Friday, August 28, 2009

ಸ್ವೀಡಿಷ್ ಕಲಾವಿದೆಗೆ ಒಲಿದ ಓಡಿಸ್ಸಿ ನ್ರತ್ಯ


- ಗುರು ಬಬ್ಬಿಗದ್ದೆ

(ಈ ಲೇಖನವನ್ನು ಪ್ರಕಟಿಸಿದ ''ದಟ್ಸಕನ್ನಡ.ಕಾಮ್''''http://thatskannada.oneindia.in/nri/article/2009/0828-sweden-odissi-dancer-annette-pooja.html ಗೂ ಮತ್ತು ''ಕನ್ನಡಧ್ವನಿ'' ''http://www.kannadadhvani.com/node/846'' ಗೂ ಕ್ರತಜ್ನತೆಗಳು)


ಸಂಗೀತ ಸುಧೆಯೊಳಗೆ ಮೀಯದವರಾರು

ಕಾಲ್ಗೆಜ್ಜೆ ಸಪ್ಪಳಕೆ ಒಲಿಯದವರಾರು

ನ್ರತ್ಯದಲಿ ನಟರಾಜ ಸೂರೆಗೊಂಡನು ಮನವ

ದೀಪಕ ರಾಗವು ಬೆಳಗಿಸಿತು ಜಗವ


ಸಂಗೀತ ಮತ್ತು ನ್ರತ್ಯ ಎಂಥಹ ಅರಸಿಕರನ್ನು ರಸಿಕತೆಗೆ ಒಯ್ಯುತ್ತವೆ. ಅದೊಂದು ಅಮಲಿದ್ದಂತೆ, ಮನಸ್ಸಿನ ನೋವಿಗೆ ಸಂಜೀವಿನಿ ಇದ್ದಂತೆ, ಆನಂದದ ಸಾಗರದಂತೆ.

ಅದು ಶಾಸ್ತ್ರಬದ್ದ ಭಾರತೀಯ ಸಂಗೀತ-ನ್ರತ್ಯವೇ ಆಗಿರಬಹುದು ಇಲ್ಲವೆ ಪಾಶ್ಚಾತ್ಯರ ಪಾಪ್-ನ್ರತ್ಯ ವೇ ಆಗಿರಬಹುದು. ಅದರಲ್ಲೂ ಭಾರತೀಯ ನ್ರತ್ಯ ಪ್ರಕಾರಗಳಿಗೆ ಸಿಕ್ಕಷ್ಟು ಪ್ರಸಿದ್ದಿ ಜಗತ್ತಿನ ಯಾವ ನ್ರತ್ಯ ಪ್ರಕಾರಗಳಿಗೂ ಸಿಕ್ಕಿಲ್ಲ ಅಂದರೆ ಅತಿಶಯೋಕ್ತಿಯಲ್ಲ. ಆದರೆ ಭಾರತೀಯರಾದ ನಾವು ಅರೆ ಬೆತ್ತಲೆಯ ವಿದೇಶಿ ನ್ರತ್ಯವನ್ನೇ ಸವಿಯುತ್ತಾ ನಮ್ಮ ತನ ವನ್ನು ಮರೆಯುತ್ತಿದ್ದೇವೆ. ವಿದೇಶಿಯರು ಎಂದಕೂಡಲೇ ಕೇವಲ ಬೆತ್ತಲೆ ಕುಣಿಯುವವರು ಎನ್ನುವುದನ್ನು ನಮಗೆ ಗೊತ್ತಿಲ್ಲದೇ ಅಂದುಕೊಂಡುಬಿಟ್ಟಿದ್ದೇವೆ. ನಾವು ನಮ್ಮದನ್ನೇ ಬಿಟ್ಟು ಪರಕೀಯತೆಯನ್ನು ಮೈಗೂಡಿಸಿಕೊಂಡು ಸಂಸ್ಕ್ರತಿಯ ಅಧ:ಪತನಕ್ಕೆ ಕಾರಣೀಭೂತರಾಗುತ್ತಿದ್ದರೆ ಸದ್ದಿಲ್ಲದೆ ಸ್ವೀಡನ್ನಿನ ಮಹಿಳೆಯೊಬ್ಬರು ಭಾರತೀಯ ನ್ರತ್ಯದಲ್ಲಿ ಕಳೆದ ೧೫ ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆಂದರೆ ಆಶ್ಚರ್ಯವಾಗುತ್ತಿದೆಯೇ?

ಹೌದು, ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿರುವ ಅನಿಟ್ಟೆ ಪೂಜಾ (ಪೂಜಾ ಎನ್ನುವುದು ಓಡಿಸ್ಸಿ ಗುರು ಇಟ್ಟ ಹೆಸರು) ಕಳೆದ ೧೫ ವರ್ಷಗಳಿಂದ ಓಡಿಸ್ಸಿ ನ್ರತ್ಯ ಕಲಿಯುತ್ತಿದ್ದಾರೆ ಅಷ್ಟೇ ಅಲ್ಲ ಕಲಿಸುತ್ತಿದ್ದಾರೆ. ಭಾರತದ ಎಲ್ಲ ನ್ರತ್ಯ ಪ್ರಕಾರಗಳಲ್ಲೂ ಕೈಯ್ಯಾಡಿಸಿರುವ ಇವರು ಕೊನೆಯದಾಗಿ ಆರಿಸಿಕೊಂಡಿದ್ದು ಓಡಿಸ್ಸಿ ನ್ರತ್ಯವನ್ನು. ಹ್ರದಯಸ್ಪರ್ಶೀ ಅಭಿನಯ, ತಾಳಕ್ಕೆ ತಕ್ಕ ಹೆಜ್ಜೆ, ಹೆಜ್ಜೆಗೆ ತಕ್ಕ ಭಾವದ ಮೂಲಕ ಇಲ್ಲಿಯ ಜನರ ಕಣ್ಮಣಿಯಾಗಿದ್ದಾರೆ. ತಮ್ಮ ಹೆಸರಿನಲ್ಲಿ ಪೂಜಾ ಎನ್ನುವುದನ್ನು ಸೇರಿಸಿಕೊಂಡಿರುವ ಇವರದು ಸುಖೀ ಕುಟುಂಬ. ಇವರ ಗಂಡ ಲಿಯನಾರ್ಡೋ ಒಬ್ಬ ನಟ ಹಾಗೂ ಶಿಕ್ಷಕ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು, ಒಬ್ಬಳು ಗಾಯತ್ರಿ, ಇನ್ನೊಬ್ಬಳು ಕರೀಷ್ಮಾ. ಇಬ್ಬರಿಗೂ ಇಟ್ಟ ಭಾರತೀಯ ಮೂಲದ ಹೆಸರು ಅವರ ಭಾರತ ಪ್ರೇಮಕ್ಕೆ ಹಿಡಿದ ಕನ್ನಡಿ.


ಫೋಟೋ: ಲಿಯೋನಾರ್ಡೋ ಸ್ಟೆಫಾನ್

ಮೂಲತ: ಸ್ವೀಡನ್ನಿನಲ್ಲಿಯೇ ಹುಟ್ಟಿ ಬೆಳೆದ ಅನಿಟ್ಟೆ ಪೂಜಾ, ತಮ್ಮ ತಂದೆಯವರಿಂದ ಸಂಗೀತ ಹಾಗೂ ನ್ರತ್ಯಗಳಲ್ಲಿ ಆಸಕ್ತಿ ತಳೆದರು. ನ್ರತ್ಯ ಇವರ ರಕ್ತದಲ್ಲಿಯೇ ಬೆಳೆದಿತ್ತು. ಆದರೆ ಅದು ಭಾರತದೊಂದಿಗೆ ವಿಸ್ತರಿಸುತ್ತದೆ ಎಂಬುದು ಅವರಿಗೂ ತಿಳಿದಿರಲಿಕ್ಕಿಲ್ಲ. ಥಿಯೇಟರ್ ಗಳಲ್ಲಿ ವೇಷ-ಭೂಷಣ ಮಾಡುವವರಾಗಿದ್ದ ಇವರು ಕ್ರಮೇಣ ನ್ರತ್ಯದ ಕಡೆಗೆ ಒಲಿದಿದ್ದೇ ಸೋಜಿಗದ ಕಥೆ.

”ಸ್ಟಾಕ್ ಹೋಮ್ ನಲ್ಲಿ ನಾಟಕ ಅಕಾಡೆಮಿಯಲ್ಲಿ ಕಲಿಯುತ್ತಿದ್ದಾಗ ಅನೇಕ ಏಷ್ಯಾದ ನಿರ್ದೇಶಕರ ಜೊತೆ ಕೆಲಸ ಮಾಡಿದೆ. ಆಗಲೇ ಭಾರತ ನ್ರತ್ಯದ ಬಗೆಗೆ ಜಗತ್ತಿನಾದ್ಯಂತ ಇರುವ ಕೌತುಕತೆ, ಗೌರವ ನನ್ನಲ್ಲಿ ಹೊಸ ಸಂಚಲನ ಉಂಟು ಮಾಡಿತು. ಒಮ್ಮೆ ಕೂಚಿಪುಡಿ ನ್ರತ್ಯವನ್ನು ವೀಕ್ಷಿಸಿದೆ, ಆ ನ್ರತ್ಯಕ್ಕೆ ಸಿಕ್ಕಿದ ಅದ್ಭುತ ಗೌರವಕ್ಕೆ ಬೆರಗಾದೆ, ಆಗಲೇ ಅನ್ನಿಸಿತು, ಭಾರತೀಯ ನ್ರತ್ಯದಲ್ಲಿ ಏನೋ ಇದೆ, ಅದನ್ನು ಕಲಿಯಬೇಕು, ಅಸ್ವಾದಿಸಬೇಕು” ಎನ್ನುವ ಪೂಜಾ ಭಾರತೀಯ ನ್ರತ್ಯ ಪ್ರಕಾರಗಳಲ್ಲಿ ಬಹಳಷ್ಟು ಸಂಶೋಧನೆ ಮಾಡಿದ್ದಾರೆ.

ಉಡುಪಿಯಲ್ಲಿ ಯಕ್ಷಗಾನ ವೇಷ-ಭೂಷಣ ಮಾಡುವುದನ್ನು ಕಲಿತ ಇವರು ನಂತರ ಹತ್ತು ಹಲವು ಭಾರತೀಯ ನ್ರತ್ಯಗಳಿಗೆ ವೇಷ-ಭೂಷಣ ಹಾಕುವುದನ್ನು ಕಲಿತರು. ಇದೇ ಸಂದರ್ಭದಲ್ಲಿ ಓರಿಸ್ಸಾದ ಪುರಿ ಜಗನ್ನಾಥ ರಥೋತ್ಸವವನ್ನು ವೀಕ್ಷಿಸುವ ಅವಕಾಶ ಇವರಿಗೆ ಲಭಿಸಿತು. ಅಲ್ಲಿಯ ಆ ಮನಮೋಹಕ ಓಡಿಸ್ಸಿ ನ್ರತ್ಯ, ಅವರ ಶ್ರದ್ಧೆ, ಜಗನ್ನಾಥನಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವ ಪರಿ, ಅವನನ್ನು ಒಲಿಸಿಕೊಳ್ಳುವ ನಾಟ್ಯ ಶೈಲಿ ಇವರ ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿತು. ಅಂದೇ ನಿರ್ಧರಿಸಿದರಂತೆ ” ಇದೇ ನ್ರತ್ಯವನ್ನು ತಾನು ಕಲಿಯಬೇಕು, ಅದರ ಸತ್ವವನ್ನು ಅರಿಯಬೇಕು, ಆ ಜಗನ್ನಾಥನಲ್ಲಿ ತಲ್ಲೀನವಾಗುವ ಯಾವ ಮಹಾಶಕ್ತಿ ಈ ಓಡಿಸ್ಸಿ ನ್ರತ್ಯಕ್ಕಿದೆ ಎನ್ನುವುದನ್ನು ತಾವು ಮನಗಾಣಬೇಕು” ಎಂಬುದಾಗಿ.

ಇದೇ ಸಂದರ್ಭದಲ್ಲಿ ಭಾರತೀಯ ನ್ರತ್ಯ ಅಕಾಡೆಮಿಯ ಫೆಲೋಶಿಪ್ ಲಭಿಸಿತು. ಅಲ್ಲಿಂದ ಅನಿಟ್ಟೆ ಪೂಜಾ ತಿರುಗಿ ನೋಡಲಿಲ್ಲ. ಮೂರು ವರುಷ ಕುಚಿಪುಡಿ ಕಲಿತರು. ಇದರ ನಡುವೆಯೇ ಕೇರಳದ ಸಾಂಪ್ರದಾಯಿಕ ನ್ರತ್ಯ ”ಥೆಯ್ಯಾಮ್” ನೋಡುವ ಸೌಭಾಗ್ಯ ಒದಗಿತು. ಆದರೆ ಅದು ಪುರುಷರಿಗೆ ಮಾತ್ರ ಎಂದು ತಿಳಿದು ಬೇಸರಗೊಂಡರು. ತದ ನಂತರ ರಾಜಸ್ಥಾನದ ಪ್ರಸಿದ್ಧ ನ್ರತ್ಯ ”ಕಲಬೆಲಿಯಾ” ನ್ರತ್ಯ, ಹಠಯೋಗ ಶಿಕ್ಷಣ, ಕಥಕ್ಕಳಿ, ಭರತನಾಟ್ಯ ಹೀಗೆ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಂಡರು. ”ಕಲೆ ಸಾಧಕನ ಸೊತ್ತು” ಎಂಬುದನ್ನು ಅಕ್ಷರಷ: ನಿಜ ಮಾಡಿದ ಅನಿಟ್ಟೆ ಪ್ರಸಿದ್ಧ ಓಡಿಸ್ಸಿ ನ್ರತ್ಯ ಗುರು ಶ್ರೀ ಗುರು ಹರಿಕ್ರಷ್ಣ ಬೆಹ್ರಾ ರಲ್ಲಿ ೬ ವರ್ಷಗಳ ಕಾಲ ನ್ರತ್ಯಾಭ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗಳನ್ನು ಬಿಟ್ಟಿರಲಾಗದ, ನ್ರತ್ಯವನ್ನು ಬಿಡಲೊಲ್ಲದ ದ್ವಂದ್ವ ಇವರನ್ನು ಕಾಡಿತು. ಕೊನೆಗೂ ಗೆದ್ದದ್ದು ಓಡಿಸ್ಸಿ ನ್ರತ್ಯವೇ. ತಮ್ಮ ಮಗಳನ್ನು ತಮ್ಮೊಂದಿಗೆ ಕೂರಿಸಿಕೊಂಡೇ ನ್ರತ್ಯ ಕಲಿತು ಶಹಬ್ಬಾಸ್ ಎನಿಸಿಕೊಂಡರು.


ಫೋಟೋ: ಅವಿನಾಶ್

ಸುಂದರ ಅಭಿನಯ, ತನ್ನ ನ್ರತ್ಯದೊಳಗಿನ ಭಾವನೆಗಳ ಮೇಲಿನ ಹಿಡಿತ, ಭಾರತೀಯ ಸಂಸ್ಕ್ರತಿಯ ಬಗೆಗಿನ ಆಳವಾದ ಜ್ನಾನ, ಕಥಾ-ಪುರಾಣಗಳ ವಿಶ್ಲೇಷಣೆ, ಎಂದೂ ತಪ್ಪದ ಗೆಜ್ಜೆಯೊಂದಿಗಿನ ಹೆಜ್ಜೆ ಅನಿಟ್ಟೆ ಪೂಜಾ ಅವರನ್ನು ಓಡಿಸ್ಸಿ ನ್ರತ್ಯ ರಂಗದ ಪ್ರತಿಭಾನ್ವಿತ ಕಲಾವಿದೆಯನ್ನಾಗಿ ಮಾಡಿವೆ. ”ವಿದ್ಯಾ ವಿನಯೇನ ಶೋಭಿತೇ” ಎನ್ನುವಂತಿರುವ ಇವರು ಸ್ವೀಡನ್ನಿನ ಅದೇಷ್ಟೋ ಮಕ್ಕಳಿಗೆ ಓಡಿಸ್ಸಿ ನ್ರತ್ಯವನ್ನು ಕಲಿಸುತ್ತಿದ್ದಾರೆ. ತಮ್ಮ ಗಂಡನೊಂದಿಗೆ ಸೇರಿಕೊಂಡು ”ವಿಶ್ವ ನ್ರತ್ಯ ಸಂಘ (World Dance Academy) ಸಮಯ ಸಿಕ್ಕಾಗಲೆಲ್ಲ ಭಾರತಕ್ಕೆ ಭೇಟಿ ನೀಡುವ ಪೂಜಾ ಪ್ರಸ್ತುತ ಅರುಣಾ ಮೊಹಾಂಟಿಯವರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಸ್ವೀಡಿಷ್ ಸರಕಾರದಿಂದ ಇವರಿಗೆ ಫೆಲೋಶಿಪ್ ಲಭಿಸಿದ್ದು ಅದು ನ್ರತ್ಯ ಕಲಿಯಲು ಹಾಗೂ ಭಾರತೀಯ ಸಂಸ್ಕ್ರತಿ ಅರಿಯಲು ಸಹಕಾರವಾಯಿತು ಎನ್ನುತ್ತಾರೆ ಅನಿಟ್ಟೆ ಪೂಜಾ. ”ಥೆಯ್ಯಾಮ ಮತ್ತು ಕಥಕ್ಕಳಿ ಕಲಿತಿದ್ದರಿಂದ ರಾಮಾಯಣ ಮತ್ತು ಮಹಾಭಾರತ ಕಥೆ ತಿಳಿಯಲು ಅನುಕೂಲವಾಯಿತು. ಭಾರತೀಯ ಸಂಸ್ಕ್ರತಿ ಮತ್ತು ಪರಂಪರೆ ನಿಜಕ್ಕೂ ಶ್ರೀಮಂತವಾದದ್ದು. ಬಹುಶ: ಇದಕ್ಕಾಗಿಯೇ ಭಾರತೀಯ ನ್ರತ್ಯ ಇಂದಿಗೂ ಚಿರನೂತನ, ದಿವ್ಯ ಚೇತನ” ಎನ್ನುವ ಪೂಜಾ ಅವರು ಭಾರತದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಭಾರತವನ್ನು ಬಹುವಾಗಿ ಪ್ರೀತಿಸುವ ಇವರಿಗೆ ತಮ್ಮ ಮಕ್ಕಳಿಗೂ ಆ ಸಂಸ್ಕ್ರತಿಯನ್ನು ತಿಳಿಸುವ ಹಂಬಲವಿದೆ. ಭಾರತದಾದ್ಯಂತ ಹಲವಾರು ಕಡೆ ನ್ರತ್ಯ ಕಾರ್ಯಕ್ರಮ ನೀಡಿರುವ ಇವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದೀಗ ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿ ತಮ್ಮ ನ್ರತ್ಯ ಶಾಲೆ ನಡೆಸುತ್ತ ಇಲ್ಲಿಯೂ ನ್ರತ್ಯ ಕಾರ್ಯಕ್ರಮ ನೀಡುತ್ತಾ ಇಲ್ಲಿಯ ಜನರ ಮನ ಗೆದ್ದಿದ್ದಾರೆ.

ದೇಶಾಭಿಮಾನ ಎನ್ನುವುದು ಎಲ್ಲಿ? ಹೇಗೆ? ಟಿಸಿಲೊಡೆಯುತ್ತದೆ ಎಂದು ಹೇಳುವುದು ಕಷ್ಟ. ಅದು ಯಾವ ರೂಪದಲ್ಲಿ ಇರುತ್ತದೆಯೋ ಬಲ್ಲವರಾರು. ದೇಶದಲ್ಲಿದ್ದೇ ಪರಕೀಯರಾಗುವುದು, ಪರಕೀಯರಾಗಿದ್ದುಕೊಂಡೇ ದೇಶವನ್ನು ಪ್ರೀತಿಸುವುದು ಸೋಜಿಗವಲ್ಲವೇ? ನಮ್ಮ ಸಂಸ್ಕ್ರತಿ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಅನಿಟ್ಟೆ ಪೂಜಾ ಅವರನ್ನು ಅಭಿನಂದಿಸಲೇಬೇಕು.


26 comments:

ಜಲನಯನ said...

ಡಾ. ಗುರು, ನಿಮ್ಮ ಸ್ವೀಡಿಯನ್ನು ನೋಡಿ ನಮ್ಮವರು ಕಲಿಯಬೇಕು. ನಮ್ಮ ನೃತ್ಯ ಪ್ರಾಕಾರಗಳಲ್ಲಿರುವ ವೈವಿಧ್ಯತೆಯನ್ನು ಅಳವಡಿಸಿ ಆಧುನಿಕ ಡ್ಯಾನ್ಸಿಂಗ್ ಮನೋಹರವಾಗಿಸಬಹುದೆಂದು ಅವರು ತಿಳಿದಿದ್ದರೆ ನಮ್ಮವರು ಪಾಶ್ಚಾತ್ಯ ಮೋಹಕ್ಕೊಳಗಾಗಿ ನಮ್ಮ ನೃತ್ಯಕ್ಕೆ ಹುಚ್ಚು-ಹುಚ್ಚು ಹೆಜ್ಜೆಗಳನ್ನು ಪೇರಿಸಿ ಎಡಬಿಡಂಗಿಗಳಾಗುತ್ತಿದ್ದಾರೆ...ನಮ್ಮ ಜನ ಆ ನೃತ್ಯಗಾತಿಗೆ ಋಣಿಯಾಗಿರಬೇಕು.

shivu.k said...

ಗುರುಮೂರ್ತಿ ಸರ್,

ಸ್ವೀಡನ್ ಕಲಾವಿದೆಯ ಸ್ಫೂರ್ತಿಯುತ ನೃತ್ಯ ಕಲಿಕೆ ನಮ್ಮವರಿಗೆ ಅನುಕರಣೀಯ....ಅವರಿಗೆ ನನ್ನ ಅಭಿನಂದನೆಗಳು.

ಸವಿಗನಸು said...

ಗುರು,
ಸ್ವೀಡಿಷ್ ಕಲಾವಿದೆ ಅನಿಟ್ಟೆ ಪೂಜಾನವರು ಓಡಿಸ್ಸಿ ನೃತ್ಯ ಕಲಿತು ಮತ್ತು ಕಲಿಸುತ್ತಿರುವ ಬಗೆ ಓದಿ ಹೆಮ್ಮೆ ಅನಿಸಿತು....
ನಮ್ಮವರು ಪಾಶ್ಚಾತ್ಯ ಸಂಗೀತ ಹಾಗೂ ನೃತ್ಯದ ಮೋಹಕ್ಕೊಳಗಾಗುತ್ತಿದ್ದಾರೆ...
ಇಂತಹ ನೃತ್ಯಗಾತಿಯನ್ನು ಪರಿಚಯಿಸಿದ ನಿಮಗೆ ಅಭಿನಂದನೆಗಳು....

sunaath said...

ಗುರು,
ಲೇಖನವು unicodeನಲ್ಲಿ ಇರದೆ, ‘ಕನ್ನಡ ಬರಹ’ದಲ್ಲಿ ಇದೆಯಲ್ಲ? ಹೀಗಾಗಿ ಲೇಖನವನ್ನು ಗಣಕಯಂತ್ರದ wordನಲ್ಲಿ ಅಂಟಿಸಕೊಂಡು, ಕನ್ನಡ ಬರಹದಲ್ಲಿ ಓದಬೇಕಾಯಿತು!
Anyway, ಉತ್ತಮ ಲೇಖನ.

ಸಾಗರದಾಚೆಯ ಇಂಚರ said...

ಜಲನಯನ ಸರ್ ,
ಹೌದು, ನಾವು ಇಂಥವರಿಂದ ಕಲಿಯುವುದು ಸಾಕಷ್ಟಿದೆ. ದೇಶಭಕ್ತಿ ಎನ್ನುವುದು ಹೇಗೆಲ್ಲಾ ಕೆಲ ಮಾಡುತ್ತದೆ ಅಲ್ಲವೇ?
ಮೆಚ್ಚಿದ್ದಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶಿವೂ ಸರ್,
ನಿಜ, ಅವರೊಂದು ಸ್ಫೂತಿಯೇ ಸರಿ. ಅವರ ಭಾರತದ ಬಗೆಗಿನ ಜ್ಞಾನ ಕೇಳಿ ದಂಗಾಗಿ ಹೋದೆ. ಅವರಿಗೆ ನಮ್ಮ ಸಂಸ್ಕ್ರತಿಯ ಬಗ್ಗೆ ಸಂಪೂರ್ಣ ಮಾಹಿತಿಯಿದೆ

ಸಾಗರದಾಚೆಯ ಇಂಚರ said...

ಸವಿ ಗನಸು,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು,
ಅವರಿಂದ ನಾವು ತುಂಬಾ ಕಲಿಯಬೇಕು. ನಮ್ಮತನ ಎನ್ನುವುದನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ಇಲ್ಲ ಸಲ್ಲದ ವಿಚಾರಗಳಲ್ಲಿ ಪರಕೀಯರ ಅನುಕರಣೆ ಮಾಡುತ್ತವೆ. ಆದರೆ ಅವಶ್ಯಕ ವಿಚಾರಗಳಲ್ಲಿ ಅವರ ಅನುಕರಣೆ ಮಾಡುವುದಿಲ್ಲ.

ಸಾಗರದಾಚೆಯ ಇಂಚರ said...

ಸುನಾಥ ಸರ್,
ಅದು ಮೊದಲು ಬರಹ ದಲ್ಲಿ ಬರೆದೆ. ನಂತರ ಬ್ಲಾಗ್ ಗೆ ಹಾಕಿದೆ. ಏಕೆಂದರೆ ಕೆಲವೊಂದು ಪೇಪರ ನವರು ಬರಹ ಕೇಳಿದರು. ಅದಕ್ಕೆ ಕ್ಷಮೆ ಇರಲಿ. ಮುಂದೆ Unicode ನಲ್ಲೆ ಇರುವಂತೆ ನೋಡಿಕೊಳ್ಳುತ್ತೇನೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

Prabhuraj Moogi said...

ನಮಗೆ ನಮ್ಮ ಸಂಸ್ಕೃತಿ ಮರೆವಾಗುತ್ತಿದ್ದರೂ ಬೇರೆಯವರಿಗೆ ಅದರ ಮೇಲೆ ವ್ಯಾಮೋಹ ಹುಟ್ಟಿದೆಯೆಂದರೆ ಅಚ್ಚರಿ, ಕಲೆಗೆ ಸಾಧನೆ ಅಗತ್ಯ ಅದನ್ನು ಅವರು ನಿಜಕ್ಕೂ ಅತ್ಯಂತ ತನ್ಮಯತೆಯಿಂದ ಮಾಡುತ್ತಿದ್ದಾರೆ ಅನಿಸುತ್ತದೆ.
ಹಾಗೆ ನಿಮ್ಮ ಕವನ ಸಂಕಲನಬಿಡುಗಡೆಯಾಗಿದ್ದಕ್ಕೆ ಅಭಿನಂದನೆಗಳು...

ಮನಸು said...

ನಮ್ಮ ಸಂಸ್ಕೃತಿ ಬೆಳಗುತ್ತಿರುವ ಪೂಜಾರವರಿಗೆ ನಮ್ಮ ಅಭಿನಂದನೆಗಳು ಹಾಗೆ ನಿಮಗೋ ಸಹ ಇಂತಹ ಪ್ರತಿಭಾನ್ವಿತ ಕಲೆಯುಳ್ಳವರನ್ನು ನಮ್ಮೆಲ್ಲರಿಗೂ ಪರಿಚಯಿಸಿದ್ದೀರಿ. ಅವರು ನಮ್ಮೆಲ್ಲರಿಗೂ ಸ್ಪೂರ್ತಿದಾಯಕರು..
ವಂದನೆಗಳು

Ittigecement said...

ಗುರುಮೂರ್ತಿಯವರೆ...

ಸ್ವಿಡಿಶ್ ಕಲಾರಳ ಪರಿಚಯ ಮಾಡಿಸಿದ್ದಕ್ಕೆ ನಿಮಗೆ ಮೊದಲ ಅಭಿನಂದನೆ...

ನಮ್ಮ ಸಂಸ್ಕೃತಿಯ ಅಂಗವಾದ ನೃತ್ಯವನ್ನು ಕಲಿತತದ್ದು ಮಹಾನ್ ಸಾಧನೆ...
ಅವರಿಗೂ ನಮ್ಮ ಹ್ರ್‍ಅದಯಪೂರ್ವಕ ಅಭಿನಂದನೆಗಳು....

ಅವರು ಕಲಾಲೋಕಕ್ಕೆ ಇನ್ನಷ್ಟು ಮೆರಗು ತರಲಿ...
ಅವರ ಸಾಧನೆ ನಮಗೂ ಹೆಮ್ಮೆಯೆ ಸರಿ...

ಸಿಬಂತಿ ಪದ್ಮನಾಭ Sibanthi Padmanabha said...

Baraha oduttaa enu helabekendu andukondiddeno adannu nivu kone para dalli heliddiri. khushiyaytu guru avare.

ಕ್ಷಣ... ಚಿಂತನೆ... said...

ಗುರುಮೂರ್ತಿಯವರೆ, ಸ್ವೀಡಿಷ್ ಕಲಾವಿದೆಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಆಕೆಯ ಸ್ಫೂರ್ತಿ ನಿಜಕ್ಕೂ ಮೆಚ್ಚುವಂತಹದು. ಒಂದು ಕಲೆಯನ್ನು ಅಭ್ಯಸಿಸುವಾಗ ಎದುರಾಗುವ ಭಾಷಾಸಮಸ್ಯೆ, ಕಲೆಯ ಪರಿಚಯ ಇವನ್ನೆಲ್ಲ ಅರಗಿಸಿಕೊಂಡು ರೂಪುಗೊಂಡ ಈ ಕಲಾವಿದೆಗೆ ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.

ದಿವ್ಯಾ ಮಲ್ಯ ಕಾಮತ್ said...

ಓದಿ ತುಂಬಾ ಖುಷಿಯಾಯಿತು.. ಪೂಜಾರವರ ಸಾಧನೆ ಶ್ರದ್ಧೆ ನಿಜಕ್ಕೂ ಪ್ರಶಂಸನೀಯ ! ಜೊತೆಗೆ ಅದನ್ನು ಸಾದರಪಡಿಸಿದ ನಿಮ್ಮ ಲೇಖನವೂ :) ಅಭಿನಂದನೆಗಳು..

ಸಾಗರದಾಚೆಯ ಇಂಚರ said...

ಪ್ರಭು ಸರ್,
ನಿಮ್ಮ ಹಾರೈಕೆಗೆ ವಂದನೆಗಳು, ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಮನಸು,
ಹೌದು, ಅವರು ಮಹಾನ್ ಕಲಾವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ,
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಮ್ಮ ಅಭಿನಂದನೆಗಳನ್ನು ಖಂಡಿತ ಅವರಿಗೆ ತಲುಪಿಸುತ್ತೇನೆ. ನಾನು ಅವರ ಕಾರ್ಯಕ್ರಮ ನೋಡಿ ಮೂಕನಾಗಿದ್ದೇನೆ.

ಸಾಗರದಾಚೆಯ ಇಂಚರ said...

ಸಿಬಂತಿ,
ನಿಮ್ಮ ಹಾರೈಕೆ ಸದಾ ಇರಲಿ, ಹೀಗೆಯೇ ಓದುತ್ತಿರಿ ನಮ್ಮ ಬರಹಗಳನ್ನು

ಸಾಗರದಾಚೆಯ ಇಂಚರ said...

ಕ್ಷಣ ಚಿಂತನೆ ಸರ್,
ಆ ಕಲಾವಿದೆ ಇನ್ನು ಎತ್ತರಕ್ಕೆ ಬೆಳೆಯಲಿ ಎನ್ನುವುದೇ ನಮ್ಮೆಲ್ಲರ ಆಶಯ. ಅಲ್ಲವೇ?

ಸಾಗರದಾಚೆಯ ಇಂಚರ said...

ದಿವ್ಯ,
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು. ಹೀಗೆಯೇ ಪ್ರೋತ್ಸಾಹಿಸುತ್ತಿರಿ

ಧರಿತ್ರಿ said...

ಒಳ್ಲೆ ಕೆಲಸ ಮಾಡಿದ್ದೀರಿ ಸರ್. ವಂದನೆಗಳು
ಆ ಕಲಾವಿದೆಗೆ ನನ್ನದೂ ನಮಸ್ಕಾರ
-ಧರಿತ್ರಿ

ಸಾಗರದಾಚೆಯ ಇಂಚರ said...

ಧರಿತ್ರಿ ಮೇಡಂ,
ಧನ್ಯವಾದಗಳು

Me, Myself & I said...

ಆತ್ಮೀಯ ಗುರುಮೂರ್ತಿಗಳೇ ,

ತುಂಬಾ ಸವಿವರವಾಗಿ ಚೆನ್ನಾಗಿ ಬರ್ದಿದ್ದೀರ. ಅತ್ಯುತ್ತಮ ಬರಹ ಅನ್ನಿಸ್ತು.

ವಿನುತ said...

ಗುರುಮೂರ್ತಿಯವರೇ,

ನಿಜಕ್ಕೂ ಒ೦ದು ಕ್ಷಣ ಏನು ಹೇಳಲೂ ತೋಚಲೇ ಇಲ್ಲ. ಬಹಳ ಸು೦ದರವಾಗಿ ಪರಿಚಯಿಸಿದ್ದೀರಿ ಸ್ವೀಡಿಶ್ ಕಲಾವಿದೆಯನ್ನು.
ಹಿತ್ತಲ ಗಿಡ ಮದ್ದಲ್ಲ ಎ೦ಬ೦ತೆ, ನಮ್ಮಲ್ಲಿರುವ ಸ೦ಸ್ಕೃತಿಯ ಬೆಲೆ ನಮಗೇ ತಿಳಿದಿಲ್ಲ. ಬಹುಶ: ಮು೦ದೊ೦ದು ದಿನ ವಿದೇಶೀಯರಿ೦ದಲೇ ನಾವೂ ಕಲಿಯಬೇಕಾಗಬಹುದೇನೋ!
ಅನಿಟ್ಟೆ ಪೂಜಾರವರ ಆಸಕ್ತಿ, ತನ್ಮಯತೆ, ಛಲ ಹಾಗೂ ಸಾಧನೆ ಸ್ತುತ್ಯರ್ಹ. ಅಭಿನ೦ದನೆಗಳು.

ಸಾಗರದಾಚೆಯ ಇಂಚರ said...

ಲೋದ್ಯಾಶಿ ಸರ್,
ಸ್ವಾಗತ ನನ್ನ ಬ್ಲಾಗಿಗೆ, ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ವಿನುತ,
ಹೌದು, ನಾವು ನಮ್ಮದನ್ನೇ ಮರೆತಿದ್ದೇವೆ, ವಿದೇಶಿಗರು ಬಂದು ನಮ್ಮನ್ನು ಆಕ್ರಮಿಸಿಕೊಳ್ಳುತ್ತಾರೋ ಎಂಬ ಸಂದೇಹ, ಆಕ್ರಮಣ ಕೇವಲ ಬಾಹ್ಯವೇ ಆಗಿರಬೇಕೆಂದಿಲ್ಲ, ಅಂತರಂಗದ ಆಕ್ರಮಣವೂ ಆಕ್ರಮಣವೇ ಅಲ್ಲವೇ, ಹೀಗೆಯೇ ಬರುತ್ತಿರಿ