ಕರುನಾಡ ಕಂಪು..
-ಗುರು ಬಬ್ಬಿಗದ್ದೆ
ನಮ್ಮ ನಾಡು, ನಮ್ಮ ನುಡಿ, ನಮ್ಮ ಭಾಷೆ, ನಮ್ಮ ನೆಲ
ಕನ್ನಡದ ಸಿರಿಗಂಪು ಪಸರಿಸಲಿ ಉದ್ದಗಲ ೧
ಬೇಲೂರಿನ ಶಿಲ್ಪಕಲೆ, ಹಳೆಬೀಡಿನ ಕೆತ್ತನೆ
ಶೃಂಗೇರಿಯ ಶಾರದೆಗೆ, ಶಿರಬಾಗಿ ವಂದನೆ
ಶ್ರೀರಂಗನ ಸನ್ನಿಧಿ, ಮೈಸೂರಿನ ಅರಮನೆ
ಕೃಷ್ಣರಾಜಸಾಗರದ, ಸುಮನೋಹರ ನರ್ತನೆ ೨
ಕಾವೇರಿ, ಕಾಳಿಯು, ತುಂಗಭದ್ರೆ ನಾಲೆಯು
ಮಲೆನಾಡಿನ ತಪ್ಪಲಲಿ ಹಚ್ಚ ಹಸಿರು ಛಾಯೆಯು
ಜೋಗದ ಸಿರಿವೈಭವ, ಖಗಸಂಕುಲ ಕಲರವ
ಐಹೊಳೆ ಬಾದಾಮಿಯ, ನೆನಪುಳಿಯುವ ಅನುಭವ ೩
ವಿಜ್ಞಾನದ ದೇಗುಲ, ತಂತ್ರಜ್ಞಾನದಾಲಯ
ಎಲ್ಲರನೂ ಕೈ ಬೀಸಿ ಸೆಳೆವ ಪ್ರೇಮದಾಲಯ
ಅತಿಥಿ ದೇವರೆಂಬ ನಮ್ಮ ಮನದಿ ಇರಲಿ ಆಶಯ
ನಾಡಿಗಾಗಿ ದುಡಿಯುತಲಿ ಬದುಕು ನೀ ಮಹಾಶಯ ೪
ರನ್ನ ಪಂಪ ಮಾಸ್ತಿ ಬೇಂದ್ರೆ ಮೆರೆಸಿದಾ ಭೂಮಿಯು
ವರನಟನ ಕಲೆಯ ಬಲೆಗೆ ಬೆರಗಾದ ಊರಿದು
ಬನವಾಸಿ, ಧರ್ಮಸ್ಥಳ, ಭಗವಂತನ ತವರಿದು
ನಮ್ಮನೆಲ್ಲ ಉಳಿಸಿ ಬೆಳೆಸೋ ಕನ್ನಡದ ನಾಡಿದು ೫
1 comment:
ಕರುನಾಡ ಕಂಪು ಚೆನ್ನಾಗಿ ವಿಶ್ಲೇಷಿಸಿದ್ದೀರಿ ನಿಜಕ್ಕೂ ಕರುನಾಡು ಚೆಂದದ ಬೀಡು , ಕವಿಗಳ ನೆಲೆ ಬೀಡು...
ಹೀಗೆ ಬರೆಯುತ್ತಲಿರಿ ಅಭಿನಂದನೆಗಳೊಂದಿಗೆ....
ವಂದನೆಗಳು....
Post a Comment