ಆತ್ಮೀಯ ಕನ್ನಡಿಗರೇ,
ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಕನ್ನಡ ಉಸಿರಾಗಲಿ, ಕನ್ನಡ ಬದುಕಾಗಲಿ, ಕನ್ನಡ ಜೀವನವಾಗಲಿ
ಸಿರಿಗನ್ನಡಂ ಗೆಲ್ಗೆ
Sunday, October 31, 2010
Thursday, October 14, 2010
ಬಚ್ಚಿಡದೆ ಬಿಚ್ಚಿಟ್ಟಿಹೆ..
ಪ್ರೀತಿ ಎಲ್ಲಿ ಯಾವಾಗ ಹುಟ್ಟುತ್ತದೋ ಬಲ್ಲವರು ಯಾರು. ಹರೆಯದ ಮನಸುಗಳ ಮುಗ್ಧ ಪ್ರೀತಿ, ಬದುಕಿನ ಸುಂದರ ಕ್ಷಣಗಳಲ್ಲೊಂದು. ಇಲ್ಲಿ ಪ್ರೇಮಿಕೆಯ ಪ್ರೇಮದಲ್ಲಿ ಶರಣಾದ ಪ್ರೇಮಿ, ತನ್ನ ಪ್ರಿಯತಮೆಯ ಸೌಂದರ್ಯದ ಅನಾವರಣ ಮಾಡುತ್ತಿದ್ದಾನೆ. ಆತ ಅವಳನ್ನು ಹೊಗಳುತ್ತಿಲ್ಲ ಬದಲಿಗೆ ಅವಳ ಸ್ನಿಗ್ಧ ಸೌಂದರ್ಯಕೆ ಸಾಕ್ಷಿಯಾಗುತ್ತಿದ್ದಾನೆ. ಆತನಿಗೆ ಅವಳ ಸೌಜನ್ಯ, ಸಲ್ಲಾಪ, ಸವಿಗನಸು ಕಾಣುವಂತೆ ಮಾಡಿದೆ. ಪ್ರೇಮದ ಮತ್ತಿನಲ್ಲಿ ಬಾಯಾರಿಕೆ ಆಗಿದೆ. ಇದಕ್ಕೆ ನೀರು ಪರಿಹಾರವಲ್ಲ. ಪ್ರೇಮಿಕೆಯ ಅಧರದ ಪಾನಕ್ಕೆ ಆತ ಕಾದಿದ್ದಾನೆ. ಅದೊಂದು ನಿಷ್ಕಲ್ಮಶ: ಪ್ರೀತಿ. ಕಾಮಕ್ಕೆ ಅಲ್ಲಿ ಜಾಗವೇ ಇಲ್ಲ. ತನ್ನ ಬದುಕಿನ ಎಲ್ಲ ಸತ್ಯಗಳನ್ನು, ರಹಸ್ಯಗಳನ್ನು ಬಚ್ಚಿಡದೆ ಆತ ಬಿಚ್ಚಿಟ್ಟಿದ್ದಾನೆ. ದೂರದಲ್ಲೆಲ್ಲೋ ಮಾಮರದಲಿ ಆತನಿಗೆ ಕೋಗಿಲೆಗಳ ಸದ್ದು ಕೇಳುತ್ತಿದೆ. ಹೌದು, ಸಂಗಾತಿಯ ಸಂಪ್ರೀತಿಗೆ ವಸಂತ ಕಾಲ ಸಜ್ಜಾಗಿದೆ. ಆ ಮೋಹಕ ಘಳಿಗೆಗೆ ಆಕೆಯ ಸೆಳೆಯಲು ಮದನನ ಮೋಹಕ ಬಾಣವನ್ನೇ ಅವಳಿಗೆ ಎಸೆದಿದ್ದಾನೆ. ಗೋಪಿಕೆಯರ ಆರಾದ್ಯ ದೈವ ಗೋಪಿನಂದನ ಕೊಳಲ ನಾದಕ್ಕೆ ಮೋಹಕ ಮುತ್ತಿನ ನೆನಪು ಆತನಿಗೆ ಕಾಡಿದೆ. ಇದು ಕೇವಲ ಪ್ರೇಮವೇ? ಎರಡು ಮನಸುಗಳ, ಎರಡು ದೇಹಗಳ,ಅಮರ ಪ್ರೇಮ....
ನವಯವ್ವನ, ನಳನಳಿಸುವ, ನಲಿದಾಟದ ತರುಣ
ನಾಜೂಕಿನ, ನವೋ ನವದ, ನಿಗಿನಿಗಿಸುವ ತರುಣಿ
ನುಡಿದಂತೆ ನಾಲಿಗೆ, ನಡೆದಂತೆ ನಾಚಿಕೆ
ನಯನಗಳು ನಿಂತಲ್ಲಿ ನಿಲ್ಲದಿರೆ, ನೋಟಕೆ
ಸಂಗಾತಿಯೇ, ಸಂಪ್ರೀತಿಯೇ, ಸೌಮ್ಯೋಕ್ತಿಯ ಸೌಧ
ಸೌಜನ್ಯದಿ, ಸಲಹುತಿರೆ, ಸುಶ್ರಾವ್ಯದ ನಾದ
ಸುದಿನವಿದು, ಸಜನಿ ನಿನಗೆ, ಸುಕುಮಾರನ ಸುಂದರಿ
ಸಲ್ಲಾಪದಿ, ಸವಿಗನಸಿದೆ, ಸೌಂದರ್ಯವ ಸವರಿ
ಬಳಲಿಕೆಯು, ಬಾಯಾರಿದೆ, ಬಳಿಗೆ ಬಾರೆ ಮಯೂರಿ
ಬೆದರದಿರು, ಬಳಿಯಲಿರು, ಬಿಡದೆ ನನ್ನ ನಾರಿ
ಬಚ್ಚಿಡದೆ ಬಿಚ್ಚಿಟ್ಟಿಹೆ, ಬದುಕಿನ ಬಟ್ಟಲ ಒಳಗೆ
ಬಂಗಾರಿಯೇ, ಬಿನ್ನಾಣವೇ, ಬದುಕಿನ ಘಳಿಗೆ
ಮಾಮರದಲಿ ಸದ್ದಾಗಿದೆ, ಮರೆಮಾಚಿದೆ ಮೌನ
ಮಾಟಗಾರ, ಮಾತಿನಲ್ಲೇ, ಮಾರನ ಮೈ ಬಾಣ
ಮುದ್ದಾಡುವೆ ಮೆಲ್ಲನೆ, ಮೆಲುನಗೆಯಲಿ ಮೆತ್ತಗೆ
ಮೋಹನ ಮುರಳಿಯ ನಾದ, ಮೋಹಕತೆ ಮುತ್ತಿಗೆ
Labels:
ಕವನ
Subscribe to:
Posts (Atom)