ಸಮಯವೂ ವ್ಯರ್ಥ ಮಾಡುವುದು ಬೇಡಾ...... (ಹುಡುಗ ತಬ್ಬಿಬ್ಬು, ಬಾಣದಂತೆ ಬಂದ ಮಾತಿಗೆ ಉತ್ತರವಿಲ್ಲದೆ ಒದ್ದಾಡಿದಂತೆ ತೋರಿತು)
ವರ : ನಿಮ್ಮ ನೇರ ಮಾತು ಹಿಡಿಸಿತು (ಬೇರೆ ದಾರಿ ಇಲ್ಲ ಹಾಗೆ ಹೇಳದೆ :) ), ಆದರೆ ಕೆಲವೊಮ್ಮೆ ನೇರ ಮಾತುಗಳು ಒಳ್ಳೆಯದಲ್ಲ. ಸ್ವಲ್ಪ  ಗೌರವ ಇದ್ದರೆ ಒಳ್ಳೆಯದಲ್ವೆ? ನಿಮ್ಮಂತೆ ನೇರ ಮಾತುಗಳನ್ನು ಆಡಲು ನನಗೂ ಬರತ್ತೆ. ಆದರೆ ವಿಷಯ ಆದಲ್ಲ, ಇಲ್ಲಿ ನಮ್ಮಿಬ್ಬರ ನಡುವಿನ ಅಹಮ್ ಗೆ ಸಮಯದ ಅಭಾವ ಇದೆ, ನಿಮ್ಮ ಮುಖದ ಮೇಲೆ ಎಷ್ಟು ಮುಗ್ಧತೆ ತೋರುತ್ತದೆಯೋ ಮಾತಿನಲ್ಲಿ ಅಷ್ಟೆ ಮೆಣಸಿದೆ. ಯಾಕೆ ಹೀಗೆ ನೀವು? ಮನಸ್ಸಿನಲ್ಲಿ ಏನಾದರೂ ನೋವಿದ್ದರೆ ಹೇಳಿ?????  
ವಧು : (ಎಲ ಇವನಾ, ಬುಡಕ್ಕೆ ಕೈ ಹಾಕ್ತಾನಲ್ಲ, ನನ್ನ ನೋವನ್ನ ನಾನೇ ಅರ್ಥ ಮಾಡಿಕೊಂಡಿಲ್ಲ, ಇನ್ನು ನೀನು ಏನು ಮಾಡ್ಕೋಳೋದು) ನನ್ನ ಬಗ್ಗೆ ನಿಮ್ಮ ಕನಿಕರ ನೋಡಿ ಸಂತೋಷ ಆಯಿತು, ಆದರೆ ಇನ್ನೊಬ್ಬರ ಕನಿಕರ ದ ಭಿಕ್ಷೆ ನನಗೆ ಬೇಕಿಲ್ಲ. ನಾ ಹೇಗಿದ್ದೇನೋ ಹಾಗೆ ಸ್ವೀಕರಿಸಿದರೆ ಸದಾ ನಗೆಯ ಖನಿ ನಾನು, ಇಲ್ಲದಿರೆ  ಬಾಗಿಲು ತೆರೆದಿದೆ, ಅಥಿತಿ ಹೋಗಬಹುದು (ಸ್ವಲ್ಪ ಖಡಕ್ ಆದೆ ಎನ್ನಿಸುತ್ತಿತ್ತು).
ವರ: ನಿನ್ನಂತ ಹೆಣ್ಣನ್ನು ಕಟ್ಟಿಕೊಳ್ಳುವ ಅವಶ್ಯಕತೆ ನನಗೂ ಇಲ್ಲ. ಮದುವೆ ಎಂಬುದು ನಿನಗೆ ಆಟ ಆಗಿರಬಹುದು ಆದರೆ ನನಗಲ್ಲ. ನಿನಗೆ ಮದುವೆ ಆಗುವುದು ಕನಸೇ ಸರಿ..... ( ಏನು ಮಹಾ ಚಂದ್ರಶೇಖರ್ ಸ್ವಾಮೀಜಿಗಳ ಭವಿಷ್ಯ ಇವಂದು , ಸತ್ಯ ಆಗಿಬಿಡತ್ತೆ ) 

ಆದರೆ ಆ ಕ್ಷಣದಲ್ಲಿ ಆ ಭವಿಷ್ಯ ಸತ್ಯ ಆಗಲಿ ದೇವರೇ ಎಂದು ಪ್ರಾರ್ಥಿಸಿದ್ದು ಸುಳ್ಳಲ್ಲ.

ಅದೇ ಅಮ್ಮ ಮಗಳ ದ್ವಂದ್ವಕ್ಕೆ ನಾಂದಿ ಹಾಡಿದ ದಿನ. ಅಮ್ಮನಿಗೆ ಹೇಳಿದೆ, ”ನನ್ನ ಮದುವೆಯ ಬಗೆಗೆ ಕನಸು ಬೇಡಾ. ನನಗೆ ಮದುವೆ ಎನ್ನುವುದು ಅವಶ್ಯಕತೆ ಎನಿಸಿಲ್ಲ. ನೋಡಿದ ಎಲ್ಲ ವರಗಳಿಗೆ ಸೌಂದರ್ಯ ಪ್ರಜ್ನೆ ಇದೆಯೇ ಹೊರತೂ ಕಲೆಯ ಮೇಲೆ ಯಾವ ಅಕ್ಕರೆ ಇಲ್ಲ. ಅವರು ನನ್ನ ಕಲೆಯ ”ಕೊಲೆ” ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಬದುಕಿಗೆ ಗುರಿ ಬೇಕು, ಗುರಿಗೆ ಸಮಯ ಬೇಕು, ಇದೆರಡನ್ನು ಕಿತ್ತುಕೊಳ್ಳುವ ಮದುವೆಯ ಬಂಧನ ನನಗೆ ಬೇಕಿಲ್ಲ, ಈ ವಿಷಯದಲ್ಲಿ ನನ್ನ ನಿರ್ಣಯವೇ ಅಂತಿಮ”.  

ಅಮ್ಮನ ಕಣ್ಣುಗಳಲ್ಲಿ ನೀರು ಸುರಿಯುವುದು ಕಾಣುತ್ತಿತ್ತು. ಆದರೆ ಅದೇ ಕಣ್ಣೀರಿಗೆ ನನ್ನನ್ನು ತೇಲಿಸಿ ಬಿಡುವ ಶಕ್ತಿ ಇದೆ ಎಂದು ಗೊತ್ತಿದ್ದೇ ಅಂದು ಆ ನಿರ್ಧಾರ ಮಾಡಿದ್ದೆ.

ಇನ್ನು ಮದುವೆ ನನಗೆ ಇಷ್ಟವಿಲ್ಲ ಎನ್ನುವುದರ ಬಗೆಗೆ ಅಮ್ಮ ನನ್ನ ನಡುವೆ ಮಿನಿ ಮಹಾಯುದ್ಧವೇ ನಡೆದಿದೆ. ಅದೊಂದು ಶೀತಲ ಸಮರ. ಅಮ್ಮನ ಸ್ಥಾನದಲ್ಲಿ ಅವಳು ಸರಿ, ಮಗಳ ಜಾಗದಲ್ಲಿ ನಾನು ಸರಿ, ಈ ದ್ವಂದ್ವಗಳ ಯುದ್ದವನ್ನು ಮುಂದಿನ ವಾರ ಮುಂದುವರೆಸುತ್ತೇನೆ. ಅಲ್ಲಿಯ ತನಕ ಕಾಯುತ್ತೀರಲ್ಲ.

20 comments:

ಚಿತ್ರಾ said...

ಗುರು ,
ತುಂಬಾ ದಿನಗಳ ನಂತರ ಇಲ್ಲಿ ಬಂದೆ , ಓದಿದೆ ಖುಷಿಪಟ್ಟೆ ! ಹೆಚ್ಚಿನ ಮನೆಗಳಲ್ಲಿ ನಡೆಯುವುದನ್ನೇ ಚಂದವಾಗಿ ಬರೆದಿದ್ದೀಯಾ. ಬಹಳಷ್ಟು ತಾಯಿ -ಮಗಳ ನಡುವೆ ಇಂಥಾದ್ದೇ ಸಂದರ್ಭಗಳು ಬಂದಿರುತ್ತವೆ. ಪರೀಕ್ಷೆಯಲ್ಲಿ ಕೆಲವೊಮ್ಮೆ ಹುಡುಗಿಯೇ ಗೆದ್ದಿರಬಹುದಾದರೂ .. ಕೊನೆಗೆ ನಿಜವಾಗಿಯೂ ಜೀವನದಲ್ಲಿ ಪರಿಸ್ಥಿತಿಗೆ ಸೋಲುವುದು ಹುಡುಗಿಯೇ ಆಗುವುದು ಮಾತ್ರ ವಿಷಾದ !
ಆತ್ಮೀಯ ಬರಹ !

sunaath said...

ಕಾತುರತೆಯಿಂದ ಕಾಯುತ್ತೇನೆ!

V.R.BHAT said...

ಸಣ್ಣದೊಂದು ಬಿನ್ನಹ ನಿಮ್ಮಲ್ಲಿ, ನಾನು ಅಂಟಿಸಿಕೊಂಡ ಅಪ್ಲಿಕೇಶನ್ ಸಾಫ್ಟ್ ವೇರ್ ಒಂದು ನಿಮ್ಮ ಮೇಲ್ ಲಿಸ್ಟ್ ನಲ್ಲಿರುವ ಯಾರ್ಯಾರಿಗೋ ನನ್ನ ಬ್ಲಾಗ್ ಲಿಂಕ್ ಕಳಿಸಿದೆಯೆಂಬ ಆರೋಪ ಬಂದಿದೆ, ಅದನ್ನೀಗ ತೆಗೆದಿದ್ದೇನೆ, ಅವರಿಗೆ ಸಾಧ್ಯವಾದರೆ ತಿಳಿಸಿಬಿಡಿ[ನಾನು ಕೆಲವರಿಗೆ ಆಗಲೇ ತಿಳಿಸಿದ್ದೇನೆ]. ಚಿಂತನೆಗೆ ಒಳಪಡಿಸುವ ಬರಹ. ಸೋಲು-ಗೆಲುವು ಜೀವನದ ಸಹಜಗತಿಗಳು. ಒಲವಿನಿಂದ ಹೊಂದಿಕೊಳ್ಳುವುದು ಮುಖ್ಯವಾಗಿ ಬೇಕಾದ ಅಂಶ.

ಜಲನಯನ said...

ಮಾತು ಕತೆ ಬಹಳ ಇಂಟರೆಸ್ಟಿಂಗಾಗಿದ್ವು ಗುರು...ಅಂತೂ ಗುರ್- ಹುಡಿಗೀನಾ ಗುರುಗೆ ದಕ್ಕಿಸಿದ್ದು ಯಾವಾಗ ಅನ್ನೋದನ್ನ ಓದೋ ಕಾತುರ...
ಚನ್ನಾಗಿದೆ...

ಸುಬ್ರಮಣ್ಯ said...

:-)

Shruthi B S said...

ಇಷ್ಟವಾಯಿತು...ಸಾಮಾನ್ಯವಾಗಿ ಒಮ್ಮೆಯಾದರೂ ಹೆಣ್ಣು ಈ ರೀತಿ ಯೋಚಿಸಿರುತ್ತಾಳೆ. ಮದುವೆ ಅವಶ್ಯಕತೆ ತನಗಿಲ್ಲ, ತಾನು ಸ್ವತ೦ತ್ರವಾಗಿ ಬದುಕಬಲ್ಲೆ ಎ೦ದುಕೊಳ್ಳುತ್ತಾಳೆ. ಅದನ್ನು ಇಲ್ಲಿ ಬಹಳ ಸಮರ್ಪಕವಾಗಿ ತೋರಿಸಿದ್ದೀರಿ.....:)

SANTOSH MS said...

Dear Guru Sir,

Good article.Nicely written and expressed.

ಸೀತಾರಾಮ. ಕೆ. / SITARAM.K said...

chendada baraha

Swarna said...

ಮುಂದಿನಭಾಗ ಪ್ಲೀಸ್
ಸ್ವರ್ಣಾ

Nagendra hegde said...

ella vaakyanoo mansig mudtu bava, cholo barde.. mattu bari

ದಿನಕರ ಮೊಗೇರ said...

chennaagide sir.......
mundina bhaagakke kaayuvantide........

Ashok.V.Shetty, Kodlady said...

ಗುರು ಸರ್.....

ಇಂಟರೆಸ್ಟಿಂಗ್ ...ಇಂಟರೆಸ್ಟಿಂಗ್ ..ಇಂಟರೆಸ್ಟಿಂಗ್ ...ಮುಂದಿನ ಭಾಗಕ್ಕೆ ವೈಟಿಂಗ್..ವೈಟಿಂಗ್.ವೈಟಿಂಗ್.

Poo............:) said...

Nice One....:)

ರಾಜಿಲೋಕೇಶ್ said...

Lekhana tumba chennagide...
please visit my blog..

Sushma Sindhu said...

ಬಹಳ ಕಡೆ ನಡೆಯುವ ಚಿತ್ರಣವನ್ನೂ , ಅಲ್ಲಿನ ತುಮುಲಗಳನ್ನು ನೈಜವಾಗಿ ನಿರೂಪಿಸಿದದ್ದೀರಿ ಗುರು ಸರ್.. :)
~ಸುಷ್ಮ

rashmi said...

ಇಂತಹ ಸಂದರ್ಭಗಳಿಗೆ ಸಾಕ್ಷಿಯಾಗಿದ್ದೆ.ಬಹಳ ಸೊಗಸಾದ ನಿರೂಪಣೆ.ಧನ್ಯವಾದಗಳು

rashmi said...

ಇಂತಹ ಸಂದರ್ಭಗಳಿಗೆ ಸಾಕ್ಷಿಯಾಗಿದ್ದೆ.ಬಹಳ ಸೊಗಸಾದ ನಿರೂಪಣೆ.ಧನ್ಯವಾದಗಳು

Sharada said...

Tumba swarasyakaravaagi barediddeera. Aadare arambhadalli swalpa gondala aytu. Idu kalapanika katheyo athava nimage gottiruva hudugiya atmakatheyo?

KalavathiMadhusudan said...

tumbaa chennaagide sir nimma niroopana shaili.maduve nantarave javaabdaarigalu shuruvaagodu annodanna tandetaayi aaa kshanadalli maretiruttaare anisette.paristhiti haage irattallva...ok..nice

MPPRUTHVIRAJ KASHYAP said...

"ಮದುವೆ ಯಾಕೆ ಬೇಕು ಎಂಬುವುದರ ಬಗೆಗೆ ಇಂದಿಗೂ ಸರಿ ಉತ್ತರ ನನಗೆ ಯಾರಿಂದಲೂ ಸಿಗಲಿಲ್ಲ".
Prathi kaalada yuva janaralli eluva maamoolu prashne maduve annodu shastra,nambike,paddathi ellavannu meeridud. adakke adarade aada ondu paavithrathe mathhu adarade aada ondu arthavide.

Innu baruva somavaradolage nanna blog alli ondu article haakuve omme nodi nimma prashnege uttara sikkidaru sigabahudu dhanyavaadagalu.

http://mppruthviraj1911.blogspot.in/