ಪ್ರವಾಸ ಕಥನ .. ಭಾಗ 3
ಹಿಂದಿನ ಸಂಚಿಕೆಯಲ್ಲಿ ( http://gurumurthyhegde.blogspot.com/2009/04/2.html ) ಸೇಲನ್ ಪ್ರದೇಶದಲ್ಲಿ ನಮ್ಮ ಸ್ಕಿಯಿಂಗ್ ನ ಮೊದಲ ರೋಚಕ ಅನುಭವದ ಬಗೆಗೆ ತಿಳಿಸಿದ್ದೆ ಹಾಗೂ ಅಲ್ಲಿನ ಹಿಮದ ಪ್ರಭಾವದ ಬಗ್ಗೆ ಹೇಳಿದ್ದೆ. ಈ ವಾರ ಅಲ್ಲಿನ ಪ್ರಕ್ರತಿಯ ಸೌಂದರ್ಯವನ್ನು ಹಾಗೂ ಡೌನ್ ಹಿಲ್ ಸ್ಕಿಯಿಂಗ್ ಬಗೆಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.
ಮಧ್ಯಾನ್ಹದ ಸೊಗಸಾದ ಊಟದ ನಂತರ (ನನ್ನ ಹೆಂಡತಿ ಭಾರತೀಯ ಅಡಿಗೆಯನ್ನು ಸ್ವೀಡಿಶ್ ಗೂ ಸೇರಿಸಿ ಮಾಡಿದ್ದಳು) ಎರಡನೇ ಹಂತದ ಸ್ಕಿಯಿಂಗ್ ಮಾಡುವ ಮೊದಲು ರಾಲ್ಫ್ ಸೇಲನ್ ಪ್ರದೇಶ ವೀಕ್ಷಣೆಗೆಂದು ಕರೆದುಕೊಂಡು ಹೋದರು. ಅಲ್ಲಿಂದ ೨ ಕಿ ಮಿ ದೂರದಲ್ಲಿರುವ ಜಾಗವೇ ತಂಡಾದಾಲನ. ಇಲ್ಲಿಯೇ ಬಹಳಷ್ಟು ಡೌನ್ ಹಿಲ್ ಸ್ಕಿಯಿಂಗ್ ರೋಡ್

ಇರುವುದು. ಇದೊಂದು ರಮಣೀಯ ಸ್ಥಳ. ಬೇಸಿಗೆಯಲ್ಲಿ ದೊಡ್ಡ ಪರ್ವತ, ಆದರೆ ಚಳಿಗಾಲದಲ್ಲಿ ಇದೆ ಡೌನ್ ಹಿಲ್ ಸ್ಕಿಯಿಂಗ್ ಜಾಗವಾಗಿ ಮಾರ್ಪಡುತ್ತದೆ. ಮೇಲಿನಿಂದ ಸ್ಕಿ ಕಟ್ಟಿಕೊಂಡು ರಭಸದಲ್ಲಿ ಕೆಳಗೆ ಬರುತ್ತಾರೆ. ಮೇಲಿನಿಂದ ಕೆಳಗೆ ಬರುವ ವೇಗ ಘಂಟೆಗೆ ೨೦೦ ಕಿ ಮಿ ಗಳು ಎಂದರೆ ಅದರ ರಭಸ ಊಹಿಸಿ. ಇಲ್ಲಿ ಬಿದ್ದರೆ ಮಾತ್ರ ತುಂಬಾ ಪೆಟ್ಟಾಗುತ್ತದೆ. ಕೈ ಕಾಲು ''ವೈದ್ಯೋ ನಾರಾಯಣೋ ಹರಿ'' ಎನ್ನುವುದು ಗ್ಯಾರಂಟೀ . ಚಿಕ್ಕ ಚಿಕ್ಕ ಮಕ್ಕಳು ಮೇಲಿನಿಂದ ಬರುವಾಗ ಹೊಟ್ಟೆ ಉರಿಯುತ್ತದೆ, ನಮಗೆ

ಮಾಡಲು ಆಗುವುದಿಲ್ಲವಲ್ಲ ಎಂದು. ಆದರೆ ಅದನ್ನು ಒಮ್ಮೆ ಮಾಡೋಣ ಎಂದು ಮಾತ್ರ ಎನ್ನಿಸಲಿಲ್ಲ. ಮುಂದಿನ ವರ್ಷ ಹೋದರೆ ಮಾಡಲು ಪ್ರಯತ್ನಿಸುತ್ತೇವೆ. ಈ ವರ್ಷಕ್ಕೆ ಇಷ್ಟು ಸಾಕು ಎನಿಸಿತು. ಜಗತ್ತಿನ ನಾನಾ ಕಡೆಯಿಂದ ಇದನ್ನು ಆಡಲು ಜನ ಬರುತ್ತಾರೆ. ಸಂಪೂರ್ಣ ಬೆಟ್ಟ ಹಿಮಾಚ್ಚಾದಿತ ವಾಗಿರುತ್ತದೆ. ಅದನ್ನು ನೋಡಿದಷ್ಟೂ ನೋಡಬೇಕೆನಿಸುತ್ತದೆ. ಮದುವೆಯ ಮಂಟಪದಲ್ಲಿ ವಧು ವರರು ಪರಸ್ಪರ ಮುಖ ನೋಡಿಕೊಂಡಂತೆ ಅದೆಷ್ಟೋ ಹೊತ್ತು ಆ ಬೆಟ್ಟವನ್ನೇ ನೋಡುತ್ತಾ ನಿಂತೆ. ''ಮರೆತೆನೆಂದರೂ ಮರೆಯಲಿ ಹ್ಯಾಂಗ್'' ಎನಿಸಿತು ಮನದಲ್ಲಿ.
ಇಲ್ಲಿ ಹಿಮದಲ್ಲಿ ಓಡಿಸಲೆಂದೇ ವಿಶೇಷ ವಾಹನಗಳನ್ನುಮಾಡಿರುತ್ತಾರೆ. ನಮ್ಮಲ್ಲಿನ ಲದಾಕ್ ನಲ್ಲಿ ಯುದ್ಧದ ಟ್ಯಾಂಕರ್ ಗಳಂತೆ

ಗೋಚರಿಸುತ್ತವೆ. ಈ ಡೌನ್ ಹಿಲ್ ಮಾಡುವಾಗ ನಿಮಗೊಂದು ಸಂಶಯ ಬರಬಹುದು. ಅಷ್ಟೊಂದು ಮೊನಚಾದ ಬೆಟ್ಟವನ್ನು ಇಳಿದು ಬರುವುದೇನೋ ಸರಿ, ಆದರೆ ಹತ್ತುವುದು ಹೇಗೆ? ಅಲ್ಲವೇ. ಅದಕ್ಕೆಂದೇ ಇಲ್ಲಿನ ಪ್ರೈವೇಟ್ ಕಂಪನಿಗಳು ಲಿಫ್ಟ್ ಮಾಡಿದ್ದಾರೆ. ಕೆಳಗೆ ಇಳಿದು ಬಂದು ನಂತರ ಲಿಫ್ಟ್ ಮೇಲೆ ಕುಳಿತರೆ ಆಯಿತು. ಪುನಃ ಮೇಲೆ ಹೋಗಿ ಮತ್ತೆ ಇಳಿಯುವುದು. ಬೆಳಿಗಿನಿಂದ ಮಧ್ಯಾನ್ಹ 5 ಘಂಟೆಯವರೆಗೆ ಈ ಲಿಫ್ಟ್ಗಳು ಕಾರ್ಯ ನಿರ್ವಹಿಸುತ್ತವೆ. ಆದರೆ ಅದರ ನಂತರ ಎಷ್ಟೋ ಜನರು ಕುಡಿದು ಮೋಜನ್ನು ಮಾಡುತ್ತಾ ಮೇಲೆ ಹತ್ತಲು ಪ್ರಯತ್ನಿಸುತ್ತಾರಂತೆ. ಕುಡಿತದ ಅಮಲು ಅವರನ್ನು ಮೇಲೆ ಕಳಿಸುತ್ತದೆಯೋ ಗೊತ್ತಿಲ್ಲ, ಅವರಿಗೆ ಮೇಲೆ ಹೋದಂತೆ ಅನಿಸಬಹುದು ನಶೆಯ ಮತ್ತಿನಲ್ಲಿ.

ಅದಾಗಲೇ ೪ ಘಂಟೆಯಾದ್ದರಿಂದ ಹೊರಡಲು ಅಣಿಯಾದೆವು. ಆದರೆ ನಮಗೊಂದು ಆಶ್ಚರ್ಯ ಕಾದಿತ್ತು. ಸೂರ್ಯ ಮೋಡಗಳ ಮರೆಯಿಂದು ಸರಿದು ನಗುತ ನಿಂತಿದ್ದ. ಅವನ ಕಿರಣಗಳು ಪರ್ವತದ ತುದಿಯನ್ನು ಚುಂಬಿಸುತ್ತಿದ್ದವು. ಮೊದಲ ಚುಂಬನಕ್ಕೆ ನಸು ನಾಚಿ ನಗುವ ಕೋಮಲಾಂಗಿಯ ಕೆನ್ನೆಯಂತೆ ಆ ಬೆಟ್ಟ ನೋಡುಗರನ್ನು ಆಕರ್ಷಿಸತೊಡಗಿತು. ಆ ಕಿರಣಗಳಿಗೆ ಹಿಮ

ಹೊಳೆಯತೊಡಗಿತು. ಸೂರ್ಯನ ಶಾಖಕ್ಕೆ ಸ್ವಲ್ಪ ಹಿಮ ಕರಗಿದಂತೆ ಅಲ್ಲಿಂದ ಹೊಗೆ ಏಳಲಾರಂಬಿಸಿತು. ಸಮಸ್ತ ಪ್ರದೇಶವೇ ಒಂದು ಹೊಸ ಅದ್ಭುತವನ್ನು ಸೃಷ್ಟಿಸಿತು. ''ಶಬರಿಮಲೆಯಲ್ಲಿ ಮಕರ ಜ್ಯೋತಿಗಾಗಿ ಕಾದ ಭಕ್ತರಂತೆ '' ಎಲ್ಲರೂ ಆ

ಪರ್ವತದ ತುದಿಯನ್ನೇ ನೋಡಿ ಆನಂದಿಸತೊಡಗಿದರು. ಪ್ರಕ್ರತಿ ಸದ್ದಿಲ್ಲದೆ ಸುದ್ದಿ ಮಾಡಿ ಮತ್ತೆ ತನ್ನ ಕಾರ್ಯದಲ್ಲಿ ಮಗ್ನವಾಯಿತು. ಮೋಡ ಇದಕ್ಕೆಲ್ಲ ಮಂಗಳ ಮಾಡುವಂತೆ ಮತ್ತೆ ಸೂರ್ಯನನ್ನು ಮರೆ ಮಾಡಿ ನಮಗೆ ನಿರಾಸೆ ಉಂಡು ಮಾಡಿ ''ಹೋಗಯ್ಯ ಸಾಕು'' ಎಂದಂತೆ ಭಾಸವಾಯಿತು. ಎಷ್ಟಂದರೂ ನಾವು ಪ್ರಕ್ರತಿ ಪ್ರಿಯರಲ್ಲವೇ. ಮತ್ತೊಮ್ಮೆ ಕಣ್ಣು ತುಂಬಾ ಆ ದ್ರಷ್ಯವನ್ನು ತುಂಬಿಕೊಂಡು ಮನೆಯ ಕಡೆಗೆ ಹೊರಟೆವು.

ಮನೆಗೆ ಬಂದು ಪುನಃ ಎರಡನೇ ಹಂತದ ಸ್ಕಿಯಿಂಗ್ ಗೆ ಅಣಿಯಾದೆವು.ಬೆಳಿಗಿನ ಸಮಯದಲ್ಲಿ ಕೇವಲ ೬ ಕಿ ಮಿ ಮಾಡಿದ್ದೆವು. ಈಗ ೯ ಕಿ ಮಿ ಮಾಡುವ ನಿರ್ಧಾರದೊಂದಿಗೆ ಹೊರಟೆವು. ರಾಲ್ಫ್ ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಸದಾ ನಮ್ಮೊಂದಿಗೆ ಇದ್ದು ಸ್ಕಿಯಿಂಗ್ ಕಲಿಸುವ ಪರಿ ನಿಜಕ್ಕೂ ಅದ್ಭುತ. ಮಧ್ಯಾನ್ಹದ ಸ್ಕಿಯಿಂಗ್ ಅಷ್ಟೊಂದು ಕಷ್ಟ ಎನಿಸಲಿಲ್ಲ. ಬೀಳುವ ಸಂಖ್ಯೆಯೂ ಕಡಿಮೆಯಾಯಿತು. ನಾನು ಹಾಗೂ ನನ್ನ ಹೆಂಡತಿ ಸ್ಕಿಯಿಂಗ್ ಸ್ಪರ್ಧೆಯನ್ನು ನಡೆಸಿ ಯಾರು ಬೇಗ ಹೋಗುತ್ತಾರೆ ಎಂದು

ನೋಡಿದೆವು. ಫಲಿತಾಂಶ ಕೇಳಬೇಡಿ. ಅದು ನಮ್ಮಿಬ್ಬರ ನಡುವೆ ನಡೆದ ಸ್ಪರ್ಧೆ. ಹೀಗೆಯೇ ಸ್ಕಿಯಿಂಗ್ ಮಾಡುತ್ತಾ ಹೋದಂತೆ ನಮ್ಮ ಸ್ಕಿಯಿಂಗ್ ರಸ್ತೆಯ ಪಕ್ಕದಲ್ಲೇ ಬೈಕ ಗಳ ವಿಪರೀತ ಸದ್ದು ಗದ್ದಲ ಕೇಳಿಬಂತು. ಅದೇನೆಂದು ಕೇಳಿದಾಗ ರಾಲ್ಫ್ ಹೇಳಿದರು, ಇಲ್ಲಿ ಸ್ಕಿಯಿಂಗ್ ಮಾಡಿದಂತೆ ಸ್ನೋ ಬೈಕಿಂಗ್ ಕೂಡಾ ಮಾಡುತ್ತಾರಂತೆ. ಘಂಟೆಗೆ ೧೨೦ ರಿಂದ ೧೮೦ ಕಿ ಮಿ ವೇಗದಲ್ಲಿ ಕಿರುಚಾಡುತ್ತಾ ಅವರು ಹೋಗುವಾಗ ನಿಜವಾಗಿಯೂ ಉಳಿದವರಿಗೆ ಕಿರಿ ಕಿರಿ ಆಗುವುದು ಸಹಜ. ಹಿಂದಿನ ವರ್ಷ ಇದೆ ರೀತಿ ಹೋಗುವಾಗ ಕೆಲವು ಜನ ವೇಗ ನಿಯಂತ್ರಿಸಲಾಗದೆ ಸತ್ತಿದ್ದಾರೆ ಎಂದು ತಿಳಿದಾಗ ಯಾಕಪ್ಪ ಇದೆಲ್ಲ ಬೇಕು ಇವರಿಗೆ ಎನಿಸಿತು. ಕೇಳಬೇಕಲ್ಲ ನಮ್ಮ ಮಾತು? ಅವರೂ ಎಲ್ಲರೂ ಹೋಗುವ ರಸ್ತೆಯಲ್ಲಿ ಹೋಗುವಂತಿಲ್ಲ. ಅವರಿಗಾಗಿಯೇ ಪ್ರತ್ಯೇಕ ರಸ್ತೆ ಮಾಡಿದ್ದಾರೆ . ಅವರು ಅದನ್ನಲ್ಲದೆ ಬೇರೆ ಕಡೆ ಹೋದರೆ ದಂಡ ಹಾಕಲಾಗುತ್ತದೆ.

ಹೀಗೆ ಬಗೆ ಬಗೆಯ ಪ್ರಕ್ರತಿಯ ವೀಕ್ಷಣೆಯೊಂದಿಗೆ ಯಶಸ್ವೀಯಾಗಿ ೯ ಕಿ ಮಿ (ಒಟ್ಟಿಗೆ ೧೫ ಕಿ ಮಿ ) ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆ ೭ ಘಂಟೆಯಾಗಿತ್ತು. ಸೂರ್ಯಾಸ್ತದಿಂದ ಸಂಪೂರ್ಣ ಆಕಾಶ ಕೆಂಪು ಬಣ್ಣಕ್ಕೆ ತಿರುಗಿತ್ತು. ಆ ಬಿಳಿಯ

ಹಿಮ, ಕೆಂಪು ಆಕಾಶ, ಚಿತ್ರಕಾರನ ಚಿತ್ರದಂತೆ ಭಾಸವಾಗುತ್ತಿತ್ತು. ''ರವಿವರ್ಮನ ಕುಂಚದ ಕಲೆ ಬಲೆ'' ಹಾಡು ನೆನಪಾಗಿದ್ದು ಸುಳ್ಳಲ್ಲ. ಮನೆಗೆ ಬಂದು ಊಟ ಮಾಡಿ ಮಲಗಲು ಅಣಿಯಾದೆವು. ಬೆಳಗಿನಿಂದ ಸುತ್ತಿ ಸುತ್ತಿ ಕಾಲುಗಳು ದಣಿದಿದ್ದವು. ಆದರೆ ೧೫ ಕಿ ಮಿ ಮೊದಲ ದಿನವೇ ಮಾಡಿದ್ದಕ್ಕೆ ಹೆಮ್ಮೆ ಕೂಡಾ ಇತ್ತು. ರಾತ್ರಿ ಮಲಗಿದಾಗ ತುಂಬಾ ಹೊತ್ತು ನಿದ್ದೆಯೇ ಬರಲಿಲ್ಲ. ಎಲ್ಲಿ ನೋಡಿದರೂ ಬಿಳಿಯ ಹಿಮವೇ ಕಾಣುತ್ತಿದೆ. ಹಿಮದಲ್ಲಿ ನಡೆದಂತೆ, ಹಿಮದಲ್ಲಿ ಬಿದ್ದಂತೆ, ಎದ್ದಂತೆ, ಎಲ್ಲಿ ನೋಡಿದರೂ ಹಿಮ ಹಿಮ ಹಿಮ. ತಲೆಯ ಮೂಲೆ ಮೂಲೆಯಲ್ಲೂ ಹಿಮದ ಬುಗ್ಗೆಗಳೇ ತುಂಬಿದ್ದವು.
ಮರುದಿನ ಬೆಳಿಗಿನ ಜಾವ ಮೋಡಗಳ ಸುಳಿವಿರಲಿಲ್ಲ. ಸೂರ್ಯನ ದರ್ಶನ ಮತ್ತೆ ಹುರುಪನ್ನು ತಂದಿತ್ತು. ಇದು ನಮ್ಮ ಕೊನೆಯ ದಿನ ಸ್ಕಿಯಿಂಗ್ ಮಾಡಲು. ಈ ದಿನ ಅನೇಕ ವಿಸ್ಮಯಕಾರಿ ಅನುಭವಗಳು ಆಯಿತು. ನಾಯಿಯೊಂದಿಗೆ ಮನುಷ್ಯನ ಗೆಲುವು, ೧೭೦ ವರ್ಷಗಳಷ್ಟು ಹಳೆಯ ಚಾ ಅಂಗಡಿ, ಹೀಗೆ ಅನೇಕ ಅದ್ಭುತ ದ್ರಶ್ಯಗಳ ದರ್ಶನ ಲಭಿಸಿತು. ಅದನ್ನು ಮುಂದಿನ ಭಾಗದಲ್ಲಿ ತಿಳಿಸುತ್ತೇನೆ. ಮುಂದಿನ ವಾರ ಈ ಪ್ರವಾಸ ಕಥನಕ್ಕೆ ಮಂಗಳ ಹಾಡುತ್ತೇನೆ. ಅಲ್ಲಿಯವರೆಗೆ ಇದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತಿರಲ್ಲ . ನಿಮ್ಮ ಅನುಮತಿಯೊಂದಿಗೆ..
ಮುಂದುವರಿಯುತ್ತದೆ.....