Friday, June 17, 2011

ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ ..

''ಬದುಕು ಬಯಸುತ್ತದೆ, ಬಯಸಿದಂತೆ ಬೆಸೆಯುತ್ತದೆ, ಬೆಸೆದಂತೆ ಕಾಡಿಸುತ್ತದೆ ''



ಬದುಕಿನ ಬಗೆಗಿನ ಈ ಸಾಲುಗಳನ್ನು ಎಷ್ಟು ಬಾರಿ ಓದಿದೆನೋ ಗೊತ್ತಿಲ್ಲ, ಪ್ರತಿ ಸಲ ಓದಿದಾಗ  ಹೊಸ ಹೊಸ ಅರ್ಥವನ್ನೇ ನೀಡಿವೆ. ಕೆಲವೊಮ್ಮೆ ತೀರ ಸಾಗರದ ಅಲೆಗಳ ನಡುವೆ ನಿಂತು ಬದುಕನ್ನು ನೋಡಿದ ರೀತಿ, ಇನ್ನೊಮ್ಮೆ ದಟ್ಟ ಅರಣ್ಯದ ನಡುವೆ ನಿಂತು ಬಾಳ ಕಂಡ ರೀತಿ, ಬದುಕು ಅಂದಿಗೂ ಇಂದಿಗೂ ಎಂದಿಗೂ ಅಷ್ಟೇ ಸಮ್ಮೋಹಕ ಶಕ್ತಿಯ ಮಿಂಚಿನ ಸಂಚಲನದ ಪ್ರತೀಕ.

ಕಳೆದ ವಾರ ಬೆಂಗಳೂರು  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಸ್ವೀಡನ್ ಗೆಂದು ಹೊರಟು ನಿಂತಾಗ ಕಾಡಿದ ಬದುಕಿನ ಘಳಿಗೆಗಳು ಬದುಕಿನಲ್ಲಿ ಹಿಂದೆಂದೂ ಕಾಡಿರಲಿಲ್ಲ. Bacholor ಗೂ Forced Bacholor ಗೂ ಬಹಳ ವ್ಯತ್ಯಾಸ. ಒಬ್ಬ ಹೇಗೂ ನಡೆಯುತ್ತದೆ ಎನ್ನುವ ವಿಶಾಲ ಮನೋಭಾವ, ಇನ್ನೊಬ್ಬ ಹೀಗೆ ನಡೆಯಬೇಕು ಎನ್ನುವ ಮನೋಭಾವ. ಇವೆರಡರ ನಡುವಿನ ವ್ಯತ್ಯಾಸ ತಿಳಿಯುವ ಸಂದರ್ಭ ಮದುವೆಯಾದ 3 ವರ್ಷಗಳಲ್ಲಿ ಎಂದಿಗೂ ಬಂದಿರಲಿಲ್ಲ. ಆದರೆ ಇದೆ ಮೊದಲ ಬಾರಿಗೆ ಆ ವ್ಯತ್ಯಾಸ ತಿಳಿಯುವ ದಿನಗಳು ಬಂದಿದ್ದವು.

ತವರು ಮನೆಯಲ್ಲಿ ಹೆಂಡತಿಯನ್ನು ಬಿಟ್ಟು ವಿಮಾನ ನಿಲ್ದಾಣಕ್ಕೆ ಬಂದಾಗ ಮನಸೇಕೋ ಭಾರ. ಸದಾ ಅವಳೊಂದಿಗೆ ಪ್ರಯಾಣ ಮಾಡಿದ ನನಗೆ ಒಬ್ಬನೇ ಹೋಗುವ ಪರಿಸ್ಥಿತಿ ನೆನದು ಅರೆ ಘಳಿಗೆ ಖೇದ ಆಯಿತು. ಅಂತೂ ವಿಮಾನ ನಿಲ್ದಾಣದಿಂದ ವಿಮಾನ ಹತ್ತಿ ಕುಳಿತೆ. ವಿಮಾನ ನಿಧಾನ ವಾಗಿ ಗಗನಕ್ಕೆ ಹೋಗುತ್ತಿದ್ದರೆ ನನ್ನ ಮನಸ್ಸು ಅಷ್ಟೇ ನಿಧಾನವಾಗಿ ಕಳೆದ ಬದುಕಿನ ಕ್ಷಣಗಳ ನೆನಪಿನ  ಬುತ್ತಿ ಯನ್ನು  ಯನ್ನು ಬಿಚ್ಚುತ್ತಿತ್ತು.  
                                              
''जी हमे मंजूर है आपका ये फैसला
कह रही है हर नझर बंदा परवर शुकरीया
हंसके अपनी जिदगीमें कर लीया शामिल मुझे''


3 ವರ್ಷದ ಹಿಂದೆ ಜೊತೆಯಾದ ಗೆಳತಿ ಯ ತವರಿಗೆ ಬಿಟ್ಟು ಬರುವ ನೋವು ಮತ್ತು ಅದರ ಅಗಾಧತೆ ಬಹಳ ಕ್ಲಿಷ್ಟ ವಾದದ್ದು. ಬೆಂಗಳೂರಿಂದ ಹೋರಾಟ ವಿಮಾನ ಮುಂಬೈ ಗೆ ಬಂತು. ಮುಂಬೈ ವಿಮಾನ ನಿಲ್ದಾಣ ಕ್ಕೂ ನನಗೂ ಸದಾ ಎಣ್ಣೆ ಶೀಗೆಕಾಯಿ ಸಂಬಂಧ. ಕಾರಣ ನಾವು 4 ಸಲ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದೇವೆ. ಹಾಗೆಯೇ ಮುಂಬೈ ಮಾರ್ಗವಾಗಿ ಹೊರದೇಶಕ್ಕೆ ಹೋಗಿದ್ದೇವೆ. ಪ್ರತಿಸಲವೂ 3-4 ಘಂಟೆಗಳು ಕೇವಲ ಕಸ್ಟಮ್ಸ್ ಚೆಕ್ ಮುಗಿಸಲು, ಸಾಮಾನುಗಳನ್ನು ಹಾಕಲು, ಬೋರ್ಡಿಂಗ್ ಪಾಸ್ ಪಡೆಯಲು ಕಾದಿದ್ದೇವೆ. ಆದರೆ ಈ ಸಲ ಒಬ್ಬನೇ ಬಂದಿಳಿದಾಗ ಸ್ವಲ್ಪ ನೆಮ್ಮದಿಯಾಯಿತು. ಕಾರಣ ನನಗೆ ಮುಂಬೈ ನಿಂದ ಸ್ವೀಡನ್ ಗೆ ವಿಮಾನ ಹೊರಡಲು 6 ಘಂಟೆಗಳ ಸಮಯವಿತ್ತು. 3-4 ಘಂಟೆಗಳು ಕಸ್ಟಮ್ಸ್ ಚೆಕ್ ಎನ್ನುವುದರಲ್ಲಿ ಕಳೆದರೆ ಕಡೆಗೆ ಇರುವುದು ಕೇವಲ 2 ಘಂಟೆ ಮಾತ್ರ. ಹೇಗೂ ಕಳೆದು ಹೋಗುತ್ತದೆ ಎಂದುಕೊಂಡೆ. ಅದು ಬೇರೆ ಬೆಳಗಿನ ಜಾವ.
ಪಾಪಿ ಚಿರಾಯು

ಅಂತಾರಲ್ಲ ಹಾಗಾಯ್ತು ಸ್ವಾಮಿ ನನ್ನ ಸ್ಥಿತಿ. ಅದ್ಯಾವ ಘಳಿಗೆ ನೋ ಗೊತ್ತಿಲ್ಲ, ಮುಂಬೈ ನಲ್ಲಿ ಎಲ್ಲ ಚೆಕ್ ಗಳು ಕೇವಲ ಒಂದು ಘಂಟೆಯಲ್ಲಿ ಮುಗಿದುಹೊಗಿದ್ದವು. ಮತ್ತೆ ವಿಮಾನ ನಿಲ್ದಾಣ ದ ಬಗೆಗೆ ಅಸಾದ್ಯ ಕೋಪ ಬಂತು :) ಸದಾ ಟೈಮ್ ಪಾಸು ಮಾಡಿಸುವ ವಿಮಾನ ನಿಲ್ದಾಣ ಈ ಬಾರಿ ಕೈ ಕೊಟ್ಟಿತ್ತು. 5 ತಾಸುಗಳು ಏನು ಮಾಡುವುದು ಎಂದೇ ತಿಳಿಯಲಿಲ್ಲ. ಆದರೆ ಪ್ರೀತಿಗೆ, ಆದರ ಕ್ಕೆ ಇನ್ನೊಂದು ಹೆಸರಾದ ಆತ್ಮೀಯ ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆಯವರ ಮನೆಗೆ ಹೋದಾಗ ಪ್ರಕಾಶಣ್ಣ  ಕೊಟ್ಟ ಹೊಸ ಪುಸ್ತಕ ''ಇದೇ ಇದರ ಹೆಸರು'' ನನ್ನ ಬ್ಯಾಗ್ ನಲ್ಲಿ ಇತ್ತು. ಅಂತೂ ಸತತ 5 ತಾಸುಗಳು ಅವರ ಪುಸ್ತಕ ಓದುತ್ತ ಕಳೆದೆ. ಪ್ರಕಾಶಣ್ಣ ನ ಪುಸ್ತಕ ಎಂದರೆ ಅದು ನಗುವನ್ನೇ ಗುತ್ತಿಗೆ ಪಡೆದಂತೆ. ಆ 5 ಘಂಟೆಗಳು ನನ್ನ ಒಂಟಿತನಕ್ಕೆ ಸ್ವಲ್ಪ ವಿರಾಮ ನೀಡಿದವು.


ವಿಮಾನ ದ ಒಳಗಂತೂ ಬೇಸರ ಹೇಳತೀರದು. ಒಂದಂತು ಸತ್ಯ, ಭಾರತದ ರೈಲುಗಳಲ್ಲಿ ಸಾಮಾನ್ಯ ವರ್ಗದವರು ಪ್ರಯಾಣಿಸುವಾಗ ಸಿಗುವ ಸಂತೋಷ ಯಾವ ವಿಮಾನ ದಲ್ಲಿಯೂ ಸಿಗುವುದಿಲ್ಲ. ಆ ರೈಲುಗಳಲ್ಲಿ ಎಲ್ಲರು ಸ್ನೇಹಿತರೆ, ಪರಿಚಯ ಬೇಕೇ ಬೇಕೆಂದಿಲ್ಲ, ನಗು ಇದ್ದರೆ ಸಾಕು. ವಿಮಾನಗಳಲ್ಲಿ ಹಾಗಲ್ಲ,

''ನಾನು ಸತ್ಯವನ್ನೇ ನುಡಿಯುತ್ತೇನೆ , ಸತ್ಯವನ್ನಲ್ಲದೆ ಬೇರೇನನ್ನೂ ನುಡಿಯುವುದಿಲ್ಲ'' 

ಎಂದು ಕೋರ್ಟ್ ನಲ್ಲಿ ಪ್ರಮಾಣ ಮಾಡುವ ಹಾಗೆ ವಿಮಾನ ಹತ್ತುವ ಎಲ್ಲ ಪ್ರಯಾಣಿಕರು

 ''ವಿಮಾನ ಹತ್ತಿದ ಮೇಲೆ ನನ್ನ ಸ್ಟೇಟಸ್ ಅನ್ನು ಕಾಪಾಡಿಕೊಳ್ಳುತ್ತೇನೆ, ಯಾರೊಂದಿಗೂ ಮಾತನಾಡುವುದಿಲ್ಲ, ಗಂಬೀರತೆ   ಯನ್ನು  ದತ್ತು ತೆಗೆದುಕೊಳ್ಳುತ್ತೇನೆ, ಆಕಸ್ಮಾತ್ ಯಾರಾದರೂ ನನ್ನ ಮಾತನಾಡಿಸಿದರೆ ಕೇಳಿದ್ದಕ್ಕಷ್ಟೇ ಉತ್ತರ ಕೊಟ್ಟು ಮತ್ತೆ ಸ್ಟೇಟಸ್ ಕಾಯ್ದುಕೊಳ್ಳುತ್ತೇನೆ'' 


ಎಂದು ಪ್ರಮಾಣ ಮಾಡಿಯೇ ಬಂದಿರುತ್ತಾರೆ ಎನಿಸುತ್ತದೆ. ಒಂದು ತರ ಜೈಲಿನಲ್ಲಿ ಇಟ್ಟ ಅನುಭವ. ಪಕ್ಕದಲ್ಲಿದ್ದ ವ್ಯಕ್ತಿಯನ್ನು ಮಾತನಾಡಿಸಲು ಪ್ರಯತ್ನಿಸಿದೆ. ಒಂದು ನಗುವನ್ನೇ ಅವನ ಮುಖದಿಂದ ಹೊರ ಹಾಕಲಾಗಲಿಲ್ಲ, ಇನ್ನು ಮಾತನಾಡಿಸುವುದು ದೂರದ ಮಾತು. ಅವನ ಗಂಭೀರ ಮುಖ ನೋಡಿದರಂತೂ ನನ್ನ ಒಂಟಿತನ ಇನ್ನು ಜಾಸ್ತಿ ಆಗುತ್ತಿತ್ತು. ಪ್ರತಿ ಬಾರಿ ವಿಮಾನ ದಲ್ಲಿ ಬರುವಾಗ ನಾನು ಮಾತು ಹೆಂಡತಿ ಮಾತನಾಡುತ್ತಾ, ಇಸ್ಪೀಟ್ ಆಡುತ್ತ ಬರುವ ಸಮಯ ನೆನಪಾಗಲು ಆರಂಬಿಸಿ ಮತ್ತು ಬೇಸರಗೊಂಡಿತು ಮನಸು. ಅದ್ಯಾಕೋ ಗೊತ್ತಿಲ್ಲ, ವಿಮಾನ ಹತ್ತುವವರೆಗೆ ಮಾತನಾಡುವ ಜನರು ಹತ್ತಿದ ಮೇಲೆ ಬದಲಾಗಿ ಹೋಗುತ್ತಾರೆ, ಪಕ್ಕ ನಮ್ಮ ರಾಜ ಕಾರಣಿಗಳ ಹಾಗೆ. ''ಎಷ್ಟೇ ಒಳ್ಳೆಯ ರಾಜಕಾರಣಿಯನ್ನು ನೀವು ಚುನಾಯಿಸಿ ಕಳಿಸಿ, ದೇವರಾಣೆಗೂ ಆಟ ಆರಿಸಿ ಬಂದ ಮೇಲೆ ತನ್ನ ಉದ್ದಾರ ಬಿಟ್ಟು ಬೇರೆ ಯೋಚಿಸುವುದಿಲ್ಲ''. ಹಾಗೆಯೇ ವಿಮಾನ ಪ್ರಯಾಣಿಕರು ಕೂಡ. ಹತ್ತಿದ ಮೇಲೆ ಸೈಲೆಂಟ್ ಆಗಿಬಿಡುತ್ತಾರೆ.

''ವಿಮಾನ ಹತ್ತುವ ಮೊದಲು ಅವರು  ವಯಾಲೆಂಟ್
ಹತ್ತಿದ ಮೇಲೆ ಆಗುವರು ಸೈಲೆಂಟ್
ಹತ್ತುವ ಮೊದಲು , ಕಸ್ಟಮ್ಸ್ ಕಾಟ
ಹತ್ತಿದ ಮೇಲೆ ಗಗನ ಸಖಿಯರ ನೋಟ ''

ಅಂತೂ ಗೋಥೆನ್ಬರ್ಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಬಂದಿಳಿದಾಗ ಮಧ್ಯಾನ್ಹ 2 ಘಂಟೆ. ಇಲ್ಲಿನ ವಿಮಾನ ನಿಲ್ದಾಣ ದ ಬಗ್ಗೆ ಹೇಳಲೇಬೇಕು. ಅತ್ಯಂತ ಪುಟ್ಟ ಮತ್ತು ಅತ್ಯಂತ ವ್ಯವಸ್ಥಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದು. ವಿಮಾನ ಇಳಿದು ಬ್ಯಾಗ್ ತೆಗೆದುಕೊಳ್ಳಲು ಬರುವ ಮೊದಲೇ ಬ್ಯಾಗ್ ನಿಮಗಾಗಿ ಕಾಯುತ್ತಿರುತ್ತದೆ. ಅಷ್ಟೊಂದು ವೇಗದಲ್ಲಿ ಇಲ್ಲಿ ಕೆಲಸ ನಡೆಯುತ್ತದೆ. ಯಾವ ಚೆಕ್ ಇಲ್ಲ. ವಿಮಾನ ಇಳಿದು 30 ನಿಮಿಷದ ಒಳಗೆ ನೀವು ನಿಮ್ಮ ಮನೆ ಮುಟ್ಟಿರುತ್ತಿರಿ.
ಮನೆ ತಲುಪಿದ ವೇಳೆ 2-30. ಮೊದಲ ಬಾರಿಗೆ ಹೆಂಡತಿ ಇಲ್ಲದ ಮನೆಯ ಬಾಗಿಲು ತೆಗೆದಾಗ ಹ್ರದಯ ಭಾರವಾಯಿತು. ಕಳೆದ 3 ವರ್ಷಗಳಲ್ಲಿ ಅವಳಿಲ್ಲದೆ ನಾನು ಒಂದು ದಿನವನ್ನು ಈ ಮನೆಯಲ್ಲಿ ಕಳೆದಿಲ್ಲ. ಮನೆ ಒಳಗೆ ಬಂದಾಗ ಎಲ್ಲೆಡೆ ನೀರವ ಮೌನ. 

''ಬಾ ಮಗನೆ , ಮುಂದೈತೆ ಊರಹಬ್ಬ'' 

ಎಂದು ನನ್ನನ್ನೇ ಅಣಕಿಸಿ ಮನೆ ಒಳಗೆ ಎಲ್ಲರೂ ಕರೆದಂತೆ ಭಾಸವಾಗುತ್ತಿತ್ತು. ಕೂಡಲೇ ಹೆಂಡತಿಗೆ ಫೋನ್ ಮಾಡಿ ಬಂದ ಸುದ್ದಿ ತಿಳಿಸಿದೆ ಮತ್ತು ಮೌನದ ಬಗ್ಗೆ ಹೇಳಿದೆ. ಅವಳು ಸಮಾಧಾನ ಮಾಡಿದಳು. ಪಾಪ ನನ್ನ ಬಿಟ್ಟು ತವರು ಮನೆಯಲ್ಲಿ ಇರುವ ಅವಳನ್ನು ನಾನು ಸಮಾಧಾನ ಮಾಡುವುದು ಬಿಟ್ಟು ಅವಳೇ ನನ್ನ ಸಮಾಧಾನ ಮಾಡುತ್ತಿದ್ದಳು.

''ತವರ ಸುಖದೊಳಗೆನ್ನ 
ಮರೆತಿಹಳು ಎನ್ನದಿರಿ 
ನಿಮ್ಮ ಪ್ರೇಮವ ನೀವೇ........''

ಎಂದು ಅವಳು ಹೇಳಿದಂತೆ ನನಗೆ ಅನ್ನಿಸತೊಡಗಿತು. ಅವಳಿಗೆ ಆಮೇಲೆ ಫೋನ್ ಮಾಡುತ್ತೇನೆ ಎಂದು ಹೇಳಿ ಹೊಟ್ಟೆ ಪೂಜೆಗೆ ಕುಳಿತೆ. ಹಸಿವು ವಿಪರೀತ ಆಗಿತ್ತು. ಈ ಹಸಿವೆಗೆ ನೋಡಿ, ಒಂಟಿತನ ಆಗಲಿ, ಜಂಟಿ ಆಗಲಿ ಯಾವುದು ಭಾದಿಸದು, ತನ್ನ ಸಮಯ ಬಂದಾಗ ಚೀರುವ ಹಸಿವೆಯ ಬಗ್ಗೆ ನನಗೆ ವಿಪರೀತ ಕೋಪವಿದೆ. ಯಾವ ಬೇಧ ಭಾವ ವೂ ಇಲ್ಲದೆ ಎಲ್ಲರನ್ನು ಸಮನಾಗಿ ಕಾಡುವ ಅದರ ಒಳ್ಳೆಯ ತಾಣದ ಬಗೆಗೆ ಸಂತಸವೂ ಇದೆ. ಬದುಕಿನಲ್ಲಿ ''ಸಸ್ಯಾಹಾರಿ'' ಆಗುವುದು ಕೆಲವೊಮ್ಮೆ ಶಾಪ. ಯಾಕೆಂದರೆ ಸ್ವೀಡನ್ ಗೆ ಬಂದ ಕೂಡಲೇ ಯಾವುದಾದರೊಂದು ಹೋಟೆಲ್ ಹೋಗೋಣ ಎಂದರೆ ಅಲ್ಲಿ ಸಿಗುವುದು ''ಮಾಂಸಾಹಾರಿ'' ಯೇ. ಅದಕ್ಕೆ ಮನೆಯ ಅಡಿಗೆ ಮನೆಗೆ ಹೋಗಿ ಅನ್ನ, ಸಾರು ಮಾಡಿಕೊಳ್ಳೋಣ ಎಂದು ನಿರ್ಧರಿಸಿ ಅನ್ನ ಇಡಲು ಪಾತ್ರೆ ಹುಡುಕತೊಡಗಿದೆ.


''ಎಲ್ಲ ಪಾತ್ರೆಗಳು ಮುಷ್ಕರ ಹೂಡಿದಂತೆ ನನಗೆ ಕಾಣದೆ ಕುಳಿತಿದ್ದವು. ಮನೆಯಲ್ಲಿ ಹೆಂಡತಿ ಇದ್ದಾಗ ಅವಳು ಲಕ್ಷಣವಾಗಿ ಎಲ್ಲವನ್ನು ಜೋಡಿಸಿಟ್ಟಾಗ ಅದರ ಪ್ರಾಮುಖ್ಯತೆ ನಮಗೆ ತಿಳಿಯುವುದೇ ಇಲ್ಲ. ಅದೇ ನಮಗೆ ಅಂಥಹ ಸ್ತಿತಿ ಬಂದಾಗ ಅವರ ಇರುವಿಕೆ ಅರ್ಥ ಆಗುತ್ತದೆ. ಒಂದು ಗಾಜಿನ ಪಾತ್ರೆ ತೆಗೆದುಕೊಂಡು ಅಕ್ಕಿ ತೊಳೆಯಲು ಮುಂದಾದೆ. ಆದರೆ ಆ ಪಾತ್ರೆ '' ನಿನ್ನೊಂದಿಗೆ ಇರಲು ಮನಸಿಲ್ಲ'' ಎನ್ನುವಂತೆ ನನ್ನ ಕೈಯಿಂದ ತಪ್ಪಿಸಿಕೊಂಡು ನೆಲದ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿತು. ಬಂದ ದಿನವೇ ''ಕೊಲೆ''. ನೋಡಿ, ಪಾತ್ರೆಗಳಿಗೂ ಅವಳಿಲ್ಲದ ನೋವು....''


ಬಿದ್ದ ಗಾಜಿನ ಚೂರುಗಳ ಒಂದೊಂದು ಪುಡಿಯೂ ಅಣಕಿಸುವಂತೆ ತೋರುತ್ತಿದ್ದವು. ಮೊದಲ ದಿನವೇ ಹೀಗಾದರೆ ಮುಂದೆ ಗತಿಯೇನೋ.....

ಇನ್ನೊಂದು ಸ್ಟೀಲ್ ಪಾತ್ರೆ ತೆಗೆದುಕೊಂಡೆ (ಪುನಃ ಗಾಜು ಮುಟ್ಟಿದರೆ ಎಲ್ಲಿ ಆತ್ಮಹತ್ಯೆ ಯ ಸಂಖ್ಯೆ ಜಾಸ್ತಿ ಆಗುತ್ತದೋ ಎಂಬ ಭಯ ), ಅನ್ನ ತೊಳೆದು ಅನ್ನಕ್ಕಿಟ್ಟೆ. ಸರಿ ಅನ್ನ ಆಗಲು ಸ್ವಲ್ಪ ಸಮಯವಿದೆ, ಒಂದು ಹಾಡನ್ನಾದರೂ ಕೇಳೋಣ ಎಂದು Tape Recorder ಹಚ್ಚಿದೆ. ಸ್ವಾಮಿ, ಏನಂತಿರ ನನ್ನ ಬೇಸರನ, ಒಳ್ಳೆ ಎಲ್ಲರು ನನ್ನ ಮೇಲೆ ಸೇಡು ತೀರಿಸ್ಕೊಳ್ಳುವ ಯೋಚನೆ ಯಲ್ಲಿ ಇದ್ದ ಹಾಗೆ ಅನಸ್ತು ಯಾಕೆ ಗೊತ್ತಾ, ಅದರಲ್ಲಿ ಬರ್ತಾ ಇದ್ದ ಹಾಡು, ಪ್ರಸಿದ್ದ ಗಾಯಕಿ M D Pallavi ಅವರು ಹಾಡಿದ

''ಮೊದಲ ದಿನ ಮೌನ,
ಅಳುವೇ ತುಟಿಗೆ ಬಂದಂತೆ..... ಚಿಂತೆ......''

ಬರಬೇಕೇ...ಕವಿ ಆ ಕವನ ಬರೆದ ಸನ್ನಿವೇಶ ಕ್ಕೂ ನನ್ನ ಪ್ರಸ್ತುತ ಸನ್ನಿವೇಶಕ್ಕೂ ಯಾವ ಸಂಬಂಧ ಇಲ್ಲದಿದ್ದರೂ ಹೆಂಡತಿಯ ಬಿಟ್ಟು ಮೊದಲ ದಿನ ಕಳೆಯುತ್ತಿರುವ ನನಗೆ ನನಗೋಸ್ಕರವೇ ಕವಿ ಈ ಹಾಡನ್ನ ಬರೆದರೇ ಎಂದು ಅನ್ನಿಸಿದ್ದು ಸುಳ್ಳಲ್ಲ. ಅಳು ತುಟಿಗೆ ಅಲ್ಲ, ಕಣ್ಣಲ್ಲೇ ಬಂದಿತ್ತು.

ಮೊದಲ ದಿನದ ಅನುಭವಗಳು ನನ್ನನ್ನ ಮಾನಸಿಕವಾಗಿ ದುರ್ಬಲ ಗೊಳಿಸಿದ್ದು ಸುಳ್ಳಲ್ಲ. ಅಂತು ಈಗ ದಿನಕ್ಕೆ ಹಲವಾರು ಬಾರಿ ಹೆಂಡತಿಯ ಜೊತೆ, ಮನೆಯವರ ಜೊತೆ ಮಾತನಾಡುತ್ತ 8 ದಿನಗಳೇ ಕಳೆದುಹೋಗಿವೆ.

ಅದಿರಲಿ, ಹೆಂಡತಿ ಯಾಕೆ ತವರು ಮನೆಗೆ ಹೋಗಿದ್ದಾಳೆ ಅಂತಿರಾ,
ಸದ್ಯದಲ್ಲೇ ಹೇಳ್ತೀನಿ ಅದನ್ನ :)
ನಿಮ್ಮವ
ಗುರು