Tuesday, November 23, 2010

ಬರೆಯಲೆಂದು ಹೊರಟೆ ಬ್ಲಾಗ ವಿಷಯಕೆಲ್ಲ ಬೀಗ...



ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ರಾಜಕೀಯವೆಂಬ ವಿಷಯ, ಸದಾ ಜನರ ಬಾಯಲಿಹುದು
ಯಡ್ಡಿ ಅಣ್ಣ, ಕುಮಾರಣ್ಣನ ಬಗ್ಗೆ ಬರೆದೆನು
ಸಾಲು ಸಾಲು ಬರೆದೆ, ಪೇಜು ಪೇಜು ಕೊರೆದೆ
ಪಕ್ಕದಲ್ಲೇ ಇದ್ದ ಒಬ್ಬ, ಕೇಳಿಬಿಟ್ಟ ನನ್ನನು 
ಕೆಲಸವಿಲ್ಲವೇನು ನಿನಗೆ, ಬೇಕೇ ಇಂಥ ವಿಷಯ
ಪಾಳುಬಿದ್ದ ಗುಡಿಯೇ ಲೇಸು, ಹೊಲಸು ರಾಜಕೀಯ


ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಚಲನಚಿತ್ರವೆಂಬ ಮಾಯೆ, ಸದಾ ಗಾಸಿಪ್ , No ಚುಪ್ ಚುಪ್
ಬರೆಯ ಹೊರಟೆ, ತುಂಡು ಲಂಗ, ಬಿಪಾಶಾಳ ಬಗೆಗೆ
ನಡುವೆ ತಡೆದ ಮಿತ್ರನೊಬ್ಬ, ಬಿಪಾಶಾಳ ''ಪಾಶ'' ಬೇಡ,
ಬರೆಯಬೇಡ ಇಂಥ ವಿಷಯ, ಎಂದು ಹೋದ ಮಹಾಶಯ

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಪ್ರೀತಿಯೆಂಬ ಮೋಹದಲ್ಲಿ, ಸಿಲುಕಿ ಇರದೇ ಉಳಿದೋರ್ಯಾರು
ಇಂಥ ವಿಷಯಕಿಂತ ಬೇರೆ ವಿಷಯ ಎಲ್ಲಿದೆ
ಗೀಚಿ ಬಿಟ್ಟೆ ಪ್ರೇಮ ಕವನ ಗೆಳತಿ ನಿನ್ನ ಮೋಹ ಕುರಿತು
ಓದಿ ಬಿಟ್ಟ ಗೆಳೆಯ ನುಡಿದ, ನಿನ್ನ ತಲೆಯು ಎಲ್ಲಿದೆ?
ಪ್ರೇಮ-ಗೀಮ ಬರೆಯುತಿರುವೆ, ಕೆಲಸವಿಲ್ಲವೇನು ನಿನಗೆ
ಇದ್ದ ಸಮಯವನ್ನು ಯಾಕೆ ಹಾಳು ಮಾಡುವೆ?

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಬದುಕ ಸೊಗಸ ಬಿಟ್ಟು ಹೊರಟ, ತ್ಯಾಗಜೀವಿ ಬುದ್ದ ದೇವ 
ಅವನ ಬಗ್ಗೆ ಯಾರಿಗಿಲ್ಲ ಪ್ರೇಮ-ಅಕ್ಕರೆ
ಬೆಳಗುತಿರುವ ಜಗದಿ ಬೆಳಕ, ಬರೆದೆ ಬಿಟ್ಟೆ ಎಂಥ ಪುಳಕ
ಕೊಂಕು ನುಡಿಯ ನುಡಿದು ಬಿಟ್ಟ ಮಿತ್ರ ಮೆಲ್ಲಗೆ
''ಮಡದಿ ಜೊತೆಗೆ ಜಗಳವೇನು? ಕೋಪವೇನು? ತಾಪವೇನು?
ಸರಸ-ವಿರಸ ಬಾಳಿನೆರಡು ಚಕ್ರ ಅಲ್ಲವೇ?
ಸುಮ್ಮನೇಕೆ ಬರೆವೆ ನೀನು? ಬದುಕು ನಿನಗೆ ಭಾರವೇನು?
ಬರೆದರೊಮ್ಮೆ ಇಂಥ ವಿಷಯ, 
ಹೊಡೆದು ಬಿಡುವೆನೆಂದನು''

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಥತ್ ಎಂದು ತಲೆಯ ಕೆರೆದು, ಬರೆದೆ ನನ್ನ ಸಂಶೋಧನೆಯ ಬಗೆಗೆ
ಹಾಕಲೆಂದು ಹೋದೆ ನಾನು, ಇಂದು ಬ್ಲಾಗಿಗೆ
ಅದನು ಓದಿ ನುಡಿದ ಗೆಳತಿ
''ಅಂದು ತೀರಿ ಹೋದ ಗಾಂಧಿ, ಇಂದು ಹುಟ್ಟಿ ಬಂದನು
ಸದಾ ನಿನ್ನ ಸಂಶೋಧನೆ , ಬಿಟ್ಟು ಹೊರಗೆ ಬಂದು ನೋಡು,
ಜಗದ ತುಂಬಾ ಹಸಿರು ತುಂಬಿ,
ಮನವ ಸೆಳೆಯುತಿರುವುದು''

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಹುಡುಕುತಿರುವೆ ವಿಷಯ ನಾನು
ಹೊಳೆಯಲಿಲ್ಲ ಏನೂ
ಬರೆದರೊಂದು ಕೊಂಕು ಜನರ ಬಾಯಲಿರುವುದು 
ಬಿಟ್ಟು ಅವರ ಬದುಕಲಾರೆ, ಅವರ ಬಿಟ್ಟು ಬಾಳಲಾರೆ 
ಧೈರ್ಯ ಮಾಡಿ ಕವನ ಒಂದು ಹಾಕುತಿರುವೆನು

    
ಸ್ನೇಹಿತರೆ, ಬಹಳ ದಿನಗಳಿಂದ ಕೆಮ್ಮು, ಜ್ವರ, ಜೊತೆಗೆ ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಬ್ಲಾಗ್ ಕಡೆಗೆ ಬರಲಾಗಲಿಲ್ಲ. ಹಾಗೆಯೇ ನಿಮ್ಮೆಲ್ಲರ ಬ್ಲಾಗ್ ಓದಲು ಆಗಲಿಲ್ಲ, ಅದಕ್ಕೆ ಕ್ಷಮೆ ಇರಲಿ
ಮತ್ತೆ ಎಂದಿನಂತೆ ಬ್ಲಾಗ್ ಓದುವ ಓದುಗನಾಗುತ್ತೇನೆ.
ಪ್ರೀತಿ ಇರಲಿ
ನಿಮ್ಮವ
ಗುರು 

Sunday, November 7, 2010

ಸಿಹಿಸುದ್ದಿಯೊಂದ ಕೊಡುವೆ ನಿಮಗೆ...

ಆತ್ಮೀಯ ಸ್ನೇಹಿತರೆ,
ಕನ್ನಡದ ಪ್ರೇಮಕವಿ ಕೆ ಎಸ ನರಸಿಂಹ ಸ್ವಾಮಿಯವರ ಹೆಸರಿನಲ್ಲಿ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ನನ್ನೆರಡು ಕವನಗಳಿಗೆ ''ರಾಜ್ಯಮಟ್ಟದ ಕೆ ಎಸ ಏನ್ ನೆನಪಿನ ಪ್ರೇಮಕವಿ ಪುರಸ್ಕಾರ'' ಪ್ರಶಸ್ತಿ ಲಭಿಸಿದೆ ಎನ್ನಲು ಸಂತಸವೆನಿಸುತ್ತದೆ.
ಸ್ಪರ್ಧೆ ನಡೆಸಿದ ನಮ್ಮೆಲ್ಲರ ಪ್ರೀತಿಯ ಸಾಧಕ ಭೇರ್ಯ  ರಾಮಕುಮಾರ್ ಅವರಿಗೆ ಹಾಗೂ ಅವರ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗಕ್ಕೆ ನಾನು ಅಭಾರಿ.
ನನ್ನನ್ನು ಪ್ರೋತ್ಸಾಹಿಸಿದ ನಿಮಗೆಲ್ಲ ಚಿರಋಣಿ.
ಮತ್ತೆ ಮುಂದಿನ ವಾರ ಹೊಸ ಲೇಖನದೊಂದಿಗೆ ಬರುತ್ತೇನೆ
ಗುರು