Friday, December 11, 2009

ಅವನಿಗೆ ಎಲ್ಲವನು ಕೊಡು, ಅವನೇನು ಬೇಡುವುದಿಲ್ಲ

ಇದು ನನ್ನ 50 ನೆ  ಬರಹ, ನನ್ನ ಬರಹವನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು. ಹೀಗೆಯೇ ನನಗೆ ನಿಮ್ಮ ಪ್ರೀತಿ ಹಾರೈಕೆ ಸಿಗುತ್ತದೆ ಎಂಬ ವಿಶ್ವಾಸದೊಂದಿಗೆ ಮುಂದುವರಿಯುತ್ತಿದ್ದೇನೆ.



ಘಟನೆ 1 : ಮಗು ಗೊಂಬೆಯೊಂದಿಗೆ ಆಡುತ್ತಿದೆ, ಅಲ್ಲಿಗೆ ಇನ್ನೊಂದು ಮಗುವಿನ ಪ್ರವೇಶ, ತನಗೂ ಗೊಂಬೆ ಬೇಕೆಂದು ಹಠ. ಆದರೆ ಮೊದಲಿನ ಮಗು ತನ್ನ ಗೊಂಬೆ ಕೊಡಲು ಒಪ್ಪುವುದಿಲ್ಲ. ಎರಡನೇ ಮಗು ಗೊಂಬೆ ಕೊಡಿಸುವವರೆಗೂ ಅಳು ನಿಲ್ಲಿಸುವುದಿಲ್ಲ.

ಘಟನೆ 2 : ಬಿಕ್ಷುಕ ನಾಲ್ಕಾಣೆ ಹಾಕಿರೆಂದು ಜನ ನಿಬಿಡ ಪ್ರದೇಶದಲ್ಲಿ ಗೋಗರೆಯುತ್ತಿದ್ದಾನೆ, ಯಾರೂ ಅವನಿಗೆ ನಾಲ್ಕಾಣೆ  ಹಾಕಲು ತಯಾರಿಲ್ಲ.  ಹಾಗೆಂದು ಆತ  ಬಲಿಷ್ಟನೂ ಅಲ್ಲ ದುಡಿದು ಬದುಕಲು,  ಕೊನೆಗೆ ದಾರಿ ಕಾಣದೆ ಅಲ್ಲಿಯೇ ಇದ್ದ ಅಂಗಡಿಯಿಂದ ಹಣ್ಣನ್ನು  ಕದಿಯುತ್ತಾನೆ, ಹಸಿದು ಆತ 3 ದಿನಗಳೇ ಕಳೆದು ಹೋಗಿದೆ.

 ಘಟನೆ 3 : ವಿದ್ಯಾವಂತ ಪದವೀಧರ, ಅಪ್ರತಿಭ ಪ್ರತಿಭಾವಂತ, ಕೆಲಸಕ್ಕೆಂದು ಅರ್ಜಿ ಹಾಕಿ ಹಾಕಿ ಸೋತಿದ್ದಾನೆ. ಆದರೆ ಎಲ್ಲ ಕಡೆ ಲಂಚ ಕೇಳುತ್ತಿದ್ದಾರೆ. ಬೇರೆ ದಾರಿ ಕಾಣದೆ ನಕ್ಸಲೀಯರ  ಸಂಘಟನೆಗೆ ಸೇರಿ ತನ್ನ ಬುದ್ದಿಶಕ್ತಿಯಿಂದ ಬೇಗನೆ ನಾಯಕನಾಗಿ ಅಸಂಖ್ಯಾತ ಮುಗ್ಧರ  ಸಾವಿಗೆ ಮುನ್ನುಡಿ ಬರೆಯುತ್ತಾನೆ.

ಘಟನೆ 4 : ವಯೋವ್ರದ್ದ  ತಂದೆ ತಾಯಿಗಳನ್ನು ನೋಡಿಕೊಳ್ಳಲಾಗದ ಮಕ್ಕಳು,  ತಮ್ಮನ್ನು ಸರಿಯಾಗಿ ವಿಚಾರಿಸುತ್ತಿಲ್ಲ ಎಂದು ಸಿಡುಕುವ ತಂದೆ ತಾಯಿಗಳು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಜಗಳವಾಗಿ ತಂದೆ ತಾಯಿಗಳನ್ನು ರಸ್ತೆಗೆ ನೂಕಿದ ಮಕ್ಕಳು.

ಘಟನೆ 5 : ಮಂತ್ರಿ ಮಹೋದಯರು ಪ್ರಜೆಗಳ ಬಗೆಗೆ ಕಿಂಚಿತ್ತು ಧ್ವನಿ ಎತ್ತದೆ ಪ್ರಜೆಗಳ ದೃಷ್ಟಿಯಲ್ಲಿ ಹೊಟ್ಟೆ ಬೆಳೆಸುತ್ತಿದ್ದಾರೆ. ಆದರೆ ಬಡ ನಾಗರಿಕ ಇನ್ನೂ ಸೊರಗುತಿದ್ದಾನೆ. ಸಿರಿವಂತ ಸಿರಿವಂತನೆ ಎಂಬ ನಾಣ್ನುಡಿ ಯಂತೆ  ಜನರಿಂದಲೇ ಆರಿಸಿಹೋದ  ಜನ ನಾಯಕ "ನಾಲಾಯಕ್ " ಎನಿಸಿಕೊಳ್ಳುತ್ತಿದ್ದಾನೆ.

ಘಟನೆ 6 : ತಮ್ಮ ಪ್ರೀತಿಗೆ ಮನೆಯವರು ಒಪ್ಪುತ್ತಾರೋ ಇಲ್ಲವೋ  ಎಂಬ ಭಯ, ದಿನೇ ದಿನೇ ಮನೆಯವರ ಕಿರುಕುಳ,  ಹುಡುಗಿ - ಹುಡುಗ ಸಾವಿಗೆ ಶರಣು.

ಘಟನೆ 7 : ತಾಯಿ ಆಸ್ಪತ್ರೆಯಲ್ಲಿ ಸಾವು-ಬದುಕುಗಳ ನಡುವೆ ಹೋರಾಡುತ್ತಿದ್ದಾಳೆ. ಒಬ್ಬಳೇ ಮಗಳು. ಕಿತ್ತು ತಿನ್ನುವ ಬಡತನ, ಆಪರೇಷನ್ ಗಾಗಿ  ಲಕ್ಷಗಟ್ಟಲೆ ಹಣ ಕೇಳಿದ ವೈದ್ಯರು. ತಾನು ಕೆಲಸ ಮಾಡುವ ಬ್ಯಾಂಕಿನ ಮ್ಯಾನೇಜರ್ ಹತ್ತಿರ ಕೇಳಲು ಹೋದರೆ ''ಒಂದು ದಿನ ನನ್ನೊಂದಿಗೆ ಹಾಸಿಗೆಯಲ್ಲಿ ನನಗೆ ಸುಖ ಕೊಡು, ಬೇಕಾದಷ್ಟು ಹಣ ಕೊಡುತ್ತೇನೆ'' ಎಂದ ಮ್ಯಾನೇಜರ್. ತಾಯಿಯ ಜೀವ ಉಳಿಸಲು ತನ್ನ ಶೀಲವನ್ನೇ ಬಲಿಕೊಟ್ಟ ಅಸಹಾಯಕ ಹೆಣ್ಣು.


ಸಮಾಜದ ವಿವಿಧ ಸ್ತರಗಳಲ್ಲಿ ನಡೆಯುವ ಮೇಲಿನ 7  ಘಟನೆಗಳ ಮೂಲ ಮಂತ್ರ ಒಂದೇ "ಮಾನವೀಯ ಚಿಂತನೆಗಳ ಕೊರತೆ ". ಹಾಗೆಂದರೇನು ಅನ್ನುತಿರಾ?


ಈ ಮೇಲಿನ 7  ಘಟನೆಗಳು ಹೆಚ್ಚಾಗಿ ನಮ್ಮ ದೇಶದ ಮೂಲೆಮೂಲೆಯಲ್ಲೂ  ಹಬ್ಬುತ್ತಿದೆ.
                        ಮುಂದುವರೆಯುತ್ತಿರುವ  ದೇಶ ನಮ್ಮದು ? ಎಂದು ಕಳೆದ  30 ವರ್ಷಗಳಿಂದಲೂ ಕೇಳುತ್ತಿದ್ದೇವೆ. ಆದರೆಯಾವಾಗ ನಾವು ಮುಂದುವರಿದ ದೇಶವಾಗುವುದು ? ಎಂಬ ಪ್ರಶ್ನೆ ಪ್ರತಿಯೊಬ್ಬನಲ್ಲೂ  ಕಾಡುತ್ತಿದೆ.  ಇಷ್ಟೊಂದು ಸಂಪತ್ತಿದೆ, ಆರ್ಥಿಕವಾಗಿ ಬಲವಾಗಿದ್ದೇವೆ, "ನಮ್ಮಲ್ಲಿ ಅತ್ಯಾಧುನಿಕ ಸಾಫ್ಟ್ವೇರ್ ತಂತ್ರಜ್ಞಾನ " ವಿದೆ ಎನ್ನುತ್ತೇವೆ. ಅದರೆ ನಮ್ಮ ಬಡತನದ ರೇಖೆಯ ಕಡೆ ಒಮ್ಮೆ ಕಣ್ಣುಹಾಯಿಸಿ. ಅದಿನ್ನೂ  ಅಲ್ಲಿಯೇ ಇದೆ. ಅದನ್ನು ಬದಲಾಯಿಸುವ ಪ್ರಯತ್ನ ಮಾಡಿದ್ದೆವೆಯೇ? ದೇಶದಲ್ಲಿ ಬಿಕ್ಷುಕರ  ಸಂಖ್ಯೆ, ನಿರ್ಗತಿಕರ ಸಂಖ್ಯೆ ಹೆಚ್ಚುತ್ತಿದೆನಿರುದ್ಯೋಗಿತನ ತಾಂಡವವಾಡುತ್ತಿದೆ. ಎಲ್ಲದಕ್ಕೂ ನಮ್ಮ ಜನಸಂಖ್ಯೆಯೇ  ಕಾರಣ ಎನ್ನುವುದಾದರೆ  ಜನ ಸಂಖ್ಯೆ ಇಳಿಸಲು ನಮ್ಮ ಪಾತ್ರವೇನು ಎಂದು ವಿಚಾರಿಸಿದ್ದೆವೆಯೇ?
    ಇತ್ತಿಚಿನ ದಿನಗಳಲ್ಲಿ  ಅನೇಕ ಜನ "ಬುದ್ದಿವಂತರು"  ಎನಿಸಿಕೊಂಡವರ ಬಾಯಿಯಿಂದ ದೇಶದ ಬಗೆಗೆ ಪುಂಖಾನು ಪುಂಖವಾಗಿ  ಬೈಗುಳಗಳು, ಅಸಡ್ಡೆ, ನಿರ್ಲಕ್ಷತೆಯ ಮಾತುಗಳು ಬರುತಿವೆ. ಒಮ್ಮೆ ಇಂಥವರಿಗೆ   ದೇಶದ ಚುಕ್ಕಾಣಿ ಕೊಟ್ಟರೆ ದೇಶ ಸುದಾರಿಸಿದಂತೆಯೇ ಎಂದು ನಿಮಗೆ ಅನ್ನಿಸದೆ ಇರದು. ಆದರೆ ಇದೇ ಸೊ called "ಬುದ್ದಿವಂತರು"  ಶುಕ್ರವಾರ ತಮ್ಮ ಕೆಲಸ ಮುಗಿಸಿ ಕಂಠ ಪೂರ್ತಿ  ಕುಡಿದು ತೂರಾಡುತ್ತಾ  ಜನರ  ನೆಮ್ಮದಿಗೆ ಭಂಗ ತರುತ್ತಾರೆ, ಚುನಾವಣೆಯ ದಿನ ಮತ ಚಲಾಯಿಸದೇ ರಜೆಯ  ಮೋಜನ್ನು  ಅನುಭವಿಸುತ್ತಿರುತ್ತಾರೆ. ದೇವಸ್ತಾನದ ಹುಂಡಿಗೆ ಹಣ ಹಾಕುತ್ತಾರೆಯೇ  ಹೊರತು ಅದೇ ಬಾಗಿಲಿನಲ್ಲಿ ಅನ್ನವಿಲ್ಲದೆ ಸಾಯುತಿರುವ ಮುದುಕಿಗೆ ಅನ್ನ ನೀಡುವುದಿಲ್ಲ .
             ಯಾರು ಕಾರಣರು? ಎಲ್ಲರೂ  ಕಾರಣರೆ ...ಮೊದಲು ನಮಗೆ ಮೂಲಭೂತ ಸೌಕರ್ಯಗಳು ಸಿಗುವಂತಾಗಬೇಕು. "ಅನ್ನ , ನೀರು, ವಸ್ತ್ರ " ಸಿಕ್ಕರೆ ಯಾವ  ಜಾತಿಯಾದರೂ ಒಂದೇ. ಮೊದಲು ಅದನ್ನು ಕೊಡಿಸುವ ಪ್ರಯತ್ನ ಮಾಡಬೇಕು. ವಿಶ್ವದ ಅತಿ ಸುಂದರ ಹಾಗೂ ಸ್ವಚ್ಛ  ನಗರಗಳೆನಿಸಿದ Norway, Sweden , Switzerland  ಗಳಲ್ಲಿ ಬಡವರೇ  ಇಲ್ಲ. ಇಲ್ಲಿ ಕದಿಯುವವರಿಲ್ಲ. ತಂದೆ - ತಾಯಿಗಳನ್ನು ಮನೆಯಿಂದ ಹೊರಗೆ ಹಾಕುತ್ತಾರೆ  ಎಂಬ ಚಿಂತೆ ಇಲ್ಲ.  ಕಾರಣ ಇಲ್ಲಿನ ಸರ್ಕಾರದ ಕಾನೂನು ಹಾಗಿದೆ. ನಾವು ಕಟ್ಟುವ ಒಂದು ಒಂದು ರೂಪಾಯಿ ತೆರಿಗೆಗೂ ಲೆಕ್ಕವಿದೆ.ನಮ್ಮ ತೆರಿಗೆಯನ್ನು ಸದ್ವಿನಿಯೋಗಗೋಳಿಸಲಾಗುತ್ತದೆಮನುಷ್ಯರಿಗೆ ಕನಿಷ್ಠ  ವ್ಯವಸ್ಥೆ ನೀಡಲಾಗುತ್ತದೆ. ನಮ್ಮದು ಬೃಹತ್ ದೇಶ, ಹೋಲಿಸಲು ಸಾಧ್ಯವೆ ಇಲ್ಲ, ಬಿಲಿಯಗಟ್ಟಲೆ  ಜನರಿರುವ ದೇಶದಲ್ಲಿ ಇಂತಹ ವ್ಯವಸ್ಥೆ  ನೀಡಲು ಸಾಧ್ಯವೇ? ಒಮ್ಮೆ ಚಿಂತಿಸಿ... ಪಕ್ಕದ ಚೀನಾ ಜನರಿಗೆ ಬೇಕಾದ ಮೂಲಭೂತ ಸೌಕರ್ಯ ನೀಡಿ ವಿಶ್ವದಲ್ಲೇ ಮಾದರಿ ರಾಷ್ಟ್ರವಾಗುವತ್ತ ಮುನ್ನಡೆದಿದೆ. ಆರ್ಥಿಕತೆಯಲ್ಲಿ ನಾವೂ ವೇಗವಾಗಿ ಮುನ್ನುಗ್ಗುತ್ತಿದ್ದೇವೆ. ಕೇವಲ ಹಣ ಮಾಡುವುದು ಒಂದೇ ಜೀವನದ ಉದ್ದೇಶವಲ್ಲ. ಗಳಿಸಿದ ಹಣವನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯವಲ್ಲವೇ? ನಮ್ಮಲ್ಲಿ ಹಣವಿದೆ ನಿಜಾ, ಅದು ಕೇವಲ ಕಾಗದದ ಮೇಲೆ ಮಾತ್ರ ಅಲ್ಲ, ನಮ್ಮ ರಸ್ತೆಗಳಲ್ಲಿ, ನಮ್ಮ ಜನರ ಮುಖಗಳಲ್ಲಿ, ದಾರಿದೀಪಗಳಲ್ಲಿ, ಕೊಳಗೇರಿಗಳ ನಿರ್ಮೂಲನೆಯಲ್ಲಿ ಕೂಡಾ ವಿನಿಯೋಗಿಸಲಾಗುತ್ತದೆ ಎಂಬುದು ನಮಗೆ ದಿಟ ವಾಗಬೇಕು. ಆಗ ಮಾತ್ರ ಇನ್ನೊಬ್ಬ ಬಡವ ಇಲ್ಲಿ ಹುಟ್ಟಲಾರ. ಬಡತನ ಇಷ್ಟ ಪಟ್ಟು ಆಯ್ದುಕೊಂಡದ್ದಲ್ಲ. ಅದು ಸಿರಿವಂತರ ದೌರ್ಜನ್ಯದ ಪರಮಾವಧಿಯ ಪ್ರತೀಕ.
ನಿಮ್ಮಲ್ಲಿ ಎಷ್ಟು ಜನ ರಸ್ತೆಯಲಿ ಉಗುಳದೆ, ಕಸ ಹಾಕದೆ ಕಸದ ತೊಟ್ಟಿಯಲಿ, ಶೌಚಾಲಯವನ್ನು ಉಪಯೋಗಿಸುತ್ತಿರಿ? ಸರಕಾರ ಬಹಳಷ್ಟು ಕಡೆ ಕಸದ ತೊಟ್ಟಿಗಳನ್ನು ಮಾಡಿದೆ. ಇಂತಹ ಸಣ್ಣ ಸಣ್ಣ ಕೆಲಸದ ಕಡೆಗೆ ನಾವು ಜಾಗೃತರಾದರೆ ಎಷ್ಟೊಂದು   ಸಾಧಿಸಬಹುದು.
 ರಸ್ತೆಗಳ ಗೋಡೆಗಳ ಮೇಲೆ ಬರೆಯುವುದು, ಎಲ್ಲಿಂದರಲ್ಲಿ ಬಿತ್ತಿ ಪತ್ರ ಅಂಟಿಸುವುದು ಇವೆಲ್ಲವುಗಳೂ ನಮ್ಮ ವಿಕ್ರತ ಮನಸನ್ನೇ ಅವಲಂಬಿಸಿವೆ. ಸರಕಾರವನ್ನು ಅಲುಗಾಡಿಸುವ ಶಕ್ತಿ ನಮಗಿದೆ. ಆಳಲ್ಪಡುವ ಸರ್ಕಾರದಿಂದ ಬೇಕಾದನ್ನು ಪಡೆವ ಹಕ್ಕು ನಮಗಿದೆ. ಆದರೆ ನಾವು ಮೊದಲು ಬೇಧ ಬಾವ  ಮರೆತು ಶ್ರೀಮಂತ - ಬಡವ ಎನ್ನದೆ ಬಾಳಲು ಮುಂದಾಗಬೇಕು. ಹಣ ಸಮ ಪ್ರಮಾಣದಲ್ಲಿ ಹಂಚಿಕೆಯಾಗಬೇಕು. "ಸರ್ವೇ ಜನ ಸುಖಿನೋಭವಂತು" ಎನ್ನುವಂತೆ ಎಲ್ಲರ ನೆಮ್ಮದಿಯ ಬದುಕಿಗಾಗಿ ಎಲ್ಲರೂ ಶ್ರಮಿಸಬೇಕು.  ಆಗ ಎಲ್ಲರಿಗೂ  ಎಲ್ಲವೂ ಸಿಗುತ್ತೆ. "ತನಗೆ ಉಣ್ಣಲು ಅನ್ನ , ತೊಡಲು ವಸ್ತ್ರ " ಸಿಕ್ಕ ಮೇಲೆ  ಕಳ್ಳ ಕದಿಯುವುದಿಲ್ಲ. ಪ್ರತಿಬೆಗೆ ತಕ್ಕ ಬೆಲೆ ಸಿಕ್ಕರೆ ಪದವಿಧರ ಉಗ್ರಗಾಮಿ ಆಗುವುದಿಲ್ಲ. ಪ್ರೀತಿಗೆ ಬೆಲೆ ಕೊಟ್ಟರೆ ಪ್ರೇಮಿಗಳು ಸಾಯುವುದಿಲ್ಲ.  ಹಿರಿತನವನ್ನು   ಗೌರವಿಸಿದರೆ ತಂದೆ -ಮಕ್ಕಳ ಬಂಧ ಬೇರ್ಪಡುವುದಿಲ್ಲ. ಅಸಹಾಯಕರಿಗೆ ಸಹಾಯ ಹಸ್ತ ಸಿಕ್ಕರೆ ಸುಸಂಸ್ಕ್ರತ ಹೆಣ್ಣು ಶೀಲ ಮಾರಿಕೊಳ್ಳುವಷ್ಟು ಶೋಚನೀಯ ಸ್ಥಿತಿಗೆ ಮುಟ್ಟುವುದಿಲ್ಲ
ಅದಕ್ಕೆ ಇನ್ನೊಮ್ಮೆ ಹೇಳುತ್ತಿದ್ದೇನೆ "ಅವನಿಗೆ ಎಲ್ಲವನ್ನು ಕೊಡು ಅವನೇನು ಬೇಡುವುದಿಲ್ಲ"

64 comments:

ಕ್ಷಣ... ಚಿಂತನೆ... said...

ಗುರು ಅವರೆ, ಬರಹ ಓದಿದೆ. ಇವೆಲ್ಲ ಸಾಮಾಜಿಕ ಸಮಸ್ಯೆಗಳನ್ನು ಸರಳವಾಗಿ ತಿಳಿಸಿದ್ದೀರಿ.. ಅದಕ್ಕೆ ಕಾರಣೀಭೂತರೂ ನಾವು ಎಂಬುದೂ ನಿಜ. ಆದರೆ, ಇವೆಲ್ಲ ಆದರ್ಶಗಳು (ವಿದೇಶಗಳಲ್ಲಿರುವಂತೆ) ನಮ್ಮ ಪಾಲಿಗೆ ಜಸ್ಟು ಟು ಎಂಜಾಯ್‌ ಎಂಬಂತೆ ಆಗಿದೆ. ಕಾರಣ ಲಂಚಕೋರತನವೇ ಅಥವಾ ಜನರ ಹಣಾಭಿಲಾಷೆಯೆ? ಎನಿಸುವುದು. ಒಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿಯು ಸರ್ಕಾರ + ಜನಸಾಮಾನ್ಯರೊಂದಿಗೆ ಸಿರಿವಂತರೆನಿಸಿಕೊಂಡವರು ಯೋಚಿಸಿ ಮಾಡಬೇಕಾದ ಕೆಲಸವಾಗಿದೆ. ಆಗ ಮಾತ್ರ ಅಭಿವೃದ್ಧಿ ಎಂಬುದು ಸಾರ್ಥಕವಾಗುತ್ತದೆ.

ಇದು ನನ್ನ ಅನಿಸಿಕೆ. ಲೇಖನಕ್ಕೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ನಿಜ ಸರ್,
ದೇಶದ ಸಮಸ್ಯೆಗಳನ್ನು ಎಲ್ಲರೂ ನಿಂತು ಪರಿಹರಿಸಬೇಕು,
ಆದರೆ ಸಿರಿವಂತ ಬಡವನ ಲೆಕ್ಕಚಾರದಿಂದಲೇ ಕೈ ಬಿಟ್ಟಿದ್ದಾನೆ
ಒಗ್ಗಟ್ಟಿನಲ್ಲಿ ಬಲವಿದೆ
ನಮ್ಮಲ್ಲಿ ಒಗ್ಗಟ್ಟು ನಶಿಸಿದರೆ ರಣ ಹದ್ದುಗಳಂತೆ ನಮ್ಮನ್ನು ತಿನ್ನಲು ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ
ಚೀನಾ ಕಾದು ಕುಳಿತಿವೆ.
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸೀತಾರಾಮ. ಕೆ. / SITARAM.K said...

ಜನಜಾಗೃತಿ ಬ೦ದಾಗಲೇ ಈ ಸಮಸ್ಯೆ ಬಗೆ ಹರಿಯುವದು. ಜನಜಾಗೃತಿ ಬರಬೇಕೆ೦ದರೇ ಅಜ್ಞಾನ ಅಳಿಯಬೇಕು. ಅಜ್ಞಾನ ಅಳಿಯಬೇಕಾದರೇ ಪ್ರಾಥಮಿಕ ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಶೈಕ್ಷಣಿಕ ಮಟ್ಟ ಸಾಮಾನ್ಯ ಶಿಸ್ತನ್ನು ಭೋಧಿಸಬೇಕು. ಉಳ್ಳವರೆಲ್ಲಾ ಇಲ್ಲದವರಿಗೆ ನೀಡಲೇ ಬೇಕು. ಇದು ಸಾಧ್ಯವಾಗುವುದು ಯಾವಾಗ? ಬೆಕ್ಕಿಗೆ ಗ೦ಟೆ ಕಟ್ಟುವವರಾರು? ಎಲ್ಲಾ ಸ್ವಾರ್ಥದ ಸುತ್ತ ಸುತ್ತುವ ಬದುಕುಗಳು ಅಥವಾ ಕ್ಷಣಿಕ ಸುಖದಲ್ಲಿ ತೃಪ್ತವಾದ ಬದುಕುಗಳು.
ಅರಿವೇ ಗುರು.
ಅದರೇ ಅರಿವು ಹೇಗೆ? ಎಲ್ಲಿ? ಯಾವಾಗ?
ಪ್ರಶ್ನೇ ಪ್ರಶ್ನೇಯಾಗಿ ಉಳಿಯುತ್ತದೆ.
ಲೇಖನ ಸಧ್ಯದ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ.
ಸರಳ ಬಾಶೆಯಲ್ಲಿ ಮನ ಮುಟ್ಟುತ್ತದೆ.

ಸೀತಾರಾಮ. ಕೆ. / SITARAM.K said...

congratulations for half century.
Wishing you for fastest century soon. (six runs per ball) means six posting per week at least....

ಸುಮ said...

ಒಳ್ಳೆಯ ಲೇಖನ ಗುರುಮೂರ್ತಿಯವರೆ. ಜನಜಾಗೃತಿಯಿಂದಷ್ಟೇ ಸುಧಾರಣೆ ಸಾಧ್ಯ. ಉಡುಗೆ , ತೊಡುಗೆ, ಆಹಾರ , ವಿಹಾರಗಳಲ್ಲಿ ಪಾಶ್ಚ್ಯಾತ್ಯರನ್ನು ಅನುಕರಿಸುವ ನಾವು ಅವರ ಶಿಸ್ತು ,ಸಾಮಾಜಿಕ ಪ್ರಜ್ಞೆಗಳನ್ನು ಮಾತ್ರ ಅಳವಡಿಸಿಕೊಳ್ಳುವುದಿಲ್ಲ .

Sushrutha Dodderi said...

ಶುಭಾಶಯ ಗುರು.. ಐನೂರಾಗಲಿ ಬರಹಗಳು. :-)

ಭಾವಜೀವಿ... said...

ಗುರು,
ಚಿಂತನೆಗೆ ಹಚ್ಚುವ ಲೇಖನವನ್ನು ಬರೆದಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಬಹುಷಃ ಜನಸಂಖ್ಯೆ ಹಾಗು ಅದರ ಸಾಂದ್ರತೆಯಿಂದಾಗಿ ನಮ್ಮ ಸಮಾಜದ ಹುಳುಕು ದೊಡ್ಡದಾಗಿ ಕಾಣಿಸಿತ್ತಿರಬಹುದು. ನಮ್ಮ ಸಮಾಜ ರೂಪುಗೊಂಡ ರೀತಿಯೆ ಇದಕ್ಕೆ ಕಾರಣ ಎನ್ನಬಹುದು. ಕಾರಣವೇನೆ ಇರಲಿ ಇದನ್ನು ಸರಿಪಡಿಸುವ ಸಾಧ್ಯತೆಗಳ ಬಗೆಗೆ ಯೋಚಿಸಬೇಕಷ್ಟೆ. ಅಂದ ಹಾಗೆ ಹೆಚ್ಚಿನ ಸಮಸ್ಯೆಗಳು ನಮ್ಮ ದೇಶದ ಆರ್ಥಿಕ ಸುಧಾರಿಸುವುದರಿಂದ ಸರಿಯಾಗಬಹುದು ಎನ್ನುವುದಾದರೆ TED ಜಾಲತಾಣದಲ್ಲಿರುವ ಈ ವೀಡಿಯೊವನ್ನು ನೋಡು: http://www.ted.com/talks/hans_rosling_asia_s_rise_how_and_when.html

ಮನಸು said...

ಗುರು,
ನಿಮ್ಮ ೫೦ನೇ ಸಂಚಿಕೆಯಲ್ಲಿ ಎಲ್ಲರ ಮನಸ್ಸಿನಳ್ಳುಯುವಂತ ಪ್ರಶ್ನೆಯನ್ನು ಮುಂದಿಟ್ಟಿದ್ದೀರಿ. ನಿಮ್ಮ ಆಫ್ ಸೆಂಚುರಿಗೆ ಶುಭಹಾರೈಕೆಗಳು ಹೀಗೆ ಮುಂದುವರಿಯಲಿ, ದೇಶದಲ್ಲಿನ ವ್ಯವಸ್ಥೆ ಎಲ್ಲವೂ ಏರುಪೇರಾಗಿದೆ ಇದನ್ನು ಸರಿಪಡಿಸಲು ಸಾಧ್ಯವಿದೆ ಮನಸ್ಸು, ಧೃಡನಿರ್ಧಾರ ಎಲ್ಲರಲ್ಲೂ ಬರಬೇಕು ಅಷ್ಟೆ. ಮೊದಲು ನಮ್ಮ ಮನೆ ಮನಗಳನ್ನು ಸರಿಪಡಿಸುತ್ತ ಬರಬೇಕು ಆನಂತರ ಒಬ್ಬರನ್ನೊಬ್ಬರು ನೋಡಿ ಕಲಿಯುತ್ತಾರೆ. ದೇಶ ಉದ್ದಾರವಾಗಲು ಪ್ರಾರಂಭ ಮನೆ ಮನೆಗಳಿಂದ ಜಾಗೃತರಾಗಬೇಕು.
ವಂದನೆಗಳು

ಚುಕ್ಕಿಚಿತ್ತಾರ said...

ಗುರು ಅವರೆ .ಒಳ್ಳೆಯ ಬರಹ. ಕಟ್ಟು ನಿಟ್ಟಾದ ಕಾನೂನಿನಿ೦ದ ಮತ್ತು ಅದನ್ನು ಪಾಲಿಸುವುದರಿ೦ದ ಸಮಸ್ಯೆ ತಹಬದಿಗೆ ತರಬಹುದೇನೋ. ಆದರೆ ರಕ್ಷಕರೆ ಭಕ್ಷಕರಾದರೆ ಯಾರಲ್ಲಿ ಮೊರೆ ಹೋಗುವುದು..?
ಏನನ್ನೊ ಹಿ೦ಬಾಲಿಸಲು ಹೋಗಿ ನಾವೇ ಕಳೆದು ಹೋಗುತ್ತಿದ್ದೇವೆ.
ವ೦ದನೆಗಳು.

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್,
ನಮ್ಮ ಸಮಸ್ಯೆಯೇ ಅದು, ಸುಧಾರಣೆ ಅವನಿಂದ ಆಗಲಿ
ಅನ್ನುತ್ತಲೇ ಸಮಯ ಕಳೆಯುತ್ತವೆ, ನಮ್ಮಿಂದ ಸುಧಾರಣೆಗೆ
ಪ್ರಯತ್ನಿಸುವುದೇ ಇಲ್ಲ, ರಸೆತಯಲ್ಲಿ ಕಸ ಬಿದ್ದರೆ ಮುನ್ಸಿಪಾಲಿಟಿ
ಯನ್ನು ಬೈಯ್ಯುತ್ತೇವೆ, ಬಸ್ ಸರಿಯಾದ ಸಮಯಕ್ಕೆ ಬರದಿದ್ದರೆ ಸಾರಿಗೆ ಸಂಸ್ಥೆಯನ್ನು
ಬೈಯ್ಯುತ್ತೇವೆ, ಹೀಗೆ ಬೇರೆಯವರ ಮೇಲೆ ಗೂಬೆ ಕೂರಿಸಿ ದೇಶ ಸುಧಾರಣೆಯ
ಭಾಷಣ ಬಿಗಿಯುತ್ತೇವೆ,
ನಾವೇ ಸುಧಾರಿಸದಿದ್ದರೆ ಬೇರೆಯವರಿಗೆ ಅಂದೇನು ಪ್ರಯೋಜನ ಅಲ್ಲವೇ?
ನಿಮ್ಮ ಅಬಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

Seetaraam sir,

thank you for your kind wishes,
it makes me to write more in future.

ಸಾಗರದಾಚೆಯ ಇಂಚರ said...

ಸುಮಾ,
ನಿಜ, ನಾವು ಅನುಕರಣೀಯರು ಆದರೆ ಅಂಧಾನುಕರಣೆಯಲ್ಲಿ
ನಿಸ್ಸೀಮರು, ನಮಗೆ ವಿದೇಶದ ಕೋಲ ಬೇಕು, ವಿದೇಶದ ಉಡುಗೆ ಇಷ್ಟ,
ವಿದೇಶಿ ಮಾದಕ ದ್ರವ್ಯಗಳೂ ಬೇಕು ಆದರೆ ವಿದೇಶಿ ಶಿಸ್ತು, ಸಮಯ ಪರಿಪಾಲನೆ ಬೇಡ,
ನಮ್ಮ ಅನುಕರಣೆಗೆ ಏನನ್ನೋಣ ಹೇಳಿ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸುಶ್ರುತ ಸರ್,
ನಿಮ್ಮ ಪ್ರೀತಿ ಹಾರೈಕೆ ಸದಾ ಇರಲಿ
ನೀವು ಓದುಗರೇ ಬರೆಯಲು ಸ್ಫೂರ್ತಿ

ಸಾಗರದಾಚೆಯ ಇಂಚರ said...

ಭಾವಜೀವಿ
ಕಾರಣಗಳನ್ನು ಹುಡುಕುವುದರಲ್ಲಿ ನಾವು ಸಮಯ ಕಳೆದುಬಿಡುತ್ತೇವೆ,
ಮನೆ ಕಟ್ಟುವಾಗ ಅದಕ್ಕೆ ಬೇಕಾದ ಇಂಜಿನಿಯರ್ ಬುದ್ಧಿ ನಮ್ಮಲ್ಲಿ ಬೇಕಾದಷ್ಟಿದೆ
ಆದರೆ ಕೆಲಸ ಮಾಡುವ ವ್ಯವಧಾನ ಇಲ್ಲ
ಅಭ್ಯಾಸವಾಗಿ ಹೋಗಿದೆ ನಮಗೆ ಮೈಗಳ್ಳತನ,
ನೀವು ಕಳಿಸಿದ ವಿಡಿಯೋ ಚೆನ್ನಾಗಿದೆ,
ದೇಶದ ಸುಧಾರಣೆ ನಮ್ಮಿಂದಲೇ ಆಗಬೇಕು

ಸಾಗರದಾಚೆಯ ಇಂಚರ said...

ಮನಸು,
ನಿಮ್ಮ ಮಾತು ನಿಜ,
ನಮ್ಮ ಸುಧಾರಣೆ ಆದರೆ ದೇಶದ ಸುಧಾರಣೆ ಆದಂತೆ,
ಆದರೆ ನಾವು ಇನ್ನೊಬ್ಬರ ಮನೆಯ ಬಗೆಗೆ ತಲೆ ಕೆಡಿಸಿ ಕೊಂಡಷ್ಟು ನಮ್ಮ
ಮನೆಯ ಬಗೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಅಲ್ಲವೇ?
ನಿಮ್ಮ ನೆಚ್ಚಿನ ಹಾರೈಕೆಗೆ ನಾನು ಅಭಾರಿ,
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ದೇಶದ ಮೂಲ ಸಮಸ್ಯೆಯೇ ನಮ್ಮ ನಾಯಕರು,
ಎಷ್ಟೇ ಒಳ್ಳೆಯವರೇ ಅಧಿಕಾರಕ್ಕೆ ಬರಲಿ
ಆ ಕುರ್ಚಿಯ ಮಹಿಮೆಯೇ ಅಂಥದ್ದು
ಅದು ಅವನನ್ನು ಭ್ರಷ್ಟನನ್ನಾಗಿಯೇ ಮಾಡುತ್ತದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಪ್ರೋತ್ಸಾಹ ಹೀಗೆಯೇ ಇರಲಿ

yogish bhat said...

Thank you for sharing your thoughts. It's really a special one from you. I remebered an old saying "Everyone must experience the pain in life- either the pain of descipline or the pain of regret."
I don't deserve to put any comments but I will say please continue and all the very best to you.

Amit Hegde said...

Hey cool man.... quite meaningful... keep up the good wok... :)

http://eyeclickedit.blogspot.com/

ಸಾಗರದಾಚೆಯ ಇಂಚರ said...

Dear Yogish
thanks for your comments,
i haven't written article for the last one month so thought of writing one.
Your comment made me to write more and more articles.

ಸಾಗರದಾಚೆಯ ಇಂಚರ said...

Dear Amit,
thanks man
keep visiting the blog

ಶಿವಪ್ರಕಾಶ್ said...

ಗುರುಮೂರ್ತಿ ಅವರೇ,
ನಿಜಕ್ಕೂ ಚಿಂತನೆಗೆ ಈಡುಮಾಡುವ ಬರಹ.
ತುಂಬಾ ಚನ್ನಾಗಿ ಬರೆದಿದ್ದೀರಿ.
ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳನ್ನು ಆಚ್ಚುಕಟ್ಟಾಗಿ ಪಾಲಿಸಿದರೆ ನಮ್ಮ ದೇಶ ಅಗ್ರಶ್ರೇಣಿಯಲ್ಲಿರುತ್ತೆ.
ನಿಮ್ಮ ಅರ್ಧಶತಕಕ್ಕೆ ಅಭಿನಂದನೆಗಳು...
ಅದೆಸ್ತು ಬೇಗ ಶತಕ ಬಾರಿಸಿ.

ಸಾಗರದಾಚೆಯ ಇಂಚರ said...

ಶಿವೂ,
ನಿಮ್ಮ ಹ್ರದಯತುಮ್ಬಿದ ಹಾರೈಕೆಗೆ ಧನ್ಯವಾದಗಳು
ಪ್ರೀತಿ ಪ್ರೋತ್ಸಾಹ ಹೀಗೆಯೇ ಇರಲಿ

ಜಲನಯನ said...

ಗುರು, ಸೂಚ್ಯ ರೂಪದ ಘಟನೆಗಳನ್ನು ಉದಹರಿಸಿ..ನಮ್ಮ ನಡುವಿನ ಅಸುರರ, ದೆವ್ವಗಳ, ಪೀಡೆಗಳ ಪರಿಚಯಮಾಡುತ್ತಾ ಬಹು ವೈಚಾರಿಕ ದ್ವಂದ್ವಗಳಿಗೆ ಬೀಜ ಬಿತ್ತಿದ್ದೀರಿ...ಸಂಪತ್ತಿದೆ ಆದರೆ ..ಬಡತ ಕಿತ್ತು ತಿನ್ನಿತ್ತಿದೆ..ವಿದ್ಯಾವಂತರು ಆದ್ರೆ ..ಮೂರ್ಖರಂತೆ...ಒಬ್ಬನ ಕಾಲು ಮತ್ತೊಬ್ಬ ಎಳೆವ ನಾಯರಿಂದ ಆಳಲ್ಪಡುವ ನಾವು..ಎಷ್ಟು ಬುದ್ಧಿವಂತರು..? ಎಂದು ನಮ್ಮನ್ನು ನಾವೇ ಕೇಳಿಕೊಳ್ಳುವಹಾಗೆ ಮಾಡಿದ್ದೀರಿ...ಚನ್ನಾಗಿದೆ ವಿಷಯ ಮಂಡನೆಯ ಪರಿ.

Ittigecement said...

ಗುರುಮೂರ್ತಿಯವರೆ...

ಜನಜಾಗ್ರತಿ, ಶಿಕ್ಷಣ ಇದರಿಂದ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳ ಬಹುದೇನೋ...

ಚಿಂತನೆಗೆ ಹಚ್ಚುವ ಬರಹ...
ಮತ್ತೆ ಮತ್ತೆ ಓದಿದೆ...

ನಿಮ್ಮ ಐವತ್ತೆನೆಯ ಬರಹಕ್ಕಾಗಿ ಅಭಿನಂದನೆಗಳು...ಶುಭಾಶಯಗಳು..

ವಾಸ್ತವಿಕತೆಗೆ ಕನ್ನಡಿಹಿಡಿದ ನಿಮ್ಮ ಬರಹಕ್ಕೂ ಅಭಿನಂದನೆಗಳು..

ಮನಸಿನ ಮಾತುಗಳು said...

ಬಹಳ ಚೆಂದದ ಬರಹ...
ಇಷ್ಟವಾಯಿತು...
ಮನುಷ್ಯನಿಗೆ ಮೂಲಭೂತ ಸೌಕರ್ಯಗಳೂ ಸಿಗದಿದ್ದಾಗ ಅಡ್ಡ ದಾರಿ ಹಿಡಿಯುವುದು ಸಹಜ...
ಸರಕಾರ ಆದಷ್ಟು ಇದರ ಬಗ್ಗೆ ಕ್ರಮ ಕೈಗೊಂಡರೂ ಅದು ಮಧ್ಯದಲ್ಲೇ ನಿಂತು ಹೋಗುವ ಸಾಧ್ಯತೆಗಳೇ ಹೆಚ್ಚು..
ನೀವು ತಿಳಿಸಿದ ಏಳೂ ಘಟನೆಗಳಲ್ಲೂ ಮನುಷ್ಯ ಪರಿಸ್ಥಿತಿಯ ಕೈಗೊಂಬೆ...
ಹಾಗೆ ನಿಮ್ಮ ಲೇಖನಗಳು ಇನ್ನಷ್ಟು ಬರಲಿ ಎಂಬ ಹಾರೈಕೆಯೊಂದಿಗೆ...
ದಿವ್ಯ..:)

ಸೀತಾರಾಮ. ಕೆ. / SITARAM.K said...

೨೦೦೬ ರಲ್ಲಿ ನಾನು ಬ್ರಾಜ಼ಿಲ್-ಗೆ ಹೋದಾಗ, ಕಾಡಿನಲ್ಲಿ ಅದಿರು ಹುಡುಕಾಟಕ್ಕೆ ತಿರುಗುತ್ತಾ ಇದ್ದಾಗ, ಮೊದಲ ದಿನ ನಾವು ತ೦ದ- ಬಿಸ್ಕೀಟು, ಬಾಳೆಹಣ್ಣು, ಹಣ್ಣಿನರಸ, ನೀರು ಕುಡಿದು, ಅವುಗಳ ಸಿಪ್ಪೆ, ಖಾಲಿ ಡಬ್ಬ, ಬಾಟ್ಲಿ ನಾವು ಕುಳಿತಲ್ಲಿ ಬಿಟ್ಟು ಎದ್ದು ಮು೦ದೆ ಹೊರಟೆವು. ನಮ್ಮ ಟ್ಯಾಕ್ಷಿ ಚಾಲಕ ಒ೦ದು ಪ್ಲಾಸ್ಟಿಕ್ ಬ್ಯಾಗನಲ್ಲಿ ಎಲ್ಲಾ ಕಸ ತು೦ಬಿದ-ಹಣ್ಣಿನ ಸಿಪ್ಪೆ ಸೇರಿಸಿ. ಅಮೇಲೆ ಅದನ್ನು ಕಾರಿನ ಡಿಕ್ಕಿಯಲ್ಲಿಟ್ಟ. ನಾವು ಅವನಿಗೆ "ಅದನ್ನೇಕೆ ತು೦ಬಿದೆ ಕಾಡಲ್ಲವೇ" ಎ೦ದಾಗ ಅವನು ಪೊರ್ತುಗೀಸನಲ್ಲಿ ಹೇಳಿದ್ದು -"ಪೇಪರ್, ಪ್ಲಾಸ್ಟಿಕ್, ಬ್ಯಾಗಡಿ ಕವರ್, ಪ್ರಾಣಿಗಳು ತಿ೦ದರೇ ಅವಕ್ಕೆ ತೊ೦ದರೆ ಅಲ್ಲದೇ ಅವುಗಳಿಗಾರು ಅಲ್ಲಿ ವೈಧ್ಯರು ಅದಕ್ಕೆ ತೆಗೆದಿದ್ದು' -ಅ೦ದ. "ಹಣ್ಣಿನ ಸಿಪ್ಪೆ ಪ್ರಾಣಿಗಳು ತಿನ್ನುತ್ತವಲ್ಲಾ ಅದನ್ನೇಕೆ ತೆಗೆದೆ" ಎ೦ದರೇ, "ಹಣ್ಣು ತಿ೦ದು ಸಿಪ್ಪೆ ಪ್ರಾಣಿಗಳಿಗೆ ಬಿಡೋ ಸ೦ಪ್ರದಾಯ ವಿವೇಕಿ ಮಾನವನ ಯೋಗ್ಯತೆಗೆ ತರವಲ್ಲ" ಎ೦ದ. ಆ ಸ೦ಗ್ರಹಿಸಿದ ಕಸವನ್ನೆಲ್ಲಾ ಊರಲ್ಲಿ ತ೦ದು ಕಸದ ತೊಟ್ಟಿ ಹತ್ತಿರ ಕಾರ್ ನಿಲ್ಲಿಸಿ, ಕಸವನ್ನೆತ್ತಿ ತೆಗೆದುಕೊ೦ಡು ಹೋಗಿ ಅದರಲ್ಲಿ ಹಾಕಿ ಕಾರನ್ನು ಮುನ್ನಡೆಸಿದ.
ಅವನಿ೦ದ ಕಲಿತ ಈ ಪಾಠ ನಾನು ಮರೆತಿಲ್ಲ. ನನ್ನ ಕಾಡು ಮೇಡು ತಿರುಗಾಟದಲ್ಲಿ ಇ೦ದಿಗು ಅವನು ಕಲಿಸಿದ ಪಾಠ ಮರೆಯದೇ ಅನುಸರಿಸುತ್ತಿದ್ದೇನೆ. ನನ್ನ ಜೊತೆ ಮಿತ್ರರು ನನ್ನನ್ನು ವಿಚಿತ್ರ ಅನ್ನುವ೦ತೆ ನೋಡುತ್ತಾರೆ. ಅವ್ರಿಗೆ ಆಗ ಈ ಕಥೆ ಹೇಳುತ್ತೆನೆ. ಅವರು ಇದನ್ನು ಒಪ್ಪಿ ಅನುಸರಿಸುತ್ತಾರೆ. ನನ್ನ ಮನೆ ಕಸ ನಾನು ಸ೦ಗ್ರಹಿಸಿ, ಸುಮಾರು 3೦೦ಮಿ ದೂರದಲ್ಲಿರುವ ಕಸದ ತೊಟ್ಟಿಗೆ ಹಾಕಿ ಬರುವ ನನ್ನನ್ನು ಅಕ್ಕಪಕ್ಕದಲ್ಲಿರುವ ಜನ (ಪಕ್ಕದಲ್ಲಿರುವ ಖಾಲಿ ಸೈಟೊ೦ದರಲ್ಲಿ ಕಸ ಚೆಲ್ಲುವ)ನನ್ನ ವಿಚಿತ್ರ ಪ್ರಾಣಿ ಎನ್ನುವ೦ತೆ ನೋಡುತ್ತಾರೆ. ನಾನು ನನ್ನ ಕಾಯಕ ಮು೦ದುವರೆಸುತ್ತೆನೆ. ಇತ್ತೀಚೆಗೆ ಒ೦ದಿಬ್ಬರು ನನ್ನನ್ನು ಅನುಕರಿಸಲು ಪ್ರಾರ೦ಭಿಸಿರುವದು ನನಗೆ ಹೆಮ್ಮೆ ವಿಷಯ.
ಯಾರಾದರು ಹಣ್ಣು ತಿ೦ದು ರಸ್ತೆಯಲ್ಲಿ ಬಿಸಾಡಿದರೇ ಏನೂ ಹೇಳದೇ ಅದನ್ನೆತ್ತಿ ಪಕ್ಕದ ತೊಟ್ಟಿಯಲ್ಲಿ ಹಾಕಿ ಬರುತ್ತೇನೆ. ಕೆಲವರು ಸಾರಿ ಎ೦ದು ತಾವು ಇಸಿದುಕೊ೦ಡು ಹಾಕುತ್ತಾರೆ. ಇನ್ನು ಕೆಲವರು ನನಗೇನು ಅವನ ಕೊಬ್ಬು ಹಾಕಲಿ ಬಿಡು ಎ೦ದು ನಿಲ್ಲುತ್ತಾರೆ. ನಾನು ನನ್ನ ಕಾಯಕ ಮು೦ದುವರೆಸುವೆ.
ಅದರೇ ನನಗೊ೦ದು ವಿಚಿತ್ರ ಪ್ರಶ್ನೇ ಕಾಡೊದೆನೆ೦ದರೇ ಏರ್-ಪೊರ್ಟ್ ನಲ್ಲಿ ಸರಿಯಾಗಿ ನಾಗರಿಕರ೦ತೆ ವರ್ತಿಸುವ ಜನ ಬಸ್-ಸ್ಟ್ಯಾ೦ಡಲ್ಲಿ ಅನಾಗರಿಕ೦ತೆ ವರ್ತಿಸುವ ಪರಿ.

Prabhuraj Moogi said...

ಸಾಮಾಜಿಕ ಚಿಂತನೆಯನ್ನು ಸರಳವಾಗಿ ಏಳು ಪ್ರಸಂಗಗಳೊಂದಿಗೆ ಹೇಳಿದ್ದೀರಿ... ಮಾನವೀಯತೆ ಬಗ್ಗೆ ಹೇಳೊದು ತೀರಾ ಕಷ್ಟ, ಈ ಭಿಕ್ಷೇ ಬೇಡುವವರ್ ಬಗ್ಗೇನೇ ನೋಡಿ, ಎಲ್ರೂ ನಿಜಾಕ್ಕೂ ಬಡವರಲ್ಲ, ಸುಮ್ನೇ ಏನೂ ಆದವರ ಹಾಗೆ ನಾಟಕ ಮಾಡಿ ಅನುಕಂಪ ಬರಿಸಿ ದುಡ್ಡು ಕೀಳುತ್ತಾರೆ.. ಆದರೆ ಕೊಡದಿದ್ದರೆ ಎಲ್ಲಿ ಏನೂ ಮಾನವೀಯತೆ ಇಲ್ಲವೇನೊ ಅನಿಸುತ್ತದೆ... ಹಾಗಾಗಿ ಇದರ ಬಗ್ಗೆ ಹೇಳುವುದೇ ಕ್ಲಿಷ್ಟ

shivu.k said...

ಗುರುಮೂರ್ತಿ ಹೆಗಡೆ ಸರ್,

ಮೊದಲಿಗೆ ನಿಮ್ಮ ಐವತ್ತನೆ ಬರಹಕ್ಕೆ ಅಭಿನಂದನೆಗಳು. ಐವತ್ತಕ್ಕೆ ತುಂಬಾ ಉತ್ತಮವಾದ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ವಿದೇಶಗಳಿಲ್ಲಿಯಂತೆ ಮಾನವೀಯ ಅಂಶಗಳು ನಮ್ಮಲ್ಲಿ ಏಕಿಲ್ಲ?

ನಾವು ಹೊಸ ಶತಮಾನದಲ್ಲಿದ್ದರೂ ನಮ್ಮ ತೊಡಕುಗಳನ್ನು ಹೋಗಲಾಡಿಸಿಕೊಳ್ಳಲು ಆಗುತ್ತಿಲ್ಲವೆಂಬುದೇ ನನ್ನ ಕೊರಗು ಕೂಡ...
ಅರ್ಥಪೂರ್ಣ ಲೇಖನಕ್ಕೆ ಅಭಿನಂದನೆಗಳು.

PARAANJAPE K.N. said...

ಗುರೂ,
ನಿಮ್ಮ ಬರಹದಲ್ಲಿ ಕಟು ವಾಸ್ತವ ಅಡಗಿದೆ. ಐವತ್ತರ ಸಂಭ್ರಮದಲ್ಲಿ ನಿಮ್ಮೊ೦ದಿಗೆ ನಾನೂ ಭಾಗಿ, ನಿಮ್ಮ ಮೌಲಿಕ ಬರಹಗಳು, ಕವನಗಳು ಇನ್ನಷ್ಟು ಬರಲಿ ಎ೦ಬುದು ನನ್ನ ಹಾರೈಕೆ

sunaath said...

ಅರ್ಧಶತಕ ಬಾರಿಸಿದ್ದಕ್ಕೆ ಶುಭಾಶಯಗಳು. ಬೇಗನೇ ಶತಕವನ್ನೂ ಪೂರೈಸಿರಿ ಎಂದು ಹಾರೈಸುತ್ತೇನೆ.

Snow White said...

ನಿಮ್ಮ ಐವತ್ತೆನೆಯ ಬರಹಕ್ಕಾಗಿ ಅಭಿನಂದನೆಗಳು ಸರ್ :)
ಲೇಖನ ಚೆನ್ನಾಗಿದೆ ಸರ್..ಸದ್ಯದ ಪರಿಸ್ತಿತಿಯನ್ನು ಚೆನ್ನಾಗಿ ಚಿತ್ರಿಸಿರುವಿರಿ ..ಎಲ್ಲರು ಶ್ರಮಿಸಿದಾಗ ಮಾತ್ರ ದೊಡ್ಡ ಬದಲಾವಣೆ ತರಲು ಸಾಧ್ಯ ..ನಮ್ಮ ಕಡೆಯಿಂದ ಆದಷ್ಟು ನಾವು ಮಾಡಬೇಕು..:)

ಸಾಗರದಾಚೆಯ ಇಂಚರ said...

ಜಲನಯನ ಅಜ್ಹಾದ ಸರ್
ದೇಶ ಎತ್ತ ಸಾಗುತ್ತಿದೆ ಅನ್ನೋದೇ ಕಷ್ಟ,
ಎಲ್ಲ ಉದ್ಯೋಗಿಗಳೂ ಹಾಗೂ ಕಂಪನಿಗಳೂ ಒಂದೇ ಕಡೆ ಸೇರುತ್ತಿವೆ
ಪ್ರತಿಯೊಂದು ನಗರಕ್ಕೂ ಒಂದೊಂದು ಬ್ರಹತ್ ಉದ್ದಿಮೆ ಸ್ಥಾಪಿಸಲು ನೆರವಾಗುವ ಮೂಲಭೂತ ಸೌಕರ್ಯ ನೀಡಿದರೆ
ನಾಡಿನ ಹಾಗೂ ಹಳೀಯ ಉದ್ಧಾರ ಆಗಬಹುದೇನೋ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

Raghu said...

ಬರಹಕ್ಕೆ ಅಭಿನಂದನೆಗಳು...ನಮ್ಮ ನಾಯಕರ ಹೊಗಳಲಿಕ್ಕೆ (ತೆಗಳಿಕೆ - ಅವರಿಗೆ ಹೊಗಳಿಕೆ) ಹೋದ್ರೆ ಸುಮ್ಮನೆ ನಮ್ಮ ಟೈಮ್ ವೇಸ್ಟ್... ಅದಕ್ಕಿಂತ ನಾವು ನಮ್ಮ ಕೈಲಾದಸ್ಟು ನಮ್ಮನ್ನು ಮತ್ತೆ ಸುತ್ತ ಮುತ್ತಲಿನ ವಾತಾವರಣ ಸರಿಮಾಡುವ ಕೆಲಸ ಮಾಡಬಹುದು. ಒಳ್ಳೆಯ ಸಾಮಾಜಿಕ ಚಿಂತನೆ... ಒಳ್ಳೆಯ ಪ್ರಯತ್ನ... ಇಗ ದೇಶ ನಮ್ಮ ಕಣ್ಣಮುಂದಿದೆ... ಕೈ ಕೈ ಸೇರುವ.. ಮುಂದೆ ತರುವ.. ಎಸ್ತಗೊತ್ತೋ ಅಸ್ಟು... ಅಲ್ವ..?
ನಿಮ್ಮವ,
ರಾಘು.

ಆನಂದ said...

ಐವತ್ತಕ್ಕೆ ಶುಭಾಶಯಗಳು.
ಶತಕದ ಸಂಭ್ರಮ ಬೇಗನೇ ಬರಲಿ.

ಬಿಸಿಲ ಹನಿ said...

ಗುರು ಅವರೆ,
ಇದೊಂದು ವಿಚಾರಪೂರ್ಣ ಲೇಖನ. ಎಲ್ಲರೂ ಈ ನಿಟ್ಟಿನಲ್ಲಿ ಚಿಂತಿಸಿದಲ್ಲಿ ಖಂಡಿತ ನಮ್ಮ ದೇಶ ಉದ್ಧಾರವಾಗುವದು. ಆದರೆ ಭಾರತದಂಥ ದೇಶಗಳಲ್ಲಿ ಇವನ್ನೆಲ್ಲಾ ಇಂಪ್ಲಿಮೆಂಟ್ ಮಾಡಲು ಇನ್ನೂ ಎಷ್ಟೋ ವರ್ಷಗಳೇ ಬೇಕಾಗಬಹುದು ಅಥವಾ ಸಾಧ್ಯವಾಗಲಿಕ್ಕಿಲ್ಲ. ಏಕೆಂದರೆ ಭಾರತೀಯರ ಮನೋಭಾವ ಹಾಗಿದೆ ಮತ್ತು ನಮ್ಮಲ್ಲಿಯೇ ಈ ವಿಷಯಗಳ ಕುರಿತು ಅನೇಕ ಗೊಂದಲಗಳಿವೆ. ಇವತ್ತು ಕಾರ್ಲ್ ಮಾರ್ಕ್ಸ್, ಗಾಂಧಿ ತತ್ವಗಳೆಲ್ಲವೂ ಅನುಷ್ಟಾನಕ್ಕೆ ಬರದೆ ಲೇವಡಿಗೊಳಗಾಗುತ್ತಿವೆ. ಏಕೆಂದರೆ ಜನರ ಪ್ರಕಾರ ಅವು ವಾಸ್ತವಕ್ಕೆ ದೂರವಾಗಿವೆ ಎನ್ನುವದು. ದೊಡ್ದ ದೊಡ್ದ ಮ್ಯಾನೇಜ್ ಮೆಂಟ್ ಸ್ಕಿಲ್ಸ್ ಕಲಿಸುವ ಎಷ್ಟೊ ಕಾಲೇಜುಗಳು ಅವನ್ನು ಎಳ್ಲಷ್ಟೂ ಪಾಲಿಸುತ್ತಿಲ್ಲ. ಏಕೆಂದು ಕೇಳಿದರೆ ಅವು ಪುಸ್ತಕದಲ್ಲಿರುವದಕ್ಕೆ ಮಾತ್ರ ಲಾಯಕ್ಕು ಎಂದು ಹೇಳುತ್ತಾರೆ. ಇಂಥ ವ್ಯವಸ್ಥೆಯ ನಡುವೆ ಇರುವ ನಾವು ಬದಲಾಗುವದು ಕಷ್ಟ. ನೀವು ಹೇಳಿದಂತೆ ಬದಲಾವಣೆ ನಮ್ಮಿಂದ ಆರಂಭವಾಗಿ ನಾವು ಒಳ್ಳೆಯ ಕೆಲಸಮಾಡುವತ್ತ ಮನಸ್ಸು ಮಾಡಿದರೆ ಖಂಡಿತ ಎಲ್ಲವೂ ಬದಲಾಗಬಹುದು. Congratulations for the fiftieth post!

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಕಲಿಯದವರೇ ಸಮಾಜದಲ್ಲಿ ಕಡಿಮೆ ಅನಾಹುತ ಮಾಡುತ್ತಾರೆ
ಕಲಿತವರೇ ಅಪಾಯಕಾರಿಗಳಾಗುತ್ತಿದ್ದಾರೆ,
ಮನುಷ್ಯನ ಮನಸ್ಸಿನಲ್ಲಿ ದೊಡ್ಡ ಬದಲಾವಣೆಯ ಸಮುದ್ರವೇ ಹರಿಯಬೇಕು
ಜನಜಾಗ್ರತಿ ಬಹಳ ಅವಶ್ಯಕ
ನಿಮ್ಮ ಹಾರೈಕೆಗೆ ಮತ್ತು ಅಭಿಪ್ರಾಯಕ್ಕೆ ಸದಾ ಅಭಾರಿ
ಹೀಗೆಯೇ ಪ್ರೋತ್ಸಾಹಿಸುತ್ತಿರಿ

ಸಾಗರದಾಚೆಯ ಇಂಚರ said...

ದಿವ್ಯಾ
ಸರಕಾರ ಮಾಡಿದ ಎಷ್ಟೋ ಒಳ್ಳೆಯ ಯೋಜನೆಗಳಿಗೆ
ವಿರೋಧ ಪಕ್ಷದ ವಿರೋಧವೋ, ಜನರ ಅಸಹಕಾರವೋ ಸಿಕ್ಕಿ
ಕಳಚಿ ಬೀಳುತ್ತದೆ,
ಕೆಲವು ಸಂಧರ್ಭದಲ್ಲಿ ಸರಕಾರವೇ ಒಳ್ಳೆಯದನ್ನು ಮಾಡುವುದಿಲ್ಲ
ರಕ್ಷಕನೇ ಭಕ್ಷಕನಾಗಿದ್ದೆ ಹೆಚ್ಚು
ಮೂಲಭೂತ ಸೌಕರ್ಯ ಸಿಕ್ಕಿದರೆ ಮನುಷ್ಯ ಮ್ರುಗನಾಗುವುದನ್ನು ತಪ್ಪಿಸಬಹುದು ಎನ್ನುವುದಕ್ಕೆ ಪಾಶ್ಯಾತ್ಯ
ದೇಶಗಳ ಅಭಿವ್ರದ್ದಿಯೇ ಸಾಕ್ಷಿಯೇನೋ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಸೀತಾರಾಂ ಸರ್,
ನಿಜ, ಏರ್ಪೋರ್ಟ್ ನಲ್ಲಿ ಸಜಾನರಂತೆ ಇರುವ ನಾವು ನಾಡಿನ ಒಳಗೆ ಬಂದಾಗ
ಅನಾಗರಿಕಾರಾಗುತ್ತೇವೆ,
ಬಹುಶ ಸಮಾಜವೇ ನಮಗೆ ಅಡ್ಡ ದಾರಿ ಹಿಡಿಸುತ್ತಿದೆ ಎನಿಸುತ್ತದೆ,
ನಾವು ಸಂಸ್ಕಾರ ಹೀನರಲ್ಲ
ಆದರೆ ಪಡೆದ ಸಂಸ್ಕಾರವನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ
ಮಾನವೀಯ ಚಿಂತನೆಗಳ ಬದಲಾವಣೆ ಅಗತ್ಯತೆ ಇದೆ
ಧನ್ಯವಾದಗಳು

ದಿನಕರ ಮೊಗೇರ said...

ಗುರು ಸರ್,
ತುಂಬಾ ವಸ್ತುನಿಷ್ಠ ಲೇಖನ...... ಚಿಂತನೆಗೆ ಹಚ್ಹತ್ತೆ ..... .... ನಮ್ಮ ದೇಶ ನಿಜವನ್ನ ಜೀರ್ಣ ಮಾಡಿಕೊಳ್ಳೋದು ತುಂಬಾ ತಡವಾಗತ್ತೆ..... ಐವತ್ತರ ಸಂಬ್ರಮ ಬೇಗಅಇನೂರಾಗಲಿ....

ಸಾಗರದಾಚೆಯ ಇಂಚರ said...

ಪ್ರಭುರಾಜ ಅವರೇ,
ಕೆಲವೊಮ್ಮೆ ಭಿಕ್ಷುಕರ ನಾತಕದಿಂದಾಗಿ ನಿಜಕ್ಕೂ ಸಂಕತದಲ್ಲಿರುವವರು
ಮೋಸಕ್ಕೆ ಒಳಗಾಗುತ್ತಾರೆ
ನಿಜಕ್ಕೂ ಬಡವರು ಸ್ವಾಭಿಮಾನಿಗಳಗಿರುತ್ತಾರೆ, ಅವರು ದುಡಿದು ತಿನ್ನಲು ರೆಡಿಯಿರುತ್ತಾರೆ
ಆದರೆ ಮೈಗಳ್ಳರು ಭಿಕ್ಷೆ ಎತ್ತುತ್ತಾರೆ ಯಾವ ಕೆಲಸ ಮಾಡದೇ
ಅದಕ್ಕೆ ಸರಕಾರೆವೆ ಮುಂದೆ ಬಂದು ಅವರಿಗೆ ನ್ಯಾಯ ದೊರಕಿಸಿಕೊಡಬೇಕು
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಶಿವೂ ಸರ್
ನಾವೂ ಬೆಳೆದಂತೆ ಇನ್ನೂ ಅನಾಗರಿಕರಾಗುತ್ತಿದ್ದೆವೆಯೇ ಎನಿಸುತ್ತದೆ ಅಲ್ಲವೇ?
ಆತ್ಮಹತ್ಯ ಬಾಂಬ್, ಸರಣಿ ಸ್ಫೋಟ , ಒಂದೇ ಎರಡೇ, ಮನುಷ್ಯ ಮನುಷ್ಯನನ್ನೇ ಕೊಲ್ಲುವಷ್ಟರ
ಮಟ್ಟಿಗೆ ಕೆಟ್ಟವನಾಗುತ್ತಿದ್ದಾನೆ
ಮಾನವೀಯತೆ ಎಲ್ಲಿ ಹೋಯಿತು? ಇದೆ ಅಭಿವ್ರದ್ದಿಯೇ?
ಎಲ್ಲೆಲ್ಲೂ ಹೆದರಿಕೆ ಭಯ ಇದೆ, ಇದಕ್ಕೆ ಕೊನೆ ಇಲ್ಲವೇ?
ಅಭಿಪ್ರಾಯಕ್ಕೆ ಧನ್ಯವಾದಗಳು
ಹಾರೈಕೆ ಸದಾ ಇರಲಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ನಿಮ್ಮ ಪ್ರೀತಿ ಆಶಿರ್ವಾದ ಸದಾ ಇರಲಿ
ನಿಮ್ಮ ಮಾತುಗಳು ಬರೆಯಲು ಪ್ರೋತ್ಸಾಹ ನೀಡುತ್ತವೆ

ಸಾಗರದಾಚೆಯ ಇಂಚರ said...

ಸುನಾಥ್ ಸರ್,
ಶತಕದ ಹಾರೈಕೆಗೆ ಧನ್ಯವಾದಗಳು
ಬ್ಲಾಗ್ ಆರಂಬಿಸಿದಾಗ ೫೦ ಬರಹ ಬರೆಯಲಾಗುತ್ತದೆಯೋ ಇಲ್ಲವೋ ಎಂಬ ಅಳುಕಿತ್ತು
ಇದಕ್ಕೆ ನೀವೇ ಕಾರಣರು
ನಿಮ್ಮ ಮಾತುಗಳು ಸದಾ ಪ್ರೋತ್ಸಾಹ ನೀಡಿವೆ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Snow White,
ಹೌದು, ಸುಧಾರಣೆ ನಮ್ಮಿಂದಲೇ ಆರಂಬಿಸಬೇಕು
ನಮ್ಮ ಮನೆ ಸುಧಾರಿಸದರೆ ಮಾತ್ರ ಇನ್ನೊಬ್ಬರ ಸುಧಾರಣೆ ಮಾಡಲು ಸಾದ್ಯ
ಇನ್ನೊಬ್ಬರ ಹುಳುಕು ಹೇಳುವುದಕ್ಕಿಂತ ಮುಂಚೆ ನಮ್ಮ ಹುಳುಕು ಸರಿ
ಪಡಿಸಿಕೊಳ್ಳಬೇಕಾಗಿದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ರಾಘು ಸರ್
ನಿಮ್ಮ ಮಾತು ನೂರಕ್ಕೆ ನೂರು ಸತ್ಯ
ನಮ್ಮ ನಾಯಕರಿಗೆ ದೇಶ ಕೊಟ್ಟು ಬಹಳಷ್ಟು ವರ್ಷ ನೋಡಿದ್ದೇವೆ
ನಮ್ಮ ಕೈಲಾದ ಕೆಲಸ ನಾವು ಮಾಡಬೇಕಾಗಿದೆ
ಇದೆ ದೇಶ ಚೀನೀಯರ ಕೈಲಿದ್ದರೆ ಇಷ್ಟೊತ್ತಿಗೆ ಅವರು ವಿಶ್ವದಲ್ಲಿಯೇ ನಂಬರ್ ಒನ್ ಮಾಡುತ್ತಿದ್ದರು
ನಮ್ಮಲ್ಲಿ ಹಣವಿದೆ, ಬುದ್ಧಿಶಕ್ತಿಯಿದೆ
ಆದರೆ ಭ್ರಷ್ಟಾಚಾರ, ಲಂಚ ಗುಳಿತನ, ಹಿಂಸೆ, ಹೀಗೆ ಎಲ್ಲವೂ ದೇಶವನ್ನೇ ನುಂಗಿ ಹಾಕುತ್ತಿವೆ
ಅಭಿಪ್ರಾಯಕ್ಕೆ ಧನ್ಯವಾದಗಳು
ಒಗ್ಗಟ್ಟಿನಲ್ಲಿ ಬಲವಿದೆ ಅಲ್ಲವೇ?

ಸಾಗರದಾಚೆಯ ಇಂಚರ said...

ಆನಂದ್ ಸರ್
ನಿಮ್ಮ ಶುಭಾಶಯಗಳಿಗೆ ನನ್ನ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಬಿಸಿಲ ಹನಿ ಉದಯ್ ಸರ್
ಹೌದು, ನಮಗೆ ಇಂದು ಗಾಂಧೀ ತತ್ವ ಬೇಕಾಗಿಲ್ಲ
ಆದರೆ ಇದೆ ಗಾಂಧಿಯನ್ನು ಅಮೇರಿಕಾದ ಅಧ್ಯಕ್ಷರಾದ ಒಬಾಮ ಅವರು ಎಲ್ಲೆಂದರಲ್ಲಿ ಹೊಗಳುತ್ತಿದ್ದಾರೆ
ಮೊನ್ನೆ ನೊಬೆಲ್ ಶಾಂತಿ ಪುರಸ್ಕಾರ ಸಮಾರಂಭದಲ್ಲೂ ಅವರು ಗಾಂಧಿಯವರ ಬಗ್ಗೆ ಮಾತನಾಡಿದರು
ನಮ್ಮ ಚಿನ್ನದ ಬಗ್ಗೆ ನಮಗೆ ಗೊತ್ತಿಲ್ಲ, ಆದರೆ ಅದೇ ಚಿನ್ನದ ಬೆಲೆ ವಿದೇಶಿಯರಿಗೆ ತಿಳಿದಿದೆ
ನಾವು ವಿದೇಶಿಯರಿಂದ ಬೇಡದ ಎಲ್ಲವನ್ನೂ ಕಲಿತಿದ್ದೇವೆ, ಆದರೆ ಮಾನವೀಯ ಮೌಲ್ಯಗಳ ಬೆಲೆ ಕಲಿತಿಲ್ಲ
ಇಂದು ಶಾಲಾ ಕಾಲೇಜುಗಳು ನೌಕರರನ್ನು ಶ್ರುಷ್ಟಿಸುವ ಕಾರ್ಕಾನೆಗಳಾಗಿವೆಯೇ ಹೊರತು
ವಿವೇಚನೆ ಕಲಿಸುವ ಗುರುಕುಲವಾಗಿಲ್ಲ
ಕಲಿಯುವ ಪ್ರತಿಯೊಬ್ಬನೂ ತನಗೆ ಎಷ್ಟು ಸಂಬಳ ಬರಬಹುದು ಎಂದೇ ಚಿಂತಿಸುತ್ತಾನೆ
ನಾವು ಕೆಲ್ಸಕ್ಕೆ ಸೇರಿದರೂ ಮೊದಲಿಗೆ ಕೇಳುವ ಪ್ರಶ್ನೆ ನಿಮ್ಮ ಸಂಬಳ ಎಷ್ಟು ಎಂದು?
ಜನರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಏನು ಬೇಡ, ಏನು ಬೇಕು? ಎಂಬುದೇ ಮರೆತು ಶತಮಾನವೇ ಕಳೆದುಹೋಗಿದೆ ಎನಿಸುತ್ತದೆ ಅಲ್ಲವೇ?
ನಿಮ್ಮ ಹಾರೈಕೆಗೆ ಮತ್ತು ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ದಿನಕರ್ ಸರ್
ನಮ್ಮ ದೇಶದ ಸಮಸ್ಯೆಯೇ ಅದು,
ನಮಗೆ ನಮ್ಮ ಬೆಲೆಯನ್ನು ವಿದೇಶಿಯರು ತಿಳಿಸಿದಾಗಲೇ ಗೊತ್ತಾಗುತ್ತೆ,
ಒಮ್ಮೆ ಬ್ರಿಟೀಷರು ಧಾಳಿ ಮಾಡಿ ದೇಶದ ಸಂಪತ್ತನ್ನೇ ಕೊಳ್ಳೆ ಹೊಡೆದರು
ಇನ್ನೂ ನಮ್ಮನ್ನು ನಾವು ಅರಿಯದಿದ್ದರೆ ಮತ್ತೆ ಧಾಳಿ ತಪ್ಪಿದ್ದಲ್ಲ
ಹಾರೈಕೆ ಸದಾ ಇರಲಿ
ಹೀಗೆಯೇ ಬರುತ್ತಿರಿ

ಮನಮುಕ್ತಾ said...

ನಿಜವಾಗಿಯೂ ಓದಲೇಬೇಕಾದ೦ತಹ ಬರಹ....
ಸಾಮಾಜಿಕ ಸಮಸ್ಯೆಗಳ ಮೇಲೆ ಉತ್ತಮವಾಗಿ ಬೆಳಕು ಬೀರಿದ್ದೀರಿ...ಸಮಸ್ಯೆಗಳಿಗೆ ಪರಿಹಾರ ವ್ಯವಸ್ಥೆಯ ಬದಲಾವಣೆಯಿ೦ದ ಮಾತ್ರ ಸಾದ್ಯವೇನೋ... ವ್ಯವಸ್ಥೆಯ ಬದಲಾವಣೆ ಜನರಿ೦ದ ಮಾತ್ರ ಸಾಧ್ಯ...
ಬೆಳಕು ಬೀರುವ ನಿಮ್ಮ ಪ್ರಯತ್ನ ನಡೆಯುತ್ತಿರಲಿ...
ಸಮಸ್ಯೆಯ ನಿವಾರಣೆಗೆ ಇದು ಮೊದಲ ಹೆಜ್ಜೆ...
ವ೦ದನೆಗಳು.....

ಸಾಗರದಾಚೆಯ ಇಂಚರ said...

ಮನಮುಕ್ತ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಎಲ್ಲವೂ ಇದ್ದೂ ದೇಶ ಏನೂ ಇಲ್ಲದಂತಾಗಿದೆ ಎಂಬುದೇ ಬಹಳ ದುಃಖದ ವಿಷಯ
ಸುಧಾರಣೆ ಎಲ್ಲಿಂದ ಆರಂಬವಾಗಬೇಕಿತ್ತೋ ಅಲ್ಲೇ ಮೈಗಳ್ಳತನ ತುಂಬಿದೆ
ಪ್ರಗತಿಗೆ ನಾವೇ ಮುಂದಾಗಬೇಕಿದೆ ಅಲ್ಲವೇ?

ದೀಪಸ್ಮಿತಾ said...

ಗುರು ಅವರೆ, ನಿಮ್ಮ ಚಿಂತನೆಗಳು ನಿಜಕ್ಕೂ ಅರ್ಥವತ್ತಾಗಿವೆ.
ನಿಮ್ಮ ಐವತ್ತನೆಯ ಬರಹಕ್ಕೆ ಅಭಿನಂದನೆಗಳು. ನೂರಾರು ಲೇಖನಗಳು ಬರಲಿ. ಐವತ್ತನೆ ಲೇಖನಕ್ಕೆ ನನ್ನದು ಐವತ್ತೊಂದನೆಯ ಪ್ರತಿಕ್ರಿಯೆ (comment)

ಸಾಗರದಾಚೆಯ ಇಂಚರ said...

ದೀಪಸ್ಮಿತ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
೫೧ ನೆ ಪ್ರತಿಕ್ರಿಯೆಗೂ ಅಭಿನಂದನೆಗಳು :)
ಹೀಗೆಯೇ ಬರುತ್ತಿರಿ

ಚಿತ್ರಾ said...

ಗುರು,
೫೦ನೇ ಬರಹಕ್ಕೆ ಅಭಿನಂದನೆಗಳು!
ತುಂಬಾ ಒಳ್ಳೆಯ ಬರಹ ! ಯೋಚಿಸುವಂತೆ ಮಾಡುತ್ತದೆ.
ನಮ್ಮ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನ ಶಾಲಾದಿನಗಳಲ್ಲೇ ಆರಂಭಿಸಬೇಕಾದ ಅಗತ್ಯವಿದೆ . ನಮ್ಮ ಹಕ್ಕುಗಳ ಬಗ್ಗೆ , ನಾಗರೀಕ ಕರ್ತವ್ಯಗಳ ಬಗ್ಗೆ , ಬಾಲ್ಯದಿಂದಲೇ ತಿಳುವಳಿಕೆ ನೀಡುವುದು ಇಂದಿನ ಅಗತ್ಯ! ಆದರೆ ,ನಾವಿನ್ನೂ , ಜಾತಿ -ಮತಗಳ ಜಗಳದಲ್ಲಿ, ಪ್ರಾಂತ -ಭಾಷೆಗಳ ತಿಕ್ಕಾಟದಲ್ಲಿ , ಕೆಲಸಕ್ಕೆ ಬಾರದ ಎಷ್ಟೋ ವಿತಂಡ ವಾದಗಳಲ್ಲಿ ಮುಳುಗಿ ಹೋಗಿದ್ದೇವೆ.
ನಮ್ಮ ರಾಜಕಾರಣಿಗಳೋ , ಎಲ್ಲಿ ಹೇಗೆ ದುಡ್ಡು ತಿನ್ನ ಬಹುದು, ಎಲ್ಲಿ ಹೊಸಾ ದ್ವೇಷವನ್ನು ಸೃಷ್ಟಿಸಬಹುದು , ಯಾವುದರಿಂದ ತಮಗೆ ಚುನಾವಣೆಯಲ್ಲಿ ಲಾಭ ಎಂಬ ಲೆಕ್ಕಾಚಾರದಲ್ಲೇ ವ್ಯಸ್ತರಾಗಿದ್ದಾರೆ . ಹೀಗಿದ್ದಾಗ ನಾವು ಉತ್ತಮ ಭವಿಷ್ಯಕ್ಕಾಗಿ ಯಾವ ದಿಕ್ಕನ್ನು ನೋಡೋಣ ?
ಇನ್ನು ಇರುವ ಅಲ್ಪ ಸ್ವಲ್ಪ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ ನಾವು. ಸರಕಾರದ್ದು ಎಂದರೆ ತಮಗೆ ಸಂಬಂಧವಿಲ್ಲದ್ದು ಎಂಬಂತೆ ಆಡುವವರೇ ಅಧಿಕ . ರಸ್ತೆಯಲ್ಲಿ ಉಗುಳಬೇಡಿ ಎಂದು ಹೇಳಿದರೆ " ನಿಮ್ಮ ಮೈಗೇನೂ ಸಿಡಿದಿಲ್ಲವಲ್ರೀ, ನಿಮಗೇನು ಕಷ್ಟ ? " ಎನ್ನುತ್ತಾರೆ . ಕಸದ ತೊಟ್ಟಿಯವರೆಗೆ ಹೋಗಲು ಅಸಹ್ಯವೆನಿಸುತ್ತದೆ ಎನ್ನುತ್ತಾ ತೊಟ್ಟಿಯಿಂದ ಮೈಲು ದೂರದಲ್ಲೇ ಕಸ ಚೆಲ್ಲುತ್ತಾರೆ . ಶೌಚಾಲಯ ಬಳಸಿದ ಮೇಲೆ , ನೀರಿದ್ದರೂ ತಾವು ಹಾಕುವುದಿಲ್ಲ. ಅದಕ್ಕೆ ಜನರನ್ನು ನೇಮಿಸಿದ್ದಾರಲ್ಲ ಎನ್ನುತ್ತಾರೆ .
ಎಲ್ಲಕ್ಕೂ ಮುಖ್ಯವೆಂದರೆ ಏನು ಗೊತ್ತೇ? ಏನು ಹೇಗೆ ಇದ್ದರೂ ನಾವು ಪ್ರತಿಭಟಿಸದೇ , ತೆಪ್ಪಗಿರುತ್ತೇವೆ ನೋಡಿ ಅದು !
ಒಂಥರಾ ಹೇಳಬೇಕೆಂದರೆ ನಾವು ಎಲ್ಲವನ್ನೂ ನಮ್ಮ ಮುಖಂಡರಿಗೆ ನೀಡುತ್ತಿದ್ದೇವೆ ,ಆದರೆ ಅವನೇನೂ ಮಾಡುವುದಿಲ್ಲ ! ನಾವೂ ಕೇಳುತ್ತಿಲ್ಲ !

ಸಾಗರದಾಚೆಯ ಇಂಚರ said...

ಚಿತ್ರಾ,
ನಿಮ್ಮ ಅಭಿಪ್ರಾಯಕ್ಕೆ ಹಾರೈಕೆಗೆ ಧನ್ಯವಾದಗಳು
ನೀವು ಹೇಳಿದ್ದು ನಿಜ,
ಕೆಲವೊಮ್ಮೆ ದೇಶ ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ,
ನಾಯಕರು ಎಲ್ಲ ನೋಡಿಕೊಳ್ಳುತ್ತಾರೆ ಎಂದು ನಾವು, ಏನೂ ಮಾಡದ ನಾಯಕರು...
ಎಲ್ಲಿ ನೋಡಿದರೂ ಭ್ರಷ್ಟಾಚಾರ, ಲಂಚ, ಎಲ್ಲ ಇದ್ದೋ ಏನೂ ಇಲ್ಲದಾಗಿದ್ದೇವೆ,
ಮನುಷ್ಯತ್ವ ದಿನೇ ದಿನೇ ಸಾಯುತ್ತಿದೆ,
ಬಡವ ಹಾಗೂ ಶ್ರೀಮಂತನ ನಡುವಿನ ಅಂತರ ದಿನ ಕಳೆದಂತೆ ಇನ್ನೂ ದೊಡ್ದದಾಗುತ್ತಿದೆ
ಕೊಂದು ತಿನ್ನುವ ನಮ್ಮ ಮನಸ್ಸು ಸುಧಾರಿಸುವುದು ಯಾವಾಗ?

ಅರಕಲಗೂಡುಜಯಕುಮಾರ್ said...

ಭಾರತೀಯ ಮನಸ್ಥಿತಿಗೆ ಸರಿಯಾದ ಕನ್ನಡಿ ಹಿಡಿದಿದೆ ನಿಮ್ಮ ಲೇಖನ. ನಮ್ಮಲ್ಲಿ ಜಾಗೃತಾವಸ್ಥೆ ಬರುವುದು ಯಾವಾಗ? ಪರಿಪೂರ್ಣವಾಗಿಯಲ್ಲದಿದ್ದರೂ ಹಂತಹಂತ ವಾಗಿ ಬದಲಾವಣೆಯಾಗಬೇಕಿದೆ, ಆದರೆ ಅಂತಹ ಪ್ರಯತ್ನಗಳಿಗೆ ನೈಜ ಕಾಳಜಿ ಹೊತ್ತು ಬರುವವರಿಗಿಂತ ಸ್ವಾರ್ಥ ಧೋರಣೆ ಇರಿಸಿಕೊಂಡ ಮಂದಿ ಬರುತ್ತಾರೆ. ಬದುಕಿನ ಓಟದಲ್ಲಿ ನಮ್ಮ ಜನರು ವಾಸ್ತವ ಸ್ಥಿತಿಯನ್ನು ಅರಿಯಬೇಕು... ನಿಮ್ಮ ಲೇಖನದ ಆಶಯ ಎಲ್ಲರನ್ನೂ ಮುಟ್ಟಲಿ. ಓಳ್ಳೆಯ ಓದು ನೀಡಿದ್ದೀರಿ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಜಯಕುಮಾರ್ ಸರ್,
ನಿಜ, ನಮ್ಮ ಸಮಾಜಕ್ಕೆ ಹಿಡಿದ ತುಕ್ಕು ಯಾವಾಗ ಬಿಡುವುದೋ ನೋಡಬೇಕು.
ಇದು ನಮ್ಮೆಲ್ಲರ ತಪ್ಪು
ನಾವೆಲ್ಲರೂ ಮೈಗಳ್ಳರೆ,
ಬೇರೆಯವರ ಮೇಲೆ ತಪ್ಪು ಹೊರಿಸಿ ನಾವು ಆರಾಮವಾಗಿ ಇರುವುದು ನಮಗೆ ಅಭ್ಯಾಸವಾಗಿ ಹೋಗಿದೆ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನಿಮಗೆ ಸ್ವಾಗತ
ಹೀಗೆಯೇ ಬರುತ್ತಿರಿ

ಸುಧೇಶ್ ಶೆಟ್ಟಿ said...

Guru avare....

50 ne barahakke abhinandhanegalu....!

50 ne barahakke kalashavittanthe barediddeeri ee bharahavannu... chinthanege hachchitu e baraha... sanna putta badalaavanegale munde dodda badalaavanegalige kaaranavaaguttave... antha badhalaavane praarambha aagabeku...

Jyoti Hebbar said...

ಗುರು, ತುಂಬಾ ಚೆನ್ನಾಗಿ ಬರೆದಿದ್ದೀರ... ಆದರೆ ಶ್ರೀಮಂತ-ಬಡವ ಬೇಧ-ಭಾವವನ್ನು ತೊಲಗಿಸಲು ಜನಸಾಮಾನ್ಯರಿಂದ ಸಾದ್ಯ ಅನಿಸುತ್ತದೆಯೇ?
"ತನಗೆ ಉಣ್ಣಲು ಅನ್ನ , ತೊಡಲು ವಸ್ತ್ರ ಸಿಕ್ಕ ಮೇಲೆ ಕಳ್ಳ ಕದಿಯುವುದಿಲ್ಲ. ಪ್ರತಿಬೆಗೆ ತಕ್ಕ ಬೆಲೆ ಸಿಕ್ಕರೆ ಪದವಿಧರ ಉಗ್ರಗಾಮಿ ಆಗುವುದಿಲ್ಲ"
ಬಡವರೆಲ್ಲರಿಗೂ ಅನ್ನ, ವಸ್ತ್ರ, ಪದವಿಧರರೆಲ್ಲರಿಗೂ ಉದ್ಯೋಗ ಎಲ್ಲ ಒದಗಿಸಲು ಸಾಧ್ಯವೇ?

Jyoti Hebbar said...

ಐವತ್ತರ ಸಂಭ್ರಮಕ್ಕೆ ಶುಭಾಶಯಗಳು...ಹೀಗೆಯೇ ಧುಮ್ಮಿಕ್ಕಿ ಹರಿಯುತಿರಲಿ ಭಾವನೆಗಳು....

ಸಾಗರದಾಚೆಯ ಇಂಚರ said...

ಸುಧೇಶ್ ಅವರೇ
ನಿಮ್ಮ ಹಾರೈಕೆಗೆ ಧನ್ಯವಾದಗಳು
ದೇಶದ ಸುಧಾರಣೆ ಪ್ರತಿಯೊಬ್ಬನ ಸುಧಾರಣೆ
ನಾವು ಸುಧಾರಿಸಿದರೆ ದೇಶ ಸುಧಾರಿಸಿದಂತೆ
ಅದಕ್ಕೆ ಗಾಂಧೀಜಿ ಗ್ರಾಮಗಳ ಬಗ್ಗೆ ಹೆಚ್ಚಿನ ಒಲವು ತೋರಿದರು
ಸುಧಾರಣೆ ನಮ್ಮಿಂದಲೇ ಆರಂಭವಾಗಬೇಕು ಅಲ್ಲವೇ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಜ್ಯೋತಿ
ಯಾಕೆ ಸಾದ್ಯವಿಲ್ಲ, ನಮ್ಮಲ್ಲಿ ಎಲ್ಲವೂ ಇದೆ
ಅದರ ಸಮರ್ಪಕ ಬಳಕೆಯ ಕೊರತೆಯಿದೆ ಅಷ್ಟೇ
ಇಡೀ ವಿಶ್ವಕ್ಕೆ ಸಾಫ್ಟ್ವೇರ್ ತಂತ್ರಜ್ಞಾನದಲ್ಲಿ ಬೇಕಾದಷ್ಟು ಹಣ ಗಳಿಸಿಕೊಡುತ್ತಿದ್ದೇವೆ,
ಮೊದಲು ನಾವು ಮನಸ್ಸು ಮಾಡಬೇಕು
ಎಲ್ಲರೂ ೫೦೦೦೦ ದ ಸಂಬಳವನ್ನೇ ಬಯಸಿದರೆ ಹೇಗೆ
ಅದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ
ಎಲ್ಲರೂ ಇಂಜಿನಿಯರ್ ಆಗಬೇಕು ಎನ್ನುವುದನ್ನು ಬಿಡಬೇಕು,
ನಮ್ಮಲ್ಲಿರುವ ನಿಜವಾದ ಕಲೆಯನ್ನು ಬೆಳೆಸಬೇಕು
ಮಾನವೀಯತೆಯನ್ನು ಉಳಿಸಬೇಕು
ನಮಗೆ ಉಂಡು ಹೆಚ್ಚಾದರೆ ಇನ್ನೊಬ್ಬರಿಗೆ ನೀಡುವ ಉದಾರ ಬುದ್ಧಿ ನಮ್ಮದಾಗಬೇಕು
ಮೂಲ ನಮ್ಮ ಭ್ರಷ್ಟಾಚಾರ ಹೊಡೆದೋಡಿಸಬೇಕು
ಆಗ ಅನ್ನ ವಸ್ತ್ರ ತನ್ನಿಂದ ತಾನೇ ಎಲ್ಲರಿಗೂ ಲಭಿಸುತ್ತದೆ

ಸಾಗರದಾಚೆಯ ಇಂಚರ said...

ಜ್ಯೋತಿ
ನಿಮ್ಮ ಹಾರೈಕೆಗೆ ಧನ್ಯವಾದಗಳು
ಬ್ಲಾಗ್ ಪ್ರಪಂಚದಲ್ಲಿ ನೀವೆಲ್ಲ ಪ್ರೋತ್ಸಾಹ ಸದಾ ನೀಡುತ್ತಿದ್ದಿರಿ
ಮುಂದೆಯೂ ಹೀಗೆಯೇ ಪ್ರೋತ್ಸಾಹ ಇರಲಿ

ಚಂದಿನ | Chandrashekar said...

ಆತ್ಮೀಯ ಡಾ.ಗುರುಪ್ರಸಾದ್ ಅವರೆ,

ಇಂತಹ ಸದುದ್ದೇಶದ ಮನಸ್ಥಿತಿಯಿದ್ದರೆ, ನಮಗೆ ದಿನನಿತ್ಯ ಎದುರಾಗುವ ಸಣ್ಣ ಸನ್ನಿವೇಶವೂ ಸಹ ಒಂದು ಅವಕಾಶವಾಗಿ ತೋರುತ್ತೆ. ನಮ್ಮನ್ನು ಜವಾಬ್ದಾರಿಯುತವಾಗಿ ವರ್ತಿಸುವಂತೆ ಪ್ರೇರೇಪಿಸುವುದರೊಂದಿಗೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲೂ ಸಹ ಒತ್ತಾಯಿಸುತ್ತದೆ.

ಇದು ನಮ್ಮಲ್ಲರ ನುಡಿಗೆ ಮಾತ್ರ ಸೀಮಿತವಾಗದೆ, ನಮ್ಮ ನಡೆಯಲ್ಲೂ ಕಾಣಿಸಲಿ ಎಂದು ಬಯಸುವ...

ನಲ್ಮೆಯ
ಚಂದಿನ

ಸಾಗರದಾಚೆಯ ಇಂಚರ said...

ಚಂದಿನ ಸರ್
ನಿಜ,
ನಮ್ಮ ಉದ್ದೇಶ ಯಾವಾಗಲೂ ಒಳ್ಳೆಯದಾಗಿದ್ದರೆ
ಅದರ ಪರಿಣಾಮವೂ ಒಳ್ಳೆಯದೇ ಆಗಿರುತ್ತದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ