Wednesday, January 26, 2011

ಮಗು ಬೆಳೆಯುತ್ತಿದೆ .....

ಸರ್ವರಿಗೂ ಗಣ ರಾಜ್ಯೋತ್ಸವದ ಶುಭಾಶಯಗಳು 

ಸುಮಾರು ಎರಡು ವರ್ಷಗಳ ಹಿಂದಿನ ಕಥೆಯಿದು, ಬಹಳ ದಿನಗಳಿಂದ ನಿಮ್ಮೊಂದಿಗೆ ಹೇಳಿಕೊಳ್ಳ (ಲ್ಲ) ಬೇಕೆಂದು  ಬಯಸುತ್ತಿದ್ದೆ. ಆದರೆ ಸಮಯ ಬರದೆ ಕಾಯುವಂತೆ ಆಗಿತ್ತು. ಎಲ್ಲದಕ್ಕೂ ಒಂದು ಸಮಯ ಬೇಕಲ್ಲ. ಸುಮ್ಮನೆ ನಮ್ಮ ಖಯಾಲಿ ಗೆ ಎಲ್ಲವನ್ನೂ ಬರೆಯುತ್ತಿದ್ದರೆ ನೀವು ಓದಬೇಕಲ್ಲ. ಅದಕ್ಕೇ ಸರಿಯಾದ ಸಮಯ ಬಂದಾಗ ಮಗು ಬೆಳೆಯುತ್ತಿರುವ ಕಥೆ ಹೇಳೋಣ ಎಂದು ಇಲ್ಲಿಯತನಕ ಕಾದೆ. ಇನ್ನು ಕಾಯಲಾರೆ. ಆ ಬೆಳೆಯುತ್ತಿರುವ ಮಗುವಿನ ಹುಟ್ಟು, ಸುತ್ತಲಿನ ಪರಿಸರ, ಬೆಳೆದ ವಾತಾವರಣ, ಬೆಳೆಯುತ್ತಿರುವ ಪರಿ, ಮಾಡುತ್ತಿರುವ ತರಲೆ, ತುಂಟಾಟಗಳು, ಇವನ್ನೆಲ್ಲ ನಿಮ್ಮೊಂದಿಗೆ ಹೇಳಿಕೊಳ್ಳದೆ ನನಗೆ ಸಮಾಧಾನವಿಲ್ಲ. ಕೇಳದಿದ್ದರೆ ನಿಮ್ಮನ್ನು ಸುಮ್ಮನೆ ನಾನು ಬಿಡುವುದಿಲ್ಲ. ಇದೊಂದು ತರ ಅತಿಥಿ ಗಳನ್ನು ಮನೆಗೆ ಕರೆಯಿಸಿ ಅವರಿಂದಲೇ ಕೆಲಸ ಮಾಡಿಸಿಕೊಳ್ಳುವ ಮನೆಯಾಕೆಯ ಮನಸ್ಥಿತಿ. ತುಂಬಾ ತಲೆ ತಿನ್ನದೇ ಕಥೆಗೆ ಬರುತ್ತೇನೆ.

ಅದೊಂದು ಜನವರಿಯ ಚುಮು ಚುಮು ಛಳಿಯ ಮುಂಜಾನೆ. 
''ತಣ್ಣನೆಯ ತಂಗಾಳಿ ತನುವನ್ನು ತೀಡುತಿದೆ
ತುಂತುರು ಹನಿಗಳು, ಮೈ ಮನವ ಬಳಸುತಿವೆ''

ಕೊರೆಯುತ್ತಿರುವ ಚಳಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುತ್ತಿದ್ದಂತೆ ಹಿಮ ಮೋಡಗಳು ಸ್ವೀಡನ್ನಿನ ಗೊತ್ಹೆಂಬುರ್ಗ್ ನಲ್ಲಿ ಪಸರಿಸಿತ್ತು. ಇದೇನು, ನೋಡು ನೋಡುವಷ್ಟರಲ್ಲಿ  ಹಿಮದ ಮಳೆ ಆರಂಭವಾಗಿಯೇ ಬಿಟ್ಟಿತ್ತು. ಸ್ವೀಡನ್ನಿಗೆ ಹಿಮ ಮಳೆ ಸಾಮಾನ್ಯವಾದರೂ ಗೊತ್ಹೆಂಬುರ್ಗ್ ಗೆ ಇದೊಂದು ವಿಶೇಷ. ಗೊತ್ಹೆಂಬುರ್ಗ್ ಸಮುದ್ರ ತೀರದಲ್ಲಿ ಇದ್ದಿದ್ದರಿಂದ ಇಲ್ಲಿ ಕೊರೆಯುವ ಗಾಳಿ ಇರುತ್ತಿತ್ತೆ ಹೊರತು ಹಿಮಪಾತ ತುಂಬಾ ಕಡಿಮೆ. ಆದರೆ ಕಳೆದ ಎರಡು ವರ್ಷಗಳಲ್ಲಿ ವಿಪರೀತ ಹಿಮ ಮಳೆ ಗೊತ್ಹೆಂಬುರ್ಗ್ ನ್ನು ಆವರಿಸಿಕೊಂಡಿದೆ. ಕಥೆಯನ್ನು ಬೇರೆಡೆಗೆ ಹೋಗಲು ಅವಕಾಶ ಮಾಡಿಕೊಡದೆ  ಎರಡು ವರ್ಷದ ಹಿಂದಕ್ಕೆ ಹೋಗೋಣ. ಆ ಜನವರಿಯ 26 ನೇ ತಾರೀಖು ನನಗಿನ್ನೂ ನೆನಪಿದೆ. ಆ ದಿನ ವಿಪರೀತ ಗಾಳಿ. ಮೈ ಕೊರೆಯುವ ಚಳಿ, ಹೊರಗೆ ಕಾಲು ಹಾಕಲು ಆಗದಷ್ಟು ಚಳಿ, ಬಹುಷ: - 20 ಡಿಗ್ರಿ ಇತ್ತೆಂದು ಅನಿಸುತ್ತದೆ. ಸರಿಯಾಗಿ ನೆನಪಿಲ್ಲ. ಇಂಥಹ ಪ್ರಕ್ರತಿಗೆ  ವಿರುದ್ಧವಾದ  ವಾತಾವರಣದಲ್ಲಿ ಹೆರಿಗೆ ನೋವು ಆರಂಭವಾಗಿಬಿಟ್ಟಿತ್ತು. ಈ ಹೆರಿಗೆ ನೋವು ವಿಚಿತ್ರ ನೋಡಿ, ತಾಯಿ ಹೆರಿಗೆ ನೋವನ್ನು ಸಂತಸದಿಂದಲೇ ಸ್ವೀಕರಿಸುತ್ತಾಳೆ. ತನ್ನೆಲ್ಲ ನೋವನ್ನು ಮರೆತು ಬರುವ ಕಂದನ ನೀರೀಕ್ಷೆಯಲ್ಲಿ ಕಾಲ ಕಳೆಯುವ ತಾಯಿಯ ಮನಸ್ಥಿತಿ ಕೇವಲ ತಾಯಿಗೆ ಮಾತ್ರ ಸಾದ್ಯ. ಪ್ರತಿ ಹೆಣ್ಣಿಗೆ ಕಂದನ ಹುಟ್ಟು ಮರುಜನ್ಮ ಲಭಿಸಿದಂತೆ. ಆ 9 ತಿಂಗಳ ಕಾಲ ಅನುಭವಿಸಿದ ಎಲ್ಲ ನೋವನ್ನು ಒಂದೇ ಕ್ಷಣದಲ್ಲಿ ಕಂದನ ನಗು ಮರೆಸಿಬಿಡುತ್ತದೆ. 

ಸರಿಯಾಗಿ ಜನವರಿ 26 ನೇ ತಾರೀಖು ಹೆರಿಗೆ ನೋವು ಬಂದೆ ಬಿಟ್ಟಿತ್ತು. ಹೊರಗಡೆ ಹೋಗಲು ಸಾದ್ಯವಿಲ್ಲದ ಒಳಗೆ ಕೂತುಕೊಳ್ಳಲು ಆಗದ ಪರಿಸ್ಥಿತಿ ಅದು. ಹಾಗೆಂದು ಮಗುವಿನ ಬರುವಿಕೆಗೆ ಸಾಕಷ್ಟು ತಯಾರಿ ನಡೆದಿತ್ತು ಕೂಡಾ. ಯಾವುದೇ ರೀತಿಯಲ್ಲಿ ಮಗುವಿನ ಹುಟ್ಟಿನಲ್ಲಿ ದೋಷ ಬರದಂತೆ ನಿಗಾ ವಹಿಸಲಾಗಿತ್ತು. ಹಿರಿಯರ ಆಶೀರ್ವಾದ, ಕಿರಿಯರ ಬೆಂಬಲ, ಸ್ನೇಹಿತರ ಶುಭ ನುಡಿ ಎಲ್ಲವೂ ಆ ಮಗುವಿನ ಪೋಷಕರಿಗೆ ಲಭಿಸಿತ್ತು. ಇನ್ನೇನು ಬೇಕು ಬದುಕಿಗೆ.

ಅಂತೂ ೨೬ ನೇ ತಾರೀಖು ಎಲ್ಲ ಅಡೆ  ತಡೆಗಳನ್ನು ದಾಟಿ ಆ ಮಗು ಹುಟ್ಟೇ ಬಿಟ್ಟಿತು. ಮಗುವಿನ ಹುಟ್ಟಿದ ನಂತರದ ಬೆಳವಣಿಗೆ ಹೇಳುವ ಮೊದಲು ಸ್ವೀಡನ್ನಿನಲ್ಲಿ ಗರ್ಭಿಣಿ ಹೆಂಗಸರನ್ನು ನೋಡಿಕೊಳ್ಳುವ ಆಸ್ಪತ್ರೆಗಳ ಬಗ್ಗೆ ನಿಮಗೆ ಹೇಳಲೇಬೇಕು. ಸ್ವೀಡನ್ ನಲ್ಲಿ ವೈದ್ಯಕೀಯ ಸೇವೆ ಸದಾ ಉಚಿತ. ನಮ್ಮಲ್ಲಿನ ಸರಕಾರೀ ಆಸ್ಪತ್ರೆಗಳಂತೆ  ''ಸೇವೆ ಉಚಿತ: ಸಾವು ಖಚಿತ'' ದಂತಲ್ಲ. ಆದರೆ ಆಸ್ಪತ್ರೆಗೆ ಹೋಗುವ ಮೊದಲು ವೈದ್ಯರಿಗೆ ಫೋನ್ ಮಾಡಿ ಅವರ ಭೇಟಿಯ ಸಮಯ ನಿಗದಿ ಪಡಿಸಿಕೊಳ್ಳಬೇಕು. ಗರ್ಭಿಣಿ ಸ್ತ್ರೀಯರಿಗೆ  ಇಲ್ಲಿಯ ವ್ಯವಸ್ಥೆ ಹೇಳಿ ಮಾಡಿಸಿದಂತಿದೆ. ಯಾವುದಕ್ಕೂ ಹಣ ಕೊಡುವ ಕೆಲಸವಿಲ್ಲ. ಸಮಯಕ್ಕೆ ಸರಿಯಾಗಿ ಹೋಗಿ ಎಲ್ಲ ರೀತಿಯ ವೈದ್ಯಕೀಯ ಸೇವೆ ತೆಗೆದುಕೊಂಡರೆ ಆಯಿತು. ಮಗುವಿನ ಬೆಳವಣಿಗೆಗೆ ತಾಯಿಗೆ ಕೊಡಬೇಕಾದ ಎಲ್ಲ ರೀತಿಯ ಹೈ-ಟೆಕ್ ಚಿಕಿತ್ಸೆಗಳನ್ನು ನೀಡುತ್ತಾರೆ. ಇನ್ನು ತಾಯಿ ಕೆಲಸದಲ್ಲಿದ್ದರೆ ಅವಳಿಗೆ ಮಗು ಹುಟ್ಟುವ 2 ತಿಂಗಳಿಂದ ಹಿಡಿದು ಒಂದು ವರ್ಷದ ತನಕ ಸಂಬಳದ ಜೊತೆಗೆ ರಜೆ ನೀಡುತ್ತಾರೆ. ಇದು ಸಾಲದೆಂಬಂತೆ ತಂದೆಗೂ 6 ತಿಂಗಳುಗಳ ಕಾಲ ಸಂಬಳದ ಜೊತೆ ರಜೆ ನೀಡುತ್ತಾರೆ. ಮಗು ಹುಟ್ಟಿದ ಮೇಲೆ ಮಗುವಿನ ಪೋಷಣೆಗೆಂದು ಪ್ರತಿ ತಿಂಗಳು 10000 ರೂಪಾಯಿಗಳನ್ನು ಹೆತ್ತವರಿಗೆ ನೀಡುತ್ತಾರೆ ಕೂಡಾ. ಇಂಥಹ ವ್ಯವಸ್ಥೆ ಎಲ್ಲಿದೆ ಹೇಳಿ. ಇಲ್ಲಿ ಜೀವಕ್ಕೆ ಬೆಲೆಯಿದೆ, ಬದುಕಿಗೆ ಗೌರವವಿದೆ. 

2 ವರ್ಷಗಳ ಹಿಂದೆ ಹುಟ್ಟಿದ ಮಗುವಿಗಾಗಲಿ, ಹೆತ್ತವರಿಗಾಗಲಿ ಇದ್ಯಾವ ಸವಲತ್ತುಗಳು ಲಭಿಸಲಿಲ್ಲ. ತಂದೆ ತಾಯಿ ಇಬ್ಬರೂ ಕೆಲಸದಲ್ಲಿದ್ದರೂ ಯಾವುದೇ ರಜೆ ಆಗಲಿ, ಸಂಬಳ ವಾಗಲಿ ಮಗು ಹುಟ್ಟಿದ್ದಕ್ಕೆ ಸಿಗಲಿಲ್ಲ. ಆದರೆ ಆ ಮಗುವಿನ ಹುಟ್ಟಿನ ಸಂಭ್ರಮ ಪೋಷಕರಿಗೆ ಹೇಳಲು ಅಸಾದ್ಯವಾದದ್ದು. ಆರಂಭದಲ್ಲಿ ವಿದೇಶದಲ್ಲಿ ಹುಟ್ಟಿದ ಮಗು ಎಲ್ಲಿ ಅನಾಥವಾಗಿ ಬೆಳೆಯುತ್ತದೋ ಎಂಬ ಆತಂಕವಿತ್ತು. ಆದರೆ ಕಾಲ ಕ್ರಮೇಣ ವಿದೇಶದಲ್ಲಿದ್ದ ಮಗುವಿಗೆ ದೂರದ ಭಾರತೀಯರ ಸಂಪರ್ಕ ಲಭಿಸಿದ್ದಲ್ಲದೆ , ವಿಶ್ವದ ಅನೇಕ ಸ್ನೇಹಿತರ ಹಿತನುಡಿ ಮಗುವಿನ ಅಂತರಿಕ ವಿಶ್ವಾಸ ಹೆಚ್ಚಿಸಿತು. ಇಂದು ಮಗು ಒಂದು ಹಂತಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಆ ಎಲ್ಲ ಮಹನೀಯರುಗಳು.

ಇದೇನಪ್ಪ, ಮಗು, ಹೆರಿಗೆ, ಹುಟ್ಟು, ಸ್ನೇಹಿತರು, ಬೆಳವಣಿಗೆ ಏನೇನೋ ಹೇಳ್ತಾ ಇದಾನೆ ಅಂತ ಬೈಕೋತಾ ಇದೀರಾ, ಇಂದು 26 ನೇ ತಾರೀಖು ನನ್ನ ಪುಟ್ಟ ಮಗು ''ಸಾಗರದಾಚೆಯ ಇಂಚರ'' ಕ್ಕೆ  ಎರಡು ವರ್ಷ ತುಂಬಿತು. ಈ ಸಂಭ್ರಮ ಅದಕ್ಕೇ. ಈ  ಎರಡು ವರ್ಷಗಳಲ್ಲಿ ನನ್ನ ಬ್ಲಾಗ್ ನ್ನು ಎತ್ತಿ ಬೆಳೆಸಿದ ನಿಮ್ಮೆಲ್ಲರಿಗೂ ಹ್ರತ್ಪೂರ್ವಕ ವಂದನೆಗಳು.

ಇಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸಲು ಸಾದ್ಯವಿಲ್ಲ ಕಾರಣ ನೀವೆಲ್ಲರೂ ನನ್ನ ಬ್ಲಾಗ್ ಬೆಳೆಯಲು ಕಾರಣ ಆಗಿದ್ದೀರಿ.  ಈ ಎರಡು ವರ್ಷಗಳಲ್ಲಿ ನನ್ನ ನೋವುಗಳಿಗೆ ಸಾಂತ್ವನ ನೀಡಿ, ನಲಿವುಗಳಿಗೆ ಬೆಂಬಲವಾಗಿ, ತಪ್ಪಿದಲ್ಲಿ ತಿದ್ದಿ, ಇಷ್ಟವಾದಲ್ಲಿ ಮೆಚ್ಚಿ ಈ ಮಗುವನ್ನು ಬೆಳೆಸಿದ್ದಿರಿ. ಅದಕ್ಕೆ ಇನ್ನೊಮ್ಮೆ ಥ್ಯಾಂಕ್ಸ್

ಕೆಲವು ಸಂದರ್ಭಗಳಲ್ಲಿ ನಿಮ್ಮೆಲ್ಲರ ಬ್ಲಾಗ್ ಓದಲು ಆಗಲಿಲ್ಲ, ಅದಕ್ಕೆ ಕ್ಷಮೆ ಇರಲಿ, ಕೆಲವೊಮ್ಮೆ ನಿಮಗೆ ಬೇಸರ ಆಗುವಂತೆ  ಕಾಮೆಂಟ್ ನೀಡಿರಬಹುದು. ನಿಮ್ಮದೇ ಮನೆಯ ಸದಸ್ಯ ಎಂದು ತಿಳಿದು ಮನ್ನಿಸಿಬಿಡಿ.  

ಬ್ಲಾಗ್ ಆರಂಬಿಸಿದಾಗ ನನ್ನ ಮನದಾಳದ ಭಾವನೆಗಳನ್ನು ಬರೆಯುವ ತಾಣ ಎಂದುಕೊಂಡಿದ್ದೆ. ಆದರೆ ಅದು ಈಗ ಅದನ್ನೆಲ್ಲ ಮೀರಿ ನಡೆದಿದೆ. ನಿಮ್ಮೆಲ್ಲರ ಪ್ರೀತಿಗೆ, ಸ್ನೇಹಕ್ಕೆ ಸೋತಿದ್ದೇನೆ. ಬ್ಲಾಗ್ ನಿಂದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸ್ನೇಹ ಲಭಿಸಿದೆ. ಕೆಲವರು ಇಟ್ಟಿಗೆ ಸಿಮೆಂಟ್ ನಲ್ಲಿಯೇ  ಮನಸ್ಸನ್ನು ಗೆದ್ದರೆ, ಇನ್ನು ಕೆಲವರು ಮನಸಿನಲ್ಲಿಯೇ ಮಾತಾಡಿ ಮನಸನ್ನು ಅರಿತಿದ್ದಾರೆ. ತಮ್ಮ ಛಾಯಾ ಕನ್ನಡಿಯಿಂದ ಸ್ನೇಹಿತರಾದ ಕೆಲವರು, ಜಲದಲ್ಲಿದ್ಹ ಮೀನುಗಳ ನಯನಗಳ ಬಗ್ಗೆ ತಿಳಿಸುತ್ತ ಜೊತೆಗಾರರಾದವರು ಹಲವರು,  ಮರುಭೂಮಿಯಲ್ಲಿದ್ದು ಕೊಂಡು  
ಮ್ರದು ಮನಸಿನಿಂದ, ಸವಿ ಮಾತಿಂದ  ಸ್ನೇಹ ಹಂಚಿದವರು,  ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಟ್ಟಿನಲ್ಲಿ ಬ್ಲಾಗ್ ಲೋಕಕ್ಕೆ ಬಂದ ಮೇಲೆ ಅನೇಕ ಸ್ನೇಹಿತರು ಸಿಕ್ಕಿದ್ದಾರೆ. ಬೆಂಗಳೂರಿಗೆ ಹೋಗುವುದೇ ಒಂದು ಸಂಭ್ರಮ. ಅನೇಕ ಬ್ಲಾಗ್ ಸ್ನೇಹಿತರು ಬೆಂಗಳೂರು ಬರುತ್ತೇನೆ ಅಂದರೆ, ''ಯಾವಾಗ ಬರುತ್ತಿರಾ'' ''ಎಲ್ಲರೂ ಸೇರೋಣ, ಪ್ರೀತಿಯಿಂದ 4 ಕ್ಷಣ ಒಟ್ಟಿಗೆ ಕಳೆಯೋಣ'' ''ಬರುವ ದಿನ ತಿಳಿಸಿ'' ಎಂದೆಲ್ಲ ಹೇಳಿದಾಗ ಹ್ರದಯ ತುಂಬಿ ಬರುತ್ತದೆ. ಎಲ್ಲಿಯೋ ಇರುವ ನಮ್ಮನ್ನು ಆಪ್ತರನ್ನಾಗಿಸಿಕೊಂಡು ನಮ್ಮನ್ನು ಭೆಟ್ಟಿ ಆಗಲು ಬರುವ ಎಲ್ಲ ಸ್ನೇಹಿತರುಗಳ ಸ್ನೇಹಕ್ಕೊಂದು  ಸಲಾಮು.  

3 ನೇ ವರ್ಷಕ್ಕೆ ಕಾಲಿಡುತ್ತಿರುವ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ, ಕೊಡುತ್ತಿರಲ್ಲ
ಮತ್ತೆ ಮುಂದಿನ  ವಾರ ಸಿಗುತ್ತೇನೆ 
ಪ್ರೀತಿ ಇರಲಿ
ನಿಮ್ಮ
ಗುರು 

Thursday, January 6, 2011

ಬದುಕಿನ ಪುಟಗಳಿಂದ ..




ಕೆದಕಿದಷ್ಟೂ ಬರುವ ಅಗಾಧ ರಾಶಿಯೆಂದರೆ ನೆನಪು. ಅದು ಸಿಹಿ ನೆನಪೇ ಆಗಿರಬಹುದು, ಕಹಿ ನೆನಪೇ ಆಗಿರಬಹುದು. 
''ಎಲ್ಲ ಮರೆತಿರುವಾಗ, ಇಲ್ಲ ಸಲ್ಲದ ನೆವವ 
ಹೂಡಿ ಬರದಿರು ಮತ್ತೆ ಹಳೆಯ ನೆನಪೇ''
ನೆನಪುಗಳಲ್ಲಿ ನೋವಿದ್ದರೆ ಅದರ ನೆನಪು ಮನಸಿಗೆ ಮತ್ತೆ ಮತ್ತೆ ನೋವು ತರಿಸುತ್ತದೆ. ಸಿಹಿ ನೆನಪುಗಳು ಬದುಕಿನಲ್ಲಿ ನೆನೆಸಿದ್ದಷ್ಟೂ ಹೊಸತನ ನೀಡುತ್ತವೆ. ಬದುಕು ಮುಂದಕ್ಕೆ ಚಲಿಸಬೇಕು ನಿಜ, ಆದರೆ ಅದೊಂದು ''ಸಿಂಹಾವಲೋಕನ'' ಆಗಿರಬೇಕು. ಮುಂದೆ ನಡೆದಂತೆ ಹಿಂದೆ ಇಟ್ಟ ಹೆಜ್ಜೆಯ ಒಮ್ಮೆ ಅವಲೋಕನ ಅತ್ಯಗತ್ಯ. ಅದರಲ್ಲಿ ತಿದ್ದಿಕೊಳ್ಳುವ ಹಲವು ಅಂಶಗಳು ಆಗ ಗಮನಕ್ಕೆ ಬರದೆ ಪುನಃ ಎಂದಾದರೊಮ್ಮೆ ಗಮನಕ್ಕೆ ಬರಬಹುದು. ಅದಕ್ಕೇ

 ''ಬಂದ ನೆನಪುಗಳ ದೂರ ತಳ್ಳದಿರು, ಭಾವ ತುಂಬಿ ಬರಲಿ
ನೊಂದ ಮನಸಿಗದು ಹಿತವ ನೀಡುವುದು, ಜೀವ ಮತ್ತೆ ತರಲಿ''

ಬದುಕು ಏಕತಾನತೆಯಿಂದ ಕೂಡಿದ್ದರೆ ಅದರಲ್ಲಿ ಯಾವ ಖುಷಿಯೂ ಇಲ್ಲ ಎಂಬುದು ನನ್ನ ಭಾವನೆ.  ಗೆಲುವು-ಸೋಲು ಬದುಕಿನಲ್ಲಿದ್ದರೆ ಮಾತ್ರ ಹಸನಾದ ಬಾಳು ನಡೆಯಲು ಸಾದ್ಯ. ಹುಟ್ಟಿದ ಮಗು ಒಮ್ಮೆಲೇ ನಡೆಯಲು ಕಲಿತರೆ ಮುಂದೆ ಬಿದ್ದಾಗ ಆಗುವ ನರಳಾಟ ಸಹಿಸಲಸಾದ್ಯ. ಅದೇ ಮಗು ಎದ್ದು ಬಿದ್ದು ನಡೆಯಲು ಕಲಿತರೆ ಬರುವ ಎಲ್ಲ ನೋವುಗಳ ಸಮರ್ಥವಾಗಿ ಎದುರಿಸುವ ಮಾನಸಿಕ ಸ್ಥೈರ್ಯ ಪಡೆದುಕೊಳ್ಳುತ್ತದೆ. ಆ ಏಳು-ಬೀಳುಗಳ ನಡುವಿನ ಬದುಕಿನ ಚಿತ್ರಣದ ನೆನಪು ಎಂದಿಗೂ ಮಧುರ.
ಸರಿಯಾಗಿ 11 ವರ್ಷಗಳ ಹಿಂದೆ ನಾನು PUC ಮುಗಿಸಿದಾಗ ಮನೆಯಲ್ಲಿ ಮುಂದಕ್ಕೆ ಏನು ಮಾಡಬೇಕೆಂದು ಚಿಂತನೆ. ನಮ್ಮ ತಂದೆ ಎಂದಿಗೂ ನೀನು ಇಂಜಿನಿಯರ್ ಆಗಲೇಬೇಕು, ಡಾಕ್ಟರ್ ಆಗಲೇಬೇಕು ಎಂದು ಪೀಡಿಸಲಿಲ್ಲ. ಆ ಮಟ್ಟಿಗೆ ನಾನು ಸುಖಿ. ನನಗೆ ಆಗ ಇಂಜಿನಿಯರಿಂಗ್ ನಲ್ಲಿ ಸಾಕಷ್ಟು Rank ಬಂದರೂ BSc ಮಾಡುವ ಮನಸ್ಸಿತ್ತು. ತಂದೆಯವರ ಸಮ್ಮತಿ ಪಡೆದು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಸೇರಿದ್ದಾಯಿತು. ಅಂದಿನ ದಿನಗಳಲ್ಲಿ ನಾನು ಇಂಜಿನಿಯರ ಮಾಡದೇ BSc ಗೆ ಸೇರಿದ್ದಕ್ಕೆ ನನ್ನ ಅನೇಕ ಸ್ನೇಹಿತರು, ಹಾಗೂ ಸಂಬಂಧಿಕರು ''ನಾನು ಯಾವ ಪ್ರಯೋಜನಕ್ಕೂ ಬಾರದವನು'' ಎಂದು ನನ್ನೆದುರಲ್ಲೇ ಅನೇಕ ಸಲ ಮೂದಲಿಸುತ್ತಿದ್ದರು. ಕೆಲವೊಮ್ಮೆ ಅಂಥಹ  ಮೂದಲಿಕೆ ಎಂಥಹ ಪರಿಣಾಮ ಬೀರುತ್ತದೆ ಎಂದರೆ ''ಏನಾದರಾಗಲಿ, ಸಾಧಿಸಿ ತೋರಿಸಬೇಕು'' ಎಂಬ ನಿರ್ಧಾರ ವನ್ನು ನಮ್ಮಲ್ಲಿ ತುಂಬಿ ಬಿಡುತ್ತದೆ. ರಜೆಯಲ್ಲಿ ಊರಿಗೆ ಹೋದಾಗ ಅಮ್ಮ-ಅಪ್ಪ ಹೇಳುತ್ತಿದ್ದುದು ''ಸರಿಯಾಗಿ ಓದು, ಮೂದಲಿಸುವವರ ಬಾಯಿಗೆ ಆಹಾರ ಆಗಬೇಡ '' ಎಂದು. ಬಹುಷ: ತಂದೆ-ತಾಯಿ ಕೊಟ್ಟ ಆ ಪ್ರೀತಿಯೇ ನನ್ನನ್ನು ಮುನ್ನಡೆಸಿತು ಎಂದರೆ ತಪ್ಪಾಗಲಾರದೇನೋ. 
ಆ ದಿನಗಳಲ್ಲಿ ಬಿಸಿ ರಕ್ತದ ವಯಸ್ಸು, ಸ್ವಾಭಿಮಾನ ಅದೆಲ್ಲಿತ್ತೋ ಗೊತ್ತಿಲ್ಲ. ಪ್ರತಿಯೊಂದಕ್ಕೂ ಸ್ವಾಭಿಮಾನ. ತಂದೆಯಿಂದ ಹಣ ಪಡೆಯಲು ಸ್ವಾಭಿಮಾನ. ವರ್ಷದ ಕಾಲೇಜಿನ ಫೀಸ್ ಗೆ ಎಷ್ಟು ಬೇಕೋ ಅಷ್ಟನ್ನೇ ಪಡೆಯಬೇಕು ಎಂಬ ಹಠ. ಉಡುಪಿಯಲ್ಲಿ ಇರುವಾಗ ಶ್ರೀ ಕೃಷ್ಣ ಮಠದ ಹತ್ತಿರಲ್ಲಿಯೇ ರೂಮು ಮಾಡಿಕೊಂಡು ಇದ್ದೆ. ಸುಮಾರು 20 ಜನ ವಿಧ್ಯಾರ್ಥಿಗಳು ನನ್ನಂತೆಯೇ ಅಲ್ಲಿ ಇದ್ದರು. ನಾನು ಜೀವನದಲ್ಲಿ ಮೊದಲ ಬಾರಿಗೆ ತಂದೆ-ತಾಯಿಯನ್ನು ಬಿಟ್ಟು ಹೊರಗೆ ಬಂದ ಕ್ಷಣ ಅದು. ಮನೆಯಲ್ಲಿ ಅಮ್ಮ ಮಾಡಿದ ಕೈ ತುತ್ತನ್ನು ತಿನ್ನುತ್ತ ಊಟಕ್ಕೆ ಕುಳಿತಾಗ ''ಅದು ಸರಿ, ಇದು ಸರಿ ಇಲ್ಲ'' ಎಂದು ಅಮ್ಮನಿಗೆ ಬುದ್ಧಿ ಹೇಳುತ್ತಾ ಇದ್ದೆ. ಆದರೆ ಉಡುಪಿಗೆ ಬಂದ ಒಂದೇ ವಾರದಲ್ಲಿ ನಾನೇ ಅಡಿಗೆ ಮಾಡಿಕೊಂಡಾಗ ಅಮ್ಮನ ನೆನಪಾಗಿ ''ಕಣ್ಣೀರು'' ಗಳ ಗಳ ನೇ ಹರಿದಿತ್ತು. ನಮ್ಮೆಲ್ಲ ಮಾತುಗಳನ್ನು ಶಾಂತಿಯಿಂದ ಕೇಳಿ, ನಮ್ಮ ಮಾತುಗಳಿಗೆ ಬೇಸರ ಮಾಡಿಕೊಳ್ಳದೆ, ಪುನಃ ಅದೇ ನಗು, ಅದೇ ತಾಳ್ಮೆ, ಅದೇ ಸೇವಾ ಮನೋಭಾವ, ಅದೇ ವಾತ್ಸಲ್ಯದಿಂದ ನಮ್ಮನ್ನು ಸಲಹುವ ಮಮತಾಮಯಿ ತಾಯಿಯ ಪ್ರೀತಿಯ ಮುಂದೆ ಜಗತ್ತಿನ ಯಾವ ಪ್ರೀತಿಯೂ ಸರಿಸಮನಲ್ಲ. ಆ ಕ್ಷಮಯಾಧರಿತ್ರಿಯ ಮುಂದೆ ನಾವು ತುಂಬಾ ಚಿಕ್ಕವರು. 
ಉಡುಪಿಯಲ್ಲಿ ಶ್ರೀ ಕೃಷ್ಣ ಮಠ ದಲ್ಲಿ ಪ್ರತಿದಿನ ಮಧ್ಯಾನ್ಹ ಮತ್ತು ಸಂಜೆ ಸರ್ವರಿಗೂ ಉಚಿತ ಊಟ ಹಾಕುತ್ತಾರೆ. ಶ್ರೀ ಕೃಷ್ಣನ ಪರಮ ಪ್ರಸಾದ ವಾದ ಊಟವನ್ನು ಮಾಡಿ ಸರ್ವರೂ ಪುನೀತರಾಗುತ್ತಾರೆ. ನಾನು ಬಂದ ಒಂದು ವಾರದ ನಂತರ ಶ್ರೀ ಕೃಷ್ಣ ಮಠ ಕ್ಕೆ  ಊಟಕ್ಕೆ ಹೋಗತೊಡಗಿದೆ. ನನ್ನ ಬದುಕಿನಲ್ಲಿ ಶ್ರೀ ಕೃಷ್ಣ ಮಠ ದ ಋಣ ಮಾತ್ರ ತೀರಿಸಲಾಗದ್ದು. ಪ್ರತಿದಿನ ಮಧ್ಯಾನ್ಹ ಮತ್ತು ರಾತ್ರಿ ಶ್ರೀ ಕೃಷ್ಣನ ದರ್ಶನ ಮಾಡಿ ಸಾವಿರಾರು ಜನರ ನಡುವೆ ಕುಳಿತು ಮಾಡುವ ಊಟದ ರುಚಿ ಐಶಾರಾಮಿ ಬಂಗಲೆಯಲ್ಲಿ ಚಿನ್ನದ ತಟ್ಟೆ ಯಲ್ಲಿ ಕುಳಿತರೂ ಸಿಗದು. ಮನುಷ್ಯ ನ ಅಹಂಕಾರ ಕಡಿಮೆ ಮಾಡಬೇಕು ಎಂದಾದರೆ ''ವಿಶಾಲ ಸಮುದ್ರದ ಎದುರಲ್ಲಿ ಅಥವಾ ವಿಶಾಲ ಆಕಾಶದ ಕೆಳಗೆ ನಕ್ಷತ್ರಗಳ ವೀಕ್ಷಣೆಯಲ್ಲಿ ಘಂಟೆಗಟ್ಟಲೆ ಕುಳಿತು ಕೊಳ್ಳಬೇಕಂತೆ . ಆ ನಿಸರ್ಗದ ವೈಚಿತ್ರ್ಯದ ಮುಂದೆ ಮನಸ್ಸು ತನ್ನಿಂದ ತಾನೇ ಶಾಂತವಾಗುತ್ತದೆ ಎನ್ನುತ್ತಾರೆ ಹಿರಿಯರು. ಇತ್ತೀಚಿನ ದಿನಗಳಲ್ಲಿ ನಮಗೆ ಸಮುದ್ರ ಎಂದರೆ ನೆನಪಾಗುವುದು ಮರಳಲ್ಲಿ ಆಡುವುದು, ಸ್ನಾನ ಮಾಡುವುದು ಬಿಟ್ಟರೆ ಶಾಂತವಾಗಿ ಕುಳಿತುಕೊಳ್ಳಲು ನಮಗೆ ಸಾದ್ಯವಿಲ್ಲದ ಸ್ಥಿತಿ. ಅಂತೆಯೇ ಸಾವಿರಾರು ಜನರ ನಡುವೆ ಕುಳಿತು ಊಟ ಮಾಡಿದಾಗ ಸಿಗುವ ಭಾವನೆಯೇ ಬೇರೆ.  
ಹಾಗೆಂದೂ ಎಂದಿಗೂ ಉಚಿತ ಊಟ ಕೊಡುತ್ತಾರೆ ಎಂದು ಸುಮ್ಮನೆ ಊಟ ಮಾಡಿ ಬರುತ್ತಿರಲಿಲ್ಲ. ನಾವು ಒಂದು 10 ಜನ ಗೆಳೆಯರು ಪ್ರತಿ ದಿನ ಸುಮಾರು ಸಾವಿರದಷ್ಟು ಜನರಿಗೆ ಬಡಿಸಿ , ಅವರ ಊಟ ಆದ ಮೇಲೆ ಕೊನೆಯಲ್ಲಿ ನಾವು ಊಟ ಮಾಡಿ ಬರುತ್ತಿದ್ದೆವು. ಇದಕ್ಕೆ ನಮಗೆ ಯಾರೂ ಹಣ ಕೊಡುತ್ತಿರಲಿಲ್ಲ. ಹೀಗೆ ಕೃಷ್ಣನ ಮಠ  ದಲ್ಲಿ ಬಡಿಸಿ ಊಟ ಮಾಡಿ ಕಲಿಯುವ ಅನೇಕ ವಿದ್ಯಾರ್ಥಿಗಳಿದ್ದಾರೆ. ಕೃಷ್ಣ ಮಠ  ನಮ್ಮೆಲ್ಲರ ಬಾಳಿಗೆ ಬೆಳಕಾಗಿದೆ. ಅನ್ನ ನೀಡಿ ಬದುಕು ಬರೆದ ಮಹಾನ್  ಸ್ಥಳವೂ ಹೌದು.
ನೋಡಿ, ಎಲ್ಲಿಂದನೋ ಆರಂಬಿಸಿದ ಕಥೆ ಎಲ್ಲಿಗೋ ಹೋಗುತ್ತಿದೆ. ನೆನಪಿನ ಬುತ್ತಿ ಬಿಚ್ಚಿದಂತೆ ಬರೆಯಬೇಕು ಎನಿಸುತ್ತದೆ. ಆ ದಿನಗಳಲ್ಲಿ ಇದ್ದ ಸ್ವಾಭಿಮಾನ ಬದುಕಿಗೆ ಹೊಸ ಆಯಾಮ ನೀಡಿತು.

 ಕಳೆದ ದಿನಗಳಾದರೂ ಎಂತಹುದು? ಬದುಕಿನ ದಾರಿ ಹುಡುಕುವಲ್ಲಿ ಉಡುಪಿ ಯ ಮಾತ್ರವೇನು?  ಇವೆಲ್ಲವುಗಳನ್ನು ಮುಂದಿನ ವಾರ ಹೇಳುತ್ತೇನೆ. 
ಮತ್ತೆ ಸಿಗೋಣ
ಗುರು