













ಪ್ರವಾಸ ಕಥನ , ಭಾಗ ೧
ಸ್ವೀಡನ್ ಗೆ ಬರುವ ಮುಂಚೆ ಯಾವಾಗಲೂ ಸೂರ್ಯನ ಬೆಳಕನ್ನು ತುಂಬ ಬಯ್ಯುತ್ತಿದ್ದೆ. ಸೂರ್ಯ ಎನ್ನುವುದು ಜೀವನದಲ್ಲಿ ಎಷ್ಟು ಅನಿವಾರ್ಯ ಎನ್ನುವುದು ಇಲ್ಲಿಗೆ ಬಂದ ಮೇಲೆ ತಿಳಿಯಿತು. ಈ ಜನರಿಗೆ ಸೂರ್ಯನ ಬೆಳಕೆಂದರೆ ಹಸಿದ ಹೆಬ್ಬುಲಿ ತನ್ನೆದುರಿಗೆ ನಿಂತ ನರಿಯನ್ನು ದಿಟ್ಟಿಸಿ ನೋಡುವ ಹಾಗೆ ನೋಡುತ್ತಾರೆ . ವರ್ಷದ ೬ ತಿಂಗಳು ಕತ್ತಲೆ, ಉಳಿದ ೬ ತಿಂಗಳಿನಲ್ಲಿ ೨ ತಿಂಗಳು ಬೆಳಕಿದ್ದರೂ ಚಳಿಯ ಕಾಟ. ಸಿಗುವುದು ಕೇವಲ ೪ ತಿಂಗಳುಗಳು ಮಾತ್ರ ಇವರಿಗೆ. ನಾವೋ ಹುಟ್ಟಿನಿಂದಲೇ ಸೂರ್ಯನ ಜೊತೆಗೆ ಬೆಳೆದವರು. ಬೇಸಿಗೆಯಲ್ಲಿ ಬಿಸಿಲ ಬೇಗೆ ತಡೆಯಲಾರದೆ ಮನೆಯ ಒಳಗೆ ಕುಳಿತು ಟೀ ವಿ ನೋಡುವವರು. ಅವರ ಕಷ್ಟ ನಮಗೇನು ಗೊತ್ತು. ಆದರೆ ಇಲ್ಲಿಗೆ ಬಂದ ಮೇಲೆ ಅದರ ವಿರಾಟ ದರ್ಶನವಾಯಿತು. ಸ್ವೀಡಿಷ್ ಇಮ್ಮಿಗ್ರಶನ್ ನವರ ಕ್ರಪಕಟಾಕ್ಷ ದಿಂದ ನನಗೆ ಇಲ್ಲಿ ಬರಲು ಅಂದುಕೊಂಡದ್ದಕಿಂತ ೨ ತಿಂಗಳೇ ತಡವಾಯಿತು. ಸರಿಯಾಗಿ ಚಳಿಗಾಲಕ್ಕೆ ನನ್ನವಳ ಜೊತೆ ನನ್ನ ಆಗಮನವಾಯಿತು ನೋಡಿ. ಅಲ್ಲಿಂದ ಪ್ರಾರಂಭ ವಾಗುತ್ತದೆ ಚಿತ್ರ ವಿಚಿತ್ರ ಅನುಭವಗಳ ಸಾರ. ಸದ್ಯಕ್ಕೊಂದು ಸುಂದರ ಪ್ರವಾಸಿ ತಾಣದ ಬಗೆಗೆ ವರ್ಣಿಸುತ್ತೇನೆ.´
ನನ್ನ ಮನೆಯವಳು ಕೆಲಸ ಮಾಡುವ ಸಾಫ್ತ ವೇರ್ ಕಂಪನಿಯಲ್ಲಿ ಬರಿ ೮ ಜನ ಮಾತ್ರ ಇದ್ದಾರೆ. ಆದರೆ ಮಹಾ ಶ್ರೀಮಂತ ಕಂಪನಿ. ಇಂಥಹ ಅರ್ಥಿಕ ಒತ್ತಡದಲ್ಲಿಯೂ ಅವರ ಬೆಳವಣಿಗೆ ಕಣ್ಣಿಗೆ ಕುಕ್ಕುವಂತಿದೆ. ವಿಷಯ ಅದಲ್ಲ, ಅಲ್ಲಿ ನನ್ನವಳನ್ನು ಬಿಟ್ಟರೆ ಎಲ್ಲರೂ ೪೫ ವರ್ಷಕ್ಕೆ ಮೇಲ್ಪಟ್ಟವರು. ಹಾಗಾಗಿ ಅವರೆಲ್ಲ ಇವಳನ್ನು ತಮ್ಮ ಮಗಳಂತೆ ನೋಡಿಕೊಳ್ಳುತ್ತಾರೆ. ಎಲ್ಲೇ ಹೋಗುವುದಿದ್ದರೂ ಇವಳಿಗೆ ಒಂದು ಆಮಂತ್ರಣ ಗ್ಯಾರಂಟೀ. ಮಲ್ಲಿಗೆ ಹೂವಿನೊಂದಿಗೆ ದಾರಕ್ಕೂ ಸ್ವರ್ಗ ಎಂಬಂತೆ ಅವಳೊಂದಿಗೆ ನನಗೂ ಹೋಗುವ ಸೌಭಾಗ್ಯ.
ಸ್ವಿಡೆನ್ನಿನ ಜನರ ಹವ್ಯಾಸಗಳು ಚಿತ್ರ ವಿಚಿತ್ರವಾಗಿರುತ್ತದೆ. ಹೇಳಿ ಕೇಳಿ ಹೊಟ್ಟೆ ತುಂಬಿದ ಜನ. ನಮ್ಮ ಹಾಗೆ ಮೈ ಬಗ್ಗಿಸಿ ದುಡಿಯುವ ಅಗತ್ಯವಿಲ್ಲ. ದುಡಿದಿದ್ದನ್ನು ಎಂಜಾಯ್ ಮಾಡುತ್ತಾರೆ ತಮಗೆ ಇಷ್ಟ ಬಂದಂತೆ. ಮಕ್ಕಳ ಚಿಂತೆ ಇಲ್ಲ, ಕಾಂತೆಯ ಜೊತೆ ಬಹಳ ಕಾಲ ಬಾಳುವುದಿಲ್ಲ. ಮತ್ತೇಕೆ ಹಣ ಉಳಿಸುವ ಚಿಂತೆ. ಅವರಿಗೆ ಚಲಿಗಾಲ ಬಂತೆಂದರೆ ಹತ್ತು ಹಲವು ಆಟಗಳನ್ನು ಆಡುವ ತವಕ. ಅದರಲ್ಲೂ ಜನವರಿಯಿಂದ ಮಾರ್ಚ್ ತನಕ ಹಿಮವೂ ಸಾಕಷ್ಟು ತುಂಬಿರುತ್ತದೆ. ಆ ಕಾಲ ಸ್ಕಿಯಿಂಗ್ ಮಾಡಲು ಪ್ರಶಸ್ತ ಕಾಲ.
ಇದನ್ನೆಲ್ಲಾ ಓದಿದ ತಿಳಿದಿದ್ದ ನಮಗೆ ನನ್ನಾಕೆಯ ಕಂಪನಿಯಲ್ಲಿ ಕೆಲಸ ಮಾಡುವ ಸ್ವೀಡಿಷ್ ದಂಪತಿಗಳಿಂದ ಸ್ಕಿಯಿಂಗ್ ಮಾಡಲು ಆಹ್ವಾನ ಬಂತು. ಮೊದಲೇ ಮಂಗನ ಮನಸ್ಸು, ಕೇಳಬೇಕೆ, ಓ ಕೆ ಅಂದೇ ಬಿಟ್ಟೆವು. ಸ್ಕಿಯಿಂಗ್ ಎಲ್ಲ್ಲ ಕಡೆ ಮಾಡಲು ಸಾದ್ಯವಿಲ್ಲ. ಅದಕ್ಕಾಗಿಯೇ ಕೆಲವು ಖಾಸಗಿ ಕಂಪನಿಗಳು ಉತ್ತಮ ಸ್ಕಿಯಿಂಗ್ ರಸ್ತೆಯನ್ನು ಮಾಡಿರುತ್ತಾರೆ. ಸ್ವಿಡೆನ್ನಿನ ಉತ್ತರ ಭಾಗದಲ್ಲಿ ತುಂಬ ಸುಂದರ ಪ್ರದೇಶಗಳಿವೆ. ನಾವು ಮಲೆನಾಡನ್ನು ವರ್ಣಿಸಿದಂತೆ ''ಸುತ್ತಲೂ ನಿತ್ಯ ಹರಿದ್ವರ್ಣದ ಕಾಡುಗಳು, ಎಲ್ಲಿ ನೋಡಿದರಲ್ಲಿ ಖಗ ಸಂಕುಲ, ಹಸಿರೆ ಹಸಿರು .....'' ಇಲ್ಲಿ ವರ್ಣಿಸಬೇಕಾದರೆ '' ಎಲ್ಲೆಲ್ಲೂ ಬೋಳಾದ ಮರಗಳು, ಸದಾ ಹಿಮದ ರಾಶಿ, ಎಲೆಲ್ಲೂ ಬಿಳಿಯ ಮೋಡಗಳಂತೆ ಗೋಚರಿಸುವ ಮತ್ತದೇ ಹಿಮ, ಮತ್ತದೇ ಬೋಳು ಮರ, ಸದಾ ನಿದ್ರಿಸುವ ಪ್ರಾಣಿಗಳು....''. ಇದು ನನ್ನ ವ್ಯಾಖ್ಯಾನ ಅಲ್ಲಿ ಹೋಗುವ ಮೊದಲು.
ನಾನೀಗ ಹೇಳಹೊರಟಿರುವ ಸ್ಕಿಯಿಂಗ್ ಮಾಡುವ ಸೇಲನ್ ಎಂಬ ಪ್ರದೇಶದ ಸಣ್ಣ ಸ್ಕಿಯಿಂಗ್ ನಕ್ಷೆ ಹೀಗಿದೆ. ಇಂಥಹ ಅನೇಕ ನಕ್ಷೆಗಳಿಂದ ಈ ಜಾಗ ೨೦೦ ಕಿ ಮಿ ಗಳನ್ನೂ ಆವರಿಸಿದೆ. ಆದರೆ ನಾವು ಸ್ಕಿಯಿಂಗ್ ಮಾಡಿದ್ದು ಮಾತ್ರ ೩೦ ಕಿ ಮಿ ಗಳು ಮಾತ್ರ.
ಅಂತಹ ಹಿಮಗಳ ಸ್ವರ್ಗವೇ ಸೇಲನ್ ಎಂಬ ಪ್ರದೇಶ. ಅಂತರಾಷ್ಟ್ರೀಯ ಪ್ರವಾಸೀ ತಾಣವೂ ಹೌದು. ದೇಶ ವಿದೇಶಗಳಿಂದ ಜನ ಸ್ಕಿಯಿಂಗ್ ಮಾಡಲು ಇಲ್ಲಿಗೆ ಬರುತ್ತಾರೆ. ಸೇಲನ್ ಎಂಬುದು Gothenburgನಿಂದ ೫೦೦ ಕಿ ಮಿ ಉತ್ತರದಲ್ಲಿದೆ. Gothenburg ನಾವಿರುವ ಸ್ಥಳ. ಇಲ್ಲಿಂದ ಬಸ್ ಹಿಡಿದು ಹೊರಟರೆ ೮ ಗಂಟೆಗಳ ಪ್ರಯಾಣ. ದಾರಿಯುದ್ದಕ್ಕೂ ಸದಾ ಬಿಳಿ ಬಿಳಿ ಹಿಮ ರಾಶಿ. ಬಸ್ ನಲ್ಲಿ ಎಲ್ಲರೂ ಸ್ವೀಡಿಶ್ ಗಳೇ ತುಂಬಿದ್ದರು. ನಮ್ಮನ್ನು ಕರೆದ ಸ್ವೀಡಿಶ್ ದಂಪತಿಗಳು ನಮಗಿಂತ ಒಂದು ವಾರ ಮುಂಚೆಯೇ ಸ್ಕಿಯಿಂಗ್ ಮಾಡಲು ಹೋಗಿದ್ದರು. ಪ್ರತಿ ವರ್ಷವೂ ೧೫ ದಿನ ಅಲ್ಲಿ ಹೋಗಿ ಸ್ಕಿಯಿಂಗ್ ಮಾಡುವುದು ಅವರ ಹವ್ಯಾಸವಂತೆ.
ಇವಿಷ್ಟು ಸ್ಕಿಯಿಂಗ್ ಆಡುವ ಜಾಗದ ಬಗ್ಗೆ ಮಾಹಿತಿ. ಮುಂದಿನ ವಾರ ಅಲ್ಲಿನ ಚಿತ್ರ ವಿಚಿತ್ರ ಅನುಭವಗಳನ್ನು ಸಚಿತ್ರದೊಂದಿಗೆ ವರ್ಣಿಸುತ್ತೇನೆ. ಒಂದೇ ದಿನ ಎಲ್ಲವನ್ನೂ ತಿಂದರೆ ಅಜೀರ್ಣವಲ್ಲವೇ ?.
ನಿಮ್ಮನುಮತಿಯೊಂದಿಗೆ ಮುಂದಿನ ವಾರ ಸಿಗುತ್ತೇನೆ,
ಮುಂದುವರಿಯುತ್ತದೆ.....