Sunday, July 5, 2009

ಕವನ ಸಂಕಲನ ಬಿಡುಗಡೆ ಸಮಾರಂಭಕ್ಕೆ ಒಲವಿನ ಆಮಂತ್ರಣ

ಆತ್ಮೀಯರೇ...

''ಸಾಹಿತ್ಯ ನನಗೆ ಹೊಸದು, ತೋಚಿದ್ದನ್ನು

ಬರೆದೆ, ಬರೆದದ್ದನ್ನು ಹಂಚಿಕೊಳ್ಳುವ ಬಯಕೆ''

ಇದೇ ಬರುವ ಜುಲೈ 18, 2009 ರಂದು ನನ್ನ ಪ್ರಪ್ರಥಮ ಕವನ ಸಂಕಲನ

''ಸಾಗರದಾಚೆಯ ಇಂಚರ''

ಬಿಡುಗಡೆಗೊಳ್ಳಲಿದೆ.

ತಮಗೆಲ್ಲ ಆದರದ ಸ್ವಾಗತ,ಸುಸ್ವಾಗತ......

ಸಮಯ : ಮಧ್ಯಾನ್ಹ 3 ಗಂಟೆಗೆ,

ಸ್ಥಳ : ಗಜಾನನ ಪ್ರೌಡಶಾಲೆ ಸಂಪಖಂಡ,ಸಿರ್ಸಿ

ಕವನ ಸಂಕಲನ ಬಿಡುಗಡೆ : ಶ್ರೀ ಕೆ ಏನ್,ಹೊಸಮನಿ , ಪ್ರಾಂಶುಪಾಲರು, ಮಾರಿಕಾಂಬ ಜೂನಿಯರ್ ಕಾಲೇಜ್ ಅವರಿಂದ.

ಕವನ ಸಂಕಲನ ವಿಮರ್ಶೆ : ಶ್ರೀ ಅಶ್ವಥ್ ಭಾರದ್ವಾಜ,ಕನ್ನಡ ಉಪನ್ಯಾಸಕರು, ಉಡುಪಿ ಅವರಿಂದ

ಮುಖ್ಯ ಅತಿಥಿಗಳಾಗಿ : ಎಸ್.ಏನ್.ಹೆಗಡೆ,ಮುಖ್ಯೋಪಾದ್ಯಾಯರು , ಶ್ರೀ ಗಜಾನನ ಪ್ರೌಢಶಾಲೆ ಸಂಪಖಂಡ , ಸಿರಸಿ

ಅದ್ಯಕ್ಷರು : ಶ್ರೀ ಎಸ್ ಎಸ್ ಹೆಗಡೆ, ಶ್ರೀ ಗಜಾನನ ವಿದ್ಯಾವರ್ಧಕ ಸಂಘ, ಸಂಪಖಂಡ

ಅದೇ ದಿನ ಸಂಜೆ 5-30 ರಿಂದ ಹೆಸರಾಂತ ಹಿಂದುಸ್ತಾನೀ ಗಾಯಕಿ

ಶ್ರೀಮತಿ ವಾಣಿ ಹರ್ಡಿಕರ್

ಅವರಿಂದ

''ಹಿಂದುಸ್ತಾನೀ ಗಾಯನ''

ಕಾರ್ಯಕ್ರಮವಿದೆ.

ನೀವೆಲ್ಲರೂ ಬನ್ನಿ,

ನಿಮ್ಮವರನ್ನೂ ಕರೆತನ್ನಿ.


ನಿಮ್ಮ ನಿರೀಕ್ಷೆಯಲ್ಲಿ ಗುರು ಬಬ್ಬಿಗದ್ದೆ


Tuesday, June 30, 2009

ಸಾಗರದಾಚೆಯ ಇಂಚರ...

ಇಂಚರವೋ, ಇಂಚರವೋ

ಸಾಗರದಾಚೆಯ ಇಂಚರವೋ

ಗೀತೆಯಲಿ, ಸಂಗೀತದಲಿ, ಅಂಚಲಿ ಮಿಂಚಿದ ಇಂಚರವೋ


ಜಿಗಿದಾಡಿವೆ ಬಾನಿಗೆ ಹಕ್ಕಿಗಳು

ಗೂಡನು ಮರೆತು ಹೋಗದಿರಿ

ನಭದಲಿ ಸೆಳೆಯುವ ಛಲವಿಹುದು

ಬೇರನು ಬಿಟ್ಟು ತೊಲಗದಿರಿ


ಹೊಸತನ, ಹೊಸಕ್ಷಣ ಹೊಸದು ನಿಜ

ಹೊಸದರಲಿ ಎಲ್ಲವೂ ಸಹಜ

ನಿಮ್ಮೆಲ್ಲರ ತನುವಿದು ಜತನದಲಿ

ಸತತವೂ ಇಹುದು ತಾಯ್ನಾಡಿನಲಿ


ಗೂಡಿಗೆ ಅದರದೇ ಅಧರವಿದೆ

ಉದರವ ಪೊರೆಯುವ ಸೆಳೆತವಿದೆ

ಸಾಗರದಾಚೆಗೆ ಸೇರದಿರು

ನೆಲವಿದು ನಿನಗೆ ಕಾಯುತಿದೆ

Wednesday, June 17, 2009

ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತೆ..


- ಗುರು ಬಬ್ಬಿಗದ್ದೆ
ಜಗತ್ತೇ ಹಾಗೆ, ಇಂದಿನ ಸೂರ್ಯ ಸಂತಸ ನೀಡಿದರೆ ನಾಳೆ ಅದೇ ಸೂರ್ಯನ ತಾಪ ಹೆಚ್ಚಾದಾಗ ಖಳನಾಯಕನೂ ಆಗುತ್ತಾನೆ. ಅದು ಪ್ರತಿಯೊಂದು ಜೀವ ಜಂತುಗಳಿಗೂ ಅನ್ವಯಿಸುತ್ತದೆ ಅಲ್ಲವೇ? ಇಂದು ಇಷ್ಟವಾದ ವ್ಯಕ್ತಿ ನಾಳೆ ಕಷ್ಟವಾಗುತ್ತಾನೆ. ಮೊನ್ನೆ ಮೊನ್ನೆ ಯವರೆಗೆ ಇಷ್ಟವಾದ ಅಮ್ಮ-ಅಪ್ಪ ನ ಮೇಲೆ ಒಮ್ಮೆಲೇ ಕೋಪ ಬರುತ್ತದೆ. ಮನದನ್ನೆಯ ಮುನಿಸಿಗೆ ನಾವೇ ಕಾರಣವಾಗುತ್ತೇವೆ. ಹೀಗೇಕೆ? ಎಂದು ವಿಚಾರಿಸಿದರೆ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು ಮನಸ್ಸನ್ನು ಕೊರೆಯಲು ಆರಂಬಿಸುತ್ತವೆ. ಪ್ರಶ್ನೆಗಳೇ ಇನ್ನೊಂದು ಪ್ರಶ್ನೆಯಾಗಿ ಸಮಸ್ಯೆಗಳ ಸುರಿಮಳೆಯನ್ನೇ ಸೃಷ್ಟಿಸುತ್ತವೆ. ಮೊನ್ನೆ ಮೊನ್ನೆಯ ತನಕ ಇಷ್ಟವಾಗುತ್ತಿದ್ದ ಬಿ.ಜೆ.ಪಿ. ಚುನಾವಣೆಯಲ್ಲಿ ಯಾಕೆ ಕಷ್ಟವಾದಳೋ? ಗೊತ್ತಿಲ್ಲ. ಮೆಚ್ಚಿದ ಮಡದಿಗೆ ಕಿಚ್ಚು ಹಚ್ಚುವ ತವಕ ಅದೆಲ್ಲಿಂದ ಬಂತೋ? ಗೊತ್ತಿಲ್ಲಾ. ನೆಚ್ಚಿದ ಸ್ನೇಹಿತನಲ್ಲಿ ಕಿಚ್ಚಾಡಿದ ಮನಸ್ಸು ಹೀಗೆಕಾಯಿತೋ ಗೊತ್ತಿಲ್ಲ. ಇದು ಪ್ರತಿಯೊಬ್ಬನ ಜೀವನದಲ್ಲೂ ಒಂದು ಪರೀಕ್ಷಾ ಕಾಲ. ಒಂದು ಸಾಹಸದ ಘಟ್ಟ. ಇದನ್ನು ಅತ್ಯಂತ ತಾಳ್ಮೆಯಿಂದ ದಾಟಬೇಕು. ಅತ್ತ ಧರಿ, ಇತ್ತ ಪುಲಿ ಎನ್ನುವ ಮನಸ್ಥಿತಿ. ಇದೇನಪ್ಪ ಏನೇನೋ ಬಡ ಬಡಾಯಿಸ್ತ ಇದಾನೆ. ತಲೆ ಗಿಲೆ ಕೆಟ್ಟು ಹೋಯ್ತಾ ಅಂತಿರಾ? ನಾನು ಹೇಳೋಕೆ ಹೊರಟಿರೋದು ಮೊನ್ನೆಯಷ್ಟೇ ಕ್ರಿಕೆಟ್ ನಿಂದ ಸೂಪರ್ 8 ರ ಘಟ್ಟದಿಂದ ಒಂದೂ ಪಂದ್ಯ ಗೆಲ್ಲಲಾಗದೆ ನಿರ್ಗಮಿಸಿದ ಧೋನಿ ಬಳಗದ ಕುರಿತು. ಹೊರ ಬಿದ್ದ ಕೂಡಲೇ ಹೊರಟ ಮೊದಲ ಉದ್ಘಾರ '' ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತೆ?'' ಎನ್ನೋದು.
ವಿಶ್ವ ಚುಟುಕು ಕ್ರಿಕೆಟ್ ನ ಆಧಿಪತ್ಯ ಸ್ಥಾಪಿಸಿದ್ದ ಭಾರತ ಇಷ್ಟೊಂದು ಹೀನಾಯವಾಗಿ ಸೋಲುತ್ತದೆ ಎಂದರೆ ಎಂಥವರಿಗೂ ಬೇಸರವಾಗದೆ ಇರದು. ಅದು ನಿನ್ನೆ 130 ರನ್ ಹೊಡೆಯಲಾಗದೆ ಹೋದದ್ದು. ಘಟಾನುಘಟಿಗಳ ದಂಡೆ ಇದ್ದರೂ ದಕ್ಷಿಣ ಆಫ್ರಿಕಾದ ಕರಾರುವಕ್ಕಾದ ದಾಳಿ ಎದುರಿಸಲಾಗದೆ ಇದ್ದದ್ದು ಮಿಸ್ಟರ್ ಕೂಲ್ ಖ್ಯಾತಿಯ (ಅಪಖ್ಯಾತಿ ) ಧೋನಿಯ ನಾಯಕತ್ವದ ಬಗೆಗೆ ಹಲವು ಸಂಶಯಗಳನ್ನು ಬೆಟ್ಟು ಮಾಡಿದೆ. ಏನಾಯಿತು ಭಾರತ ಕ್ರಿಕೆಟ್ ಗೆ. ಸೋತದ್ದು ಬೇಸರವಿಲ್ಲ. ಸೋಲು ಗೆಲುವಿನ ಸೋಪಾನ ಅನ್ನೋಣ. ಆದರೆ ಸೋತ ರೀತಿ ಇದೆಯಲ್ಲ ಅದು ನಾಚಿಕೆ ತರುವಂತದ್ದು. ನಮ್ಮ ನಾಯಕ , ನಾಯಕತ್ವದ ಕೆಲವು ನಿರ್ಧಾರಗಳು ನಮ್ಮನ್ನು ಸೋಲಿನ ಅಂಚಿಗೆ ದೂಡಿದವು ಎಂದರೆ ತಪ್ಪಾಗಲಿಕ್ಕಿಲ್ಲ. ನಿಜ, ಇಲ್ಲಿ ಕುಳಿತು ಬರೆಯುವುದು ಸುಲಭ, ಆದರೆ ಅಲ್ಲಿ ಮೈದಾನದಲ್ಲಿ ಅಂಥಹ ಒತ್ತಡ ನಿರ್ವಹಿಸುವುದು ಎಷ್ಟು ಕಷ್ಟ ಎನ್ನುವುದು ಧೋನಿಗೆ ಮಾತ್ರ ಗೊತ್ತು. ''ಅದಕ್ಕೆ ಅಲ್ಲವೇ ಅವನನ್ನು ನಾಯಕನನ್ನಾಗಿ ಮಾಡಿದ್ದು''. ಅಷ್ಟಕ್ಕೂ ಧೋನಿ ತೆಗೆದುಕೊಂಡ ನಿರ್ಧಾರವಾದರೂ ಎಂಥದ್ದು. ಮಹತ್ವದ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಇಶಾಂತ ಶರ್ಮನಿಗೆ ಓವರ್ ನೀಡಿದ್ದು. ಅವನೋ, ''ಬಾಲಿಂಗ್ ಮಾಡುವುದು ರನ್ ಕೊಡುವುದಕ್ಕೆ ಎಂದು ತಿಳಿದಿರುವಂತಿದೆ''. ಒಂದಾದರೂ ಪಂದ್ಯದಲ್ಲಿ ಒಳ್ಳೆಯ ಪ್ರದರ್ಶನ ಅವನಿಂದ ಬಂದಿದ್ದರೆ ಮುಂದುವರಿಸಬಹುದಿತ್ತು. ಆದರೂ ಅವನು ತಂಡದಲ್ಲಿ ಮುಂದುವರಿದ. ಮಹತ್ವದ ಓವರ್ ಮಾಡಿದ ಹಾಗೂ ನಮ್ಮ ತಂಡದಲ್ಲೇ ಇದ್ದು ವೆಸ್ಟ್ ಇಂಡೀಸ್ ಪರವಾಗಿ ಆಡಿದ. ಆದರೂ 153 ರನ್ ಗೆಲ್ಲಲು ಸಾಕಾಗಿತ್ತು. ಕೆಟ್ಟ ಫಿಲ್ಡಿಂಗ್, ಕೆಟ್ಟ ಬೌಲಿಂಗ್, ಒಂದೇ ಎರಡೇ? ಅಂತೂ ಅಲ್ಲಿ ಸೋತೆವು.
ಆದರೂ ಭಾರತ ಕ್ರಿಕೆಟ್ ನ ವಿಶೇಷ ಶಕ್ತಿ ಎಂದರೆ ಸೋತಾಗ ಮೈ ಕೊಡವಿ ನಿಂತು ಎದ್ದು ಬಂದು ಎದುರಾಳಿಯ ಮೇಲೆ ಪ್ರಹಾರ ಮಾಡಿ ಗೆಲುವನ್ನು ತಮ್ಮದಾಗಿಸಿಕೊಳ್ಳುವುದು. ಇದನ್ನು ಎಷ್ಟೋ ಭಾರಿ ನೋಡಿದ್ದೇವೆ. ಇದಕ್ಕೆ ಬೆಂಬಲ ಕೊಡುವಂತೆ ಇಂಗ್ಲಂಡ್ ಪಂದ್ಯಕ್ಕೆ ಮುಂಚೆ ಧೋನಿ '' ನಾವು ಸಿಡಿದೆದ್ದು ಬರುತ್ತೇವೆ, ಗೆಲ್ಲುತ್ತೇವೆ, ಕಾದು ನೋಡಿ'' ಎಂಬಂಥ ಹೇಳಿಕೆ ನೀಡಿ ಎಲ್ಲ ಭಾರತೀಯರ ಮನದಲ್ಲಿ ಪುಳಕವನ್ನೇ ನೀಡಿದ. ಅದಕ್ಕೆ ತಕ್ಕಂತೆ ಇಂಗ್ಲಂಡ್ ಪಂದ್ಯದಲ್ಲಿ ಮೊದಲಿಗೆ ಅದ್ಭುತ ಬೌಲಿಂಗ್ ಪ್ರದರ್ಶನ ಬಂತು. ಅಂತೂ ಭಾರತ ಇಂದು ಗೆಲ್ಲುತ್ತದೆ ಎಂದೂ ಕಾಯುತ್ತ ಕುಳಿತದ್ದೇ ಬಂತು.
ಮಹತ್ವದ ಪಂದ್ಯದಲ್ಲಿ ಸ್ಟಾರ್ ಬೌಲರ್ ಓಜಾ ನನ್ನು ಆಡಿಸದೆ ರವಿಂದ್ರ ಜಡೇಜಾ ನನ್ನು ಆಡಿಸಿದರು. ಅದಕ್ಕೆ ಕೊಟ್ಟ ಕಾರಣ '' ಆತ ಒಬ್ಬ ಒಳ್ಳೆ ಬೌಲರ್ ಮಾತ್ರವಲ್ಲ, ಒಳ್ಳೆ batsman ಕೂಡಾ, ಒಳ್ಳೆ fielder ಕೂಡ''. ಹೇಳಿದ್ದಕ್ಕೆ ತಕ್ಕಂತೆ ಒಳ್ಳೆಯ ಬೌಲಿಂಗ್ ಏನೋ ಮಾಡಿದ. ಆದರೆ ಇಂಥಹ ಮಹತ್ವದ ಪಂದ್ಯದಲ್ಲಿ ಹರ್ಭಜನ್ wide ಜೊತೆ ಜುಗಲ್ ಬಂಧಿಯಾಡುತ್ತಿದ್ದ. ಮಹತ್ವದ ಪಂದ್ಯದಲ್ಲಿ ಆಟ ಹೊಸ ತಂತ್ರ ಕಲಿಯುತ್ತಿದ್ದ. ಚೆಂಡನ್ನು ಲೆಗ್ ಸೈಡ್ ನತ್ತ ತಿರುಗಿಸುತ್ತಾ ಬ್ಯಾಟ್ಸ್ ಮ್ಯಾನ್ ಗಳನ್ನೂ ಕಂಗೆಡಿಸುವ ಅವನ ಕಲೆ (ಅಲ್ಲ ಕೊಲೆಯೋ) ಭಾರತಕ್ಕೆ ಮುಳುವಾಯಿತು.
ಆದರೂ ಪಂದ್ಯ ಗೆಲ್ಲಬಹುದಿತ್ತು. ಆದರೆ ಯುವರಾಜ್ ನನ್ನು ಕಳಿಸುವ ಜಾಗಕ್ಕೆ ರವಿಂದ್ರ ಜಡೇಜಾ ನನ್ನು ಯಾಕೆ ಕಳಿಸಿದರೋ ಗೊತ್ತಿಲ್ಲ. ಅವನು ಮಾತ್ರ ಭವಿಷ್ಯದ ಅತ್ಯುತ್ತಮ Test Batsman ತಾನು ಎಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟ. ಎಂಥಹ ಎಸೆತಗಳಿಗೂ ತಲೆ ಬಾಗಿ ನಮಸ್ಕರಿಸಿದನೆ ಹೊರತು ತಲೆ ಎತ್ತಿ ಹೊಡಿಯಲಿಲ್ಲ. ಅಲ್ಲಿಗೆ ರನ್ ರೇಟ್ ಕೂಡ ಕೈ ತಪ್ಪಿತ್ತು. ನಂತರ ಸೋಲು ಕೈ ಹಿಡಿಯಿತು. ಕೊನೆಯಲ್ಲಿ ಮಾಡಿದ ಯಾವ ಪ್ರಯತ್ನಗಳೂ ಫಲ ನೀಡಲಿಲ್ಲ. ಭಾರತ ಹೊರಗೆ ಬಿತ್ತು . ಅಲ್ಲಾ ತಾವೇ ತಮ್ಮ ಘೋರಿ ತೋಡಿಕೊಂಡರೋ? ಅವರನ್ನೇ ಕೇಳಬೇಕು.
ಕ್ರಿಕೆಟ್ ಭಾರತಕ್ಕೆ ಕೇವಲ ಆಟವಲ್ಲ. ಬಿಲಿಯನ್ ಗಟ್ಟಲೆ ಜನರ ಭಾವನೆಗಳೊಂದಿಗೆ ಬೆರೆತ ಸೇತುವೆಯದು. ನಮ್ಮೆಲ್ಲ ಸಮಯ ಬದಿಗಿಟ್ಟು ಕ್ರಿಕೆಟ್ ಎಂಬ ಮೂರ್ಖ ಆಟ ಗೊತ್ತಿದ್ದರೂ ನೋಡುತ್ತೇವೆ. ಇಷ್ಟೊಂದು ಬೆಂಬಲ ಇರುವ ಆಟಗಾರರು ಮೈದಾನದಲ್ಲಿ ಪಕ್ಕ ವ್ರತ್ತಿಪರತೆಯನ್ನು ತೋರಿಸದೇ ಇದ್ದರೆ ನೋವಾಗುವುದು ಸಹಜ. ಅದಕ್ಕೆ ಸೋತ ಕೂಡಲೇ ಧೋನಿ ದೇಶದ ಕ್ಷಮೆ ಯಾಚಿಸಿದ್ದು.
ಇಲ್ಲಿ ಪ್ರಶ್ನೆಯೇಳುವುದು ನಾಯಕನ ನಿರ್ಧಾರದ ಬಗ್ಗೆ. ಇದೆ ಧೋನಿಯನ್ನು ಆಕಾಶದೆತ್ತರಕ್ಕೆ ಏರಿಸಿದವರೂ ನಾವೇ ಅಲ್ಲವೇ? ಈಗ ಪಾತಾಳಕ್ಕೆ ಇಳಿಸಿದ್ದೇವೆ. ಧೋನಿಯ ಎಷ್ಟೋ ದಿಟ್ಟ ನಿರ್ಧಾರಗಳು ಭಾರತಕ್ಕೆ ಜಯ ತಂದುಕೊಟ್ಟಿವೆ. ಆದರೆ ಎಲ್ಲ ಸಂಧರ್ಭದಲ್ಲಿ ಪ್ರಯೋಗ ಮಾಡುವುದು ಸರಿಯಲ್ಲ ಅಲ್ಲವೇ. ಅದು ಮಹತ್ವದ ಪಂದ್ಯದಲ್ಲಿ. ವೀರೇಂದ್ರ ಸೆಹ್ವಾಗ ಇಲ್ಲದೆ ಆಡುವುದು ಎಷ್ಟು ಕಷ್ಟ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಇಲ್ಲಿ ಯಾರನ್ನೂ ತೆಗಳಿ ಪ್ರಯೋಜನವಿಲ್ಲ.
ಸಂಪೂರ್ಣ ತಂಡವೇ ಇದಕ್ಕೆ ಹೊಣೆ. ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಈಗ ಬಯ್ದರೆ ಹೇಗೆ. ನಾವು ತಂಡವಾಗಿ ಆಡುವುದನ್ನೇ ಮರೆತ ಹಾಗಿದೆ. ದೇಶಕ್ಕಾಗಿ ಆಡುವಾಗ ವ್ಯಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಆಡಬೇಕಾದ ಅನಿವಾರ್ಯತೆಯಿದೆ. ಧೋನಿಯ ನಾಯಕತ್ವ ನಿಧಾನವಾಗಿ ನಶಿಸುತ್ತಿದೆಯೇ ಎಂಬ ಸಂಶಯ ಎಲ್ಲೆಡೆ ಕೇಳಿ ಬರುತ್ತಿದೆ. ಅವನ ನಿರ್ಧಾರಗಳು ಕಳೆದ ಕೆಲವು ಪಂದ್ಯಗಳಲ್ಲಿ ಭಾರತಕ್ಕೆ ಮುಳುವಾಗಿವೆ. ಅದೇನೇ ಇರಲಿ '' ರಾಯರ ಕುದುರೆ ಬರು ಬರುತ್ತಾ ಕತ್ತೆಯಾದ ಹಾಗೆ
ನಮ್ಮ ತಂಡವಾಗಬಾರದು''
ಮೊದಲು ಬಿಡುವಿಲ್ಲದ ವೇಳಾಪಟ್ಟಿಯನ್ನು ತೆಗೆದು ಹಾಕಿ ಆಟಗಾರರಿಗೆ ವಿಶ್ರಾಂತಿಯನ್ನು ನೀಡಿ ಅವರನ್ನು ಅಣಿಗೊಳಿಸಬೇಕಾಗಿದೆ. ಇಲ್ಲದಿದ್ದರೆ ವೆಸ್ಟ್ ಇಂಡೀಸ್ ಸರಣಿಯ ಫಲಿತಾಂಶವೂ ಇದಕ್ಕಿಂತ ವಿಭಿನ್ನವಾಗಿರದು.

Thursday, May 28, 2009

ಅವಳು...

- ಗುರು ಬಬ್ಬಿಗದ್ದೆ

 ಅವಳಿಂದಲೇ ಬಾಳು, ಅವಳಿಲ್ಲದೇ  ಗೋಳು

ನನ್ನೆದೆಯ ಬಾಂದಳದಿ ಹೊಳೆವ ತಾರೆ  ಅವಳು

ಚೈತ್ರಮಾಸದ ಕೋಗಿಲೆ, ಮಾಧುರ್ಯದವಳು

ಮುಂಗಾರಿನ ಮೋಡದ ಹಿಂದೆ ಸ್ವಾತಿಮುತ್ತು  ಅವಳು    

 

ನನ್ನ ಜೀವನ ಪುಟದಿ, ಅಕ್ಷರವಾದವಳು

ಸಕ್ಕರೆಯ ಮಾತಿನಲಿ, ಪ್ರೀತಿ ಕೊಟ್ಟವಳು

ನೋವಿರಲಿ, ನಲಿವಿರಲಿ, ಅನುಸರಿಸಿದವಳು

ತುಳಿದು ಸಪ್ತಪದಿ, ಸಂಗಾತಿಯಾದವಳು          

 

ಹೊತ್ತು ಹೆತ್ತವರನೆಲ್ಲ, ಬಿಟ್ಟೆಲ್ಲ ಬಂದಿಹಳು

ಚಿತ್ತದಿ ನನ್ನಯ ಮನವ, ಮುದದಿ ಗೆದ್ದಿಹಳು

ತಾಯಿ ಮಮತೆಯ ಎನಗೆ ಧಾರೆ ಎರೆದಿಹಳು

ಎನ್ನಯ ಸಾಧನೆಗೆ ಸ್ಪೂರ್ಥಿ ಚಿಲುಮೆಯು  ಅವಳು    

Monday, May 25, 2009

ಸ್ವೀಡನ್ನಿನ ಪತ್ರಿಕೆಯಲ್ಲೊಂದು ನನ್ನ ಬಗೆಗಿನ ಬರಹ....

ಇದೆ ತಿಂಗಳು ಸ್ವೀಡನ್ನಿನ ಪತ್ರಿಕೆಯೊಂದು ನನ್ನ ಇಂಟರ್ವ್ಯೂ ತೆಗೆದುಕೊಂಡು ಅದನ್ನು ಪ್ರಕಟಿಸಿದೆ. ನನ್ನ ಸಂಶೋಧನೆಯ ಜೊತೆಗೆ ಕ್ರಿಕೆಟ್ ಆಟದ ಬಗೆಗೂ ಅದರಲ್ಲಿ ವರ್ಣಿಸಿದ್ದಾರೆ. ಇದನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
 


ತಮ್ಮವ 

ಗುರು ಬಬ್ಬಿಗದ್ದೆ

Thursday, May 21, 2009

ವಾಸ್ತವತೆ.....

  -ಗುರು ಬಬ್ಬಿಗದ್ದೆ


ಹೊತ್ತು ಮೂಡುವ ಮೊದಲೇ ಹೊತ್ತಿ ಉರಿಯಿತು ಬೆಂಕಿ
ಹಚ್ಚ ಹಸುರಿನ ಹಸುಳೆ ಬಾಳದಾರಿಯ ಕನಸು
ಹಚ್ಚನೆಯ ಕೆಸರಿನಲಿ ನುಚ್ಚು ನೂರಾಯಿತು 

ನಿತ್ಯ ಬರುವ ಗಾಳಿ ಎತ್ತಿ ತಂದಿತು ಉರಿಯ
ನಗುವ ಮರೆಸುತ ಮನದಿ ವಿಷ ತುಂಬಿತು
ಜಾತಿ-ಜಾತಿಯ ನಡುವೆ ದ್ವೇಷಾಸೂಯೆಯ ಬೆಂಕಿ
ಜಾತ್ಯಾತೀತತೆ ನಮ್ಮ ಕನಸಾಯಿತು

ಕಣ್ಣ ಬೆಳಗುವ ಬೆಳಕು ಕಣ್ಣನ್ನೇ ಕೊರೆದಿತ್ತು
ಹಣ್ಣ ಕೊಯ್ಯುವ ಕತ್ತಿ ಕತ್ತು ಕೊಯ್ದಿತ್ತು
ನಾ ಮೇಲು ನೀ ಮೇಲು ಎಂಬ ಒಣ ಭಾವನೆಯು
ಬಟ್ಟ ಬಯಲಲಿ ಬಿಟ್ಟ ಕರುವಾಯಿತು

ಎಚ್ಚೆತ್ತ ಎಚ್ಚರಿಕೆ ಅಚ್ಚಳಿಯದೇ ಉಳಿದು
ಬಿತ್ತುತ್ತ ಪ್ರೇಮವನು ದ್ವೇಷವನು ತೊರೆದು‌
ಒಟ್ಟಿನಲಿ ಒಂದಾಗಿ ಬೆಚ್ಚನೆ ಹೊದಿಕೆಯ ಹೊದ್ದು
ಹೊತ್ತು ಇಳಿಯುವ ಮೊದಲೇ ಬೆಂಕಿ ಆರಿಸಿ ಜಗದಿ 

ಹತ್ತಾರು ಹಸುಳೆಗಳ ಭವ್ಯ ದೇಶದ ಕನಸು
ಹೊತ್ತಿ ಬೆಳಗಲಿ ಮನದಿ ನಮಗೂ ವಯಸಾಯಿತು

Tuesday, May 12, 2009

ನನ್ನ ಅಂತರಂಗ....

- ಗುರು ಬಬ್ಬಿಗದ್ದೆ

ಜೀವನ ಎಂಬುದು ಒಂದು ನಾಟಕ ರಂಗ, ಅವರವರ ಪಾತ್ರವನ್ನು ಅವರವರು ನಿರ್ವಹಿಸುತ್ತಾ ಹೋಗಬೇಕು ಎನ್ನುವುದೇನೋ ಸರಿ. ಆದರೆ ಬಡವನ ಪಾತ್ರ ಯಾವಾಗಲೂ ಬಡವನ ಪಾತ್ರವೇ ಆಗಿರುತ್ತದೆ. ಸಿರಿವಂತಿಕೆಯ ದರ್ಪದಲ್ಲಿ ಬಡಜನರ ಮೇಲೆ ಅದೆಷ್ಟೋ ದೌರ್ಜನ್ಯಗಳಾಗುತ್ತಿವೆ. ಮೊನ್ನೆ ಮೊನ್ನೆಯಷ್ಟೆ ಮೇಲ್ಜಾತಿಯ ಹುಡುಗನೊಬ್ಬ ಕೆಳಜಾತಿಯ ಹುಡುಗಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ಅವಳು ಪ್ರತಿಭಟಿಸಿದಾಗ ಆತ ಅವಳನ್ನೇ ಸಜೀವವಾಗಿ ಸುಟ್ಟು ಹಾಕಿದ ಘಟನೆ ಕಣ್ಣಂಚಿನಲ್ಲಿ ಜೀವಂತವಾಗಿದೆ. ಇದಕ್ಕೆಲ್ಲ ಕೊನೆ ಎಂದು? ಧರಿಸಿಕೊಳ್ಳಲೂ ವಸ್ತ್ರವಿಲ್ಲದೆ ಒದ್ದಾಡುವ ಕಿತ್ತು ತಿನ್ನುವ ಬಡತನ ಒಂದೆಡೆಯಾದರೆ, ಮೈ ಮೇಲಿನ ಬಟ್ಟೆಯೇ ಭಾರ ಎನ್ನುವಂತೆ ಅದನ್ನು ಕಳಚಿ ಹೊರಟಿರುವ ಶೋಕಿ ಜನಾಂಗ ಇನ್ನೊಂದೆಡೆ. ಎಲ್ಲಿಯ ಸಮಾನತೆ, ಎಲ್ಲಿಯ ಸ್ವಾತಂತ್ರ್ಯ. ಈ ಕವನದಲ್ಲಿ ನನ್ನ ಅಂತರಂಗದ ಸುಪ್ತ ಭಾವನೆಗಳನ್ನು ಅನಾವರಣಗೊಳಿಸಿದ್ದೇನೆ. ತಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳಿಗೆ ಸದಾ ಸ್ವಾಗತ. 

ಭೋರ್ಗರೆದಿದೆ ನೀರ್ಗರೆದಿದೆ ಶೃಂಗಾರದ ಧಾತ್ರಿ

ಮೈ ಮನ ನವಿರೇಳಿಸುತಲಿ ಸಾಗಿದೆ ಹೊಸ ಮೈತ್ರಿ ೧


ಮಿಡಿಯುತ್ತಲಿ ಮಿಡಿಸುತ್ತಲಿ ನವ್ಯದ ನವ್ಯತೆಯನ್ನು
ಹುಟ್ಟುತ್ತಲಿ ಸಾಯುತ್ತಲಿ ಸಾಗಿಸಿ ಜೀವನವನ್ನು     ೨


ಸ್ವಾತಂತ್ರ್ಯದ ಹೆಸರಲಿ ಸ್ವೇಚ್ಚಾಚಾರದ ಬದುಕು
‌ಉದ್ಧಾರದ ನೆಪದಲಿ ಸೃಷ್ಟಿಸುತಿವೆ ಒಡಕು          ೩


ಆನಂದದ ಆಕ್ರಂದನ ಹೆಚ್ಚಿಸುತಿವೆ ಬಡತನ
ಸಿರಿವಂತಿಕೆ ಸಾಮ್ರಾಜ್ಯದಲಿ ಕರಗುತಿದೆ ತನು-ಮನ ೪


ಅನ್ನ ವಸ್ತ್ರದ ಬರದಿ ನಿರ್ಗತಿಕರ ಪಾಡೇನು
ಶೋಕಿ ಯುವತಿಯರಿಗೆ ಇದ್ದರೂ ವಸ್ತ್ರ ತೊಡಲು ಬರವೇನು  ೫


ಹಗರಣಗಳ ಸರಮಾಲೆಯಲಿ ಕರಗುತಿದೆ ಹಣವು
ವಯ್ಯಾರದ ಶ್ರಂಗಾರಕೆ ಮುಡುಪಾಗಿದೆ ಸಿರಿತನವು        ೬


ಹೇಳಲೂ ಆಗದೆ ಬಿಡಲೂ ಆಗದೆ ಸಾಗಿದೆ ಜೀವನ ನಾಟಕ ರಂಗ
‌ಇದನೆಲ್ಲವ ನೋಡಿದೊಡೆ ವಿಷಾದಿಪುದು ನನ್ನ ಅಂತರಂಗ                ೭

Monday, May 4, 2009

ಹೃದಯ ಕದ್ದ ಕಳ್ಳಿ...


 -ಗುರು ಬಬ್ಬಿಗದ್ದೆ 

ನನ್ನ ಒಲವ ಬಳ್ಳಿ ನೀ ಹೃದಯ ಕದ್ದ ಕಳ್ಳಿ

ಪ್ರೇಮಪಾಠದಲ್ಲಿ ನನ್ನನ್ನೇ ಗೆದ್ದ ಮಳ್ಳಿ 

ಬಾಳಿನಲ್ಲಿ ಬಂದೆ ಯಾಕೆ ನೀನು ಎನ್ನ ಬಳಿಗೆ

ನಿನ್ನ ಪ್ರೀತಿ ರಾಗದಲ್ಲಿ ಹಾಕಿ ಹೋದೆ ಬೆಸುಗೆ

ಅರಿಯದಾದೆ ನನ್ನೆ ನಾನು ಎಲ್ಲಿ ಹೋದೆ ಸುಂದರಿ

ನಿನ್ನ ಬಿಟ್ಟು ಬದುಕಲಾರೆ ಬಳಿಗೆ ಬಾರೆ ಚಕೋರಿ ... 1


ಮಾತಿನಲ್ಲೆ ಮೌನ ನಿನ್ನ ಮೌನದಲ್ಲೇ ಮಾತಿದೆ 

ನಿನ್ನ ರಸಿಕ ಕಂಗಳು ಮೈಮನದ ಗೀತೆ ಹಾಡಿದೆ

ವಿರಹಿಯಾದೆ ಇನ್ನು ನಾನು ನಿನ್ನ ನೆನಪಿನಾಳದಿ

ಮರುಗದಂತೆ ಮಾಡು ಎನ್ನ ಹರಿಸಿ ಪ್ರೇಮದಾ ನದಿ ... 2


ಮಾಮರದ ಕೋಗಿಲೆ ನೀ ಅರಳಿದಂತೆ ತಾವರೆ

ಚೈತ್ರದ ಕುಸುಮಾಂಜಲಿ ನೀನೇ ಎನಗೆ ಆಸರೆ

ಕಳೆಯದಾದೆ ಕ್ಷಣಗಳನ್ನು ಬಿಟ್ಟು ನಿನ್ನ ಅನುದಿನ

ಸುಳಿಯುವಂತೆ ಮಾಡು ಮನವ ಸದಾ  ನಿನ್ನ ಮೈಮನ ... 3


ಇತ್ತ ನೋಡು ಅತ್ತ ನೋಡು ಎತ್ತ ನೋಡು ನೀನಿರೆ

ನನ್ನ ಚಿತ್ತವೆಲ್ಲ ನಿನ್ನ ಮಡಿಲಿನಲ್ಲೆ ಮಲಗಿರೆ

ಸಹಿಸದಾದೆ ವೇದನೆ ಓಡಿ ಬಾರೆ ಸುಮ್ಮನೆ

ಹೃದಯ ಕದ್ದ ಕಳ್ಳಿ ನೀನು ನನ್ನೇ ನಿನಗೆ ಅರ್ಪಣೆ ...  4

Monday, April 27, 2009

ನಾ ನಡೆವ ಹಾದಿಯಲಿ.....


ಗುರು ಬಬ್ಬಿಗದ್ದೆ

ನಾ ನಡೆವ ಹಾದಿಯಲಿ 

ಕಲ್ಲು ಮುಳ್ಳುಗಳಿರದಿರಲಿ

ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ

ಸಂತೋಷದಿ ಹೂವು ಬಿರಿಯುತಿರಲಿ  


ನಾ ನಡೆವ ಹಾದಿಯಲಿ

ತೆಂಗು ಕಂಗುಗಳೆಲ್ಲ ಕಂಗೊಳಿಸುತಿರಲಿ

ಗಿಡವೆಲ್ಲ ಮರವಾಗಿ ಹಸುರಾಗಲಿ

ಸಜ್ಜನರ ಪಾಲಿಗದು ಉಸಿರಾಗಲಿ 


ನಾ ನಡೆವ ಹಾದಿಯಲಿ ಪ್ರೀತಿ ಪಸರಿಸಲಿ

ವಾತ್ಸಲ್ಯದ ಮೂರ್ತಿ ಎಚ್ಚೆತ್ತು ಬರಲಿ

ಭ್ರಾತೃತ್ವದ ಕಂಪು ಇಂಪಾಗಿ ಹರಡಲಿ 


ನಾ ನಡೆವ ಹಾದಿಯಲಿ ಬಡತನವು ಇರದಿರಲಿ

ಸಿರಿತನವು ತನ್ನ ಮಿತಿ ಮೀರದಿರಲಿ

ಸಮಾನತೆಯ ಬದುಕು ಮೂಡಿ ಬರಲಿ 


ನಾ ನಡೆವ ಹಾದಿಯಲಿ ಹಿಂಸೆಗಳು ಅಳಿಯಲಿ

ದ್ವೇಷಕ್ಕೆ ಶಾಂತಿಯು ಬೆಳಕಾಗಲಿ

ಮನಸುಗಳ ಬೆಸೆಯುವ ಸರಪಳಿಯಾಗಲಿ 


ನಾ ನಡೆವ ಹಾದಿಯಲಿ

ಸಾಹಿತ್ಯದ ಧ್ವನಿಯು ಕೇಳಿ ಬರಲಿ

ಕವಿ ಪುಂಗವರ ಕವನ ಹಾಡಾಗಲಿ

ನನ್ನ ಉನ್ನತಿಗೆ ಮಾರ್ಗದರ್ಶನವಾಗಲಿ 


ನಾ ನಡೆವ ಹಾದಿಯಲಿ ಎಲ್ಲರೂ ಬರಲಿ

ಅದು ಮನುಜ ಪಥವಾಗಲಿ

ವಿಶ್ವ ಮಾನವ ಪಥಕೆ ನುಡಿಯಾಗಲಿ 

Monday, April 20, 2009

ಸೇಲನ್ ನಲ್ಲಿ ಸ್ವೀಡಿಶ್ ದಂಪತಿಗಳ ಜೊತೆಗೆ ಕಳೆದ ಕೊನೆಯ ದಿನ...

ಪ್ರವಾಸ ಕಥನ ..ಭಾಗ 4  

ಹಿಂದಿನ ಸಂಚಿಕೆಯಲ್ಲಿ ( http://gurumurthyhegde.blogspot.com/2009/04/3.html ) ಸ್ಕಿಯಿಂಗ್ ಜೊತೆ ಅನುಭವಿಸಿದ ಪ್ರಕ್ರತಿಯ ರೋಚಕ ಅನುಭವಗಳನ್ನು ತಿಳಿಸಿದ್ದೆ. ಇಂದು ಇಲ್ಲಿ ನಾವು ಕಳೆದ ಕೊನೆಯ ದಿನದ ನೆನಪುಗಳ ಬುತ್ತಿ ಇಡುತ್ತಿದ್ದೇನೆ.
ಇಂದು ಸ್ಕಿಯಿಂಗ್ ಮಾಡಲು ಕೊನೆಯ ದಿನವಾಗಿತ್ತು, ಬೆಳಿಗ್ಗೆ ಎದ್ದಾಗ ೧೫ ಡಿಗ್ರಿ ಯಷ್ಟು ಉಷ್ನತೆಯಿತ್ತು. ಸೂರ್ಯನ ಸಂಪೂರ್ಣ ಪ್ರಕಾಶ ಎಲ್ಲ ಹಿಮದ ಮೇಲೆ ಬಿದ್ದು ಹಿಮ ನಿಧಾನವಾಗಿ ಕರಗಲಾರಂಬಿಸಿತ್ತು. ಆದರೆ ಅದರಲೂ ಒಂದು ಸೌಂದರ್ಯತೆಯಿದೆ, 

ಕರಗುವ ಪರಿ, ಬೀಳುವ ಪರಿ, ಎಲ್ಲವೂ ಅದ್ಭುತ, ರಮ್ಯ ಮನೋಹರ.ಇಂದು ರಾಲ್ಫ್ ಮತ್ತು ಅವರ ಹೆಂಡತಿ ಲೀನ ಬೇರೆ ದಿಕ್ಕಿನಲ್ಲಿ ಸ್ಕಿಯಿಂಗ್ ಮಾಡಲು ಹೋದರು. ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಇನ್ನೊದು ದಿಕ್ಕಿಗೆ ಹೋದೆವು. ಇಬ್ಬರೇ ಇದ್ದಿದ್ದರಿಂದ ಬಿದ್ದರೂ ನಗಲು ನಾವಿಬ್ಬರೇ ಇದ್ದೆವು. ಹಾಗಾಗಿ ಸ್ವಲ್ಪ ಆರಾಮ ಎನಿಸಿತ್ತು. ಆದರೆ ಇಂದು ತುಂಬಾ ವೇಗದಲ್ಲಿ ಹೋಗುತ್ತಾ ಹೋಗುತ್ತಾ ಅನೇಕ ಜಾಗಗಳ ದರ್ಶನವಾಯಿತು. ಮೊದಲಿಗೆ ನಮ್ಮ ಪ್ರಯಾಣದ ಮದ್ಯದಲ್ಲಿ ನಾಯಿಯನ್ನು ಕಟ್ಟಿಕೊಂಡು ತಾನು ಹಿಂದೆ 


ಹೋಗುವ ಮನುಷ್ಯನ ದರ್ಶನವಾಯಿತು. ಹೀಗೆ ಎಷ್ಟೋ ಜನ ಇಲ್ಲಿ ಹೀಗೆ ಮಾಡುತ್ತಾರೆ.ಆ ಬಡಪಾಯಿ ನಾಯಿಗಳ ಸ್ಥಿತಿ ದೇವರಿಗೆ ಪ್ರೀತಿ. ಅವುಗಳನ್ನು ಹೊಡೆಯುತ್ತಾ ಇವರು ಹಿಮದಲ್ಲಿ ವೇಗವಾಗಿ ಹೋಗುತ್ತಾರೆ. ಆ ನಾಯಿಗಳಿಗೋ ವಿಪರೀತ ಚಳಿಯಾಗಿ ಮುದುಡಿಕೊಂಡಿರುತ್ತವೆ. ಯಜಮಾನದ ಹೊಡೆತದ ರುಚಿ ತಾಳಲಾರದೆ ಓಡುತ್ತಾ ಹೋಗುವ ದ್ರಶ್ಯ ಮನ ಕಲಕಿತು. ಹೀಗೆಯೇ ಸ್ವಲ್ಪ ಮುಂದೆ ಹೋದಕೂಡಲೇ ಒಂದು 250 ವರ್ಷಕ್ಕೂ ಮಿಗಿಲಾದ ಚಹಾ 

ಅಂಗಡಿ ಸಿಕ್ಕಿತು. ಅತ್ಯಂತ ಪುಟ್ಟ ಚಹಾ ಅಂಗಡಿ, ಆದರೆ ಅದು ಅಷ್ಟೊಂದು ಹಳೆಯದು ಎಂದು ಕೇಳಿದಾಗ ಒಡನೆಯೇ ಆಶ್ಚರ್ಯವಾಯಿತು . ನಮ್ಮಲ್ಲಿ ಕಟ್ಟಿದ ಮನೆ 50 ವರ್ಷ ಬರಲು ಕಷ್ಟ. ಅಂಥದರಲ್ಲಿ 250 ವರ್ಷಗಳಷ್ಟು ಹಳೆಯದಾದ ಚಹಾ ಅಂಗಡಿ ಅದೇ ರೂಪದಲ್ಲಿ ಇದೆ ಎಂದರೆ ಸೋಜಿಗವೇ ಸರಿ. ಪ್ರಕ್ರತಿಯ  ವಿಕೋಪಕ್ಕೆ ಎದುರಾಗಿ ಸೆಟೆದು ನಿಂತು ತನ್ನ ಭವಿತವ್ಯದ ಮೊನಚನ್ನು ತೋರಿಸುತ್ತಿರುವ ಆ ಅಂಗಡಿಗೆ ಒಂದು ಸಲಾಮು ಹೊಡೆದು ಮುಂದೆ ಹೊರಟೆವು. ಪ್ರಕ್ರತಿಯ ವಿಚಿತ್ರ ನೋಡಿ. ಎಲ್ಲ 


ಗಾಳಿ, ಬೆಳಕು ಶುಭ್ರ ವಾಗಿದ್ದರೆ ಈ ರೀತಿಯ ಎಲೆಗಳು ಗಿಡದಲ್ಲಿ ಬರುತ್ತವಂತೆ. ಇದನ್ನು ಎಲ್ಲ ಕಡೆ ನೋಡಲು ಸಿಗುವುದಿಲ್ಲ. ಅಷ್ಟೊಂದು ಶುಭ್ರತೆ ಪ್ರಕ್ರತಿಯಲ್ಲಿದ್ದರೆ ಇವು ಹುಟ್ಟುತ್ತವಂತೆ. ಇಲ್ಲಿನ ಅನೇಕ ಗಿಡಗಳಲ್ಲಿ ಇದರ ದರ್ಶನವಾಯಿತು.  ಸ್ವಲ್ಪ ದೂರ ನಡೆಯುವಷ್ಟರಲ್ಲಿ ಹಳೆಯ ಕಾಲದ ಸ್ಕಿಯಿಂಗ್ ಸೆಟ್ ಗಳನ್ನಿಟ್ಟ ಒಂದು ಅಂಗಡಿ ನೋಡಿದೆವು. ಹಿಂದಿನ ಕಾಲದಲ್ಲಿನ
 

ಸ್ಕಿಯಿಂಗ್ ಸೆಟ್ ಹೇಗಿತ್ತು ಎನ್ನುವುದರ ಪರಿಚಯವಾಯಿತು. ಇಂದು ನಾವಿಬ್ಬರೂ ಸೇರಿ ಸುಮಾರು ೧೫ ಕಿ ಮಿ ಗಳಷ್ಟು ಸ್ಕಿಯಿಂಗ್ ಮಾಡಿದೆವು. ನಯನ ಮನೋಹರ ಹಿಮದ ರಾಶಿಗಳ ನಡುವೆ ನಮ್ಮನ್ನೇ ನಾವು ಕಳೆದು ಕೊಂಡಷ್ಟು ಭಾಸವಾಯಿತು. ಅಲ್ಲಿನ ಒಂದೊಂದು ಪರ್ವತಗಳೂ ನವ ವಧುವಿನಂತೆ ಕಂಗೊಳಿಸುತ್ತಾ 

ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದ್ದವು. ಹೀಗೆ ಸಂಪೂರ್ಣ ದಿನ ಸ್ಕಿಯಿಂಗ್ ಮಾಡಿ ರಾತ್ರಿ ರಾಲ್ಫ್ ಮತ್ತು ಲೀನ ಜೊತೆ ಊಟ ಮಾಡಿ ಕೊನೆಯ ದಿನದ ನೆನಪಿನಲ್ಲಿ ನಿದ್ದೆ ಹೋದೆವು. 
ಮರುದಿನ ಬೆಳಿಗ್ಗೆ ಬೇಗನೆ ಎದ್ದು ಸ್ಕಿಯಿಂಗ್ ಸೆಟ್ ಎಲ್ಲ ತಿರುಗಿ ಕೊಟ್ಟು ಮನೆಗೆ ಬಂದು ಸಾಮಾನು ಪ್ಯಾಕ್ ಮಾಡಿ ರಾಲ್ಫ್ ಮತ್ತು ಲೀನಾಗ ಕ್ರತಜ್ನತೆಯನ್ನು ಅರ್ಪಿಸಿದಾಗ ಏನೋ ಒಂದು ಅಗಲಿಕೆಯ ನೋವು ಮನದಂಚಿನಲ್ಲಿ ಸುಳಿದು ಹೋಯಿತು. ಮಾನವೀಯತೆಗೆ ಜಾತಿಯ ಹಂಗಿಲ್ಲ,  ಎನ್ನುವುದು ಅವರ ಜೊತೆ ದಿನ ಕಳೆದಾಗ ತಿಳಿಯಿತು. ತಾವು ಸ್ವೀಡಿಶ್ ಆಗಿದ್ದರೂ ನಮ್ಮನ್ನು ತಮ್ಮ ಮಕ್ಕಳಂತೆ ನೋಡಿಕೊಂಡ ಅವರನ್ನು ಈ ಜನ್ಮದಲ್ಲಿ ಮರೆಯಲು ಸಾದ್ಯವಿಲ್ಲ. ಇಂಥಹ ಎಷ್ಟೋ ಮಧುರ ಸಂಭಂದಗಳೊಡನೆ ಬಸ್ ಹತ್ತಿದಾಗ ಕಣ್ಣಲ್ಲಿ ಏನೋ ಒಂದು ನೋವಿತ್ತು. ರಾಲ್ಫ್ ನಮ್ಮನ್ನು ಕಳಿಸಲು ಬಸ್ ಸ್ಟೇಷನ್ ತನಕ ಬಂದಿದ್ದರು. ಅವರಿಗೂ ಏನೋ ಬೇಸರ, ನಮಗೂ ಏನೋ ತಳಮಳ. ಬರುವಾಗ ಇದ್ದ ಉತ್ಸಾಹ ಆಗ ಮಾಯವಾಗಿತ್ತು. ಆದರೆ ಸಿಹಿನೆನಪುಗಳು, ಮಧುರ ಅನುಭವಗಳು ಮನದ ಮೂಲೆಯಲ್ಲಿ ಕುಳಿತು ತನ್ನಾಟ ಆರಂಬಿಸಿತ್ತು. ರಾತ್ರಿ Gothenburg ಬಂದಿಳಿದಾಗ 7 ಗಂಟೆಯಾಗಿತ್ತು. ಭಾರವಾದ ಮನಸ್ಸು, ಭಾರ ಹೆಜ್ಜೆಗಳಿಂದ ಮನೆಯ ಕಡೆ ಹೊರಟೆವು. 
 
ದರೆ ಈ ಪ್ರವಾಸ ಒಂದು ಹೊಸ ಅನುಭವ ಕೊಟ್ಟಿತು. ಸ್ಕಿಯಿಂಗ್ ಎನೆಂಬುದನ್ನೇ ಗೊತ್ತಿಲ್ಲದ ನಮಗೆ ಸ್ವೀಡಿಶ್ ದಂಪತಿಗಳು ಹೊಸ ನೆನಪುಗಳ ಬುತ್ತಿಯನ್ನೇ ನೀಡಿದ್ದರು. ಆ ಹಿಮಗಳ ರಾಶಿ, ಪರ್ವತದ ಸೌಂದರ್ಯ, ಒಂದೇ ಎರಡೇ, ಎಲ್ಲವೂ ಈಗ ನೆನಪು ಮಾತ್ರ, ನೆನಪು ಮಾತ್ರ, ನೆನಪು ಮಾತ್ರ.....  

ಕೊನೆಯ ಒಂದು ತಿಂಗಳಿಂದ ನನ್ನೊಡನೆ ಪ್ರವಾಸ ಕಥನ ಓದಿದ, ಅಭಿಪ್ರಾಯ ವ್ಯಕ್ತಪಡಿಸಿದ ತಮಗೆಲ್ಲರಿಗೂ ಧನ್ಯವಾದಗಳು. ಮತ್ತೆ ಬರುತ್ತೇನೆ....

Tuesday, April 14, 2009

ಪ್ರಕ್ರತಿಯ ಅಧ್ಭುತ ಸಿರಿಯಲ್ಲಿ ಸೇಲನ್.. ಭಾಗ 3

ಪ್ರವಾಸ ಕಥನ .. ಭಾಗ 3

ಹಿಂದಿನ ಸಂಚಿಕೆಯಲ್ಲಿhttp://gurumurthyhegde.blogspot.com/2009/04/2.html ) ಸೇಲನ್ ಪ್ರದೇಶದಲ್ಲಿ ನಮ್ಮ ಸ್ಕಿಯಿಂಗ್ ಮೊದಲ ರೋಚಕ ಅನುಭವದ ಬಗೆಗೆ ತಿಳಿಸಿದ್ದೆ ಹಾಗೂ ಅಲ್ಲಿನ ಹಿಮದ ಪ್ರಭಾವದ ಬಗ್ಗೆ ಹೇಳಿದ್ದೆ. ವಾರ ಅಲ್ಲಿನ ಪ್ರಕ್ರತಿಯ ಸೌಂದರ್ಯವನ್ನು ಹಾಗೂ ಡೌನ್ ಹಿಲ್ ಸ್ಕಿಯಿಂಗ್ ಬಗೆಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.

ಮಧ್ಯಾನ್ಹದ ಸೊಗಸಾದ ಊಟದ ನಂತರ (ನನ್ನ ಹೆಂಡತಿ ಭಾರತೀಯ ಅಡಿಗೆಯನ್ನು ಸ್ವೀಡಿಶ್ ಗೂ ಸೇರಿಸಿ ಮಾಡಿದ್ದಳು) ಎರಡನೇ ಹಂತದ ಸ್ಕಿಯಿಂಗ್ ಮಾಡುವ ಮೊದಲು ರಾಲ್ಫ್ ಸೇಲನ್ ಪ್ರದೇಶ ವೀಕ್ಷಣೆಗೆಂದು ಕರೆದುಕೊಂಡು ಹೋದರು. ಅಲ್ಲಿಂದ ಕಿ ಮಿ ದೂರದಲ್ಲಿರುವ ಜಾಗವೇ ತಂಡಾದಾಲನ. ಇಲ್ಲಿಯೇ ಬಹಳಷ್ಟು ಡೌನ್ ಹಿಲ್ ಸ್ಕಿಯಿಂಗ್ ರೋಡ್

ಇರುವುದು. ಇದೊಂದು ರಮಣೀಯ ಸ್ಥಳ. ಬೇಸಿಗೆಯಲ್ಲಿ ದೊಡ್ಡ ಪರ್ವತ, ಆದರೆ ಚಳಿಗಾಲದಲ್ಲಿ ಇದೆ ಡೌನ್ ಹಿಲ್ ಸ್ಕಿಯಿಂಗ್ ಜಾಗವಾಗಿ ಮಾರ್ಪಡುತ್ತದೆ. ಮೇಲಿನಿಂದ ಸ್ಕಿ ಕಟ್ಟಿಕೊಂಡು ರಭಸದಲ್ಲಿ ಕೆಳಗೆ ಬರುತ್ತಾರೆ. ಮೇಲಿನಿಂದ ಕೆಳಗೆ ಬರುವ ವೇಗ ಘಂಟೆಗೆ ೨೦೦ ಕಿ ಮಿ ಗಳು ಎಂದರೆ ಅದರ ರಭಸ ಊಹಿಸಿ. ಇಲ್ಲಿ ಬಿದ್ದರೆ ಮಾತ್ರ ತುಂಬಾ ಪೆಟ್ಟಾಗುತ್ತದೆ. ಕೈ ಕಾಲು ''ವೈದ್ಯೋ ನಾರಾಯಣೋ ಹರಿ'' ಎನ್ನುವುದು ಗ್ಯಾರಂಟೀ . ಚಿಕ್ಕ ಚಿಕ್ಕ ಮಕ್ಕಳು ಮೇಲಿನಿಂದ ಬರುವಾಗ ಹೊಟ್ಟೆ ಉರಿಯುತ್ತದೆ, ನಮಗೆ

ಮಾಡಲು ಆಗುವುದಿಲ್ಲವಲ್ಲ ಎಂದು. ಆದರೆ ಅದನ್ನು ಒಮ್ಮೆ ಮಾಡೋಣ ಎಂದು ಮಾತ್ರ ಎನ್ನಿಸಲಿಲ್ಲ. ಮುಂದಿನ ವರ್ಷ ಹೋದರೆ ಮಾಡಲು ಪ್ರಯತ್ನಿಸುತ್ತೇವೆ. ವರ್ಷಕ್ಕೆ ಇಷ್ಟು ಸಾಕು ಎನಿಸಿತು. ಜಗತ್ತಿನ ನಾನಾ ಕಡೆಯಿಂದ ಇದನ್ನು ಆಡಲು ಜನ ಬರುತ್ತಾರೆ. ಸಂಪೂರ್ಣ ಬೆಟ್ಟ ಹಿಮಾಚ್ಚಾದಿತ ವಾಗಿರುತ್ತದೆ. ಅದನ್ನು ನೋಡಿದಷ್ಟೂ ನೋಡಬೇಕೆನಿಸುತ್ತದೆ. ಮದುವೆಯ ಮಂಟಪದಲ್ಲಿ ವಧು ವರರು ಪರಸ್ಪರ ಮುಖ ನೋಡಿಕೊಂಡಂತೆ ಅದೆಷ್ಟೋ ಹೊತ್ತು ಆ ಬೆಟ್ಟವನ್ನೇ ನೋಡುತ್ತಾ ನಿಂತೆ. ''ಮರೆತೆನೆಂದರೂ ಮರೆಯಲಿ ಹ್ಯಾಂಗ್'' ಎನಿಸಿತು ಮನದಲ್ಲಿ.

ಇಲ್ಲಿ ಹಿಮದಲ್ಲಿ ಓಡಿಸಲೆಂದೇ ವಿಶೇಷ ವಾಹನಗಳನ್ನುಮಾಡಿರುತ್ತಾರೆ. ನಮ್ಮಲ್ಲಿನ ಲದಾಕ್ ನಲ್ಲಿ ಯುದ್ಧದ ಟ್ಯಾಂಕರ್ ಗಳಂತೆ

ಗೋಚರಿಸುತ್ತವೆ. ಡೌನ್ ಹಿಲ್ ಮಾಡುವಾಗ ನಿಮಗೊಂದು ಸಂಶಯ ಬರಬಹುದು. ಅಷ್ಟೊಂದು ಮೊನಚಾದ ಬೆಟ್ಟವನ್ನು ಇಳಿದು ಬರುವುದೇನೋ ಸರಿ, ಆದರೆ ಹತ್ತುವುದು ಹೇಗೆ? ಅಲ್ಲವೇ. ಅದಕ್ಕೆಂದೇ ಇಲ್ಲಿನ ಪ್ರೈವೇಟ್ ಕಂಪನಿಗಳು ಲಿಫ್ಟ್ ಮಾಡಿದ್ದಾರೆ. ಕೆಳಗೆ ಇಳಿದು ಬಂದು ನಂತರ ಲಿಫ್ಟ್ ಮೇಲೆ ಕುಳಿತರೆ ಆಯಿತು. ಪುನಃ ಮೇಲೆ ಹೋಗಿ ಮತ್ತೆ ಇಳಿಯುವುದು. ಬೆಳಿಗಿನಿಂದ ಮಧ್ಯಾನ್ಹ 5 ಘಂಟೆಯವರೆಗೆ ಲಿಫ್ಟ್ಗಳು ಕಾರ್ಯ ನಿರ್ವಹಿಸುತ್ತವೆ. ಆದರೆ ಅದರ ನಂತರ ಎಷ್ಟೋ ಜನರು ಕುಡಿದು ಮೋಜನ್ನು ಮಾಡುತ್ತಾ ಮೇಲೆ ಹತ್ತಲು ಪ್ರಯತ್ನಿಸುತ್ತಾರಂತೆ. ಕುಡಿತದ ಅಮಲು ಅವರನ್ನು ಮೇಲೆ ಕಳಿಸುತ್ತದೆಯೋ ಗೊತ್ತಿಲ್ಲ, ಅವರಿಗೆ ಮೇಲೆ ಹೋದಂತೆ ಅನಿಸಬಹುದು ನಶೆಯ ಮತ್ತಿನಲ್ಲಿ.


ಅದಾಗಲೇ ಘಂಟೆಯಾದ್ದರಿಂದ ಹೊರಡಲು ಅಣಿಯಾದೆವು. ಆದರೆ ನಮಗೊಂದು ಆಶ್ಚರ್ಯ ಕಾದಿತ್ತು. ಸೂರ್ಯ ಮೋಡಗಳ ಮರೆಯಿಂದು ಸರಿದು ನಗುತ ನಿಂತಿದ್ದ. ಅವನ ಕಿರಣಗಳು ಪರ್ವತದ ತುದಿಯನ್ನು ಚುಂಬಿಸುತ್ತಿದ್ದವು. ಮೊದಲ ಚುಂಬನಕ್ಕೆ ನಸು ನಾಚಿ ನಗುವ ಕೋಮಲಾಂಗಿಯ ಕೆನ್ನೆಯಂತೆ ಬೆಟ್ಟ ನೋಡುಗರನ್ನು ಆಕರ್ಷಿಸತೊಡಗಿತು. ಕಿರಣಗಳಿಗೆ ಹಿಮ

ಹೊಳೆಯತೊಡಗಿತು. ಸೂರ್ಯನ ಶಾಖಕ್ಕೆ ಸ್ವಲ್ಪ ಹಿಮ ಕರಗಿದಂತೆ ಅಲ್ಲಿಂದ ಹೊಗೆ ಏಳಲಾರಂಬಿಸಿತು. ಸಮಸ್ತ ಪ್ರದೇಶವೇ ಒಂದು ಹೊಸ ಅದ್ಭುತವನ್ನು ಸೃಷ್ಟಿಸಿತು. ''ಶಬರಿಮಲೆಯಲ್ಲಿ ಮಕರ ಜ್ಯೋತಿಗಾಗಿ ಕಾದ ಭಕ್ತರಂತೆ '' ಎಲ್ಲರೂ  

ಪರ್ವತದ ತುದಿಯನ್ನೇ ನೋಡಿ ಆನಂದಿಸತೊಡಗಿದರು. ಪ್ರಕ್ರತಿ ಸದ್ದಿಲ್ಲದೆ ಸುದ್ದಿ ಮಾಡಿ ಮತ್ತೆ ತನ್ನ ಕಾರ್ಯದಲ್ಲಿ ಮಗ್ನವಾಯಿತು. ಮೋಡ ಇದಕ್ಕೆಲ್ಲ ಮಂಗಳ ಮಾಡುವಂತೆ ಮತ್ತೆ ಸೂರ್ಯನನ್ನು ಮರೆ ಮಾಡಿ ನಮಗೆ ನಿರಾಸೆ ಉಂಡು ಮಾಡಿ ''ಹೋಗಯ್ಯ ಸಾಕು'' ಎಂದಂತೆ ಭಾಸವಾಯಿತು. ಎಷ್ಟಂದರೂ ನಾವು ಪ್ರಕ್ರತಿ ಪ್ರಿಯರಲ್ಲವೇ. ಮತ್ತೊಮ್ಮೆ ಕಣ್ಣು ತುಂಬಾ ದ್ರಷ್ಯವನ್ನು ತುಂಬಿಕೊಂಡು ಮನೆಯ ಕಡೆಗೆ ಹೊರಟೆವು.

ಮನೆಗೆ ಬಂದು ಪುನಃ ಎರಡನೇ ಹಂತದ ಸ್ಕಿಯಿಂಗ್ ಗೆ ಅಣಿಯಾದೆವು.ಬೆಳಿಗಿನ ಸಮಯದಲ್ಲಿ ಕೇವಲ ಕಿ ಮಿ ಮಾಡಿದ್ದೆವು. ಈಗ ಕಿ ಮಿ ಮಾಡುವ ನಿರ್ಧಾರದೊಂದಿಗೆ ಹೊರಟೆವು. ರಾಲ್ಫ್ ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಸದಾ ನಮ್ಮೊಂದಿಗೆ ಇದ್ದು ಸ್ಕಿಯಿಂಗ್ ಕಲಿಸುವ ಪರಿ ನಿಜಕ್ಕೂ ಅದ್ಭುತ. ಮಧ್ಯಾನ್ಹದ ಸ್ಕಿಯಿಂಗ್ ಅಷ್ಟೊಂದು ಕಷ್ಟ ಎನಿಸಲಿಲ್ಲ. ಬೀಳುವ ಸಂಖ್ಯೆಯೂ ಕಡಿಮೆಯಾಯಿತು. ನಾನು ಹಾಗೂ ನನ್ನ ಹೆಂಡತಿ ಸ್ಕಿಯಿಂಗ್ ಸ್ಪರ್ಧೆಯನ್ನು ನಡೆಸಿ ಯಾರು ಬೇಗ ಹೋಗುತ್ತಾರೆ ಎಂದು


ನೋಡಿದೆವು. ಫಲಿತಾಂಶ ಕೇಳಬೇಡಿ. ಅದು ನಮ್ಮಿಬ್ಬರ ನಡುವೆ ನಡೆದ ಸ್ಪರ್ಧೆ. ಹೀಗೆಯೇ ಸ್ಕಿಯಿಂಗ್ ಮಾಡುತ್ತಾ ಹೋದಂತೆ ನಮ್ಮ ಸ್ಕಿಯಿಂಗ್ ರಸ್ತೆಯ ಪಕ್ಕದಲ್ಲೇ ಬೈಕ ಗಳ ವಿಪರೀತ ಸದ್ದು ಗದ್ದಲ ಕೇಳಿಬಂತು. ಅದೇನೆಂದು ಕೇಳಿದಾಗ ರಾಲ್ಫ್ ಹೇಳಿದರು, ಇಲ್ಲಿ ಸ್ಕಿಯಿಂಗ್ ಮಾಡಿದಂತೆ ಸ್ನೋ ಬೈಕಿಂಗ್ ಕೂಡಾ ಮಾಡುತ್ತಾರಂತೆ. ಘಂಟೆಗೆ ೧೨೦ ರಿಂದ ೧೮೦ ಕಿ ಮಿ ವೇಗದಲ್ಲಿ ಕಿರುಚಾಡುತ್ತಾ ಅವರು ಹೋಗುವಾಗ ನಿಜವಾಗಿಯೂ ಉಳಿದವರಿಗೆ ಕಿರಿ ಕಿರಿ ಆಗುವುದು ಸಹಜ. ಹಿಂದಿನ ವರ್ಷ ಇದೆ ರೀತಿ ಹೋಗುವಾಗ ಕೆಲವು ಜನ ವೇಗ ನಿಯಂತ್ರಿಸಲಾಗದೆ ಸತ್ತಿದ್ದಾರೆ ಎಂದು ತಿಳಿದಾಗ ಯಾಕಪ್ಪ ಇದೆಲ್ಲ ಬೇಕು ಇವರಿಗೆ ಎನಿಸಿತು. ಕೇಳಬೇಕಲ್ಲ ನಮ್ಮ ಮಾತು? ಅವರೂ ಎಲ್ಲರೂ ಹೋಗುವ ರಸ್ತೆಯಲ್ಲಿ ಹೋಗುವಂತಿಲ್ಲ. ಅವರಿಗಾಗಿಯೇ ಪ್ರತ್ಯೇಕ ರಸ್ತೆ ಮಾಡಿದ್ದಾರೆ . ಅವರು ಅದನ್ನಲ್ಲದೆ ಬೇರೆ ಕಡೆ ಹೋದರೆ ದಂಡ ಹಾಕಲಾಗುತ್ತದೆ.


ಹೀಗೆ ಬಗೆ ಬಗೆಯ ಪ್ರಕ್ರತಿಯ ವೀಕ್ಷಣೆಯೊಂದಿಗೆ  ಯಶಸ್ವೀಯಾಗಿ ಕಿ ಮಿ (ಒಟ್ಟಿಗೆ ೧೫ ಕಿ ಮಿ ) ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆ ಘಂಟೆಯಾಗಿತ್ತು. ಸೂರ್ಯಾಸ್ತದಿಂದ ಸಂಪೂರ್ಣ ಆಕಾಶ ಕೆಂಪು ಬಣ್ಣಕ್ಕೆ ತಿರುಗಿತ್ತು. ಬಿಳಿಯ


ಹಿಮ, ಕೆಂಪು ಆಕಾಶ, ಚಿತ್ರಕಾರನ ಚಿತ್ರದಂತೆ ಭಾಸವಾಗುತ್ತಿತ್ತು. ''ರವಿವರ್ಮನ ಕುಂಚದ ಕಲೆ ಬಲೆ'' ಹಾಡು ನೆನಪಾಗಿದ್ದು ಸುಳ್ಳಲ್ಲ. ಮನೆಗೆ ಬಂದು ಊಟ ಮಾಡಿ ಮಲಗಲು ಅಣಿಯಾದೆವು. ಬೆಳಗಿನಿಂದ ಸುತ್ತಿ ಸುತ್ತಿ ಕಾಲುಗಳು ದಣಿದಿದ್ದವು. ಆದರೆ ೧೫ ಕಿ ಮಿ ಮೊದಲ ದಿನವೇ ಮಾಡಿದ್ದಕ್ಕೆ ಹೆಮ್ಮೆ ಕೂಡಾ ಇತ್ತು. ರಾತ್ರಿ ಮಲಗಿದಾಗ ತುಂಬಾ ಹೊತ್ತು ನಿದ್ದೆಯೇ ಬರಲಿಲ್ಲ. ಎಲ್ಲಿ ನೋಡಿದರೂ ಬಿಳಿಯ ಹಿಮವೇ ಕಾಣುತ್ತಿದೆ. ಹಿಮದಲ್ಲಿ ನಡೆದಂತೆ, ಹಿಮದಲ್ಲಿ ಬಿದ್ದಂತೆ, ಎದ್ದಂತೆ, ಎಲ್ಲಿ ನೋಡಿದರೂ ಹಿಮ ಹಿಮ ಹಿಮ. ತಲೆಯ ಮೂಲೆ ಮೂಲೆಯಲ್ಲೂ ಹಿಮದ ಬುಗ್ಗೆಗಳೇ ತುಂಬಿದ್ದವು.

ಮರುದಿನ ಬೆಳಿಗಿನ ಜಾವ ಮೋಡಗಳ ಸುಳಿವಿರಲಿಲ್ಲ. ಸೂರ್ಯನ ದರ್ಶನ ಮತ್ತೆ ಹುರುಪನ್ನು ತಂದಿತ್ತು. ಇದು ನಮ್ಮ ಕೊನೆಯ ದಿನ ಸ್ಕಿಯಿಂಗ್ ಮಾಡಲು. ದಿನ ಅನೇಕ ವಿಸ್ಮಯಕಾರಿ ಅನುಭವಗಳು ಆಯಿತು. ನಾಯಿಯೊಂದಿಗೆ ಮನುಷ್ಯನ ಗೆಲುವು, ೧೭೦ ವರ್ಷಗಳಷ್ಟು ಹಳೆಯ ಚಾ ಅಂಗಡಿ, ಹೀಗೆ ಅನೇಕ ಅದ್ಭುತ ದ್ರಶ್ಯಗಳ ದರ್ಶನ ಲಭಿಸಿತು. ಅದನ್ನು ಮುಂದಿನ ಭಾಗದಲ್ಲಿ ತಿಳಿಸುತ್ತೇನೆ. ಮುಂದಿನ ವಾರ ಪ್ರವಾಸ ಕಥನಕ್ಕೆ ಮಂಗಳ ಹಾಡುತ್ತೇನೆ. ಅಲ್ಲಿಯವರೆಗೆ ಇದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತಿರಲ್ಲನಿಮ್ಮ ಅನುಮತಿಯೊಂದಿಗೆ..

ಮುಂದುವರಿಯುತ್ತದೆ.....