-ಗುರು ಬಬ್ಬಿಗದ್ದೆ
ನನ್ನ ಜೀವನದ ಹಲವು ವರ್ಷಗಳನ್ನು ಒಂಟಿಯಾಗಿಯೇ ಕಳೆದರೂ ಹೀಗಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ನಾನಾಗಿಲ್ಲ. ಏನಾಗುತ್ತಿದೆ ನನಗೆ ಅದೂ ತಿಳಿಯುತ್ತಿಲ್ಲ. ನಿನ್ನ ಭೂತ ನನ್ನ ವರ್ತಮಾನವನ್ನು ಆವರಿಸಿದೆ. ಹೇಳು ನೀನೇಕೆ ಬಂದೆ ನನ್ನ ಬಾಳಿಗೆ. ಬರುವವಳು ಬಂದೆ, ಆದರೆ ಎಲ್ಲಿಂದ ಬಂದೆ? ಯಾಕಾಗಿ ಬಂದೆ? ನನಗೆ ಉತ್ತರ ಕೊಡು. ಉತ್ತರ ಸಿಗದ ಎಷ್ಟೋ ಪ್ರಶ್ನೆಗಳು ನಿನ್ನಲ್ಲಿ ಇವೆ ಎಂದು ನನಗೆ ಗೊತ್ತು ಆದರೆ ನನಗೆ ಉತ್ತರ ಬೇಕು. ಹೇಳು, ನಾನೇಕೆ ಹೀಗಾದೆ?
ಒಮ್ಮೊಮ್ಮೆ ನಿರ್ಧರಿಸುತ್ತೇನೆ, ನಾನು ನಿನ್ನ ಬಿಟ್ಟು ಬದುಕಬೇಕೆಂದು. ಆದರೆ ಸಾಧ್ಯವಾಗುವುದಿಲ್ಲ. ನಿನ್ನ ಪರಿಸರವೇ ಅಂತಹುದು. ಗೊತ್ತಿಲ್ಲದೆ ಎದೆಯೊಳಗೆ ನುಗ್ಗಿ ಬಿಡುತ್ತಿಯಾ, ಆಮೇಲೆ ಬೇಕಾದರೆ ನನ್ನನ್ನೇ ಆಡಿಸುತ್ತಿಯ. ನಿಜ ಕಣೆ, ನಿನ್ನಲ್ಲಿ ಲೀನವಾಗಿ ಹೋಗಿದ್ದೇನೆ. ಸರ್ವವೂ ನಿನ್ನದಾಗಿದೆ. ನನ್ನದೇನಿದ್ದರೂ ದೇಹ ಮಾತ್ರ. ಭಾವವೆಲ್ಲವೂ ನೀನಾಗಿದ್ದಿಯಾ. ನಿನ್ನೊಂದಿಗೆ ಹೆಜ್ಜೆ ಹಾಕಿದ ಗೆಜ್ಜೆಯ ನಾದಗಲಿನ್ನೂ ಹಾಗೆಯೇ ಇವೆ. ನನಗಿನ್ನೂ ನೆನಪಿದೆ. ನೀನು ನನ್ನ ಮೊದಲು ನೋಡಿದಾಗ ನಾಚಿ ನೀರಾಗಿ ಹೋಗಿದ್ದೆ? ಏನು ಹೇಳಬೇಕೆಂದೇ ನಿನಗೆ ತೋಚಿರಲಿಲ್ಲ. ಹಾಗೆಮ್ದೂ ನೀನು ಬಹಳ ಸ್ವಾಭಿಮಾನಿ, ಏನನ್ನೂ ಹೇಳುವವಳಲ್ಲ, ಎಲ್ಲವೂ ನನ್ನಿಂದಲೇ ಹೇಳಿಸಿದ್ದಿಯ. ನಾನೂ ನಿನ್ನಲ್ಲಿ ಅನುರಕ್ತನಾಗುತ್ತ ಹೋದಂತೆ ನಿನ್ನ ಬಗ್ಗೆ ಎಲ್ಲವನ್ನೂ ಅರಿತೆ. ನೀನೆ ನಾನಾದೆ, ನಾನೇ ನೀನಾದೆ.
ನನ್ನ ಪ್ರತಿಯೊಂದೂ ನಡೆಗಳೂ ನಿನಗೆ ಗೊತ್ತು. ಒಂದು ರೀತಿಯಲ್ಲಿ ನಿನ್ನ ಪರಿಧಿಯಲ್ಲಿ ನನ್ನ ಕಟ್ಟಿ ಹಾಕಿದವಳು ನೀನು. ನನ್ನೊಂದಿಗೆ ಮಾತನಾಡುತ್ತಾ ಮಾತನಾಡುತ್ತಾ ನನ್ನ ಪ್ರೀತಿಯನ್ನೇ ಗಳಿಸಿದವಳು ನೀನು. ಅದೇನೋ ಗೊತ್ತಿಲ್ಲ, ನಿನ್ನ ನೋಡಿದಾಗಿನಿಂದ ನಾನು ಸಂತೋಷದ ಬುಗ್ಗೆಯಾಗಿದ್ದೇನೆ. ನನ್ನೊಳಗೆ ಸಂಭ್ರಮಿಸುತ್ತಿದ್ದೇನೆ. ಯಾಕೆ ಡಿಯರ್, ಏನಾಗಿದೆ ನನಗೆ? ಉತ್ತರ ಇದೆಯೇ ನಿನ್ನಲ್ಲಿ. ಸುಮ್ಮನೆ ನನ್ನಲ್ಲಿ ಪ್ರಶ್ನೆಗಳ ಸುರಿಮಳೆ ಸ್ರಷ್ಟಿಸುತ್ತಿಯಾ. ಉತ್ತರ ಕೊಡುವುದಿಲ್ಲ. ಕೋಪಾನಾ? ಅಥವಾ ಈ ಸಖನ ಮೇಲೆ ಸಿಟ್ಟೇ? ನನಗೆ ಗೊತ್ತು. ನಾನು ನಿನ್ನ ಮನಸ್ಸಿನಲ್ಲಿ ಗಾಢವಾದ ಮುದ್ರೆ ಒತ್ತಿದ್ದೇನೆ ಎಂದು, ಹಾಗೆಂದೂ ನೀನು ಹೇಳಲಾರೆ, ನಿನ್ನ ಕಣ್ಣುಗಳು ಸಾರಿ ಹೇಳುತ್ತಿವೆ.
ನೀನು ಗೊಂದಲದಲ್ಲಿದ್ದಿಯಾ, ಏನು ಮಾಡಲೂ ನಿನಗೆ ದಾರಿ ತೋಚುತ್ತಿಲ್ಲ. ಯಾಕೆ ತಬ್ಬಿಬ್ಬಾಗಿದ್ದಿಯ. ನನ್ನ ಅನುರೇಣ ತ್ರಣಕಾಷ್ಟಗಳೂ ನಿನ್ನಲ್ಲೇ ಇವೆ. ನನ್ನ ಜೀವನದ ಪೇಟೆಂಟ್ ಅನ್ನೇ ಕಸಿದುಕೊಂಡವಳು ನೀನು. ಈಗ ಸುಮ್ಮನೆ ಕೂತಿದ್ದಿಯಾ ಕಣೆ. ನಾನೇನು ಮಾಡಲಿ. ನಾನೇಕೆ ಹೀಗಾದೆ? ಹಾಗೆಂದೂ ನನ್ನ ಸಂತಸ ಮಾತ್ರ ನೀನು ಬಯಸಿ ಬಂದಿಲ್ಲ, ನಿನಗೆ ನನ್ನ ದು:ಖವೂ ಬೇಕು. ನನ್ನ ಸಂಕಷ್ಟಗಳಿಗೆ ನೀನೇ ದಾರಿದೀಪ. ನೀ ನನಗಿದ್ದರೆ ನಾ ನಿನಗೆ ಕಣೆ. ನೀ ನನ್ನಲ್ಲಿ ಸೇರಿದಾಗಿನಿಮ್ದ ನಾನು ಸಮಾಜಕ್ಕೆ ಹೆದರುತ್ತಿಲ್ಲ. ನೀನಿದ್ದರೆ ಜಗತ್ತನ್ನೇ ಗೆಲ್ಲುತ್ತೇನೆ ಎಂಬ ಹುಂಬ ಧೈರ್ಯವೂ ಸೇರಿಕೊಂಡು ನಾನು ಮೊದಲಿಗಿಂತಲೂ ಚಟುವಟಿಕೆಯ ಕೆಂದ್ರವಾಗಿದ್ದೇನೆ. ಆದರೆ ನಿನ್ನ ಮೇಲೆ ಕೋಪವೂ ಇದೆ. ಕೆಲವೊಮ್ಮೆ ಹೇಳದೆ ಕೇಳದೆ ನನ್ನ ಬಿಟ್ಟು ಹೋಗಿಬಿದುತ್ತಿಯಾ? ಯಾಕೆ. ನನ್ನ ಸ್ನೇಹ ಬೇಕಾಗಿಲ್ಲವೇ? ನಿನಗೆ ಬೇಕು. ಈ ಜಗತ್ತಿನಲ್ಲಿ ನಾನು ಮತ್ತು ನೀನು ಇಬ್ಬರೂ ಏಕಾಂಗಿತನದಿಂದ ನರಳುತ್ತಿದ್ದೇವೆ. ನಿನಗೆ ನನ್ನ ಸಾಂಗತ್ಯ ಅಗತ್ಯವಿದೆ, ಹಾಗೆಯೇ ನನಗೂ. ಆದರೆ ಇಬ್ಬರೂ ಒಪ್ಪಿಕೊಳ್ಳುತ್ತಿಲ್ಲ ಅಷ್ಟೆ.
ಮೊದ ಮೊದಲು ನನ್ನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದವಳು ನೀನು. ನನಗೋ ನಿನ್ನ ಜೊತೆ ಸ್ನೇಹ ಮಾಡುವಾಸೆ. ನಿನ್ನ ವಶೀಕರಿಸಿಕೊಳ್ಳುವಾಸೆ. ಆದರೆ ನೀನೋ ಎಲೆಯ ಮರೆಯ ಕಾಯಿ. ಮಿಂಚಿ ಮಾಯವಾಗುವ ಕಾಮನ ಬಿಲ್ಲು. ಕಸ್ತೂರಿ ಮ್ರಗ ತನ್ನಲ್ಲೇ ಇರುವ ಸುವಾಸನೆಯನ್ನು ಅರಿಯಲಾರದೆ ಕಾಡನ್ನೆಲ್ಲಾ ಸುತ್ತುವಂತೆ ನಿನ್ನ ಸುಮವನ್ನು ಅರಿಯಲಾರದೆ ತೊಳಲಾಡಿದವನು ನಾನು. ನಿನ್ನ ಒಂದು ನಗು ನನ್ನ ದಿನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ ಡಿಯರ್. ಕಾಡಬೇಡ ನನ್ನ ನನ್ನರಗಿಣಿಯೇ. ನಿನ್ನ ಮಾತುಗಳಿಗೆ, ನಿನ್ನ ಚಲನೆಯ ಪರಿಕ್ರಮಣೆಗೆ, ನಿನ್ನ ಮುದ್ದು ನಗುವಿಗೆ, ನಿನ್ನ ಸೌಂದರ್ಯಕ್ಕೆ ಸೋತು ಹೋದೆ. ಇನ್ನೆಷ್ಟು ದಿನ ಈ ಸಂಭ್ರಮವೋ ಅರಿಯಲಾರೆ. ನಿನ್ನ ಬಿಟ್ಟು ಹೋಗಲು ಮನಸ್ಸಿಲ್ಲ, ನಿನ್ನೊಳಗೆ ನಾನಿರಲೂ ನಿನಗೆ ಇಷ್ಟವಿಲ್ಲ. ಹಾಗಾದರೆ ನಮ್ಮ ಸಂಬಂಧಗಳ ಕೊನೆ ಹೇಗೆ.
ನಿನ್ನ ಬಗ್ಗೆ ನನಗೆ ಯಾವುದೇ ಕಂಪ್ಲೆಂಟ ಗಳಿಲ್ಲ . ನೀನು ನಿರುಪದ್ರವಿ. ನಿರಹಂಕಾರಿ. ನೀನು ನನ್ನ ಜೊತೆಯಿದ್ದೆ ಎನ್ನುವ ಭಾವವೇ ನನಗೆ ಅಹಂಕಾರಿ ಪಟ್ಟ ಕೊಟ್ಟಿದೆ. ಅದು ನಿನ್ನ ತಪ್ಪಲ್ಲ. ನೀನು ಎಂದೂ ನನ್ನ ಕೆಟ್ಟ ಗುಣ ಸಹಿಸಿಕೊಂಡವಳಲ್ಲ. ಹಾಗೆಂದು ನನ್ನೆದುರಿಗೆ ನನ್ನ ನಿಂದಿಸದವಳೂ ಅಲ್ಲ. ಆದರೂ ನಿನಗೆ ನಾನು ಒಳ್ಳೆಯವನಾಗಿರಬೇಕು ಎಂಬ ಆಸೆಯಿದೆ. ಆದರೆ ನಿನ್ನ ಜೊತೆಯೇ ಇರಬೇಕು ಎನ್ನುವ ಸ್ವಾರ್ಥವೂ ಇದೆ. ನನ್ನ ಒಂಟಿತನ ಹೇಗೆ ನೀನು ಪರಿಹರಿಸಿದ್ದಿಯೋ ಹಾಗೆಯೇ ನಿನ್ನ ಒಂಟಿತನಕ್ಕೂ ನಾನು ಜೊತೆಯಾಗಿದ್ದೇನೆ. ನನ್ನ ಬಿಟ್ಟರೆ ನಿನ್ನ ಮನಸ್ಸಿಗೆ ಬೇಸರವಾಗುವುದಿಲ್ಲವೇ ಪ್ರಿಯೆ. ನನಗೆ ಗೊತ್ತು, ನೀನು ನನ್ನ ಎಷ್ಟು ಇಷ್ಟಪಡುತ್ತಿಯಾ ಎಂದು. ಎಲ್ಲದಕ್ಕೂ ಮಾತಾಡಬೇಕೇನೇ ಹುಚ್ಚಿ. ನಿನ್ನ ಕಣ್ಣುಗಳು, ಬಿರಿದ ತುಟಿಗಳು, ನಾಚಿಸುವ ಕೆನ್ನೆಗಳು, ಎಲ್ಲವೂ ನನ್ನ ಬಗ್ಗೆ ನಿನ್ನ ಒಲವನ್ನು ತೋರಿವೆ. ಹೌದು, ನಾನು ಕೆಲವೊಮ್ಮೆ ನಿನಗೆ ಒಗಟಾಗಿದ್ದೇನೆ ನಿಜ. ಆದರೆ ನಿನ್ನ ಬಿಟ್ಟು ಇರಲೂ ಆಗುತ್ತಿಲ್ಲ. ನಿನ್ನ ಜೊತೆ ಮಾತನಾಡುತ್ತಿರಬೇಕೆಬ ಆಸೆ. ನಿನ್ನಲ್ಲಿ ಹುಸಿಕೋಪ ಮಾಡುತ್ತೇನೆ, ಯಾಕೆಂದರೆ ತಿರುಗಿ ನೀನು ನನ್ನ ಮಾತನಾಡಿಸುತ್ತಿಯಲ್ಲ ಅದು ನನಗೆ ಇಷ್ಟ. ಆಗ ಎಷ್ಟೊಂದು ಮಧುರತೆ ನಿನ್ನಲ್ಲಿ. ನಿನಗೆ ಕೆಲವು ಕಟ್ಟುಪಾಡುಗಳು ಇವೆ ಎನ್ನುವುದು ನನಗೆ ತಿಳಿದಿದೆ. ಆದರೆ ನನಗೆ ನಿನ್ನ ಸ್ನೇಹ ಬೇಕು. ಜೀವನದ ತುದಿಯವರೆಗೂ ನಾನು ನಿನ್ನ ಜೊತೆಯಿರುತ್ತೇನೆ, ನೀನೂ ಇರುತ್ತಿಯಲ್ಲ. ನೀನು ನನ್ನ ಬಾಳನ್ನು ಪ್ರವೇಶಿಸುವಾಗಲೇ ತಡವಾಗಿದೆ, ಆದರೆ ಹೋಗುವ ನಿರ್ಧಾರ ಮಾಡಬೇಡ ಪ್ಲೀಸ್ .
ಓ ನನ್ನ ಪ್ರೀತಿಯ ಮನಸೇ, ಇಷ್ಟೆಲ್ಲಾ ಕಥೆ ನಿನ್ನ ಬಗ್ಗೆ ಹೇಳಿದ್ದೇನೆ. ನೀನು ನನ್ನ ಮನಸ್ಸು, ನನ್ನೆದೆಯ ಭಾಗ. ನನ್ನ ಜೀವದ ರಾಗ. ಇದನ್ನೆಲ್ಲಾ ನಿನಗೆ ಹೇಳುವ ಅಗತ್ಯವಿಲ್ಲ. ಯಾಕೆಂದರೆ ಇಲ್ಲಿಯವರೆಗೂ ನನ್ನ ಮುನ್ನಡೆಸಿದವಳೂ ನೀನೆ ತಾನೆ. ಮುಂದೆಯೂ ಜೊತೆಯೇ ಇರು. ಸುಖವೋ ದು:ಖವೋ ನನ್ನ ಕೈ ಬಿಡದಿರು. ನನ್ನ ಮುನ್ನೆಡೆಸು. ಪುನಃ ನೀ ಎಲ್ಲಿಂದ ಬಂದೆ ಎಂಬ ಪ್ರಶ್ನೆ ಕೇಳುವುದಿಲ್ಲ ಆದರೆ ಎಲ್ಲಿಗೂ ಹೋಗಬೇಡ ಎಂಬ ನಿವೇದನೆ ಮಾಡುತ್ತೇನೆ. ಇರುತ್ತಿಯಾ ತಾನೆ? ಇರಲೇಬೇಕು. ನಿನ್ನ ಬಿಡುವವರಾರು. ನಿನಗೂ ನನ್ನ ಬಿಟ್ಟು ಪ್ರಪಂಚದಲ್ಲಿ ಏನಿದೆ? ಓ ಮನಸೇ ರಿಲಾಕ್ಸ್ ಪ್ಲೀಸ್.
1 comment:
Post a Comment