ಪ್ರವಾಸ ಕಥನ ಭಾಗ ೨...
ಹಿಂದಿನ ಸಂಚಿಕೆಯಲ್ಲಿ (http://gurumurthyhegde.blogspot.com/2009/03/blogpost_27.html) ಸೇಲನ್ ಎಂಬ ಪ್ರದೇಶದ ಬಗ್ಗೆ ಅಲ್ಲಿನ ಹಿಮದ ಬಗ್ಗೆ ಸ್ವಲ್ಪ ತಿಳಿಸಿದ್ದೆ. ಈ ವಾರ ಪ್ರಯಾಣ ಮುಂದುವರಿಸುತ್ತಾ ಸ್ಕಿಯಿಂಗ್ ಬಗ್ಗೆ ಮಾಹಿತಿ ನೀಡುವ ಪ್ರಯತ್ನ.
Gothenburg ನಿಂದ ಮಧ್ಯಾನ್ಹ ೧ ಘಂಟೆಗೆ ಹೊರಟ ಬಸ್ ಸುಮಾರು ೮ ಘಂಟೆಗೆ ಸೇಲನ್ ತಲುಪಿತು. ಈ ಬಸ್ ನ ಪ್ರಯಾಣಕ್ಕೆ ಸುಮಾರು 5೦೦೦ ರೂಪಾಯಿಗಳು ಒಬ್ಬರಿಗೆ. ಇವರೂ ಕೂಡ ನಮ್ಮ ಭಾರತದಂತೆ ಮಾರ್ಗ ಮಧ್ಯದಲ್ಲಿ ಚಹಾ ಕುಡಿಯಲು ೧ ಘಂಟೆ ನಿಲ್ಲಿಸಿದ್ದರು. ಹಾಗಾಗಿ ಸ್ವಲ್ಪ ಉದರ ಪೋಷಣೆಯೂ ಮಾರ್ಗ ಮಧ್ಯದಲ್ಲಿ ಆಯಿತು. ರಾತ್ರಿ 8 ಘಂಟೆಗೆ ಸೇಲನ್ ಗೆ ಬಂದಿಳಿದಾಗ ಸುತ್ತಲೂ ಕತ್ತಲೆ. ಎಲ್ಲಿ ಹೋಗುವುದು, ಹೊಸ ಜಾಗ ಬೇರೆ ಎಂದು ಚಿಂತಿಸುತ್ತಿರುವಾಗಲೇ ನಮ್ಮ ಸ್ವೀಡಿಷ್ ಮಿತ್ರ ರಾಲ್ಫ್ ನಮ್ಮ ಕರೆದೊಯ್ಯಲು ಕಾಯುತ್ತಿದ್ದರು. ಅವರ ನೋಡಿ ಜೀವ ಬಂದಂತೆ ಆಯಿತು. ಬಸ್ ನಿಂದ ಇಳಿದಾಗಲೇ ರೋಮಾಂಚನಗೊಂಡೆವು. ಮೊದಲ ಬಾರಿಗೆ ಹಿಮ ರಾಶಿಯಲ್ಲಿ ಬಿದ್ದಂತೆ ಆಯಿತು.ಸುಮಾರು ೧ ಮೀಟರ್ ಗಿಂತ ಹೆಚ್ಚಿನ ಹಿಮ ಎಲ್ಲ
ಕಡೆ ಬಿದ್ದಿತ್ತು. ಅಲ್ಲಿಂದ ರಾಲ್ಫ್ ಅವರು ಮೊದಲೇ ಬುಕ್ ಮಾಡಿದ್ದ ಮನೆಗೆ ಬಂದಾಗ ವೀಪರಿತ ಹಸಿವು ನಮಗೆ. ಈ ಸ್ವೀಡಿಷ್ ಜನರು ತಿನ್ನಲು ಬ್ರೆಡ್ ಕೊಡುತ್ತಾರೆ ಎಂದು ಮುಖ ಸಣ್ಣ ಮಾಡಿಕೊಂಡಿರುವಾಗಲೇ ನಮಗೊಂದು ಆಶ್ಚರ್ಯ ಕಾದಿತ್ತು. ರಾಲ್ಫ್ ಹೆಂಡತಿ ಲೀನಾ ಊಟಕ್ಕೆಂದು ರುಚಿಯಾದ ಪಲ್ಯ ಹಾಗೂ ಕ್ಯಾಪ್ಸಿಕಂ ಜೊತೆಗೆ ಬೇಯಿಸಿದ ಅನ್ನ ಮಾಡಿದ್ದರು. ಇನ್ನೇನು ಬೇಕು ನಮಗೆ.''ಅನ್ನದಾತೋ ಸುಖೀ ಭವ'' ಎಂದು ಊಟ ಮಾಡಿ ಸುಸ್ತಾಗಿದ್ದರಿಂದ ಮಲಗಿಕೊಂಡೆವು.
ನಾವು ಉಳಿದುಕೊಂಡ ಜಾಗದ ಹೆಸರು ಹೋಗ್ಫಾಲ್ ಸೆಂಟರ್ ಎಂದು. ಇಲ್ಲಿ ಪ್ರವಾಸಿಗಳಿಗಾಗಿ ಮನೆಗಳು ಬಾಡಿಗೆಗೆ ಸಿಗುತ್ತವೆ. 3 ದಿನಕ್ಕೆ, 5 ದಿನಕ್ಕೆ, 15 ದಿನಕ್ಕೆ, 30 ದಿನಕ್ಕೆ ಹೀಗೆ ವಿವಿಧ ರೀತಿಯ ದರದ ಮನೆಗಳು ಬಾಡಿಗೆಗೆ ಸಿಗುತ್ತವೆ. ಒಂದೊಂದು ಮನೆಗೂ ಒಂದು ದಿನಕ್ಕೆ 5500 ರೂಪಾಯಿಗಳಷ್ಟು ಬಾಡಿಗೆ. ನೀವು 15 ದಿನಗಳಿಗಿಂತ ಜಾಸ್ತಿ ಉಳಿದರೆ ಬಾಡಿಗೆ ಸ್ವಲ್ಪ ಕಡಿಮೆ ಆಗುತ್ತದೆ. ನಮಗೆ ಅದರ ಯೋಚನೆ ಇರಲಿಲ್ಲ ಬಿಡಿ, ಮೊದಲೇ ಮನೆಯನ್ನು ರಾಲ್ಫ್ ಬುಕ್ ಮಾಡಿದ್ದರಿಂದ ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಇವರ ಬುಕ್ ಮಾಡಿದ ಮನೆಯೇ ಹತ್ತಿರದಲ್ಲಿಯೇ ಈ ಮನೆಗಳನ್ನೆಲ್ಲ ನೋಡಿಕೊಳ್ಳುವ ಓನರ್ ಇದ್ದಾರೆ . ಆನ್ ಲೈನ ಬುಕ್ ಕೂಡಾ ಮಾಡಬಹುದು. ನೀವೇನಾದರೂ ಹೋಗುವುದಿದ್ದರೆ ನನ್ನನ್ನು ಸಂಪರ್ಕಿಸಿ. ಬೇಕಾದ ಎಲ್ಲ ವಿವರ, ಪ್ರವರ, ಕೊಡುತ್ತೇನೆ.
ಸರಿ, ಕಥೆ ಎಲ್ಲೆಲ್ಲೊ ಹೋಗುತ್ತಿದೆ. ತುಂಬಾ ಸುಸ್ತಾಗಿದ್ದರಿಂದ ನಿದ್ದೆಯೂ ಚೆನ್ನಾಗಿಯೇ ಬಂತು. ''ಚಿಂತೆಯಿಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ'' ಎನ್ನುವಂತೆ ನಮಗೆ ನಿದ್ದೆಯ ಕೊರತೆ ಇಲ್ಲ. ಹಾಗಾಗಿ ಜಾಗ ಬದಲಾದರೂ ನಿದ್ದೆಯ ತಾಪತ್ರಯ ಇರಲಿಲ್ಲ. ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಎದ್ದು ಉಪಹಾರ ಮುಗಿಸಿ ಸ್ಕಿಯಿಂಗ್ ಸೆಟ್ ಬಾಡಿಗೆಗೆ ಪಡೆಯಲು ಹತ್ತಿರದಲ್ಲೆ ಇರುವ ಅಂಗಡಿಗೆ ರಾಲ್ಫ್ ರೊಂದಿಗೆ ಹೋದೆವು. ಅದೊಂದು ದೊಡ್ಡ ಅಂಗಡಿ. ಅಲ್ಲಿ ಸ್ಕಿಯಿಂಗ್ ಗೆ ಬೇಕಾದ ಎಲ್ಲ ಸಲಕರಣೆಗಳು ಸಿಗುತ್ತವೆ . ನಾವು ಬಿಗಿನ್ನರ್ಸ್ ಆದ್ದರಿಂದ ಮೊದಲ ಬಾರಿಗೆ ಡೌನ್ ಹಿಲ್ ಸ್ಕಿಯಿಂಗ್ ಗೆ ಮನಸ್ಸು ಮಾಡಲಿಲ್ಲ. ಅದರ ಬಗ್ಗೆ ಆಮೇಲೆ ವಿವರಿಸುತ್ತೇನೆ.
ಸ್ಕಿಯಿಂಗ್ ಬೂಟು ತೆಗೆದುಕೊಳ್ಳುವಾಗ ಬಹಳ ಜಾಗ್ರತೆ ವಹಿಸಬೇಕು. ಬೂಟು ತುಂಬ ಸಡಿಲ ಆದರೂ ಕಷ್ಟ. ತುಂಬ ಬಿಗಿಯಾದರೆ ರಕ್ತ ಸಂಚಾರಕ್ಕೆ ಅಡ್ಡಿ. ಯಾವುದೇ ಕಾರಣಕ್ಕೆ ನೀವು ಬಿದ್ದರೆ ಬೂಟು ಕಾಲಿಂದ ತೆಗೆಯಬಾರದು ಅಂಥಹ ಅಳತೆಯ ಬೂಟಿನ ಆಯ್ಕೆ ಮಹತ್ವದ್ದು. ಸ್ಕಿಯಿಂಗ್ ನಲ್ಲಿ ಎರಡು ವಿಧ. ಒಂದು Country Side ಸ್ಕಿಯಿಂಗ್. ಇನ್ನೊಂದು ಮೊದಲೇ ಹೇಳಿದಂತೆ ಡೌನ್ ಹಿಲ್ ಸ್ಕಿಯಿಂಗ್ . ಡೌನ್ ಹಿಲ್ ಸ್ಕಿಯಿಂಗ್ ಗೆ ಬೂಟುಗಳು ಅತ್ಯಂತ ಭಾರವಾಗಿರುತ್ತವೆ. ಮತ್ತು ರಕ್ಷಣಾ ಉಪಕರಣಗಳೂ ಬಹಳಷ್ಟಿವೆ. ಆದರೆ Country
Side ಗೆ ಬೂಟುಗಳು ಅಷ್ಟೊಂದು ಭಾರವಾಗಿರುವುದಿಲ್ಲ. ಆ ಬೂಟುಗಳೊಂದಿಗೆ ಸ್ಕಿಯಿಂಗ್ ಪ್ಲೇಟ್ ಕೊಡುತ್ತಾರೆ. ಹಿಡಿದುಕೊಳ್ಳಲು ಎರಡು ಕೋಲು ಕೊಡುತ್ತಾರೆ. ಇವಿಷ್ಟನ್ನು ತೆಗೆದುಕೊಂಡರೆ ಒಂದು ದಿನಕ್ಕೆ 800 ರೂಪಾಯಿಗಳಷ್ಟು ಬಾಡಿಗೆ. ಇವನ್ನೆಲ್ಲ ತೆಗೆದುಕೊಂಡು ಮನೆಗೆ ಬಂದು 2೦ ನಿಮಿಷ ಕುಳಿತು ಮೊದಲ ರೋಚಕ ಅನುಭವಕ್ಕೆ ಅಣಿಯಾದೆವು.
ಬೂಟು ಹಾಕಿಕೊಂಡು ಕಾಲಿಗೆ ಸ್ಕಿಯಿಂಗ್ ಪ್ಲೇಟ್ ಕಟ್ಟಿಕೊಂಡು ಇನ್ನೇನು ರಸ್ತೆಯಲ್ಲಿ ಕಾಲಿಡುತ್ತೇವೆ ''ಪ್ರಥಮ ಚುಂಬನಂ ದಂತಭಗ್ನಂ'' ಎನ್ನುವಂತೆ ಆಗಲೇ ಬಿದ್ದು ಬಿಟ್ಟೆನು. ನನ್ನಾಕೆ ನನ್ನ ಸ್ಥಿತಿ ನೋಡಿ ಹಿಂದಿನಿಂದ ನಗುತ್ತಾ ಅವಳು ಆರಂಬಿಸಿದಳು. ಅವಳದೂ ಅದೇ ಸ್ಥಿತಿ, ನಗುವ ಬಾರಿ ಮಾತ್ರ ನನ್ನದು. ನಮ್ಮಿಬ್ಬರ ಅವಸ್ಥೆ ನೋಡಿ ನಗುವ ಅಥವಾ ಇವರೆನ್ನೆಲ್ಲಿ ಕರೆದುಕೊಂಡು ಬಂದೆನಪ್ಪ ಎಂದು ಅಳುವ ಬಾರಿ ರಾಲ್ಫ್ ನದು.ನಂತರ ಸ್ವಲ್ಪ ದೂರ ನಡೆದ ಮೇಲೆ ಸ್ಕಿಯಿಂಗ್ ಗಾಗಿಯೇ ಮಾಡಿದ ರಸ್ತೆ ಬಂತು.
ಆದರೆ ಅದನ್ನು ಸೇರುವುದರೋಳಗಾಗಿಯೇ ಸುಮಾರು ಸಲ ಸಮಸ್ತ ದೇಹಕ್ಕೂ ಭೂಮಾತೆಯ ದರ್ಶನ ವಾಗಿತ್ತು. ಇಲ್ಲಿ ಕಾಣುವ ದಾರಿ ಸ್ಕಿಯಿಂಗ್ ಗಾಗಿಯೇ ಮಾಡಿದ್ದು. ಸ್ಕಿಯಿಂಗ್ ಪ್ಲೇಟ್ ಅನ್ನು ಅದರ ಮಧ್ಯದಲ್ಲಿ ಇಟ್ಟು ಕೋಲನ್ನು ಹಿಂದಕ್ಕೆ ಮುಂದಕ್ಕೆ ತಳ್ಳುತ್ತಾ ಸಾಗಿದರೆ ಮಾರ್ಗವನ್ನು ಬೇಗನೆ ಕ್ರಮಿಸಬಹುದು. ಆದರೆ ಹೇಳಲು ಎಷ್ಟು ಸಲೀಸೋ ಅದನ್ನು ಕಾರ್ಯರೂಪಕ್ಕೆ ತರಲು ಅಷ್ಟೇ ಕಷ್ಟ ಪಡಬೇಕು ಎಂಬ ಸತ್ಯ ನಾವು ಅದನ್ನು ಹಿಡಿದಾಗ ಗೊತ್ತಾಯಿತು. ಆದರೆ ಎಷ್ಟು ಸಲ ಬಿದ್ದರೂ ನೋವಾಗುತ್ತಿರಲಿಲ್ಲ ಕಾರಣ ಆ ದಿನದ ಹಿಮ ಸ್ಕಿಯಿಂಗ್ ಗೆ ಹೇಳಿ ಮಾಡಿಸಿದಂತೆ ಇತ್ತಂತೆ. ಅತ್ಯಂತ ಮ್ರದುವಾದ ಬ್ರೆಡ್ ನಂತೆ ಇದ್ದ ಹಿಮದ ಮೇಲೆ ಬಿದ್ದಾಗ ಅಂತ ನೋವೇನೂ ಕಾಣಿಸಲಿಲ್ಲ. ಆ ಸಂಗತಿಯೇ ಮುಂದುವರಿಯಲು ಪ್ರೇರೇಪಿಸಿತು.
ಮೊದಲೇ ರಾಲ್ಫ್ ನಮಗೆ ಒಂದು ಆದೇಶ ನೀಡಿದ್ದರು, ಇವತ್ತು ನಾವಿಬ್ಬರೂ 15 ಕಿ ಮಿ ಮಾಡಲೇಬೇಕೆಂದು. ನಮಗೆ 15 ಕಿ ಮಿ ಎಂದ ಕೂಡಲೇ ನಡುಕ ಆರಂಭವಾಯಿತು. ಆದರೆ ರಾಲ್ಫ್ ಹಾಗೂ ಅವರ ಪತ್ನಿ ಒಂದು ದಿನಕ್ಕೆ 6೦ ಕಿ ಮಿ ಮಾಡುತ್ತಾರೆ ಎನ್ನುವುದನ್ನು ಕೇಳಿದಾಗ ಅಲ್ಲಿನ ಚಳಿಯಲ್ಲೂ ಬೆವರಿಳಿಯಲು ಆರಂಭವಾಗಿತ್ತು. ಆದರೆ ರಾಲ್ಫ್ ಅತ್ಯಂತ ಸೂಕ್ಷ್ಮವಾಗಿ ಸ್ಕಿಯಿಂಗ್ ನ ಪಾಠವನ್ನು ಆರಂಬಿಸಿದ್ದರು. ಮೊದಲಿಗೆ ಸ್ಕಿಯಿಂಗ್ ಮೇಲೆ ಸರಿಯಾಗಿ ನಿಂತುಕೊಳ್ಳಲು, ನಂತರ ಅದನ್ನು ನಿಯಂತ್ರಿಸಲು, ಬ್ರೇಕ್ ಹಾಕಲು, ಎಲ್ಲ ತಿಳಿಸಿಕೊಟ್ಟರು. ಶಾಲೆಯಲ್ಲಿ ಮಾಸ್ಟರು ಹೇಳಿಕೊಟ್ಟಾಗ ಪ್ರಪಂಚವೇ ಅರ್ಥವಾಯಿತು ಎಂದು ತಲೆ ಹಾಕಿ ಅಭ್ಯಾಸ ಇದ್ದರಿಂದ ಅವರ ಮಾತು ಅರ್ಥವಾದಂತೆ ತಲೆ ತೂಗಿದೆವು. ಆದರೆ ಕೊನೆಯಲ್ಲಿ ಈ ಎಲ್ಲ ಪಾಠಗಳು ನೀವು ಅನುಭವಿಸಿದಾಗ ಅನುಭವಕ್ಕೆ ಬರುತ್ತದೆ ಎಂದು ಹೇಳಿ ನಮ್ಮನ್ನು ಬಾವಿಗೆ ತಳ್ಳಿ ಹಿಂದಿನಿಂದ ನಮ್ಮ ಕುಶಲತೆಯ ಫೋಟೋ ತೆಗೆಯಲು ಆರಂಬಿಸಿದರು.
ಆದರೆ ಸ್ಕಿಯಿಂಗ್ ಮಾಡುವಾಗ ಆಗುವ ಒಂದು ಲಾಭವೆಂದರೆ ಮನೋಹರ ಸೃಷ್ಟಿಯ ಮನಮೋಹಕ ದರ್ಶನ. ಕನ್ನಡ ಚಲನಚಿತ್ರಗಳಲ್ಲಿ ''ನಾರಾಯಣ, ನಾರಾಯಣ'' ಎಂದು ನಾರದ ಬರುವಾಗ ಹೀಗೆ ಹಿಮದ ಬಿಳಿಯ ಮೋಡಗಳನ್ನು ನೋಡಿದ್ದೆ. ಆದರೆ ಈಗ ನಿಜವಾಗಿ ನಾನು ಆ ಹಿಮದ ರಾಶಿಯಲ್ಲಿ ನಿಂತಿದ್ದೇನೆ.
ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮತ್ತೂ ಸ್ಕಿಯಿಂಗ್ ಮಾಡುವ ತವಕ ಬಿದ್ದ ನೋವನ್ನು ಮರೆ ಮಾಚಿತು. ಆರಂಬಿಸಿದ ಸ್ವಲ್ಪ ಹೊತ್ತಿನಲ್ಲೇ ಒಂದು ಸಣ್ಣ ಡೌನ್ ಹಿಲ್ ಬಂದಿತು. ಏನು ನಡೆಯುತ್ತಿದೆ ಎಂದು ನೋಡುವಷ್ಟರಲ್ಲಿ ಸ್ಕಿಯಿಂಗ್ ಪ್ಲೇಟ್ ಜೊತೆಗೆ ಜಾರುತ್ತಾ ಜಾರುತ್ತಾ ನಿಯಂತ್ರಿಸಲಾಗದೆ ದಬಕ್ ಎಂದು ಬಿದ್ದೆ. ಆಗ ಮಾತ್ರ ಮುಕ್ಕೋಟಿ ದೇವರ ನೆನಪಾಯಿತು. ಡೌನ್ ನಲ್ಲಿ ಅತ್ಯಂತ ರಭಸವಾಗಿ ಹೋಗುವ ಸ್ಕಿಯಿಂಗ್ ಪ್ಲೇಟ್ ಕಂಟ್ರೋಲ್ ಮಾಡುವುದು ಪ್ರಯಾಸದ ಕೆಲಸ. ಆದರೆ ಅದರಲ್ಲಿ ಇರುವ ಮಜವೇ ಬೇರೆ ಎನ್ನುವುದು ನಂತರ ತಿಳಿಯಿತು. ಸ್ಕಿಯಿಂಗ್ ಮಾಡುವಾಗ ಎರಡು ಪ್ಲೇಟ್ ಗಳನ್ನೂ ತಿರುಗಿಸಿದ V ಆಕಾರದಲ್ಲಿ
ಹಿಡಿದರೆ ಬ್ರೇಕ್ ಹಾಕಿದಂತೆ. ಅದನ್ನೇ V ಆಕಾರದಲ್ಲಿ ಹಿಡಿದರೆ ಬೆಟ್ಟ ಹತ್ತಲು ಸಾದ್ಯ. ಇಲ್ಲದಿರೆ ಮೇಲೆ ಹತ್ತಿದಂತೆ ಜಾರುತ್ತಾ ಜಾರುತ್ತಾ ಕೆಳಗೆ ಬಂದುಬಿಡುತ್ತಿರಿ. ಆದ್ದರಿಂದ V ಆಕಾರದಲ್ಲಿ ನಡೆದರೆ ಅದರ ಮೇಲೆ ಸಂಪೂರ್ಣ ಹಿಡಿತ ಸಿಕ್ಕಿ ಮೇಲಕ್ಕೆ ಹತ್ತಲು ಸಾದ್ಯ. ಹೀಗೆ ಪುಟ್ಟ ಮಗು ಅಂಬೆಗಾಲು ಇಡುವಾಗ ಬಿದ್ದು ಬಿದ್ದು ಕಲಿತಂತೆ ನಾವು ನಿಧಾನ ಸ್ಕಿಯಿಂಗ್ ನ ಕೌಶಲ್ಯತೆಗಳನ್ನು ಕಲಿಯತೊಡಗಿದೆವು.
ಹಿಮದ ಪ್ರಭಾವ ಅಲ್ಲಿ ಎಷ್ಟಿತ್ತೆಂದರೆ ಹಿಮದ ಭಾರ ತಡೆಯಲಾರದೆ ಗಿಡ ಮರಗಳು ಬಗ್ಗಿ ಹೋಗಿದ್ದವು.
ಅವುಗಳ ವರ್ಣನಾತೀತ ರೂಪ ಬಾಯಿಯಲ್ಲಿ ಹೇಳಲು ಸಾದ್ಯವಿಲ್ಲ. ಅನುಭವಿಸಲೇಬೇಕು. ಹೀಗೆ ಸುಮಾರು 6 ಕಿ ಮಿ ಕಳೆದ ಮೇಲೆ ಮಧ್ಯಾನ್ಹದ ಊಟದ ಸಮಯವಾಯಿತು. ನಮ್ಮ ಸ್ಕಿಯಿಂಗ್ ಗೆ ವಿಶ್ರಾಂತಿ ನೀಡಿ ಊಟಕ್ಕೆ ಮನೆಗೆ ಬಂದೆವು.
ಮತ್ತೆ ಮಧ್ಯಾನ್ಹದ ಸ್ಕಿಯಿಂಗ್ ನಲ್ಲಿ ಪ್ರಕ್ರತಿಯ ರೋಚಕತೆಯ ದರ್ಶನವಾಯಿತು. ಅದರ ಬಗ್ಗೆ ಮುಂದಿನ ವಾರ ಇನ್ನು ಹೆಚ್ಚಿನ ಫೋಟೋದೊಂದಿಗೆ ಬರುತ್ತೇನೆ. ಅಲ್ಲಿಯವರೆಗೆ ಇದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತಿರಲ್ಲ.
ನಿಮ್ಮ ಅನುಮತಿಯೊಂದಿಗೆ,
...ಮುಂದುವರಿಯುತ್ತದೆ....
30 comments:
ಗುರುಮೂರ್ತಿಯವರೆ....
ಬಹಳ ಸುಂದರವಾಗಿ..
ನಮಗೂ ಹೋಗಿ ಅನುಭವ ಪಡೆದ ಹಾಗೆ...
ಬಣ್ಣಿಸಿದ್ದೀರಿ...
ನಾವೂ ಒಮ್ಮೆ ಹೋಗಲೇ ಬೇಕು ಎನ್ನುವಷ್ಟು...
ಹೊಟ್ಟೆಕಿಚ್ಚು ತರಿಸಿದ್ದಕ್ಕೆ ...
ಸುಂದರವಾದ ಫೋಟೊಗಳಿಗೆ...
ಎಲ್ಲದಕ್ಕೂ ಶಭಾಸ್...!
ಮುಂದಿನ ಕಂತಿಗೆ ಕಾಯುತ್ತಿರುವೆವು...
guru,
tumba chennagi ellavannu koolankushavagi tilisideeri... nijakku naavugalu omme hogi barabekiniside..
nimma anubhava nammondige munduvariyali..
Hello,
Mast maja madthidiri anisuthe :)
good article...
Skeing bage thumba vishya thilisidiri... thank u... odta oadta nange rajkumar, jaymala song nenapu baruthide " naguveya hene nanu..............."
ಹ್ಮ್...ಈಗಲೆ ಸಲಕರಣೆಗಳನ್ನೆಲ್ಲ ತೆಗೆದುಕೊಂಡ್ ಸ್ಕೀಯಿಂಗ್ ಗೆ ಹೊರಡೋಣ ಅನ್ಸುತ್ತೆ ಆದ್ರೆ ಏನ್ಮಾಡೋದು, ಬೆಂಗಳೂರಿನಲ್ಲಿ ಅಷ್ಟೊಂದು ಹಿಮ ಇಲ್ಲ.
ರೋಚಕ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಪ್ರಕಾಶಣ್ಣ,
ನಿಮ್ಮ ಮೆಚ್ಚುಗೆಗೆ ನನ್ನ ವಂದನೆಗಳು. ಎಹ್ಸ್ತು ಬರೆದರೂ ಸಾಲದಷ್ಟು ಅನುಭವ ಆ ಪ್ರವಾಸದಲ್ಲಿ ಸಿಕ್ಕಿದೆ. ಕಂಡಿತ ಒಮ್ಮೆ ಸಾದ್ಯವಾದರೆ ಹೋಗಿಬನ್ನಿ,
ಮುಂದಿನ ಕಂತು ಶೀಘ್ರದಲ್ಲಿ....
ಮನಸು,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಜಕ್ಕೂ ಅದೊಂದು ಸ್ವರ್ಗವೇ ಸರಿ,
ಹೋಗಿ ಬನ್ನಿ
ವೀಣಾ,
ನನ್ನ ಬ್ಲಾಗ್ ಗೆ ಸ್ವಾಗತ, ನಿಮಗೆ ಹಾಡು ನೆನಪಾಗಿದ್ದಕ್ಕೆ , ನೆನಪಾಗುವಂತೆ ನನ್ನ ಲೇಖನ ಮಾಡಿದ್ದಕ್ಕೆ ನನಗೆ ಹೆಮ್ಮೆ ಇದೆ. ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು. ಹೀಗೆಯೇ ಬರುತ್ತಿರಿ.
ಉಮೇಶ್ ಸರ್,
ಏನು ಮಾಡೋದು ಹೇಳಿ, ಹಿಮ ತರಿಸೋಕಂತು ಆಗಲ್ಲ, ಮೊದಲೇ ಟ್ರಾಫಿಕ್ ಜಾಮ್ ಅಂತಿರ, ಅದ್ರಲ್ಲಿ ಹಿಮ ಬೇರೆ ಬಿದ್ದು ರಸ್ತೆ ಮುಚ್ಚ್ಚಿದ್ರೆ ಬೆಂಗಳೂರು ಕಥೆ ಅಷ್ಟೇ
ಸರ್...
ನಮಸ್ತೆ...
ಸಾಗರದಾಚೆಯ ಇಂಚರವನ್ನು ಸಾಗರದಾಚೆ ಇರೋ ನಾವುಗಳು ಕೇಳೋ ಹಂಗೆ ಮಾಡಿದ್ದೀರಿ. ಓದುತ್ತಾ ಓದುತ್ತಾ ನಮಗೂ ಅನುಭವಿದಂಗೆ ಆಯಿತು. ಒಳ್ಳೆಯ ಬರಹಕ್ಕೆ ಅಭಿನಂದನೆಗಳು. ಮುಂದಿನ ಬರಹ ಬೇಗ ಬರಲಿ..........
ಪ್ರೀತಿಯಿಂದ,
ಧರಿತ್ರಿ
ಗುರುಮೂರ್ತಿಯವರೆ,
ಲೇಖನ ಮತ್ತು ಚಿತ್ರಗಳು ತುಂಬಾ ಚನ್ನಾಗಿದೆ..
ನನಗೆ ತುಂಬಾ ಆಸೆಯಗ್ತಾ ಇದೆ...
ಒಂದು ಕೆಲಸ ಮಾಡಿ, ನಾನು ಅಲ್ಲಿಗೆ ಬರೋದು ಸ್ವಲ್ಪ ಕಷ್ಟ, ನೀವೇ ಅಲ್ಲಿಂದ ನನಗೆ ಸ್ವಲ್ಪ ಹಿಮ ಪಾರ್ಸೆಲ್ ಕಳಿಸಿ :D
ಧನ್ಯವಾದಗಳು...
ಧರಿತ್ರಿ,
ನಿಮ್ಮ ಅಭಿಪ್ರಾಯಕ್ಕೆ ನಾನು ಚಿರಋಣಿ. ಇ ಬ್ಲಾಗ್ ಪ್ರಪಂಚದ ಮೂಲಕ ನಿಮ್ಮೆಲ್ಲರ ಪರಿಚಯವಾಯಿತು. ನಿಮ್ಮೆಲ್ಲರ ಲೇಖನಗಳನ್ನು ಆಸ್ವಾದಿಸುವ ಅವಕಾಶ ಲಭಿಸಿತು. ಹೀಗೆಯೇ ಬರುತ್ತಿರಿ.
ಪ್ರೀತಿಯಿಂದ
ಗುರು
ಶಿವ ಪ್ರಕಾಶ್ ಸರ್,
ನಿಮಗಾಗಿ ತುಂಬಾ ಹಿಮ ಆಗಲೇ ತೆಗೆದುಕೊಂಡಿದ್ದೇನೆ. ಮುಂದಿನ ಸಾರಿ ಭಾರತಕ್ಕೆ ಬಂದಾಗ ಏರ್ ಪೋರ್ಟ್ ಗೆ ಬನ್ನಿ. ಹಿಮ ತೆಗೆದುಕೊಂಡಿ ಹೋಗಿ. ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ತುಂಬಾ ಸಂತೋಷ
ಹೀಗೆಯೇ ಬರುತ್ತಿರಿ.
aase aagta ide ............nimma pravasa kathana odi
Dear Hema,
commentge tumbaa thanks, omme banni i place ge
ಅನುಭವ ಕಥನ ಕಣ್ಣಿಗೆ ಕಟ್ಟಿದ೦ತಿದೆ.
ಪರಾಂಜಪೆ ಯವರೇ,
ಅಭಿಪ್ರಾಯಕ್ಕೆ ಧನ್ಯವಾದಗಳು. ಇಷ್ಟವಾಗಿದ್ದಕ್ಕೆ ನಾನು ಅಭಾರಿ
ಡಾ!,
ಸ್ಕಿಯಿಂಗ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟೀದ್ದೀರ.
ಸೈಕಲ್ ಕಲಿಯುವಾಗ ಹೇಗೆ ಬೀಳುತ್ತೇವೋ ಇಲ್ಲೋ ಹಾಗೆ.
ಕಲಿಯುವರೆಗು ಬ್ರಹ್ಮ ವಿದ್ಯೆ. ಕಲಿತ ಮೇಲೆ ಕೋತಿ ವಿದ್ಯೆ.
ಗುರುಮೂರ್ತಿಯವರೆ,
ಸ್ಕೀಯಿಂಗ್ ಪಾಠಗಳು ಹಾಗು ನಿಮ್ಮ ಅನುಭವಗಳು ತುಂಬಾ ಸ್ವಾರಸ್ಯಕರವಾಗಿವೆ.
ಮುಂದುವರೆಸಿ.
ಕೆ೦ಡಸ೦ಪಿಗೆಯಲ್ಲಿ ನಿಮ್ಮ ಬ್ಲಾಗ್ "ದಿನದ ಬ್ಲಾಗ್" ಎ೦ಬ ಮನ್ನಣೆಗೆ ಪಾತ್ರವಾಗಿದೆ. congrats
ಅಂತರ್ವಾಣಿ,
ನೀವು ಹೇಳಿದ್ದು ಸರಿ, ಕಲಿಯುವ ಮುಂಚೆ ಏನೋ ಮಹಾ ವಿದ್ಯೆ ಅನಿಸುತ್ತದೆ ಆದರೆ ಕಲಿತ ಮೇಲೆ ಅಷ್ಟಕ್ಕಷ್ಟೇ, ಆದರೆ ನಾವು ಎಷ್ಟೋ ಸಂಗತಿಗಳನ್ನು ಕಲಿಯಲು ಮುಂದಾಗುವುದೇ ಇಲ್ಲ.
ಹೀಗೆಯೇ ಬರುತ್ತಿರಿ.
ಸುನಾಥರವರೆ,
ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಹೀಗೆಯೇ ಬರುತ್ತಿರಿ
ಪರಾಂಜಪೆಯವರೇ,
ದಿನದ ಬ್ಲಾಗ್ ಎಂದು ಮನ್ನಣೆಗೆ ಪಾತ್ರವಾಗಿದ್ದನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆ ಸದಾ ಇರಲಿ
ನನಗೆ ಅಲ್ಲಿಗೇ ಹೋದಂತಾಯ್ತು
ಹರೀಶ್ ಅವರೇ,
ತುಂಬಾ ಧನ್ಯವಾದಗಳು, ಹೀಗೆಯೇ ಬರುತ್ತಿರಿ,
ಗುರುಮೂರ್ತಿಯವರೇ,
ನಮಗೆ ಇಲ್ಲೇ ಸ್ಕೀಯಿಂಗ್ ಮಾಡಿದ ಅನುಭವ ಆಯಿತು. ಚೆನ್ನಾಗಿದೆ ಬರಹ.
"ಬಿದ್ದರೂ ಮೀಸೆ ಮಣ್ಣಾಗಲಿಲ್ಲ" ಎನ್ನಲು ಅಲ್ಲಿ ಮಣ್ಣೆಲ್ಲಿದೆ? ಎಲ್ಲ ಹಿಮಮಯ!
ಫೋಟೋಗಳೂ ಚೆನ್ನಾಗಿವೆ.
ಮುಂದೇನಾಯಿತು ಅಂತ ಕಾಯ್ತಾ ಇರ್ತೀವಿ.
ಜ್ಯೋತಿ,
ಮೊದಲಿಗೆ ಬ್ಲಾಗ ಗೆ ಸ್ವಾಗತ. ಅಭಿಪ್ರಾಯಕ್ಕೆ ಧನ್ಯವಾದಗಳು. ಅಂತೂ ಮಣ್ಣಿನಲ್ಲಿ ಹಿಮ ಇಲ್ಲ ಅಂತಿರ ಇಲ್ಲ ಹಿಮದಲ್ಲಿ ಮಣ್ಣು ಇಲ್ಲ ಅಂತಿರ, ಹೀಗೆಯೇ ಬರುತ್ತಿರಿ.
yavaga baravappa helu. kate heli hotte ursada
ಗುರುಮೂರ್ತಿ ಸರ್,
ನಿಮ್ಮ ಸ್ಕಿಯಿಂಗ್ ಆಟದ ವರ್ಣನೆಯನ್ನು ನೋಡುತ್ತಿದ್ದರೆ ನಾವು ನಿಮ್ಮ ಜೊತೆ ಆಡುತ್ತಿರುವಂತೆ ಅನ್ನಿಸುತ್ತೆ...ಅಷ್ಟು ಚೆನ್ನಾಗಿ ಪ್ರತಿಯೊಂದನ್ನು ಚೆನ್ನಾಗಿ ವರ್ಣಿಸುತ್ತೀರಿ..
ಅದರ ತಾಂತ್ರಿಕ ವಿಚಾರಗಳನ್ನು ವಿವರಿಸುತ್ತಿದ್ದೀರಿ....ಓದುತ್ತಿದ್ದರೆ ನಾವು ಅಲ್ಲಿಗೆ ಹೋಗಬೇಕೆನ್ನುವ ಆಸೆಯಾಗುತ್ತಿದೆ...
ಅದಕ್ಕೆ ತಕ್ಕಂತೆ ಸುಂದರವಾದ ಫೋಟೊಗಳು..
ಇನ್ನುಳಿದ ಅನುಭವಕ್ಕಾಗಿ ನಾನು ಕಾಯುತ್ತಿರುತ್ತೇನೆ...ಬೇಗ ಹಾಕಿ ಸರ್,
ನೋಡಪ್ಪ, ಹೀಗಂತೂ ಬೇಸಿಗೆ ಬಂತು, ಮುಂದಿನ ವರ್ಷಾ ಬಾ , ಹಿಂಗೆ ನೋಡ್ತಾ ಇರಪ್ಪ ನನ್ನ ಬರವಣಿಗೆಯ
ಆತ್ಮೀಯ ಶಿವೂ ಸರ್,
ತಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ನಿಮಗೆ ಇಶ್ಟವಾಗಿದ್ದಕ್ಕೆ ನನಗೆ ಸಂತೋಷ.
ಮುಂದಿನ ಲೇಖನ ಬೇಗನೆ ಪ್ರಕಟಿಸುತ್ತೇನೆ.
Post a Comment