Thursday, March 22, 2012
Friday, January 20, 2012
ಈ ಸಡಗರ ಎಲ್ಲವೂ ನನಗಾಗಿ, ನಾನೇ ಇಲ್ಲದಿದ್ದರೆ?????
ಅಂದು ನನ್ನ ಎರಡನೇ ವಧು ಪರೀಕ್ಷೆ. ವರನ ಮುಖದಲ್ಲಿ ಪ್ರಪಂಚವನ್ನೇ ಗೆದ್ದ ಅಲೆಗ್ಸಾಂಡರನ ಸಂತಸ. ಆತ ನನ್ನನ್ನು ಮದುವೆಯಾಗಲು ಬಂದಿದ್ದಾನೋ ಅಥವಾ ನನ್ನ ಸ್ವಾತಂತ್ರ್ಯ ಹರಣಕ್ಕೆ ಟೊಂಕ ಕಟ್ಟಿದ್ದಾನೋ ಇಂದಿಗೂ ತಿಳಿಯಲೇ ಇಲ್ಲ. ಮನೆಯಲ್ಲಿ ಸಂಭ್ರಮದ ವಾತಾವರಣ.
ಸಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಕೋಣ ಬಲಿ ನಡೆಯುತ್ತಿದ್ದಾಗ ಸಮಸ್ತ ಜನತೆಗೆ ಸಂಭ್ರಮದ ವಾತಾವರಣವಂತೆ, ಆದರೆ ಕೋಣಕ್ಕೆ...............
ಇಲ್ಲಿ ನಾನೂ ಕೂಡಾ ಹರಕೆಯ ಕುರಿ ಯಂತೆ ಎಂದು ಅನ್ನಿಸುತ್ತಿತ್ತು. ಈ ಸಂಭ್ರಮ, ಈ ಸಂತೋಷ, ಈ ಸಡಗರ ಎಲ್ಲವೂ ನನಗಾಗಿ, ನಾನೇ ಇಲ್ಲದಿದ್ದರೆ????? ಇಂಥಹ ಹುಚ್ಚು ಮನಸ್ಸಿನ ಹತ್ತು ಮುಖಗಳು ನನಗಿವೆ ಆದರೆ ಅವೆಲ್ಲ ಕ್ಷಣ ಮಾತ್ರ. ಆದರೆ ಅಮ್ಮನ ಸಂಭ್ರಮ ಮಾತ್ರ ಇಂದಿಗೂ ಮರೆಯಲಾರದ ಕ್ಷಣ. ಅವಳು ಅಂದು ಸಂತೋಷದ ಖನಿ ಆಗಿದ್ದಳು.
ಬಹುಷ: ನನಗೆ ಜೀವ ಇರದೆ ಇದ್ದಿದ್ದರೆ ಅಂದೇ ನನ್ನ ಮದುವೆಯ ಜೊತೆಗೆ ಬಾಳಂತನ ವನ್ನು ಮುಗಿಸಿಬಿಡುತ್ತಿದ್ದರೇನೋ????
ಅಂಥಹ ತರಾ ತುರಿ ಅಲ್ಲಿ ಕಾಣುತ್ತಿತ್ತು.
ಮದುವೆ ಯಾಕೆ ಬೇಕು ಎಂಬುವುದರ ಬಗೆಗೆ ಇಂದಿಗೂ ಸರಿ ಉತ್ತರ ನನಗೆ ಯಾರಿಂದಲೂ ಸಿಗಲಿಲ್ಲ . ಆಮ್ಮನಿಗೆ ಅದೊಂದು ಪದ್ದತಿ. ಅಪ್ಪನಿಗೆ ಅದೊಂದು ಕಾಲಕ್ಕೆ ತಕ್ಕಂತೆ ನಡೆಯಲೇಬೇಕಾದ ಕ್ರಿಯೆ. ಇನ್ನು ಮದುವೆಯಾದ ಗೆಳೆಯ ಗೆಳತಿಯರಿಗೆ ಅರ್ಥವೇ ಗೊತ್ತಿರದ ಒಂದು ಹನಿಮೂನ್ ಪ್ರಯಾಣ. ಪೆಟ್ರೋಲ್ ಇರುವ ತನಕ ಓಡುವ ಬಸ್ ಪ್ರಯಾಣ. ಅಜ್ಜನಿಗೆ ಅದೊಂದು ಜವಬ್ದಾರಿ ತರುತ್ತದೆ ಎಂಬುವ ನಂಬಿಕೆ. ಇನ್ನು ಅಜ್ಜಿಗೆ ಜವಾಬ್ದಾರಿ ಕಳೆದುಕೊಂಡ ಸಮಾಧಾನ. ಮನೆಯಲ್ಲಿ ಕಿರಿಯ ತಂಗಿ ಇದ್ದರೆ, ಅವಳಿಗೆ ಅಕ್ಕನ ಮದುವೆ ಬೇಗ ಆದರೆ ಮುಂದಿನ ತಯಾರಿ ತನ್ನದೇ ಎಂಬ ಅವ್ಯಕ್ತ ಸುಖ. ಒಟ್ಟಿನಲ್ಲಿ ಮದುವೆ ಯ ನಿಜವಾದ ಅವಶ್ಯಕತೆಯ ಬಗೆಗೆ ಎಲ್ಲಿಯೂ ಸಮರ್ಪಕ ನಿಲುವುಗಳು ಕಂಡಿಲ್ಲ.
ಯಾವುದೋ ಕಾಲದಲ್ಲಿ ಶ್ರಾದ್ದದ ದಿನ ಮನೆಯ ಬೆಕ್ಕು ಗಲಾಟೆ ಮಾಡುತ್ತಿತ್ತಂತೆ. ಅದನ್ನು ಬುಟ್ಟಿಯಲ್ಲಿ ಮುಚ್ಚಿಡುತ್ತಿದ್ದರಂತೆ. ತದ ನಂತರ ಅದೆಷ್ಟೋ ತಲೆಮಾರು ನಂತರವೂ ಬೆಕ್ಕು ಮನೆಯಲ್ಲಿ ಇಲ್ಲದಿದ್ದರೂ ಪಕ್ಕದ ಮನೆಯಿಂದ ತಂದು ಶ್ರಾದ್ದ ದ ದಿನ ಮುಚ್ಚಿ ಇಡುತ್ತಿದ್ದರಂತೆ. ಅಲ್ಲಿ ಬೆಕ್ಕು ಯಾಕೆ ಬೇಕು ಎಂಬುವುದು ಯಾರಿಗೂ ಬೇಕಿರಲಿಲ್ಲ ಮತ್ತು ತಿಳಿಯುವ ವ್ಯವಧಾನವೂ ಇರಲಿಲ್ಲ, ಆದರೆ ಒಂದಂತೂ ನಿಜ, ದೊಡ್ಡವರ ಮಾತಿಗೆ ಎದುರಾಡದೇ ಹೇಳಿದ್ದನ್ನು ಮಾಡುವ ಮನಸ್ಸು ಹಿಂದಿನವರಿಗೆ ಇತ್ತು. ಸಂಪ್ರದಾಯ ದ ನೆರಳಿನಲ್ಲಿ ಮೂಢನಂಬಿಕೆ ಜಾಡ್ಯ ಅವರಲ್ಲಿ ಅಂಟಿ ಕೊಂಡಿತ್ತು. ನಾನು ಆ ಜಾತಿಯವಳಲ್ಲ. ನನಗೆ ಅವಶ್ಯಕತೆಯಿಲ್ಲದೆ ಯಾವ ಬೆಕ್ಕು ಇರುವುದು ಬೇಕಿಲ್ಲ.
ಅಮ್ಮ ನಿಗೆ ನನಗೆ ಇದೇ ದ್ವಂದ್ವ ದ ಬಗೆಗೆ ಸಿಕ್ಕಪಟ್ಟೆ ಜಗಳವಾಗಿ ಅಮ್ಮ ಕಣ್ಣೀರು ಹರಿಸಿದಾಗ (ಅದು ಅವಳ ಭ್ರಮ್ಹಾಸ್ತ್ರವೂ ಹೌದು) ನಾನೇ ಮಾತಿಗೆ ಮಾತು ಬೆಳಸದೇ ಮೌನಕ್ಕೆ ಶರಣಾಗಿ ಬಂದಿದ್ದೇನೆ.
ಆ ದಿನ ಮದುಮಗ ನಿಗೆ ನನ್ನ ಪ್ರತಿಭೆಗಿಂತ ಮುಖ್ಯವಾಗಿ ನನ್ನ ಸೌಂದರ್ಯ ಬೇಕಾಗಿತ್ತು. ಸೀರೆ ಉಟ್ಟು ಹಣೆಗೆ ಕುಂಕುಮ ಇಟ್ಟು ಪಕ್ಕಾ ದೇವಿ ಜಾತ್ರೆಯಲ್ಲಿ ಕಾಣುವ ದೇವಿಯ ನೋಡಲು ಆತ ಕಾತರನಾಗಿದ್ದ. ಅಂತೂ ಅಮ್ಮನ ಮಾತಿಗೆ ಎದುರಾಡದೇ ಒಲ್ಲದ ಮನಸ್ಸಿನಿಂದ ಸೀರೆ ಉಟ್ಟು
ಕಾಫಿ ಹಿಡಿದು ಕೊಂಡು ಬಂದು ಎಲ್ಲರಿಗೂ ಕೊಟ್ಟೆ. ಅವನ ಕಣ್ಣುಗಳು ನನ್ನೇ ನೋಡುತ್ತಿದ್ದವೋ ಇಲ್ಲ ತಿನ್ನುತ್ತಿದ್ದವೋ ನಾ ಕಾಣೆ. ಆದರೆ ಇದೊಂದು ಅಸಹನೀಯ ಕ್ಷಣ ಮಾತ್ರ ಹೌದು. ಎಲ್ಲ ಮಾತುಕತೆಗಳು ಮುಗಿದ ಮೇಲೆ ವರ ಮಹಾಶಯ ನಿಗೆ ನನ್ನೊಂದಿಗೆ ಮಾತನಾಡುವ ತವಕ. ಅಂತೂ ಇನ್ನೊಂದು ಪ್ರಶ್ನೆ ಪತ್ರಿಕೆ ಸಿದ್ದವಾಗಿತ್ತು, ಉತ್ತರ ಪತ್ರಿಕೆ ಕಾಯುತ್ತಿತ್ತು. ಬರೆಯುವ ಕೆಲಸ ನನ್ನದಾಗಿತ್ತು ಅಷ್ಟೆ.......
ಆ ದಿನ ಇನ್ನೂ ನೆನಪಿದೆ, ಆತ ಕೇಳಿದ್ದಾದರೂ ಏನು? ನೀವೆ ಓದಿ ನಮ್ಮಿಬ್ಬರ ನಡುವಿನ ಶಾಂತಿ (ಅಲ್ಲಲ್ಲ ವಾಂತಿ) ಮಾತುಕತೆ.....
ಆದರೆ ಆ ದಿನದ ಮಾತುಕತೆ ಆರಂಬಿಸಿದ್ದು ಮಾತ್ರ ನಾನೆ....
ವಧು : ನಿಮಗೆ ಯಾವ ತರದ ಹುಡುಗಿ ಬೇಕು ಎನ್ನುವುದನ್ನು ನೇರವಾಗಿ ಹೇಳಿದರೆ ಅನುಕೂಲ. ಸುಮ್ಮನೆ ಸುತ್ತಿ ಬಳಸಿ ಮಾತನಾಡಿ ಇಬ್ಬರ ಸಮಯವೂ ವ್ಯರ್ಥ ಮಾಡುವುದು ಬೇಡಾ...... (ಹುಡುಗ ತಬ್ಬಿಬ್ಬು, ಬಾಣದಂತೆ ಬಂದ ಮಾತಿಗೆ ಉತ್ತರವಿಲ್ಲದೆ ಒದ್ದಾಡಿದಂತೆ ತೋರಿತು)
ವರ : ನಿಮ್ಮ ನೇರ ಮಾತು ಹಿಡಿಸಿತು (ಬೇರೆ ದಾರಿ ಇಲ್ಲ ಹಾಗೆ ಹೇಳದೆ :) ), ಆದರೆ ಕೆಲವೊಮ್ಮೆ ನೇರ ಮಾತುಗಳು ಒಳ್ಳೆಯದಲ್ಲ. ಸ್ವಲ್ಪ ಗೌರವ ಇದ್ದರೆ ಒಳ್ಳೆಯದಲ್ವೆ? ನಿಮ್ಮಂತೆ ನೇರ ಮಾತುಗಳನ್ನು ಆಡಲು ನನಗೂ ಬರತ್ತೆ. ಆದರೆ ವಿಷಯ ಆದಲ್ಲ, ಇಲ್ಲಿ ನಮ್ಮಿಬ್ಬರ ನಡುವಿನ ಅಹಮ್ ಗೆ ಸಮಯದ ಅಭಾವ ಇದೆ, ನಿಮ್ಮ ಮುಖದ ಮೇಲೆ ಎಷ್ಟು ಮುಗ್ಧತೆ ತೋರುತ್ತದೆಯೋ ಮಾತಿನಲ್ಲಿ ಅಷ್ಟೆ ಮೆಣಸಿದೆ. ಯಾಕೆ ಹೀಗೆ ನೀವು? ಮನಸ್ಸಿನಲ್ಲಿ ಏನಾದರೂ ನೋವಿದ್ದರೆ ಹೇಳಿ?????
ವಧು : (ಎಲ ಇವನಾ, ಬುಡಕ್ಕೆ ಕೈ ಹಾಕ್ತಾನಲ್ಲ, ನನ್ನ ನೋವನ್ನ ನಾನೇ ಅರ್ಥ ಮಾಡಿಕೊಂಡಿಲ್ಲ, ಇನ್ನು ನೀನು ಏನು ಮಾಡ್ಕೋಳೋದು) ನನ್ನ ಬಗ್ಗೆ ನಿಮ್ಮ ಕನಿಕರ ನೋಡಿ ಸಂತೋಷ ಆಯಿತು, ಆದರೆ ಇನ್ನೊಬ್ಬರ ಕನಿಕರ ದ ಭಿಕ್ಷೆ ನನಗೆ ಬೇಕಿಲ್ಲ. ನಾ ಹೇಗಿದ್ದೇನೋ ಹಾಗೆ ಸ್ವೀಕರಿಸಿದರೆ ಸದಾ ನಗೆಯ ಖನಿ ನಾನು, ಇಲ್ಲದಿರೆ ಬಾಗಿಲು ತೆರೆದಿದೆ, ಅಥಿತಿ ಹೋಗಬಹುದು (ಸ್ವಲ್ಪ ಖಡಕ್ ಆದೆ ಎನ್ನಿಸುತ್ತಿತ್ತು).
ವರ: ನಿನ್ನಂತ ಹೆಣ್ಣನ್ನು ಕಟ್ಟಿಕೊಳ್ಳುವ ಅವಶ್ಯಕತೆ ನನಗೂ ಇಲ್ಲ. ಮದುವೆ ಎಂಬುದು ನಿನಗೆ ಆಟ ಆಗಿರಬಹುದು ಆದರೆ ನನಗಲ್ಲ. ನಿನಗೆ ಮದುವೆ ಆಗುವುದು ಕನಸೇ ಸರಿ..... ( ಏನು ಮಹಾ ಚಂದ್ರಶೇಖರ್ ಸ್ವಾಮೀಜಿಗಳ ಭವಿಷ್ಯ ಇವಂದು , ಸತ್ಯ ಆಗಿಬಿಡತ್ತೆ )
ಆದರೆ ಆ ಕ್ಷಣದಲ್ಲಿ ಆ ಭವಿಷ್ಯ ಸತ್ಯ ಆಗಲಿ ದೇವರೇ ಎಂದು ಪ್ರಾರ್ಥಿಸಿದ್ದು ಸುಳ್ಳಲ್ಲ.
ಅದೇ ಅಮ್ಮ ಮಗಳ ದ್ವಂದ್ವಕ್ಕೆ ನಾಂದಿ ಹಾಡಿದ ದಿನ. ಅಮ್ಮನಿಗೆ ಹೇಳಿದೆ, ”ನನ್ನ ಮದುವೆಯ ಬಗೆಗೆ ಕನಸು ಬೇಡಾ. ನನಗೆ ಮದುವೆ ಎನ್ನುವುದು ಅವಶ್ಯಕತೆ ಎನಿಸಿಲ್ಲ. ನೋಡಿದ ಎಲ್ಲ ವರಗಳಿಗೆ ಸೌಂದರ್ಯ ಪ್ರಜ್ನೆ ಇದೆಯೇ ಹೊರತೂ ಕಲೆಯ ಮೇಲೆ ಯಾವ ಅಕ್ಕರೆ ಇಲ್ಲ. ಅವರು ನನ್ನ ಕಲೆಯ ”ಕೊಲೆ” ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಬದುಕಿಗೆ ಗುರಿ ಬೇಕು, ಗುರಿಗೆ ಸಮಯ ಬೇಕು, ಇದೆರಡನ್ನು ಕಿತ್ತುಕೊಳ್ಳುವ ಮದುವೆಯ ಬಂಧನ ನನಗೆ ಬೇಕಿಲ್ಲ, ಈ ವಿಷಯದಲ್ಲಿ ನನ್ನ ನಿರ್ಣಯವೇ ಅಂತಿಮ”.
ಅಮ್ಮನ ಕಣ್ಣುಗಳಲ್ಲಿ ನೀರು ಸುರಿಯುವುದು ಕಾಣುತ್ತಿತ್ತು. ಆದರೆ ಅದೇ ಕಣ್ಣೀರಿಗೆ ನನ್ನನ್ನು ತೇಲಿಸಿ ಬಿಡುವ ಶಕ್ತಿ ಇದೆ ಎಂದು ಗೊತ್ತಿದ್ದೇ ಅಂದು ಆ ನಿರ್ಧಾರ ಮಾಡಿದ್ದೆ.
ಇನ್ನು ಮದುವೆ ನನಗೆ ಇಷ್ಟವಿಲ್ಲ ಎನ್ನುವುದರ ಬಗೆಗೆ ಅಮ್ಮ ನನ್ನ ನಡುವೆ ಮಿನಿ ಮಹಾಯುದ್ಧವೇ ನಡೆದಿದೆ. ಅದೊಂದು ಶೀತಲ ಸಮರ. ಅಮ್ಮನ ಸ್ಥಾನದಲ್ಲಿ ಅವಳು ಸರಿ, ಮಗಳ ಜಾಗದಲ್ಲಿ ನಾನು ಸರಿ, ಈ ದ್ವಂದ್ವಗಳ ಯುದ್ದವನ್ನು ಮುಂದಿನ ವಾರ ಮುಂದುವರೆಸುತ್ತೇನೆ. ಅಲ್ಲಿಯ ತನಕ ಕಾಯುತ್ತೀರಲ್ಲ.
Labels:
ಲೇಖನಗಳು
Saturday, January 7, 2012
ಅವಳಿಗೆ ಬದುಕು ಎಂದರೆ ಮದುವೆ, ಬಾಳು ಎಂದರೆ ಮಕ್ಕಳು:ನನಗೆ ಬದುಕು ಎಂದರೆ ಸಾಧನೆ, ಬಾಳು ಎಂದರೆ ಸಾಹಸ
ಸ್ನೇಹಿತರೆ....
ಗೊತ್ತಿಲ್ಲದೇ ''ಸಾಗರದಾಚೆಯ ಇಂಚರ'' ಕ್ಕೆ 4 ವರುಷಕ್ಕೆ ಕಾಲಿಟ್ಟ ಸಂಭ್ರಮ. ಕಳೆದ ವರ್ಷ ಬ್ಲಾಗ್ ಹೆಚ್ಚು ಬರೆಯಲು ಆಗಲಿಲ್ಲ. ಆದರೆ ಈ ವರ್ಷ ಮತ್ತದೇ ಉತ್ಸಾಹದೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ನಿಮ್ಮ ಪ್ರೀತಿ ಸದಾ ಇರಲಿ. ನಿಮ್ಮೆಲ್ಲರ ಬ್ಲಾಗ್ ಅನ್ನು ನಿಧಾನ ಓದುತ್ತಿದ್ದೇನೆ. ಅದಕ್ಕೆ ಕ್ಷಮೆ ಇರಲಿ. ಹೊಸ ವರುಷ ಸದಾ ಹರುಷ ತರಲಿ.
ಬದುಕಿಗೆ ಸಂಗಾತಿ ಬೇಕು ನಿಜ, ಆದರೆ ಸಂಗಾತಿ ಇಲ್ಲದ ಬದುಕು ''ಬದುಕಲ್ಲ'' ಎಂಬ ನಿಲುವಿಗೆ ನನ್ನ ವಿರೋಧವಿದೆ. ಅಮ್ಮನ ಮುದ್ದಿನ ಮಗಳಾದ ನನಗೆ ಅಮ್ಮನ ಮದುವೆಯ ಬಲವಂತ ಇಂದಿಗೂ ಅರ್ಥವಾಗದ ಒಂದು ಸಮೀಕರಣ. ಹರೆಯಕ್ಕೆ ಬಂದ ಮಗಳು ತಂದೆ ತಾಯಿಗಳ ಚಿಂತೆಯನ್ನು ಹೆಚ್ಚಿಸುತ್ತಾಳಂತೆ. ಅವಳ ಮದುವೆ ಮಾಡಿ ಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂಬ ಕಲ್ಪನೆ ಬಹುಶ ಎಲ್ಲ ಭಾರತೀಯ ತಂದೆ ತಾಯಿಗಳಲ್ಲೂ ಇರುತ್ತದೆ.
ಬದುಕು ಕೇವಲ 4 ಗೋಡೆಗಳ ಮಧ್ಯದ ಜೈಲಲ್ಲ ಎಂದು ನಾನು ಹೇಳಿದರೆ ಅದನ್ನು ''ಉಡಾಫೆ'' ಎಂದು ತಿರಸ್ಕರಿಸುವ ಅಥವಾ ತಿರಸ್ಕರಿಸುವಂತೆ ಮಾಡುವ ಅದೆಷ್ಟೋ ನನ್ನ ಸುತ್ತ ಮುತ್ತಲಿನ ಸಮಾಜಿಗರಿಗೆ ಬದುಕೆಂದರೆ ಬಾವಿಯೊಳಗಿನ ಕಪ್ಪೆಯಂತೆ. ಅವರು ನಡೆಸಿದ್ದೆ ಬದುಕು, ಹೇಳಿದ್ದೇ ವೇದ ವಾಕ್ಯ.
ನಾನಾಗ ಚಿಕ್ಕವಳಿದ್ದೆ. ಆಗ ಕಲಿಯುವುದೊಂದು ಬಿಟ್ಟು ಇನ್ನೇನು ನನಗೆ ಗೊತ್ತಿರಲಿಲ್ಲ ಅಥವಾ ಬೇಕಿರಲೂ ಇಲ್ಲ. ಜೊತೆಗೆ ಭರತನಾಟ್ಯದ ಹುಚ್ಚು. ಸದಾ ಮನಸ್ಸಿನಲ್ಲಿ ರಾಗಗಳೊಂದಿಗೆ ಪ್ರಯಾಣ ಮಾಡುತ್ತಾ ಕಾಲ್ಗೆಜ್ಜೆಗಳ ನಾದಕ್ಕೆ ತಾಳಗಳನ್ನು ಜೋಡಿಸುತ್ತ ನನ್ನೊಂದಿಗೆ ನಾನು ಬದುಕಿನ ಸಂತೋಷದ ತೇರನ್ನು ಎಳೆಯುತ್ತ ಇದ್ದೆ. ಮುದ್ದು ಮಾಡುವ ಅಮ್ಮ, ತಿದ್ದಿ ತೀಡುವ ಅಪ್ಪ, ಗುದ್ದಿ ತಿದ್ದುವ ಗುರು, ಇವರೆಲ್ಲ ಇರುವಾಗ ನನಗೆ ಯಾವ ಚಿಂತೆಯೂ ಇರಲಿಲ್ಲ. ಮುಂದಿನ ಬದುಕು ಬಹುಶ: ಸಂತೋಷದ ಸಾಗರ ಎಂದು ಅಂದೇ ಎಣಿಸಿದ್ದೆ.
ಕಾಲ ಯಾರಿಗೂ ನಿಲ್ಲಲ್ಲ. ಅಂತೆಯೇ ನನಗೋಸ್ಕರ ನಿಲ್ಲಲಿಲ್ಲ. ಶಿಕ್ಷಣದ ಜೊತೆ, ಭರತನಾಟ್ಯ, ಜೊತೆ ಜೊತೆಗೆ ಸಾಗುತ್ತಿತ್ತು. ಭರತನಾಟ್ಯ ಮುಗಿದಮೇಲೆ ಪಾಠ, ಪಾಠ ದ ನಂತರ ಭರತನಾಟ್ಯ, ಹೀಗೆ ''ನೀನಿದ್ದರೆ ನಾನು, ನಾನಿದ್ದರೆ ನೀನು'' ಎಂಬಂತೆ ನಡೆಯುತ್ತಿತ್ತು.
ಹೆಣ್ಣು ''ಸಂಗೀತ ಕಲಿಯಬೇಕು'' ''ನೃತ್ಯ ಕಲಿಯಬೇಕು'' ''ಹೆಚ್ಚಿನ ಶಿಕ್ಷಣ ಕಲಿಯಬೇಕು''ಆದರೆ ಅವಳು ಅದರಲ್ಲೇ ಸಾಧನೆ ಮಾಡಬಾರದು ಎಂಬ ನಿಲುವು ಎಷ್ಟು ಸರಿ? ಹೆಣ್ಣಿಗೆ
ನೃತ್ಯ , ಸಂಗೀತ ಕೇವಲ ಚಿಕ್ಕವರಿದ್ದಾಗ ಮಾತ್ರ ಕಲಿಯಬೇಕು ಎಂಬ ನಿಲುವು ಭಾರತದ ಅದೆಷ್ಟೋ ತಂದೆ ತಾಯಿಗಳ ಅಭಿಪ್ರಾಯ. ಅವಳು ಬೆಳೆದಂತೆ ಇದನ್ನೆಲ್ಲಾ ಬಿಟ್ಟು ಲಕ್ಷಣವಾಗಿ ಅಡಿಗೆ ಮಾಡಿ ಮದುವೆಯಾಗಿ, 4 ಮಕ್ಕಳನ್ನು ಹೆತ್ತು ಅವರನ್ನು ನೋಡಿಕೊಳ್ಳಬೇಕು. ಬಂಗಾರದಂತ ಸಂಸಾರ ಅವಳದಾಗಬೇಕು, ಎಂಬ ನಿಲುವುಗಳೇ ಭಾರತೀಯ ನಾರಿ ಮನೆಯನ್ನು ಬಿಟ್ಟು ಹೊರಗೆ ಬರದಂತೆ ಎಷ್ಟೋ ಬಾರಿ ಕಟ್ಟಿ ಹಾಕುತ್ತವೆ. ಆ ವಿಷಯದಲ್ಲಿ ನಾನು ಅದೃಷ್ಟವಂತೆ. ನನ್ನ ಶಿಕ್ಷಣಕ್ಕಾಗಲಿ, ಅಥವಾ ಸಂಗೀತ,
ನೃತ್ಯಕ್ಕಾಗಲಿ ಯಾರೂ ಅಡ್ಡಿ ಬರಲಿಲ್ಲ. ಒಳ್ಳೆಯ ಅಂಕಗಳನ್ನು ಪಡೆದು Prestigeous ಕಂಪನಿಯಲ್ಲಿ ದೊಡ್ಡ ಹುದ್ದೆ ಪಡೆದುಕೊಂಡಾಗ ಮನಸ್ಸಿಗೆ ಆದ ಸಂತೋಷ ಹೇಳಲಸದಳ.
ಆದರೆ ಅದಾಗಲೇ ನಮ್ಮೂರ ಜನರಿಗೆ, ನಮ್ಮ ಹೆತ್ತವರಿಗೆ ನಾನು ''ಬೆಳೆದ ಮಗಳು'' ಅಂದರೆ ''ಮದುವೆಗೆ ಬಂದ ಮಗಳು''
ಶುರುವಾಯಿತು ನೋಡಿ, ಜನ ಮರುಳೋ, ಜಾತ್ರೆ ಮರುಳೋ. ಹುಡುಗನ ಹುಡುಕುವ ಸಾಹಸ. ಒಂದೆರಡು ವಧು ಪರೀಕ್ಷೆಯೂ ಆಯಿತು. ಏನಂತಿರಾ, ಅದನ್ನ, ನಾನು ಮೊದಲೇ ಸ್ವಲ್ಪ ಸೀರಿಯಸ್ ಮನುಷ್ಯ, ಅದನ್ನ ಆ ಪ್ರಾಣಿ ಹೇಗೋ ತಿಳಿದುಕೊಂಡಿದೆ. ಅವನ ಪ್ರಶ್ನೆಯ ವೈಖರಿಯ ಸ್ಯಾಂಪಲ್ ನಿಮ್ಮ ಮುಂದೆ,
ವಧು ಪರೀಕ್ಷೆ ೧: ಪರೀಕ್ಷಾ ಕೊಠಡಿ.
ವರ : ಹೇಗಿದ್ದಿರಾ,
ವಧು: ಚೆನ್ನಾಗಿದ್ದೀನಿ (ಇನ್ನೇನು ನಿಮ್ಮ ನೋಡಿದ ಮೇಲೆ ಹುಷಾರು ತಪ್ಪಿ ಹೋಗೋ ಲಕ್ಷಣ ಇದೆ )
ವರ: ನಾನು ಚೆನ್ನಾಗಿದ್ದೀನಿ
ವಧು : (ನಾನೇನು ಕೇಳಿದನ ನಿಮ್ಮ)
ವರ: ಏನು ಓದ್ಕೊಂಡಿದಿರಾ? ನೀವು ತುಂಬಾ ಮೂಡಿ ಅಂತೆ, ಹೆಚ್ಚು ಯಾರತ್ರನು ಮಾತಾಡಲ್ಲ ಅಂತೆ, ಒಳ್ಳೆ ಡಾನ್ಸ್ ಮಾಡ್ತಿರಂತೆ? ಹಾಡು ಬರತ್ತೆ ಅಂತನು ಕೇಳಿದೆ, ಹೌದ?
ವಧು: ಪರವಾಗಿಲ್ಲ, homework ಚೆನ್ನಾಗಿ ಮಾಡಿ ಬಂದಿದಿರಾ, ನೀವು ಕೇಳಿರೋದು ಎಲ್ಲ ನಿಜ. ನಾನು ಹಾಗೆಲ್ಲ ಸುಮ್ಮ ಸುಮ್ಮನೆ ಮಾತಾಡೋಕೆ ಹೋಗಲ್ಲ. ವಿಷಯ ಇದ್ರೆ ಮಾತಾಡ್ತೀನಿ, ಇಲ್ಲ ಅಂದ್ರೆ ಆಫೀಸ್ ಕೆಲಸ ಇದ್ದೆ ಇದೆ. ನನಗೆ ಸುಮ್ಮನೆ ಹರಟೆ ಹೊಡೆಯೋಕೆ ಇಷ್ಟ ಇಲ್ಲ.
ವರ: Same Here ನಾನು ಹಾಗೇನೆ . ನನಗೆ ಸೀರಿಯಸ್ ಮನುಷ್ಯರು ಅಂದ್ರೆ ತುಂಬಾ ಇಷ್ಟ. ಯಾರಿಗೆ ಬೇಕು ಹರಟೆ ಹೇಳಿ, ಟೈಮ್ ಎಲ್ಲಿದೆ ಅದನ್ನೆಲ್ಲ ಮಾಡೋಕೆ
ವಧು:(ಈಗ ತಾವು ಮಾಡ್ತಾ ಇರೋದು ಅದನ್ನೇ ಅಲ್ಲವೇ)
ವರ: ನಿಮಗೆ ಅಡಿಗೆ ಮಾಡೋಕೆ ಬರತ್ತಾ? ನಾನು ತುಂಬಾ ಸಂಬಳ ತಗೋತೀನಿ, ನನಗೆ ನೀವು ಕೆಲಸ ಮಾಡೋದು ಇಷ್ಟ ಇಲ್ಲ. ಮನೇಲಿ ಎಲ್ಲಾನು ಇದೆ. ಆರಾಮಾಗಿ ಮನೇಲೆ ಇದ್ದು ಬಿಡಿ. ಕೆಲಸದವರು ಇದ್ದಾರೆ. ನೀವು ಏನು ಮಾಡೋದು ಬೇಡ. ಬೇಜಾರಾದರೆ ಮನೇಲೆ ಡಾನ್ಸ್ ಮಾಡಿ. ಆದ್ರೆ ಹೊರಗಡೆ ಪ್ರೋಗ್ರಾಮ್ ಕೊಡೋದು ಬೇಡ ಯಾಕಂದ್ರೆ ನಂದು ಸ್ಟೇಟಸ್ ಹಾಳಾಗತ್ತೆ, ನನ್ನ ಹೆಂಡ್ತಿ ಡಾನ್ಸ್ ಮಾಡ್ತಾಳೆ ಅಂತ ಕೇಳಿದ್ರೆ. ನೀವು ಹೇಗೆ ಬೇಕಾದ್ರೂ ಇರಿ, ನನದೇನೂ ಅಭ್ಯಂತರ ಇಲ್ಲ, ಒಟ್ಟಿನಲ್ಲಿ ನೀವು ಸುಖವಾಗಿ ಇರಬೇಕು ಅಷ್ಟೇ..
ವಧು : (ನಿಮ್ಮಜ್ಜಿ, ಎಲ್ಲಿ ಸುಖ, ಇಷ್ಟೊಂದು ಬಂಧನದಲ್ಲಿ ನನ್ನ ಇಟ್ಟು, ಸುಖವಾಗಿರು ಅಂತಿರಲ್ಲ)
ವರ: ಸರಿ ಹಾಗಾದ್ರೆ, ಮದುವೆ ಬಗ್ಗೆ ನಿಮ್ಮ ತಂದೆ ತಾಯಿ ಹತ್ರ ಮಾತಾಡ್ತೀನಿ, ನನ್ನ ನಂಬರ್ ತಗೋಳಿ, ಕಾಲ್ ಮಾಡ್ತಾ ಇರಿ ಆಯ್ತಾ..
ವಧು: ಸರಿ, ನೀವು ಕಾಲ್ ಗೆ ಕಾಯ್ತಾ ಇರಿ ಆಯ್ತಾ ;;;;;;
ಇದು ನನ್ನ ಮೊದಲ ವಧು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಕೂಡಾ. ನನ್ನ ಅಭಿಪ್ರಾಯಕ್ಕೆ ಎಳ್ಳೆಣ್ಣೆ ಯಾ ಬೆಲೆಯೂ ಇಲ್ಲದ ಮದುವೆ ಬೇಕಾ? ಎಂದು ಮೊದಲ ಬಾರಿಗೆ ಅನ್ನಿಸಿದ್ದು ಅಂದೇ. ಈ ಬದುಕು ತಂದೆ ತಾಯಿಗಳ ಕ್ರಪೆ. ಆದರೆ ಬದುಕಿನ ಸಂಪೂರ್ಣ ಹಕ್ಕು ನನ್ನದಲ್ಲವೇ? ನನ್ನ ಬದುಕಿನ ನಿರ್ಧಾರ ಊರಿನ 4-6 ಜನ ನಿರ್ಧರಿಸುತ್ತಿದ್ದಾರೆ ಎಂದಾದರೆ ನಾನ್ಯಾರು? ನನ್ನ ಸ್ವಂತಿಕೆ ಏನು? ಇದೂ ಒಂದು ಬದುಕೇ? ಇನ್ನೊಬ್ಬರ ಹಂಗಿನ ಸ್ವಾತಂತ್ರವೇ ಇಲ್ಲದ ಬದುಕಿನ ಬಗ್ಗೆ ಬಹಳಷ್ಟು ವಿಚಾರಗಳು ಅಂದು ತಲೆಯಲ್ಲಿ ಸುಳಿದು ಹೋದವು.
ಮನೆಯಲ್ಲಿ ಅಂದೇ ಹೇಳಿದೆ, ನನಗೆ ಮದುವೆ ಬೇಡ ಎಂದು. ಅಂದಿನಿಂದ ಆರಂಭವಾಯಿತು ಅಮ್ಮನ ಉಪವಾಸ ಸತ್ಯಾಗ್ರಹ, ಅದೆಲ್ಲೋ ಉತ್ತರ ಭಾರತದಲ್ಲಿ ನೀರಿಲ್ಲದೆ ಜನ ಸಾಯುತ್ತಿದ್ದಾರೆ ಎಂದು ಓದಿದ್ದೆ. ಅಂದೆನಾದರೂ ನಮ್ಮ ಮನೆಯಿಂದ ಒಂದು ಪೈಪ್ ನಲ್ಲಿ ಕಣ್ಣೀರನ್ನು ಉತ್ತರ ಭಾರತಕ್ಕೆ ಕಳಿಸಿದ್ದರೆ ಅದೆಷ್ಟೋ ಜನ ಬದುಕಿಕೊಳ್ಳುತ್ತಿದ್ದರು. ಅಮ್ಮನ ಕಣ್ಣೀರಿನ ಪವರ್ ಹಾಗಿತ್ತು. ಅತ್ತು ಅತ್ತು ಅವಳ ಕಣ್ಣು ಕೆಂಪಾಗಿತ್ತು.
ಅಮ್ಮನಿಗೆ ಮದುವೆ ಎನ್ನುವುದು ಒಂದು ಅನಿವಾರ್ಯ ಅಷ್ಟೇ ಅಲ್ಲ ಅದೊಂದು ಸಂಪ್ರದಾಯ. ನನಗೆ ಮದುವೆ ಎನ್ನುವುದು ಬಂಧನ.ಹಾರುವ ಹಕ್ಕಿಗೆ ಚಿನ್ನದ ಪಂಜರದಲ್ಲಿ ಕೂಡಿಸಿ ಪಂಚ ಭಕ್ಷ ಪರಮಾನ್ನ ನೀಡಿದರೂ ಅದಕ್ಕೆ ಹಾರುವಿಕೆಯಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ಎಲ್ಲಿಯೂ ಸಿಗದು.ಆದರೆ ಸಂಪ್ರದಾಯದ ನೆರಳಲ್ಲಿ ಬೆಳೆದ ಅಮ್ಮನಿಗೆ ಇದನ್ನು ಅರ್ಥ ಮಾಡಿಸಲು ಸಾದ್ಯವಿಲ್ಲ.
ಅವಳಿಗೆ ಬದುಕು ಎಂದರೆ ಮದುವೆ, ಬಾಳು ಎಂದರೆ ಮಕ್ಕಳು.
ನನಗೆ ಬದುಕು ಎಂದರೆ ಸಾಧನೆ, ಬಾಳು ಎಂದರೆ ಸಾಹಸ
ಅವಳು ಬದುಕಿಗೆ ಹೆದರಿ ಬಾಳನ್ನು ಒಪ್ಪಿ ಕೊಂದವಳು (ಅಲ್ಲಲ್ಲ ಒಪ್ಪಿ ಕೊಂಡವಳು)
ನಾನು ಬದುಕಿಗೆ ಸವಾಲಾಗಿ ನಿಂತು ಬಾಳನ್ನು ಅಪ್ಪುವವಳು
ಇಬ್ಬರ ಮನಸ್ಸಿನ ದ್ವಂದ್ವ ಇಬ್ಬರಿಗೂ ಅರ್ಥ ಆಗದು
ಮತ್ತೆ ಮುಂದಿನ ವಾರ ಸಿಗುತ್ತೇನೆ, ಕಥೆ ಇನ್ನೂ ಇದೆ....
Labels:
ಲೇಖನಗಳು
Subscribe to:
Posts (Atom)