(ಈ ಲೇಖನವನ್ನು ಪ್ರಕಟಿಸಿದ ''ದಟ್ಸಕನ್ನಡ.ಕಾಮ್''''http://thatskannada.oneindia.in/nri/article/2009/0828-sweden-odissi-dancer-annette-pooja.html ಗೂ ಮತ್ತು ''ಕನ್ನಡಧ್ವನಿ'' ''http://www.kannadadhvani.com/node/846'' ಗೂ ಕ್ರತಜ್ನತೆಗಳು)
ಸಂಗೀತ ಸುಧೆಯೊಳಗೆ ಮೀಯದವರಾರು
ಕಾಲ್ಗೆಜ್ಜೆ ಸಪ್ಪಳಕೆ ಒಲಿಯದವರಾರು
ನ್ರತ್ಯದಲಿ ನಟರಾಜ ಸೂರೆಗೊಂಡನು ಮನವ
ದೀಪಕ ರಾಗವು ಬೆಳಗಿಸಿತು ಜಗವ
ಸಂಗೀತ ಮತ್ತು ನ್ರತ್ಯ ಎಂಥಹ ಅರಸಿಕರನ್ನು ರಸಿಕತೆಗೆ ಒಯ್ಯುತ್ತವೆ. ಅದೊಂದು ಅಮಲಿದ್ದಂತೆ, ಮನಸ್ಸಿನ ನೋವಿಗೆ ಸಂಜೀವಿನಿ ಇದ್ದಂತೆ, ಆನಂದದ ಸಾಗರದಂತೆ.
ಅದು ಶಾಸ್ತ್ರಬದ್ದ ಭಾರತೀಯ ಸಂಗೀತ-ನ್ರತ್ಯವೇ ಆಗಿರಬಹುದು ಇಲ್ಲವೆ ಪಾಶ್ಚಾತ್ಯರ ಪಾಪ್-ನ್ರತ್ಯ ವೇ ಆಗಿರಬಹುದು. ಅದರಲ್ಲೂ ಭಾರತೀಯ ನ್ರತ್ಯ ಪ್ರಕಾರಗಳಿಗೆ ಸಿಕ್ಕಷ್ಟು ಪ್ರಸಿದ್ದಿ ಜಗತ್ತಿನ ಯಾವ ನ್ರತ್ಯ ಪ್ರಕಾರಗಳಿಗೂ ಸಿಕ್ಕಿಲ್ಲ ಅಂದರೆ ಅತಿಶಯೋಕ್ತಿಯಲ್ಲ. ಆದರೆ ಭಾರತೀಯರಾದ ನಾವು ಅರೆ ಬೆತ್ತಲೆಯ ವಿದೇಶಿ ನ್ರತ್ಯವನ್ನೇ ಸವಿಯುತ್ತಾ ನಮ್ಮ ತನ ವನ್ನು ಮರೆಯುತ್ತಿದ್ದೇವೆ. ವಿದೇಶಿಯರು ಎಂದಕೂಡಲೇ ಕೇವಲ ಬೆತ್ತಲೆ ಕುಣಿಯುವವರು ಎನ್ನುವುದನ್ನು ನಮಗೆ ಗೊತ್ತಿಲ್ಲದೇ ಅಂದುಕೊಂಡುಬಿಟ್ಟಿದ್ದೇವೆ. ನಾವು ನಮ್ಮದನ್ನೇ ಬಿಟ್ಟು ಪರಕೀಯತೆಯನ್ನು ಮೈಗೂಡಿಸಿಕೊಂಡು ಸಂಸ್ಕ್ರತಿಯ ಅಧ:ಪತನಕ್ಕೆ ಕಾರಣೀಭೂತರಾಗುತ್ತಿದ್ದರೆ ಸದ್ದಿಲ್ಲದೆ ಸ್ವೀಡನ್ನಿನ ಮಹಿಳೆಯೊಬ್ಬರು ಭಾರತೀಯ ನ್ರತ್ಯದಲ್ಲಿ ಕಳೆದ ೧೫ ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆಂದರೆ ಆಶ್ಚರ್ಯವಾಗುತ್ತಿದೆಯೇ?
ಹೌದು, ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿರುವ ಅನಿಟ್ಟೆ ಪೂಜಾ (ಪೂಜಾ ಎನ್ನುವುದು ಓಡಿಸ್ಸಿ ಗುರು ಇಟ್ಟ ಹೆಸರು) ಕಳೆದ ೧೫ ವರ್ಷಗಳಿಂದ ಓಡಿಸ್ಸಿ ನ್ರತ್ಯ ಕಲಿಯುತ್ತಿದ್ದಾರೆ ಅಷ್ಟೇ ಅಲ್ಲ ಕಲಿಸುತ್ತಿದ್ದಾರೆ. ಭಾರತದ ಎಲ್ಲ ನ್ರತ್ಯ ಪ್ರಕಾರಗಳಲ್ಲೂ ಕೈಯ್ಯಾಡಿಸಿರುವ ಇವರು ಕೊನೆಯದಾಗಿ ಆರಿಸಿಕೊಂಡಿದ್ದು ಓಡಿಸ್ಸಿ ನ್ರತ್ಯವನ್ನು. ಹ್ರದಯಸ್ಪರ್ಶೀ ಅಭಿನಯ, ತಾಳಕ್ಕೆ ತಕ್ಕ ಹೆಜ್ಜೆ, ಹೆಜ್ಜೆಗೆ ತಕ್ಕ ಭಾವದ ಮೂಲಕ ಇಲ್ಲಿಯ ಜನರ ಕಣ್ಮಣಿಯಾಗಿದ್ದಾರೆ. ತಮ್ಮ ಹೆಸರಿನಲ್ಲಿ ಪೂಜಾ ಎನ್ನುವುದನ್ನು ಸೇರಿಸಿಕೊಂಡಿರುವ ಇವರದು ಸುಖೀ ಕುಟುಂಬ. ಇವರ ಗಂಡ ಲಿಯನಾರ್ಡೋ ಒಬ್ಬ ನಟ ಹಾಗೂ ಶಿಕ್ಷಕ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು, ಒಬ್ಬಳು ಗಾಯತ್ರಿ, ಇನ್ನೊಬ್ಬಳು ಕರೀಷ್ಮಾ. ಇಬ್ಬರಿಗೂ ಇಟ್ಟ ಭಾರತೀಯ ಮೂಲದ ಹೆಸರು ಅವರ ಭಾರತ ಪ್ರೇಮಕ್ಕೆ ಹಿಡಿದ ಕನ್ನಡಿ.
ಮೂಲತ: ಸ್ವೀಡನ್ನಿನಲ್ಲಿಯೇ ಹುಟ್ಟಿ ಬೆಳೆದ ಅನಿಟ್ಟೆ ಪೂಜಾ, ತಮ್ಮ ತಂದೆಯವರಿಂದ ಸಂಗೀತ ಹಾಗೂ ನ್ರತ್ಯಗಳಲ್ಲಿ ಆಸಕ್ತಿ ತಳೆದರು. ನ್ರತ್ಯ ಇವರ ರಕ್ತದಲ್ಲಿಯೇ ಬೆಳೆದಿತ್ತು. ಆದರೆ ಅದು ಭಾರತದೊಂದಿಗೆ ವಿಸ್ತರಿಸುತ್ತದೆ ಎಂಬುದು ಅವರಿಗೂ ತಿಳಿದಿರಲಿಕ್ಕಿಲ್ಲ. ಥಿಯೇಟರ್ ಗಳಲ್ಲಿ ವೇಷ-ಭೂಷಣ ಮಾಡುವವರಾಗಿದ್ದ ಇವರು ಕ್ರಮೇಣ ನ್ರತ್ಯದ ಕಡೆಗೆ ಒಲಿದಿದ್ದೇ ಸೋಜಿಗದ ಕಥೆ.
”ಸ್ಟಾಕ್ ಹೋಮ್ ನಲ್ಲಿ ನಾಟಕ ಅಕಾಡೆಮಿಯಲ್ಲಿ ಕಲಿಯುತ್ತಿದ್ದಾಗ ಅನೇಕ ಏಷ್ಯಾದ ನಿರ್ದೇಶಕರ ಜೊತೆ ಕೆಲಸ ಮಾಡಿದೆ. ಆಗಲೇ ಭಾರತ ನ್ರತ್ಯದ ಬಗೆಗೆ ಜಗತ್ತಿನಾದ್ಯಂತ ಇರುವ ಕೌತುಕತೆ, ಗೌರವ ನನ್ನಲ್ಲಿ ಹೊಸ ಸಂಚಲನ ಉಂಟು ಮಾಡಿತು. ಒಮ್ಮೆ ಕೂಚಿಪುಡಿ ನ್ರತ್ಯವನ್ನು ವೀಕ್ಷಿಸಿದೆ, ಆ ನ್ರತ್ಯಕ್ಕೆ ಸಿಕ್ಕಿದ ಅದ್ಭುತ ಗೌರವಕ್ಕೆ ಬೆರಗಾದೆ, ಆಗಲೇ ಅನ್ನಿಸಿತು, ಭಾರತೀಯ ನ್ರತ್ಯದಲ್ಲಿ ಏನೋ ಇದೆ, ಅದನ್ನು ಕಲಿಯಬೇಕು, ಅಸ್ವಾದಿಸಬೇಕು” ಎನ್ನುವ ಪೂಜಾ ಭಾರತೀಯ ನ್ರತ್ಯ ಪ್ರಕಾರಗಳಲ್ಲಿ ಬಹಳಷ್ಟು ಸಂಶೋಧನೆ ಮಾಡಿದ್ದಾರೆ.
ಉಡುಪಿಯಲ್ಲಿ ಯಕ್ಷಗಾನ ವೇಷ-ಭೂಷಣ ಮಾಡುವುದನ್ನು ಕಲಿತ ಇವರು ನಂತರ ಹತ್ತು ಹಲವು ಭಾರತೀಯ ನ್ರತ್ಯಗಳಿಗೆ ವೇಷ-ಭೂಷಣ ಹಾಕುವುದನ್ನು ಕಲಿತರು. ಇದೇ ಸಂದರ್ಭದಲ್ಲಿ ಓರಿಸ್ಸಾದ ಪುರಿ ಜಗನ್ನಾಥ ರಥೋತ್ಸವವನ್ನು ವೀಕ್ಷಿಸುವ ಅವಕಾಶ ಇವರಿಗೆ ಲಭಿಸಿತು. ಅಲ್ಲಿಯ ಆ ಮನಮೋಹಕ ಓಡಿಸ್ಸಿ ನ್ರತ್ಯ, ಅವರ ಶ್ರದ್ಧೆ, ಜಗನ್ನಾಥನಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವ ಪರಿ, ಅವನನ್ನು ಒಲಿಸಿಕೊಳ್ಳುವ ನಾಟ್ಯ ಶೈಲಿ ಇವರ ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿತು. ಅಂದೇ ನಿರ್ಧರಿಸಿದರಂತೆ ” ಇದೇ ನ್ರತ್ಯವನ್ನು ತಾನು ಕಲಿಯಬೇಕು, ಅದರ ಸತ್ವವನ್ನು ಅರಿಯಬೇಕು, ಆ ಜಗನ್ನಾಥನಲ್ಲಿ ತಲ್ಲೀನವಾಗುವ ಯಾವ ಮಹಾಶಕ್ತಿ ಈ ಓಡಿಸ್ಸಿ ನ್ರತ್ಯಕ್ಕಿದೆ ಎನ್ನುವುದನ್ನು ತಾವು ಮನಗಾಣಬೇಕು” ಎಂಬುದಾಗಿ.
ಇದೇ ಸಂದರ್ಭದಲ್ಲಿ ಭಾರತೀಯ ನ್ರತ್ಯ ಅಕಾಡೆಮಿಯ ಫೆಲೋಶಿಪ್ ಲಭಿಸಿತು. ಅಲ್ಲಿಂದ ಅನಿಟ್ಟೆ ಪೂಜಾ ತಿರುಗಿ ನೋಡಲಿಲ್ಲ. ಮೂರು ವರುಷ ಕುಚಿಪುಡಿ ಕಲಿತರು. ಇದರ ನಡುವೆಯೇ ಕೇರಳದ ಸಾಂಪ್ರದಾಯಿಕ ನ್ರತ್ಯ ”ಥೆಯ್ಯಾಮ್” ನೋಡುವ ಸೌಭಾಗ್ಯ ಒದಗಿತು. ಆದರೆ ಅದು ಪುರುಷರಿಗೆ ಮಾತ್ರ ಎಂದು ತಿಳಿದು ಬೇಸರಗೊಂಡರು. ತದ ನಂತರ ರಾಜಸ್ಥಾನದ ಪ್ರಸಿದ್ಧ ನ್ರತ್ಯ ”ಕಲಬೆಲಿಯಾ” ನ್ರತ್ಯ, ಹಠಯೋಗ ಶಿಕ್ಷಣ, ಕಥಕ್ಕಳಿ, ಭರತನಾಟ್ಯ ಹೀಗೆ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಂಡರು. ”ಕಲೆ ಸಾಧಕನ ಸೊತ್ತು” ಎಂಬುದನ್ನು ಅಕ್ಷರಷ: ನಿಜ ಮಾಡಿದ ಅನಿಟ್ಟೆ ಪ್ರಸಿದ್ಧ ಓಡಿಸ್ಸಿ ನ್ರತ್ಯ ಗುರು ಶ್ರೀ ಗುರು ಹರಿಕ್ರಷ್ಣ ಬೆಹ್ರಾ ರಲ್ಲಿ ೬ ವರ್ಷಗಳ ಕಾಲ ನ್ರತ್ಯಾಭ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗಳನ್ನು ಬಿಟ್ಟಿರಲಾಗದ, ನ್ರತ್ಯವನ್ನು ಬಿಡಲೊಲ್ಲದ ದ್ವಂದ್ವ ಇವರನ್ನು ಕಾಡಿತು. ಕೊನೆಗೂ ಗೆದ್ದದ್ದು ಓಡಿಸ್ಸಿ ನ್ರತ್ಯವೇ. ತಮ್ಮ ಮಗಳನ್ನು ತಮ್ಮೊಂದಿಗೆ ಕೂರಿಸಿಕೊಂಡೇ ನ್ರತ್ಯ ಕಲಿತು ಶಹಬ್ಬಾಸ್ ಎನಿಸಿಕೊಂಡರು.
ಫೋಟೋ: ಅವಿನಾಶ್
ಸುಂದರ ಅಭಿನಯ, ತನ್ನ ನ್ರತ್ಯದೊಳಗಿನ ಭಾವನೆಗಳ ಮೇಲಿನ ಹಿಡಿತ, ಭಾರತೀಯ ಸಂಸ್ಕ್ರತಿಯ ಬಗೆಗಿನ ಆಳವಾದ ಜ್ನಾನ, ಕಥಾ-ಪುರಾಣಗಳ ವಿಶ್ಲೇಷಣೆ, ಎಂದೂ ತಪ್ಪದ ಗೆಜ್ಜೆಯೊಂದಿಗಿನ ಹೆಜ್ಜೆ ಅನಿಟ್ಟೆ ಪೂಜಾ ಅವರನ್ನು ಓಡಿಸ್ಸಿ ನ್ರತ್ಯ ರಂಗದ ಪ್ರತಿಭಾನ್ವಿತ ಕಲಾವಿದೆಯನ್ನಾಗಿ ಮಾಡಿವೆ. ”ವಿದ್ಯಾ ವಿನಯೇನ ಶೋಭಿತೇ” ಎನ್ನುವಂತಿರುವ ಇವರು ಸ್ವೀಡನ್ನಿನ ಅದೇಷ್ಟೋ ಮಕ್ಕಳಿಗೆ ಓಡಿಸ್ಸಿ ನ್ರತ್ಯವನ್ನು ಕಲಿಸುತ್ತಿದ್ದಾರೆ. ತಮ್ಮ ಗಂಡನೊಂದಿಗೆ ಸೇರಿಕೊಂಡು ”ವಿಶ್ವ ನ್ರತ್ಯ ಸಂಘ (World Dance Academy) ಸಮಯ ಸಿಕ್ಕಾಗಲೆಲ್ಲ ಭಾರತಕ್ಕೆ ಭೇಟಿ ನೀಡುವ ಪೂಜಾ ಪ್ರಸ್ತುತ ಅರುಣಾ ಮೊಹಾಂಟಿಯವರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಸ್ವೀಡಿಷ್ ಸರಕಾರದಿಂದ ಇವರಿಗೆ ಫೆಲೋಶಿಪ್ ಲಭಿಸಿದ್ದು ಅದು ನ್ರತ್ಯ ಕಲಿಯಲು ಹಾಗೂ ಭಾರತೀಯ ಸಂಸ್ಕ್ರತಿ ಅರಿಯಲು ಸಹಕಾರವಾಯಿತು ಎನ್ನುತ್ತಾರೆ ಅನಿಟ್ಟೆ ಪೂಜಾ. ”ಥೆಯ್ಯಾಮ ಮತ್ತು ಕಥಕ್ಕಳಿ ಕಲಿತಿದ್ದರಿಂದ ರಾಮಾಯಣ ಮತ್ತು ಮಹಾಭಾರತ ಕಥೆ ತಿಳಿಯಲು ಅನುಕೂಲವಾಯಿತು. ಭಾರತೀಯ ಸಂಸ್ಕ್ರತಿ ಮತ್ತು ಪರಂಪರೆ ನಿಜಕ್ಕೂ ಶ್ರೀಮಂತವಾದದ್ದು. ಬಹುಶ: ಇದಕ್ಕಾಗಿಯೇ ಭಾರತೀಯ ನ್ರತ್ಯ ಇಂದಿಗೂ ಚಿರನೂತನ, ದಿವ್ಯ ಚೇತನ” ಎನ್ನುವ ಪೂಜಾ ಅವರು ಭಾರತದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಭಾರತವನ್ನು ಬಹುವಾಗಿ ಪ್ರೀತಿಸುವ ಇವರಿಗೆ ತಮ್ಮ ಮಕ್ಕಳಿಗೂ ಆ ಸಂಸ್ಕ್ರತಿಯನ್ನು ತಿಳಿಸುವ ಹಂಬಲವಿದೆ. ಭಾರತದಾದ್ಯಂತ ಹಲವಾರು ಕಡೆ ನ್ರತ್ಯ ಕಾರ್ಯಕ್ರಮ ನೀಡಿರುವ ಇವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದೀಗ ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿ ತಮ್ಮ ನ್ರತ್ಯ ಶಾಲೆ ನಡೆಸುತ್ತ ಇಲ್ಲಿಯೂ ನ್ರತ್ಯ ಕಾರ್ಯಕ್ರಮ ನೀಡುತ್ತಾ ಇಲ್ಲಿಯ ಜನರ ಮನ ಗೆದ್ದಿದ್ದಾರೆ.
ದೇಶಾಭಿಮಾನ ಎನ್ನುವುದು ಎಲ್ಲಿ? ಹೇಗೆ? ಟಿಸಿಲೊಡೆಯುತ್ತದೆ ಎಂದು ಹೇಳುವುದು ಕಷ್ಟ. ಅದು ಯಾವ ರೂಪದಲ್ಲಿ ಇರುತ್ತದೆಯೋ ಬಲ್ಲವರಾರು. ದೇಶದಲ್ಲಿದ್ದೇ ಪರಕೀಯರಾಗುವುದು, ಪರಕೀಯರಾಗಿದ್ದುಕೊಂಡೇ ದೇಶವನ್ನು ಪ್ರೀತಿಸುವುದು ಸೋಜಿಗವಲ್ಲವೇ? ನಮ್ಮ ಸಂಸ್ಕ್ರತಿ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಅನಿಟ್ಟೆ ಪೂಜಾ ಅವರನ್ನು ಅಭಿನಂದಿಸಲೇಬೇಕು.