ಆತ್ಮೀಯ ಮಿತ್ರರೇ,
ಇಂದು ನನಗೆ ಸಂತಸದ ದಿನ, ನನ್ನ ಪ್ರೀತಿಯ ''ಸಾಗರದಾಚೆಯ ಇಂಚರ'' ಬ್ಲಾಗ್ ಗೆ ಒಂದು ವರುಷದ ಸಂಭ್ರಮ. ಬ್ಲಾಗ್ ಪ್ರಪಂಚ ಬಹಳಷ್ಟು ನೀಡಿದೆ ಒಂದು ವರುಷದಲ್ಲಿ. ಅನೇಕ ಮಿತ್ರರ ನಗೆ ಉಕ್ಕಿಸುವ ಬರಹಗಳು, ಚಿಂತನಶೀಲ ಲೇಖನಗಳು, ಮುದ ನೀಡುವ ಕವನಗಳು, ಚುಟುಕಾಗಿ ಇದ್ದರೂ ದಿನದ ನೋವನ್ನೇ ಮರೆಸುವ ಚುಟುಕಗಳು, ಹೀಗೆ ಪಟ್ಟಿ ಬೆಳೆಯುತ್ತದೆ. ಈ ಸಂಧರ್ಭದಲ್ಲಿ ನನ್ನೆಲ್ಲ ನಲ್ಮೆಯ ಬ್ಲಾಗ್ ಮಿತ್ರರಿಗೆ, ಓದುಗರಿಗೆ, ನನ್ನ ಬ್ಲಾಗ್ ನ್ನು ಪ್ರೀತಿಯಿಂದ ಓದಿ ಬೆನ್ನು ತಟ್ಟುವ ಎಲ್ಲರಿಗೆ ನನ್ನ ಹ್ರದಯ ತುಂಬಿದ ಕ್ರತಜ್ಞತೆಗಳು.
ಸರಿಯಾಗಿ ಒಂದು ವರುಷದ ಹಿಂದೆ ಬ್ಲಾಗ್ ಪ್ರಪಂಚಕ್ಕೆ ನಾನು ಕಾಲಿಟ್ಟೆ. ಅದೊಂದು ಕುತೂಹಲಕಾರೀ ಕಥೆ. ಮೊದಲಿನಿಂದಲೂ ನಾನು ಲೇಖನ, ಕವನಗಳು, ಕಥೆ ಹೀಗೆ ನನ್ನಷ್ಟಕ್ಕೆ ನಾನೇ ಬರೆಯುತ್ತಿದ್ದೆ. ಆದರೆ ನನ್ನ ಅರ್ಧಾಂಗಿ, ''ನೀವು ಯಾಕೆ ಬ್ಲಾಗ್ ಆರಂಬಿಸಿ ಅದರಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಬಾರದು'' ಎಂದು ಒಂದು ದಿನ ನನ್ನನ್ನು ಕೇಳಿದಳು ಅಷ್ಟೇ ಅಲ್ಲ ಬ್ಲಾಗ್ ಬರೆಯಲು ಮೊದಲು ಪ್ರೇರಣೆ ನೀಡಿದಳು. ನನ್ನನ್ನು ಸದಾ ಪ್ರೇರೇಪಿಸಿ ಪ್ರೋತ್ಸಾಹ ನೀಡುವ ಮಡದಿಗೆ ಒಂದು ವರುಷ ತುಂಬಿದ ಈ ಸಂದರ್ಭದಲ್ಲಿ ಕ್ರತಜ್ಞತೆಗಳು.
ಅದೇ ಸಮಯಕ್ಕೆ ಸರಿಯಾಗಿ ''ಕ್ಷಮಿಸಿ ನಾನು ಹೇಳೋದೆಲ್ಲ ತಮಾಷೆಗಾಗಿ'' ಬ್ಲಾಗಿನ ಆತ್ಮೀಯ ಮಿತ್ರ ಮೂರ್ತಿ (http://nmurthy79.blogspot.com/) ನನಗೆ ಬ್ಲಾಗ್ ಮಾಡುವುದು ಹೇಗೆ, ಲೇಖನ ಹಾಕುವುದು ಹೇಗೆ ಎಂಬ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ನನ್ನ ಬ್ಲಾಗ್ ಆರಂಬವಾಯಿತು. ಎಷ್ಟು ಉತ್ಸಾಹ ವಿತ್ತೆಂದರೆ ಮೊದಲ ದಿನವೇ 10-15 ಲೇಖನ ಹಾಕಿ ಬಿಟ್ಟೆ. ಅದು ಮೊದಲ ಬಾರಿಗೆ ಬೈಕನ್ನು ಓಡಿಸಿದ ಸಂತಸದಂತೆ, ಆ ಉತ್ಸಾಹ ನಿರಂತರ ಉಳಿದರೆ ಸಾಕು ಅಲ್ಲವೇ? ನನ್ನನ್ನು ಬ್ಲಾಗ್ ಪ್ರಪಂಚಕ್ಕೆ ಕರೆದುಕೊಂಡು ಬಂದು ನನಗೆ ಬ್ಲಾಗ್ ಬರೆಯಲು ಬೇಕಾದ ಎಲ್ಲ ಮಾಹಿತಿ ನೀಡಿದ ಮೂರ್ತಿ ಗೆ ನನ್ನ ಕ್ರತಜ್ಞತೆಗಳು.
ವರುಷ ತುಂಬಿದ ಸಂತಸಕ್ಕೆ ಸರಿಯಾಗಿ ಬ್ಲಾಗ್ ಹಿಂಬಾಲಿಸುವವರ ಸಂಖ್ಯೆಯೂ 100 ದಾಟಿದೆ, ನಿಮಗೆಲ್ಲರಿಗೂ ನಲ್ಮೆಯ ನಮನಗಳು.
ಕಳೆದ ವರುಷ ಮರೆಯಲಾದೀತೇ, ಸ್ವೀಡನ್ನಿನ ಹಿಮಚ್ಚಾದಿತ ಪರ್ವತಗಳ ಶ್ರೇಣಿಯಲ್ಲಿ ಸ್ಕೀಯಿಂಗ್ ಮಾಡಿದ ಅನುಭವ, ಸ್ಪೇನ್ ದಲ್ಲಿ ಪಾಸ್ ಪೋರ್ಟ್ ಕಳ್ಳತನ ಎರಡೂ ಮರೆಯಲಾರದ ನೆನಪುಗಳಾಗಿ ಜೀವನ ಪುಟದಲ್ಲಿ ದಾಖಲಾದವು. ಅದರಲ್ಲೂ ನನ್ನ ಪಾಸ್ ಪೋರ್ಟ್ ಕಳೆದಾಗ ಬ್ಲಾಗ್ ಮಿತ್ರರು ನೀಡಿದ ಸಮಾಧಾನ, ಹಿತ ನುಡಿ, ಹುರಿದುಂಬಿಸುವಿಕೆ ಇವೆಲ್ಲವೂ ಕುಟುಂಬದ ನೆನಪನ್ನು ತರಿಸಿದವು. ದೂರದಲ್ಲಿದ್ದರೂ ನಿಮ್ಮವನಲ್ಲಿ ಒಬ್ಬನಂತೆ ನೋಡುವ ನಿಮ್ಮೆಲ್ಲರ ಪ್ರೀತಿಗೆ ನಾನು ಚಿರ ಋಣಿ.
ಸದಾ ಪ್ರೋತ್ಸಾಹಿಸುತ್ತಿರುವ ಇಟ್ಟಿಗೆ ಸಿಮೆಂಟಿನ ಪ್ರಕಾಶಣ್ಣ, ಛಾಯಾ ಕನ್ನಡಿಯ ಶಿವೂ ಸರ್, ಜೀವನ್ಮುಖಿಯ ಪರಾಂಜಪೆ ಸರ್, ಜಲಾನಯನ ಅಜ್ಹಾದ್ ಸರ್, ಚಂದ್ರು ಸರ್, ಮಹೇಶ್ ಸರ್, ಮಾನಸದ ತೇಜಸ್ವಿನಿ ಮೇಡಂ, ಮ್ರದು ಮನಸಿನ ಸುಗುಣ ಮೇಡಂ, ಹೀಗೆ ಎಲ್ಲ ನನ್ನ ಬ್ಲಾಗ್ ಮಿತ್ರರಿಗೂ ನಾನು ಚಿರ ಋಣಿ. ಜಾಗದ ಅಭಾವದಿಂದ ಇಲ್ಲಿ ಎಲ್ಲರ ಹೆಸರನ್ನೂ ಪ್ರಸ್ತಾಪಿಸುತ್ತಿಲ್ಲ. ನೀವೆಲ್ಲರೂ ನನಗೆ ಮಾರ್ಗದರ್ಶಿಗಳೇ.
ಅಂತೆಯೇ ನನಗೆ ಪ್ರೋತ್ಸಾಹ ನೀಡುತ್ತಿರುವ ಜೈ ವಿಟ್ಟಲ ಬಳಗದ ಮಿತ್ರರಿಗೂ ವಂದನೆಗಳು.
ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ''ಸಾಗರದಾಚೆಯ ಇಂಚರ'' ಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಹಿಂದಿನಂತೆಯೇ ಇರುತ್ತದೆ ಎಂಬ ವಿಶ್ವಾಸದೊಂದಿಗೆ ಮುಂದಿನ ವಾರ ಹೊಸ ಲೇಖನದೊಂದಿಗೆ, ಹೊಸ ಅನುಭವದೊಂದಿಗೆ ನಿಮ್ಮೆದುರು ಬರುತ್ತೇನೆ,
ಗಣ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಅಲ್ಲಿಯವರೆಗೆ
ನಿಮ್ಮವ ಗುರು